ತುಮಕೂರು: ಜಿಲ್ಲೆಯ 330 ಗ್ರಾಮ ಪಂಚಾಯತಿಗಳಲ್ಲಿ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥ ಕೇಂದ್ರ ಸರಕಾರದ ನಿರ್ದೇಶನದಂತೆ ಸ್ವಚ್ಛತೆಯೇ ಸೇವೆ ವಿಶೇಷ ಆಂದೋಲನ ಕಾರ್ಯಕ್ರಮದಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 4000ಕ್ಕೂ ಹೆಚ್ಚು ವಿವಿಧ ಸ್ವಚ್ಛತಾ ಚಟುವಟಿಕೆಗಳನ್ನು ಹಮ್ಮಿ ಕೊಂಡು ಜನರಲ್ಲಿ ಅರಿವು ಮೂಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದರು.
ಸ್ವಚ್ಛತೆಯೇ ದೈವತ್ವ ಎಂಬ ಗಾಂಧೀಜಿಯವರ ಪರಿಕಲ್ಪನೆಯನ್ನು ಸಾಕಾರಗೊಳಿಸಿ ‘ಸ್ವಚ್ಛ ಭಾರತ’ವನ್ನಾಗಿ ನಿರ್ಮಿಸಬೇಕೆಂಬ ಮಹದಾಶೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ ವಿಶೇಷ ಆಂದೋಲನ ಕಾರ್ಯಕ್ರಮ ಯಶಸ್ವಿಯಾಗಿದೆ.
4237 ಸ್ವಚ್ಛತಾ ಚಟುವಟಿಕೆಗಳು
ಜಿಲ್ಲೆಯ 330 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 227 ಕಲ್ಯಾಣಿ, ಬಾವಿ, 624 ದೇವಾಲಯ, 193 ಬಸ್ ನಿಲ್ದಾಣ, 786 ಶಾಲೆ ಮತ್ತು ಅಂಗನವಾಡಿ, 274 ಮಾರುಕಟ್ಟೆ, 1803 ಗ್ರಾಮ ಪಂಚಾಯತಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಮುಖ್ಯ ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲದೆ 367 ಸ್ವಚ್ಛತೆ ಕುರಿತು ಶಾಲಾ ಮಕ್ಕಳಿಂದ ಜಾಗೃತಿ ಜಾಥಾ, 1123 ಸಸಿ ನೆಡುವುದು ಸೇರಿದಂತೆ 4237 ಸ್ವಚ್ಛತಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಆಯಾ ಗ್ರಾಮ ಪಂಚಾಯಿತಿಗಳ ಚುನಾಯಿತ ಜನಪ್ರತಿನಿಧಿಗಳ ನೇತೃತ್ವದಲ್ಲಿ, ಸ್ಥಳೀಯ ಮುಖಂಡರುಗಳು, ಆಶಾ-ಅಂಗನವಾಡಿ ಕಾರ್ಯಕರ್ತರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಯುವಕ ಮಂಡಳಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತಾ ಚಟಿವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪಾಲಿಕೆಯಿಂದ 400 ಸ್ವಚ್ಛತಾ ಚಟುವಟಿಕೆಗಳು
ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸೆ.16 ರಿಂದ ಅ.2ರವರೆಗೆ ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡುಗಳಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆ, ಶಾಲಾ ವಿದ್ಯಾರ್ಥಿಗಳು, ಅಧಿಕಾರಿ, ಸಿಬ್ಬಂದಿಗಳು, ಪೌರಕಾರ್ಮಿಕರು, ಸ್ವ-ಸಹಾಯ ಸಂಘಗಳನ್ನು ತೊಡಗಿಸಿಕೊಂಡು 400 ವಿವಿಧ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಪಾಲಿಕೆ ಆಯುಕ್ತೆ ಬಿ.ವಿ ಅಶ್ವಿಜಾ ತಿಳಿಸಿದ್ದಾರೆ.
ಸ್ವಚ್ಛತೆ ಪ್ರಜ್ಞೆ ಮೂಡಿಸುವ ಸಲುವಾಗಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಗೋಡೆ ಬರಹ ಮತ್ತು ರಸ್ತೆ ಸ್ವಚ್ಛತೆ ಮಾಡುವು ದರೊಂದಿಗೆ ಸ್ವಚ್ಛ ತುಮಕೂರು ಸಂದೇಶವನ್ನು ಸಾರುವ ಮಾನವ ಸರಪಳಿಯನ್ನು ನಿರ್ಮಿಸಲಾಗಿತ್ತು.
