Tuesday, 26th November 2024

ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಲು ಕಿಸಾನ್ ಸಂಘ ಆಗ್ರಹ 

ತುಮಕೂರು: ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ,  ಬಿಸಿಯೂಟದಲ್ಲಿ ಕೊಬ್ಬರಿ ಎಣ್ಣೆ ಬಳಕೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ವತಿಯಿಂದ  ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟ ಭಾರತೀಯ ಕಿಸಾನ್ ಸಂಘದ ಪಾದಯಾತ್ರೆ, ಬಿ.ಎಚ್.ರಸ್ತೆ ಮೂಲಕ ಟೌನಹಾಲ್ ತಲುಪಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿದರು.ನಂತರ ಅಶೋಕ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಬೆಳ್ಳಾವೆ ಶ್ರೀಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ, ಕೊಬ್ಬರಿ ತುಮಕೂರು ಸೇರಿ ದಂತೆ ಮಧ್ಯ ಕರ್ನಾಟಕದ ಸುಮಾರು 12 ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ, ಕಳೆದ ವರ್ಷ ಕ್ವಿಂಟಾಲ್‌ಗೆ 18 ಸಾವಿರ ಇದ್ದ ಬೆಲೆ, ಈ ವರ್ಷ 8 ಸಾವಿರಕ್ಕೆ ಕುಸಿದಿದೆ.ಸರಕಾರ ನೀಡುತ್ತಿರುವ 11,730 ರೂ ಬೆಂಬಲ ಬೆಲೆ ಯಾವುದಕ್ಕೂ ಸಾಲದಾಗಿದೆ. ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸರಕಾರ ಕೂಡಲೇ ಕೊಬ್ಬರಿ ಬೆಲೆಯನ್ನು ಹೆಚ್ಚಿಸಬೇಕು.ಬಿಸಿಯೂಟದಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸುವ ಮೂಲಕ ಕೊಬ್ಬರಿಗೆ ಪ್ರೋತ್ಸಾಹ ನೀಡ ಬೇಕೆಂದು ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿ,ಸರಕಾರವೇ ನಿಗಧಿ ಪಡಿಸಿದ ಕೃಷಿ ಬೆಲೆ ಆಯೋಗ ಕ್ವಿಂಟಾಲ್ ಕೊಬ್ಬರಿಗೆ 16,750 ರೂ ಖರ್ಚಾಗುತ್ತದೆ ಎಂದು ವರದಿ ನೀಡಿದ್ದರೂ ಸರಕಾರ ನೀಡುತ್ತಿರುವ ಬೆಂಬಲ ಬೆಲೆ ಅದಕ್ಕಿಂತಲೂ ಕಡಿಮೆ ಇದೆ. ಹಾಗಾಗಿ ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಭಾರತೀಯ ಕಿಸಾನ್ ಸಭಾದ ರೈತರನ್ನು ಉದ್ದೇಶಿಸಿ ಮಾತನಾಡಿದ ಗುಬ್ಬಿ ತಾಲೂಕು ಗೊಲ್ಲಹಳ್ಳಿಯ ಶ್ರೀಸಿದ್ದಲಿಂಗೇಶ ಮಹಾಸಂಸ್ಥಾನದ ಶ್ರೀವಿಭವ ವಿದ್ಯಾ ದೇಶಿಕೇಂದ್ರ ಸ್ವಾಮೀಜಿಗಳು,ಭಾರತೀಯ ಸಮಾಜದಲ್ಲಿ ಕೃಷಿ ಮತ್ತು ಋಷಿ ಪರಂಪರೆ ಉತ್ಕೃಷ್ಟ ವಾದವು. ಭಾರತದ ಬೆಳವಣಿಗೆಯಲ್ಲಿ ಕೃಷಿಕರ ಪಾತ್ರ ಬಹಳ ದೊಡ್ಡದಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಯುವಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ರೈತರ ನೆರವಿಗೆ ಬರಬೇಕು ಎಂದರು.
ಪಾದಯಾತ್ರೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಧರ್,ಪ್ರಾಂತ ಕಾರ್ಯದರ್ಶಿ ಸಂತೋಷ್, ಗಂಗಾಧರಸ್ವಾಮಿ, ಜಿಲ್ಲಾ ಕೋಶಾಧ್ಯಕ್ಷ ಮಹಾಲಿಂಗಪ್ಪ, ಜಿಲ್ಲಾ ಮಹಿಳಾ ಪ್ರಮುಖ ನವೀನ್ ಸದಾಶಿವಯ್ಯ,ಜಿಲ್ಲಾ ಉಪಾಧ್ಯಕ್ಷ ಡಾ.ಮೋಹನ್, ತಾಲೂಕು ಅಧ್ಯಕ್ಷರುಗಳಾದ ಸಿದ್ದಲಿಂಗಪ್ಪ, ಶಿವನಂಜಪ್ಪ, ಆನಂದ್,ಹೇಮಣ್ಣ, ಚಂದ್ರಶೇಖರ್, ಜಗದೀಶ್,ಕುಮಾರ್,ಪ್ರವೀಣ್, ಮನೋಹರ್, ದಿನೇಶ್ ಪುಟ್ಟಸ್ವಾಮಿ, ನಾರಾಯಣ ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.