Wednesday, 18th September 2024

ಶಿವಕುಮಾರ ಸ್ವಾಮೀಜಿ ಜಯಂತಿ: ಪಕ್ಷಾತೀತ ಗೌರವ ನಮನ ಸಲ್ಲಿಸಿದ ರಾಜಕೀಯ ನಾಯಕರು

ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯ 115ನೇ ಜಯಂತಿಗೆ ಪಕ್ಷಾತೀತವಾಗಿ ಎಲ್ಲ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ.

ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗೆಯ ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಸಕಲಜೀವರಾಶಿಗಳಿಗೂ ಲೇಸನ್ನು ಬಯಸಿದ ಅವರ ಬದುಕು ಮತ್ತು ಸಾಧನೆಗಳು ನಮಗೆ ಪ್ರೇರಣೆಯಾಗಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂ ಮಾಡಿದ್ದಾರೆ.

ಸುಮಾರು ಎಂಟು ದಶಕಗಳ ಕಾಲ ನಾಡಿಗೆ ಅಧ್ಯಾತ್ಮದ ಮಾರ್ಗ ತೋರಿದ ಸಂತ, ತ್ರಿವಿಧ ದಾಸೋಹದಿಂದ ಬಡ ಮಕ್ಕಳ ಬದುಕಿಗೆ ದಾರಿ ಮಾಡಿದ ನಡೆದಾಡುವ ದೇವರು, ಪದ್ಮ ಭೂಷಣ, ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅನಂತ ಪ್ರಣಾಮಗಳು’ ಎಂದು ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.

ಸಿದ್ಧಗಂಗಾ ಮಠದ ನಡೆದಾಡುವ ದೇವರು, ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಯವರ ಜಯಂತಿಯಂದು ಗೌರವ ಪ್ರಣಾಮಗಳು. ತ್ರಿವಿಧ ದಾಸೋಹದ ಮೂಲಕ ಜನ ಮಾನಸದಲ್ಲಿ ಪೂಜನೀಯ ಸ್ಥಾನಪಡೆದಿರುವ ಅವರ ಆದರ್ಶ ವ್ಯಕ್ತಿತ್ವ ಅಸಂಖ್ಯ ಭಕ್ತರಿಗೆ ದಾರಿ ದೀಪವಾಗಿದೆ’ ಎಂದಿದ್ದಾರೆ ಅಶ್ವಥ್ ನಾರಾಯಣ್.

ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ @RahulGandhi ಅವರು, ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ತ್ರಿವಿಧ ದಾಸೋಹಿ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಲಿಂಗಕ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ 115 ನೇ ಜಯಂತ್ಯೋತ್ಸವ ಸಂದರ್ಭದಲ್ಲಿ ಅವರ ಗದ್ದುಗೆಗೆ ಭೇಟಿ ನೀಡಿ ನಮನ‌ ಸಲ್ಲಿಸಿದರು.

ನಮ್ಮ ಪಾಲಿನ ನಡೆದಾಡುವ ದೇವರಾಗಿದ್ದವರು ಹಾಗೂ ಅನ್ನ, ಅಕ್ಷರ ಮತ್ತು ಆಶ್ರಯವೆಂಬ ತ್ರಿವಿಧ ದಾಸೋಹದ ದಿವ್ಯಚೈತನ್ಯ ದೊಂದಿಗೆ ಈ ನಾಡನ್ನು ಪೊರೆದ ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳ ಜಯಂತಿ ಯಂದು ಅವರಿಗೆ ನನ್ನ ಭಕ್ತಿಪೂರ್ವಕ ಶಿರಸಾಷ್ಟಾಂಗ ಪ್ರಣಾಮಗಳು’ ಎಂದಿದ್ದಾರೆ ಎಚ್ ಡಿ ಕುಮಾರಸ್ವಾಮಿ.

ನಡೆದಾಡುವ ದೇವರೆಂದೇ ಪ್ರಸಿದ್ದರಾದ ಶತಮಾನ ಕಂಡ ಶ್ರೇಷ್ಠ ಸಂತ, ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳ 115 ನೇ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ಪ್ರಾಣಾಮಗಳನ್ನು ಸಲ್ಲಿಸುತ್ತೇನೆ’ ಎಂದು ಎಚ್ ಡಿ ದೇವೇಗೌಡ ಅವರು ಕೂ ಮಾಡಿದ್ದಾರೆ.