Saturday, 23rd November 2024

ಕೋರ್ಸ್‌ ಮೇಟ್‌ ಎಂಬ ಬಂಧು

ಜೈಜವಾನ್‌ – ಸೇನಾ ದಿನಚರಿಯ ಪುಡಗಳಿಂದ

ಮೇಜರ್‌ ಡಾ.ಕುಶ್ವಂತ್‌ ಕೋಳಿಬೈಲು

ಭಾರತೀಯ ಸೇನೆಯ ತರಬೇತಿ ಬಹಳ ವಿಭಿನ್ನ. ಅಧಿಕಾರಿ ವರ್ಗಕ್ಕೆ ಇರಬಹುದು ಅಥವಾ ಸೈನಿಕರಿಗೆ ಇರಬಹುದು, ಅದು
ಇಂದಿಗೂ ತನ್ನ ಪರಂಪರೆಯನ್ನು ಮರೆತಿಲ್ಲ.

ತರಬೇತಿ ಹಂತದಲ್ಲಿ ಕಲಿಸುವ ಪಾಠಗಳಿಗೆ ಅದರದೇ ಆದ ಒಳ ಅರ್ಥ ವಿದೆ. ತರಬೇತಿಯ ಸಮಯದಲ್ಲಿ ಬಹಳಷ್ಟು ಹುಡುಗರಿಗೆ
ಅಲ್ಲಿ ನಡೆಯುವ ಅನೇಕ ವಿಷಯಗಳು ಅವೈಜ್ಞಾನಿಕ ಎಂದು ಅನಿಸಬಹುದು. ಆದರೆ ಸೇನೆಯ ತರಬೇತಿ ಒಂದರ್ಥದಲ್ಲಿ
ಟೈಮ್ ಟೆಸ್ಟೆಡ್. ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದ ವಿಭಿನ್ನ ಸಂಸ್ಕೃತಿ, ಭಾಷೆ ಮತ್ತು ವಿಚಾರಗಳನ್ನು ಹೊಂದಿರುವ ಯುವಕರನ್ನು ಒಂದೇ ಮನಸ್ಥಿತಿಯಲ್ಲಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ಮಾಡಲು ಅನುಸರಿಸುವ ವಿಧಾನಗಳು
ನಿಜಕ್ಕೂ ವಿಸ್ಮಯಕಾರಿ.

ನಮ್ಮ ಜತೆ ಒಂದೇ ಕೋರ್ಸಿನ ಅಡಿಯಲ್ಲಿ ತರಬೇತಿ ಪಡೆದವವರನ್ನು (ಜತೆಗೆ ರುಬ್ಬಿಿಸಿಕೊಂಡವರನ್ನು) ನಾವು ‘ಕೋರ್ಸ್ ಮೇಟ್’ ಎಂದು ಕರೆಯುತ್ತೇವೆ. ಡ್ರಿಲ್ ಮತ್ತು ದೈಹಿಕ ಟ್ರೈನಿಂಗ್ ನೀಡಲು ನೇಮಕವಾಗಿರುವ ಸೈನಿಕರನ್ನು ನಾವು ಪ್ರೀತಿಯಿಂದ ‘ಉಸ್ತಾದ’ ಎಂದು ಕರೆಯುತ್ತೇವೆ. ಅನೇಕ ಬಾರಿ ನಮಗೆ ತರಗತಿಯೊಳಗೆ ಓದುವ ಪಾಠಗಳಿಗಿಂದ ಈ ಉಸ್ತಾದ್‌ಗಳು ದೈಹಿಕ ತರಬೇತಿಯ ಸಮಯದಲ್ಲಿ ತಿಳಿಸುವ ಸೂಕ್ಷ್ಮ ವಿಚಾರಗಳು ಗಾಢವಾದ ಪರಿಣಾಮವನ್ನು ಬೀರುತ್ತವೆ. ನಮ್ಮ ತರಬೇತಿಯ ಮೊದಲ ದಿನ ನಮ್ಮ ಗುಂಪನ್ನು ಉದ್ದೇಶಿಸಿದ ಉಸ್ತಾದ್ ಒಂದು ಕಿಲೋಮೀಟರ್ ದೂರದಲ್ಲಿರುವ ಮರವನ್ನು ತೋರಿಸುತ್ತಾ ಓಡುತ್ತಾ ಹೋಗಿ ಆ ಮರವನ್ನು ಮುಟ್ಟಿ ಬನ್ನಿ ಎಂದು ಆದೇಶಿಸಿದರು.

