Friday, 20th September 2024

ದೈವ ಭೂತದ ಮರಗಳು ಮತ್ತು ಮೆಥುಸಲಾಹ್‌ ವೃಕ್ಷದ ಶಾಪ

ಶಿಶಿರಕಾಲ

ಶಿಶಿರ್‌ ಹೆಗಡೆ

ನಮ್ಮ ಮನೆಯಲ್ಲಿ ಕೊಯ್ಲು ಮಾಡಿದ ಅಡಿಕೆಗೆ ಬಿಸಿಲು ತಾಗಿ ಒಣಗಿದ ಕೂಡಲೇ ಶಿವಿ ಮತ್ತು ತಂಡಕ್ಕೆ ಅಡಿಕೆ ಸುಲಿಯಲು ಬುಲಾವ್ ಕಳಿಸಲಾಗುತ್ತಿತ್ತು. ಮೆಟ್ಟುಗತ್ತಿಯ ಮೇಲೆ ಕೂತು ಅಡಿಕೆಯನ್ನು ಸುಲಿದು ಸಿಪ್ಪೆಯಿಂದ ಬೇರ್ಪಡಿಸುವ ಇಡೀ ದಿನದ ಕಾಯಕ ಶಿವಿ ಮತ್ತು ಇನ್ನೂ ಐದಾರು ಹೆಂಗಸರ ತಂಡದ್ದು. ಹೀಗೆ ಕುಳಿತೇ ಕೆಲಸ ಮಾಡುತ್ತಿದ್ದ ಅವರಿಗೆ ಟೈಂಪಾಸ್ ಎಂದರೆ ಅದು ಇದು ಸುದ್ದಿ ಹೇಳುವುದು. ಊರಿನ ಆಗುಹೋಗುಗಳೆಲ್ಲ ರೆಕ್ಕೆ ಪುಕ್ಕ ಕಟ್ಟಿಕೊಂಡು ಇವರ ಬಾಯಿಯಲ್ಲಿ ಕಥೆಗಳಾಗಿ ವಿನಿಮಯವಾಗುತ್ತಿದ್ದವು. ನಾವು ಮಕ್ಕಳೇನಾದರೂ ಏನು ಸುದ್ದಿ ಎಂದು ಕೇಳೋಣವೆಂದು ಎದುರಿಗೆ ಹೋಗಿ ನಿಂತರೆ ಅವರ ಮಾತು ಅಲ್ಲಿಗೇ ನಾಚಿ ನಿಂತು ಬಿಡುತ್ತಿತ್ತು. ಅವರ ಸುದ್ದಿಗಳನ್ನು ಮರೆಯಲ್ಲಿ ನಿಂತು ಕೇಳುವುದೆಂದರೆ ಚಂದಾಮಾಮದ ವಿಕ್ರಮ ಮತ್ತು ಬೇತಾಳ ಕಥೆಗಳಿಗಿಂತ ರೋಚಕ ಅನುಭವ ನಮಗೆ.

ಊರವರ ಸುದ್ದಿಗಳೆಲ್ಲ ಮುಗಿದುಹೋದ ನಂತರ ಅವರ ಸುದ್ದಿಗಳು ದೆವ್ವ ಭೂತಗಳ ಕಥೆಗಳಿಗೆ ಹೊರಳುತ್ತಿತ್ತು. ತಮ್ಮ ಕಾಕತಾ ಳೀಯ ಅನುಭವಗಳಿಗೆ ನೂರೆಂಟು ಬಾಲಗಳನ್ನು ಹಚ್ಚಿ ಅಥವಾ ಯಾರದ್ದೋ ಅನುಭವ ತಮ್ಮದೇ ಎಂದೆನ್ನುತ್ತ ಹೇಳುವ ಕೆಲವು ಭೂತದ ಅನುಭವಗಳು ಮರೆಯಲ್ಲಿ ಕೇಳುತ್ತಿದ್ದ ಮಕ್ಕಳಾದ ನಮಗೆ ಕಥಾ ಪುಸ್ತಕದ ಆಚೆ ಈ ದೆವ್ವ ಭೂತಗಳು ನಿಜವಾಗಿ ಯೂ ಇದೆ ಎಂದೆನಿಸುತ್ತಿತ್ತು.

ಆ ದಿನ ಶಿವಿ ಅವರ ಕೇರಿಯಿಂದ ನಮ್ಮ ಮನೆಗೆ ಬರುವಾಗ, ನಿತ್ಯವೂ ನಾನು ಶಾಲೆಗೆ ಹೋಗುವಾಗ ಸಿಗುತ್ತಿದ್ದ, ಮೂರು ರಸ್ತೆ
ಸೇರುವ ಜಾಗದ ಸ್ವಲ್ಪ ಮೇಲಕ್ಕೆ ಗುಡ್ಡದಲ್ಲಿ ನಿಂತಿದ್ದ ಹೆಮ್ಮರದ ಕಥೆ. ಶಿವಿ ಆ ದಿನ ಮಧ್ಯಾಹ್ನ ಕೆಲಸಕ್ಕೆ ತಡವಾಗಿದ್ದರಿಂದಲೋ
ಏನೋ ಗಡಿಬಿಡಿಯಲ್ಲಿ ಬರುತ್ತಿರುವಾಗ ಈ ಮೂರು ರಸ್ತೆ ಸೇರುವ ಜಾಗ – ಮೂರುಕೈ, ಅಲ್ಲಿ ಆಕೆಗೆ ಕಣ್ಣು ಕತ್ತಲೆ ಬಂದು ಬಿದ್ದ ಸುದ್ದಿಯದು. ಆಕೆ ಹಾಗೆ ಬೀಳುವಾಗ ಅಲ್ಲಿಯೇ ಮೇಲಿನ ಗುಡ್ಡದಲ್ಲಿದ್ದ ಮರದಲ್ಲಿ ಒಂದು ಆಕೃತಿ ಕಂಡಿತಂತೆ.

