Friday, 13th December 2024

ಮದುವೆಯೊಳಗೊಂದು ಮದುವೆ

ದೂರದ ದಾವಣಗೆರೆಗೆ ಮದುವೆ ನೋಡಿ ಬರಲು ಹೊರಟವರು, ಮದುವೆ ಹಾಲ್‌ನಲ್ಲೇ ಮದುವೆಯ ಗಂಡಿನ ಪಾತ್ರ ವಹಿಸುವ ಪ್ರಸಂಗ
ಎದುರಾಯಿತು! ಆಗೇನು ಮಾಡಿದರು? ಓದಿ ನೋಡಿ.

ರಂಗನಾಥ ಎನ್.ವಾಲ್ಮೀಕಿ

ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು’ ಅಂತ ಒಂದು ಗಾದೆ ಇದೆ. ಮದುವೆ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ ಬಿಡ್ರಿ. ಮಂದಿ
ಕರಿಬೇಕು, ಬಟ್ಟೆೆ ಖರೀದಿಸಬೇಕು, ಚಪ್ಪರ ಹಾಕಬೇಕು, ಲಗ್ನ ಪತ್ರಿಕೆ ಪ್ರಿಂಟ್ ಮಾಡಬೇಕು. ಊಟದ ವ್ಯವಸ್ಥೆ ಮಾಡಬೇಕು. ಅಯ್ಯೋ ಈ ಪಟ್ಟಿ ಹನುಂಮತನ ಬಾಲದ ತರಹ ಬೆಳೆಯುತ್ತೆ. ಮದ್ವಿ ಮಾಡುವವರ ಬಾಳೆ ಹತ್ತು ಹನ್ನೊಂದು ನೋಡ್ರಿ. ಸಾಕ ಸಾಕಪ್ಪಾ ಆಗುತ್ತೆ. ಎಷ್ಟೇ ಎಚ್ಚರದಿಂದ ಮಾಡಿದ್ರು ಕೊನೆಗೂ ಒಂದು ಮಾತು ಬರುದ. ಹಿಂಗಾಗಿ ಮದ್ವಿ ಅಂದ್ರೆ ಒಂದು ಕಾರ್ಯಕ್ರಮ ನೋಡ್ರಿ.

ಬಹಳ ದುಡ್ಡು ಖರ್ಚು ಆಗ್ತದ. ಬಹಳ ತಯಾರಿ ಮಾಡಿಕೋಬೇಕು. ನಾ ಈಗ ಹೇಳಾಕ ಹೊಂಟಿರುವುದು ಖರ್ಚ ಇಲ್ಲದ ಮದುವೆ ಬಗ್ಗೆ ..ಅದ್ಯಾವೂದು ಅಂತೀರೇನು. ಹಾಗಂದರ ಕೇಳ್ರಿ, ಮದ್ವಿಯೊಳಗೊಂದು ಮದ್ವಿ ಮಾಡ ಕೊಂಡ ಕಥಿನಾ. ಬೆಣ್ಣೆ ನಗರಿ ದಾವಣಗೆರೆಗೆ ನಮ್ಮ ಬಂಧುಗಳ ಮದ್ವಿ ಇತ್ತರಿ. ಕೆಲಸಕ್ಕೆ ರಜೆ ಹಾಕಿ ಕುಟುಂಬ ಸಮೇತ ನಮ್ಮ ಜಂಬೂ ಸವಾರಿ ಶುರು. ಆತು. ಮೂರು ರೀತಿಯ ಪಯಣ, ನೂರಾರು ಅನುಭವ.

