Saturday, 21st September 2024

ಸದನದೊಳ್ ಕಲಿ ಪಾರ್ಥನ್: ಎಂ ಸಿ ಎನ್‍

ಸ್ಮರಣೆ

ವೈ ಜೆ ಅಶೋಕ್ ಕುಮಾರ್‌

ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ನಗರಾಭಿವೃಧ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಜೆ, ವಾಸುದೇವನ್ ನ್ಯಾಯಾಲ
ಯ ನಿಂದನೆ ಆರೋಪ ಹೊತ್ತು ಜೈಲು ಪಾಲಾಗಬೇಕಾಯಿತು. ಕಾನೂನು ಇಲಾಖೆ ಮತ್ತು ಸರ್ಕಾರ ಯಾವ ತಪ್ಪೂ ಎಸಗದ ಆ ಅಧಿಕಾರಿಯ ಪರವಾಗಿ ನಿಂತರೂ ಜೈಲು ಶಿಕ್ಷೆ ತಡೆಯಲಾಗಲೇ ಇಲ್ಲ. ಅಂದಿನ ಮುಖ್ಯಮಂತ್ರಿ ಹೆಚ್.ಡಿ.ದೇವೇಗೌಡರು ವಿಧಾನ
ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ‘ನ್ಯಾಯಾಂಗ ವ್ಯವಸ್ಥೆಯ ಕುರಿತು ದೇಶದ ಪ್ರಜ್ಞಾವಂತರು ಚರ್ಚೆ ನಡೆಸಬೇಕೆಂದು’ ಒತ್ತಾಯಿಸುತ್ತಾರೆ. ಅವರಿಗೆ ಬೆಂಬಲವಾಗಿ ಅವರದೇ ಸಂಪುಟದ ಕಾನೂನು ಮತ್ತು ಸಂಸದೀಯ ಸಚಿವ ಮೇರಿಯಂಡ ಚಂಗಪ್ಪ ನಾಣಯ್ಯ, (17 ಸೆಪ್ಟೆಂಬರ್‌, 1939 ಶನಿವಾರ, ವೀರರಾಜಪೇಟೆ) ಆ ಪ್ರಕರಣವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ.

1978 ರ ಚುನಾವಣಾ ಸಮೀಕ್ಷೆಗೆ ಮಡಿಕೇರಿಗೆ ಹೋಗಿದ್ದ ಹಿರಿಯ ಪತ್ರಕರ್ತರಾದ ವಿ.ಎನ್.ಸುಬ್ಬರಾವ್ ಮತ್ತು ಕೆ. ಸತ್ಯನಾರಾ ಯಣ ಅವರು ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಕನ್ನಡಪ್ರಭದಲ್ಲಿ ಚುನಾವಣೆ ಚಿತ್ರಣ ಬರೆಯುತ್ತ ‘ಸುಬ್ಬಯ್ಯ ಅಥವಾ
ನಾಣಯ್ಯ ಯಾರೇ ಗೆದ್ದರೂ ಅಸೆಂಬ್ಲಿಗೆ ಒಬ್ಬ ಉತ್ತಮ ಸಂಸದೀಯ ಪಟು ದೊರೆಯುತ್ತಾರೆ ’ ಎಂದು ವಿಶ್ಲೇಷಿಸುತ್ತಾರೆ. 1978 ರ ಚುನಾವಣೆಯಲ್ಲಿ ದೇವರಾಜ ಅರಸರ ನಾಯಕತ್ವದಲ್ಲಿ ಇಂದಿರಾಗಾಂಧಿಯನ್ನು ಎಂದೂ ಒಪ್ಪದ ನಾಣಯ್ಯ ಕಾಂಗ್ರೆಸ್ ಶಾಸಕರಾಗುತ್ತಾರೆ.