ಇದನ್ನೆಲ್ಲಾ ಕೇಳುತ್ತಿದ್ದ ನನಗೆ ಕುತೂಹಲದ ಜೊತೆ ಹೆದರಿಕೆಯೂ ಆಯಿತು. ಆದರೂ ಆಸಕ್ತಿ. ಶಿವಿಗೆ ದುಂಬಾಲು ಬಿದ್ದು ಪೂರ್ಣ
ಕಥೆಯನ್ನು ಇನ್ನೊಮ್ಮೆ ಹೇಳಲು ಹೇಳಿದೆ. ಆಕೆ ಇನ್ನಷ್ಟು ರಸವತ್ತಾಗಿ ಈ ಘಟನೆಯನ್ನು ವಿವರಿಸಿದಳು. ನಂತರ ಇನ್ನು ಕೆಲ ಕೆಲಸದವರಲ್ಲಿ ಆ ಮರದಲ್ಲಿ ಭೂತವಿದೆಯಂತೆ ಹೌದಾ ಎಂದು ಕೇಳಿದಾಗ ಅವರವರು ಕೇಳಿದ ಕಥೆಗಳನ್ನೆಲ್ಲ ರಂಗ್ ಬಿರಂಗಿ ಯಾಗಿ ಹೇಳಿದರು.

ನಮ್ಮ ಊರಿನಲ್ಲಿ ಈ ರೀತಿ ದೈವ ಭೂತವಿವೆ ಎಂದು ನಂಬುವ ಹತ್ತಾರು ಮರಗಳಿವೆ, ಎಲ್ಲ ಊರುಗಳಂತೆ. ಒಮ್ಮೆ ಆ
ಮರವನ್ನು ಹತ್ತಿರದಿಂದ ಕಂಡುಬರಬೇಕು ಎನ್ನುವ ಆಸೆ. ಆದರೆ ಒಬ್ಬನೇ ಹೋಗಿ ನೋಡಿ ಬರಲು ಪೂರ್ತಿ ಧೈರ್ಯ ಸಾಲುತ್ತಿರ ಲಿಲ್ಲ. ಈ ಸಮಯದಲ್ಲಿ ನನ್ನ ಜತೆ ಭೂತಾನ್ವೇಷಣೆಗೆ ಬರಲು ಒಪ್ಪಿದವನು ಜಂಗ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದ ನಮ್ಮ
ಮತ್ತು ಅಕ್ಕಪಕ್ಕದ ಹಲವು ತೋಟಗಳಿಗೆ ಎಲ್ಲಿಲ್ಲದ ಮಂಗನ ಕಾಟ. ಮಂಗಗಳು ತೋಟದ ತೆಂಗಿನ ಮರಗಳಲ್ಲಿ ಒಂದೇ ಒಂದು ಕಾಯಿ ಉಳಿಸುತ್ತಿರಲಿಲ್ಲ. ಹಾಗಾಗಿ ಮಂಗ ಬರದಂತೆ ಕಾಯಲೆಂದೇ ನಮ್ಮ ಕೇರಿಯ ಹಿರಿಯರೆಲ್ಲ ಜಂಗನನ್ನು ನೇಮಿಸಿದ್ದರು.

ಬೆನ್ನಿಗೆ ಕೋವಿ ನೇತು ಹಾಕಿಕೊಂಡು ಕಾಡು ಮತ್ತು ತೋಟಗಳಲ್ಲಿ ಓಡಾಡುತ್ತಿದ್ದ ಜಂಗ ಧೈರ್ಯವಂತ ಹಾಗೂ ಇಂಥದ್ದೆಲ್ಲ ನಂಬುವ ಗಿರಾಕಿ ಅಲ್ಲ. ಈ ಭೂತದ ಕಥೆ ಅವನಲ್ಲಿ ಕೇಳಿದಾಗ ಅದೆಲ್ಲ ಸುಳ್ಳು, ನಾನೇ ಎಷ್ಟೋ ಸರತಿ ಆ ಮರದ ಹತ್ತಿರ ಓಡಾಡಿದ್ದೇನೆ, ಬೇಕಾದರೆ ನನ್ನನ್ನೂ ಕರೆದುಕೊಂಡು ಹೋಗುವುದಾಗಿ ಹೇಳಿದ. ಅದಕ್ಕಾಗಿ ಒಂದು ದಿನ ನಿಗದಿ ಕೊಡ ಆಯಿತು. ಈ ಮರದ ಹತ್ತಿರ ಹೋಗಬೇಕೆಂದರೆ ರಸ್ತೆ ಬದಿಯ ಒಂದು ಚಿಕ್ಕ ಗುಡ್ಡವನ್ನೇರಬೇಕು.

ಜಂಗನನ್ನು ಹಿಂಬಾಲಿಸಿ ಗುಡ್ಡವನ್ನು ಹತ್ತಲು ಶುರುಮಾಡಿದೆ. ನಮ್ಮ ಕಡೆ, ವಿಪರೀತ ಮಳೆಯಿಂದಾಗಿ ಈ ರೀತಿಯ ಗುಡ್ಡದಲ್ಲಿನ ಮೇಲಿನ ಮಣ್ಣು ಸವೆದು ಕೇವಲ ಚಿಕ್ಕ ಚಿಕ್ಕ ಕಪ್ಪು ಕಲ್ಲು ಉಳಿದುಕೊಂಡಿರುತ್ತವೆ. ಇವುಗಳ ಮೇಲೆ ಕಾಲಿಟ್ಟರೆ ತೀವ್ರ ಜಾರುವಿಕೆ.
ಈ ಗುಡ್ಡಗಳಲ್ಲಿ ಕಾಲುದಾರಿಯಿಲ್ಲ ಎಂದರೆ ಏರುವುದು ಸುಲಭವಲ್ಲ. ಯಾರೂ ಹೋಗದ ಮರವಿದ್ದ ಜಾಗಕ್ಕೆ ಯಾವುದೇ
ಕಾಲು ದಾರಿಯಿರಲಿಲ್ಲ. ಮುಂದೆ ಹೋಗುತ್ತಿದ್ದ ಜಂಗ ಪ್ಯಾರಾಗಾನ್ ಚಪ್ಪಲಿ ಬೇರೆ ಹಾಕಿದ್ದರಿಂದ ಭೂತದ ಮರಕ್ಕೆ ಕೆಲವೇ
ಹೆಜ್ಜೆಯಿರುವಾಗ ಜಾರಿ ಹಿಂದಿದ್ದ ನನ್ನ ಮೇಲೆಯೇ ಬಿದ್ದ, ನನ್ನನ್ನೂ ಕೆಡಗಿದ. ಬಿದ್ದ ರಭಸಕ್ಕೆೆ ಆತನ ಬೆನ್ನಿಗಿದ್ದ ಬಂದೂಕಿ
ನಿಂದ ಗುಂಡು ಆಕಾಶಕ್ಕೆ ಹಾರಿತು.

