Thursday, 19th September 2024

ಮೊದಲು ಜಂಕ್ ಸುದ್ದಿ ತಿನ್ನುವುದನ್ನು ನಿಲಿಸಿ !

ಶಿಶಿರ ಕಾಲ
ಶಿಶಿರ್ ಹೆಗಡೆ ನ್ಯೂಜೆರ್ಸಿ

ಆಗೆಲ್ಲ ಬೆಳಿಗ್ಗೆೆ ಎದ್ದ ತಕ್ಷಣ ನಮಗೆ ಮೊದಲು ಕೇಳುತ್ತಿದ್ದುದು ರೇಡಿಯೋದಲ್ಲಿ ಬರುತ್ತಿದ್ದ ಪ್ರದೇಶ ಸಮಾಚಾರ. ಪ್ರದೇಶ ಸಮಾಚಾರ, ಓದುತ್ತಿರುವವರು ನಾಗೇಶ್ ಶಾನುಭಾಗ್ ಎನ್ನುವುದೇ ಬಹುತೇಕ ದಿನಗಳ ಸುಪ್ರಭಾತವಾಗಿತ್ತು. ಅಂದು ಬರುತ್ತಿದ್ದ ಸುದ್ದಿಗಳಿಗೆ ಯಾವುದೇ ಗೌಜಿ ಗದ್ದಲಗಳಿರಲಿಲ್ಲ. ಅಂದು ಸುದ್ದಿ ಕೇಳುವುದೆಂದರೆ ಒಂದು ರೀತಿ ಬಿಸಿ ಗಂಜಿ ಮೇಲೆ ತೆಂಗಿನ ಎಣ್ಣೆೆ ಹಾಕಿ ಸುರಿದು ಉಂಡಂತೆ ಒಂದು ತಣ್ಣಗಿನ ಭಾವ. ಸುದ್ದಿ ಯಾವತ್ತೂ ಆತಂಕ, ಹೆದರಿಕೆ ವ್ಯಂಗ್ಯಗಳನ್ನು ಹೊತ್ತು ತಂದಿರಲಿಲ್ಲ. ವಿರೋಧ ಪಕ್ಷದ ನಾಯಕ ಮುಖ್ಯಮಂತ್ರಿಯನ್ನು ಅದೆಷ್ಟೇ ತೀಕ್ಷ್ಣವಾಗಿ ಹೀಯಾಳಿಸಿದ್ದರೂ ಅದೂ ಕೂಡ ಅಷ್ಟೇ ಸಹನೆ ಯಿಂದ ವಾರ್ತೆ ಓದುವವರು ಹೇಳುತ್ತಿದ್ದರು ಮತ್ತು ನಾವು ಕೇಳುತ್ತಿದ್ದೆವು.

ಹವಾಮಾನ ವರದಿ ನಮಗೆ ಇವತ್ತು ಏನು ಹೇಳಬಹುದು ಎಂದು ಅವರು ಹೇಳುವುದಕ್ಕಿಂತ ಮೊದಲೇ ಆಕಾಶ ನೋಡಿ ಗೊತ್ತಿರುತ್ತಿತ್ತು. ನಮ್ಮ ಕೃಷಿಯ ಯಾವೊಂದು ಕಾರ್ಯವನ್ನೂ ಈ ಹವಾಮಾನದ ವರದಿಯನ್ನು ಗ್ರಹಿಸಿ ನಿರ್ಧರಿಸುತ್ತಿರಲಿಲ್ಲ. ಬೆಳಗ್ಗಿನ ಪ್ರದೇಶ ಸಮಾಚಾರದ ನಂತರ ಮಧ್ಯಾಹ್ನ ಮತ್ತು ಸಂಜೆ ಅದೇ ರೀತಿಯ ಸಮಾಧಾನ ಕೊಡುವ ಸುದ್ದಿಗಳು. ಅಂದಿನ ದಿನವೇ ಚೆಂದವೋ ಅಥವಾ ಒಳ್ಳೆಯದೋ ಎನ್ನುವ ತುಲನೆಗಿಂತ ಅಂದಿನ ಸುದ್ದಿ ಪರಿ ಮತ್ತು ತಲುಪುವ ರೀತಿಯನ್ನು ನೆನಪಿಸು ತ್ತಿದ್ದೇನೆ ಅಷ್ಟೇ.

ರಾಜ್ಯದಲ್ಲೆಲ್ಲ ಎಲ್ಲವೂ ಸುಸೂತ್ರ ಎನ್ನುವ ಭಾವನೆ ಪ್ರತೀ ಪ್ರದೇಶ ಸಮಾಚಾರದ ಕೊನೆಯಲ್ಲಿ ನಮ್ಮಲ್ಲಿ ಮೂಡಿರುತ್ತಿತ್ತು. ಕ್ರಮೇಣ ದೂರದರ್ಶನ ವಾರ್ತೆಗಳು ಕೂಡ ಹೆಚ್ಚು ಕಮ್ಮಿಿ ಅದೇ ತೆರನಾಗಿ ಮೂಡಿಬರ ತೊಡಗಿದವು. ಬಹುಷಃ ಕನ್ನಡಿಗರಿಗೆಲ್ಲ ಒಂದು ಹೊಸ ನಮೂನೆಯ ಸುದ್ದಿಯನ್ನು ಮೊದಲು ಕೊಟ್ಟದ್ದು ಉದಯ ಟಿವಿ. ಮೊದಲ ಬಾರಿಗೆ ಉದಯ ನ್ಯೂಸ್‌ನಲ್ಲಿ ರಾಷ್ಟ್ರಮಟ್ಟದ ಮತ್ತು ವಿದೇಶಿ ಸುದ್ದಿಗಳು ಕೇಳಲು ನೋಡಲು ಸಾಧ್ಯವಾದವು. ಬಹುಷಃ ಬಹುತೇಕ ರಾಷ್ಟ್ರಗಳ ಹೆಸರನ್ನೆಲ್ಲ ನಾವು ಕೇಳಿದ್ದು, ಅಲ್ಲಿನ ಜನರು ಮತ್ತು ರಸ್ತೆಗಳನ್ನು ನೋಡಿದ್ದು ಮೊದಲ ಬಾರಿ ಉದಯ ಟಿವಿಯಲ್ಲಿಯೇ. ಉದಯ ಟಿವಿಯಲ್ಲಿ ಅಂತಾ ರಾಷ್ಟ್ರೀಯ ಸುದ್ದಿಗಳನ್ನು ಕೊನೆಯ ಐದು ನಿಮಿಷದಲ್ಲಿ ಹೇಳುತ್ತಿದ್ದರು – ನಾವೆಲ್ಲ ಅದಕ್ಕೆ ಕಾಯುತ್ತಿದ್ದೆವು. ಕ್ರಮೇಣ ಸ್ಥಿತಿ ಬದಲಾಯಿತು – ಹತ್ತಾರು ಖಾಸಗಿ ವಾಹಿನಿಗಳು ಹುಟ್ಟಿಕೊಂಡವು. ಅವೆಲ್ಲ ಒಂದರ್ಧಗಂಟೆ ಸುದ್ದಿ ಬಿತ್ತರಿಸುತ್ತಿದ್ದವು. ನಂತರ ಒಂದು ತಾಸಿನ ಸುದ್ದಿ ಕಾರ್ಯಕ್ರಮಗಳು ಶುರುವಾದವು. ಆಗೆಲ್ಲ ಎಲ್ಲ
ಸರಿಯಾಗಿಯೇ ಇತ್ತು. ಇವೆಲ್ಲ ವಾಹಿನಿಗಳು ಸುದ್ದಿಯನ್ನು ಹೊತ್ತುತರುತ್ತಿದ್ದವು ಅಷ್ಟೇ.

