Tuesday, 22nd October 2024

ಕರೋನಾ ಆತಂಕಕ್ಕೆ ಆತ್ಮಹತ್ಯೆ ಪರಿಹಾರವಲ್ಲ

ಅನಿಸಿಕೆ

ಉದಯ ಮ.ಯಂಡಿಗೇರಿ

ಕರೋನಾ ರೋಗದ ಕುರಿತು ತಪ್ಪು ಕಲ್ಪನೆ, ಭಯದಿಂದ ಒತ್ತಡಕ್ಕೆ ಒಳಗಾಗಿ ಇದರಿಂದ ಮುಕ್ತಿ ಪಡೆಯುವುದಕ್ಕೆ ಆತ್ಮಹತ್ಯೆ ಯೊಂದೇ ದಾರಿ ಎಂಬ ತಪ್ಪು ಕಲ್ಪನೆಗಳಿಂದಾಗಿಯೇ ಕೆಲವರು ಆತ್ಮಹತ್ಯೆಯ ದಾರಿ ತುಳಿಯುತ್ತದ್ದಾರೆ.

ಇಂಥ ಪ್ರಕರಣಗಳು ರಾಜ್ಯದ ನಾನಾ ಭಾಗದಲ್ಲಿ ವರದಿಯಾಗಿದ್ದನ್ನು ನೋಡಿದೆ. ಹೀಗಾಗಿ ಸಾರ್ವಜನಿಕರು ಕೋವಿಡ್‌ಗೆ ಹೆದರಿ ಮಾನಸಿಕ ಖಿನ್ನತೆಗೆ ಒಳಗಾಗದೆ, ಮುನ್ನಚ್ಚರಿಕೆ ವಹಿಸಿ ಧೈರ್ಯದಿಂದ, ವೈದ್ಯರ ಸಲಹೆ, ಮಾರ್ಗದರ್ಶನದಂತೆ ಸಕಾಲಕ್ಕೆ ಚಿಕಿತ್ಸೆ ಪಡೆದು ಕೋವಿಡ್‌ನಿಂದ ಗೆಲ್ಲಬಹುದು.

ಸಾಮಾಜಿಕ ಹಾಗೂ ದೈಹಿಕ ಸವಾಲುಗಳು ಎದುರಾದಾಗ ಅದನ್ನು ಹೇಗೆ ಎದುರಿಸಬೇಕು, ನಂತರ ತಮ್ಮ ಕುಟುಂಬದ ಗತಿ ಏನು? ಎನ್ನುವ ಭಯದಲ್ಲಿ ತನ್ನಿಂದ ಇದನ್ನು ಎದುರಿಸಲು ಸಾಧ್ಯವಿಲ್ಲ ಎಂದು ಕೆಲವರು ಆತ್ಮಹತ್ಯೆಯಂಥ ಕೆಟ್ಟ ನಿರ್ಧಾರಗಳಿಗೆ ಮುಂದಾಗುತ್ತಾರೆ. ಆದರೆ ಈ ತರಹದ ಆತ್ಮಹತ್ಯೆಗಳನ್ನು ತಪ್ಪಿಸಲು ಯಾವುದೇ ವ್ಯಕ್ತಿ ಖಿನ್ನತೆ, ಒತ್ತಡ ಅಥವಾ ಯಾವುದೇ ಸಮಸ್ಯೆಯಲ್ಲಿ ಸಿಲುಕಿದ್ದರೆ, ಅವರನ್ನು ಆದಷ್ಟು ಏಕಾಂಗಿಯಾಗಿ ಬಿಡಬೇಡಿ. ಅವರು ತಮಗೆ ತಾವೇ ನೋವು ತಂದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಉತ್ತಮ ಸ್ನೇಹಿತ, ಕುಟುಂಬ ಸದಸ್ಯರ ಅಗತ್ಯವಿರುತ್ತದೆ.

ಮಾನಸಿಕವಾಗಿ ತೀರಾ ಕುಗ್ಗಿರುವ ವ್ಯಕ್ತಿಯಾಗಿದ್ದರೆ, ಮಾನಸಿಕ ವೈದ್ಯರು ಅಥವಾ ಉತ್ತಮ ಮಾರ್ಗದರ್ಶಕರ ಬಳಿ ಕರೆದು ಕೊಂಡು ಹೋಗಿ ಅವರಿಗೆ ತಿಳಿ ಹೇಳಿಸಿ. ಆತ್ಮಹತ್ಯೆಯನ್ನು ತಡೆಗಟ್ಟುವ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡುವಲ್ಲಿ ಮಾಧ್ಯಮಗಳು ಪ್ರಧಾನ ಪಾತ್ರ ವಹಿಸುವುದು ಅವಶ್ಯ. ಪ್ರತಿಯೊಂದು ಸಾವೂ ಅವರ ಹತ್ತಿರದವರಿಗೆ ಅತೀವ ನೋವನ್ನುಂಟು ಮಾಡುತ್ತವೆ.

ಕರೋನಾ ಮಹಾಮಾರಿಯಾಗಿದ್ದರೂ ಶೇಕಡವಾರು ಸಾವಿನ ಸಂಖ್ಯೆ ಕಡಿಮೆ ಇದ್ದು, ಗುಣಮುಖರಾಗಿ, ಚೇತರಿಕೊಂಡು ಸಹಜ ಜೀವನ ನಡೆಸುತ್ತಿರುವವರ ಸಂಖ್ಯೆ ಹೆಚ್ಚಿರುತ್ತದೆ. ಒಟ್ಟಾರೆ ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ಧೈರ್ಯದಿಂದ ಜಾಗೃತ ವಹಿಸಿ ಕರೋನಾ ಮಹಾಮಾರಿಯನ್ನು ಗೆಲ್ಲಬಹುದು. ಸಾರ್ವಜನಿಕರು ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.