ಸಕಾಲಿಕ
ಚಂದ್ರಶೇಖರ ಬೇರಿಕೆ
ಅರೆ! ಇದೇನಿದು ಪ್ರಜಾಪ್ರಭುತ್ವ ಹರಾಜಿಗಿದೆ? ಸಾಮಾನ್ಯವಾಗಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಇವರುಗಳಿಗೆ ನೀಡಲಾದ ಉಡುಗೊರೆಗಳು, ಸ್ಮರಣಿಕೆಗಳನ್ನು ಹರಾಜಿಗೆ ಹಾಕಲಾಗುತ್ತದೆ. ಐಷಾರಾಮಿ ಟೆಲ್‌ಗಳನ್ನು, ಪ್ರಾಚೀನ ವಸ್ತು ಸಂಗ್ರಹಣೆಗಳನ್ನು, ಬೆಲೆ ಬಾಳುವ ವಸ್ತುಗಳನ್ನು ಹರಾಜಿಗಿಡುವುದನ್ನು ಕೇಳಿದ್ದೇವೆ.
ಕ್ರೀಡಾಪಟುಗಳ ಹರಾಜು, ಕ್ರೀಡಾಪಟುಗಳು ತಮ್ಮ ಕ್ರೀಡಾ ಪರಿಕರಗಳನ್ನು, ಜೆರ್ಸಿ, ಪದಕಗಳನ್ನು ಹಾಗೆಯೇ ವಾಹನಗಳನ್ನು ಹರಾಜು ಮಾಡುವುದನ್ನೂ ನೋಡಿದ್ದೇವೆ. ಇಂತಹ ಹರಾಜುಗೊಳ್ಳುವ ಪಟ್ಟಿಗೆ ಈಗ ಹೊಸ ಸೇರ್ಪಡೆ ಪ್ರಜಾಪ್ರಭುತ್ವದಲ್ಲಿ ಸದಸ್ಯತ್ವದ ಹರಾಜು. ಬಳ್ಳಾರಿ ಜಿಲ್ಲೆಯ ಕುರಗೋಡು ತಾಲ್ಲೂಕಿನ ಸಿಂಧಿಗೇರಿ ಗ್ರಾಮ ಪಂಚಾಯತಿಯ ಎಲ್ಲಾ 13 ಸ್ಥಾನಗಳ
ನ್ನು 51 ಲಕ್ಷಕ್ಕೆ ಹರಾಜು ಹಾಕಲಾಗಿದ್ದು, ಹರಾಜಿನಿಂದ ಸಂಗ್ರಹವಾದ ಹಣದಿಂದ ಮಾರಮ್ಮ ದೇವಿ ದೇವಸ್ಥಾನದ ಜೀರ್ಣೋ ದ್ಧಾರ ಮಾಡುವುದು ಗ್ರಾಮದವರ ತೀರ್ಮಾನ.
ಮತ್ತೊಬ್ಬ ಸರಕಾರಿ ಅಧಿಕಾರಿ ತನ್ನ ಪತ್ನಿಯನ್ನು ಪಂಚಾಯತ್ ಸದಸ್ಯರನ್ನಾಗಿ ಮಾಡಿದರೆ ದೇಗುಲ ಅಭಿವೃದ್ಧಿಗೆ 25 ಲಕ್ಷ ಕೊಡುವ ವಾಗ್ದಾನ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿದರೆಕೆರೆ ಗ್ರಾಮ ಪಂಚಾಯತ್ ಸ್ಥಾನಗಳು 18 ಲಕ್ಷಕ್ಕೆ ಹರಾಜು. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಪಡುವಗೆರೆ ಗ್ರಾಮ ಪಂಚಾಯತಿಯ ಒಂದು ಸ್ಥಾನವನ್ನು 1 ಕೋಟಿಗೆ ಹರಾಜು. ಬೆಂಗಳೂರಿನ ಉದ್ಯಮಿಯೊಬ್ಬರು ಈ ಸದಸ್ಯತ್ವವನ್ನು ಖರೀದಿ ಮಾಡಿದ್ದು, ಈ ಹಣವನ್ನು ಆಂಜನೇಯ ಸ್ವಾಮಿ
ದೇವಸ್ಥಾನ ಮತ್ತು ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳುವುದು. ಕೋಲಾರ ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ 3 ಸ್ಥಾನಗಳನ್ನು 20.60 ಲಕ್ಷಕ್ಕೆ ಹರಾಜು.
