ಗಂಗಾವತಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೇ ಬಾಬರಿ ಮಸೀದಿ ಕಟ್ಟುತ್ತೇವೆ ಎಂದಿದ್ದ ದಿಗ್ವಿಜಯ ಸಿಂಗ್, ಈಗ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಮೊದಲು ಮಂದಿರ ಲೋಕಾರ್ಪಣೆಗೆ ಹೋಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ ಈಗ ತಡವಾಗಿ ಹೋಗುವೆ ಎನ್ನುತ್ತಿ ದ್ದಾರೆ. ಇದನ್ನ ನೋಡಿದರೆ ಇಡೀ ಕಾಂಗ್ರೆಸ್ ಪಕ್ಷ ಕನ್ಪ್ಯೂಸ್ ಆಗಿದೆ ಅನ್ನಿಸುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ವ್ಯಂಗ್ಯವಾಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಅಯೋಧ್ಯೆ ವಿಚಾರ ಕೋರ್ಟ್ ನಲ್ಲಿ ಇದ್ದಾಗ, ರಾಮ ಕಾಲ್ಪನಿಕ ಎಂದು ಕಾಂಗ್ರೆಸ್ ಹೇಳಿತ್ತು. ರಾಮ ಇಲ್ಲೇ ಹುಟ್ಟಿದ್ದು ಎಂಬುದಕ್ಕೆ ಗ್ಯಾರಂಟಿ ಇದೆಯಾ ಎಂದು ಪ್ರಶ್ನೆ ಮಾಡಿತ್ತು. ಕಾಂಗ್ರೆಸ್ ವರಿಷ್ಠ ದಿಗ್ವಿಜಯ ಸಿಂಗ್ ಮತ್ತೇ ಬಾಬರಿ ಮಸೀದಿ ನಿರ್ಮಾಣ ಮಾಡುತ್ತೇವೆ ಎಂದಿದ್ದರು. ಸಿದ್ದರಾಮಯ್ಯ ಮೊದಲು ನನಗೆ ಆಹ್ವಾನ ಬಂದಿಲ್ಲ. ಬಂದರೂ ನಾನು ಹೋಗುವುದಿಲ್ಲ ಎಂದಿದ್ದರು. ಈಗ ಹೋಗುತ್ತೇನೆ. ತಡವಾಗಿ ಹೋಗುತ್ತೇನೆ ಎನ್ನುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕನ್ ಪ್ಯೂಸ್ ಆಗಿದೆ. ಪಕ್ಷದ ಲೀಡರ್ ರಾಹುಲ್ ಗಾಂಧಿ ತರ ಅವರ ಪಾರ್ಟಿಯೂ ಕನ್ ಪ್ಯೂಷನ್ ನಲ್ಲಿ ಇದೆ ಎಂದು ವ್ಯಂಗ್ಯ ಮಾಡಿದರು.
ಸದ್ಭಾವ, ಸದ್ವಿಚಾರದೊಂದಿಗೆ ನಾವು ರಾಮ ಮಂದಿರ ಲೋಕಾರ್ಪಣೆಗೆ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅದರಂತೆ ಕಾಂಗ್ರೆಸ್ ವರಿಷ್ಠರಿಗೂ ಆಹ್ವಾನಿಸಲಾಗಿದೆ. ಇವರು ಬರದಿದ್ದರೂ ಆಗುತ್ತಿತ್ತು. ಆದರೆ, ಬರುವುದಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದೆ. ಮುಸ್ಲಿಂ ತುಷ್ಟಿಕರಣಕ್ಕೆ ಕಾಂಗ್ರೆಸ್ ಹೀಗೆ ಮಾಡಿದೆ. ಈಗ ರಾಮ ಮಂದಿರ ಲೋಕಾರ್ಪಣೆಯಲ್ಲಿ ರಾಜಕೀಕರಣ ಆಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ತನ್ನಷ್ಟಕ್ಕೆ ತಾನು ಸುಮ್ಮನಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದರು.
ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಏಕ ವಚನದಲ್ಲಿ ಯಾರನ್ನು ಟೀಕೆ ಮಾಡಬಾರದು ಎಂದು ಹೆಗಡೆ ಅವರಿಗೆ ನಾನು ಸಲಹೆ ನೀಡುತ್ತೇನೆ. ಆದರೆ, ಈ ಏಕವಚನ ಪ್ರಯೋಗವನ್ನು ರಾಜ್ಯಕ್ಕೆ ಪರಿಚಯಿಸಿದ್ದೇ ಸಿದ್ದರಾಮಯ್ಯ. ಕಾಂಗ್ರೆಸ್ ನವರ ಇಂಥ ಸಾಕಷ್ಟು ಟೀಕೆಗಳನ್ನು ಮಾಡಿದ್ದಾರೆ. ಆದರೆ, ನಾವು ಮಾಡಿದಾಗ ಕೇಸ್ ಹಾಕುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಗೆ ನೈತಿಕವಾಗಿ ಬಿಜೆಪಿ ಎದುರಿಸುವ ಶಕ್ತಿ ಇಲ್ಲ. ಅದಕ್ಕಾಗಿ ಪೊಲೀಸರ ಮೂಲಕ ಬೆಸರಿಸುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದರು. ಹೆಸರಿಗೆ ಮಾತ್ರ ಮಲ್ಲಿಕಾರ್ಜುನ ಖರ್ಗೆ ಇಂಡಿಯ ಮೈತ್ರಿ ಮುಖ್ಯಸ್ಥ. ಕಾಂಗ್ರೆಸ್ ಅಧ್ಯಕ್ಷ. ಆದರೆ, ಗಾಂಧಿ ಕುಟುಂಬ ಇಲ್ಲದೇ ಕಾಂಗ್ರೆಸ್ ಕಚೇರಿಯ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಾಡುವುದಿಲ್ಲ. ನಾನೇ ಲೀಡರ್ ಅಂತಾ ಖರ್ಗೆ ಒಮ್ಮೆ ಹೇಳಲಿ ನೋಡೋಣ ಎಂದು ಟೀಕಿಸಿದರು.
*
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ನಾಚಿಕೆಗೇಡಿನ ಸಂಗತಿ. ಸರಕಾರ, ಶಾಸಕರೇ ಮುಂದೆ ನಿಂತು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಕಾಂಗ್ರೆಸ್ ನ ತುಷ್ಠೀ ಕರಣ ನೀತಿಯಿಂದ ಹೀಗಾಗಿದೆ. ಮಾಜಿ ಸಿಎಂ ಬೊಮ್ಮಾಯಿ ಹೇಳಿದಂತೆ ಎಸ್ಐಟಿ ರಚನೆ ಮಾಡಬೇಕು.
– ಪ್ರಹ್ಲಾದ ಜೋಷಿ, ಕೇಂದ್ರ ಸಚಿವ