3 ತಿಂಗಳ ಅಭಿಯಾನ
ಬೇಸಿಗೆಯಲ್ಲಿ ಉದ್ಯೋಗ
ವಿಶೇಷ ವರದಿ: ರಂಗನಾಥ ಕೆ.ಮರಡಿ
ತುಮಕೂರು: ಗ್ರಾಮೀಣ ಪ್ರದೇಶದ ಕುಟುಂಬಗಳು ಜೀವನ ನಿರ್ವಹಣೆಗಾಗಿ ಬೇಸಿಗೆ ಕಾಲದಲ್ಲಿ ವಲಸೆ ಹೋಗುವುದನ್ನು ತಪ್ಪಿಸಲು ಮಾ.15ರಿಂದ 3 ತಿಂಗಳಕಾಲ ದುಡಿಯೋಣ ಬಾ ಅಭಿಯಾನವನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್
ರಾಜ್ ಇಲಾಖೆ ಹಮ್ಮಿಕೊಂಡಿದೆ.
ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಉದ್ಯೋಗ ಕಲ್ಪಿಸಿ, ಸ್ಥಳೀಯಮಟ್ಟದಲ್ಲಿ ಉದ್ಯೋಗ
ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದ ಅಧಿಕಾರಿಗಳು ಸನ್ನದ್ದರಾಗುವಂತೆ ಇಲಾಖೆ ಸೂಚಿಸಿದೆ.
ಒಂದು ಕುಟುಂಬವು ಒಂದು ವರ್ಷದಲ್ಲಿ 100 ದಿನ ಕೆಲಸ ಮಾಡಲು ಅವಕಾಶವಿದೆ. ಅಭಿಯಾನದ ವೇಳೆಯಲ್ಲಿ 60 ದಿನ ಕೆಲಸ ಮಾಡಲು ಅವಕಾಶವಿದ್ದು, 16,500 ರು ಕೂಲಿ ಸಂಪಾದಿಸಬ ಹುದಾಗಿದೆ.
ಕೆಲಸ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಶಶುಪಾಲನಾ ಕೇಂದ್ರ ಸೇರಿದಂತೆ ಇನ್ನಿತರ ಸವಲತ್ತುಗಳನ್ನು ಒದಗಿಸಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಬೇಸಿಗೆಯಲ್ಲಿ ಕೂಲಿ ಸಿಗುವುದರಿಂದ ಮುಂದಿನ ಕೃಷಿ ಚಟುವಟಿಕೆ ಸೇರಿದಂತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ.
ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 50 ರೈತರ ಜಮೀನಿನಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ ನಿರ್ಮಾಣ, ಕನಿಷ್ಟ 50 ಸೋಕ್ ಪಿಟ್
ನಿರ್ಮಾಣ, ಕೆರೆ ಏರಿ, ಕೋಡಿ ದುರಸ್ತಿ, ಕಾಲುವೆ ಪುನಶ್ಚೇತನ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಬೇಕು.
‘ದುಡಿಯೋಣ ಬಾ’ ಅಭಿಯಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ಜಿಲ್ಲಾ ಪಂಚಾಯಿತಿಯೂ ಪ್ರತಿ ಗ್ರಾಮ ಪಂಚಾಯಿತಿ ಗಳಿಗೆ ಸೃಷ್ಟಿಸಲಾಗಿರುವ ಮಾನವ ದಿನಗಳನ್ನು ಆಧರಿಸಿ ಮುಂಗಡವಾಗಿ ಆಡಳಿತಾತ್ಮಕ ವೆಚ್ಚವನ್ನು ಬಿಡುಗಡೆ ಮಾಡಲು ಗ್ರಾಮೀಣಾಭಿವೃದ್ದಿ ಆಯುಕ್ತಾಲಯ ಆದೇಶಿಸಿದೆ.
ರಾಯಭಾರಿ ನೇಮಕ: ದುಡಿಯೋಣ ಬಾ ಅಭಿಯಾನದ ಅನುಷ್ಟಾನ ಮತ್ತು ಮೇಲ್ವಿಚಾರಣೆಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ
ಅಭಿಯಾನದ ಕಾಲಾವಧಿಗೆ ರಾಯಭಾರಿಯನ್ನು ಗ್ರಾಪಂ ಅಭಿವೃದ್ದಿ ಅಧಿಕಾರಿ ನೇಮಕ ಮಾಡಿಕೊಳ್ಳಬಹುದಾಗಿದೆ. ನರೇಗಾ
ದಲ್ಲಿ ಧೀರ್ಘಕಾಲ ಮೇಟ್ ಆಗಿ ಕಾರ್ಯನಿರ್ವಹಿಸಿ ಅನುಭವ ಇರುವವರಿಗೆ ರಾಯಭಾರಿಯಾಗಲು ಆದ್ಯತೆ ನೀಡಬೇಕು.
ಮುಖ್ಯಾಂಶಗಳು
ಮಾ.15ರಿಂದ 22 ರವರೆಗೆ ಗ್ರಾಮಗಳಲ್ಲಿ ಅಭಿಯಾನದ ಬಗ್ಗೆ ಜನಜಾಗೃತಿ.
ಮಾ.23ರಿಂದ31ರವರೆಗೆ ಉದ್ಯೋಗ ಚೀಟಿ ವಿತರಣೆ ಮತ್ತು ಕಾಮಗಾರಿ ಆರಂಭಿಸಲು ಎನ್‌ಎಂಆರ್ ಸೃಜಿಸುವುದು.
ಏ.1ರಿಂದ15ರವರೆಗೆ ಕೆಲಸಗಾರರಿಗೆ ನಿರಂತರ ಕೆಲಸ ಒದಗಿಸುವುದು.
ಅಭಿಯಾನದಲ್ಲಿ ಕೈಗೊಳ್ಳುವ ಕಾಮಗಾರಿಗಳು
ಬದು ನಿರ್ಮಾಣ.
ಸೋಕ್ ಪಿಟ್.
ಸಮಗ್ರ ಕೆರೆ ಅಭಿವೃದ್ದಿ.
ಬೋರ್‌ವೆಲ್ ರೀಚಾರ್ಜ್ ಕಾಮಗಾರಿ.
ಕೃಷಿ ಅರಣ್ಯೀಕರಣ.
ರಸ್ತೆ ಬದಿ ನೆಡುತೋಪು.
ಬ್ಲಾಕ್ ಪ್ಲಾಂಟೇಶನ್.
ಇತರ ಕಾಮಗಾರಿಗಳು.