Thursday, 28th November 2024

ಕ್ರೀಡಾ ಸ್ಫೂರ್ತಿ: ಈ ರೀತಿ, ಆ ರೀತಿ

ನಾಡಿಮಿಡಿತ

ವಸಂತ ನಾಡಿಗೇರ

vasanth.nadiger@gmail.com

ಯುರೊ ಕಪ್ ಫುಟ್‌ಬಾಲ್, ವಿಂಬಲ್ಡನ್‌ನಂಥ ಪ್ರಮುಖ ಟೂರ್ನಿಗಳು ಈಗಷ್ಟೇ ಮುಗಿದಿವೆ. ಕರೋನಾ ಸಾಂಕ್ರಾಮಿಕದಿಂದಾಗಿ ಮುಂದಕ್ಕೆ ಹೋಗಿ ಇದೀಗ ಕರೋನಾ ನಡುವೆಯೂ ಟೊಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲು ಸಜ್ಜಾಗಿದೆ. ಭಾರತದ ದೊಡ್ಡ ತಂಡವೂ ಜಪಾನ್‌ಗೆ ತೆರಳಲು ಸಜ್ಜಾಗಿದೆ.

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡದ ಸದಸ್ಯರ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ, ಅವರನ್ನು ಹುರಿದುಂಬಿಸಿ ಶುಭ ಹಾರೈಸಿದ್ದಾರೆ. ಇದೆಲ್ಲ ಪೀಠಿಕೆ ಈಗ್ಯಾಕೆ ಎಂದಿರಾ ? ಮೇಲೆ ತಿಳಿಸಿದ ಎಲ್ಲವನ್ನೂ ಒಟ್ಟಾಗಿ ನೋಡಿದಾಗ ಮೂಡಿಬಂದ ಅಭಿಪ್ರಾಯ ಇದರಲ್ಲಿ ಅಡಗಿದೆ. ಆಟ ಯಾವು ದಾದರೂ ಇರಲಿ. ಎಲ್ಲರೂ ಹೋಗುವುದು ಗೆಲ್ಲುವುದಕ್ಕೇ. ಸೋಲಬೇಕೆಂಬ ಇರಾದೆ ಯಾರಿಗೂ ಇರುವುದಿಲ್ಲ.

ಆದರೂ ಒಬ್ಬರು ಗೆಲ್ಲಬೇಕೆಂದರೆ ಇನ್ನೊಬ್ಬರು ಸೋಲಬೇಕಾಗುತ್ತದೆ. ಅದಕ್ಕಾಗಿಯೇ ಸೋಲು-ಗೆಲುವನ್ನು ಸಮಭಾವದಿಂದ ಸ್ವೀಕರಿಸಬೇಕೆಂಬುದು ಎಲ್ಲರೂ ಹೇಳುವ ಮಾತು. ಇದನ್ನೇ ಕ್ರೀಡಾಸೂರ್ತಿ ಎನ್ನುತ್ತಾರೆ. ಆದರೆ ಆಟದಲ್ಲಿ ಈ ಕ್ರೀಡಾಸ್ಫೂರ್ತಿಯ ಜತೆಗೆ ಕ್ರೀಡಾ ಮನೋಭಾವ ಎಂಬುದೂ ಇರುತ್ತದೆ. ಆಸ್ಟ್ರೇಲಿಯದ ಕ್ರಿಕೆಟಿಗರು ಸ್ಲೆಜ್ಡಿಂಗ್ ಮಾಡುವುದರಲ್ಲಿ ನಿಸ್ಸೀಮರು (ಕೆಣಕುವುದು, ಹಂಗಿಸುವುದು, ಅಪಹಾಸ್ಯ ಮಾಡುವುದು ಇತ್ಯಾದಿ). ಭಾರತ-ಪಾಕಿಸ್ತಾನ ಆಟಗಾರರ ನಡುವೆ ಆಗಾಗ ನಡೆಯುವ ಕೆಣಕಾಟವೂ ಎಲ್ಲರಿಗೂ ಗೊತ್ತಿರುವಂಥದ್ದೇ.