ಗುಂಪಿನಲ್ಲಿದ್ದ ಐವತ್ತು ಮಂದಿ ಓಡುತ್ತಾ ಹೋಗಿ ಆ ಮರವನ್ನು ಮುಟ್ಟಿ ಉಸ್ತಾದ್ ಮುಂದೆ ಹಾಜರಾದೆವು. ನಮ್ಮ ದೈಹಿಕ
ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲವರು ಬೇಗ ಗುರಿ ಮುಟ್ಟಿದರೆ ಕೆಲವರು ಹಿಂದೆ ಬಿದ್ದರು. ನಾವು ಹಿಂದಿರುಗಿದ ನಂತರವೂ ಉಸ್ತಾದ್ ನಮಗೆ ಅದೇ ಕೆಲಸವನ್ನು ಮತ್ತೆ ಮತ್ತೆ ಆದೇಶಿಸುತ್ತಿದ್ದರು. ನಾಲ್ಕೈದು ಬಾರಿ ಓಡಿ ಬಸವಳಿದ ನಂತರವೂ ನಮ್ಮ ತಪ್ಪು ಯಾವುದೆಂದು ಅರ್ಥವಾಗಲಿಲ್ಲ.

ಪ್ರತಿ ಬಾರಿ ಟಾಸ್ಕ್‌ ಪುನರಾವರ್ತನೆಯಾದಾಗಲೂ ಕೆಲವು ಹುಡುಗರು ಇನ್ನಷ್ಟು ಉತ್ಸಾಹದಿಂದ ಇನ್ನೂ ವೇಗವಾಗಿ ಗುರಿ
ತಲುಪಲು ಓಡುತ್ತಿದ್ದರು. ಉಳಿದವರು ಹಿಂದುಳಿಯುತ್ತಿದ್ದರು. ಹೀಗೆ ಒಂದು ಗಂಟೆಯಿಂದ ಓಡುತ್ತಾ ಕಂಗಾಲಾಗಿದ್ದ ನಮ್ಮನ್ನು
ಕರೆದ ಉಸ್ತಾದ್ ‘ಎಲ್ಲಿಯ ತನಕ ಇಡೀ ತಂಡ ಒಟ್ಟಿಗೆ ಹಿಂದಿರುಗುವುದಿಲ್ಲವೋ ಅಲ್ಲಿಯ ತನಕ ನಿಮ್ಮನ್ನು ಓಡಿಸುತ್ತಲೇ ಇರುತ್ತೇನೆ’ ಎಂದು ಗದರಿದರು.

ತರಬೇತಿಯ ಮೊದಲ ದಿನವೇ ಉಸ್ತಾದ್ ನಮಗೆ ಅಮೂಲ್ಯವಾದ ಉಪದೇಶವೊಂದನ್ನು ಈ ವಿಭಿನ್ನ ಮಾದರಿಯಲ್ಲಿ ತಿಳಿ ಹೇಳಿದರು. ‘ನಿಮ್ಮ ವೈಯಕ್ತಿಕ ಶಕ್ತಿ ಸಾಮರ್ಥ್ಯ ಎಷ್ಟೇ ಇರಲಿ, ಒಂದು ತಂಡವಾಗಿ ನೀವು ಗೆದ್ದಾಗಲೇ ಆ ಗೆಲುವಿಗೆ ಮಾನ್ಯತೆ. ವಿಭಿನ್ನ ಶಕ್ತಿ ಸಾಮರ್ಥ್ಯ, ವಿಚಾರಗಳಿರುವ ಜನರು ನಿಮ್ಮ ರೆಜಿಮೆಂಟಿನಲ್ಲಿರುತ್ತಾರೆ. ಯಾವುದೇ ಕಾರ್ಯಾಚರಣೆಯಲ್ಲೂ ಒಬ್ಬರನ್ನೊಬ್ಬರು ಉತ್ತೇಜಿಸುತ್ತಾ, ಯಾರನ್ನೂ ಹಿಂದೆ ಬೀಳಲು ಬಿಡದೆ ಇಡೀ ತಂಡ ವನ್ನು ಸುರಕ್ಷಿತವಾಗಿ ದಡಸೇರಿಸು
ವುದೇ ನಿಜವಾದ ನಾಯಕತ್ವ.

