Friday, 22nd November 2024

ಪೊಲೀಸ್‌ ವ್ಯವಸ್ಥೆಯ ರಿಯಲ್‌ ಹೀರೋಗಳು ಕಾನ್‌ಸ್ಟೆಬಲ್ಸ್‌

ವಿಶ್ವವಾಣಿ ಸಂದರ್ಶನ

ಕರ್ನಾಟಕದಲ್ಲಿ ‘ಸಿಂಘಂ’ ಎಂದು ಹೆಸರು ಪಡೆದು ಪೊಲೀಸ್ ಇಲಾಖೆಯಲ್ಲಿ ಗರ್ಜಿಸಿದ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಈಗ ಸ್ವಯಂ ನಿವೃತ್ತಿ ಪಡೆದು ತಮಿಳುನಾಡಿನಲ್ಲಿ ಬಿಜೆಪಿ ಸೇರ್ಪಡೆಯಾಗಿ ರಾಜಕಾರಣಿಯಾಗಿದ್ದಾರೆ. ರಾಜಕೀಯ ಸೇರುತ್ತಿದ್ದಂತೆ ಅವರ ಮೊದಲ ಪುಸ್ತಕ ಕೂಡ ಬಿಡುಗಡೆಯಾಗಿದೆ ‘ಸ್ಟೆಪ್ಪಿಂಗ್ ಬಿಯಾಂಡ್ ಖಾಕಿ: ರೆವೆಲೇಶನ್ಸ್ ಆಫ್ ಎ ರಿಯಲ್ ಲೈಫ್ ಸಿಂಘಂ’
(ಬ್ಲೂಮ್ಸ್‌‌ಬರಿ, ರು.599). ಈ ಕೃತಿ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ.

ಪೊಲೀಸ್ ಇಲಾಖೆಯಲ್ಲಿರುವ ನಿಜವಾದ ಹೀರೋಗಳ ಬಗ್ಗೆ, ರಾಜಕೀಯ ಒತ್ತಡಗಳ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಹಾಗೂ
ವ್ಯವಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಅಣ್ಣಾಮಲೈ ಇದರಲ್ಲಿ ಕುತೂಹಲಕರ ಸಂಗತಿಗಳನ್ನು ಬರೆದಿದ್ದಾರೆ. ಈ ಕುರಿತು
ಅವರು ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಾಗೂ ಲಂಚ ಎಷ್ಟು ಹಾಸುಹೊಕ್ಕಾಗಿದೆ ಎಂಬ ಬಗ್ಗೆ ನಿಮ್ಮ ಪುಸ್ತಕದಲ್ಲಿ ವಿಸ್ತಾರವಾಗಿ ಹೇಳಿದ್ದೀರಿ. ಇದೊಂದು ಗಂಭೀರ ವಿಚಾರ. ಇದಕ್ಕೇನಾದರೂ ಪರಿಹಾರ ಇದೆಯೇ?
ಸರಕಾರಿ ಕಚೇರಿಗಳು, ಸರಕಾರಿ ನೌಕರರು ಹಾಗೂ ಜನಲ್ಲಿ ಈ ಬಗ್ಗೆ ಬಹಳ ಜಾಗೃತಿ ಮೂಡಿಸುವ ಅಗತ್ಯವಿದೆ. ಇವರೆಲ್ಲರಿಗೂ ಶಿಕ್ಷೆಯ ಭಯ ಕಡಿಮೆಯಿದೆ. ಏಕೆಂದರೆ ಭ್ರಷ್ಟಾಚಾರಕ್ಕೆ ಶಿಕ್ಷೆ ಬಹಳ ಕಡಿಮೆಯಿದೆ. ಹೀಗಾಗಿ, ಮೊದಲನೆಯದಾಗಿ, ಎಲ್ಲರಿಗೂ ಕಾನೂನಿನ ಭಯ ಇರಬೇಕು. ಎರಡನೆಯದಾಗಿ, ಜನರಿಗೆ ಈ ವ್ಯವಸ್ಥೆಯಲ್ಲಿ ಯಾರೂ ಪ್ರಭಾವಶಾಲಿಗಳಿಲ್ಲ, ವ್ಯವಸ್ಥೆಯೇ ಪ್ರಭಾವ ಶಾಲಿಯಾಗಿದೆ, ವ್ಯವಸ್ಥೆಗಿಂತ ದೊಡ್ಡವರು ಯಾರೂ ಇಲ್ಲ ಎಂಬ ಅರಿವು ಮೂಡಿಸಬೇಕು. ಆಗ ಭ್ರಷ್ಟಾಚಾರಕ್ಕೆ ಪರಿಹಾರ ಸಿಗುತ್ತದೆ.