ಘಟನೆಯಿಂದ ಇಬ್ಬರೂ ಬೆವತು ಹೋದೆವು. ಮೈ ಎಲ್ಲ ಪರಚಿ ಗಾಯ ಮಾಡಿಕೊಂಡ ನಂತರ ಜಂಗ ಕೂಡ ಈ ಮರದ ಉಸಾಬರಿ ಬೇಡ ಎಂದು ಹೇಳಿದ್ದು ನನಗೂ ಅಧೈರ್ಯವಾಯಿತು. ನಂತರ ಈ ಘಟನೆ ಮತ್ತು ಕೇಳಿದ ಕಥೆಗಳಿಂದಾಗಿ, ಅನಿವಾರ್ಯವಾಗಿ ಆ
ಮರದಲ್ಲಿ ಭೂತವಿದೆ ಎಂದೇ ನಂಬಬೇಕಾಯಿತು. ಈ ಘಟನೆ ಇನ್ನೊಂದಿಷ್ಟು ರೆಕ್ಕೆ ಪುಕ್ಕ ಹಚ್ಚಿಕೊಂಡು ಅದು ಹೇಗೋ
ಊರಲ್ಲೆಲ್ಲ ಹರಡಿತು. ನಂತರ ಅಲ್ಲಿ ಭೂತವಿದೆ ಎಂದು ನಮ್ಮ ವಾರಿಗೆಯ ಬಹುತೇಕರು ಗಟ್ಟಿ ನಂಬಿದರು. ಇಂದಿಗೂ ಆ ಮರ
ಅಲ್ಲಿ ಹಾಗೆಯೇ ನಿಂತಿದೆ – ಭೂತವಾಗದೆ. ಅದರ ಸುತ್ತಲು ಮೊದಲು ದೊಡ್ಡ ದೊಡ್ಡ ಮರಗಳಿದ್ದವು. ಅವು ಈಗ ಕಾಣೆಯಾಗಿವೆ, ಅವುಗಳನ್ನೆಲ್ಲ ಕಡಿದು ಮಾರಲಾಗಿದೆ.

ಹೀಗೆ ಮರಗಳಲ್ಲಿ ಭೂತ ದೈವಗಳಿವೆ ಎನ್ನುವ ನಂಬಿಕೆ ಇಂದು ನಿನ್ನೆೆಯದಲ್ಲ. ಕಥೆಗಳು ಹೇಗೆ ಹೇಗೋ ಹುಟ್ಟಿಕೊಂಡಿವೆ
– ಬೆಳೆದುಕೊಂಡಿವೆ. ನಮ್ಮೆಲ್ಲರ ಊರುಗಳಲ್ಲಿ ದೊಡ್ಡದೊಂದು ಮರವಿದೆಯೆಂದರೆ ಅದರಲ್ಲಿ ಚೌಡಿ, ದೈವ ಅಥವಾ ಭೂತವಿದೆ
ಎನ್ನುವ ನಂಬಿಕೆಯಿರುತ್ತದೆ. ಈ ರೀತಿ ಬೃಹತ್ ಮರದೆಡೆಗೆ ಭಕ್ತಿ  ಇಲ್ಲವೇ ಹೆದರಿಕೆ ನೆಲೆಯೂರಿರುತ್ತದೆ. ಈ ಕಲ್ಪನೆಯ ಸುತ್ತ
ಅದೆಷ್ಟೋ ಅದ್ಭುತವಾದ ಕಥೆಗಳು ಜನಮಾನಸದಲ್ಲಿ ಹರಿದಾಡುತ್ತಿರುತ್ತವೆ. ಈ ಕಥೆಗಳು ಬಾಯಿಯಿಂದ ಬಾಯಿಗೆ ಹೋಗುವಾಗ ಇನ್ನಷ್ಟು ರೋಚಕ ರೂಪಾಂತರಗಳನ್ನು ಕಾಣುತ್ತವೆ. ಈ ರೀತಿ ಮರಗಳು ಕಥೆಗಳಿಂದಾಗಿ ವಿನಾಕಾರಣ ಅಪಕೀರ್ತಿಗೆ ಒಳಗಾಗಿರುತ್ತವೆ ಇಲ್ಲವೇ ದೈವೀಕರಿಸಲ್ಪಡುತ್ತವೆ. ಈ ತರಹದ ಕಥೆಗಳಿಂದಾಗಿ ಬೇರೆ ಬೇರೆ ರಿಚುವಲ್ – ಕೈಂಕರ್ಯಗಳು
ರೂಢಿಗೆ ಬರುತ್ತವೆ.