ಪಾಕಿಸ್ತಾನ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಸ್ವಂತ ಸೈನಿಕರ ಶವವನ್ನು ಪಡೆಯಲು ನಿರಾಕರಿಸಿ ವಿಶ್ವ ಮಟ್ಟದಲ್ಲಿ ತನ್ನ ಯೋಗ್ಯತೆಯನ್ನು ಹರಾಜು ಹಾಕಿಕೊಂಡಿತು. ಆದರೆ ನಮ್ಮ ದೇಶದ ಅನೇಕ ಪುರಾತನ ರೆಜಿಮೆಂಟಿನ ಪಡಸಾಲೆಗಳಲ್ಲಿ ಒಂದು
ವಾಕ್ಯ ಯಾವತ್ತೂ ಪುನರಾವರ್ತನೆಯಾಗುತ್ತಿರುತ್ತದೆ. ಡೆಡ್ ಆರ್ ಅಲೈವ್.. ವಿ ಆಲ್ ವಿಲ್ ಕಮ್ ಬ್ಯಾಕ್. ಯಾರನ್ನೂ
ಹಿಂದೆ ಬಿಟ್ಟು ಬರುವ ಪ್ರಶ್ನೆಗೆ ನಮ್ಮಲ್ಲಿ ಆಸ್ಪದವಿಲ್ಲ.’ ತಂಡದ ಪ್ರತಿಯೊಬ್ಬ ಸದಸ್ಯನ ಮೇಲೆ ಕಾಳಜಿ ಬೆಳೆಸಲು ತರಬೇತಿಯಲ್ಲಿ ವಿಭಿನ್ನವಾಗಿ ತಿಳಿಸುತ್ತಾರೆ.

ಎಲ್ಲ ಕೆಲಸಗಳನ್ನು ನಮ್ಮ ಗುಂಪಿನ ಜತೆಯಲ್ಲೇ ಪೂರ್ಣಗೊಳಿಸಬೇಕು. ತಂಡದ ಒಬ್ಬ ತಪ್ಪು ಮಾಡಿದರೆ ಇಡೀ ತಂಡ ಶಿಕ್ಷೆಯನ್ನು ಅನುಭವಿಸಬೇಕು. ತಂಡದ ಒಬ್ಬ ಹುಡುಗ ತನಗೆ ಕೊಟ್ಟ ಟಾಸ್ಕಿನಲ್ಲಿ ಯಶಸ್ಸನ್ನು ಗಳಿಸದಿದ್ದರೆ, ಇಡೀ ತಂಡ ಪುನಃ ಅದೇ ಕೆಲಸವನ್ನು ಮಾಡಬೇಕು. ಇಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠತೆಯ ಬಗೆಗೆ ತುತ್ತೂರಿ ಊದುವವರಿಗೆ ಮಣೆಹಾಕುವವರಿಲ್ಲ.
ಒಬ್ಬ ಪಂಜಾಬಿ, ಒಬ್ಬ ಕನ್ನಡಿಗ ಮತ್ತೊಬ್ಬ ಬಂಗಾಲಿಯನ್ನು ಒಂದೇ ವರ್ಷದಲ್ಲಿ ಒಡಹುಟ್ಟಿದವರಂತೆ ಮಾಡುವ ವಿಧಾನ
ನಮ್ಮ ಸೇನೆಗೆ ಗೊತ್ತು.