ಅದೇ ಸಮಯದಲ್ಲಿ ಜನರಿಗೆ ಹತ್ತಾರು ಆಯ್ಕೆಗಳು ಹುಟ್ಟಿಕೊಂಡವು. ಈ ಆಯ್ಕೆಗಳೊಂದಿಗೆ ಟಿವಿ ಚಾನಲ್‌ಗಳ ಮಧ್ಯೆ ಪೈಪೋಟಿ ಕೂಡ ಹುಟ್ಟಿದವು. ಆಯ್ಕೆ ಮತ್ತು ಪೈಪೋಟಿಯಿಂದಾಗಿ ಹೊಸತನ್ನು ತರುವುದು ಅನಿವಾರ್ಯವಾಯಿತು. ನಮ್ಮ ಸುದ್ದಿಯೆಡೆಗಿನ ಅಭಿರುಚಿ ಬದಲಾಗಿದ್ದೇ ಆಗ. ನಮಗೆ ಇಷ್ಟವಾಗುವ ಸುದ್ದಿಗಳನ್ನು ತರುವುದೇ ಕ್ರಮೇಣ ವಾಹಿನಿಗಳ ಕಾಯಕವಾದವು. ಗಾಸಿಪ್ ಸುದ್ದಿಗಳು ಹೆಚ್ಚಿದವು. ನಂತರ 24*7 ಸುದ್ದಿ ವಾಹಿನಿಗಳು ಹುಟ್ಟಿಕೊಂಡವು. ಇಪ್ಪತ್ನಾಲ್ಕು ಗಂಟೆ ಸುದ್ದಿ ಕೊಡುವ ಅನಿವಾರ್ಯತೆಯನ್ನು ಅವು ಮೊದಲ ದಿನದಿಂದಲೇ ಹೊಂದಿದ್ದವು. ಕ್ರಮೇಣ ಬೇರೆ ಬೇರೆ ಅಭಿರುಚಿಗೆ ತಕ್ಕಂತೆ ವಿಷಯವನ್ನಾಧರಿಸಿ ಸುದ್ದಿ ಕಾರ್ಯಕ್ರಮಗಳು ಬರತೊಡಗಿದವು.

ಕ್ರಮೇಣ ವಾಹಿನಿಗಳು ಅಭಿರುಚಿಯನ್ನೇ ಬದಲಿಸುವ ಮಟ್ಟಿಗೆ  ಬೆಳೆದುನಿಂತವು. ಸುದ್ದಿಗಳು ಮೊದಲೆಲ್ಲ ಕೇವಲ ಸುದ್ದಿಗಳಾಗಿದ್ದು – ಆ ಸುದ್ದಿಯನ್ನು ಗ್ರಹಿಸಿ ಅಭಿಪ್ರಾಯವನ್ನು ರೂಪಿಸಿಕೊಳ್ಳುವ ಅವಕಾಶವಿತ್ತು. ಅದೊಂದು ಸಮಯದಲ್ಲಿ ಆ ಸ್ವಾತಂತ್ರ್ಯ ಸುದ್ದಿ ಸಂಗ್ರಾಹಕನಿಗಿತ್ತು. ಕ್ರಮೇಣ ಅಭಿಪ್ರಾಯ ಕೂಡ ಸುದ್ದಿ ವಾಹಿನಿಗಳ ಸರಕಾಯಿತು. ಇಂದು ಸುದ್ದಿವಾಹಿನಿಗಳಲ್ಲಿ ಸುದ್ದಿಗಿಂತ ಅವು ತರುವ ಅಭಿಪ್ರಾಯಕ್ಕೆ ಆದ್ಯತೆ. ನಮಗೆ ಅಭಿಪ್ರಾಯವನ್ನು ಮೂಡಿಸಿಕೊಳ್ಳುವ ಕೆಲಸವೂ ಇಲ್ಲ. ಸುಮ್ಮನೆ ತಲೆಯನ್ನು ವಾಹಿನಿಗೆ ಕೊಟ್ಟು ಸೋಫಾ – ಕುರ್ಚಿಯ ಮೇಲೆ ಕೂತರಾಯಿತು ಅಷ್ಟೇ. ಹಾಸ್ಯ ಕಾರ್ಯಕ್ರಮದಲ್ಲಿ ನಗುವನ್ನು ಕೇಳಿಸುವಂತೆ
ಸುದ್ದಿಗಳೊಂದಿಗೆ ಅಭಿಪ್ರಾಯ ಕೂಡ ಒಂದು ಪ್ಯಾಾಕೇಜ್‌ನಂತೆ.

ಕೆಲವೇ ವರ್ಷದ ಮೊದಲು ಸುದ್ದಿಯೇ ಅಲ್ಲದ ವಿಚಾರವೆಲ್ಲ ಇಂದು ತಾಸುಗಟ್ಟಲೆ ಪ್ರಸಾರವಾಗುವ ಸುದ್ದಿಗಳೇ. ಸುಳ್ಳು – ಫೇಕ್ ಸುದ್ದಿಯ ಹಾವಳಿ ಒಂದುಕಡೆಯಾದರೆ ಜಂಕ್ ಸುದ್ದಿಗಳ ಹಾವಳಿ ಇಂದು ತೀರಾ ಹೆಚ್ಚಾಗಿ ಹೋಗಿದೆ. ಏನಿದು ಜಂಕ್ ಸುದ್ದಿ? ಜಂಕ್ ಸುದ್ದಿಗಳು ಶುರುವಾಗುವುದೇ ಸಾಮಾನ್ಯವಾಗಿ If that is true then.. ಎನ್ನುವ ಮಾತಿನಿಂದ.