ಈ ರೀತಿ ಹುಟ್ಟಿಕೊಳ್ಳುವ ಕಥೆಯನ್ನು ಬಿ.ಜಿ.ಎಲ್.ಸ್ವಾಮಿ ತನ್ನ ಹಸಿರು ಹೊನ್ನು ಪುಸ್ತಕದಲ್ಲಿ ಇವು ಕಲ್ಪನಾ ವಿಲಾಸ ನರ್ತನ ವಾಡಿದ್ದರಿಂದ ಹುಟ್ಟಿದ ಕಥೆಗಳು’ ಎಂದು ಬಣ್ಣಿಸುತ್ತಾರೆ. ಈ ರೀತಿಯ ಕಥೆಗಳು, ಆಚರಣೆಗಳು ಕೇವಲ ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಬಹುತೇಕ ದೇಶಗಳಲ್ಲಿ ಕಾಣಸಿಗುತ್ತದೆ. ಎಲ್ಲ ಸಂಸ್ಕೃತಿಯಲ್ಲೂ ಒಂದಿಲ್ಲೊಂದು ಮರ ಪವಿತ್ರ. ನಾರ್ವೆಯ ಜನರಿಗೆ ಹೊಲ್ಲಿ ಮರ, ಪಶ್ಚಿಮ ಮತ್ತು ಬಹುತೇಕ ಆಫ್ರಿಕನ್ನರಿಗೆ ಇರೋಕೋ ಮರ, ಉತ್ತರ ಆಫ್ರಿಕಾ ಮತ್ತು ನಮಗೆ, ಜೈನರಿಗೆ ಆಲದ ಮರ, ಬೌದ್ಧರಿಗೆ ಬೋಧಿ ಮರ, ಕ್ರಿಶ್ಚಿಯನ್ನರಿಗೆ ಅಂಜೂರದ ಮರ, ಉತ್ತರ ಅಮೆರಿಕಾದ ಹಲವಾರು ಬುಡಕಟ್ಟು ಜನಾಂಗಕ್ಕೆ ಮೇಪಲ್ ಮರ, ಮಧ್ಯ ಮತ್ತು ದಕ್ಷಿಣ ಅಮೆರಿಕಾ – ಕೆರಬ್ಬಿಯನ್ ದ್ವೀಪಗಳಲ್ಲಿ ಸಿಯೆಬಾ ಮರ ಹೀಗೆ ಬೇರೆ ಬೇರೆ ಮರಗಳು ಪವಿತ್ರ ಎಂದು ಪರಿಗಣಿಸಿ ಪೂಜಿಸುವ ಪರಿಪಾಠ ಜಗತ್ತಿನೆಲ್ಲೆಡೆ ಇದೆ.

ಹಿಂದೂ ಧರ್ಮದಲ್ಲಂತೂ ಆಲ, ಅಶ್ವತ್ಥ, ಹೀಗೆ ನೂರೆಂಟು ಮರಗಳು ಪವಿತ್ರ ಎನ್ನುವ ನಂಬಿಕೆ. ಅಮೆರಿಕಾದ ಬುಡಕಟ್ಟು ಗಳಲ್ಲಿ, ಮೂಲನಿವಾಸಿಗರಲ್ಲಿ ದೊಡ್ಡ ಮರಗಳೆಂದರೆ ಅವು ಸ್ವರ್ಗ ಮತ್ತು ಭೂಮಿಯ ನಡುವಿನ ಸೇತುವೆ ಎನ್ನುವ ನಂಬಿಕೆ ಯಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೂ ಬೃಹಾತ್ಮರಾಗಳೆಡೆಗೆ ಹಲವು ನಂಬಿಕೆಗಳು ಬೆಳೆದುಕೊಂಡಿವೆ. ಹೀಗೆ ಪ್ರತಿ ಯೊಂದು ಧರ್ಮ, ಜಾತಿ, ದೇಶ, ರಾಜ್ಯ, ಊರು, ಕೇರಿಗಳಲ್ಲಿ ಮರಗಳೆಡೆಗೆ ಒಂದೊಂದು ನಂಬಿಕೆಗಳು. ಇದೆಲ್ಲ ನಂಬಿಕೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವುದಾದರೆ ಈ ರೀತಿ ಪೂಜಿಸಲ್ಪಡುವ ಮರಗಳೆಲ್ಲ ಆಯಾ ಜಾಗದಲ್ಲಿ ಸಹಜವಾಗಿ ಬೆಳೆಯಲ್ಪಡುವ ಬೃಹದಾಕಾರದ ಮರಗಳೇ.

ಇದೆಲ್ಲದರ ಹಿಂದೆ ಪೂರ್ವಜರ ದೊಡ್ಡ ಮರಗಳನ್ನು ಪೂಜಿಸಿ ಸಂರಕ್ಷಿಸುವ ಸೂಕ್ಷ್ಮತೆ ಜಗತ್ತಿನೆಲ್ಲೆಡೆ ಸರ್ವವ್ಯಾಪಿಯಾಗಿ ಅಡಗಿದೆ ಎನ್ನುವುದು. ಇಂತಹ ನಂಬಿಕೆಗಳೇ ಬೃಹತ್ ಮರಗಳ ರಕ್ಷಣೆಗೆ ಹಲವು ಕಡೆ ಇಂದಿನವರೆಗೂ ನಿಂತಿವೆ. ಹೀಗಿಲ್ಲದಿದ್ದರೆ ಅದೆಷ್ಟೋ ಬೃಹತ್ ಜಾತಿಯ ಮರಗಳು ಇಂದು ಅಳಿವಿನ ಅಂಚಿನಲ್ಲಿರುತ್ತಿದ್ದವು ಅಥವಾ ನಶಿಸಿ ಕಾಲವೇ ಆಗಿರುತ್ತಿತ್ತು.

ಜಗತ್ತಿನಲ್ಲೆಲ್ಲ ಇರುವ ಈ ರೀತಿಯ ಬೃಹತ್ ಮರಗಳೆಡೆಗಿನ ನಂಬಿಕೆಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ರಷ್ಯಾ- ಸೈಬೇರಿಯಾ ದಿಂದ ಅಮೆರಿಕಾದವರೆಗೂ, ಐಸ್ಲ್ಯಾಂಡ್‌ನಿಂದ ಆಫ್ರಿಕಾ – ದಕ್ಷಿಣ ಅಮೆರಿಕಾದವರೆಗೆ ಎಲ್ಲ ದೇಶಗಳಲ್ಲೂ ಬೃಹತ್ ಮರಗಳಲ್ಲಿ ಚೇತನವೊಂದು ವಾಸಿಸಿರುತ್ತದೆ ಎನ್ನುವ ನಂಬಿಕೆ ಸಾರ್ವತ್ರಿಕ. ಯಾವುದೇ ಪುರಾತನ ಬುಡಕಟ್ಟಿನ ನಂಬಿಕೆಯ ಇತಿಹಾಸವನ್ನು ತೆರೆದು ನೋಡಿದರೂ ಇದೊಂದು ತೀರಾ ಸಾಮಾನ್ಯ ನಂಬಿಕೆ.