ಒಟ್ಟಿಗೇ ಹಸಿವು, ನೋವು, ಬಾಯಾರಿಕೆ ಮತ್ತುಶಿಕ್ಷೆಗಳನ್ನು ಅನುಭವಿಸುವಾಗ ಬೆಸೆಯುವ ಬಂಧನ ರಕ್ತ ಸಂಬಂಧದಷ್ಟೇ ಗಾಢವಾದದ್ದು. ಗುಂಪಿನಲ್ಲಿ ಒಬ್ಬ ತಪ್ಪು ಮಾಡಿದರೂ ಎಲ್ಲರೂ ಒಟ್ಟಿಗೆ ನಿಂತು ಬೈಗುಳಗಳ ಸುರಿಮಳೆಯನ್ನು ಸುರಿಸಿಕೊಳ್ಳು ತ್ತೇವೆ. ತಂಡದ ಒಬ್ಬನಿಂದ ಎಡವಟ್ಟಾದರೂ ಅದು ಯಾರಿಂದ ಆಯಿತೆಂಬ ವಿಷಯವನ್ನು ಹೊರಗೆ ಬರದಂತೆ ನೋಡಿ ಕೊಳ್ಳುವ ಮನೋಭಾವವನ್ನು ಈ ಮಾದರಿಯ ತರಬೇತಿ ಮೂಡಿಸುತ್ತದೆ. ತರಬೇತಿಯ ಸಮಯದಲ್ಲಿ ನೋವು ನಲಿವುಳನ್ನು, ದುಃಖ ದುಮ್ಮಾಾನಗಳನ್ನು ಹಂಚಿ ಕೊಳ್ಳುವ ಕೋರ್ಸ್ ಮೇಟ್ ಜತೆಗಿನ ಸಂಬಂಧದ ಪ್ರಾಮುಖ್ಯತೆ ನಮಗೆ ಜೀವನದುದ್ದಕ್ಕೂ ಅರಿವಾಗುತ್ತಲೇ ಇರುತ್ತದೆ.

‘ಕೋರ್ಸ್ ಮೇಟ್‌ಗಿಂತ ದೊಡ್ಡ ಬಂಧುವಿಲ್ಲ’ ಎಂಬ ಮಾತನ್ನು ಎಲ್ಲಾ ಸೈನಿಕರು ಒಪ್ಪುತ್ತಾರೆ. ಹೊಸದಾಗಿ ಪೋಸ್ಟಿಂಗ್ ಹೋಗುವ ಊರಿನಲ್ಲಿ ನಮ್ಮ ಜತೆ ತರಬೇತಿ ಪಡೆದ ಕೋರ್ಸ್ ಮೇಟ್ ಇರುವನೆಂಬ ವಿಷಯ ತಿಳಿದರೆ ನಮ್ಮ ಎಲ್ಲಾ ಚಿಂತೆಗಳು ದೂರವಾದಂತೆ. ಇಡೀ ಪ್ರಪಂಚವೇ ನಮ್ಮ ವಿರುದ್ಧವಿದ್ದರೂ, ಕೋರ್ಸ್ ಮೇಟ್ ನಮ್ಮ ಜೊತೆಗೆ ನಿಲ್ಲುತ್ತಾನೆ. ಅದು ನಾವು
ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವ ವಿಷಯವೇ ಇರಲಿ ಅಥವಾ ಸಂತೋಷ, ಸಂಭ್ರಮಾಚರಣೆಗಳೇ ಇರಲಿ.

ಸೇನೆಯಲ್ಲಿ ಕೋರ್ಸ್ ಮೇಟ್ ನಮಗೆ ಕೇವಲ ಸಂಗಾತಿಷ್ಟೇ ಅಲ್ಲ, ಫ್ರೆೆಂಡ್, ಫೀಲಾಸಫರ್ ಮತ್ತು ಗೈಡ್.