ಹಳಿಯಾಳದಿಂದ ಧಾರವಾಡ ಸಾದಾ ಬಸ್ಸು. ಧಾರವಾಡದಿಂದ ಹುಬ್ಬಳ್ಳಿಗೆ ಚಿಗರಿ ಬಸ್ಸು. ಹುಬ್ಬಳ್ಳಿಯಿಂದ ಬೆಣ್ಣೆನಗರಿ ದಾವಣಗೆರೆಗೆ ರೈಲು ಪಯಣ. ಅಂತೂ ಇಂತೂ ಸಕಾಲಕ್ಕೆ ಹೋಗಿ ತಲುಪಿದಿವಿ ದಾವಣಗೆರೆಗೆ. ಮೊದಲೇ ಮದ್ವಿ ಮಂಟಪದ ಜಾಗ ತಿಳಿದಿದ್ದೆ. ದಾವಣಗೆರೆ ಇಳಿದಿದ್ದೆ ತಡ, ಬೆಣ್ಣೆ ದೋಸೆಯ ವಾಸನೆ ಮೂಗಿಗೆ ತಾಗಿತು. ಬೆಣ್ಣೆ ನಗರಿಗೆ ಬಂದು ಬೆಣ್ಣೆ ದೋಸೆ ತಿನ್ನದೇ ಹೋದ್ರೆ ಹೇಂಗೆ? ಸೀದಾ ಉಪಹಾರ ಗೃಹ ಒಳಹೊಕ್ಕು ಗಡದ್ದಾಗಿ ಬೆಣ್ಣೆೆ ದೋಸೆ, ತಿಂದು ತ್ರಿಚಕ್ರ ವಾಹನ ಆಟೋ ಮೂಲಕ ಶಿವ ಪಾರ್ವತಿ ಕಲ್ಯಾಣ ಮಂಟಪಕ್ಕೆ ಹೋದ್ವಿ.

ನಮಗಾಗಿ ಒಂದು ರೂಮ್ ಕೊಟ್ರು. ಎಲ್ಲ ಬಂದ ಮೇಲೆ ಅದು ತುಂಬಿ ಹೋಗಿದ್ದರಿಂದ, ಇಕ್ಕಟ್ಟಾದ ಜಾಗದಲ್ಲಿ ಮಲಗಿದ್ದು ಬೇರೆ ವಿಷಯ. ಮುಖ ತೊಳೆದು ಫ್ರೆಶ್ ಆಗಿ ಒಂದು ಕಪ್ ಬಿಸಿ ಚಹಾ ಹೀರಿದೆ. ಆರಾಮ ಅನಿಸಿತು. ಅಷ್ಟರಲ್ಲಿ ಮದುಮಗಳು (ಕಾಕನ ಮಗಳು) ಬಂದಳು. ಮದ್ವಿ ಸಂಪ್ರದಾಯ ಒಂದು ಕಡೆಯಿಂದ ಮತ್ತೊಂದು ಕಡೆ ಬ್ಯಾರೇನ ಇರತಾವ ನೋಡ್ರಿ. ವಧು ವರರನ್ನು ಕರೆದುಕೊಂಡು ಅವರ ಕಡೆ, ನಮ್ಮ ಕಡೆ ಕೆಲವು ಜನ ಅಲ್ಲಿಯೇ ಪಕ್ಕ ಗುಡಿಗೆ ಹೋದ್ವಿ. ಡೋಲು, ವಾದ್ಯ ವಾದನ ಇತ್ತು. ಪೂಜೆ, ಪುನಸ್ಕಾರ, ನಮಸ್ಕಾರ, ಕಾಣಿಕೆ ಅರ್ಪಣೆ ಎಲ್ಲಾ ಮುಗೀತು.

ಹುಡುಗನಿಗೆ ಹುಡುಗಿ ಡ್ರೆಸ್
ಆಗ ಶುರು ನೋಡ್ರಿ ಮದ್ವಿಯೊಳಗೊಂದು ಮದ್ವಿ! ಗುಡಿ ಮುಂದ ಒಂದು ಹಾಸಿಗೆ ಹಾಸಿದ್ರು. ಈಗಾಗಲೇ ಗಂಡಿನ ಕಡೆಯಿಂದ ಇಬ್ಬರೂ ಯುವಕರು ಸೀರೆಯುಟ್ಟು ಥೇಟ್ ಹುಡುಗಿಯರ ತರಹ ಆಗಿದ್ರು. ಅವರ ವೈಯಾರ ನೋಡಿದ್ರೇ ಹುಡುಗಿಗೆ ಅವರ ವ್ಯತ್ಯಾಸನೇ ಇಲ್ಲ. ಹೀಗಿರಲು, ‘ಹೆಣ್ಣಿನ ಕಡೆ ಯವರು ಇಬ್ಬರು ಯುವಕರು ಯಾರಾದ್ರೂ ಹಾಸಿಗೆ ಮೇಲೆ ಕೂಡರಿ’ ಎಂದ್ರು.