ಸ್ವಚ್ಛತೆಯೇ ಸೇವೆ ಆಂದೋಲನದಡಿ ನಗರದ ನಾಗರಿಕರಿಗೆ “ಕಸದ ತೊಟ್ಟಿ ಬಳಸಿ-ನಗರದ ಸ್ವಚ್ಛತೆ ಉಳಿಸಿ” ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಎಸ್‌ಐಟಿ ಕಾಲೇಜಿನಲ್ಲಿ ಮಹಿಳೆಯ ನಡಿಗೆ ಸ್ವಚ್ಛತೆಯ ಕಡೆಗೆ ಎಂಬ ವಿಶೇಷ ಅರಿವು ಕಾರ್ಯಕ್ರಮ; ಪಾಲಿಕೆ ಕಸದ ವಾಹನ ಚಾಲಕರು, ಹೆಲ್ಪರ್, ಲೋಡರ್ಸ್ ಗಳಿಗೆ ಮೂಲದಲ್ಲಿಯೇ ಕಸ ವಿಂಗಡಣಾ ತರಬೇತಿ; ಪಾಲಿಕೆ ಅಧಿಕಾರಿ, ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು ಹಾಗೂ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಇ-ವೇಸ್ಟ್ ಅಂಡ್ ಬ್ಲಾಕ್ ಸ್ಪಾಟ್ ಎಲಿಮಿನೇಷನ್ ತರಬೇತಿ; ಗಾಂಧಿನಗರ ಮತ್ತು ಕ್ಯಾತ್ಸಂದ್ರ ರೈಲು ನಿಲ್ದಾಣಗಳ ಸ್ವಚ್ಛತೆ; ನಗರದ ಟೌನ್ ಹಾಲ್ ವೃತ್ತ ಹಾಗೂ ಎಸ್-ಮಾಲ್‌ನಲ್ಲಿ ಜನಸಮೂಹಕ್ಕೆ ಸ್ವಚ್ಛತಾ ಅರಿವು, ದಿಬ್ಬೂರಿನಲ್ಲಿ ಪೌರಕಾರ್ಮಿಕರಿಗೆ ಸ್ವಚ್ಛತಾ ಅರಿವು ಹಾಗು ಆರೋಗ್ಯ ಶಿಬಿರ, ತ್ಯಾಜ್ಯದಿಂದ ಕಲಾಕೃತಿ ರಚನೆ, ಸೈಕ್ಲೋಥಾನ್; ಹೋಟೆಲ್ ಅಸೋಸಿಯೇಷನ್‌ಗಳಿಗೆ ಸ್ವಚ್ಛತೆ ಕಾಪಾಡುವ ಅರಿವು, ಮೂಡಿಸಲು ಉಪ್ಪಾರಹಳ್ಳಿ ಮತ್ತು ಗಾರೆನರಸಯ್ಯನ ಕಟ್ಟೆ ಕೆರೆಗಳ ಸ್ವಚ್ಛತೆ; ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕುರಿತು ವಿವಿಧ ಸ್ಪರ್ಧೆ; ಪಾಲಿಕೆ ಕಚೇರಿ ಆವರಣ ಹಾಗೂ ಎಲ್ಲ ಶಾಖೆಗಳ ಸ್ವಚ್ಛತೆ ಸೇರಿದಂತೆ ವಿವಿಧ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ.
ಗಾಂಧಿ ಜಯಂತಿ ವಿಶೇಷ
ಗಾಂಧಿ ಜಯಂತಿ ಪ್ರಯುಕ್ತ ಅ.2ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಗಾಂಧಿಭವನದ ಮುಂದೆ ಬಾಪೂಜಿಯವರ ಪ್ರತಿಮೆ ಅನಾವರಣ ಸೇರಿ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು ಘನ ತ್ಯಾಜ್ಯ ವಸ್ತುಗಳಿಂದ ವಿನ್ಯಾಸ ಮಾಡಿದ ಉಡುಗೆ ತೊಟ್ಟು ಪ್ರದರ್ಶಿಸಿದ ರ‍್ಯಾಂಪ್ ವಾಕ್ ವಿಶೇಷವಾಗಿತ್ತು.