ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ನಮ್ಮಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿಯಿದ್ದಂತೆ, ಫಿಲಿಪ್ಪೀನ್ಸ್‌ನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು. ಅವರಿಬ್ಬರೂ ಕಚ್ಚಾಡು ತ್ತಿದ್ದಾರೆ. ಅವರಿಬ್ಬರ ಹೇಳಿಕೆಗಳು ಜಗತ್ತಿನಾದ್ಯಂತ ಸುದ್ದಿಯಾದವು.
ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೋ ಡುಟಾರ್ಟೆ ಒಂದು ಹೇಳಿಕೆ ನೀಡಿದರು. ‘ಎಲ್ಲಿಯವರೆಗೆ ಸುಂದರ ಯುವತಿಯರು ಇರುತ್ತಾರೋ,
ಅಲ್ಲಿಯವರೆಗೆ ಅತ್ಯಾಚಾರವೆಂಬುದು ಇರುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಸುಂದರ ಯುವತಿಯರೇ ಅತ್ಯಾಚಾರಕ್ಕೆ ಕಾರಣ’ ಎಂದು ಹೇಳಿದರು. ನಾರಿಮಣಿಯರೆಲ್ಲ ಮುರುಕೊಂಡು ಬಿದ್ದರು. ಇವು ಒಂದು ದೇಶದ ಅಧ್ಯಕ್ಷನ ಬಾಯಿಂದ ಬರುವ ಮಾತುಗಳಾ ಎಂದು ಎಲ್ಲರೂ ಜರೆದರು.
ಏನೋ ಯಡವಟ್ಟಾಯಿತೆಂದು ಉಪಾಧ್ಯಕ್ಷನಿಗೆ ಮನವರಿಕೆಯಾಯಿತು. ಅವರೂ ಒಂದು ಹೇಳಿಕೆ ನೀಡಿದರು- ‘ಅತ್ಯಾಚಾರಿ
ಗಳಿರುವುದರಿಂದ ಅತ್ಯಾಚಾರ ಆಗುತ್ತಿದೆ. ಅತ್ಯಾಚಾರಕ್ಕೂ, ಸುಂದರ ಯುವತಿಯರಿಗೂ ಸಂಬಂಧ ಇಲ್ಲ.’ ಇದರಿಂದ ಅಧ್ಯಕ್ಷನಿಗೆ
ಏನನಿಸಿತೋ ಏನೋ? ‘ಸುಮ್ಮಸುಮ್ಮನೆ ಅತ್ಯಾಚಾರವಾಗುವುದಿಲ್ಲ. ಸುಂದರ ಯುವತಿಯರಿಂದ ಮಾತ್ರ ಅತ್ಯಾಚಾರಕ್ಕೆ ಪ್ರೇರಣೆ ಸಿಗುತ್ತದೆ.
ಎಲ್ಲ ಹೆಂಗಸರನ್ನೂ ಅತ್ಯಾಚಾರ ಮಾಡುವುದಿಲ್ಲ’ ಎಂದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದರು. ಅದಕ್ಕೆ ಉಪಾ ಧ್ಯಕ್ಷರು, ‘ಅತ್ಯಾಚಾರಿಯಿದ್ದರೆ ಮಾತ್ರ ಅತ್ಯಾಚಾರ ತಾನೇ? ಸುಂದರ ಯುವತಿಯರನ್ನು ದೂರುವುದು ಸರಿ ಅಲ್ಲ’ ಎಂದರು. ಅಷ್ಟಕ್ಕೂ ಅಧ್ಯಕ್ಷರು ಸುಮ್ಮನಾಗಲಿಲ್ಲ. ‘ಅತ್ಯಾಚಾರ ಕ್ಕೊಳಗಾಗುವ ಹೆಂಗಸು ಅತ್ಯಾಚಾರಿಯ ಕಣ್ಣಲ್ಲಿ ಸುಂದರಿಯೇ ಆಗಿರು ತ್ತಾಳೆ’ ಎಂದರು. ಪ್ರಯೋಜನಕ್ಕೆ ಬಾರದ ಹೇಳಿಕೆಗಳಿಂದ ಅವರಿಬ್ಬರೂ ತಮ್ಮ ದೇಶವಾಸಿಗಳಷ್ಟೇ ಅಲ್ಲ, ಎಲ್ಲರ ಮುಂದೆ ನಗೆಪಾಟಲಿಗೆ ಈಡಾದರು.
ಇದು ಭಾರತದಲ್ಲಿ ಸಾಧ್ಯವಾ?
ಮೂರು ವರ್ಷಗಳ ಹಿಂದೆ ರವಾಂಡಕ್ಕೆ ಸ್ವಿಟ್ಜರ್‌ಲ್ಯಾಂಡಿನ ಅಧ್ಯಕ್ಷರು ಭೇಟಿ ಕೊಟ್ಟಿದ್ದರಂತೆ. ಆ ಸಂದರ್ಭದಲ್ಲಿ ಅವರು ‘ಅತಿ ಗಣ್ಯರ ಅಭಿಪ್ರಾಯ ಪುಸ್ತಕ’ದಲ್ಲಿ Rwanda has become one of the cleanest countries in the world as clean as Switzerland ಎಂದು ಬರೆದಿದ್ದಾರಂತೆ. ಸ್ವತಃ ಸ್ವಿಟ್ಜರ್‌ಲ್ಯಾಂಡ್ ಅಧ್ಯಕ್ಷರಿಗೇ ಹೀಗೆ ಅನಿಸಿದೆಯೆಂದರೆ, ರವಾಂಡ ಅದೆಷ್ಟು ಸ್ವಚ್ಛವಾಗಿರ ಬಹುದು ಎಂಬುದನ್ನು ಊಹಿಸಬಹುದು.
