Friday, 20th September 2024

ಗೆಲ್ಲುವ ಮೊದಲೇ ತಾನು ಗೆದ್ದೆ ಎನ್ನುವುದುಂಟಾ ?

ಶಶಾಂಕಣ

ಶಶಿಧರ ಹಾಲಾಡಿ

ಪ್ರಮುಖ ದೇಶವೊಂದರ ಪ್ರಧಾನಿಯೋ, ಅಧ್ಯಕ್ಷನೋ ಸುಳ್ಳು ಹೇಳಿ ಜಯಿಸಿಕೊಳ್ಳಲು ಸಾಧ್ಯವೆ? ಅಸಲು, ಅಂತಹ ಗುರುತರಹುದ್ದೆಯಲ್ಲಿರುವವನೊಬ್ಬ ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುವುದು ಸಮಂಜ ಸವೆ? ಮತಗಳ ಎಣಿಕೆ ನಡೆಯುತ್ತಿದ್ದು, ಸ್ಪಷ್ಟ ಬಹುಮತ ಘೋಷಣೆಯಾಗದೇ ಇದ್ದರೂ, ಫಲಿತಾಂಶ ವನ್ನು ಹೇಳಿಕೊಳ್ಳಲು ಸಾಧ್ಯವೆ? ಅಮೆರಿಕದ ಅಧ್ಯಕ್ಷರು ನಿನ್ನೆೆ ಅಂತಹದ್ದೊಂದು ದೊಡ್ಡ ಸುಳ್ಳು ಹೇಳಿದ್ದಾರೆ.

‘ನಾನು ಗೆದ್ದಿದ್ದೇನೆ’ ಎಂದು ತನಗೆ ತಾನೇ ಘೋಷಿಸಿಕೊಂಡ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಹುಂಬತನ ವನ್ನು ಏನೆಂದು ಕರೆಯಬಹುದು? ಇತ್ತ ಮುನ್ನಡೆಯ ಅಂಕಿಸಂಖ್ಯೆಗಳಲ್ಲಿ, ಟ್ರಂಪ್‌ಗಿಂತ ಎದುರಾಳಿ ಬಿಡೆನ್ ಹೆಚ್ಚು ಕ್ಷೇತ್ರಗಳಲ್ಲಿ ಮುಂದಿದ್ದಾರೆ. ‘ಗೆಲುವು ನಮ್ಮದೇ’ ಎಂದು ಟ್ರಂಪ್ ಘೋಷಣೆ ಮಾಡಿದಾಗ, ಎಲ್ಲಾ
ಕ್ಷೇತ್ರಗಳ ಮತ ಎಣಿಕೆ ಮುಗಿದಿರಲಿಲ್ಲ. ಅಗತ್ಯ ಎನಿಸುವ 270 ಮತಗಳ (ಸ್ಥಾನಗಳ) ಮ್ಯಾಜಿಕ್ ಸಂಖ್ಯೆಯನ್ನು
ಟ್ರಂಪ್ ಪಡೆದಿರಲಿಲ್ಲ. ಅವರು ಹೇಳಿಕೊಂಡಾಗ ಅವರಿಗೆ ಸುಮಾರು 210 ಮತಗಳು ದೊರಕಿದ್ದವು. ಬೈಡನ್
ಅದಾಗಲೇ 240 ಪ್ಲಸ್ ಮತಗಳ ಮುನ್ನಡೆ ಸಾಧಿಸಿದ್ದರು.

ಇಂತಹ ಸೂಕ್ಷ್ಮ ಸಂದರ್ಭದಲ್ಲಿ, ಟ್ರಂಪ್ ಏಕಾಏಕಿ, ಎಲ್ಲರ ಎದುರಿಗೆ ಬಂದು ‘ನಾನು ಗೆದ್ದಿದ್ದೇನೆ’ ಎಂದು ಸುಳ್ಳು ಹೇಳುವುದೆಂದರೆ, ಅದೆಂಥ ಆಭಾಸ! ಟ್ರಂಪ್ ಆ ರೀತಿ ತನಗೆ ತಾನೇ ಘೊಷಿಸಿಕೊಂಡ ತಕ್ಷಣ, ವಿವಿಧ ಟಿವಿ ಉದ್ಘೋಷಕರು ಮಧ್ಯೆ ಪ್ರವೇಶಿಸಿ, ‘ಇಲ್ಲ, ಇನ್ನೂ ಫಲಿತಾಂಶ ಘೋಷಣೆಯಾಗಿಲ್ಲ, ಮತ ಎಣಿಕೆ ನಡೆಯುತ್ತಿದೆ, ಈಗಲೇ ಆ ರೀತಿ ಹೇಳಿದರೆ ಜನರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ’ ಎಂದು ಹೇಳಬೇಕಾ ಯಿತು. ರಿಪಬ್ಲಿಕನ್ ಪಕ್ಷದ ಇತರ ಕೆಲವು ನಾಯಕರು, ತಮ್ಮ ಅಧ್ಯಕ್ಷ ಹಾಗೆ ಹೇಳಿದ್ದು ಸರಿಯಲ್ಲ ಎಂದು ಟೀಕೆಯನ್ನೂ ಮಾಡಿದರು.