ಕಾಡಿನ ಅತಿ ದೊಡ್ಡ ಮರದಲ್ಲಿ ಕಾಡಿನ ಚೇತನ ಆಯ್ಕೆ ಮಾಡಿ ನೆಲೆಸಿರುತ್ತದೆ ಎನ್ನುವ ನಂಬಿಕೆ ಕೂಡ ಅಷ್ಟೇ ವ್ಯಾಪಕ. ಇನ್ನು ಬೃಹತ್ ಮರಗಳನ್ನು ಪ್ರಾತಃಕಾಲದಲ್ಲಿ ಮತ್ತು ಮುಸ್ಸಂಜೆ ಏಳು ಅಥವಾ ಹನ್ನೆರಡು ಸುತ್ತು ಹಾಕುವುದು ಪುರಾತನ ಗ್ರೀಕ್ ನಾಗರೀಕತೆಯಲ್ಲಿ ಮತ್ತು ಸೈಬೀರಿಯಾದ ಬುಡಕಟ್ಟುಗಳಲ್ಲಿ ಕೂಡ ಇತ್ತು ಎನ್ನುವ ಉಲ್ಲೇಖವಿದೆ. ಇನ್ನು ಭಿನ್ನವಾದ ದೇವರ ಮೂರ್ತಿಗಳನ್ನು ಈ ರೀತಿಯ ಬೃಹತ್ ಮರದ ಕೆಳಗಡೆ ಇಟ್ಟು ವಿಸರ್ಜಿಸುವುದು ಕೂಡ ಜಗತ್ತಿನೆಲ್ಲೆಡೆ ಅಷ್ಟೇ ಸಾಮಾನ್ಯವಾಗಿ ಕಾಣಿಸುವ ಇನ್ನೊಂದು ರೂಢಿ. ಇದೆಲ್ಲವನ್ನು ನಮ್ಮಲ್ಲಿಯೂ ನೀವು ನೋಡಿರುತ್ತೀರಿ.

ಸ್ಪ್ಯಾನಿಷ್ – ಲ್ಯಾಟಿನೋ ಜನರು ಯಾವುದೇ ಬೃಹತ್ ಮರ ಏಳು ಕವಲನ್ನು ಒಡೆದಿದ್ದರೆ ಅದು ಪವಿತ್ರ ಎಂದು ಪರಿಗಣಿಸುತ್ತಾರೆ. ಅದಕ್ಕೆ ಬಟ್ಟೆ , ದಾರ, ತಾಯತ ಕಟ್ಟುವುದು ದಕ್ಷಿಣ ಅಮೆರಿಕಾ ದೇಶಗಳಲ್ಲಿ, ಸ್ಪೇನ್ ಮತ್ತು ಇಟಲಿ ದೇಶಗಳಲ್ಲಿ ಕಾಣಬಹುದು. ಈ ರೀತಿಯ ಏಳು ಕವಲೊಡೆದ ಮರಗಳಲ್ಲಿ ಪೂರ್ವಜರ ಆತ್ಮ ನೆಲೆಸುತ್ತದೆ ಎನ್ನುವುದು ಸ್ಪ್ಯಾನಿಷ್ ಜನರ ನಂಬಿಕೆ. ದಿರಿಯಾದ’ ಎಂದರೆ ಮರದ ಚೇತನ. ಹಾಮಾದಿರಿಯಾದ’ ಎಂದರೆ ಮರದಲ್ಲಿ ಎಲ್ಲಿಂದಲೋ ಬಂದು ನೆಲೆಸುವ ಚೇತನ. ಈ ಎರಡೂ ಚೇತನ ಗಳು ಗಂಡ ಹೆಂಡತಿಯಂತೆ ಸಹಜೀವನ ನಡೆಸುತ್ತಿರುತ್ತವೆ ಎನ್ನುವುದು ಸ್ಪ್ಯಾನಿಷ್ ನಂಬಿಕೆ.

ದಕ್ಷಿಣ ಅಮೆರಿಕಾದಲ್ಲಿ ಈ ಕಾರಣದಿಂದಲೇ ಯಾವುದೇ ಮರ ಏಳು ಕವಲನ್ನು ಹೊಂದಿದ್ದರೆ ಅದರ ಉಸಾಬರಿಗೆ ಯಾರೂ ಹೋಗುವುದಿಲ್ಲ. ಅದಕ್ಕೆ ಕೊಡಲಿಯ ಏಟು ಬೀಳುವುದಿಲ್ಲ. ಅಮೆಜಾನ್ ಕಾಡಿನಲ್ಲಿ ಮರ ಕದ್ದು ಮಾರುವ ದೊಡ್ಡ ದೊಡ್ಡ ಮಾಫಿಯಾ ಗಳಿವೆ. ಈ ಮರಗಳ್ಳರು ಮಧ್ಯೆ ಮಧ್ಯೆ ಈ ರೀತಿ ಏಳು ಕವಲುಳ್ಳ ಮರಗಳನ್ನು ಕಡಿಯದೇ ಹಾಗೆಯೇ ಉಳಿಸಿ ಹೋಗು ತ್ತಾರೆ. ತೀರಾ ಸಾಂಪ್ರದಾಯಿಕ ಮರಗಳ್ಳನಾದರೆ ಅದಕ್ಕೊಂದು ಬಿಳಿಯದಾರ ಸುತ್ತಿ ಎಂಟು ಸುತ್ತು ಹೊಡೆದು ಮುಂದುವರಿಯು ತ್ತಾನೆ.

