ಲಂಡನ್ನಲ್ಲಿ ಆಯೋಜಿಸಲಾಗಿರುವ ಪ್ರತಿಷ್ಟಿತ ‘ಗ್ಲೋಬಲ್ ನರ್ಸಿಂಗ್ ಪ್ರಶಸ್ತಿ’ಯ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯ ನರ್ಸ್ಗಳು ಭಾಗವಹಿಸಲಿದ್ದಾರೆ. ಅಂಡಮಾನ್ ನಿಕೋಬಾರ್ನಲ್ಲಿ ಬುಡಕಟ್ಟು ಜನರ ಸೇವೆಯಲ್ಲಿ ನಿರತರಾಗಿರುವ ಶಾಂತಿ ತೆರೇಸಾ ಲಾಕ್ರಾ ಮತ್ತು ಕೇರಳದ ಜಿನ್ಸಿ ಜೆರ್ರಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.
ಗ್ಲೋಬಲ್ ನರ್ಸಿಂಗ್ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಜಿನ್ಸಿ ಜೆರ್ರಿ ಮತ್ತು ತೆರೇಸಾ ಲಾಕ್ರಾ.ದುಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಖಾಸಗಿ ಆರೋಗ್ಯ ಸೇವಾ ಸಂಸ್ಥೆ ಅಸ್ತೇರ್ ಡಿ.ಎಂ ಹೆಲ್ತ್ಕೇರ್, ವಿಶ್ವದಾದ್ಯಂತ ಸಾಧಕ ಶುಶ್ರೂಷಕಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿ ಮೊತ್ತ 2.5 ಲಕ್ಷ ಡಾಲರ್ ಅಂದರೆ ಭಾರತದ ರೂಪಾಯಿಗಳಲ್ಲಿ 2.05 ಕೋಟಿ ರೂ ಆಗಿದೆ. ಕಾರ್ಯಕ್ರಮವು ಲಂಡನ್ನಲ್ಲಿ ನಡೆಯಲಿದೆ.
ಆಧುನಿಕ ಶುಶ್ರೂಷೆಯ ಸ್ಥಾಪಕರೆಂದೇ ಕರೆಯಲ್ಪಡುವ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಸ್ಮರಿಸಬೇಕು. ಇವರ ಜನ್ಮದಿನ ಮೇ 12. ಕ್ರಿಮಿಯಾ ಯುದ್ಧದ ಸಮಯದಲ್ಲಿ ನರ್ಸ್ಗಳ ವ್ಯವಸ್ಥಾಪಕರಾಗಿ, ತರಬೇತುದಾರಳಾಗಿ, ಗಾಯಾಳು ಬ್ರಿಟಿಷ್ ಸೈನಿಕರಿಗೆ ದಾದಿಯಾಗಿ ನೀಡಿದ ಕೊಡುಗೆ ಅಪಾರ. ಯಾವುದೇ ಫಲಾಪೇಕ್ಷೆ ಇಲ್ಲದ ಸೇವೆಯಿಂದ ನೈಟಿಂಗೇಲ್ ಹೆಚ್ಚು ಖ್ಯಾತಿ ಗಳಿಸಿದರು.
1974 ರಲ್ಲಿ, ಯುಎಸ್ ಅಧ್ಯಕ್ಷ ಡೇವಿಡ್ ಡಿ. ಐಸೆನ್‌ಹೋವರ್ ಮೇ 12 ದಿನವನ್ನು ಅಧಿಕೃತವಾಗಿ ಅಂತಾರಾಷ್ಟ್ರೀಯ ನರ್ಸ್ ದಿನ ಎಂದು ಘೋಷಿಸಿದರು.
ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ‘ದಿ ಲೇಡಿ ವಿತ್ ದಿ ಲ್ಯಾಂಪ್’ ಎಂದು ಕರೆಯುತ್ತಾರೆ. ಕ್ರಿಮಿಯಾ ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರನ್ನು ರಾತ್ರಿಯ ಸಮಯದಲ್ಲಿ ಹಾಸಿಗೆಗಳ ನಡುವೆ ಕೈಯಲ್ಲಿ ದೀಪ ಹಿಡಿದುಕೊಂಡು ರೋಗಿಗಳನ್ನು ಆರೈಕೆ ಮಾಡಿದ್ದರು. ಇದರಿಂದಾಗಿ ಇವರಿಗೆ ಈ ಅಡ್ಡ ಹೆಸರು ಬಂದಿದೆ.