ಪೊಲೀಸ್ ಪೋಸ್ಟಿಂಗ್ ಹೇಗೆ ನಡೆಯುತ್ತದೆ ಎಂದು ಪುಸ್ತಕದಲ್ಲಿ ವಿವರಿಸಿದ್ದೀರಿ. ನಾಲ್ಕು ರೀತಿಯ ವರ್ಗಾವಣೆ ಇದೆ ಎಂದೂ ಹೇಳಿದ್ದೀರಿ. ಅದನ್ನು ಸ್ವಲ್ಪ ವಿವರವಾಗಿ ಹೇಳುತ್ತೀರಾ?
ಸರಕಾರದ ವರ್ಗಾವಣೆ ಪ್ರಕ್ರಿಯೆಯಲ್ಲಿ ಇಂತಹ ಯಾವ ಅಧಿಕೃತ ವಿಧಗಳೂ ಇಲ್ಲ. ಇವೆಲ್ಲವೂ ಅನಧಿಕೃತ ವಿಧಗಳು. ಒಂದು-ಸುಲಭ ಪೋಸ್ಟಿಂಗ್. ಎರಡು-ಕಷ್ಟದ ಪೋಸ್ಟಿಂಗ್. ಮೂರು-ಮಧ್ಯಮ ಪೋಸ್ಟಿಂಗ್. ನಾಲ್ಕು- ನಕ್ಸಲ್ ಪ್ರದೇಶದಲ್ಲಿ ಪೋಸ್ಟಿಂಗ್. ಒಂದೊಂದು ವಿಧದ ಪೋಸ್ಟಿಂಗ್‌ಗೂ ಬೇರೆ ಬೇರೆ ರೀತಿಯ ಲಂಚ ನಿಗದಿಯಾಗುತ್ತದೆ.

ಕೆಲ ಪೋಸ್ಟಿಂಗ್‌ಗಳಿಗೆ ಅತಿಹೆಚ್ಚು ಲಂಚ ನೀಡಬೇಕಾಗುತ್ತದೆ, ಅದಕ್ಕೆ ತಕ್ಕಂತೆ ಅವು ಅಷ್ಟೇ ‘ಆಕರ್ಷಕವಾಗಿರುತ್ತವೆ.’ ಇನ್ನು ಕೆಲ ಪೋಸ್ಟಿಂಗ್‌ಗೆ ಲಂಚ ಕಡಿಮೆ, ಏಕೆಂದರೆ ಅಲ್ಲಿಗೆ ವರ್ಗಾವಣೆಯಾಗಲು ಯಾರೂ ಬಯಸುವುದಿಲ್ಲ. ಹೀಗಾಗಿ ಅಲ್ಲಿಗೆ ಸುಲಭವಾಗಿ ವರ್ಗಾವಣೆ ಸಿಗುತ್ತದೆ. ದುರದೃಷ್ಟವಶಾತ್ ಪೊಲೀಸ್ ವ್ಯವಸ್ಥೆ ಬಹುಕಾಲದಿಂದ ಹೀಗೇ ರೂಪುಗೊಂಡಿದೆ.