ರವಾಂಡದ ಬೀದಿಯಲ್ಲಿ ಕಸ, ಕಡ್ಡಿ ಬಿದ್ದಿದ್ದನ್ನು ಕಂಡರೆ, ಯಾರೂ ಅದನ್ನು ನೋಡಿ ಸುಮ್ಮನೆ ಹೋಗುವುದಿಲ್ಲ. ಅದನ್ನು ಎತ್ತಿ ಸಮೀಪದ ಕಸದ ಬುಟ್ಟಿಗೆ ಹಾಕಿ ಹೋಗುತ್ತಾರೆ. 2007ರಲ್ಲಿ ರವಾಂಡ ಸರಕಾರ ಶ್ರಮದಾನ(ಉಮುಗಂಡ) ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯನ್ವಯ ತಿಂಗಳ ಕೊನೆಯ ಶನಿವಾರ, ರಾಷ್ಟ್ರಾಧ್ಯಕ್ಷರಿಂದ ಕಟ್ಟಕಡೆಯ ವ್ಯಕ್ತಿಯವರೆಗೆ ಪ್ರತಿ ಯೊಬ್ಬರೂ ಶ್ರಮದಾನದಲ್ಲಿ ಪಾಲ್ಗೊಳ್ಳಲೇಬೇಕು. ದೇಶದ ಅಧ್ಯಕ್ಷ ಪಾಲ್ ಕಗಾಮೆ ಈ ‘ಉಮುಗಂಡ’ದಲ್ಲಿ ತಪ್ಪದೇ ಭಾಗವಹಿಸು ತ್ತಾರೆ.
ರವಾಂಡದ ಶಾಲೆ, ಕಾಲೇಜು, ಸಮುದಾಯ ಭವನ ಮುಂತಾದವುಗಳ ನಿರ್ಮಾಣಕ್ಕೆ ಈ ಯೋಜನೆ ಸಹಾಯಕವಾಗಿದೆ.
ಅಷ್ಟೇ ಅಲ್ಲ, ದೇಶದ ರಸ್ತೆಗಳು ಉಬ್ಬು-ತಗ್ಗು, ಗುಂಡಿಗಳಿಂದ ಮುಕ್ತವಾಗಿರಲು ಇದು ಪ್ರಯೋಜನವಾಗಿದೆ. ಹದಿನೆಂಟರಿಂದ
ಅರವತ್ತೈದು ವರ್ಷ ವಯಸ್ಸಿನವರೆಲ್ಲರೂ ಈ ಮಾಸಿಕ ಆಚರಣೆಯಲ್ಲಿ ಖುಷಿಯಿಂದ ಭಾಗವಹಿಸುತ್ತಾರೆ. ದೇಶದ ಶೇ.85ರಷ್ಟು ಜನ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ. ಈ ತಿಂಗಳು ‘ಉಮುಗಂಡ’ದಲ್ಲಿ ಭಾಗವಹಿಸಲು ಆಗದಿದ್ದರೆ ಮುಂದಿನ ತಿಂಗಳಲ್ಲಿ ಎರಡು ಸಲ ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇಡೀ ದೇಶವಾಸಿಗಳೆಲ್ಲ ಏಕಕಾಲದಲ್ಲಿ ಒಂದೇ ಕಾಯಕದಲ್ಲಿ ನಿರತರಾಗುವುದು ಸಾಮೂಹಿಕ ಪ್ರಜ್ಞೆ ಮೂಡಿಸುವಲ್ಲಿ ಪರಿಣಾಮಕಾರಿ ಕ್ರಮವಾಗಿದೆ. ಇಂಥ ಯೋಜನೆ ಯಶಸ್ವಿಯಾಗಬೇಕೆಂದರೆ ಎಲ್ಲರ ಸಹಕಾರ ಬೇಕು. ಒಂದು ವೇಳೆ ಮೋದಿ ಯವರು ಈ ಯೋಜನೆಯನ್ನು ಭಾರತ ದಲ್ಲಿ ಜಾರಿಗೆ ತಂದರೆ ಏನಾಗಬಹುದು? ನಿಮ್ಮ ಊಹೆ ಸರಿ ಇದೆ, ಪ್ರತಿಪಕ್ಷಗಳು ಇದರಲ್ಲೂ ಕೊಂಕು ತೆಗೆದು ಮೋದಿ ಅವರನ್ನು ಟೀಕಿಸದೇ ಬಿಡುವುದಿಲ್ಲ. ಈ ಯೋಜನೆ ನೆಲಕಚ್ಚುವ ತನಕ ವಿರಮಿಸುವುದಿಲ್ಲ.