ಹಾವೇರಿ ಜಿಲ್ಲೆಯ ಬುರಡಿಕಟ್ಟಿ ಗ್ರಾಮದ ಪಂಚಾಯತ್‌ಗೆ ಈ ಹಿಂದೆ ಸದಸ್ಯರಾಗಿ ಆಯ್ಕೆಯಾದವರೇ ಮತ್ತೆ ಆಯ್ಕೆಯಾಗಲು ಬಯಸಿ ದೇವಸ್ಥಾನದ ಅಭಿವೃದ್ಧಿಗೆ ಹಣ ನೀಡುವ ವಾಗ್ದಾನ ಮಾಡಿ ಗ್ರಾಮದ ಹಿರಿಯರ ಮನವೊಲಿಸುವ ಪ್ರಯತ್ನ!. ಗ್ರಾಮದ ಮುಖಂಡರುಗಳು ಗ್ರಾಮಸ್ಥರೊಂದಿಗೆ ಸೇರಿಕೊಂಡು ರಾತ್ರೋ ರಾತ್ರಿ ಪಂಚಾಯತ್ ಸದಸ್ಯತ್ವವನ್ನು ಹರಾಜು ಹಾಕಿರುವ ಬಗ್ಗೆ ಮಾಧ್ಯಮ ವರದಿಗಳು ನಮ್ಮನ್ನು ಆತಂಕಕ್ಕೀಡು ಮಾಡಿದೆ. ಹರಾಜಿನ ಮೂಲಕ ಗ್ರಾಮ ಪಂಚಾಯತ್‌ಗೆ ಅವಿರೋಧ ಆಯ್ಕೆ ಯಿಂದ ಚುನಾವಣಾ ವೆಚ್ಚಕ್ಕೆ ಬ್ರೇಕ್ ಹಾಗೂ ದ್ವೇಷ ಮುಕ್ತ ಚುನಾವಣೆ ನಡೆಯಲಿದೆಯಂತೆ.
ಹರಾಜಿನ ಹಣವನ್ನು ದೇಗುಲ ನಿರ್ಮಾಣಕ್ಕೆ, ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳುವುದಂತೆ. ಸದಸ್ಯತ್ವ ಖರೀದಿ ನಡೆದಿರುವ ಗ್ರಾಮಗಳಲ್ಲಿ ಹರಾಜಾಗಿರುವ ಸ್ಥಾನಕ್ಕೆ ಗ್ರಾಮದ ಮುಖಂಡರ ಮಾತು ಮೀರಿ ಇತರರು ಸ್ಪರ್ಧಿಸಿದರೆ ಅಂತಹವರಿಗೆ ಗ್ರಾಮದಿಂದ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಲಾಗಿದೆಯಂತೆ!.
ಚುನಾವಣೆ ಮತ್ತು ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗಾಗಿ ಸರಕಾರಗಳು ಯಥೇಚ್ಛ ಹಣ ಖರ್ಚು ಮಾಡುತ್ತಿದ್ದರೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೀದಿಯಲ್ಲಿ ಮಾರಾಟ ಮಾಡುತ್ತಿರುವುದು ವಿಷಾದ
ನೀಯ. ಅಷ್ಟಕ್ಕೂ ಸಂವಿಧಾನದ ಮೂಲ ಆಶಯಳಿಗೆ ವಿರುದ್ಧವಾಗಿ ತೀರ್ಮಾನ ತೆಗೆದುಕೊಳ್ಳಲು ಗ್ರಾಮದ ಮುಖಂಡರುಗಳಿಗೆ ಅಧಿಕಾರ ಕೊಟ್ಟವರು ಯಾರು?. ದೇವಸ್ಥಾನಗಳು ಮತ್ತು ಗ್ರಾಮಸ್ಥರ ಮಧ್ಯೆ ದೇವಸ್ಥಾನದ ಅಭಿವೃದ್ಧಿಯ ವಿಚಾರವನ್ನು
ಇಟ್ಟುಕೊಂಡು ಜನರನ್ನು ಶ್ರದ್ಧೆ ಮತ್ತು ಭಾವನಾತ್ಮಕ ವಿಚಾರದಲ್ಲಿ ಒಟ್ಟುಗೂಡಿಸಿ ಚುನಾವಣೆಯೇ ನಡೆಯದಂತೆ ಮಾಡಲು ಸಂಬಂಧಪಟ್ಟ ಗ್ರಾಮದ ಮುಖಂಡರೇನು ದೇವರು ಕಳುಹಿಸಿಕೊಟ್ಟ ದೇವದೂತರೇ? ಇಂತಹ ಮನಸ್ಥಿತಿಯಿಂದ ಮಾಡಿದ ದೇವಸ್ಥಾನಗಳ ಅಭಿವೃದ್ಧಿಯನ್ನು ದೇವರು ಒಪ್ಪುವರೇ?.
