ಬೆಂಗಳೂರು: ಜನಪದ ಎಂದರೆ ಜ್ಞಾನಪದ, ಒಳಹೊಕ್ಕು ನೋಡಿದರೆ ಅದು ವಿಜ್ಞಾನ ಪದ, ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ ಅದು ವಿಚಾರ ಪದ, ಸಂಸಾರ ಎಂದರೆ ಸಂಗೀತ, ಸಾಹಿತ್ಯ, ರಸಿಕತೆ. ಹೀಗೆ ಜೀವನೋತ್ಸಾಹದ ಕವಿತಾ ಪ್ರಪಂಚ ತೋರಿದರು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಮಾಮ.
ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಕವಿತೆಗಳ ಮೂಲಕ ಕೇಳುಗರ ಮನ ಗೆದ್ದರು. ದಾಂಪತ್ಯ, ಪ್ರೇಮಿಗಳು, ಪತಿ-ಪತ್ನಿಯರ ಜಗಳ, ರಾಜಕಾರಣಿಗಳು ಪಾಲಿಸುವ ಮೌಢ್ಯ.. ಹೀಗೆ ಎಲ್ಲ ವಿಚಾರಗಳ ಬಗ್ಗೆ ಕಣ್ಣನ್ ಮಾತನಾಡಿದರು.
ಸುಖವಿಲ್ಲವೆಂದು ಇಂದು ಚಿಂತಿಸಬೇಡ, ನಾಳೆಯನು ಇಂದಿನಲಿ ಬೆರೆಸಲೇಕೆ? ಎಂಬ ಕವಿಯೊಬ್ಬರ ಮಾತಿನಂತೆ ಬದುಕಿನಲ್ಲಿ ನಾಳೆಯನ್ನು ನೆನೆದು ಈ ಕ್ಷಣವನ್ನು ಚಿಂತಿಸುವುದು ಸರಿಯಲ್ಲ. ಜೀವನದಲ್ಲಿ ಎಲ್ಲವನ್ನು ಸಮಾನವಾಗಿ ಸ್ವೀಕರಿಸಬೇಕು. ಜೀವನೋತ್ಸಾಹ ಎಂಬುದು ಸಂಸಾರವಿದ್ದಂತೆ ಎಂದರು ಹಿರೇಮಗಳೂರು ಕಣ್ಣನ್ ಹೇಳಿದರು.
ಮಂತ್ರಿಯೊಬ್ಬರು ನನ್ನನ್ನು ಒಂದು ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಿದರು, ನೀವು ಮಂತ್ರಿಸಿದರೆ ಮಾವಿನ ಹಣ್ಣು ಉದುರುತ್ತಾ ಅಂದರು. ಆದರೆ ನಾನು ಹೇಳಿದೆ ಮಂತ್ರಿ ಮಾವಿನಮರ ಗಮನಿಸಿದರೆ ಮರವೆ ಇರುತ್ತಾ ಎಂದೆ. ಪುಡಾರಿ, ಪೂಜಾರಿ ಜುಗಲ್ ಬಂದಿ ಕುರಿತು ಹೇಳಿದೆ. ರಾಜಕೀಯಕ್ಕೆ ವಿಶ್ಲೇಷಣೆಯನ್ನು ವಿದ್ವಾಂಸದಲ್ಲಿ ತಿಳಿಸಿ ಎಂದರು. ಆಗ ನಾನು ರಾವಣ, ಜರಾಸಂದ, ಕೀಚಕ, ಯಮ ನಾಲ್ಕು ಹೆಸರು ಹೊಂದಿರುವ ಕೆಸರೆ ರಾಜಕೀಯ ಎಂದೆ ಎಂದರು. ಸಾಧನೆ ಮೂಲಕ ಜೀವನೋತ್ಸಾಹ ಕಾಣಬೇಕೇ ಹೊರೆತು ವೇದನೆಗಳ ಮೂಲಕ ಅಲ್ಲ.