ಮೊದಲು ಒಂದು ಊಹೆಯನ್ನು ಸುದ್ದಿ ಗ್ರಾಹಕನ ಮುಂದೆ ಇಡುವುದು ಮತ್ತು ಆ ಊಹೆಯೇ ಸತ್ಯವಾಗಿದ್ದಲ್ಲಿ ಇದು ಅದು ಕಾರಣ ಮತ್ತು ಅಭಿಪ್ರಾಯ ಎಂದು ಗಾಳಿಯಲ್ಲಿ ಸುದ್ದಿಯ ಗೋಪುರ ಕಟ್ಟುತ್ತಾ ಹೋಗುವುದು. ಆಮೇಲೆ ಗೋಪುರ ಬೆಳೆದು ನಿಂತ ನಂತರ ಅದರ ಮೂಲ ಅಡಿಪಾಯವಾದ ಊಹೆಯನ್ನೇ ಮರೆತುಬಿಡು ವುದು. ಕೊನೆಯಲ್ಲಿ ಇದೆಲ್ಲ ಇನ್ನು ಕೋರ್ಟ್‌ನಲ್ಲಿ ಸಾಬೀತಾಗಿಲ್ಲ ಎಂದು ಒಂದು ಆಂಟಿಸಿಪೇಟರಿ ಸ್ಟೇಟ್ಮೆೆಂಟ್ ಅನ್ನು ಕೊಟ್ಟುಬಿಡುವುದು. ಈ ರೀತಿಯ ಜಂಕ್ ಸುದ್ದಿಗಳ ಹಾವಳಿ ಹೆಚ್ಚಾದಂತೆಲ್ಲ ಸುದ್ದಿ ಗ್ರಾಹಕ ಕೇವಲ ಹೆಡ್‌ಲೈನ್ ಅನ್ನು ನೋಡಿ  ಸುದ್ದಿ ಹೀಗಿರಬಹುದು ಎಂದು ಗ್ರಹಿಸಲು ಶುರುಮಾಡುವ
ಸಾಧ್ಯತೆ ಕೂಡ ಇದೆ. ಜಂಕ್ ಸುದ್ದಿ ಸುಳ್ಳು ಸುದ್ದಿಯಲ್ಲ. ಸುಳ್ಳು ಸುದ್ದಿಗೂ ಜಂಕ್ ಸುದ್ದಿಗೂ ವ್ಯತ್ಯಾಸವಿದೆ. ಸುಳ್ಳು ಸುದ್ದಿ ಉದ್ದೇಶ ಪೂರ್ವಕವಾಗಿ ದಾರಿ ತಪ್ಪಿಸುವ – ಸುಳ್ಳು ಹೇಳುವ ಅಥವಾ ಸುಳ್ಳು ಅಭಿಪ್ರಾಯ ಹುಟ್ಟುವಂತೆ ಮಾಡುವ ಸುದ್ದಿಗಳು. ಜಂಕ್ ಸುದ್ದಿ ಎಂದರೆ ಅಕ್ಷರಶಃ ಜಂಕ್.

ಸೆಲೆಬ್ರಿಟಿಗಳ, Sexಮತ್ತು ಗಾಸಿಪ್‌ಗಳ ಸುದ್ದಿಗಳೆಲ್ಲ ಬಹುತೇಕ ಜಂಕ್ ಸುದ್ದಿಗಳೇ. ಇದಲ್ಲದೇ ಸುದ್ದಿವಾಹಿ ನಿಯಲ್ಲಿ ತಾಸುಗಟ್ಟಲೆ ಒಂದು ವಿಷಯವನ್ನು ವರ್ಣರಂಜಿತವಾಗಿ ರೂಪಿಸಿ ನಿರೂಪಿಸದಿದ್ದರೆ ಅವೆಂದೂ ಸುದ್ದಿಯೇ ಆಗುವಂಥ ಸರಕಲ್ಲ – ಅಂಥವು ಗಳನ್ನು ತಂದು ಸುದ್ದಿಮಾಡುವುದು ಕೂಡ ಜಂಕ್ ಸುದ್ದಿ. ಪಕ್ಕಾ
ಕಚರಾ ವಿಷಯವೊಂದನ್ನು ತಂದು ಕಥೆ ಕಟ್ಟಿ ಸುದ್ದಿ ಮಾಡುವುದು. ಇಂದಿನ 24 ಗಂಟೆಯ ಸುದ್ದಿ ವಾಹಿನಿ ಯಲ್ಲಿ ಬಹುಪಾಲು ಸುದ್ದಿಗಳು ಇದೇ ಕೆಟಗರಿಗೆ ಸೇರಿದವುಗಳೇ. ಚಿಕ್ಕ ಅಥವಾ ಸಮಾಜಕ್ಕೆ ಅವಶ್ಯಕತೆಯೇ ಇರದ ಸುದ್ದಿಗೆ ರೆಕ್ಕೆ ಪುಕ್ಕ ಸೇರಿಸಿ ಅಜೀರ್ಣವಾಗುವಷ್ಟು ಬಡಿಸುವ ಊಹಾಪೋಹದ ಸುದ್ದಿಗಳು.

ಈ ಜಂಕ್ ಸುದ್ದಿಗಳಿಂದ ಒಂದು ಸಮಸ್ಯೆಯೆಂದರೆ ಅವು ನಮ್ಮ ಸುತ್ತಮುತ್ತ ನಡೆಯುತ್ತಿರುವ ಬಹು ಮುಖ್ಯ ಸುದ್ದಿಯನ್ನೇ ಮರೆಮಾಚುವ ಹಂತಕ್ಕೆ ಬೆಳೆದುಬಿಡುತ್ತವೆ. ಯಾವ ಸುದ್ದಿ ಎಷ್ಟು ದೊಡ್ಡದಾಗಿಸಬೇಕು ಎಂದು ಟಿಆರ್‌ಪಿ ಮೂಲಕ ಸುದ್ದಿ ಗ್ರಾಹಕನ ಅಭಿರುಚಿಯನ್ನು ಸಂಖ್ಯೆೆಗಳಲ್ಲಿ ಗ್ರಹಿಸಿ ಅದೇ ವಿಷಯವನ್ನು ಪದೇ ಪದೆ ವಿಷಯವೇ ಇಲ್ಲದಿದ್ದರೂ ಉದ್ದುದ್ದ ಧಾರಾವಾಹಿಯನ್ನು ಎಳೆದಂತೆ ಎಳೆಯುವ ಸುದ್ದಿಗಳೇ ಜಂಕ್ ಸುದ್ದಿಗಳು.