ವಾಮಮಾರ್ಗ ಮತ್ತು ಅಧರ್ಮದ ನಡೆಯನ್ನು ಅನುಸರಿಸಿ ಕಟ್ಟಿಸಿದ ಗುಡಿ ಗೋಪುರಗಳನ್ನು ದೇವರು ಸ್ವೀಕರಿಸುವರೇ? ದೇವಸ್ಥಾನಗಳ ಅಭಿವೃದ್ಧಿಗಾಗಿಯೇ ಆಗಲಿ, ಪಂಚಾಯತ್ ಅಭಿವೃದ್ಧಿಗಾಗಿಯೇ ಆಗಲಿ ಹಣಕಾಸಿನ ನೆರವು ನೀಡಲು ಬಯಸು ವವರು ಪಂಚಾಯತ್ ಸದಸ್ಯತ್ವವನ್ನು ಖರೀದಿ ಮಾಡಿಯೇ ನೆರವು ನೀಡಲು ಮುಂದಾಗುವುದರ ಮರ್ಮವೇನು? ಪ್ರತಿಫಲಾ ಪೇಕ್ಷೆ ಇಲ್ಲದೇ ಸ್ವಯಂ ಪ್ರೇರಣೆಯಿಂದ ನೆರವು ನೀಡಿ ದೊಡ್ಡ ವ್ಯಕ್ತಿಯಾಗಬಹುದಲ್ಲವೇ? ಇಂತಹ ಹಣಕಾಸಿನ ನೆರವು ನೀಡಲು ಚುನಾವಣಾ ಸಂದರ್ಭಕ್ಕಾಗಿ ಕಾಯುವ ಇರಾದೆಯಾದರೂ ಏನು? ಪ್ರತಿಫಲಾಪೇಕ್ಷೆಯಿಂದ ನೀಡಿದ ದಾನ, ಧರ್ಮದಿಂದ ಜೀವನ ಸಾರ್ಥಕವಾಗಲು ಅಥವಾ ಯಾರಿಗೂ ಒಲಿತಾಗಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ದೇವರ ಗುಡಿ, ಭಕ್ತಿಭಾವಕ್ಕೆ ಸಂಬಂಧಿಸಿ ದಂತೆ ಬಸವಣ್ಣನ ವಚನಗಳು ಬಹಳ ಪ್ರಸ್ತುತವೆನಿಸುತ್ತದೆ.
ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯಾ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ! ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! ಚುನಾವಣಾ ಪ್ರಚಾರ ಮಾಡಿ ಮತದಾರರಿಗೆ ಹಣ, ಹೆಂಡ ಹಂಚಿ ಮತ ಭಿಕ್ಷೆ ಕೇಳುವ ಬದಲು ಗ್ರಾಮದ ಮುಖಂಡರು ಸೂಚಿಸಿದ ಕಾರ್ಯಕ್ಕೆ ಒಂದಷ್ಟು ಮೊತ್ತದ ಹಣದ ಖಾತ್ರಿ ನೀಡಿದರೆ ದೈಹಿಕ ಮತ್ತು ಮಾನಸಿಕ ಶ್ರಮವಿಲ್ಲದೇ ಸದಸ್ಯತ್ವ ಖರೀದಿ ಮಾಡಿ ಸುಲಭವಾಗಿ ಜನಪ್ರತಿನಿಧಿ ಎನಿಸಿಕೊಳ್ಳಬಹುದು. ಚುನಾವಣೆ ಯಾಕೆ, ಮತದಾನ ಯಾಕೆ, ಪಂಚಾಯ್ತಿ ಯಾಕೆ? ಇದು ಓಟಿಗಾಗಿ ನೋಟು ಅಲ್ಲ, ನೋಟಿಗಾಗಿ ಸೀಟು. ಇದು ಚುನಾವಣಾ ನೀತಿ ನಿಯಮದ ಸ್ಪಷ್ಟ ಉಲ್ಲಂಘನೆ ಮತ್ತು ಅಪರಾಧ.