ನಡೆದು ಹೋದ ಸಂಗತಿಗಳನ್ನು ಮರೆತರೆ ಉತ್ತಮ ಜೀವನ ಸಾಗಿಸಲು ಸಾಧ್ಯ. ಮನಸು ಮಲಿನವಾದರೆ ಮನುಷ್ಯನೆ ಮಲಿನವಾದಂತೆ. ಬದುಕಿನಲ್ಲಿ ವಿಜ್ಞಾನದಂಥ ಬುದ್ದಿ ತತ್ವಜ್ಞಾನದಂತ ಮನಸು ಇರಬೇಕು. ಬದುಕನ್ನು ಗೌರವಿಸಬೇಕು. ಮಡದಿಯ ಮನಸು ಅರ್ಥ ಮಾಡಿಕೊಂಡಿರೆ ಉತ್ತಮ ಸಂಸಾರ ಜೀವನ ಸಾಗಿಸಬಹುದು ಎಂದರು. ಪುರದ ಹಿತ ಬಯಸುವವನು ಪುರೋಹಿತ. ಜೀವನೋತ್ಸಾಹ ಬದುಕಿನ ಸಂಸ್ಕೃತಿಯ ಮೂಲಕ ನೋಡುತ್ತಾ ಹೋದರೆ ಉಡುಗೆ- ತೊಡುಗೆ ರೂಪಮಯವಾಗುತ್ತದೆ.
ಮಾತಿಗೆ ಮೂಲ ಚಿಂತನೆ ಬೇಕು ಎಂದು ಹೇಳಿದ ಅವರು,’ ಮಾರು ಚಿಂತನೆ ಮೂಲ ಹೊಸತು ಕಲ್ಪನೆ, ಗ್ರಾಹ ಆದ್ಯತೆಯ ಪ್ರತಿರೂಪ ಪದವರ್ಣದಲ್ಲಿ ಲಲಿತ ರೀತಿಯಲ್ಲಿ ನೆಲೆಸುವ ಶಬ್ಧ ವಿನ್ಯಾಸ ನುಡಿ ಚಿತ್ತದನುಭುಯಿ ಮುದ್ದುರಾಮ…ಲೋಕದಲ್ಲಿ ಬದುಕೊಂದು ಭಾವ ಸಮ್ಮಿಲನ ಅಲೆ ಅಲೆಯ ಚೆಲುವಿನಲ್ಲಿ ಇನಿಯಾದ ಎದೆಯ ಬೆಳಕು ಮನಭಾವ ಮಂಜರಿಯೋ ಮುದ್ದುರಾಮ ಎಂಬ ಕವಿತೆ ನುಡಿದರು. ಕನ್ನಡ ಚೆನ್ನುಡಿ.. ಕನ್ನಡಿ ಬೆನ್ನುಡಿ…ಅದು ಎದೆಯೊಳಗೆ ಬಿಡಿ.
ಅದು ಕೈಪಿಡಿಯಾಗಿ ಕರೆದೊಯ್ಯುತ್ತದೆ. ಮಾತು ಜಗತ್ತಿನ ಸ್ವತ್ತು, ಬೆಳಕು. ಮನಸು, ಮಾತುಗಳೆರೆಡು ಒಂದೇ ಲೋಕದ ವಸ್ತು. ಮನವ ಅರಳಿಸುವ ಕಲೆ ಮಾತಿಗುಂಟು. ಮನಸು ಎನ್ನುವುದು ಮನೆಯ ಒಡತಿ. ಮಾತು ಮನೆಯ ಒಡೆಯ. ಒಂದು ಮನೆಯಲ್ಲಿ ಕವಿತೆಗಳನ್ನು ಒಡತಿ ಹಂಚಿಕೊಳ್ಳಲು ಸಾಧ್ಯವುಂಟು ಎಂದು ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್ ಬಗ್ಗೆ ಕಣ್ಣನ್ ಬಣ್ಣನೆ