ಎ.ಕೆ.ಸುಬ್ಬಯ್ಯನವರು ಅದಾಗಲೇ ಮೇಲ್ಮನೆಯ ಸದಸ್ಯರಾಗಿರುತ್ತಾರೆ. ಜನ ಸಂಘ, ಬಿಜೆಪಿಯನ್ನು ತಳಮಟ್ಟದಿಂದ ಕಟ್ಟುತ್ತಿದ್ದ ಎಕೆಎಸ್‌ಗೆ, ಎಂಸಿಎನ್ ತೊಡಕಾಗಿ ಕಾಣಿಸುತ್ತಾರೆ. ಸಹಕಾರಿ ವಲಯದ (ಕೆ ಎಚ್ ಪಾಟೀಲರು ಕೂಡ ಸಹಕಾರಿ ತತ್ವದಿಂದ ಬಂದವರು) ನಾಣಯ್ಯ ಅದಾಗಲೇ ಒಮ್ಮೆ ಚುನಾವಣೆಗೆ ಪ್ರಯತ್ನಿಸಿ ವಿಫಲವಾಗಿದ್ದರೂ ಅರಸರ ಆಹ್ವಾನ ತಿರಸ್ಕರಿಸಲಾಗದೇ ಚುನಾವಣೆಗೆ ನಿಲ್ಲುತ್ತಾರೆ. ಅದಕ್ಕೆ ಪ್ರಮುಖ ಕಾರಣಕರ್ತರು ಗುಂಡೂರಾವ್, ಮಡಿಕೇರಿಯ ಸುದರ್ಶನ ಅತಿಥಿ ಗೃಹಕ್ಕೆ ಬಂದಿದ್ದ ಅರಸರು ಚುನಾವಣೆ ವೆಚ್ಚಕ್ಕೆ ನೀಡುವ ಹಣ ಹತ್ತು ಸಾವಿರ ರುಪಾಯಿ. ಮುಂದೆ ಅರಸು ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡು ಕಾಲಾ ನಂತರ ಜೆ.ಹೆಚ್.ಪಟೇಲರ ನಾಯಕತ್ವವನ್ನು ಅನುಸರಿಸಿ ಕ್ರಾಂತಿ ರಂಗದ ಉಪಾಧ್ಯಕ್ಷರಾದರಾದರೂ  (ನಜೀರ್ ಸಾಬ್ ಅಧ್ಯಕ್ಷರು) 1983 ರ ಚುನಾವಣೆಯಲ್ಲಿ ಮಡಿಕೇರಿಯಿಂದ ಸೋಲುತ್ತಾರೆ. ಗುಂಡೂರಾಯರನ್ನು ಸೋಮವಾರಪೇಟೆಯಲ್ಲಿ ಜೀವಿಜಯ ಪರಾಭವಗೊಳಿಸುತ್ತಾರೆ.

1986 ರಲ್ಲಿ ವಿಧಾನಪರಿಷತ್ತು ಪ್ರವೇಶಿಸಿ ಮಂತ್ರಿಯಾದರು. 1990 ರಲ್ಲಿ ವಿರೋಧಪಕ್ಷದ ನಾಯಕರು,1994 ರಿಂದ ದೇವೇಗೌಡರು ನಂತರ ಪಟೇಲರ ಸಂಪುಟದಲ್ಲಿ ಮಂತ್ರಿಯಾಗಿ ವಾರ್ತಾ ಇಲಾಖೆಗೆ ಕಾಯಕಲ್ಪ ಮಾಡಿದರು.ಹಿಂದಿನ ಮೊಯ್ಲಿ ಸರಕಾರ
ಬಿಟ್ಟು ಹೋಗಿದ್ದ ಮುದ್ರಣ ಮತ್ತು ಜಾಹೀರಾತು ಬಾಕಿದಾರರೊಂದಿಗೆ ಚರ್ಚಿಸಿ ಸುಮಾರು 60 ಲಕ್ಷ ರೂಪಾಯಿಗಳನ್ನು ವಾರ್ತಾ ಇಲಾಖೆಗೆ ಉಳಿಸಿದ್ದು ಅವರ ಸಂಧಾನದ ಫಲ. ಎಂ ಸಿ ನಾಣಯ್ಯ ಮುಂದೆ ಶಾಶ್ವತವಾಗಿ ಮೇಲ್ಮನೆಯ ಸದಸ್ಯರಾಗಿ ಆಡಳಿತ
ಮತ್ತು ವಿರೋಧಪಕ್ಷದಲ್ಲಿ ಡಬ್ಬಲ್ ಆಕ್ಟಿಂಗ್‌ ಮಾಡುತ್ತಾ ಆಕ್ಟೀವ್ ಆಗಿರುತ್ತಾರೆ.

