Saturday, 28th December 2024

Babri Masjid Demolition: ಬಾಬ್ರಿ ಮಸೀದಿ ಧ್ವಂಸ ಸಮರ್ಥಿಸಿಕೊಂಡ ಶಿವಸೇನೆ; ಎಂವಿಎ ಒಕ್ಕೂಟದಿಂದ ಹೊರಬಂದ ಸಮಾಜವಾದಿ ಪಕ್ಷ

ಮಹಾರಾಷ್ಟ್ರ, Babri Masjid demolition: ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಶಿವ ಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಸಮರ್ಥನೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ ಒಕ್ಕೂಟದಿಂದ ಸಮಾಜವಾದಿ ಪಕ್ಷ ಹೊರ ನಡೆದಿದೆ.

ಬಾಬ್ರಿ ಮಸೀದಿಯ ಧ್ವಂಸ (Babri Masjid demolition) ಘಟನೆಗೆ ಇದೀಗ 31 ವರ್ಷ. 1992ರಲ್ಲಿ ನಡೆದಿದ್ದ ಈ ಘಟನೆಯಲ್ಲಿ ಸುಮಾರು 2,000 ಕ್ಕೂ ಹೆಚ್ಚು ಜನರ ಸಾವಿಗೀಡಾಗಿದ್ದರು. ಬಾಬ್ರಿ ಮಸೀದಿ ಧ್ವಂಸಗೊಂಡು 31 ವರ್ಷಗಳಾಗಿದ್ದರೂ, ಈ ಘಟನೆಯನ್ನು ಸ್ವಾತಂತ್ರ್ಯದ ನಂತರ ಭಾರತದ ಕರಾಳ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ದೇಶದ ರಾಜಕೀಯದ ದಿಶೆಯನ್ನೇ ಬದಲಾಯಿಸಿತ್ತು.

ಇದೀಗ ಇದೇ ವಿಷಯಕ್ಕೆ ಮಹಾರಾಷ್ಟ್ರ ಘಟಕ ಪ್ರತಿಪಕ್ಷಗಳ ಒಕ್ಕೂಟ ಮಹಾ ವಿಕಾಸ ಅಘಾಡಿ (MVA) ಯಲ್ಲಿ ಬಿರುಕಿಗೆ ಕಾರಣವಾಗಿದೆ. ಹೌದು ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ದಿನವಾಗಿದ್ದು, ಬಾಬ್ರಿ ಮಸೀದಿ ಧ್ವಂಸಗೊಂಡಿದ್ದನ್ನು ಹೊಗಳಿದ ಶಿವಸೇನೆ (UTB) ಬಣ ಪತ್ರಿಕೆಯಲ್ಲಿ ಜಾಹಿರಾತನ್ನು ಪ್ರಕಟ ಮಾಡಿದೆ.

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯಲ್ಲಿ ಭಿನ್ನಾಭಿಪ್ರಾಯ ಎದಿದ್ದು, ಶಿವಸೇನೆಯ ನಡೆಯನ್ನು ವಿರೋಧಿಸಿ ಪ್ರತಿಭಟಿಸಿದ ಸಮಾಜವಾದಿ ಪಕ್ಷ ಎಂವಿಎ ಮೈತ್ರಿಕೂಟವನ್ನು ತೊರೆದಿದೆ.

ಶಿವಸೇನೆ (UTB) ಪಕ್ಷದ ನಾಯಕ ಬಾಬರಿ ಮಸೀದಿ ಧ್ವಂಸವನ್ನು ಸಮರ್ಥಿಸಿರುವ ಹಿನ್ನೆಲೆ, ಸಮಾಜವಾದಿ ಪಕ್ಷದ (SP) ಮಹಾರಾಷ್ಟ್ರ ಘಟಕ ಪ್ರತಿಪಕ್ಷಗಳ ಒಕ್ಕೂಟ ಮಹಾ ವಿಕಾಸ ಅಘಾಡಿ (MVA) ಯನ್ನು ತೊರೆದಿದ್ದು, ಈ ಕುರಿತು ಸಮಾಜವಾದಿ ಎಸ್‌ಪಿ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಅಬು ಅಸಿಮ್ ಅಝ್ಮಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎಸ್‌ಪಿ ಇಬ್ಬರು ಶಾಸಕರನ್ನು ಹೊಂದಿದ್ದು, ರಾಜ್ಯಾಧ್ಯಕ್ಷ ಅಬು ಅಸಿಮ್ ಅಝ್ಮಿ ಅವರು ಅಝ್ಮಿ ಮುಂಬೈನ ಮನ್ಖುರ್ದ್-ಶಿವಾಜಿನಗರದ ಶಾಸಕರಾದರೆ, ಇನ್ನೊಬ್ಬರು ರೈಸ್ ಶೇಖ್ ಥಾಣೆ ಜಿಲ್ಲೆಯ ಭಿವಂಡಿ ಪೂರ್ವ ಕ್ಷೇತ್ರದ ಶಾಸಕರಾಗಿದ್ದಾರೆ.