ಇದಲ್ಲದೇ ಸಿಡಿಲು ಬಡಿದ ಬೃಹತ್ ಮರ ಬದುಕಿದ್ದರೆ ಅದು ಅತ್ಯಂತ ಶ್ರೇಷ್ಠ ಎನ್ನುವ ನಂಬಿಕೆ ಅಲ್ಲಿ ಕೂಡ ಇದೆ. ಇಂದು ಜಗತ್ತಿನ ಅತೀ ಹಳೆಯ, ಜೀವಂತ ಮರ ಇರುವುದು ಅಮೆರಿಕಾದ ಕ್ಯಾಲಿಫೋರ್ನಿಯಾದ ಶ್ವೇತ ಪರ್ವತಶ್ರೇಣಿಯಲ್ಲಿ. ಬ್ರಿಸ್ಟಲ್ ಕೋನ್ ಪೈನ್ ಜಾತಿಯ ಈ ಮರಕ್ಕೆ ಈಗ ಬರೋಬ್ಬರಿ 4,852 ವರ್ಷ. ನಲವತ್ತೆಂಟು ಶತಮಾನ!

ಇಂದಿಗೂ ಜೀವಂತವಿರುವ ಈ ಮರ ಜಗತ್ತಿನಲ್ಲೇ ಅತೀ ಹಳೆಯ ಮರ (ಕ್ಲೋನ್ ಅಲ್ಲದ) ಎಂದು ಹೆಸರುವಾಸಿ. ಇತ್ತ ಪೂರ್ವದಲ್ಲಿ ಸಿಂಧೂ ನಾಗರೀಕತೆ ಹುಟ್ಟಿದ ಸಮಯದಲ್ಲಿ ಅತ್ತ ಅಮೆರಿಕಾದ ಇಂದಿನ ಕ್ಯಾಲಿಫೋರ್ನಿಯಾದಲ್ಲಿ ಈ ಮರ ಹುಟ್ಟಿದ್ದು. ಭಾರತ ದಲ್ಲಿ ವೇದ ಕಾಲ ಶುರುವಾಗುವಾಗ ಈ ಮರಕ್ಕೆ ಅದಾಗಲೇ 1,300 ವರ್ಷವಾಗಿಹೋಗಿತ್ತು. ಏಸು ಹುಟ್ಟುವಾಗ ಈ ಮರದ ವಯಸ್ಸು 3,000 ವರ್ಷದ ಆಸು ಪಾಸು. ಮಹಾವೀರ, ಬುದ್ಧ ಹುಟ್ಟುವಾಗ ಅದಾಗಲೇ ಈ ಮರ ಸುಮಾರು ಎರಡೂಕಾಲು ಸಾವಿರ ವಸಂತಗಳನ್ನು ಕಂಡಾಗಿತ್ತು.

ಅಮೆರಿಕಾಕ್ಕೆ ಅಮೆರಿಕಾ ಎಂದು ಹೆಸರಿಟ್ಟಾಗ ಈ ಮರಕ್ಕೆ ಮೂರುವರೆ ಸಾವಿರ ವರ್ಷ ವಯಸ್ಸು. ಈ ಮರ ಈಗ ಲೆಕ್ಕ ಹಾಕುವು ದಾದರೆ ಸುಮಾರು ಹದಿನೆಂಟುವರೆ ಲಕ್ಷಕ್ಕೂ ಹೆಚ್ಚಿಗೆ ಸೂರ್ಯೋದಯವನ್ನು ನೋಡಿದೆ. ಆ ಮರದ ಹೆಸರು ಮೆಥುಸೆಲಾಹ್’. ಜುಡಿಸಂ, ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿಯಲ್ಲಿ ಮೆಥುಸೆಲಾಹ್ ಅತಿ ಹೆಚ್ಚು ವರ್ಷಗಳ ಕಾಲ, ಒಂಭತ್ತು ಶತಮಾನ ಬದುಕಿದ ವ್ಯಕ್ತಿ ಎನ್ನುವ ನಂಬಿಕೆಯಿದೆ. ಹಾಗಾಗಿ ಆ ಹೆಸರನ್ನು ಈ ಮರಕ್ಕೆ ಇದನ್ನು ಗುರುತಿಸಿದ ವಿಜ್ಞಾನಿ ಇಟ್ಟಿದ್ದಾನಂತೆ.

ಈ ಮರವನ್ನು ಮೊದಲ ಬಾರಿಗೆ 1957ರಲ್ಲಿ ಗುರುತಿಸಿದ್ದು ಸಸ್ಯ ವಿಜ್ಞಾನಿ ಶುಮನ್. ಆತ ಕ್ಯಾಲಿಫೋರ್ನಿಯಾದ ಈ ಶ್ವೇತ
ಪರ್ವತಗಳಲ್ಲಿನ ಪೈನ್ ಮರಗಳ ತಿರುಳಿನ ಸಾಂಪಲ್‌ಗಳನ್ನು ಸಂಗ್ರಹಿಸಿ ಅಭ್ಯಸಿಸುತ್ತಿದ್ದ. ಆ ಸಮಯದಲ್ಲಿ ಆತ ಪರೀಕ್ಷಿಸಲು
ಒಂದು ಅತೀ ಹಳೆಯ ಮರವೊಂದನ್ನು ಆಯ್ದುಕೊಂಡು ಗರಗಸದಿಂದ ಕತ್ತರಿಸಿ ನೆಲಕ್ಕುರುಳಿಸುತ್ತಾನೆ. ಅದರ ಕಾಂಡದ
ರಿಂಗ್‌ಗಳನ್ನು ಲೆಕ್ಕ ಹಾಕಿದಾಗ ಆತನಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಅಲ್ಲೊಂದು ದುರಂತ ಸಂಭವಿಸಿರುತ್ತದೆ.
ಮೆಥುಸೆಲಾಹ್‌ಗಿಂತ ಹಳೆಯ ಮರವನ್ನು ಆತ ಅಂದು ಕಡಿದು ಕೊಂದಿರುತ್ತಾನೆ.