ಒಂದು ಸುದ್ದಿಗೆ ಅದರದೇ ಆದ ಒಂದಿಷ್ಟು ಸ್ಪೇಸ್ ಮೂಲದಲ್ಲಿರುತ್ತದೆ. ಪ್ರತಿಯೊಂದು ಸುದ್ದಿಗೂ ಸಮಾಜದ
ಅವಶ್ಯಕತೆಯ ತಕ್ಕಡಿಯಲ್ಲಿ ಇಂತಿಷ್ಟು ಎಂದು ತೂಕ ನಿಗದಿಯಾಗಿರುತ್ತದೆ. ಆದರೆ ಮುಖ್ಯವಾದ ಸಣ್ಣ ಸುದ್ದಿ ವಿಷಯ ಕ್ರಮೇಣ ಜನರ ಆಸಕ್ತಿ ಹೆಚ್ಚಿದಂತೆಲ್ಲ ಟಿಆರ್‌ಪಿಯಲ್ಲಿ ಅದನ್ನು ಗ್ರಹಿಸಿ ಸುದ್ದಿಯನ್ನು ಹಿಗ್ಗಿಸಿದಾಗ ಅದು ಕ್ರಮೇಣ ಜಂಕ್ ಸುದ್ದಿಯಾಗುತ್ತದೆ. ಇದರ ಅಡ್ಡ ಪರಿಣಾಮವೆಂದರೆ ಉಳಿದ ಮುಖ್ಯ ಸುದ್ದಿಗಳ ಸ್ಪೇಸ್ ಅನ್ನು ಈ ಜಂಕ್ ಸುದ್ದಿಗಳು ಅವರಿಸಿ ಬಿಡುತ್ತವೆ. ಪ್ರತಿಯೊಬ್ಬರಿಗೂ ಕೇವಲ ಒಂದಿಷ್ಟು ಸುದ್ದಿಯನ್ನು
ಗ್ರಹಿಸುವ ಸಾಮರ್ಥ್ಯವಿರುತ್ತದೆ. ಕೆಲವರಿಗೆ ಹತ್ತು ನಿಮಿಷ ಸುದ್ದಿ ನೋಡುವ ಅವಕಾಶ, ಸಾಧ್ಯತೆ ಮತ್ತು ವ್ಯವಧಾನವಿದ್ದರೆ ಇನ್ನು ಕೆಲವರಿಗೆ ಒಂದೆರಡು ತಾಸು ದಿನದಲ್ಲಿ ಸುದ್ದಿಗಾಗಿ ವ್ಯಯಿಸುವ ಸಮಯವಿರುತ್ತದೆ. ಈ ಸೀಮಿತ ಸಮಯದಲ್ಲಿ ಅಜೀರ್ಣವಾಗುವಂತೆ ಒಂದೇ ವಿಷಯವನ್ನು ನೋಡುವ ಅನಿವಾರ್ಯತೆ ಯನ್ನು
ಸುದ್ದಿವಾಹಿನಿಗಳು ಸೃಷ್ಟಿಸಿದರೆ ಆ ಒಂದೇ ವಿಷಯಾಧಾರಿತ ಸುದ್ದಿಯೆಲ್ಲ ಆತನಿಗೆ ಒತ್ತಾಯದ ಜಂಕ್ ಸುದ್ದಿಗಳೇ. ಈ ಕಾರಣದಿಂದಾಗಿ ಮುಖ್ಯವಾದ ಸುದ್ದಿಯೇ ಸುದ್ದಿಯಾಗದೆ ಸಮಾಜದಲ್ಲಿ ಸುತ್ತಮುತ್ತಲು ನಡೆಯುತ್ತಿರುವ ತಿಳಿಯಲೇ ಬೇಕಾದ ಸುದ್ದಿಯೇ ಹಿನ್ನೆಲೆಗೆ ಸರಿದಿರುತ್ತದೆ.