ಕುಶಭಾವು ಠಾಕ್ರೆ ಹೇಳಿದ ಪ್ರಸಂಗ
ಅವು 1998ರ ದಿನಗಳು. ಅಟಲ್ ಬಿಹಾರಿ ವಾಜಪೇಯಿ ಕುರಿತು ಬರೆಯಲಿರುವ ಪುಸ್ತಕಕ್ಕೆ ಮಾಹಿತಿ ಸಂಗ್ರಹಿಸಲೆಂದು ದಿಲ್ಲಿಗೆ ಹೋಗಿದ್ದೆ.
ಭಾರತೀಯ ಜನತಾಪಕ್ಷದ ಪ್ರಧಾನ ಕಚೇರಿಯಲ್ಲಿ ಕೆಲವು ನಾಯಕರನ್ನು, ಕಾರ್ಯಾಲಯದ ಸಿಬ್ಬಂದಿಯನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕುವುದು ಉದ್ದೇಶವಾಗಿತ್ತು. ಆಗ ಕುಶಭಾವು ಠಾಕ್ರೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಗೋವಿಂದಾ ಚಾರ್ಯ ಹಾಗೂ ನರೇಂದ್ರ ಮೋದಿಯವರು ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಜ.ನಾ. ಕೃಷ್ಣಮೂರ್ತಿ(ಮುಂದೆ ಇವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದರು) ಅವರು ಕಾರ್ಯಾಲಯದ ಪ್ರಮುಖರಾಗಿದ್ದರು. ಗೋವಿಂದಾಚಾರ್ಯ ಹಾಗೂ ಮೋದಿ ಅಕ್ಕಪಕ್ಕದ ಕೋಣೆಯಲ್ಲಿ ವಾಸಿಸುತ್ತಿದ್ದರು.
‘ನಾನು ಹಾಗೂ ಮೋದಿ ಪ್ರವಾಸದಲ್ಲಿರುವುದರಿಂದ ನಮ್ಮ ರೂಮಿನಲ್ಲಿಯೇ ಉಳಿದುಕೊಳ್ಳಬಹುದು’ ಎಂದು ಗೋವಿಂದಾ ಚಾರ್ಯರು ಮುಕ್ತ ಆಮಂತ್ರಣ ನೀಡಿದ್ದರು. ನಾನು ಠಾಕ್ರೆ ಅವರ ಸಮಯ ನಿಗದಿಪಡಿಸಿಕೊಂಡು ಅವರನ್ನು ಭೇಟಿ ಮಾಡಿದೆ. ಠಾಕ್ರೆಯವರು ವಾಜಪೇಯಿ ಅವರ ಓರಗೆಯವರು. ಅಟಲ್‌ಜೀಗಿಂತ ಎರಡು ವರ್ಷ ಹಿರಿಯರು. ಇವರೂ ಸಹ ಅಟಲ್
ಜೀಯವರಂತೆ ಮಧ್ಯಪ್ರದೇಶದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪ್ರಚಾರಕರಾಗಿದ್ದ ಠಾಕ್ರೆಯವರನ್ನು ಜನಸಂಘಕ್ಕೆ (ರಾಜಕೀಯಕ್ಕೆ) ಕರೆತಂದು, ಪಕ್ಷದ ಮಧ್ಯಪ್ರದೇಶ ಕಾರ್ಯದರ್ಶಿ ಹಾಗೂ ಆನಂತರ ರಾಷ್ಟ್ರೀಯ ಕಾರ್ಯದರ್ಶಿ ಯಾಗಿ ಮಾಡಿದವರು ವಾಜಪೇಯಿ ಅವರೇ.
ಮಧ್ಯಪ್ರದೇಶದ ಖಂಡ್ವಾ ಲೋಕಸಭೆ ಸ್ಥಾನಕ್ಕೆ 1979ರಲ್ಲಿ ಮರುಚುನಾವಣೆಯಾದಾಗ, ಠಾಕ್ರೆಯವರನ್ನು ನಿಲ್ಲಿಸಿ, ಆರಿಸಿ ತರುವಲ್ಲಿ ಪ್ರಮುಖ ಪಾತ್ರವಹಿಸಿದವರೂ ವಾಜಪೇಯಿ ಅವರೇ. 1980ರಲ್ಲಿ ಬಿಜೆಪಿ ಸ್ಥಾಪನೆಯಾದಾಗ ಠಾಕ್ರೆ ಅವರು ರಾಷ್ಟ್ರೀಯ ಕಾರ್ಯದರ್ಶಿ ಆದರು. ನಂತರ ಪ್ರಧಾನ ಕಾರ್ಯದರ್ಶಿಯಾದರು. ಉಪಾಧ್ಯಕ್ಷರಾದರು ಹಾಗೂ ಅಧ್ಯಕ್ಷರಾದರು. ಅವರ ಈ ಹಂತಹಂತದ ತೇರ್ಗಡೆಯಲ್ಲಿ ವಾಜಪೇಯಿಗೆ ಬೇಕಾದವರು ಎಂಬುದೂ ಒಂದು ಕಾರಣವಾಗಿತ್ತು.