ಈ ವಿದ್ಯಾಮಾನದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಚುನಾವಣಾ ಆಯೋಗ ಇಂತಹ ಹರಾಜು ಆಗಿರುವ ಸ್ಥಾನಗಳನ್ನು ರದ್ದು ಮಾಡಿ ಚುನಾವಣೆ ನಡೆಸಲು ನಿರ್ಧರಿಸಿದೆಯಂತೆ. ಆದರೆ ಇಂತಹ ಪ್ರಕರಣದ ವಿರುದ್ಧ ಸಂಬಂಧಪಟ್ಟ ಗ್ರಾಮದ ಯಾರೊ ಬ್ಬರೂ ದೂರು ನೀಡಲು ಮುಂದಾಗದೇ ಇರುವುದು ಚುನಾವಣಾ ಆಯೋಗವು ಕ್ರಮ ಕೈಗೊಳ್ಳಲು ತೊಡಕಾಗಿದೆ. ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇಂತಹ ಸಂವಿಧಾನ ಬಾಹಿರ ಕೃತ್ಯವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿ ಇದರ ವಿರುದ್ಧ ಸಕಾಲದಲ್ಲಿ ಕಾರ್ಯಪ್ರವೃತ್ತರಾಗಿ ಇಂತಹ ಉಲ್ಲಂಘನೆಗೆ ಅಂಕುಶ ಹಾಕಿ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಂತಿಕೆ ಯನ್ನು ಉಳಿಸಿಕೊಳ್ಳಬೇಕಾಗಿದೆ.
ಹರಾಜು ಪ್ರಕರಣಗಳಲ್ಲಿ ಅಭ್ಯರ್ಥಿಗಳನ್ನು ಅನರ್ಹಗೊಳಿಸುವುದು ಅಷ್ಟು ಸುಲಭವಲ್ಲ. ಅದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು. ಕೇಸು ದಾಖಲಾದರೆ, ಅಭ್ಯರ್ಥಿ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ
ಆಯುಕ್ತ ಬಿ.ಬಸವರಾಜು ಹೇಳಿರುತ್ತಾರೆ. ಆದ್ದರಿಂದ ಗ್ರಾಮ ಪಂಚಾಯತ್ ಮುಖಂಡರ ಮತ್ತು ಸದಸ್ಯತ್ವ ಖರೀದಿ ಮಾಡಿದವರ ವಿರುದ್ಧ ಸಂಬಂಧಪಟ್ಟ ಗ್ರಾಮದವರು ಯಾರಾದರೂ ದೂರು ನೀಡಿದಲ್ಲಿ ಅಥವಾ ಕಾನೂನು ಕ್ರಮಕ್ಕೆ ಮುಂದಾದರೆ ಅಂತಹ ವರಿಗೆ ಸೂಕ್ತ ರಕ್ಷಣೆ ನೀಡುವಂತಾಗಬೇಕು.