ಇದಕ್ಕೆ ಈ ಹೊತ್ತಿನಲ್ಲಿ ರಾಷ್ಟ್ರೀಯ ವಾಹಿನಿಗಳಲ್ಲಿ ಬರುತ್ತಿರುವ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಸುಶಾಂತ್  ಸಿಂಗ್ ರಜಪೂತ್ ಎಂಬ ಪ್ರತಿಭಾನ್ವಿತ ನೆಚ್ಚಿನ ನಟನ ಸಾವು ಮತ್ತು ಅದರ ಸುತ್ತಮುತ್ತಲಿನ ಸುದ್ದಿಗಳು. ಕಳೆದ ಸುಮಾರು ಮೂರು ತಿಂಗಳಿಂದ ರಾಷ್ಟ್ರೀಯ ವಾಹಿನಿಗಳನ್ನು ನೋಡಿದರೆ ಇಡೀ ದಿನ ಇದೇ ಸುದ್ದಿ. ಪ್ರತೀ ದಿನ ಒಂದೊಂದು ತಿರುವು. ಇದೊಂದು ಸುದ್ದಿ ವಾಹಿನಿಗಳು ನಡೆಸುತ್ತಿರುವ ನಿಜ ಜೀವನದ ಮೆಗಾ ಧಾರಾವಾಹಿಯಂತೆ. ಮೊದಲು ನನ್ನನ್ನೂ ಸೇರಿದಂತೆ ಈ ಸುದ್ದಿ ಎಲ್ಲ ಸಿನಿಪ್ರಿಯರನ್ನೂ ಆಘಾತಗೊಳಿಸಿತು. ಇಂತಹ ನಟನಿಗೇ ನ್ಯಾಯ ಸಿಗದಿದ್ದಲ್ಲಿ ಜನಸಾಮಾನ್ಯರ ಕತೆಯೇನು ಎಂಬ ಪ್ರಶ್ನೆೆ ಸಹಜವಾಗಿ ಹುಟ್ಟಿತು. ನಂತರ ಇದೊಂದು ಕೊಲೆ ಅಥವಾ ಆತ್ಮಹತ್ಯೆಗೆ ಪ್ರೇರಣೆ ಕೊಟ್ಟದ್ದಿರ ಬಹುದು ಎನ್ನುವ ಸುದ್ದಿ ಬಂತು. ನಾವೆಲ್ಲಾ ಏನಿರಬಹುದು ಎಂದು ನೋಡಲು ಶುರುಮಾಡಿ ದೆವು. ಸಹಜ ಕುತೂಹಲ ಮತ್ತು ಅನ್ಯಾಯವಾಗಬಾರದು ಎನ್ನುವ ಸಾಮಾಜಿಕ ಕಳಕಳಿ. ಕ್ರಮೇಣ ಆತನ ಗರ್ಲ್ ಫ್ರೆೆಂಡ್ ರಿಯಾಳೇ ಕೊಲೆ ಮಾಡಿದಳು ಎನ್ನುವ ಭಾವ ಹುಟ್ಟುವಂಥ ಸುದ್ದಿಗಳು ಹೊರ ಬಂದವು. ಅಲ್ಲೊಬ್ಬ ಮುಸುಕುದಾರಿ ಮಹಿಳೆ ಇದ್ದಳಂತೆ – ಅವಳೇ ಕೊಲೆ ಮಾಡಿದ್ದು ಎನ್ನುವ ಸುದ್ದಿ ತೇಲಿ ಬಂತು. ಕ್ರಮೇಣ ಆ ಸುದ್ದಿ ಮರೆಯಾಗಿ ಸುಶಾಂತ್ ಸಾವಿಗೆ ನೆಪೋಟಿಸಂ – ಸ್ವಜನಪಕ್ಷಪಾತ ಕಾರಣ ಎನ್ನಲಾಯಿತು. ಸುದ್ದಿ ವಾಹಿನಿಗಳು ಬಹುತೇಕ ಪ್ರಚಲಿತ ಡೈರೆಕ್ಟರ್ – ಪ್ರೊಡ್ಯೂಸರ್‌ಗಳನ್ನೂ ಮಾಧ್ಯಮದ ಕಟಕಟೆಯಲ್ಲಿ ನಿಲ್ಲಿಸಿ ಆರೋಪಿಗಳೆಂದೇ ಘೋಷಿಸತೊಡಗಿದವು. ಪ್ರತೀ ದಿನ ಮೀಡಿಯಾ ಟ್ರಯಲ್‌ಗಳು. ಪ್ರತಿಯೊಂದು ದೃಷ್ಟಿಕೋನಕ್ಕೆ ಅನುಗುಣವಾಗಿ ಒಂದಿಷ್ಟು ಸುದ್ದಿಗಳು ಚರ್ಚೆಗಳು ಬಂದವು.

ನಂತರ ಆದಿತ್ಯ ಠಾಕ್ರೆ ಹೆಸರು ಬಂದು ರಾಜಕೀಯ ಬಣ್ಣ ಪಡೆದುಕೊಂಡಿತು. ಕೆಲವು ಮಾಧ್ಯಮಗಳು ನರೇಂದ್ರ ಮೋದಿ ಮತ್ತು ಬಿಜೆಪಿ ಇದನ್ನೆೆಲ್ಲಾ ಹಿಂದೆ ಕುಳಿತು ಮಾಡಿಸುತ್ತಿದ್ದಾರೆ ಎನ್ನುವ ಭಾವ ಮೂಡುವಂತೆ ಆಡಿಕೊಂಡವು. ನಂತರ ಹಣಕ್ಕಾಗಿ ಕೊಲೆಯಾಯಿತು ಎನ್ನಲಾಯಿತು. ಹದಿನೈದು ಕೋಟಿ ಹಣ ರಿಯಾ ತನ್ನ ಅಕೌಂಟ್‌ಗೆ ಹಾಕಿಕೊಂಡು ಎಗರಿಸಿದಳಂತೆ ಎಂದು ಯಾವುದೇ ಆಧಾರವೇ ಇಲ್ಲದೇ ಸುದ್ದಿಗಳು ಬಂದವು.

ಪ್ರತಿಯೊಂದು ಸುದ್ದಿ ಹೊರಬಂದಾಗಲೂ ಅದನ್ನೇ ಹೌದಿರಬಹುದು’ ಎಂದು ನಂಬುವವರಿಗೆ ನಾಳೆ ಇದಕ್ಕೆಲ್ಲ ಸಾಕ್ಷಿ ಹೊರಬರಬಹುದು ಎಂದೆನಿಸತೊಡಗಿತು. ನಾಳೆಯಾದರೆ ಇನ್ನೊೊಂದು ಹೊಸ ಕಥೆ. ಡ್ರಗ್‌ಸ್‌ ಕಾರಣ ಎಂದು ಸುಶಾಂತ್‌ರ ಒಂದು ಪ್ರೈವೇಟ್ ವಿಡಿಯೋ ಹೊರಬಂತು. ಸುಶಾಂತ್ ಮದ್ಯದ
ಮತ್ತಿನಲ್ಲಿದ್ದರೋ ಅಥವಾ ನಿಜವಾಗಿ ಡ್ರಗ್‌ಸ್‌ ಸೇವಿಸುತ್ತಿದ್ದರೋ ಎನ್ನುವ ಪ್ರಶ್ನೆಗಳು ಮೂಡತೊಡಗಿದವು.
ಇಡೀ ಪ್ರಕರಣದಲ್ಲಿ ಯಾವುದೋ ಒಂದು ಆಂಗಲ್ ಸರಿ – ಸತ್ಯವಿರಬಹುದು ಅಥವಾ ಸತ್ಯವೇ ಇನ್ನೊಂದಿರಬಹುದು