ಹಾಗೆ ಕಡಿದ ಮರದ ವಯಸ್ಸು 5,072 ವರ್ಷದ್ದಾಗಿರುತ್ತದೆ ಎಂದು ಕಾಂಡದ ರಿಂಗ್ ಗಳನ್ನು ಲೆಕ್ಕಹಾಕಿದಾಗ ತಿಳಿಯುತ್ತದೆ. ನಂತರ ಇನ್ನೊಂದು ಅಷ್ಟೇ ಹಳೆಯದಿರುಬಹುದಾದ ಮರದ ಕಡಿಯದೇ ಕಾಂಡದ ಭಾಗವನ್ನು ಸೂಕ್ಷ್ಮವಾಗಿ ಕೊರೆದು ತೆಗೆದಾಗ ಆ ಮರ 4,789 ವರ್ಷ ಹಳೆಯದೆಂದು (1957ರಲ್ಲಿ) ತಿಳಿಯುತ್ತದೆ. ಅದೇ – ಮೆಥುಸೆಲಾಹ್’. ಇಂದು ಈ ಮರದ ಕಾಂಡದ ಸಾಂಪಲ್ ಐದುಸಾವಿರ ವರ್ಷದ ವಾತಾವರಣದ ಇತಿಹಾಸವನ್ನು ನಮಗೆ ತೆರೆದಿಡುತ್ತದೆ. ಯಾವ ವರ್ಷ ಎಷ್ಟು ಮಳೆಯಾ ಯಿತು, ಎಷ್ಟು ಚಳಿ ಯಾವ ವರ್ಷ ಕಂಡಿತು ಎಂಬಿತ್ಯಾದಿ ಈ ಮರದ ಕಾಂಡದ ರಿಂಗ್‌ಗಳನ್ನು ಅಭ್ಯಸಿಸಿ ತಿಳಿದುಕೊಳ್ಳಬಹು ದಾಗಿದೆ. ಕಳೆದ ಐದು ಸಾವಿರ ವರ್ಷದಲ್ಲಿ ಅತಿ ಹೆಚ್ಚು ಚಳಿ ಕಾಣಿಸಿಕೊಂಡಿದ್ದು ಕ್ರಿ.ಪೂ. 1828 ರಲ್ಲಿ ಎಂದು ನಮಗೆ ದೃಢ ವಾಗುವುದು ಕೂಡ ಈ ಮರದ ಕಾಂಡವನ್ನು ಅಭ್ಯಸಿಸಿದ್ದರಿಂದಲೇ.

ಇದೊಂದು ಐದು ಸಾವಿರ ವರ್ಷಗಳ ವಾತಾವರಣದ ಇತಿಹಾಸವನ್ನು ತನ್ನೊಳಗೆ ಬರೆದಿಟ್ಟುಕೊಂಡ ಪುಸ್ತಕದಂತೆ. ಈ ಮೆಥು ಸೆಲಾಹ್ ಅಂದು ಶುಮನ್‌ಗೆ ಮತ್ತು ನಂತರ ಈ ಮರವನ್ನು ಅಭ್ಯಸಿಸಿದ ಬಹುತೇಕ ವಿಜ್ಞಾನಿಗಳು ಒಂದಿಲ್ಲೊಂದು ಅಸಹಜ ಮರಣಕ್ಕೆೆ ಗುರಿಯಾದದ್ದು ಕಾಕತಾಳೀಯವೋ ಏನೋ ಗೊತ್ತಿಲ್ಲ. ಆದರೆ ಈ ಕಾರಣದಿಂದ ಮೆಥುಸೆಲಾಹ್ ಮತ್ತು ಉಳಿದ ಮರಗಳ ಸುತ್ತ ಅಮೆರಿಕಾದ ಸಸ್ಯ ವಿಜ್ಞಾನಿಗಳಲ್ಲಿ ಒಂದು ನಂಬಿಕೆಯಂತೂ ಇಂದಿಗೂ ಇದೆ.

ಯಾರೇ ಈ ಮರಗಳನ್ನು ಅಭ್ಯಸಿಸಲು ಹೋದರು ಅವರು ಅಕಾಲ ಮೃತ್ಯುವಿಗೆ ಗುರಿಯಾಗುತ್ತಾರೆ ಎಂದು. ಆ ಕಾರಣಕ್ಕೋ ಏನೋ, ಇಂದಿಗೂ ಈ ಮರಗಳ ಸುದ್ದಿಗೆ ಹೋಗದ ಒಂದು ದೊಡ್ಡ ಸಸ್ಯ ವಿಜ್ಞಾನಿ ವರ್ಗವಿದೆ. ಈ ನಂಬಿಕೆ ಮೆಥುಸೆಲಾಹ್ ದ ಶಾಪ ಎಂದೇ ಕುಖ್ಯಾತ. ಆ ಕಾರಣದಿಂದಲೇ ಇಂದಿಗೂ ಮೆಥುಸೆಲಾಹ್ ಮತ್ತು ಇತರ ಸಾವಿರಾರು ವರ್ಷ ಹಳೆಯ ಮರಗಳು ಈ ಶ್ವೇತ ಪರ್ವತದಲ್ಲಿ ಸುರಕ್ಷಿತವಾಗಿದೆ. ಅದಲ್ಲದೇ ಅಮೆರಿಕಾ ಸರಕಾರ ಮತ್ತು ಅರಣ್ಯ ಇಲಾಖೆ ಈ ಮೆಥುಸೆಲಾಹ್ ಎನ್ನುವ ಮರವಿರುವ ನಿಖರ ಜಾಗವನ್ನು ಆ ಮರದ ರಕ್ಷಣೆಗೋಸ್ಕರ ಇಂದಿಗೂ ಗುಪ್ತವಾಗಿಯೇ ಇರಿಸಿದೆ.