ಬಿಜೆಪಿಯ ಕಟ್ಟಾ ಅನುಯಾಯಿ ಡಾ. ಎಂ.ಆರ್.ತಂಗಾ ಅವರಂತವರೇ ‘ನಾನು ಎಂ.ಸಿ.ನಾಣಯ್ಯ ನವರ ಅಭಿಮಾನಿ’ ಅಂತ ಹೇಳಿರುವುದು ಒಂದು ಗರಿಯಾದರೆ, ವಿಧಾನಸಭೆ ಮತ್ತು ಪರಿಷತ್ತುಗಳಲ್ಲಿ ಅವರದು ವೀರಾವೇಷ. ಯಾವುದೇ ಕೆಟ್ಟ ಕೇಸಾದರೂ
ನಾಣಯ್ಯ ವಾದದಲ್ಲಿ ಗೆದ್ದು ಬಿಡುತ್ತಾರೆ. ಅವರ ಆರಂಭಿಕ ವೃತ್ತಿಯೂ ಅದೇ ಆಗಿದೆ. ಸರ್ಕಾರದ ಮಂತ್ರಿ ಆಗಿದ್ದಾಗ ಅವರು ಬ್ಯಾಡ್ ಕೇಸಿನ ಗುಡ್ ಲಾಯರ್, ಅದೇ ವಿರೋಧ ಪಕ್ಷದ ನಾಯಕರಾಗಿದ್ದಾಗ ಎಷ್ಟೋ ವಾದವನ್ನು ಗೆದ್ದು ಉತ್ತಮ ಕೇಸನ್ನಾಗಿ
ಪರಿವರ್ತಿಸಿದ್ದಾರೆ. ಹಾಗಾಗಿ ಅವರು ಸದನ ಶೂರ. ಅರ್ಜುನ, ಬಬ್ರುವಾಹನ ಎರಡೂ ಪಾತ್ರ ನಿರ್ವಹಿಸಿದವರು. ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂತ್ರಿಯಾಗಿದ್ದರೂ ವರನಟರೊಂದಿಗೆ ನೃತ್ಯ ಮಾಡಿ ಮುಖ್ಯಮಂತ್ರಿ ದೇವೇಗೌಡರ
ಮುಂದೆಯೇ ಸೈ ಅನಿಸಿಕೊಂಡವರು.

ಎಲ್ಲರಿಗೂ ನಾಣಯ್ಯ ಬೇಕೇ ಬೇಕು. ಪಟೇಲರ ಸರಕಾರದಲ್ಲಂತೂ ವಿರೋಧ ಪಕ್ಷದ ನಾಯಕರುಗಳು ‘ಈ ಸರ್ಕಾರದಲ್ಲಿ ನಾಣಯ್ಯ ಒಬ್ಬರಿದ್ದರೆ ಮಂತ್ರಿ ಮಂಡಲ ಇದ್ದಂತೆ ’ ಎಂಬ ಗೌರವವನ್ನು ಸೂಚಿಸುತ್ತಿದ್ದರು. ಹತ್ತಾರು ಇಲಾಖೆಗೆ ಸಂಬಂಧಿಸಿದ ಸಮಜಾಯಿಶಿಯನ್ನು ಅವರೇ ನೀಡುತ್ತಿದ್ದರು. ಹೊಸ ಮಂತ್ರಿಗಳ ಪಾಲಿಗೆ ನಾಣಯ್ಯ ಮತ್ತು ಎಂ.ಪಿ.ಪ್ರಕಾಶ್ ವರಪ್ರಸಾದ. ಇಕ್ಕಟ್ಟು ಬಿಕ್ಕಟ್ಟುಗಳಿಂದ ಎಷ್ಟೋ ಸಲ ವಿವಿಧ ಇಲಾಖೆಗಳ ಮಂತ್ರಿಗಳು, ಮುