Friday, 20th September 2024

HD Kumaraswamy: ಮಾನವ ಸರಪಳಿಯಿಂದ ಪ್ರಜಾಪ್ರಭುತ್ವ ಉಳಿಯಲ್ಲ, ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ಎಚ್‌ಡಿಕೆ

HD Kumaraswamy

ಬೆಂಗಳೂರು: ಮಾನವ ಸರಪಳಿ ಮಾಡಿದರೆ ಪ್ರಜಾಪ್ರಭುತ್ವ (Democracy) ಉಳಿಯುತ್ತದೆಯೇ ಎಂದು ಕಾಂಗ್ರೆಸ್‌ (Congress) ಸರಕಾರವನ್ನು ಪ್ರಶ್ನಿಸಿರುವ ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ (Central Minister HD Kumaraswamy) ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಿಸಿ ನೈಜ ಪ್ರಜಾಪ್ರಭುತ್ವ ಸರಪಳಿಯನ್ನು ಗಟ್ಟಿಗೊಳಿಸಿ ಎಂದು ಪಂಥಾಹ್ವಾನ ನೀಡಿದ್ದಾರೆ.

ಮಾನವ ಸರಪಳಿ ನೆಪದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರಕಾರಕ್ಕೆ ಪ್ರಜಾಪ್ರಭುತ್ವ ಉಳಿಸುವ ಕಾಳಜಿಯೇ ಇಲ್ಲ. ಇದ್ದರೆ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ ಎಂದು ತಾಕೀತು ಮಾಡಿದರು.

ಅಧಿಕಾರಕ್ಕೇ ಬಂದಾಗಿಂದಲೂ ಪ್ರಜಾಪ್ರಭುತ್ವದ ಸರಪಳಿಯ ತಳಮಟ್ಟದ ಆಧಾರಸ್ತಂಭಗಳಾದ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸಿಲ್ಲ, ಯಾಕೆ? ಸ್ಥಳೀಯ ಸರಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರೇ, ನೀವು ಅಧಿಕಾರಕ್ಕೆ ಬಂದು ವರ್ಷದ ಮೇಲೆ 4 ತಿಂಗಳಾಯಿತು. ಈವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ನಿಮ್ಮ ಪ್ರಜಾಪ್ರಭುತ್ವ, ಜನಪರತೆ, ಜಾಹೀರಾತುಗಳಲ್ಲಷ್ಟೆ ಝಗಮಗಿಸುತ್ತಿದೆ! ನಿಮ್ಮದು ಪ್ರಚಾರ ಜಾಸ್ತಿ, ಆಚಾರ ನಾಸ್ತಿ ಎಂದಿದ್ದಾರೆ.

ವಿಚ್ಚಿದ್ರಕಾರಿ ಶಕ್ತಿಗಳನ್ನು ದಮನ ಮಾಡುವುದು ಎಂದರೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ತಿಲಾಂಜಲಿ ಇಡುವುದೇ? ಮಾನವ ಸರಪಳಿಯಿಂದ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಜನರ ತೆರಿಗೆ ಹಣದ ಪೋಲು ಪ್ರಜಾಪ್ರಭುತ್ವಕ್ಕೆ ಭೂಷಣವೇ? ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಮೊದಲು ಸ್ಥಳೀಯ ಸಂಸ್ಥೆ ಚುನಾವಣೆ ಘೋಷಿಸಿ. ನೈಜ ಪ್ರಜಾಪ್ರಭುತ್ವದ ಸರಪಳಿಯನ್ನು ಗಟ್ಟಿಗೊಳಿಸಿ ಎಂದು ತಾಕೀತು ಮಾಡಿದರು.

ಇದನ್ನೂ ಓದಿ: Mandya Violence: ಮಂಡ್ಯದಲ್ಲಿ ಪೆಟ್ರೋಲ್‌ ಬಾಂಬ್‌, ತಲ್ವಾರ್! ಏನ್ರೀ ಇದೆಲ್ಲಾ ಎಂದು ಎಚ್‌ಡಿ ಕುಮಾರಸ್ವಾಮಿ ಗರಂ