ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಅರ್ಧಶತಕ ದಾಟಿದ್ದು, ಬುಧವಾರ ದೇಶದಲ್ಲೇ ಅತ್ಯಧಿಕ ತಾಪಮಾನ ದಾಖಲಾಗಿದೆ.
ಮಂಗಳವಾರ ದೆಹಲಿಯ ಹವಾಮಾನ ಕಚೇರಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ದಾಟಿದೆ. ದೆಹಲಿಯ ಮುಂಗೇಶ್‌ಪುರದ ಹವಾಮಾನ ಕೇಂದ್ರವು ಮಧ್ಯಾಹ್ನ 2.30 ಕ್ಕೆ 52.3 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಭಾರತದ ಇದುವರೆಗಿನ ಅತ್ಯಂತ ಬಿಸಿಯಾದ ದಿನ ಎಂದು ದಾಖಲಾಗಿದೆ.
ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ನಗರದ ಜನ ಹೆಚ್ಚಾಗಿ ಹವಾನಿಯಂತ್ರಣಗಳ ಮೊರೆ ಹೋದ ಕಾರಣ ದೆಹಲಿಯಲ್ಲಿ ವಿದ್ಯುತ್ ಬೇಡಿಕೆ ಸಾರ್ವ ಕಾಲಿಕವಾಗಿ ಹೆಚ್ಚಾಗಿತ್ತು. ನಗರದಲ್ಲಿ 8,302 ಮೆಗಾವ್ಯಾಟ್ (MW) ಅನ್ನು ವಿದ್ಯುತ್ ಬೇಡಿಕೆ ದಾಖಲಿಸಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಕೂಡ ತಾಪಮಾನ ಅರ್ಧಶತಕ ದಾಟಿದೆ. ಫಲೋಡಿಯಲ್ಲಿ 51 ಡಿಗ್ರಿ ಸೆಲ್ಸಿಯಸ್ ಮತ್ತು 50.8 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜನ ತತ್ತರಿಸುತ್ತಿದ್ದಾರೆ. ಹರಿಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ದಕ್ಷಿಣ ರಾಜಸ್ಥಾನದ ಬಾರ್ಮರ್, ಜೋಧ್‌ಪುರ್, ಉದಯಪುರ, ಸಿರೋಹಿ ಮತ್ತು ಜಲೋರ್ ಜಿಲ್ಲೆಗಳಲ್ಲಿ ಇಂದು 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತ ದಾಖಲಾಗಿದೆ, ಇದು ವಾಯುವ್ಯ ಭಾರತದ ಮೇಲೆ ಶಾಖದ ಅಲೆಗಳ ಪ್ರಭಾವ ಕಡಿಮೆಯಾಗುವ ಸೂಚನೆ ಕೊಟ್ಟಿದೆ.