ಸದ್ಯ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಆದರೆ ಇದೊಂದು ಅರ್ಬುದ ಕಾಯಿಲೆಯಂತೆ ಇತರೆಡೆಯಲ್ಲಿ ಪಸರಿಸುವ ಅಪಾಯವಿದ್ದು, ಇದಕ್ಕೆ ಮೂಲದಲ್ಲಿಯೇ ಸೂಕ್ತ ಚಿಕಿತ್ಸೆ ಕೊಟ್ಟು ಗುಣಪಡಿಬೇಕಾದ ಅಗತ್ಯವಿದೆ. ಹರಾಜಿನಲ್ಲಿ ಪಾಲ್ಗೊಳ್ಳುವ ವ್ಯಕ್ತಿಗೆ ಇರಬೇಕಾದ ಏಕೈಕ ಆರ್ಹತೆ, ಮಾನದಂಡವೆಂದರೆ ಅವನ ಸಿರಿವಂತಿಕೆ. ಯಾವುದೇ ವ್ಯಕ್ತಿ ಹರಾಜು ಪ್ರಕ್ರಿಯೆಯಲ್ಲಿ ಸದಸ್ಯತ್ವವನ್ನು ಖರೀದಿಸಲು ಹೂಡಿದ ಬಂಡವಾಳವನ್ನು ಹಿಂತೆಗೆದುಕೊಳ್ಳದೇ ಇರುತ್ತಾನೆಯೇ? ಇದು
ದಬ್ಬಾಳಿಕೆಗೆ ಕಾರಣವಾಗುವುದಿಲ್ಲವೇ? ಅಂತಹ ಪಂಚಾಯಿತಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆಯದೇ ಇರಲು ಸಾಧ್ಯವೇ? ಹರಾಜಿಗೆ ಹೂಡಿದ ಬಂಡವಾಳವನ್ನು ಹಿಂಪಡೆಯಲು ಉಳಿದಿರುವ ಮಾರ್ಗವೆಂದರೆ ಅದು ಭ್ರಷ್ಟಾಚಾರ.
ಇಂತಹವರಿಂದ ಗ್ರಾಮ ಪಂಚಾಯತ್‌ಗೆ ಬಿಡುಗಡೆಯಾಗುವ ಅನುದಾನವು ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ
ಬಳಕೆಯಾಗುವುದು ಅನುಮಾನ. ಇಂತಹ ಸನ್ನಿಶದಲ್ಲಿ ಜನರ ಹಿತಾಸಕ್ತಿ ಕಾಪಾಡುವುದಕ್ಕಿMತ ವೈಯಕ್ತಿಕ ಅಭ್ಯುದಯವನ್ನೇ ಆದ್ಯತೆಯಾಗಿ ಮಾಡಿ ಹರಾಜಿನ ಮೂಲಕ ಸದಸ್ಯತ್ವ ಪಡೆಯಲು ಹೂಡಿದ ಬಂಡವಾಳವನ್ನು ಹಿಂಪಡೆಯುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನವನ್ನು ಮಾಡುವ ಸಂಭವವಿದ್ದು, ಗಾಂಧೀಜೀಯವರ ಗ್ರಾಮ ಸ್ವರಾಜ್ಯದ ಕಲ್ಪನೆ ಅಪ್ರಸ್ತುತವಾಗಲಿದೆ.
12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ಎಂಬ ಜನಸಭೆ ಪರಿಕಲ್ಪನೆಯಲ್ಲಿ ಯಾರಿಗೂ ಆರ್ಥಿಕ ಸ್ಥಿತಿ ಗತಿಯ ಮೇಲೆ ಪ್ರಾತಿನಿಧ್ಯವಿರುತ್ತಿರಲಿಲ್ಲ. ನಾಡಿನ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಬಡವ-ಬಲ್ಲಿದ ಎಂಬ
ಬೇಧಭಾವವಿಲ್ಲದೆ ಎಲ್ಲರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗಿತ್ತು. ಆದರೆ ಈಗಿನ ವ್ಯವಸ್ಥೆಯಲ್ಲಿ ಹಣವುಳ್ಳರು ಸದಸ್ಯತ್ವನ್ನು ಖರೀದಿ ಮಾಡುವ ಸಂಪ್ರದಾಯ ಬೆಳೆದರೆ ಅಥವಾ ಪೋಷಿಸಲ್ಪಟ್ಟರೆ ಅಭಿವೃದ್ಧಿ ಚಿಂತನೆಯ ಮತ್ತು ಗ್ರಾಮಾಭಿವೃದ್ಧಿಯ ಬದ್ಧತೆ
ಹೊಂದಿರುವ ಆದರೆ ಬಡತನದಲ್ಲಿ ಜೀವನ ನಡೆಸುವ ವ್ಯಕ್ತಿಗಳು ಮೂಲೆ ಗುಂಪಾಗಿ ಅಧಿಕಾರ ವಂಚಿತರಾಗುವ ಅಪಾಯವಿದೆ.