ವಾಜಪೇಯಿ ಅವರ ಜತೆ ಸುಮಾರು ನಾಲ್ಕು ದಶಕಗಳ ಕಾಲ ನಿಕಟ ಒಡನಾಟ ಇಟ್ಟುಕೊಂಡಿದ್ದ ಠಾಕ್ರೆ, ತಮ್ಮ ಸ್ನೇಹಿತನ ಬಗ್ಗೆ ಸಾಕಷ್ಟು ಹೇಳಬಹುದು, ಸ್ವಾರಸ್ಯಕರ ವಿಷಯ, ಪ್ರಸಂಗಗಳನ್ನು ವಿವರಿಸಬಹುದು ಎಂದು ನಿರೀಕ್ಷಿಸಿದ್ದೆ. ‘ವಾಜಪೇಯಿ ಅವರು ಸ್ಕೂಲ್‌ನಲ್ಲಿ ಓದುವಾಗ ಬಹಳ ಕ್ರಿಯಾಶೀಲ ವಿದ್ಯಾರ್ಥಿಯಾಗಿದ್ದರು, ಚೂಟಿಯಾಗಿದ್ದರು. ಸ್ಕೂಲ್‌ನ ಪಕ್ಕದಲ್ಲಿ ದೊಡ್ಡ ಕಲ್ಲಿತ್ತು. ಯಾರಿಗೂ ಕಾಣದಂತೆ ಅದರ ಹಿಂಬದಿಗೆ ಹೋಗಿ ಅಡಗಿ ಕುಳಿತಿರುತ್ತಿದ್ದರು’ ಎಂದು ಠಾಕ್ರೆ ಹೇಳಲಾರಂಭಿಸಿದರು.
ನಾನು ಪಟಪಟನೆ ನೋಟ್ಸ್ ಮಾಡಿಕೊಳ್ಳಲಾರಂಭಿಸಿದೆ. ಠಾಕ್ರೆಯವರು ಸುಮ್ಮನಾದರು. ನಾನು ಅವರ ಮುಂದಿನ ಮಾತು ಗಳನ್ನು ನಿರೀಕ್ಷಿಸಲಾರಂಭಿಸಿದೆ. ಕತ್ತು ಎತ್ತಿ ಅವರ ಮುಖವನ್ನು ನೋಡಿದೆ. ಠಾಕ್ರೆಯವರು ಏನೂ ಹೇಳಲಿಲ್ಲ. ಅವರು ಒಂಥರಾ ನಿರ್ಭಾವುಕರಾಗಿದ್ದರು. ಮುಂದೇನೋ ಹೇಳಬಹುದೆಂದು ಕಾದೆ. ಆದರೆ ಅವರು ಮೌನವಾಗಿ ಕುಳಿತಿದ್ದರು. ಪ್ರಾಯಶಃ ಅವರಿಗೆ ಮುಂದಿನ ಪ್ರಸಂಗದ ನೆನಪಿನ ಹರಿವು ಕಟ್ ಆಗಿರಬಹುದೆಂದು, ಹಿಂದೆ ಅವರು ಹೇಳಿದ್ದನ್ನು ನೆನಪಿಸಿದೆ.
ಠಾಕ್ರೆಯವರು ಮುಂದೆ ಏನೂ ಹೇಳಲಿಲ್ಲ. ‘ಸಾರ್, ಮುಂದೇನಾಯಿತು?’ ಎಂದು ಕೇಳಿದೆ. ‘ಅಷ್ಟೇ. ಮುಂದೇನೂ ಇಲ್ಲ. ಅಲ್ಲಿಗೆ ಮುಗಿಯಿತು’ ಎಂದರು. ‘ಹಾಗಾದರೆ ಬೇರೆ ಪ್ರಸಂಗಗಳನ್ನು ಹೇಳಿ’ ಎಂದೆ. ತುಸು ಹೊತ್ತು ಯೋಚಿಸಿ, ‘ಅಷ್ಟೇ, ನನಗೆ ಬೇರೆ ಯಾವ ಪ್ರಸಂಗಗಳಾಗಲಿ, ದೃಷ್ಟಾಂತಗಳಾಗಲಿ ನೆನಪಿಗೆ ಬರುತ್ತಿಲ್ಲ. ನನಗೆ ನೆನಪಿರುವುದೆಂದರೆ ಇದೊಂದೇ ಘಟನೆ’ ಎಂದರು ಠಾಕ್ರೆ.
ನನಗೆ ಮುಂದೇನು ಕೇಳುವುದೆಂದು ಅರ್ಥವಾಗಲಿಲ್ಲ.
