Monday, 25th November 2024

ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆ ಮುಂದೂಡಲು ಲಾಬಿ…!

ಆಗಸ್ಟ್ 27 ರಂದು ನಡೆಯಲಿರುವ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯನ್ನು ಮುಂದೂಡಲು ಆಗ್ರಹಿಸಿ ಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಲಾಬಿ ನಡೆಸುತ್ತಿದೆ. ಎಲ್ಲಾ ರೀತಿಯಲ್ಲಿ ಒತ್ತಡ ಹೇರಲು ಈ ಗುಂಪು ಯತ್ನಿಸುತ್ತಿದೆ. KPSC, DPAR ಮತ್ತು CMOನ ಎಲ್ಲಾ ಪ್ರಮುಖ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ ಮತ್ತು ವಾಟ್ಸಾಪ್ ಸಂದೇಶಗಳ ಸುರಿಮಳೆ ಸುರಿಸುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ನನ್ನ ಫೋನ್ ಅನ್ನು ನಾನು ಏರೋಪ್ಲೇನ್ ಮೋಡ್‌ನಲ್ಲಿ ಇಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ ಅತೀಕ್ ತಿಳಿಸಿದ್ದಾರೆ.

“ಕೆಪಿಎಸ್‌ಸಿ ಸುತ್ತಾ ಅನುಮಾನಗಳ ಹುತ್ತ! ಎಂಬಂತಹ ಪದಗಳನ್ನು ಬಳಸಿ ಸಾಕಷ್ಟು ತಪ್ಪು ಮಾಹಿತಿ ಹರಡಿ ಹಗರಣ ನಡೆದಿದೆ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ.

KPSC ಅಥವಾ ಸರ್ಕಾರವು ನೀಡಿರುವ ಹೆಚ್ಚುವರಿ ಅವಕಾಶ ಮತ್ತು ವಯೋಮಿತಿ ಸಡಿಲಿಕೆಯನ್ನು ಪಡೆದ ಸುಮಾರು ಈ 1500 ವಿದ್ಯಾರ್ಥಿಗಳ (ವಯೋಮಿತಿ ಸಡಿಲಿಕೆ ನೀಡಿದ ನಂತರ ತಡವಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ) ಈ ಲಾಬಿಗೆ ಮಣಿದರೆ ಸುಮಾರು 2.5 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ ಮತ್ತು ಅನ್ಯಾಯವನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ, ಈ 2.5 ಲಕ್ಷ ಅಭ್ಯರ್ಥಿಗಳು ಪೂರ್ಣ ಸಿದ್ಧತೆ ನಡೆಸಿದ್ದಾರೆ, ಪರೀಕ್ಷಾ ಕೇಂದ್ರಗಳಿಗೆ ಬರಲು ತಮ್ಮ ಪ್ರಯಾಣದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ.

ಮುಖ್ಯಮಂತ್ರಿಯವರ ಕಚೇರಿಯಲ್ಲಿ ನಡೆದ ಚರ್ಚೆಯ ಬಳಿಕ ಆಗಸ್ಟ್ 25ರಂದು ನಡೆಯುವ ಪರೀಕ್ಷೆಯನ್ನು ಮುಂದೂಡಿರುವ ಕುರಿತು ಸಿಎಂ‌ ರವರು ಆಗಸ್ಟ್ 3ರಂದು ಟ್ವೀಟ್ ಮಾಡಿದ್ದಾರೆ. ಆಗಸ್ಟ್ 5ರಂದು ಆಯೋಗವು ಒಂದೇ ಅಜೆಂಡಾದ ಮೂಲಕ ಪರೀಕ್ಷೆ ನಡೆಯಬೇಕಿದ್ದ ಅದೇ ವಾರದಲ್ಲಿ ಅಂದರೆ, ಆಗಸ್ಟ್ 27ರಂದು ಪರೀಕ್ಷೆ ನಡೆಸಲು ನಿರ್ಧಾರ ತೆಗೆದುಕೊಂಡಿದೆ. ಯಾಕೆಂದರೆ ಆಗಸ್ಟ್ 27ರಂದು ಬೇರೆ ಯಾವುದೇ ಪರೀಕ್ಷೆಗಳನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ ಪರೀಕ್ಷೆ ನಡೆಸಬೇಕಿದ್ದ ಈ ವಾರದಲ್ಲಿಯೇ ಪರೀಕ್ಷೆ ನಡೆಸಲು ಆಯೋಗ ನಿರ್ಧರಿಸಿದೆ.

ಈ ಪ್ರಕ್ರಿಯೆಯ ವೇಳೆ, ಸಾಕಷ್ಟು ಸಮಯವನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ ಎಂಬ ಅಂಶವು ತುಂಬಾ ಸ್ಪಷ್ಟವಾಗಿದ್ದು, “ಕೆಪಿಎಸ್‌ಸಿ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿದೆ” ಎಂದು ಹೇಳಲು ಯಾವುದೇ ಆಧಾರವಿಲ್ಲ.

 

2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲು ಸಾಕಷ್ಟು ತಯಾರಿ ನಡೆಸಲಾಗಿದೆ. ಪತ್ರಿಕೆಗಳ ಮುದ್ರಣಕ್ಕೆ ಸುಮಾರು 4-5 ಕೋಟಿ ಖರ್ಚಾಗುತ್ತದೆ. 2 ತಿಂಗಳು ಮುಂದೂಡಿ ಎಂದರೆ ಮುದ್ರಿತ ಪತ್ರಿಕೆಗಳನ್ನು ನಾಶಪಡಿಸಿ ಹೊಸ ಪತ್ರಿಕೆಗಳನ್ನು ಮುದ್ರಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಅಪಾಯವಿರುವುದರಿಂದ ಪೇಪರ್‌ಗಳನ್ನು ಹೆಚ್ಚು ಸಮಯ ಇಡುವಂತಿಲ್ಲ.