ಹಾಗಾದರೆ ಬಡವರಾಗಿ ಹುಟ್ಟಿದ್ದು ಶಾಪವೆಂದೇ ಹೇಳಬೇಕು. ಗ್ರಾಮ ಪಂಚಾಯತ್ ಗ್ರಾಮದ ಸಂಸತ್ತು ಎಂದು ಕರೆಯ ಲ್ಪಡುತ್ತದೆ. ಅಭಿವೃದ್ಧಿಯನ್ನು ಸಾಧಿಸಲು ಮತ್ತು ಪಂಚಾಯತ್ ಮಟ್ಟದಲ್ಲಿ ಜನರ ನೇರ ಸಹಭಾಗಿತ್ವಕ್ಕಾಗಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂಬ ಒತ್ತಾಯ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಇಂತಹ ವಿದ್ಯಮಾನಗಳು
ಕಂಡು ಬರುತ್ತಿರುವುದು ದುರದೃಷ್ಟಕರ. ಮಾತ್ರವಲ್ಲ ವ್ಯವಸ್ಥೆಯ ಸುಧಾರಣೆಯಾಗುವ ಬದಲು ಅಸ್ತಿತ್ವದಲ್ಲಿರುವ ವ್ಯವಸ್ಥೆ ಯನ್ನೇ ಬುಡಮೇಲುಗೊಳಿಸಿದಂತಾಗುತ್ತದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಜವಾಬ್ದಾರಿ ಯುತವಾಗಿ ವರ್ತಿಸಬೇಕಾದ ಜನತೆ ಪರಿಜ್ಞಾನವಿಲ್ಲದವರಂತೆ ಅಸಡ್ಡೆ ತೋರಿದರೆ ದೇಶ ಮುಂದುವರೆಯುವುದಾರೂ ಹೇಗೆ?
ಜನಪ್ರತಿನಿಧಿಗಳನ್ನು ಸದಸ್ಯತ್ವದ ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯವನ್ನು ಒಪ್ಪಿಕೊಳ್ಳುವು ದೆಂದರೆ ಜನತೆಯು ಸಂವಿಧಾನಬದ್ಧ ಮತದಾನದ ಹಕ್ಕಿನ ಮೂಲಕ ತಮಗೆ ಸೂಕ್ತವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕೊಳ್ಳುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ತಳಹದಿಯಲ್ಲಿ ಸಂವಿಧಾನ ರಚಿಸಿದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಾವು ಮಾಡುವ ಘೋರ ಅವಮಾನ.
ಬೇರೆ ಬೇರೆ ಸಂದರ್ಭಗಳಲ್ಲಿ ಅವರು ಅಧಿಕಾರದಲ್ಲಿದ್ದಾಗ ಇವರು, ಇವರು ಅಧಿಕಾರದಲ್ಲಿದ್ದಾಗ ಅವರು ಪ್ರಜಾಪ್ರಭುತ್ವ ಉಳಿಸಿ, ದೇಶ ರಕ್ಷಿಸಿ ಎಂದು ಅರಚಾಡುವ ಗೋಸುಂಬೆಗಳು ಈ ವಿಚಾರದಲ್ಲಿ ಯಾಕೆ ಸುಮ್ಮನಾಗಿದ್ದಾರೆ? ಇದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ?. ಇದರ ವಿರುದ್ಧ ಯಾಕೆ ಪ್ರತಿಭಟನೆಗಳು ನಡೆಯುತ್ತಿಲ್ಲ? ಇದನ್ನು ಖಂಡಿಸುವ ಗೋಜಿಗೆ ಯಾರೂ ಮುಂದಾ ಗುತ್ತಿಲ್ಲ ಯಾಕೆ? ಚುನಾವಣೆಯನ್ನು ತಡೆದು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾದ ಸಂಬಂಧ ಪಟ್ಟ ಗ್ರಾಮದ ಮುಖಂಡರಿಗೆ ಮತ್ತು ಗ್ರಾಮಸ್ಥರಿಗೆ ಧಿಕ್ಕಾರವಿರಲಿ.