ವಾಜಪೇಯಿ ಬಗ್ಗೆ ತಮಗೆ ಗೊತ್ತಿರುವುದು, ನೆನಪಾಗುವುದು ಅದೊಂದೇ ಘಟನೆ ಎಂದು ಅವರ ಜತೆ ಅಷ್ಟು ಸುದೀರ್ಘ ಕಾಲ
ಒಡನಾಡಿದ ವ್ಯಕ್ತಿ ಹೇಳಿದರೆ ನಂಬುವುದಾದರೂ ಹೇಗೆ? ವಾಸ್ತವದಲ್ಲಿ ಅವರಿಗೆ ಗೊತ್ತಿರುವುದೇ ಅಷ್ಟು ಎಂದು ಅವರೇ ಹೇಳಿದಾಗ ನಂಬದಿರುವುದಾದರೂ ಹೇಗೆ? ನಾನು ವಾಜಪೇಯಿ ಅವರು ರಾಜಕೀಯ ಪ್ರವೇಶಿಸಿದ ದಿನಗಳ ಬಗ್ಗೆ ಕೇಳಿದೆ. ಜನಸಂಘದ ಆರಂಭಿಕ ದಿನಗಳ ಬಗ್ಗೆ ಕೇಳಿದೆ. ಠಾಕ್ರೆಯವರು ಚಾವಣಿ ನೋಡುತ್ತಾ ಸುಮ್ಮನೆ ಕುಳಿತಿದ್ದರು. ಮತ್ತೆ ಅವರನ್ನು ಕೆದಕುವ ಪ್ರಯತ್ನ ಮಾಡಿದಾಗಲೂ ಒಂದು ಸಾಲಿನ ಉತ್ತರ.
ಕೊನೆಯದಾಗಿ, ‘ಬೇರೆ ಯಾವುದಾದರೂ ಪ್ರಸಂಗ ನೆನಪಿಗೆ ಬರುವುದೇ?’ ಎಂದು ಕೇಳಿದೆ. ‘ವಾಜಪೇಯಿಯವರು ಶಾಲೆಯಲ್ಲಿನ ಕಲ್ಲಿನ ಹಿಂದೆ ಅಡಗಿ ಕುಳಿತಿರುತ್ತಿದ್ದರು’ ಎಂಬ ಪ್ರಸಂಗವನ್ನು ಮತ್ತೊಮ್ಮೆ ಹೇಳಿದರು. ಕೆಲವು ಜನ, ಗಣ್ಯ ವ್ಯಕ್ತಿಗಳೊಂದಿಗೆ ತಮ್ಮ ಬದುಕನ್ನೇ ಸವೆಸಿರುತ್ತಾರೆ. ಆದರೆ ಆ ವ್ಯಕ್ತಿಗಳ ವ್ಯಕ್ತಿತ್ವ, ವೈಶಿಷ್ಟ್ಯಗಳೇ ಗೊತ್ತಿರುವುದಿಲ್ಲ. ಹೆಂಡತಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯದ ಗಂಡನಂತೆ ದಿನ ಕಳೆದುಬಿಡುತ್ತಾರೆ.
‘ಬಿಜೆಪಿ ನಾಯಕರೊಬ್ಬರು ಏನೋ ಹೇಳ್ತಾರೆ, ಅವರು ಹೇಳೋದನ್ನೆಲ್ಲ ಬರೆಯಲು ಹದಿನೈದು ಪುಟಗಳನ್ನು ಮೀಸಲಿಡಬಹು ದೆಂದು ಮೊದಲೇ ನಿರ್ಧರಿಸಿದ್ದರೆ ಆ ಎಲ್ಲಾ ಪುಟಗಳನ್ನು ಖಾಲಿ ಬಿಡಬೇಕಾಗುತ್ತಿತ್ತು’ ಎಂದು ವಾಜಪೇಯಿ ಕುರಿತು ನಾನು ಬರೆದ
‘ಅಜಾತಶತ್ರು’ ಪುಸ್ತಕದಲ್ಲಿ ಬರೆದಿದ್ದು ಈ ಠಾಕ್ರೆ ಅವರ ಬಗ್ಗೆ !
ಗಡಿಭಾಗದ ಜನರ ತುಮುಲಗಳು
ನೀವು ಕಾಪ್ಕಾ ಕಸ್ಸಾಬೊವಾ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಮೂಲತಃ ಈಕೆ ಬುಲ್ಗೇರಿಯಾದವಳು. ಕಾಲೇಜು
ವಿದ್ಯಾಭ್ಯಾಸ ಮುಗಿಯುವ ಮುನ್ನ ನ್ಯೂಜಿಲೆಂಡ್‌ಗೆ ಹೋಗಿ ನೆಲೆಸಿದಳು. ಅಲ್ಲಿ ಈಕೆ ಮನೆಯಲ್ಲೇ ಫ್ರೆಂಚ್, ರಷ್ಯನ್ ಹಾಗೂ
ಇಂಗ್ಲಿಷ್ ಕಲಿತು, ಈ ಭಾಷೆಗಳ ಸಾಹಿತ್ಯದ ಗೀಳು ಅಂಟಿಸಿಕೊಂಡಳು.