ಅಮೆರಿಕದಲ್ಲಿ ಹೀಗೇಕೆ ನಡೆಯುತ್ತಿದೆ? ಆ ಬೃಹತ್ ಶಕ್ತಿಶಾಲಿ ದೇಶ ಎತ್ತ ಸಾಗುತ್ತಿದೆ! ದೇಶದ ಅಧ್ಯಕ್ಷರಾದವರು
ಸಾರ್ವಜನಿಕವಾಗಿ ಈ ರೀತಿಯ ತಪ್ಪು ಮಾಹಿತಿ ನೀಡುವಂಥ ಹೇಳಿಕೆ ನೀಡಿ, ಫಲಿತಾಂಶ ಘೋಷಣೆಯಾಗುವ ಮೊದಲೇ, ಮತ ಎಣಿಕೆ ನಡೆಯುತ್ತಿರುವಾಗಲೇ, ಎದುರಾಳಿ ಡೆಮೊಕ್ರಾಟ್ ಪಕ್ಷದ ಬೈಡನ್ ಹಲವು ಮತ ಗಳಿಂದ ಮುಂದಿದ್ದಾರೆ ಎಂದು ಮಾಧ್ಯಮಗಳು ಹೇಳುತ್ತಿದ್ದರೂ, ಅಧ್ಯಕ್ಷರು ಈ ರೀತಿ ತಪ್ಪು ದಾರಿ ಗೆಳೆಯುವ ಧಾರ್ಷ್ಟ್ಯ ತೋರುತ್ತಿದ್ದಾರೆ ಎಂದರೆ, ಅದು ಆ ದೇಶದ ಸಾಮಾಜಿಕ ಟೊಳ್ಳನ್ನು ತೋರಿಸುತ್ತಿದೆ.

ಟ್ರಂಪ್ ಹಾಲಿ ಅಧ್ಯಕ್ಷ ನಿಜ, ಈ ಬಾರಿಯ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವುದೂ ನಿಜ, ಹಾಗೆಂದ ಮಾತ್ರಕ್ಕೆ ನಾಗರಿಕರು ಎದುರಾಳಿಗೆ ಮತ ಚಲಾಯಿಸಲೇ ಬಾರದೆ? ಎದುರಾಳಿ ಬೈಡನ್ ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ, ‘ನಾನೇ ಗೆದ್ದಿರುವುದು, ಇನ್ನು ಮತ ಎಣಿಕೆ ಮುಂದುವರಿದರೆ ಅದು ದೊಡ್ಡ ಮೋಸ, ಆದ್ದರಿಂದ ಈ ಕ್ಷಣ ಮತ ಎಣಿಕೆ ನಿಲ್ಲಬೇಕು’ ಎಂದಿರುವ ಆ ಅಧ್ಯಕ್ಷ, ಅದೆಂತಹ ಬೌದ್ಧಿಕ ದಿವಾಳಿತನಕ್ಕೆ ಒಳಗಾಗಿರಬಹುದು? ಅಮೆರಿಕದಂತಹ ಪ್ರಮುಖ, ಶಕ್ತಿಶಾಲಿ, ವಿಶ್ವದ ಎಲ್ಲಾ
ವಿದ್ಯಮಾನಗಳನ್ನು ನಿಯಂತ್ರಿಸುತ್ತಿರುವ ದೇಶದ ಅಧ್ಯಕ್ಷನು ಈ ರೀತಿ ಜನರನ್ನು ತಪ್ಪುದಾರಿಗೆಳೆಯುವ ಸುಳ್ಳನ್ನು ಸಾರ್ವಜನಿಕವಾಗಿ ಹೇಳುವುದೆಂದರೆ, ಒಂದು ರೀತಿಯಲ್ಲಿ ಅದು ಇಡೀ ಆ ದೇಶದ ಬೌದ್ಧಿಕ ದಿವಾಳಿತನವನ್ನೂ ಬಿಂಬಿಸುವಂತಿದೆ.

ಹಾಲಿ ಅಧ್ಯಕ್ಷ ಸ್ಥಾನದಲ್ಲಿರುವ ಟ್ರಂಪ್, ಅಷ್ಟು ಮಾತ್ರ ಹೇಳಿ ಸುಮ್ಮನಾಗಲಿಲ್ಲ. ‘ನಾನು ಈಗಾಗಲೇ ಗೆದ್ದಿ ದ್ದೇನೆ. ಆದರೆ ಅಂಚೆಯ ಮೂಲಕ ಬಂದ ಮತ ಎಣಿಕೆಯಲ್ಲಿ ನನಗೆ ಕಡಿಮೆ ಮತ ಬರುತ್ತಿದೆ. ಇಲ್ಲಿ ಮೋಸ ನಡೆಯುತ್ತಿದೆ. ನಾನು ಕೋರ್ಟಿಗೆ ಹೋಗುತ್ತಿದ್ದೇನೆ. ಈಗ ನಡೆಯುತ್ತಿರುವ ಮತ ಎಣಿಕೆಯನ್ನು ತಕ್ಷಣ ನಿಲ್ಲಿಸಬೇಕು….ಗೆಲ್ಲುವುದು ನನಗೆ ಸುಲಭ. ಸೋಲುವುದೆಂದರೆ (ಅದನ್ನು ಸ್ವೀಕರಿಸುವುದು) ನನಗೆ ತುಂಬಾ ಕಷ್ಟ. ನಮ್ಮ ಪರವಾಗಿ ಮಿಲಿಯಗಟ್ಟಲೆ ಜನರು ಮತ ಚಲಾಯಿಸಿದರು.

ಕೀಳು ಮನೋಭಾವದ ಜನರ ಒಂದು ಗುಂಪು (ಸ್ಯಾಾಡ್ ಗ್ರೂಪ್ ಆಫ್ ಪೀಪಲ್) ಅದನ್ನು ತಡೆಯಲು ಪ್ರಯತ್ನಿಸುತ್ತಿದೆ. ನಾವು ಸುಮ್ಮನಿರುವುದಿಲ್ಲ’ ಎಂಬೆಲ್ಲಾ ಚಿತ್ರ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಟ್ರಂಪ್. ತಾನು ಗೆದ್ದಿದ್ದೇನೆ ಎಂಬರ್ಥದ ಹೇಳಿಕೆಗಳನ್ನು ಅವರು ಹರಿಬಿಟ್ಟಾಗ, ಟ್ವಿಟರ್ ಸಂಸ್ಥೆಯು ಮಧ್ಯ ಪ್ರವೇಶಿಸಿ, ಅದು ಸತ್ಯಕ್ಕೆ ದೂರ ಇರಬಹುದು ಎಂದು ಫ್ಲ್ಯಾಗ್ ಮಾಡಿತು. ಫೇಸ್‌ಬುಕ್ ಸಹ ಟ್ರಂಪ್‌ರ ಈ ಸುಳ್ಳು ಮಿಶ್ರಿತ ಹೇಳಿಕೆಗಳನ್ನು ಫ್ಲ್ಯಾಗ್ ಮಾಡಿ, ಜನರನ್ನು ಎಚ್ಚರಿಸಿದೆ. ಅಮೆರಿಕದ ಅಧ್ಯಕ್ಷರೊಬ್ಬರ
ಅಧಿಕೃತ ಹೇಳಿಕೆಗಳು ಈ ರೀತಿ ಫ್ಲ್ಯಾಗ್‌ಗೆ ಒಳಪಡುವುದೆಂದರೆ, ಅದೆಂತಹ ಅವಮಾನ!

ಇಷ್ಟಿದ್ದರೂ, ಅಮೆರಿಕದಲ್ಲಿ ಟ್ರಂಪ್‌ಗೆ ಮಿಲಿಯಗಟ್ಟಲೆ ಅಭಿಮಾನಿಗಳಿದ್ದಾಾರೆ. ಒಂದು ರೀತಿಯಲ್ಲಿ ನೋಡಿದರೆ, ಅವರಲ್ಲಿ ಬಹುಪಾಲು ಜನರು ಅಂಧಾಭಿಮಾನಿಗಳು! ಒಳನಾಡಿನ ಕೆಲವು ಭಾಗಗಳಲ್ಲಿ ಟ್ರಂಪ್ ಓರ್ವ ಕಲ್ಟ್ ಫಿಗರ್! ಇರಲಿ, ಕಳೆದ ಒಂದೆರಡು ವಾರಗಳಿಂದಲೂ ಟ್ರಂಪ್ ಅವರ ಹೇಳಿಕೆಗಳು, ನಡವಳಿಕೆ ಗಳು, ಬಾಡಿ ಲ್ಯಾಂಗ್ಯು ಏಜ್ ಎಲ್ಲವೂ ಇದೇ ಶೈಲಿಯಲ್ಲಿದ್ದು, ಅಲ್ಲೊಮ್ಮೆ ಇಲ್ಲೊಮ್ಮೆ ಜನರನ್ನು ಉದ್ರೇಕಿಸು ವಂತೆಯೂ ಇವೆ!

ಟ್ರಂಪ್ ಅವರ ವಿಚಿತ್ರ ನಡೆಗೆ ಮತ್ತೊಂದು ಉದಾಹರಣೆ ಎಂದರೆ, ತನಗೆ ಬಹುಮತ ಬರುವುದು ತುಸು ಅನುಮಾನ ಎಂದು ಗೊತ್ತಾದ ಕೂಡಲೆ, ಮತದಾನದಲ್ಲಿ ಮೋಸ ನಡೆಯುತ್ತಿದೆ ಎಂದು ಬಹಿರಂಗವಾಗಿ ಹೇಳಿ  ನೀಡಿದ್ದರ ಜತೆಯಲ್ಲೇ, ‘ತಕ್ಷಣ ಮತಗಣನೆ ನಿಲ್ಲಿಸಿ’ ಎಂದು ಕರೆ ಕೊಟ್ಟಿದ್ದು! ದೇಶದ ಅಧ್ಯಕ್ಷ ಸ್ಥಾನದಲ್ಲಿದ್ದ ವರು, ಸಾಕು ಮತ ಎಣಿಕೆ ನಿಲ್ಲಿಸಿ ಎಂದು ಹೇಳಿದರೆ, ಅದರ ದೂರಗಾಮಿ ಪರಿಣಾಮ ಏನು ಎಂಬುದು ಟ್ರಂಪ್‌ಗೆ ಗೊತ್ತಿಲ್ಲವೆ? ಅಂಚೆಯ ಮತಗಳೇ ಆಗಲಿ, ಬೂತ್‌ನಲ್ಲಿ ಚಲಾಯಿಸಿದ ಮತಗಳೇ ಆಗಲಿ, ಅವು ಪ್ರಜಾಪ್ರಭುತ್ವವೊಂದರಲ್ಲಿ ಪ್ರಜೆಗಳ ಕೈಯಲ್ಲಿರುವ ಪ್ರಮುಖ ಅಸ್ತ್ರಗಳು.

ಜತೆಗೆ ಮತದಾನ ಮಾಡುವುದು ಜನರ ಕರ್ತವ್ಯ. ಇಲ್ಲಿ ನೋಡಿದರೆ, ದೇಶದ ಅಧ್ಯಕ್ಷರೇ ಸ್ವತಃ ಹೇಳಿಕೆ ನೀಡಿ,
ಮತದಾನದಲ್ಲಿ ಮೋಸ ನಡೆದಿದೆ, ತನಕ ಕಡಿಮೆ ಮತ ಬೀಳುತ್ತಿರುವುದಕ್ಕೆ ಕಾರಣವೆಂದರೆ ಅಂಚೆಯ ಮತಗಳಲ್ಲಿ ನಡೆಯುತ್ತಿರುವ ಮೋಸ ಎಂದೆಲ್ಲಾ ಹೇಳುತ್ತಾ, ಅಲ್ಲಿನ ಚುನಾವಣಾ ಪ್ರಕ್ರಿಯೆಯನ್ನೇ ಹಳ್ಳ ಹತ್ತಿಸಲು ನೋಡುತ್ತಿದ್ದಾರೆ!

ಹೀಗಿದ್ದರೂ, ಅಲ್ಲಿನ ವಿವಿಧ ರಾಜ್ಯಗಳು ಮತ್ತು ಅಧಿಕಾರಿಗಳು ಮತ ಎಣಿಕೆ ಕಾನೂನು ಪ್ರಕಾರ ನಡೆಯುತ್ತಿದೆ ಎಂದಿರುವುದು ಬೇರೆ ವಿಷಯ. ಇತ್ತ ಎದುರಾಳಿ ಬೈಡನ್ ಬೆಂಬಲಿಗರು ಬೀದಿಗಳಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ‘ಮತಗಣನೆ ನಿಲ್ಲಿಸಿ ಎಂದು ಟ್ರಂಪ್ ಹೇಳಿರುವುದು ಪ್ರಜಾತಂತ್ರ ವಿರೋಧಿ, ಆದ್ದರಿಂದ ಮತಗಣನೆ ನಿಲ್ಲಿಸಬಾರದು’ ಎಂಬುದು ಅವರ ಆಗ್ರಹ. ಇದಕ್ಕೂ ಮುಂಚೆ ಟ್ರಂಪ್ ಒಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ತಾನು ಸೋತರೆ, ತನ್ನ ಬೆಂಬಲಿಗರು ಅಮೆರಿಕದಾದ್ಯಂತ ಬೀದಿಗಿಳಿದು ಗಲಾಟೆ ಮಾಡು ತ್ತಾರೆ ಎಂದು ಹೇಳಿ, ಅಲ್ಲಿನ ನಾಗರಿಕ ವ್ಯವಸ್ಥೆಗೇ ಬೆದರಿಕೆ ಒಡ್ಡಿದ್ದರು!