ಪುಸ್ತಕದಲ್ಲಿ ‘ರಿಯಲ್ ಹೀರೋ’ಗಳ ಬಗ್ಗೆ ಹೇಳಿದ್ದೀರಿ. ಇವರು ಯಾರು? ಏಕೆ ಇವರನ್ನು ನೀವು ರಿಯಲ್ ಹೀರೋ
ಎಂದು ಕರೆಯುತ್ತೀರಿ?
ನನ್ನ ಪ್ರಕಾರ ರಿಯಲ್ ಹೀರೋಗಳೆಂದರೆ ನನ್ನ ಜತೆ ಕೆಲಸ ಮಾಡಿದ ಕಾನ್ಸ್ಟೆೆಬಲ್‌ಗಳು ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು. ಅವರು 18-20 ತಾಸು ಕೆಲಸ ಮಾಡುತ್ತಾರೆ. ಆದರೆ, ಅವರಿಗೆ ಸಿಗುವ ಸಂಬಳ ಬಹಳ ಕಡಿಮೆ. ಪೊಲೀಸ್ ಇಲಾಖೆಯಲ್ಲಿನ ಬಹಳಷ್ಟು ಕೆಲಸಗಳು ಆಗುವುದೇ ಇವರಿಂದ. ಹೀಗಾಗಿ ಇವರು ನಿಜವಾದ ಹೀರೋಗಳು.

ಈ ನಾಲ್ಕು ವಿಧದಲ್ಲಿ ನಿಮಗೆ ಮೊದಮೊದಲು ಯಾವ ರೀತಿಯ ಪೋಸ್ಟಿಂಗ್ ಸಿಕ್ಕಿತ್ತು?
ಐಪಿಎಸ್ ಅಧಿಕಾರಿಗಳಿಗೆ ಎಎಸ್‌ಪಿಯಾಗಿ ಕೆಲಸ ಮಾಡುವ ಅವಧಿ ಯಾವಾಗಲೂ ಸವಾಲಿನದು. ಅವರ ಸತ್ವಪರೀಕ್ಷೆ ಯಾಗುವುದು ಅದೇ ಸಮಯದಲ್ಲಿ. ಸಾಮಾನ್ಯವಾಗಿ ನಕ್ಸಲ್ ಪ್ರದೇಶಗಳು ಎಲ್ಲಿವೆಯೋ ಅಲ್ಲಿಗೆ ಯಾರೂ ಹೋಗಲು ಬಯಸುವು ದಿಲ್ಲ. ಹೀಗಾಗಿ ಆರಂಭದಲ್ಲಿ ಅಂತಹ ಜಾಗಗಳಿಗೇ ಪೋಸ್ಟಿಂಗ್ ಸಿಗುತ್ತದೆ. ಅಲ್ಲಿಂದಲೇ ನಿಮ್ಮನ್ನು ನೀವು ಪ್ರೂವ್ ಮಾಡಿಕೊಳ್ಳಬೇಕು. ಹೀಗಾಗಿ ನನಗೆ ಆರಂಭಿಕ ವರ್ಷಗಳಲ್ಲಿ ಮತೀಯ ಗಲಭೆಗಳು ಹೆಚ್ಚು ನಡೆಯುವ ಉಡುಪಿ, ಚಿಕ್ಕಮಗಳೂರು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಪೋಸ್ಟಿಂಗ್ ಸಿಕ್ಕಿತ್ತು. ನನ್ನ ಅದೃಷ್ಟ ಚೆನ್ನಾಗಿತ್ತು, ಹೀಗಾಗಿ ನನ್ನ ಒಳ್ಳೆಯ ಕೆಲಸವನ್ನು ಗುರುತಿಸುವವರೂ ಸಿಕ್ಕರು. ರಾಜಕಾರಣಿಗಳು ಕೂಡ ನನ್ನ ಜತೆಗೆ ಎಚ್ಚರಿಕೆಯಿಂದಲೇ ನಡೆದುಕೊಳ್ಳುತ್ತಿದ್ದರು. ಅವರು ನನಗೆ ಗೌರವ ಕೊಡುತ್ತಿದ್ದರು. ಹೀಗಾಗಿ ನನ್ನ ವೃತ್ತಿಜೀವನವನ್ನು ಹೆಚ್ಚು ಅಡೆತಡೆಗಳಿಲ್ಲದೆ ಖುಷಿಯಾಗಿ ಕಳೆದಿದ್ದೇನೆ.

ಪೊಲೀಸರ ಮೇಲೆ ರಾಜಕಾರಣಿಗಳಿಗೆ ಬಿಗಿಯಾದ ಹಿಡಿತವಿರುತ್ತದೆ. ಒಂದರ್ಥದಲ್ಲಿ ಪೊಲೀಸರು ರಾಜಕಾರಣಿಗಳ ಕಪಿಮುಷ್ಟಿಯಲ್ಲೇ ಇರುತ್ತಾರೆ. ಈಗ ನೀವು ರಾಜಕಾರಣಿಯಾಗಿದ್ದೀರಿ. ಎಂತಹ ಸುಧಾರಣೆ ತರಬೇಕೆಂದು ಬಯಸು ತ್ತೀರಿ?
ಮೂಲಭೂತ ಸುಧಾರಣೆಗಳು ಕೂಡಲೇ ಆಗಬೇಕು. ಇವೆಲ್ಲ ಸಾಮಾನ್ಯವಾಗಿ ವೇತನ ಪರಿಷ್ಕರಣೆ, ಪೊಲೀಸರಿಗೆ ಸರಿಯಾದ ಶಸ್ತ್ರಾಸ್ತ್ರಗಳನ್ನು ನೀಡುವುದು, ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡಲು ಸರಿಯಾದ ಸಂಪನ್ಮೂಲ ಒದಗಿಸುವುದು ಇಂತಹ ಬಾಹ್ಯ ಸಂಗತಿಗಳೇ ಆಗಿವೆ. ಪೊಲೀಸ್ ಇಲಾಖೆಗೆ ನೀಡುವ ಬಜೆಟ್ ಬಹಳ ಕಡಿಮೆ. ಆ ಬಜೆಟ್ ಹೆಚ್ಚಿಸಿ, ಪೊಲೀಸರಿಗೆ
ಮೂಲಸೌಕರ್ಯಗಳನ್ನೂ ಹೆಚ್ಚೆಚ್ಚು ನೀಡಬೇಕು. ನಂತರ ಒಂದಷ್ಟು ಆಂತರಿಕ ಸುಧಾರಣೆಗಳಾಗಬೇಕಿವೆ. ಪೊಲೀಸ್
ವ್ಯವಸ್ಥೆಯಲ್ಲಿ ಶ್ರೇಣಿ ವ್ಯವಸ್ಥೆ ಅಥವಾ ಹೈರಾರ್ಕಿ ತುಂಬಾ ಇದೆ. ಇದು ಬೇಡ ಅಂತಲ್ಲ. ವ್ಯವಸ್ಥೆ ಸರಿಯಾಗಿ ಮುನ್ನಡೆಯಲು ಇದು ಮುಖ್ಯವೇ. ಆದರೆ, ಇದು ಕೇವಲ ಕೆಳಹಂತದ ನೌಕರರ ಮೇಲೆ ದಬ್ಬಾಳಿಕೆ ಮಾಡಲು ಬಳಕೆಯಾಗಬಾರದು. ಈ ಶ್ರೇಣಿ ವ್ಯವಸ್ಥೆಯಿಂದ ಯಾರ ಸೃಜನಶೀಲತೆಗೂ ಅಡ್ಡಿಯಾಗಬಾರದು. ಈ ವ್ಯವಸ್ಥೆಯಿಂದಾಗಿ ಯಾರೂ ತಮ್ಮ ಕರ್ತವ್ಯ
ನಿಭಾಯಿಸುವುದಕ್ಕೆ ಅಥವಾ ಸರಿಯಾದ ದಾರಿಯಲ್ಲಿ ಹೋಗುವುದಕ್ಕೆ ಸಮಸ್ಯೆಯಾಗಬಾರದು.

ನಿಮ್ಮ ಸೇವಾವಧಿಯಲ್ಲಿ ಸರಿಯಾದ ದಾರಿ ಆಯ್ದುಕೊಳ್ಳುವುದು ಅಥವಾ ಮೇಲಿನವರು ಹೇಳಿದಂತೆ ಮಾಡುವುದು ಈ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳುವ ಸಂದರ್ಭ ನಿಮಗೆ ಬಂದಿತ್ತಾ?
ನಾನು ಕರ್ತವ್ಯಕ್ಕೆ ಸೇರಿಕೊಂಡ ಮೊದಲ ದಿನದಿಂದಲೂ ನನ್ನ ಆಯ್ಕೆ ‘ಸರಿ’ ಮಾತ್ರ ಆಗಿತ್ತು. ಯಾವುದು ಸರಿಯೋ
ಅದೊಂದನ್ನೇ ನಾನು ಮಾಡುತ್ತಿದ್ದೆ. ಹೀಗೆ ಮಾಡುವಾಗ ಬಹಳಷ್ಟು ಸಲ ನೀವು ಮೇಲಧಿಕಾರಿಗಳ, ರಾಜಕಾರಣಿಗಳ ಅಥವಾ ಇನ್ನೂ ಬೇರೆಬೇರೆಯವರ ಸಿಟ್ಟಿಗೆ ಗುರಿಯಾಗಬೇಕಾಗುತ್ತದೆ. ಆದರೂ ನಾನು ‘ಸರಿ’ ದಾರಿಯನ್ನು ಮಾತ್ರ ಆಯ್ಕೆ  ಮಾಡಿಕೊಳ್ಳುತ್ತಿದ್ದೆ. ಒಮ್ಮೆ ನೀವು ನಿಮ್ಮ ವ್ಯಕ್ತಿತ್ವಕ್ಕೊಂದು ಘನತೆ ತಂದುಕೊಂಡ ಮೇಲೆ ಮುಂದಿನದು ಸುಲಭ. ಆಗ ನೀವು ಸರಿಯಾದುದನ್ನು ಮಾತ್ರ ಮಾಡಲು ಸ್ವತಂತ್ರರಾಗುತ್ತೀರಿ. ಬಹುಶಃ ಆರಂಭಿಕ ಕೆಲ ವರ್ಷಗಳಲ್ಲಿ ಈ ನಿಲುವಿಗೆ
ಅಂಟಿಕೊಳ್ಳುವುದು ಕಷ್ಟವಾಗುತ್ತದೆ. ಈ ವಿಷಯದಲ್ಲಿ ನನಗೆ ಬೆಂಗಳೂರಿನ ಪೋಸ್ಟಿಂಗ್ ಬಹಳ ಸುಲಭವಾಗಿತ್ತು. ಏಕೆಂದರೆ ಅಷ್ಟರಲ್ಲಾಗಲೇ ಜನರಿಗೆ ನಾನ್ಯಾರು ಎಂಬುದು ಗೊತ್ತಾಗಿತ್ತು.