ಕತೆ, ಕವನ ಬರೆಯಲಾರಂಭಿಸಿದಳು. ಆನಂತರ ಈಕೆ ಸ್ಕಾಟ್‌ಲೆಂಡ್‌ಗೆ ಹೋಗಿ ನೆಲೆಸಿದಳು. ಕಳೆದ ಹದಿಮೂರು ವರ್ಷಗಳಿಂದ ಅಲ್ಲಿಯೇ ವಾಸವಿದ್ದಾಳೆ. ‘ಕಾಪ್ಕಾ ಮೇಲೆ ಕಣ್ಣಿಟ್ಟಿರು, ಬಹಳ ಸೊಗಸಾಗಿ ಬರೆಯುತ್ತಾಳೆ’ ಎಂದು ಒಮ್ಮೆ ಯೋಗಿ ದುರ್ಲಭಜೀ ಹೇಳಿದ್ದರು. ಅವರು ಕಾಪ್ಕಾ ಬರೆದ ‘”Twelve Minutes of Love’’ ಕೃತಿ ನೋಡಿ ಹಾಗೆ ಹೇಳಿದ್ದರು. ಕಾಪ್ಕಾ ಮೊದಲ ಕವನ ಸಂಕಲನ ಸಾಹಿತ್ಯವಲಯದಲ್ಲಿ ಸಂಚಲನವನ್ನುಂಟು ಮಾಡಿತ್ತು.
ಇತ್ತೀಚೆಗೆ ಯೋಗಿ ದುರ್ಲಭಜೀ, ಕಾಪ್ಕಾ ಕಸ್ಸಾಬೊವಾ ಬರೆದ “Border: A Journey to the Edge of Europe’ ಪುಸ್ತಕ ಕಳಿಸಿ ಕೊಟ್ಟಿದ್ದರು. ಬಿಡುವಿಲ್ಲದ ತಿರುಗಾಟದ ಮಧ್ಯೆ ಕಣ್ಣಾಡಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಕೈಗೆತ್ತಿಕೊಂಡ ಪುಸ್ತಕ ಬೇರೆ ಇತ್ತು. ಆದರೆ ಯೋಗಿಜೀ ಎರಡು ಸಲ ‘ಪುಸ್ತಕ ಓದಿದಿರಾ? ಏನನಿಸಿತು?’ ಎಂದು ಕೇಳಿದ್ದರು. ಆಗ ಎಲ್ಲ ಕೆಲಸ ಬಿಟ್ಟು ಕಸ್ಸಾಬೊವಾ
ಕೃತಿ ಓದಲಾರಂಭಿಸಿದೆ. ಯೋಗಿಜೀ ಅಷ್ಟು ವರಾತ ಮಾಡಿ ಓದಿಸಿದ್ದೇಕೆಂದು ಆಗ ಅರಿವಾಯಿತು.
ಬುಲ್ಗೇರಿಯಾ ಒಂದು ವಿಶಿಷ್ಟವಾದ ದೇಶ. ಯಾರ ತಂಟೆಗೆ ಹೋಗದಿದ್ದರೂ ಈ ದೇಶದ ಮೇಲೆ ಎಲ್ಲರ ಕಣ್ಣು. ಅದಕ್ಕೆ ಅದರ
ಭೌಗೋಳಿಕತೆಯೇ ಕಾರಣ. ಆಗ್ನೇಯ ಯುರೋಪಿನ ರಾಷ್ಟ್ರವಾಗಿರುವ ಬುಲ್ಗೇರಿಯಾವನ್ನು ರೊಮೇನಿಯಾ, ಸೆರ್ಬಿಯಾ, ಮೆಸಿಡೋನಿಯಾ, ಗ್ರೀಸ್, ಟರ್ಕಿ ಹಾಗೂ ಕಪ್ಪುಸಮುದ್ರಗಳು ಆವರಿಸಿವೆ.
ಮೂರು-ನಾಲ್ಕು ದಶಕಗಳ ಹಿಂದಿನವರೆಗೂ ಬುಲ್ಗೇರಿಯಾವನ್ನು ಪಶ್ಚಿಮದ ಹೆಬ್ಬಾಗಿಲು ಎಂದೇ ಕರೆಯುತ್ತಿದ್ದರು. ಈ ಕಾರಣದಿಂದ ಸೈನಿಕರು, ಗೂಢಚಾರರು, ತಲೆಮರೆಸಿ ಓಡಾಡುವವರು ಈ ದೇಶದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ರೊಮೆನಿಯಾ, ಬುಲ್ಗೇರಿಯಾದ ಮೇಲೆ ಹಿಡಿತ ಸಾಧಿಸಬಹುದೆಂದು ಟರ್ಕಿಯೂ ಮೂಗು ತೂರಿಸುತ್ತಿತ್ತು. ಸೆರ್ಬಿಯಾ ಕಿತಾಪತಿ ಮಾಡಬಹು ದೆಂದು ಮೆಸಿಡೋನಿಯಾ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಗ್ರೀಸ್ ಮೇಲೆ ಟರ್ಕಿಗೆ ಏನೋ ಸಂದೇಹ.