ಅಲ್ಲಿ ನಾನು, ಇನ್ನೊಬ್ಬರು ಬಿಟ್ರೆ ಬೇರೆ ಯಾರೂ ಇರಲಿಲ್ಲ. ಕುರಿಗಳು ಹಳ್ಳಕ್ಕೆ ಬೀಳುವ ತರಹ ನಾವೂ ಬಿದ್ವಿ. ‘ಏನೋ ಸಂಪ್ರದಾಯ, ಸ್ವಲ್ಪ
ಹೊತ್ತಿನಲ್ಲೇ ಏಳಿಸುವರು’ ಎಂಬ ಸಾದಾ ಸೀದಾ ಲೆಕ್ಕಾಚಾರ ನಮ್ಮದು. ಅಲ್ಲಿ ನೋಡಿದ್ರ ಬ್ಯಾರೇನೆ ಐತಿ. ನಮಗೆ ಆರತಿ ಬೆಳಗಿದ್ರು. ಹಾಂ, ನಮ್ಮ ಪಕ್ಕ ಹುಡುಗಿಯರಲ್ಲದ, ಹುಡುಗಿಯರ ವೇಷ ತೊಟ್ಟ ಸೀರೆಯುಟ್ಟು ಮದುಮಗಳ ತರಹ ಆದ ಹುಡುಗರು ಕುಂತ್ರು. ಆಗಲೇ ಗೊತ್ತಾಯಿತು, ನನ್ನ ಜೀವನ ದಲ್ಲಿ ಮತ್ತೊಂದು ಮದ್ವಿಗೆ ಅಣಿಯಾಗ್ತಾ ಇರುವೆ ಎಂದು.

ನಮಗೆ ಕುಂಕುಮ ಹಚ್ಚಿದ್ದು, ಆರತಿ ಬೆಳಗಿದ್ರು, ವಿಭೂತಿ ಹಚ್ಚಿದ್ರು. ಇದೇ ರೀತಿ ನಾವೂ ಪಕ್ಕ ಕುಂತು ನಮ್ಮ ಮದ್ವಿ ಆಗುವ ಹುಡುಗಿಯರಿಗೆ (ಹುಡುಗರು) ಹಚ್ಚಿದ್ವಿ. ಎರಡೂ ಮದ್ವಿ ನಡಿತಾ ಇದ್ದುವು. ಒರಿಜಿನಲ್ ವಧು, ವರರು ಈ ಡುಪ್ಲಿಕೇಟ್ ವಧು ವರರ ಮದ್ವಿ ನೋಡ್ತಾ ನಿಂತಿದ್ರು. ಕ್ಯಾಮರಾಗಳು ನಮ್ಮನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು, ಮುತ್ತೈದೆಯರು ಆರತಿ ಬೆಳಗಿದ್ದೇ ಬೆಳಗಿದ್ದು, ಅಕ್ಕ ಪಕ್ಕ ನಿಂತ ನೋಡುವವರು ನಕ್ಕಿದ್ದೇ ನಕ್ಕಿದ್ದು .