ಜಾನ್ ಮೆಕೆನ್ರೋ ಎಂಬ ಖ್ಯಾತ ಟೆನಿಸ್ ಆಟಗಾರನೊಬ್ಬ ದೂರ್ವಾಸ ಮುನಿಯ ಅಪರಾವತಾರದಂತಿದ್ದ. ಸದಾ ಒಂದಿಲ್ಲೊಂದು ಕಾರಣಕ್ಕೆ ಕೋಪಗೊಳ್ಳುತ್ತಿದ್ದ. ಸಿಟ್ಟಿನ ಭರದಲ್ಲಿ ರ‍್ಯಾಕೆಟ್ ಅಪ್ಪಳಿಸುವುದು, ಮುರಿಯು ವುದು; ಅಂಪೈರ್ ಮೇಲೆ ಎಗರಾಡುವುದು; ಪ್ರೇಕ್ಷಕರ ಜತೆ ಜಗಳಕ್ಕೆ ನಿಲ್ಲುವುದು ಸಾಮಾನ್ಯವಾಗಿತ್ತು. ಅದೆ ರೀತಿ ಫುಟ್ಬಾಲ್ ಆಟದಲ್ಲಿ ಅತಿರೇಕದ ವರ್ತನೆಗಳು ಅತಿಯಾಗಿರುತ್ತವೆ. ಆಟದಲ್ಲಿ ನಿಯಮ ಮೀರಿದರೆ ಯೆಲ್ಲೊ, ರೆಡ್ ಕಾರ್ಡ್ ಇತ್ಯಾದಿಗಳನ್ನು ನೀಡಿ ಆ ಪ್ರಕಾರ ಶಿಕ್ಷೆ ವಿಧಿಸುವ ಪದ್ಧತಿ ಇದೆ. ಆದರೆ ಫುಟ್ಬಾಲ್‌ನಲ್ಲಿ ಪ್ರೇಕ್ಷಕರ ವರ್ತನೆಯೇ ಬಲು ದೊಡ್ಡ ಸಮಸ್ಯೆ. ಆವರು ತಮ್ಮ ನೆಚ್ಚಿನ ತಂಡ, ಆಟಗಾರರನ್ನು ಆರಾಧಿಸುತ್ತಾರೆ. ಫಲಿತಾಂಶದಲ್ಲಿ ವ್ಯತ್ಯಾಸವಾದರೆ ಅವರು ಸಹಿಸುವುದಿಲ್ಲ. ಈ ಹಿಂದಿನ ಫುಟ್ಬಾಲ್ ವಿಶ್ವಕಪ್‌ನಲ್ಲಿ ಸೆಲ್ ಗೋಲ್ ಹೊಡೆದು ತಂಡದ ಸೋಲಿಗೆ ಕಾರಣನಾದ ಎನ್ನುವ ಕಾರಣಕ್ಕೆ ಕೊಲಂಬಿಯಾದ ಫುಟ್ಬಾಲ್ ಆಟಗಾರನೊಬ್ಬನನ್ನು ಹತ್ಯೆ ಮಾಡಿದ ಉದಾಹರಣೆಗಳಿವೆ.

ಕ್ರೀಡಾಂಗಣದಲ್ಲಿ, ಹೊರಗೆ ಪ್ರೇಕ್ಷಕರ ದಾಂಧಲೆ, ಪುಂಡಾಟ ಸಾಮಾನ್ಯ. ಮೊನ್ನೆ ನಡೆದ ಯುರೊ ಕಪ್ ಪುಟ್ಬಾಲ್ ಟೂರ್ನಿಯ ಸಮಯದಲ್ಲೂ ಈ ರೀತಿಯ ಘಟನೆ ನಡೆಯಿತು. ಬ್ರಿಟನಿನಲ್ಲಿ ಯುರೊ ಕಪ್ ಟೂರ್ನಿ ನಡೆಯುತ್ತಿದ್ದುದರಿಂದ ಆ ದೇಶದ ಫುಟ್ಬಾಲ್ ಪ್ರೇಮಿಗಳಿಗೆ ಹಬ್ಬವೆನಿಸಿತ್ತು. ಅವರು ತಮ್ಮ ತಂಡದ
ಪ್ರತಿಯೊಂದು ಪಂದ್ಯಕ್ಕೂ ಆಗಮಿಸಿ ಆಟವನ್ನು ಆಸ್ವಾದಿಸಿ, ಆನಂದಿಸಿ, ತಂಡವನ್ನು ಹುರಿದುಂಬಿಸುತ್ತಿದ್ದರು. ತಪ್ಪೇನಿಲ್ಲ ಬಿಡಿ. ಅದರಲ್ಲೂ ಇಟಲಿ ಜತೆ ಫೈನಲ್ ಪಂದ್ಯ ಎಂದರೆ ಕೇಳಬೇಕೆ. ಅದೂ  ವಿಶ್ವವಿಖ್ಯಾತ ವೆಂಬ್ಲೆ ಸ್ಟೇಡಿಯಂನಲ್ಲಿ. ಆ ದಿನ ಪಂದ್ಯ ಆರಂಭಕ್ಕೂ ಮೊದಲೇ ಎಡವಟ್ಟು ಆರಂಭವಾಗಿತ್ತು.