ಒಟ್ಟಾರೆ, ಇಡೀ ಪ್ರಕರಣದ ಸುತ್ತ ಹತ್ತಾರು ಸುದ್ದಿಗಳನ್ನು ಇಂದು ರಾಷ್ಟ್ರೀಯ ವಾಹಿನಿಗಳು ಪ್ರಕಟಿಸುತ್ತಿವೆ. ಒಂದೊಂದರಲ್ಲಿ ಒಂದೊಂದು ದೃಷ್ಟಿಕೋನ. ಇವೆಲ್ಲದರಲ್ಲಿ ಒಂದು ಸತ್ಯವಿರ ಬಹುದು. ಅಥವಾ ಇದೊಂದು ಚಿಕ್ಕ ಕಾರಣವಿಟ್ಟುಕೊಂಡು ಮಾನಸಿಕ ಸಮಸ್ಯೆಯಿಂದಾಗಿ ಮಾಡಿಕೊಂಡ ಆತ್ಮಹತ್ಯೆಯಿರ
ಬಹುದು. ಹಾಗಾದಲ್ಲಿ ಉಳಿದವುಗಳೆಲ್ಲ ಸುಳ್ಳು – ಫೇಕ್ ಸುದ್ದಿ ಎನ್ನುವುದಕ್ಕಿಿಂತ ಉಳಿದವೆಲ್ಲ ಜಂಕ್ ಸುದ್ದಿಗಳೇ. ಈ ಜಂಕ್ ಸುದ್ದಿಗಳನ್ನು ನೋಡಲು ಕಳೆದುಕೊಂಡ ಸಮಯ ಮತ್ತೆ ಬರುವುದಿಲ್ಲವಲ್ಲ. ಇದೆಲ್ಲದರ ನಡುವೆ ಇಂದು ಬದುಕಿರುವವರಲ್ಲಿ ಬಹುತೇಕರು ಮೊದಲ ಬಾರಿ ನೋಡುತ್ತಿರುವ ಕರೋನಾ
ದಂಥ ಮಹಾಮಾರಿಯ ಸುದ್ದಿಯೇ ಎರಡನೇ ಸುದ್ದಿ ಯಾಯಿತು.

ಇಂದು ಅದೆಂಥ ಸ್ಥಿತಿ ನಿರ್ಮಾಣವಾಗಿದೆಯೆಂದರೆ ಸುಶಾಂತ್ ಕೇಸ್‌ನಲ್ಲಿ ಏನಾಯಿತು ಎನ್ನುವ ಮಾಹಿತಿ ನಮ್ಮಲ್ಲಿ ಬಹುತೇಕರಿಗೆ ಗೊತ್ತು. ಆದರೆ ಕರೋನಾ ಯಾವ ಪರಿ ಹರಡುತ್ತಿದೆ ಎಂದು ಕೇಳಿದರೆ ನಮಗೆ ಅದರ ಅಂದಾಜೇ ಇಲ್ಲದಂತಾಗಿದೆ. ಸುಶಾಂತ್‌ರ ಸಾವನ್ನು ತೀರಾ ಸೆನ್ಸೆೆಟಿವ್ ಆಗಿಯೇ ನೋಡೋಣ, ಅನ್ಯಾಯ
ವಾಗಿದ್ದಲ್ಲಿ ಅಪರಾಧಿಗಳಿದ್ದಲ್ಲಿ ಶಿಕ್ಷೆಯಾಗಲೇಬೇಕು, ಅದರಲ್ಲಿ ದೂಸರಾ ಮಾತಿಲ್ಲ. ಆದರೆ ಈ ಸುದ್ದಿಯ ಸುತ್ತಮುತ್ತ ರೆಕ್ಕೆ ಪುಕ್ಕ ಹಚ್ಚಿಕೊಂಡು ಅದೆಷ್ಟೋ ಜಂಕ್ ಸುದ್ದಿಗಳು ಸುದ್ದಿ ಗ್ರಾಹಕರನ್ನು ಒಂದು ರೀತಿ ಒಂದೇ ವಿಷಯಕ್ಕೆ ಎಡಿಕ್‌ಟ್‌ ಆಗುವಂತೆ ಇಂದಿನ ಸುದ್ದಿ ವಾಹಿನಿಗಳು ನೋಡಿಕೊಳ್ಳುತ್ತಿವೆ ಎನ್ನವುದು ಇಲ್ಲಿ ಇಗ್ನೋರ್  ಮಾಡುವಂತಿಲ್ಲ ಅಲ್ಲವೇ? ಇದೇ ರೀತಿ ಕನ್ನಡದ ಸಿನೆಮಾ ರಂಗದವರಲ್ಲಿ ಕೆಲವನ್ನು ಒಳಗೊಂಡ ಡ್ರಗ್‌ಸ್‌ ಸಂಬಂಧಿ ಸುದ್ದಿ. ಇಡೀ ಪ್ರಕರಣ ಇಂದು ಹಲವು ದಿನಗಳಿಂದ ಪ್ರೈಮ್ ಟೈಮ್‌ನ ಮುಖ್ಯ ಸುದ್ದಿಯಾಗಿದೆ.

ಒಂದು ಕ್ಷಣ ಇಡೀ ಸುದ್ದಿಯನ್ನು ಹೊರಗೆ ನಿಂತು ನೋಡಿದರೆ, ಆರೋಪ ಸಾಬೀತಾದರೆ ಇದು ಒಂದು ಗುಂಪಿನ ಜನರ ಕಾನೂನು ಬಾಹಿರ ಚಟುವಟಿಕೆ ಅಷ್ಟೇ. ಈ ಬಾರಿ ಇದರಲ್ಲಿ ಭಾಗಿಯಾಗಿರುವವರು ಹೈ ಪ್ರೊಫೈಲ್ – ಪಬ್ಲಿಕ್ ಫಿಗರ್‌ಗಳಿರ ಬಹುದು. ಡ್ರಗ್‌ಸ್‌ ಸಮಸ್ಯೆೆ ಇರದ ದೇಶವೇ ಪ್ರಪಂಚದಲ್ಲಿಲ್ಲ. ಇಲ್ಲಿ ಕೂಡ ಅಪರಾಧಿಗಳಿದ್ದರೆ ಅವರಿಗೆ ಶಿಕ್ಷೆಯಾಗಬೇಕು. ಹಾಗಂತ ಇದೊಂದೇ ನಮ್ಮೆದುಗಿರುವ ಮತ್ತು ಸಮಾಜಕ್ಕೆ ಇಡೀ ದಿನ ಬೇಕಾದ ಸುದ್ದಿಯಲ್ಲವಲ್ಲ. ಕರ್ನಾಟಕದಲ್ಲಿ ಭೀಕರ ಮಳೆ – ಹರಡುತ್ತಿರುವ ಕರೋನಾ –  ಸಾಂಕ್ರಾಮಿಕದಿಂದ ಉಂಟಾಗುತ್ತಿರುವ ಸಮಸ್ಯೆಗಳು, ಖಾಸಗಿ ಆಸ್ಪತ್ರೆಯ ದುರ್ನಡವಳಿಕೆ, ಕರೋನಾ
ಪೀಡಿತರು ಆಸ್ಪತ್ರೆಗೆ ದಾಖಲಾಗಲು, ಶುಶ್ರೂಷೆ ಪಡೆಯಲು ಇರುವ ಚಾಲೆಂಜ್‌ಗಳು, ಅನುಭವಿಸುತ್ತಿರುವ ಸಮಸ್ಯೆ, ಇವೆಲ್ಲ ಇಂದು ಪ್ರಾಮುಖ್ಯತೆಯನ್ನು ಪಡೆಯದೇ ಇದೊಂದೇ ಸ್ಯಾಾಂಡಲ್ ವುಡ್‌ನ ಡ್ರಗ್‌ಸ್‌ ಸುದ್ದಿ ಕಳೆದ ಕೆಲವು ದಿನದಿಂದ ಇನ್ನೊೊಂದು ಕನ್ನಡ ಅವತರಣಿಕೆಯ ಮೆಗಾ ಧಾರಾವಾಹಿಯಂತೆ ಬಿತ್ತರವಾಗುತ್ತಿದೆ.