ಇಂತಹ ಸನ್ನಿವೇಶ ಅಲ್ಲಿನ ಜನರನ್ನು ಹೇಗೆ ಹೆದರಿಸಿದೆ ಎಂದರೆ, ಕಳೆದ ಒಂದೆರಡು ವಾರಗಳ ಅವಧಿಯಲ್ಲಿ ಅಲ್ಲಿ ಅತಿ ಹೆಚ್ಚು ಬಂದೂಕು, ಗನ್, ಪಿಸ್ತೂಲ್ ಮಾರಾಟ ನಡೆಯಿತು! ಅಮೆರಿಕ ಈಗ ಅಕ್ಷರಶಃ ಗನ್‌ಗಳ
ದೇಶ. ಅಮೆರಿಕದ 33 ಕೋಟಿ ಜನಸಂಖ್ಯೆಗಿಂತ ಹೆಚ್ಚಿನ ಸಂ ಖ್ಯೆೆಯಲ್ಲಿ ಅಂದರೆ ಸುಮಾರು 39 ಕೋಟಿ ಅಧಿಕೃತ ಗನ್ ಗಳು ಅಲ್ಲಿವೆ. ಮುಕ್ತ ಸಮಾಜದ ಅತಿರೇಕ ಎನಿಸಿರುವ ಮುಕ್ತವಾಗಿ ಗನ್ ಖರೀದಿಸುವ ಸ್ವಾತಂತ್ರ್ಯವು, ಇಂತಹದ್ದೊಂದು ‘ಸ್ಫೋಟಕ’ ಮತ್ತು ವಿಚಿತ್ರ ಅಂಕಿಅಂಶಕ್ಕೆ ಆ ದೇಶವನ್ನು ತುತ್ತಾಗಿಸಿದೆ.

ಈ ಲೇಖನ ಸಿದ್ಧಪಡಿಸುವ ವೇಳೆಗೆ, ಟ್ರಂಪ್ ಇನ್ನೂ 215ರ ಮತಗಳ ಆಸುಪಾಸು ಇದ್ದು, ಬೈಡ  ಇವರಿಗಿಂತಸಾಕಷ್ಟು ಮುಂದಿದ್ದಾರೆ. ಈ ಸ್ಥಿತಿಯನ್ನು ಎದುರಿಸಿ, ಟ್ರಂಪ್ ಅವರು 270ರ ಮ್ಯಾಜಿಕ್ ಸಂಖ್ಯೆಯನ್ನು ತಲುಪುವುದು ಕಷ್ಟ ಎಂದೇ ಹೇಳಬಹುದು. ಆದರೆ ಕೆಲವು ಕ್ಲಿಷ್ಟ ಮತ್ತು ಪ್ರಮುಖ ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರಿದಿದ್ದು, ಕೊನೆಗೆ ಸ್ಥಿತಿಯು ಟ್ರಂಪ್ ಅವರತ್ತ ವಾಲಿದರೂ ವಾಲಬಹುದು. ಆದರೆ, ಈಗಿನ ಮುನ್ನಡೆಯನ್ನು ಕಂಡಾಗ, ಬೈಡನ್ ಅವರು ಶ್ವೇತಭವನದತ್ತ ಹೆಜ್ಜೆ ಇಟ್ಟಿರೆ ಎಂದೇ ಅನಿಸುತ್ತದೆ.

ಇತ್ತ ಟ್ರಂಪ್ ಅವರು ನಾನಾ ರೀತಿಯ ವಾಮಮಾರ್ಗ ಎನ್ನಬಹುದಾದ ತಂತ್ರಗಳನ್ನು ಅನುಸರಿಸುತ್ತಿರುವುದು ನಿಜಕ್ಕೂ ಚೋದ್ಯ. ಕೆಲವು ರಾಜ್ಯಗಳಮತ ಎಣಿಕೆಯನ್ನು ತಡೆಹಿಡಿಯಲು ಕಾನೂನು ಕ್ರಮಕ್ಕೆ ಮೊರೆ ಹೋಗಿದ್ದು, ಅದರಲ್ಲಿ ಟ್ರಂಪ್ ಕೆಲಮಟ್ಟಿಗಿನ ಯಶಸ್ಸನ್ನೂ ಪಡೆದಿದ್ದಾರೆ. ಆದರೆ, ಇಂತಹ ತಂತ್ರಗಳಲ್ಲಿ
ಅವರು ಯಶಸ್ಸನ್ನು ಪಡೆದರೆ, ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧ ಎನಿಸುವ ನಡೆ ಎನಿಸುತ್ತದೆ.

ರಿಪಬ್ಲಿಕನ್ ಪಕ್ಷದ ಟ್ರಂಪ್ ಈ ರೀತಿ ಬೆದರಿಕೆ ಒಡ್ಡುತ್ತಿರುವುದಕ್ಕೆ ಒಂದು ಪ್ರಮುಖ ಕಾರಣವೆಂದರೆ,
ಅಮೆರಿಕದ ಒಳನಾಡಿನ ಪಟ್ಟಣಗಳಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಅವರಿಗಿರುವ ಕಲ್‌ಟ್‌ ಬೆಂಬಲ. ಮುಖ್ಯವಾಗಿ ಅಲ್ಲಿನ ಯುಜನತೆಗೆ ಟ್ರಂಪ್ ಎಂದರೆ ಅಚ್ಚು ಮೆಚ್ಚು. ಸ್ಥಳೀಯರನ್ನು ಮೆಚ್ಚಿಸಲು ಟ್ರಂಪ್ ನೀಡುವ ಕೆಲವು ಹೇಳಿಕೆಗಳು, ಆ ಒಂದು ವರ್ಗದ ಜನರನ್ನು ತುಷ್ಟೀಕರಿಸುವಂತಿವೆ. ಅಮೆರಿಕವು ಸ್ಥಳೀಯ ರದ್ದು, ಹೊರಗಿನವರಿಗೆ ಉದ್ಯೋಗ ದೊರೆಯದಂತೆ ಮಾಡುತ್ತೇನೆ, ಇಲ್ಲಿನವರಿಗೇ ಉದ್ಯೋಗ ಕೊಡಿಸುತ್ತೇನೆ ಎಂಬರ್ಥದ ಟ್ರಂಪ್ ಅವರ ಹೇಳಿಕೆಗಳು, ಅವರಿಗೆ ವಿಚಿತ್ರಜನ

ಪ್ರಿಯತೆಯನ್ನು ತಂದುಕೊಟ್ಟಿವೆ. ಒಳನಾಡಿನ ಇಂತಹ ಹುಂಬ ಬೆಂಬಲಿಗರನ್ನು ಗಮನದಲ್ಲಿಟ್ಟುಕೊಂಡೇ, ಟ್ರಂಪ್ ಅವರು ತಾನು ಸೋತರೆ ಬೀದಿಕಾಳಗ ಆಗಬಹುದು ಎಂಬ ಪ್ರಸ್ತಾಪ ಮಾಡಿರಬೇಕು. ಅಂತಹ ಒಂದು ಸಾಧ್ಯತೆಗೆ ಬೆದರಿ, ಅಮೆರಿಕದ ಹಲವು ನಗರಗಳ ಅಂಗಡಿಗಳ ಮಾಲಿಕರು, ತಮ್ಮ ಅಂಗಡಿಯ ಸುತ್ತಲೂ ರಕ್ಷಣೆಗಾಗಿ ಮರದ ಹಲಗೆಗಳನ್ನು ಮತ್ತು ಸರಳುಗಳನ್ನು ಅಳವಡಿಸಿದ್ದಾರೆ!

ಚುನಾವಣಾ ಫಲಿತಾಂಶ ಘೋಷಣೆಯ ನಂತರ ಹಲವು ಪಟ್ಟಣಗಳಲ್ಲಿ ನಡೆಯಬಹುದಾದ ದೊಂಬಿಯನ್ನು ತಡೆಯಲು ಈ ಕ್ರಮ! ಪ್ರಜಾಪ್ರಭುತ್ವ ಹೊಂದಿರುವ ವಿಶ್ವದ ಪ್ರಮುಖ ಮತ್ತು ಶ್ರೀಮಂತ ದೇಶವೊಂದರಲ್ಲಿ ಇಂತಹ ಪರಿಸ್ಥಿತಿಯೇ! ಇಂತಹ ವಾಸ್ತವಗಳನ್ನು ಕಂಡಾಗಲೇ, ಅದೇಕೋ, ಅಲ್ಲಿ ಎಲ್ಲವೂ ಸರಿ ಇಲ್ಲ ಎಂದೇ   ನಿಸುತ್ತದೆ. ಜತೆಗೆ ಟ್ರಂಪ್  ಕಾಲದಲ್ಲಿ ಅಮೆರಿಕದಲ್ಲಿ ಉಲ್ಬಣಗೊಂಡ ಜನಾಂಗೀಯ ದ್ವೇಷವು, ಅಲ್ಲಿನ ದಮನಿತ ಕರಿಯ ಜನಾಂಗದ ಪ್ರಾರಣವಾಗಿರುವುದು, ಆ ಸಮಾಜದ   ಟೊಳ್ಳುತನಕ್ಕೆ ನಿದರ್ಶನ.

ಅಸಲಿಗೆ, ಅಮೆರಿಕದಲ್ಲಿ ಈಗ ಚುನಾವಣೆ ನಡೆಯಲೇ ಬಾರದಿತ್ತು! ಏಕೆ ಗೊತ್ತಾಾ? ಕರೋನಾ ವೈರಸ್‌ನ ಅತಿ ಹಾವಳಿ ತಡೆಯಲು! ಅಲ್ಲಿ ಕರೋನಾ ಸೋಂಕಿನ ಮೂರನೆಯ ಅಲೆಯು ಅತಿವೇಗವಾಗಿ ಪ್ರಸಾರವಾಗುತ್ತಿದೆ. ಈ ವಾರ ಮುಗಿಯುವಷ್ಟರಲ್ಲಿ ಒಟ್ಟು ಒಂದು ಕೋಟಿ ಕರೋನಾ ಸೋಂಕುಗಳನ್ನು ಅಮೆರಿಕ ದಾಖಲಿಸಲಿದೆ. ಈಗಾಗಲೇ ಅಲ್ಲಿ 2,80,000 ಜನರು ಕರೋನಾಕ್ಕೆೆ ಬಲಿಯಾಗಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು ಎನಿಸಿದೆ.

ಎರಡನೆಯ ಸ್ಥಾನದಲ್ಲಿರುವ ಬ್ರೆೆಜಿಲ್‌ನಲ್ಲಿ 1,60,000 ಸಾವುಗಳಾಗಿದ್ದು, ವಿಶ್ವದ ಒಟ್ಟು ಕರೋನಾ ಸೋಂಕಿನ ಮರಣದಲ್ಲಿ ಶೇ.20ರಷ್ಟು ಅಮೆರಿಕದಲ್ಲೇ ಆಗಿದೆ. ಜತೆಗೆ ಇನ್ನೂ ನಿಯಂತ್ರಣಕ್ಕೆ ಈ ಸೋಂಕಿಗೆ, ಅಮೆರಿಕದಲ್ಲಿ ಕಳೆದ 12 ದಿನಗಳಲ್ಲಿ 9350 ಜನ ನಿಧನರಾಗಿದ್ದು, ಹತ್ತು ಲಕ್ಷ ಜನರಿಗೆ ಸೋಂಕು ತಗುಲಿದೆ. ಈ ಸಮಯದಲ್ಲಿ ಅಲ್ಲಿಸೋಂಕು ಹರಡುವುದನ್ನು ತಡೆಯಲು ಸಂಪೂರ್ಣ ಬಿಗಿ ಕ್ರಮ ಕೈಗೊಳ್ಳಬೇಕಿತ್ತು. ಈ ಹಿನ್ನೆೆಲೆಯಲ್ಲಿ ಅಲ್ಲಿ ಈಗ ಚುನಾವಣೆ ನಡೆಯಬಾರದಿತ್ತು! ಚುನಾವಣೆಯಿಂದಾಗಿ, ಅಲ್ಲಿ ಇನ್ನಷ್ಟು ಜನರಿಗೆ ಸೋಂಕು ತಗುಲಿರುವುದು ಖಚಿತ.

ಇಂತಹದ್ದೇ ಸ್ಥಿತಿಯಲ್ಲಿ ಬೇರೆ ಸಣ್ಣಪುಟ್ಟ ದೇಶಗಳು ಚುನಾವಣೆ ನಡೆಸಿದ್ದರೆ, ‘ಈಗ ಚುನಾವಣೆ ಬೇಡ,
ಕರೋನಾ ಹರಡುತ್ತದೆ’ ಎಂದು ಅಮೆರಿಕ ತಾಕೀತು ಮಾಡುತ್ತಿತ್ತೇನೋ! ಕರೋನಾ ಸೋಂಕಿನ ನಡುವೆ, 2020ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಐತಿಹಾಸಿಕ ಎನಿಸಿರುವುದರ ಜತೆಯಲ್ಲೇ, ಅಲ್ಲಿನ ನಾಯಕರುಗಳ, ಸಮಾಜದ ನಿಜಸ್ವರೂಪವನ್ನು ಬಯಲು ಮಾಡಿತೆಂದೇ ಹೇಳಬೇಕು.

ಸೋಲಿನ ಸುಳಿವು ಸಿಕ್ಕ ಕೂಡಲೇ ತಾನೇ ಗೆದ್ದಿದ್ದೇನೆಂದು ಹೇಳಿಕೊಳ್ಳುವ ಅಧ್ಯಕ್ಷರು, ಅವರ ಬೆಂಬಲಿಗರೆನಿಸಿ ಕೊಂಡವರು ರಸ್ತೆಗಳಲ್ಲಿ ತಮಟೆಯಂತಹ ದನ್ನು ಬಾರಿಸುತ್ತಾ ಪ್ರತಿಭಟನೆ ನಡೆಸುತ್ತಿರುವ ರೀತಿ, ಅದಕ್ಕೆ ಪ್ರತಿಯಾಗಿ ಇನ್ನಂದು ಗುಂಪಿನ ಜನರು ಬೀದಿಗಿಳಿದದ್ದು, ಚುನಾವಣೆ ಫಲಿತಾಂಶ ವ್ಯತಿರಿಕ್ತವಾದರೆ ದೊಂಬಿ ನಡೆದು ತಮ್ಮ ಅಂಗಡಿ ಲೂಟಿಯಾಗಬಹುದು ಎಂದು ಹೆದರಿ ಅಂಗಡಿಗಳಿಗೆ ಹಲಗೆ ಬಡಿಸುತ್ತಿರುವ ವ್ಯಾಪಾರಸ್ಥರು, ಈ ಚುನಾವಣೆ ಸೃಷ್ಟಿಸಿದ ಒತ್ತಡ ತಾಳಲಾರದೆ ತಮ್ಮ ರಕ್ಷನೆಗಾಗಿ ಕ್ಯೂ ನಿಂತು ಪಿಸ್ತೂಲು, ಗನ್ ಖರೀದಿಸುವ ಜನಸಾಮಾನ್ಯರು ಇವೆಲ್ಲ ವನ್ನೂ ಗಮನಿಸಿದರೆ, ಆ ಸಮಾಜದ ಆರೋಗ್ಯದ ಸ್ಥಿತಿಯ ಕುರಿತು ಸಂಶಯ ಬಾರದೆ? ಅದೇನೇ ಇದ್ದರೂ, ಸದ್ಯದಲ್ಲೇ ಘೋಷಣೆಯಾಗುವ  ಅಮೆರಿಕದ ಚುನಾವಣಾ ಫಲಿತಾಂಶಗಳು ಸ್ಪಷ್ಟವಾಗಿರಲಿ, ಗೊಂದಲಕ್ಕೆ ಎಡೆ ಮಾಡಿಕೊಡದೇ ಇರಲಿ, ಸಂಭಾವ್ಯದೊಂಬಿಗೆ ಹೆದರಿ ನಾಗರಿಕರು ಗನ್ ಕೈಗೆತ್ತಿಕೊಳ್ಳದೇ ಇರಲಿ, ಹೊಸ ಅಧ್ಯಕ್ಷರು ಸುಗಮವಾಗಿ ಶ್ವೇತಭವನ ಪ್ರವೇಶಿಸಲಿ ಎಂದು ಜಗತ್ತಿನ ಎಲ್ಲಾ ದೇಶದವರೂ ಆಶಿಸಲೇ ಬೇಕು. ಏಕೆಂದರೆ, ಅಮೆರಿಕಕ್ಕೆ ನೆಗಡಿಯಾದರೆ, ನಮ್ಮ ದೇಶವೂ ಸೇರಿದಂತೆ ಅದೆಷ್ಟೋ ದೇಶಗಳ ಮೂಗಿನಲ್ಲಿ ಗೊಣ್ಣೆೆ ಸುರಿಯುವ ಕಾಲವಿದು.

ಹಾಗಾಗದಿರಲಿ, ಎಲ್ಲವೂ ಸುಗಮವಾಗಲಿ ಎಂಬುದೇ ಆಶಯ.