ಇವೆಲ್ಲವುಗಳ ಪರಿಣಾಮ ಬುಲ್ಗೇರಿಯಾದಲ್ಲಿ ಅನವಶ್ಯಕವಾಗಿ ತ್ವೇಷಮಯ ವಾತಾವರಣ. ಹಾಗೆಂದು ಬುಲ್ಗೇರಿಯಾವನ್ನು
ಸುತ್ತುವರಿದ ದೇಶಗಳಿಗೆ ಅದನ್ನು ಹರಿದು ಮುಕ್ಕಬೇಕೆಂಬ ಹಪಾಹಪಿಯಿರಲಿಲ್ಲ. ಆದರೆ ತನ್ನ ಪಕ್ಕದ ದೇಶ ಬುಲ್ಗೇರಿಯಾ ಜತೆ
ಸೇರಿಕೊಂಡು ತನ್ನ ಮೇಲೆ ಆಕ್ರಮಣ ಮಾಡಬಹುದೆಂಬ ಆತಂಕ. ಇದೇ ರೀತಿ ಇತರ ದೇಶಗಳಿಗೂ ಇದೇ ಗುಮಾನಿ. ಪರಸ್ಪರ ಅಪನಂಬಿಕೆ, ಸಂಶಯ, ಸುಖಾಸುಮ್ಮನೆ ಅನುಮಾನದಿಂದ ನೋಡುವ ಪ್ರವೃತ್ತಿಯಿಂದಾಗಿ ಬುಲ್ಗೇರಿಯಾ ಹಾಗೂ ಅದರ ಗಡಿಗೆ
ತಾಕಿಕೊಂಡಿರುವ ಎಲ್ಲ ದೇಶಗಳೂ ತಾನು ಕಳ್ಳ, ಪರರ ನಂಬ ಎಂಬಂತೆ ಬದುಕುತ್ತಿದ್ದವು. ಪರಸ್ಪರ ಅಕ್ಕಪಕ್ಕದ ದೇಶಗಳು ಗಾಢ ಅನುಮಾನ ಅಥವಾ ಸಂದೇಹಗಳಲ್ಲೇ ಜೀವಿಸುವಂತಾದರೆ, ಅದು ಭೀಕರ ಯಮಯಾತನೆ. ಏನೇ ಮಾಡಿದರೂ ಯಾರಿಗೂ ಸಮಾಧಾನವಿಲ್ಲ.
ಪಕ್ಕದ ದೇಶ ಸುಮ್ಮನಿದ್ದರೂ, ಏನೋ ಕಾರಸ್ಥಾನ ಮಾಡುತ್ತಿರಬಹುದೇನೋ ಎಂಬ ದುಗುಡ. ಈ ಮನಸ್ಥಿತಿ ಯಾರಿಗೂ
ಬೇಡ. ಇದೊಂದು ರೀತಿಯಲ್ಲಿ ನಮ್ಮ ನೆರಳನ್ನು ನೋಡಿ, ನಾವೇ ಪದೇಪದೆ ಬೆಚ್ಚಿ ಬೀಳುವುದು. ಈ ದ್ವಂದ್ವ, ತಾಕಲಾಟ, ಸಂದಿಗ್ಧತೆಯನ್ನೆಲ್ಲ ಕಾಪ್ಕಾ ಬಹಳ ಸೊಗಸಾಗಿ ಬಣ್ಣಿಸಿದ್ದಾಳೆ. ಜೀವನದ ಅಧಿಕ ಸಮಯವನ್ನು ತಾಯ್ನಾಡಿನಿಂದ ಹೊರಗೆ ಕಳೆದಿದ್ದರೂ, ಬಾಲ್ಯದ ದಿನಗಳ ತೀವ್ರ ಸಂವೇದನೆ, ನೆನಪು, ಕರುಳಬಳ್ಳಿಯ ನಂಟು, ಮಣ್ಣಿನ ಸೊಗಡಿನ ಸೆಳೆತಗಳೆಲ್ಲ
ಅಪ್ರಾಯೋಜಿತವಾಗಿ, ಅಚಾನಕ್ ಆಗಿ ಈ ಕೃತಿಯನ್ನು ಬರೆಯಿಸಿದೆ. ಗಡಿಭಾಗದ ಜನರ ತುಮುಲಗಳು ಬಹಳ ತೀವ್ರ ಭಾವನಾತರಂಗಗಳನ್ನು ಎಬ್ಬಿಸುವುದನ್ನು ಕಾಪ್ಕಾ ಕೃತಿಯಲ್ಲಿ ಅನುಭವಿಸಬಹುದು.
ಕೋಡಿ ಎಂಬ ಅಮೆರಿಕದ ಹಳ್ಳಿ !
ವಯೋಮಿಂಗ್ ಮತ್ತು ಕೊಲೊರಾಡೋದಲ್ಲಿ ಓಡಾಡುವಾಗ ಎಲ್ಲಿ ನೋಡಿದರೂ ನದಿಗಳು, ಸರೋವರಗಳು. ಅದರಲ್ಲೂ ವಯೋಮಿಂಗ್ ರೈತರ ನಾಡು. ಇಲ್ಲಿ ಅತಿ ಹೆಚ್ಚು ಕೌಬಾಯ್ ಗಳು ಇದ್ದಾರೆ. ನೈಸರ್ಗಿಕವಾಗಿ ಸಂಪದ್ಭರಿತ ರಾಜ್ಯವಿದು. ವಿಶ್ವವಿಖ್ಯಾತ ಯೆಸ್ಟೋನ್ ರಾಷ್ಟ್ರೀಯ ಉದ್ಯಾನವನ ಮತ್ತು ಗ್ರಾಂಡ್ ಟೆಟಾನ್ ಉದ್ಯಾನವನ ಈ ರಾಜ್ಯದ ಇವೆ. ನಮ್ಮ ಮಂಡ್ಯವನ್ನು ನೆನಪಿಸುವ ವಯೋಮಿಂಗ್‌ನ ಗ್ರಾಮೀಣ ಪ್ರದೇಶ ನಿಸರ್ಗದ ಎಲ್ಲಾ ಅದ್ಭುತಗಳ ತವರೂರಿನಂತಿದೆ.