ಕ್ಲಬ್ ಎಂದೊಡನೆ ಕುಡಿ, ತದನಂತರ ನಡೆ ಅನಂತರ ಹೊರಗಡೆ ಬಿಡಿ ಎಂಬುದು. ಅದು ಆ ರೀತಿಯ ವೈನ್ ಸೆಂಟರ್. ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಮಬ್ಬು- ತಬ್ಬು ಇಲ್ಲ, ಕಿವಿಗೆ ಹಬ್ಬು ಇಲ್ಲಿ. ವಿಶ್ವವಾಣಿ ಕ್ಲಬ್ ಕನ್ನಡದ ಕಂಪಿಸುವ ಸೊಂಪು. ಪ್ರತಿಭೆಗಳನ್ನು ಗುರುತಿಸಿ ಕನ್ನಡ ಕಟ್ಟುವ ಕೆಲಸ ನಡೆಯುತ್ತಿದೆ. ಉಳ್ಳವರು ರೋಟರಿ ಕ್ಲಬ್ ಸೇರುವರಯ್ಯ, ಅಲ್ಲಿಯೂ ಸಲ್ಲದವರು ಲಯ ಕ್ಲಬ್ ಸೇರುವರಯ್ಯ, ಎಲ್ಲಿಯೂ ಸಲ್ಲದವರು ಜೆಸಿ ಕ್ಲಬ್ ಸೇರುವರಯ್ಯ ಎಲ್ಲ ಕಡೆ ಸಲ್ಲುವವರು ವಿಶ್ವವಾಣಿ ಕ್ಲಬ್ ಸೇರುವರಯ್ಯ…
ವಿಶ್ವೇಶ್ವರ ಭಟ್ ಅವರ ಕ್ಲಬ್‌ಹೌಸ್ ತೆರೆದ ಬಾಗಿಲು. ಕಿವಿಯಲ್ಲಿ ಕೇಳಬಹುದು. ಅದನ್ನು ಜೀವನೋತ್ಸವಕ್ಕೆ ಬಿಡುವುದು, ಹೊಸದೊಂದು ಆಲೋಚನೆಗೆ ವೇದಿಕೆ. ಜಗತ್ತಿನಲ್ಲಿ ಕರೋನಾ ಸೋಂಕಿದೆ. ಆದರೆ ಕ್ಲಬ್‌ಹೌಸ್ ಕನ್ನಡದ ಸೋಂಕು ಹರಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು ಕಣ್ಣನ್ ಮಾಮ.
ದೇವಾಲಯದ ಗೋಡೆ ಮೇಲೆ ಕನ್ನಡ ನುಡಿ…
ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾಫಿನಾಡು ಚಿಕ್ಕಮಗಳೂರು ತನ್ನದೇ ಆದ ಛಾಪು ಮೂಡಿಸಿದೆ. ಇಲ್ಲಿಂದ ಐದಾರು ಕಿ.ಮೀ. ದೂರದ ಶ್ರೀ
ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಕೋದಂಡರಾಮನಿಗೆ ಕನ್ನಡದ ಪೂಜಾ ಕೈಂಕರ್ಯಗಳನ್ನು ನೆರವೇರಿಸೋ ಮೂಲಕ ಕಾಫಿನಾಡು ತನ್ನದೇ ಆದ ಖ್ಯಾತಿ ಗಳಿಸಿದೆ. ದೇವಾಲಯಗಳಲ್ಲಿ ಸಂಸ್ಕೃತದಲ್ಲಿ ಮಂತ್ರ ಪಠಣ ಮಾಡೋದು ಸಾಮಾನ್ಯ. ಆದರೆ, ಈ ದೇವಾಲಯದ ಅರ್ಚಕರಾಗಿರೋ ಹಿರೇಮಗಳೂರು ಕಣ್ಣನ್, ಕನ್ನಡದ ಮಂತ್ರಗಳನ್ನು ಪಠಿಸುತ್ತಾರೆ. ನಾಲ್ಕು ದಶಕಗಳ ಹಿಂದೆ ಚಿಕ್ಕಮಗಳೂರಿನ ಹಿರೇಮಗಳೂರಿಗೆ ಆಗಮಿಸಿದ ಕಣ್ಣನ್ ತಂದೆ, ಕನ್ನಡ ನೆಲದಲ್ಲಿ ಕನ್ನಡವೇ ಕಣ್ಮರೆಯಾಗುತ್ತಿರುವ ಕಾಲದಲ್ಲಿ ಏಕೆ ಕನ್ನಡವನ್ನು ಉಳಿಸಬಾರದೆಂದು ನಿತ್ಯವೂ ಕೋದಂಡರಾಮನಿಗೆ ಕನ್ನಡದಲ್ಲಿ ಪೂಜೆ ಸಲ್ಲಿಸಲು ಪ್ರಾರಂಭಿಸಿ ದ್ದರು.