ಜನರು ಆ ಸಾವಿರಾರು ವರ್ಷ ಹಳೆಯ ಮರಗಳಿರುವ ಜಾಗಕ್ಕೆ ಹೋಗಬಹುದು, ಓಡಾಡಬಹುದು. ಆದರೆ ಇದೇ ಮೆಥುಸೆಲಾಹ್ ಎನ್ನುವುದನ್ನು ಗುರಿತಿಸದಂತೆ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ. ಮನುಷ್ಯನಲ್ಲಿ ಯಾವತ್ತೋ ಹುಟ್ಟಿದ ನಂಬಿಕೆಗಳಿಂದ
ಉಳಿಸಿಕೊಂಡ ಸಂಪತ್ತು ಈ ಬೃಹತ್ ಮರಗಳು. ಈ ಮರ ದೆಡೆಗಿನ ಆಸ್ತಿಕ ಭಾವ ಅಥವಾ ಭಯ ಒಂದು ರೀತಿಯಲ್ಲಿ ಒಳ್ಳೆಯದೇ ಆಗಿತ್ತು. ಇಂದಿನ ಮನುಷ್ಯನ ಪರಿಸರದೆದೆಡಗಿನ ರಸ್ತೆಯನ್ನು ನೋಡಿದರೆ ಏಕೋ ಕೆಲವೊಂದು, ಈ ತರಹದ ನಂಬಿಕೆಗಳನ್ನು ಮನುಷ್ಯ ಪ್ರಶ್ನಿಸದೇ ಉಳಿದುಬಿಡಬೇಕಿತ್ತು ಎಂದೆನಿಸುತ್ತದೆ.

ಕೆಲವು ನಂಬಿಕೆಗಳು ಮೌಢ್ಯ ಎಂದು ಬಹಿರಂಗವಾಗಲೇ ಬಾರದಿತ್ತೇನೋ, ನಾವು ಎಲ್ಲವನ್ನೂ ವೈಜ್ಞಾನಿಕ ಕನ್ನಡಕ ಹಾಕಿ ಕೊಂಡು ನೋಡದೇ ಇರುವುದೇ ಒಳ್ಳೆಯದಿತ್ತೇನೋ ಇತ್ಯಾದಿ. ಮನುಷ್ಯ ಹಳತಿನಿಂದ ಈ ರೀತಿ ಮರಗಳೆಡೆಗಿನ ಒಂದು ದೈವಿಕ ಭಾವವನ್ನು ಹೊಂದಿರುವುದು ಹಿಂದೆಲ್ಲದಕ್ಕಿಂತ ಇಂದು ಹೆಚ್ಚಿಗೆ ಬೇಕಿತ್ತು ಎನಿಸುತ್ತದೆ. ಈಗ ಈ ನಂಬಿಕೆಗಳು ಕಡಿಮೆಯಾಗಿವೆ. ಹಣದ ಆಸೆಗೆ ಬೃಹತ್ ಮರಗಳು ಜಗತ್ತಿನೆಲ್ಲೆಡೆ ನೆಲಕ್ಕುರುಳುತ್ತಿವೆ. ಮರ ಕತ್ತರಿಸಲು ದೊಡ್ಡ ದೊಡ್ಡ ಜಯಂಟ್ ಮಷಿನ್‌ಗಳು ಅವಿಷ್ಕಾರವಾಗಿವೆ. ಆ ಮಷಿನ್‌ಗಳಿಗೆ ಯಾವುದೇ ಭಯವಿಲ್ಲ, ಭಕ್ತಿಯೂ ಇಲ್ಲ.

ಒಂದು ಬೃಹದಾಕಾರದ ಮರವನ್ನು ಕತ್ತರಿಸಿದಾಗ ಅದೆಷ್ಟೋ ಜೀವ ಸಂಕುಲ ಆ ಮರವೊಂದರ ಜೊತೆ ಕೊನೆಕಾಣುತ್ತವೆ. ಮರ ದಲ್ಲಿ ಮನೆಮಾಡಿದ ಸಾವಿರಾರು ಪ್ರಾಣಿ, ಪಕ್ಷಿಗಳು, ಕೀಟ ಜಗತ್ತು, ಮತ್ತು ಅದರ ಕೆಳಗೆ ನೂರಾರು ಚಿಕ್ಕ ಮರ ಗಿಡಗಳು ಇವೆಲ್ಲ ಒಂದು ಬೃಹತ್ ಮರದೊಂದಿಗೆ ಸಾಯುತ್ತವೆ. ಇದೇ ವೈಜ್ಞಾನಿಕ ಕಾರಣಕ್ಕೆ ಈ ಬೃಹತ್ ಮರಗಳಲ್ಲಿ ಚೇತನಗಳು – ದೈವಗಳು ನೆಲೆಸಿರುತ್ತದೆ ಎಂದಿದ್ದಿರಬಹುದು. ಒಂದೇ ಒಂದು ಬೃಹತ್ ಮರ ಕಡಿದಲ್ಲಿ ಆ ಮರದ ಸುತ್ತಲಿನ ಇಡೀ ಎಕೊ ಸಿಸ್ಟಮ್ ಏರು ಪೇರಾಗುತ್ತದೆ.

ಮರ ತೀರಾ ದೊಡ್ಡದ್ದಿದ್ದಲ್ಲಿ ಕಾಡಿನ ಪರಿಸರ ವ್ಯವಸ್ಥೆೆ ಕಲಕುತ್ತದೆ. ಕಾಡೊಂದರಲ್ಲಿ ಈ ಬೃಹತ್ ಮರಗಳು ಒಂದು ರೀತಿಯಲ್ಲಿ ಯಜಮಾನನಂತೆ ಬದುಕುತ್ತಿರುತ್ತವೆ. ಕಾಡಿನ ಅತಿ ದೊಡ್ಡ ಮರದಲ್ಲಿಯೇ ಆ ಕಾಡಿನ ಚೇತನ ನೆಲೆಸಿರುವುದು. ಇದನ್ನೆಲ್ಲ ನೋಡಿ ದರೆ ಹಿಂದೆ ಹುಟ್ಟಿದ ಕಥೆಗಳು, ನಂಬಿಕೆಗಳೆಲ್ಲ ಮೌಢ್ಯ ಎಂದು ಕರೆಯಲು ಮನಸ್ಸು ಒಪ್ಪುವುದಿಲ್ಲ. ಪರಿಸರದೆಡೆಗೆ ಪ್ರೀತಿ ಬೆಳೆಸು ವುದಕ್ಕಿಂತ ಹೆದರಿಕೆ ಹುಟ್ಟುಹಾಕುವುದೇ ರಕ್ಷಣೆಯ ಸುಲಭ ಮಾರ್ಗವೇನೋ ! ಅಲ್ಲವೇ?