ಈರುಳ್ಳಿ ಹಾರ
ಇದೆಲ್ಲಾ ಆದ ಮೇಲೆ ಹುಡುಗಿಯರು ಹಾರ ಹಾಕುವ ಕ್ರಿಯೆ. ಆ ಹಾರದ ಬೆಲೆ ಕೇಳಿದ್ರೆ ಹೌಹಾರುವಿರಿ! ಎಂತವು ಅಂತೀರಾ? ಏನಿಲ್ಲ ಬಿಡ್ರಿ. ಪಕ್ಕಾ ಮನೆಯಲ್ಲಿ ತಂದ ಈರುಳ್ಳಿ, ಮೆಣಸಿನಕಾಯಿ ಹಾರ ಹಾಕಿದ್ರು. ಇನ್ನು ಏನೇನೂ ಮಾಡುವರಪ್ಪಾ ಅಂತಾ ಹುಡುಗರಾದ ನಾವೂ ಮುಖ ಮುಖ ನೋಡಿ ಕೊಳ್ತಾ ಇದ್ವಿ. ನಾವೂ ಆರತಿ ಬೆಳಗಿದ್ವಿ. ನಮ್ಮ ಡುಪ್ಲಿಕೇಟ್ ಹೆಂಡ್ರು ನಮ್ಮ ಕಾಲಿಗೆ ನಮಸ್ಕಾರ ಮಾಡಿದ್ರು. ಅವರ ತಯಾರಿ ನೋಡಿದ್ರೆ, ಅಲ್ಲಿಯೇ ಸಂಸಾರ ಹೂಡಿಸುವ ತರಹ ಇತ್ತು.

ಅಷ್ಟರಲ್ಲಿ ಎಲ್ಲರೂ ಅಕ್ಕಿ ಕಾಳು ಕೈಯಲ್ಲಿ ಹಿಡಕೊಂಡ್ರು. ಅರ್ಚಕರು ಮಂತ್ರ ಹೇಳಿದ್ರು. ಅಕ್ಕಿ ಕಾಳ ಹಾಕ್ರಿ ಅಂದ ತಕ್ಷಣ ಎಲ್ಲರೂ ಹಾಕಿದ್ರು. ಈ ಮದುವೆ ನಾನು ಅಕ್ಕಿ ಕಾಳು ಹಾಕಲು ಹೋದಾವ. ಹಾಕಿಸಿಕೊಳ್ಳುವ ಪರಿಸ್ಥಿತಿ ಬಂತು. ಅಷ್ಟರಲ್ಲಿ ಹಿಂದೆ ನಿಂತವರು ನಮ್ಮ ಮೇಲೆ ಅಕ್ಕಿ ಹಿಟ್ಟು ಸುರಿಯಬೇಕೆ!

ಇನ್ನು ಕೆಲವರು ವಸ್ತ್ರ ಹಾಕಿದ್ರು. ಅರೆಕ್ಷಣ ಏನು ಆಗ್ತಾ ಇದೆ ಗೊತ್ತೇ ಆಗಲಿಲ್ಲ. ಹಿಟ್ಟಿನಿಂದ ನನ್ನ ಬಟ್ಟೆಯಲ್ಲಾ ಬಿಳಿಯಾದವು. ಅಂತೂ ಮದ್ವಿ ಮುಗೀತು. ನೋಡುತ್ತಿದ್ದವರೆಲ್ಲಾ ನಕ್ಕರು, ಇದೊಂದು ಹಾಸ್ಯ ಪ್ರಸಂಗ ಎಂಬಂತೆ. ಎಲ್ಲಾ ಮಾಡುವುದು ಮಾಡಿ, ಹುಡುಗಿನ (ನಮ್ಮ ಮದ್ವಿ ಹುಡುಗಿ) ಮಾತ್ರ ನಮ್ಮ ಜೊತೆ ಕಳಿಸಲೇ ಇಲ್ಲ ನೋಡ್ರಿ!

ಮದ್ವಿ ಮುಗಿಸಿಕೊಂಡು ಬಂದರೂ, ಮದ್ವಿಯೊಳಗೊಂದು ಮದ್ವಿ ಇನ್ನೂ ನೆನಪಿಗೆ ಬರುತ್ತೆ. ಜತೆಗೊಂದು ಮುಗುಳುನಗೆ. ಹೀಗೂ ಉಂಟೇ ಎಂಬ ಪ್ರಶ್ನೆ ಕೂಡಾ!