ಅಭಿಮಾನಿ ಪ್ರೇಕ್ಷಕರನೇಕರು ಟಿಕೆಟ್ ಇಲ್ಲದಿದ್ದರೂ ಅಡ್ಡಗಟ್ಟೆಗಳನ್ನು ತೆಗೆದುಹಾಕಿ, ಗೋಡೆಗಳನ್ನು ಏರಿ ಕ್ರೀಡಾಂಗಣಕ್ಕೆ ನುಗ್ಗಿದರು. 55 ವರ್ಷಗಳ ಬಳಿಕ
ಪ್ರಮುಖ ಟೂರ್ನಿಯೊಂದರ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ಇಂಗ್ಲೆಂಡ್ ತಂಡಕ್ಕೆ ಇದ್ದುದರಿಂದ ಅಭಿಮಾನಿಗಳ ಉತ್ಸಾಹ ಮೇರೆ ಮೀರಿತ್ತು. ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್‌ಗಳು ಇರಲಿಲ್ಲವಾಗಿ ಪ್ರೇಕ್ಷಕರು ಪಟ್ಟುಬಿಡದೆ ಜಮಾಯಿಸುತ್ತಿದ್ದರು. ಗೊಂದಲದ ನಡುವೆ ಟಿಕೆಟ್‌ಗಳನ್ನು ಪರೀಕ್ಷಿಸುವುದೇ ಸದ್ಯವಾಗಲಿಲ್ಲ. ಇವರನ್ನು ತಡೆಯಲು ಭದ್ರತಾ ಪಡೆಯವರಿಗೆ ಸಾಕುಬೇಕಾಯಿತು. ಇನ್ನು ಟಿಕೆಟ್ ಪಡೆದವರೂ ಕೂಡ ಆ ಗದ್ದಲದಲ್ಲಿ ಅದನ್ನು ಸ್ಕ್ಯಾನ್ ಮಾಡಿಸಿಕೊಳ್ಳಲು ಸಾದ್ಯವಾಗದೆ ಹಾಗೇ ಒಳನುಗ್ಗಬೇಕಾಯಿತು.

ಇಟಲಿ ಅಭಿಮಾನಿಗಳೂ ಸಾಕಷ್ಟು ಸಮಕ್ಯೆಯಲ್ಲಿ ಬಂದಿದ್ದರಾದರೂ ಇಂಗ್ಲೆಂಡ್ ಬೆಂಬಲಿಗರ ಮುಂದೆ ಆವರು ಬಾಲಮುದುರಿಕೊಂಡು ಕೂರಬೇಕಾಯಿತು.
ಡ್ರಗ್ ಸೇವನೆ, ಕ್ರೀಡಾಂಗಣದಲ್ಲೆ ಮೂತ್ರ ವಿಸರ್ಜನೆ ಮೊದಲಾದ ಹುಚ್ಚಾಟಗಳು ಎಗ್ಗಿಲ್ಲದೆ ಸಾಗಿದ್ದವು. ಇದು ಸಾಲದೆಂಬಂತೆ ಪಂದ್ಯದಲ್ಲಿ ಅವಕಾಶಗಳನ್ನು ಮಿಸ್ ಮಾಡಿಕೊಂಡ ಕಪ್ಪು ವರ್ಣೀಯ ಆಟಗಾರರ ಮೇಲೆ ಬೈಗುಳಗಳ ಸುರಿಮಳೆ ಆಗುತ್ತಿತ್ತು. ಅನಂತರ ನಡೆದ ಘಟನೆ ಇನ್ನೂ ಘೋರ. ಆ ಪಂದ್ಯದಲ್ಲಿ ಪೆನಾಲ್ಟಿ ಮೂಲಕ ಇಟಲಿ ಗೆದ್ದಿದ್ದೇ ತಡ, ಇಂಗ್ಲೆಂಡ್ ತಂಡದ ಅಭಿಮಾನಿಗಳು ರೊಚ್ಚಿಗೆದ್ದರು. ತಮ್ಮ ತಂಡ ಸೋತಿತೆಂಬ ನಿರಾಸೆಯ ಜತೆಗೆ ಅವಮಾನ, ಕೋಪದಿಂದ ಕುದಿಯುತ್ತಿದ್ದ ಅವರು ಸ್ಟೇಡಿಯಂನಿಂದ ಹೊರಬಂದವರೇ ಗೂಂಡಾಗಿರಿಗೆ ಇಳಿದರು. ಕಂಡ ಕಂಡ ಇಟಲಿ ಅಭಿಮಾನಿಗಳನ್ನು ಚಚ್ಚಿದರು. ಅಡ್ಡಗಟ್ಟೆಗಳನ್ನು ಮುರಿದು ಹಾಕಿದರು.