ಅಪ್ಪನ ಹಾದಿಯನ್ನೇ ಮೈಗೂಡಿಸಿಕೊಂಡ ಕಣ್ಣನ್ ಕೂಡ ಅಂದಿನಿಂದಲೂ ಕನ್ನಡದಲ್ಲಿ ಪೂಜೆ ನೆರವೇರಿಸುವುದನ್ನು ಅಭ್ಯಾಸ ಮಾಡಿಕೊಂಡು, ಕನ್ನಡದ ನೆಲದ ಕನ್ನಡದ ಉಳಿವಿಗೆ ಶ್ರಮಿಸುತ್ತಿzರೆ. ದೇಶ ವಿದೇಶಗಳಿಂದಲೂ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ವಿಶ್ವದ ನಾನಾ ಭಾಗಗಳಿಂದ ಬರೋ ವಿದೇಶಿಗರಿಗೆ ಸಂಸ್ಕೃತ ಹೇಳಿಕೊಡೋ ಕಣ್ಣನ್, ಕೋದಂಡರಾಮನಿಗೆ ಕನ್ನಡದ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ. ಇಲ್ಲಿಗೆ ಬರೋ ಭಕ್ತರಿಗೆ ಕನ್ನಡ ನಾಡು, ನುಡಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಈ ದೇವಾಲಯ ಮಾಡುತ್ತಿದೆ. ಆಂಗ್ಲ ಭಾಷೆಯ ವ್ಯಾಮೋಹದ ನಡುವೆ ಮರೆಯಾಗುತ್ತಿರೋ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿರುವ ಕಣ್ಣನ್ ಅವರ ಭಾಷಾ ಪ್ರೇಮ ನಿಜಕ್ಕೂ ಶ್ಲಾಘನೀಯ.
ಸಂಸಾರದಲ್ಲಿ ಜೀವನೋತ್ಸಾಹ
ಜೀವನೋತ್ಸಾಹವೆಂದರೆ ಸಂ-ಸಂಗೀತ ಸಾ-ಸಾಹಿತ್ಯ ರ-ರಸಿಕತೆ. ರಸಿಕತೆ ಒಳಗೆ ಸಂಗೀತ ಎಂದರೆ ಹೆಣ್ಣು. ಕಾಫಿ ಮಾಡಿಕೊಟ್ಟ ಹೆಣ್ಣು ಗಂಡನನ್ನು ಕರೆಯರೀ… ಎನ್ನುತ್ತಾರೆ. ಇದು ಸಂಗೀತ ಅಂತಾ ಹೇಳಿಕೊಂಡು ಸಂಗೀತದಲ್ಲಿ ಗಂಡ ಆಕರ್ಷಿಸುವ ಮನಸು ಲೇ… ಎಂದು ಕರೆದ ಕೂಡಲೆ ಎರಡು ಅಕ್ಷರಗಳು ಒಂದಾದಾಗ ರಿಲೇ ಆಗುತ್ತದೆ. ತನ್ಮೂಲಕ ರಿಲೆ ಮ್ಯಾರಾಥನ್ ಓಟದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದ ಅವರು, ಶುಕ್ಲಾಂ-ಬರಧರಂ ಶ್ಲೋಕ ಇದಕ್ಕೆ ಅರ್ಥೈಸಿ ಶುಕ್ಲ- ಕಾಫಿ, ಅಂಬರ-ಫಿಲ್ಟರ್, ವಿಷ್ಣು- ಹಾಲು, ಮೂರು ಸೇರಿದರೆ ಶಶಿವರ್ಣ-ಪ್ರಸನ್ನ, ಇಬ್ಬರ ಮನಸು ವದನ, ಚತುರ್ಭುಜ-ಕೈಗಳು, ದ್ಯಾಯೇತ್- ಒಳಗೆ ಬಿಟ್ಟರೆ ಸೊಗಸು ಎಂದು ಅವರು ವಿವರಿಸಿದರು.
ಕನ್ನಡದ ಒಬಾಮ ನೆನಪಿಸಿಕೊಂಡರೆ ಕನ್ನಡಕ್ಕೆ ಉಳಿವು: ಅಮೆರಿಕ ಮಾಜಿ ಅಧ್ಯಕ್ಷ ಒಬಾಮ ನೆನಪು ಮಾಡಿಕೊಳ್ಳಬೇಕು. ಆಗ ಕನ್ನಡ ಉಳಿಸಲು ಸಾಧ್ಯ.. ಕನ್ನಡ ಒಂದು ಒಬಮ. ಕನ್ನಡಕ್ಕೆ ಮೂರು ಅಕ್ಷರ. ಓ-ಓದುವುದು, ಬ-ಬರೆಯುವುದು, ಮಾ-ಮಾತನಾಡುವುದು ಎಂದರ್ಥ ಎಂದು ವಿವರಿಸಿದರು.
ಕಣ್ಣನ್ ಮಾಮ ಅವರ ವಿದ್ವತ್ ಬಹಳ ದೊಡ್ಡದು. ಆದರೆ ನನಗೆ ಅವರ ಬದುಕಿನ ಅರ್ಥ ದೊಡ್ಡದು. ಬಡತನವನ್ನು ಒಪ್ಪಿಕೊಂಡವರು. ಅವರು ಮಾತನಾಡುವ
ಜೀವನೋತ್ಸಾಹ ತುಂಬಾ ಪರಿಣಾಮಕಾರಿ. ನನ್ನ ಹೃದಯದಲ್ಲಿ ಮೈಲಿಗೆ ತೊಳೆಯಲು ಅವಿತಿದ್ದಾರೆ ಕಣ್ಣನ್ ಮಾಮ.
– ಪ್ರೊ.ಕೃಷ್ಣೇಗೌಡ
ಕನ್ನಡದ ಪ್ರೀತಿ ಕಣ್ಣನ್ ಮನದಲ್ಲಿ….
ಕನ್ನಡದ ಮೇಲಿನ ಪ್ರೀತಿ, ಅಭಿಮಾನದಿಂದ ಮೆರೆಯುತ್ತಿರುವ ಹಿರೇಮಗಳೂರು ಕಣ್ಣನ್ ಚಿಕ್ಕಮಗಳೂರಿನ ಕೋದಂಡ ರಾಮಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಕನ್ನಡದ ಪೂಜೆ ದೇವಾಲಯದ ಪ್ರಾಂಗಣದಲ್ಲಿ ಕನ್ನಡದ ನುಡಿಗಟ್ಟು, ಭಾಷೆಯ ಮಹತ್ವ ಸಾರುವ ಸಾಲುಗಳು ದೇವಾಲಯಕ್ಕೆ ಬರುವ ಭಕ್ತರಲ್ಲಿ ಕನ್ನಡ ಭಾಷೆಯ ಸಾರ, ಸತ್, ಪ್ರಸಿದ್ಧ ಕವಿಗಳ ಪರಿಚಯಿಸುವ ಕೆಲಸ ಕನ್ನಡದಲ್ಲಿಯೇ ದೇವರನ್ನು ಪೂಜಿಸುವ ಮೂಲಕ ಕನ್ನಡವನ್ನು ಕಟ್ಟಿ ಬೆಳೆಸುವ ಕಾಯಕ ನೂರಾರು ಹರಟೆ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಮುನ್ನುಡಿ