ಇಲ್ಲಿ ಇಂದು ಇದಕ್ಕಿಿಂತ ಹೆಚ್ಚು ಪ್ರಾಮುಖ್ಯತೆಯುಳ್ಳ ಸುದ್ದಿಗಳು ವಾರ್ತೆಯ ಕೊನೆಯ ಐದು ನಿಮಿಷವಷ್ಟೇ ಪ್ರಸ್ತಾಪವಾಗುತ್ತವೆ. ಸಮಸ್ಯೆೆಯಿರುವುದು ಅಲ್ಲಿ. ಡ್ರಗ್‌ಸ್‌ ಸಂಬಂಧಿ ಸುದ್ದಿ ಕೂಡ ಸುದ್ದಿಯೇ. ಆದರೆ ಅದರ ವ್ಯಾಪಕತೆಯ ಎಲ್ಲೆ ಮೀರಿ ಮುಖ್ಯ ಸುದ್ದಿಗಳೇ ಸುದ್ದಿಯಾಗುತ್ತಿಲ್ಲ.  ದೇಶದಲ್ಲಿ ಎಪ್ಪತ್ತೈದು ಸಾವಿರ ಮಂದಿ ಕರೋನಾದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಕರೋನಾ ಹರಡುತ್ತಿದೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ.

ರಾಜ್ಯದಲ್ಲಿ ಎಂಟು ಸಾವಿರ ಕೋಟಿಗೂ ಮೀರಿ ಪ್ರವಾಹದಿಂದ ಹಾನಿ ಉಂಟಾಗಿದೆ. ಇವೆಲ್ಲ ನಮ್ಮ ವಾಹಿನಿಗಳಿಗೆ ಇಂದು ಒಂದು ಸುದ್ದಿಯೇ ಅಲ್ಲ. ಕೆಲವೇ ವಾರದ ಮೊದಲು ಅತ್ತ ಪ್ರವಾಹದಲ್ಲಿ ಜನಜೀವನ ಅಸ್ತವ್ಯಸ್ಥವಾಗಿರುವಾಗ ನಮ್ಮ ವಾಹಿನಿಗಳು ಡ್ರೋನ್ ಪ್ರತಾಪನನ್ನು ದಿನಗಟ್ಟಲೆ ತೋರಿಸುತ್ತಿದ್ದುದು ಇನ್ನೊೊಂದು ಇತ್ತೀಚಿನ ಜಂಕ್ ಸುದ್ದಿಯ ಉದಾಹರಣೆ. ಇದು ನಾವು ಮತ್ತು ನಮ್ಮ ಸುದ್ದಿವಾಹಿನಿ ನಿರ್ಮಿಸಿಕೊಂಡ ವಿಪರ್ಯಾಸದ ಸ್ಥಿತಿಯಲ್ಲದೆ ಇನ್ನೇನು.

ನಾವಿಂದು ಸೇವಿಸುವುದರಲ್ಲಿ ಮುಖ್ಯವಾದವಾದವುಗಳು ಆಹಾರ, ಗಾಳಿ ಮತ್ತು ಸುದ್ದಿ. ಆಹಾರವೆಂದಾಕ್ಷಣ ಇಂದು ತಿನ್ನುವುದೆಲ್ಲವನ್ನು ಅನುಮಾನದಲ್ಲಿಯೇ ನೋಡುವ ಸ್ಥಿತಿಗೆ ಬಂದು ತಲುಪಲಾಗಿದೆ. ಗಾಳಿಯಲ್ಲಿ ಅದೆಷ್ಟೋ ವಿಷತುಂಬಿಸಿ ಅದನ್ನೇ ಉಸಿರಾಡಲು ಕಲಿತು ಬಹಳ ಕಾಲವೇ ಆಯಿತು. ಇಂದು ಒಳ್ಳೆಯ ಆಹಾರ ಮತ್ತು ಗಾಳಿ ಬೇಕೆಂದರೆ ಎಷ್ಟು ಕಷ್ಟಪಡಬೇಕೋ ಅಷ್ಟೇ ಕಷ್ಟ ಸತ್ಯ, ಬೆಲೆ ಮತ್ತು ಮೌಲ್ಯವುಳ್ಳ ಸುದ್ದಿ ಪಡೆಯಲು ಕೂಡ ಇಂದಿನ ಜಂಕ್ ಸುದ್ದಿಯ ಭರಾಟೆಯಲ್ಲಿ ಕಷ್ಟಪಡಬೇಕಾಗಿದೆ. ಈ ಜಂಕ್ ಸುದ್ದಿಗಳನ್ನು ಎಲ್ಲರೂ ನೋಡುತ್ತಿರುವುದರಿಂದ ಅದರ ಬಗ್ಗೆ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇನ್ನು ಕೆಲವರಲ್ಲಿ ನಿರ್ಮಾಣವಾಗಿದೆ. ಇಲ್ಲದಿದ್ದರೆ ಸೋಷಿಯಲ್ ಆಗಿ ಮಾತನಾಡುವಾಗ ಅಪ್ರಸ್ತುತವಾಗಿಬಿಡುತ್ತೇವೆ.