ಬಾಟಲಿ, ಕಲ್ಲು, ಹೂಕುಂಡ – ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ತೂರಿದರು. ಕೆಲವರು ಭಾರತೀಯರನ್ನು ಗುರಿಯಾಗಿಸಿ ದಾಳಿ ನಡೆಸಿದರು. ಇಲ್ಲೂ ವರ್ಣಭೇದ ನೀತಿಯ ಕರಾಳ ಮುಖದ ದರ್ಶನವಾಯಿತು. ನೋಡನೋಡುತ್ತಿದ್ದಂತೆ ಆ ಇಡೀ ಪ್ರದೇಶ ರಣರಂಗದಂತೆ ಭಾಸವಾಯಿತು. ಈ ಘಟನೆ ದೊಡ್ಡ ಸುದ್ದಿಯಾಯಿತು. ಗಲಭೆಯ ವಿಡಿಯೊಗಳು ಎಲ್ಲೆಡೆ ಹರಿದಾಡಿದವು. ನಾಚಿಕೆಗೇಡು ಎಂದು ಬಹುತೇಕರು ಉದ್ಗರಿಸಿದರು. ಇದು ಸಭ್ಯ ನಡವಳಿಕೆಯಲ್ಲ ಎಂದು ಖಂಡಿಸಿದರು. ಇದೆಲ್ಲ ಸರಿ. ಆದರೆ ಭಾರತದಲ್ಲಿ ಈ ಪ್ರಸಂಗವನ್ನು ಬೇರೆಯದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಲಾಯಿತು. ಸಾಮಾನ್ಯವಾಗಿ ಭಾರತದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಬಿಬಿಸಿ, ರಾಯಿಟರ್ಸ್ ಮೊದಲಾದ ಸುದ್ದಿ ಸಂಸ್ಥೆ, ಚಾನೆಲ್‌ಗಳಲ್ಲಿ ದೊಡ್ಡದಾಗಿ ತೋರಿಸಲಾಗುತ್ತದೆ.

ವರದಿ ಮಾಡಲಾಗುತ್ತದೆ. ಆದರೆ ಈ ವಿಷಯವನ್ನು ಏಕೆ ಮರೆಮಾಚುವಂತೆ ವರ್ತಿಸುತ್ತಿದ್ದಿರಿ ಎಂಬ ಪ್ರಶ್ನೆಗಳು ಕೇಳಿಬಂದವು. ಏಕೆಂದರೆ ಭಾರತದಲ್ಲಿನ ಕೋವಿಡ್ ಪರಿಸ್ಥಿತಿ- ವಿಶೇಷವಾಗಿ ಸಾವಿನ ವರದಿಗಳನ್ನು ಅತಿರಂಜಿತವಾಗಿ ಪ್ರಕಟಿಸಿದ ಆರೋಪ ಅವುಗಳ ಮೇಲಿತ್ತು. ಕುಂಭ ಮೇಳದಲ್ಲಿ ಸಾಮಾಜಿಕ ಅಂತರ
ಮರೆಯಾದ ವಿಷಯವೂ ಇವುಗಳ ಟೀಕೆಗೆ ಅಸ್ತ್ರವಾಗಿತ್ತು. ಆದರೆ ಇಂಗ್ಲೆಂಡ್ ಅಭಿಮಾನಿಗಳ ಈ ದುಂಡಾವರ್ತಿಯನ್ನು ಅಷ್ಟೇ ಪ್ರಮುಖವಾಗಿ ತೋರಿಸಬೇಕಲ್ಲವೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು.