ನಾನು ವಯೋಮಿಂಗ್ ನ ಕೋಡಿ ಎಂಬ ಪುಟ್ಟ ಹಳ್ಳಿಯಲ್ಲಿ ಎರಡು ದಿನ ತಂಗಿದ್ದೆ. ಸುಮಾರು ಹತ್ತು ಸಾವಿರ ಜನಸಂಖ್ಯೆಯಿ ರುವ ಈ ಊರಲ್ಲಿ ರೈತರೇ ಹೆಚ್ಚಾಗಿದ್ದರೂ, ಇದು ಡಾಮಿನೊಸ್ ಪಿಜ್ಜಾ, ಮೆಕ್ ಡೊನಾಲ್ಡ್ ಬರ್ಗರ್, ಥಾಯ್ ರೆಸ್ಟೋರೆಂಟುಗಳು ಇರುವ ಹಳ್ಳಿ. ಅಷ್ಟರಮಟ್ಟಿಗೆ ಇದು ಆಧುನಿಕ ಅಥವಾ ಮುಂದುವರಿದ ಹಳ್ಳಿ. ಆದರೆ ಈ ಊರಲ್ಲಿ ಒಂದು ದೊಡ್ಡ ಪೋಸ್ಟ್ ಆಫೀಸು ಇದೆ. ಈ ಇಂಟರ್ನೆಟ್ ಮತ್ತು ಇ ಮೇಲ್ ಕಾಲದಲ್ಲೂ ಈ ಊರಿನ ಜನ ಪತ್ರ ವ್ಯವಹಾರ ಮಾಡುತ್ತಾರೆ. ಬರೆದ ಪತ್ರವನ್ನು ಡಬ್ಬಕ್ಕೆ ಹಾಕಲು ಪೋಸ್ಟ್ ಆಫೀಸಿಗೆ ಬರುತ್ತಾರೆ.
ಕಳೆದ ಹದಿನೈದು ವರ್ಷಗಳಿಂದ ಈ ಊರಿನ ಜನಸಂಖ್ಯೆ ಎಷ್ಟಿದೆಯೋ ಅಷ್ಟೇ ಇದೆ. ‘ನಮ್ಮೂರಿನಲ್ಲಿ ಪ್ರೇಮಿಗಳಿಗೆ ಕೊರತೆ ಇಲ್ಲ. ಆದರೆ ನಾನಂತೂ ನಮ್ಮೂರಿನಲ್ಲಿ ಬಸುರಿ ಹೆಂಗಸರನ್ನೇ ನೋಡಿಲ್ಲ’ ಎಂದು ಸ್ಥಳೀಯ ಹೋಟೆಲ್ ಮ್ಯಾನೇಜರ್ ಹೇಳಿದ್ದು ಬದಲಾಗುತ್ತಿರುವ ಅಮೆರಿಕದ ಹಳ್ಳಿಗಳಿಗೆ ಬರೆದ ಮುನ್ನುಡಿಯಂತಿದೆ.
ಇದನ್ನು ನೋಡಿದರೆ ಈ ಊರು ಇನ್ನೂ ಇಪ್ಪತ್ತನೇ ಶತಮಾನದಲ್ಲಿಯೇ ಇದೆಯಾ ಎಂಬ ಸಂದೇಹ ಬರುತ್ತದೆ. ಅಂದರೆ ಹೊಸ
ಜಗತ್ತಿಗೆ ಕಾಲಿಡುತ್ತಲೇ, ಹಳೆ ಸಂಪ್ರದಾಯ ಕಾಪಾಡಿಕೊಳ್ಳುವ ಜರೂರತ್ತು ಜಾಗೃತವಾಗಿರುವ ಊರಿನಂತೆ ಗೋಚರಿಸುವ ಕೋಡಿ, ಪರಂಪರೆ ಮತ್ತು ಆದರ್ಶಗಳನ್ನು ಮರೆತ ಹಳ್ಳಿಗಳಿಗೆ ಎಚ್ಚರಿಕೆಯಂತಿದೆ.
“ಇನಾದರೂ ಒಂದು ಮಠ ಇದ್ದಿದ್ದರೆ ಈ ಊರನ್ನು ‘ಕೋಡಿಮಠ’ ಎಂದು ಕರೆಯಬಹುದಿತ್ತು” ಎಂದು ನನ್ನ ಅಮೆರಿಕನ್ ಸ್ನೇಹಿತನಿಗೆ ಹೇಳೋಣವೆಂದರೆ ಆತನಿಗೇನು ಗೊತ್ತು ಬದನೇಕಾಯಿ? ನನ್ನ ಮನಸ್ಸಿನಲ್ಲಿಯೇ ನಕ್ಕು ಸುಮ್ಮನಾದೆ.