ಭ್ರಷ್ಟಾಚಾರ ಹಾಗೂ ಲಂಚಾವತಾರದ ಬಗ್ಗೆ ಮಾತನಾಡುವಾಗ ನಿಮ್ಮ ಪುಸ್ತಕದಲ್ಲಿ ಯಾರ ಹೆಸರನ್ನೂ ಹೇಳುವುದಿಲ್ಲ. ಅಂತಹವರ ಹೆಸರು ರಹಸ್ಯವಾಗಿಡಬೇಕೆಂದು ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದೀರಾ?
ಈ ಪುಸ್ತಕ ನನ್ನ ಆತ್ಮಕತೆಯಲ್ಲ. ಅಥವಾ ಇದು ನನ್ನ ಬಗ್ಗೆೆ ಬರೆದುಕೊಂಡಿದ್ದೂ ಅಲ್ಲ. ಆತ್ಮಕತೆಯಾಗಿದ್ದರೆ ನಾನು ಎಲ್ಲರ ಹೆಸರನ್ನೂ ಬರೆಯುತ್ತಿದ್ದೆ. ಈ ಪುಸ್ತಕ ಪೊಲೀಸ್ ವ್ಯವಸ್ಥೆಯ ಬಗ್ಗೆ, ಕಾನ್‌ಸ್ಟೇಬಲ್‌ಗಳ ಬಗ್ಗೆ, ಹೆಡ್ ಕಾನ್‌ಸ್ಟೇಬಲ್‌ಗಳ ಬಗ್ಗೆ ಬರೆದಿದ್ದು.

ನೀವು 2020ರಲ್ಲಿ ರಾಜಕಾರಣಕ್ಕೆೆ ಸೇರಿದಿರಿ. ತಕ್ಷಣವೇ ನಿಮ್ಮ ಪುಸ್ತಕ ಬಿಡುಗಡೆಯಾಯಿತು. ಈಗ ಇದರ ಎರಡನೇ ಭಾಗವನ್ನೂ ನಿರೀಕ್ಷಿಸಬಹುದಾ?

ಪೊಲೀಸ್ ವ್ಯವಸ್ಥೆಯನ್ನು ಜನರು ತಪ್ಪಾಗಿ ಅರ್ಥಮಾಡಿಕೊಂಡಿದ್ದೇ ಹೆಚ್ಚು. ಬಹುತೇಕರಿಗೆ ಪೊಲೀಸರನ್ನು ಕಂಡರೆ ಆಗುವುದಿಲ್ಲ. ಹೀಗಾಗಿ ಈ ತಪ್ಪುಕಲ್ಪನೆ ಸರಿಪಡಿಸಲು ನನ್ನ ದೃಷ್ಟಿಕೋನದಿಂದ ಏನಾದರೂ ಬರೆಯಬೇಕು ಅಂದುಕೊಂಡಿ ದ್ದೇನೆ. ಅದರ ಮೂಲಕ ಜನರಿಗೆ ಪೊಲೀಸ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಬೇಕು. ಜನರಿಗೆ ತಿಳಿಸಬೇಕಾದ ಆಸಕ್ತಿಕರ ವಿಚಾರ ಹೊಳೆದಾಗ ಬಹುಶಃ ಎರಡನೇ ಪುಸ್ತಕ ಹೊರಬರುತ್ತದೆ.

ಐಪಿಎಸ್ ಅಧಿಕಾರಿಯಾಗಬೇಕು ಎಂದು ಬಯಸುವವರಿಗೆ ನಿಮ್ಮ ಸಲಹೆಯೇನು?
ದೇಶಕ್ಕೆ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳು ಬೇಕು. ಇವೆರಡೇ ಸಂಗತಿಗಳು ನಿಮ್ಮನ್ನು ಮುನ್ನಡೆಸುತ್ತವೆ. ಇದಕ್ಕೆ ಬೆಲೆ ಕಟ್ಟಲಾಗದು. ಹೀಗಾಗಿ ಪ್ರಾಮಾಣಿಕರಾಗಿರಿ, ದಕ್ಷರಾಗಿರಿ ಮತ್ತು ದೇಶಪ್ರೇಮದೊಂದಿಗೆ ಕೆಲಸ ಮಾಡಿ.