ಯುರೊ ಕಪ್ ಬಿಟ್ಟು ನಾವು ವಿಂಬಲ್ಡನ್‌ಗೆ ಬರೋಣ. ಫುಟ್ಬಾಲ್‌ದು ಒಂದು ರೀತಿಯಾದರೆ ಟೆನ್ನಿಸ್ ಸಭ್ಯರ ಆಟ ಎಂದೇ ಪ್ರಸಿದ್ಧವಾಗಿರುವಂಥದ್ದು. ಅಲ್ಲಿನ
ಪ್ರೇಕ್ಷಕರೂ ಕೂಡ ಅತ್ಯಂತ ಘನತೆ, ಗೌರವ, ಶಿಷ್ಟಾಚಾರ ಪಾಲಕರು ಎಂದೆಲ್ಲ ಭಾವಿಸಲಾಗಿದೆ. ಅವರ ನಡವಳಿಕೆಯೇ ಅಂಥಾದ್ದು. ಈ ಬಾರಿಯ ವಿಂಬಲ್ಡನ್
ಟೂರ್ನಿಯಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಒಂದು ಮ್ಯಾಚ್ ನಡೆಯುತ್ತಿದ್ದಾಗ ಸಂಘಟಕರು ಸ್ವಲ್ಪಹೊತ್ತು ಅದನ್ನು ನಿಲ್ಲಿಸಿ ಒಂದು ಪ್ರಕಟಣೆ ಮಾಡಿದರು. ಅವರು ಹೇಳಿದ್ದು: ’ಮಾನ್ಯರೆ, ಈ ಪಂದ್ಯ ವೀಕ್ಷಣೆಗೆ ನಮ್ಮ ಮಧ್ಯೆ ವಿಶೇಷ ವ್ಯಕ್ತಿಯೊಬ್ಬರು ಬಂದಿದ್ದಾರೆ. ಅವರೇ ಸಾರಾ ಗಿಲ್ಬರ್ಟ್. ಇವರು ಬೇರೆ ಯಾರೂ ಅಲ್ಲ. ಕೋವಿಶೀಲ್ಡ್ ಲಸಿಕೆ ರೂಪಿಸಿದವರು’.

ಇಷ್ಟು ಹೇಳಿದ್ದೇ ತಡ. ಅಲ್ಲಿ ನೆರೆದಿದ್ದ ಪ್ರೆಕ್ಷಕರು ಎದ್ದು ನಿಂತು ಸುದೀರ್ಘ ಕರತಾಡನ ಮಾಡಿದರು. ಇದನ್ನು ನೋಡಿ ಸ್ವತಃ ಗಿಲ್ಬರ್ಟ್ ಒಂದು ಕ್ಷಣ ಸಂಕೋಚದಿಂದ
ಮುದ್ದೆಯಾದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಾವು ಕಂಡ ಅದ್ಭುತ ಮತ್ತು ಪ್ರತಿಭಾವಂತ ಆಟಗಾರ ನೊವಾಕ್ ಜೊಕೊವಿಕ್ ಬಗೆಗೆ ಹೇಳಲೇಬೇಕು. ಕಳೆದ ಒಂದು ದಶಕದ ಅವಽಯಲ್ಲಿ ಟೆನಿಸ್ ಲೋಕವನ್ನು ತ್ರಿವಳಿಗಾದ ರಾಫೆಲ್ ನಡಾಲ್, ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಅವರು ಆಳಿದ್ದಾರೆ. ಆದರೆ ಜೊಕೊ ಅವರೆಲ್ಲರಿಗೂ ಒಂದು ಕೈ ಮೇಲೆ. ಒಂದು ತೂಕ ಹೆಚ್ಚು.

ಏಕೆಂದರೆ ಮೊನ್ನೆಯಷ್ಟೆ ವಿಂಬಲ್ಡನ್ ಟೂರ್ನಿ ಗೆಲ್ಲುವ ಮೂಲಕ ತಮ್ಮ ೨೦ ನೇ ಗ್ರ್ಯಾನ್ ಸ್ಲಾಮ್ ಗಳಿಸಿದ್ದಾರೆ. ಟೆನಿಸ್‌ನಲ್ಲಂತೂ ಆತ ಚಾಂಪಿಯನ್ ಎಂಬುದು
ಸರಿಯೇ. ಆದರೆ ನಿಜಜೀವನದಲ್ಲೂ ಅನೇಕ ವಿಧದಲ್ಲಿ ನೊವಾಕ್ ಚಾಂಪಿಯನ್. ಹಣದಿಂದ ಮಾತ್ರವಲ್ಲ, ಹೃದಯದಿಂದಲೂ ಭಾರಿ ಶ್ರೀಮಂತ. ಅಪಾರ
ಕ್ರೀಡಾಸ್ಫೂರ್ತಿಯುಳ್ಳ ನೈಜ ಕ್ರೀಡಾಪಟು. ಈ ರೀತಿಯ ಅನೇಕ ನಿದರ್ಶನಗಳು ನಮ್ಮ ಮುಂದಿವೆ. 2014ರಲ್ಲಿ ನಡೆದ ಫ್ರೆಂಚ್ ಓಪನ್ ಸಂದರ್ಭ. ಪಂದ್ಯ ವೊಂದು ನಡೆಯುತಿದ್ದಾಗ ಆಟಕ್ಕೆ ಮಳೆ ಅಡ್ಡಿಯಾಯಿತು. ನೊವಾಕ್ ತಮ್ಮ ಸ್ಥಳಕ್ಕೆ ಹೋಗಿ ಕುಳಿತರು. ಬಾಲ್ ಬಾಯ್ ಒಬ್ಬ ಹಿಂದಿನಿಂದ ಓಡಿಬಂದು ಅವರಿಗೆ ಕೊಡೆ ಹಿಡಿದ. ಇದನ್ನು ಗಮನಿಸಿದ ಜೊಕೊ, ಆ ಹುಡುಗನನ್ನು ಕರೆದು ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡರು.