“ನಾವು ಆಡಳಿತಾರೂಢ ಮಹಾಯುತಿ ಅಥವಾ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿಯ ಭಾಗವಲ್ಲ. ನಮ್ಮಿಬ್ಬರಿಗಾಗಿ ಪ್ರತ್ಯೇಕ ಜಾಗವನ್ನು ಮೀಸಲಿಡುವಂತೆ ಸ್ಪೀಕರ್ ಮತ್ತು ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿಯನ್ನು ಕೋರುತ್ತೇವೆ,” ಎಂದು ಅಝ್ಮಿ ಹೇಳಿದ್ದಾರೆ.

“ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಸಮಯದಲ್ಲಾಗಲಿ, ಪ್ರಚಾರದ ಸಮಯದಲ್ಲಾಗಲಿ ಎಂವಿಎ ನಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ನಮ್ಮನ್ನು ಯಾವುದೇ ಸಭೆ, ರ್ಯಾಲಿಗಳಿಗೆ ಕರೆಯುತ್ತಿರಲಿಲ್ಲ” ಎಂದು ಅಝ್ಮಿ ತಿಳಿಸಿದ್ದಾರೆ.

“ಉದ್ದವ್ ಠಾಕ್ರೆಯವರು ಅವರ ಪಕ್ಷದ ಆಂತರಿಕ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಬಲ ಹಿಂದುತ್ವ ಪ್ರತಿಪಾದಿಸುವಂತೆ ಹೇಳಿದ್ದಾರಂತೆ. ಶಿವಸೇನೆಯವರು ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸವನ್ನು ಸಮರ್ಥಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನು ನಾವು ಹೇಗೆ ಸಹಿಸಿಕೊಳ್ಳುವುದು?” ಎಂದು ಅಝ್ಮಿ ಪ್ರಶ್ನಿಸಿದ್ದಾರೆ.

ವರದಿಗಳ ಪ್ರಕಾರ, ಬಾಬ್ರಿ ಮಸೀದಿ ಧ್ವಂಸವನ್ನು ಸಮರ್ಥಿಸಿ, ಸಂಭ್ರಮಿಸಿ ಶಿವಸೇನೆ (ಯುಬಿಟಿ) ಎಂಎಲ್‌ಸಿ ಹಾಗೂ ಉದ್ದವ್ ಠಾಕ್ರೆ ಅವರ ಆಪ್ತ ಸಹಾಯಕ ಮಿಲಿಂದ್ ನಾರ್ವೇಕರ್ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್ ಎಸ್‌ಪಿ ನಾಯಕರನ್ನು ಕೆರಳಿಸಿದೆ. ಮಿಲಿಂದ್ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ, ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಫೋಟೋಗಳಿವೆ.

“ಮಿಲಿಂದ್ ನಾರ್ವೇಕರ್ ಪೋಸ್ಟ್‌ನಿಂದ ನಮ್ಮ ಮನಸ್ಸಿಗೆ ನೋವಾಗಿದ್ದು, ಎಲ್ಲಾ ಸಮುದಾಯಗಳ ಏಕತೆ ಮತ್ತು ಗೌರವದ ಮೌಲ್ಯಗಳಿಗೆ ವಿರುದ್ಧವಾಗಿವೆ. ನಾವು ಸೌಹಾರ್ದತೆಯನ್ನು ಉತ್ತೇಜಿಸಲು ಇಲ್ಲಿದ್ದೇವೆ, ಜನರನ್ನು ವಿಭಜಿಸಲು ಅಲ್ಲ” ಎಂದು ಅಝ್ಮಿ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: DK Shivakumar: ಕೋವಿಡ್ ಅಕ್ರಮ; ಹಣ ತಿಂದವರನ್ನು ಬಿಡುವುದಿಲ್ಲ ಎಂದ ಡಿಕೆಶಿ