ಜಂಕ್ ಫುಡ್ ಅನ್ನು ತಿನ್ನುವುದನ್ನು ಒಂದು ಫ್ಯಾಶನ್ ಎಂದು ಭಾವಿಸುವಂತೆ ಇಂದು ಜಂಕ್ ಸುದ್ದಿಗಳ ಬಗ್ಗೆ ಅಪ್ – ಟು – ಡೇಟ್ ಇರುವುದು ಕೂಡ ಒಂದು ರೀತಿಯ ಫ್ಯಾಶನ್‌ನಂತೆ ಆಗಿದೆ. ಈ ರೀತಿ ವಾಹಿನಿಗಳಲ್ಲಿ ಬರುವ ಜಂಕ್ ಸುದ್ದಿಗಳ ಬಗ್ಗ ತಿಳಿದಿಲ್ಲದಿದ್ದರೆ ಸುದ್ದಿಯೇ ತಿಳಿದಿರದ ಗಮಾರನಂತೆ ಎನ್ನುವ ಸ್ಥಿತಿ ಕೂಡ ನಿರ್ಮಾಣವಾಗಿದೆ. ಇದಕ್ಕೆ ಅನ್ಯ ದೇಶದ ಸುದ್ದಿ ವಾಹಿನಿಗಳು ಕೂಡ ಹೊರತಾಗಿಲ್ಲ. ಜಂಕ್ ಆಹಾರದಂತೆ ಜಂಕ್ ಸುದ್ದಿ ಕೂಡ ತುಂಬಾ ಸುಲಭದಲ್ಲಿ ಉತ್ಪಾದಿಸಬಹುದಾದಂಥದ್ದು.

ಊಹಾಪೋಹವೆ ಅದಕ್ಕೆ ಸರಕು. ಹೀಗಿರಬಹುದು, ಹೀಗಾಗಿರಬಹುದು ಎನ್ನುವುದೇ ಜಂಕ್ ಸುದ್ದಿಯ ಇನ್‌ಗ್ರೇಡಿಯಂಟ್. ಒಂದೇ ಊಹಾಪೋಹವನ್ನು ಬಳಸಿ ಅದಕ್ಕೆ ತಮ್ಮದೇ ಒಗ್ಗರಣೆ ಹಾಕಿ ಒಂದೊಂದು ವಾಹಿನಿ ಒಂದೊಂದು ರೀತಿಯಲ್ಲಿ ಈ ಜಂಕ್ ಸುದ್ದಿಗಳನ್ನು ಸುದ್ದಿ ಗ್ರಾಹಕರಿಗೆ ಉಣಬಡಿಸುತ್ತವೆ. ಗ್ರಾಹಕ
ಅನಿವಾರ್ಯವಾಗಿ ತಿನ್ನಲೇಬೇಕು. ಜಂಕ್ ಆಹಾರಗಳು ಇಂದು ನಮ್ಮ ಹೊಟ್ಟೆ ಸೇರುತ್ತಿದ್ದರೆ ಜಂಕ್ ಸುದ್ದಿಗಳು ತಲೆ ತುಂಬಿಕೊಳ್ಳುತ್ತಿವೆ. ಇದೆಲ್ಲದರ ಜೊತೆ ವಾಟ್ಸಾಪ್, ಯುಟ್ಯೂಬ್ ಮೊದಲಾದವುಗಳು ಇನ್ನೊೊಂದಿಷ್ಟು ಜಂಕ್ ಸುದ್ದಿಯನ್ನು ಅನ್ನು ಪ್ರತೀ ದಿನ ನಮ್ಮ ಮೊಬೈಲ್‌ಗೆ ಹೊತ್ತು ತರುತ್ತವೆ. ಏನಾಯ್ತು
ಗೊತ್ತಾ – ಏನಂದರು ಗೊತ್ತಾ’ ಎನ್ನುವ ಶೀರ್ಷಿಕೆ ಹೊತ್ತು ಜೊಳ್ಳು ಸುದ್ದಿಗಳನ್ನು ತಂದು ತಲೆಗೆ ತುರುಕುತ್ತಿವೆ.

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಸಂಭಾವಿತ ಪತ್ರಕರ್ತರೇ – ಜ್ಞಾನ ಪ್ರವರ್ತಕರೇ. ಒಟ್ಟಾರೆ ಇಂದು ಹೇಗೆ ನಾವು ಆರೋಗ್ಯಕರ ಆಹಾರವನ್ನು ಆರಿಸಿ ತಿನ್ನುವ ಸ್ಥಿತಿ ನಿರ್ಮಾಣವಾಗಿದೆಯೋ ಅಂತೆಯೇ
ಆರೋಗ್ಯಕರ ಜಂಕ್ ಅಲ್ಲದ ಸುದ್ದಿಯನ್ನು ಕೂಡ ಕಷ್ಟಪಟ್ಟು ಆರಿಸಿ ಒಳಬಿಟ್ಟುಕೊಳ್ಳುವ ಸ್ಥಿತಿ ನಿರ್ಮಾಣ ವಾಗಿದೆ. ವಿಶ್ವವಾಣಿಯಲ್ಲಿ ಪ್ರಕಟವಾದ ಸೋಮೇಶ್ವರರ ಲೇಖನ ಒಂದೊಂದು ತುತ್ತು ಆಹಾರವೂ ಆರೋಗ್ಯಕರವಾಗಿರಲಿ’ ಎಂದಿತ್ತು. ಅಂತೆಯೇ ನಾವು ಒಳಬಿಟ್ಟುಕೊಳ್ಳುವ ಒಂದೊಂದು ತುತ್ತು ಸುದ್ದಿ ಕೂಡ
ಆರೋಗ್ಯಕರವಾಗಿರಲಿ.

ಮೊದಲು ಜಂಕ್ ಸುದ್ದಿಗಳನ್ನು ತಿನ್ನುವುದನ್ನು ನಿಲ್ಲಿಸಿ. ಆಗ ನಮ್ಮ ವಾಹಿನಿಗಳು ಸಾಮಾಜಿಕ ಕಳಕಳಿ ಯನ್ನು ಮೊದಲ ಸ್ಥಾನದಲ್ಲಿರಿಸಿ ಸುದ್ದಿಗಳಿಗೆ ಸೂಕ್ತ ತೂಕ ಮತ್ತು ಪ್ರಾಮುಖ್ಯತೆ ನೀಡುವಂತಾಗುತ್ತದೆ. ನಮ್ಮ ಅವಶ್ಯಕತೆ ಬದಲಿಸಿಕೊಂಡರೆ ವಾಹಿನಿಗಳು ಅನಿವಾರ್ಯವಾಗಿ ಬದಲಾಗುತ್ತವೆ. ಆಗ ಮಾತ್ರ ಈ ಸುದ್ದಿಯ ಜಂಕ್ ಸಂಸ್ಕೃತಿ ಬದಲಿಸಬಹುದು ಮತ್ತು ಸುದ್ದಿಯ ಅಜೀರ್ಣವನ್ನು ತಪ್ಪಿಸಬಹುದು.

Leave a Reply

Your email address will not be published. Required fields are marked *