ಆತನ ಕೈಯಿಂದ ಕೊಡೆ ಇಸಿದುಕೊಂಡು ತಾವೇ ಅವನಿಗೆ ಹಿಡಿದರು. ಅಲ್ಲದೆ ಒಂದು ಸಾಫ್ಟ್ ಡ್ರಿಂಕ್ಸ್ ಬಾಟಲಿಯನ್ನು ತೆಗೆದು ಅವನಿಗೆ ಕೊಟ್ಟರು. ಮತ್ತೊಂದನ್ನು ತಾವು ತೆಗೆದುಕೊಂಡು ಆತನಿಗೆ ಚಿಯರ್ಸ್‌ಗೆ ಹೇಳಿ ಇಬ್ಬರೂ ಕುಡಿದರು. ಉಭಯ ಕುಶಲೋಪರಿ ಮಾತನಾಡುತ್ತ ಪ್ರೇಕ್ಷಕರತ್ತ ತಿರುಗಿ, ಅವನಿಗೆ ಚಪ್ಪಾಳೆ ತಟ್ಟಿ ಎಂದು ಸನ್ನೆ ಮಾಡಿದರು. ಆ ಹುಡುಗನಿಗೆ ಪರಮಾಶ್ಚರ್ಯ. ಅದೊಂದು ಹೃದಯಸ್ಪರ್ಶಿ ಘಟನೆ. ಇನ್ನು, ಈ ವರ್ಷ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಎದುರಾಳಿ ಸ್ಟಿಫನೊ ತ್ಸಿತ್ಸಿಪಸ್. ಐದು ಸೆಟ್‌ಗಳವರೆಗೆ ನಡೆದ ಸುದೀರ್ಘ ಹೋರಾಟದ ಬಳಿಕ ಜೊಕೊ ಜಯಗಳಿಸಿದರು. ಆಗ ತಮ್ಮ ಎಂದಿನ ಶೈಲಿಯಲ್ಲಿ ಅವರು ರ‍್ಯಾಕೆಟ್ ಅನ್ನು ಮೇಲಕ್ಕೆ ಚಿಮ್ಮಿಸಲಿಲ್ಲ. ಅಥವಾ ಗೆಲುವಿನ ಜ್ಞಾಪಕಾರ್ಥ ಅದನ್ನು ಕಾದಿರಿಸಿಕೊಳ್ಳಲಿಲ್ಲ.

ಬದಲಾಗಿ ಎಲ್ಲರೂ ನೋಡುತ್ತಿದ್ದಂತೆ ಪ್ರೇಕ್ಷಕರ ಸ್ಟ್ಯಾಂಡ್‌ನತ್ತ ಧಾವಿಸಿದರು. ಅಲ್ಲಿದ್ದ ಒಬ್ಬ ಯುವಕನನ್ನು ಕರೆದು ಆತನಿಗೆ ರ‍್ಯಾಕೆಟ್ ಕೊಟ್ಟುಬಿಟ್ಟರು. ಇದನ್ನು ಕಂಡು ಸ್ವತಃ ಆ ಯುವಕ ಸೇರಿದಂತೆ ಎಲ್ಲರಿಗೂ ಅನಿರೀಕ್ಷಿತ ಅಚ್ಚರಿ. ತಮ್ಮ ಕಣ್ಣುಗಳನ್ನು ತಾವೇ ನಂಬದ ಪರಿಸ್ಥಿತಿ. ಏಕೆಂದರೆ ಜೋಕೊ ಮೊದಲ ಎರಡು ಸೆಟ್
ಗಳನ್ನು ಸೋತಿದ್ದು ಮಾತ್ರವಲ್ಲದೆ ಪಂದ್ಯವನ್ನೆ ಸೋಲುವ ಸಾಧ್ಯತೆ ಇರುವಾಗಲೂ ಆ ಯುವಕ ಜೊಕೊಗೆ ಸತತವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದ. ಅಲ್ಲದೆ ಕೆಲವು
ಟಿಪ್ಸ್‌ಗಳನ್ನು ಸಹ ನೀಡುತ್ತಿದ್ದ. ‘ಇವನ ಈ ಅವಿಚ್ಛಿನ್ನ ಬೆಂಬಲ ನೋಡಿ ನನ್ನ ಮನ ಮತ್ತು ಹೃದಯ ತುಂಬಿ ಬಂದಿತು’ ಎಂದು ಜೋಕೊ ಅನಂತರ ತಿಳಿಸಿದರು.
ಮತ್ತೊಂದು ಸಂದರ್ಭದಲ್ಲಿ ಜೊಕೊವಿಕ್ ಅವರು ಪಂದ್ಯದ ಬಳಿಕ ರ‍್ಯಾಕೆಟ್ ಅನ್ನು ಬಾಲಕಿಯೊಬ್ಬಳಿಗೆ ಕೊಟ್ಟು ಖುಷಿಪಡಿಸಿದ್ದೂ ಇದೆ.

ಇಂಥ ಜೊಕೊವಿಕ್ ಈ ಬಾರಿಯ ಅಮೆರಿಕನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಅನಿರೀಕ್ಷಿತ ಹಾಗು ಅನಿವಾರ್ಯ ಸಮಯದಲ್ಲಿ ಟೂರ್ನಿಯಿಂದ ಹೊರಬೀಳಬೇಕಾ ಯಿತು. ಪಂದ್ಯವೊಂದರಲ್ಲಿ ಎದುರಾಳಿ ಇವರಿಗಿಂತ ಮುಂದಿದ್ದಾಗ ಒಂದು ಹಂತದಲ್ಲಿ ಹತಾಶರಾಗಿ ಹಾಗೂ ತಾಳ್ಮೆ ಕಳೆದುಕೊಂಡ ಜೊಕೊವಿಕ್, ಸಿಟ್ಟಿನಿಂದ ಚೆಂಡಿಗೆ ರ‍್ಯಾಕೆಟ್‌ನಿಂದ ಅಪ್ಪಳಿಸಿದರು. ಇವರ ದುರದೃಷ್ಟ ಎಂಬಂತೆ ಆ ಚೆಂಡು ಪುಟಿಯುತ್ತ ಅಲ್ಲಿದ್ದ ಲೈನ್ ವುಮನ್‌ಗೆ ತಗುಲಿತು. ಆಕೆ ನೋವಿನಿಂದ ನರಳುತ್ತ ಕುಸಿದು ಕುಳಿತಿದ್ದನ್ನು ಕಂಡು ಜೊಕೊ ಅವರತ್ತ ಧಾವಿಸಿ ಉಪಚರಿಸಿದರು. ಅವಳ ಕ್ಷಮೆಯನ್ನೂ ಕೇಳಿದರು. ಆದರೆ ಆಟದ ನಿಯಮದಂತೆ ಜೊಕೊರನ್ನು
ಅನರ್ಹಗೊಳಿಸಲಾಯಿತು. ಅನಂತರ ಜೊಕೊ ತಮ್ಮ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಕಳಿಸಿದರು.

ಇಡಿ ಪ್ರಕರಣ ನನ್ನನ್ನು ವಿಷಾದ ಮತ್ತು ವಿಷಣ್ಣನನ್ನಾಗಿ ಮಾಡಿದೆ. ಈ ಮಹಿಳೆ ಈಗ ಹುಷಾರಾಗಿದ್ದಾರೆ ಎಂಬುದನ್ನು ಕೇಳಿ ನಿರಾಳವಾಗಿದೆ. ಆದರೂ ಇಡೀ
ಪ್ರಕರಣದಿಂದ ನಾನು ಮರೆಯಲಾಗದ ಪಾಠ ಕಲಿತಿದ್ದೇನೆ. ಇಡೀ ಅಹಿತಕರ ಪ್ರಸಂಗಕ್ಕಾಗಿ ನಾನು ಎಲ್ಲರ ಕ್ಷಮೆ ಕೇಳುತ್ತೇನೆ. ನೊವಾಕ್ ಜೊಕೊವಿಕ್ ಅವರು ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಪಟು ಎಂಬುದಂತೂ ನಿಜ. ಸದ್ಯ ನಂಬರ್ ಒನ್ ಆಟಗಾರ. 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಿಂದಿನ ಯುಗೊ ಸ್ಲಾವಿಯ ಹಾಗೂ ಇಂದಿನ ಸರ್ಬಿಯಾದಂಥ ಪುಟ್ಟ ದೇಶದಿಂದ ಸಾಧಾರಣ ಕುಟುಂಬದಲ್ಲಿ ಜನಿಸಿ ಈ ಎತ್ತರಕ್ಕೆ ಏರಿರುವುದು ಸಾಮಾನ್ಯ ಸಾಧನೆ ಏನಲ್ಲ. ಈಗ ಹಣ ಹೆಸರು ಎರಡನ್ನೂ ಹೇರಳವಾಗಿ ಗಳಿಸಿದ್ದಾರೆ. ಆದರೆ ಅವರ ಟೆನಿಸ್ ಪ್ರತಿಭೆ ಮತ್ತು ಸಾಧನೆಯಷ್ಟೆ ಮಾನವೀಯತೆ ಉಳ್ಳವರು ಎಂಬ ಖ್ಯಾತಿ ಇದಕ್ಕಿಂತ ದೊಡ್ಡದು.

ಅವರಲ್ಲೊಬ್ಬ ಹಾಸ್ಯಗಾರನಿದ್ದಾನೆ. ಟೆನಿಸ್ ಕೋರ್ಟ್ ನಲ್ಲಿ ಅನೇಕ ಸಲ ಸಹ ಆಟಗಾರರನ್ನು ಅನುಕರಿಸಿದ್ದುಂಟು. ತಮ್ಮದೇ ಆದ ಪ್ರತಿಷ್ಠಾನದ ಮೂಲಕ ಸಾಕಷ್ಟು ನೆರವು ನೀಡುತ್ತಿದ್ದಾರೆ. ಆಗಾಗ ಕೆಲವು ವಿವಾದಗಳಿಗೆ ಗುರಿಯಾಗಿದ್ದರೂ ಅದನ್ನು ತಕ್ಷಣ ಸರಿಪಡಿಸಿಕೊಂಡಿದ್ದಾರೆ ಅಥವಾ ಅವರ ಉದಾತ್ತ ಗುಣಗಳ ನಡುವೆ ಅವು ಗೌಣ ಎನಿಸಿವೆ. ಅವರು  ಡಿಟೇಶನ್ ಮಾಡುತ್ತಾರೆ. ವೇಗನ್ ಆಹಾರ ಪದ್ಧತಿ ಅನುಸರಿಸುತ್ತಿದ್ದಾರೆ.

ಈ ರೀತಿಯ ಸಭ್ಯ, ಸೌಜನ್ಯದ ನಡವಳಿಕೆ ಜೊಕೊವಿಕ್‌ಗೆ ಸೀಮಿತವಲ್ಲ. ಆದರೆ ಸದ್ಯ ನಂಬರ್ ಒನ್ ಟೆನಿಸ್ ಆಟಗಾರರಾಗಿರುವುದರ ಜತೆಗೆ ಇಷ್ಟೆಲ್ಲ ಸದ್ಗುಣ ಗಳನ್ನು ಮೈಗೂಡಿಸಿಕೊಂಡಿರುವ ಕಾರಣ ಅವರು ವಿಶೇಷವಾಗಿ ಗಮನ ಸೆಳೆಯುತ್ತಾರೆ. ಆ ಕಾರಣಕ್ಕೆ ಮಾದರಿ ಎನಿಸುತ್ತಾರೆ. ಆ ಕಡೆ ತಮ್ಮ ಅಸಭ್ಯ
ನಡವಳಿಕೆಯಿಂದ ಜನರಿಗೆ ಬೇಸರ ತರಿಸುವಂಥ ಕೆಲವು ಘಟನೆಗಳೂ ನಮ್ಮ ಕಣ್ಮುಂದೆ ಇದೆ. ಶಾಂತಿ, ಸೌಹಾರ್ದ ಬೆಸೆಯುವ ಉದ್ದೇಶದ ವಿಶ್ವದ ಬಹುದೊಡ್ಡ
ಕ್ರೀಡಾಕೂಟ ಒಲಿಂಪಿಕ್ಸ್‌ಗೆ ದಿನಗಣನೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇವೆಲ್ಲ ನೆನಪಾದವು.

ನಾಡಿಶಾಸ್ತ್ರ
ಆಟ ಆಡುತ್ತ ಹಾಗೇ ಅಟ್ಟಕ್ಕೇರದಿರಿ
ಜನಪ್ರಿಯತೆ ಪಡೆಯುತ್ತಲೇ ಮೆರೆಯದಿರಿ
ಮೆರೆಯುತ್ತ ಕ್ರೀಡಾಸ್ಫೂರ್ತಿ ಮರೆಯದಿರಿ
ಕ್ರೀಡಾಪಟು ಜನರಿಗೆ ಆಗಬೇಕು ಮಾದರಿ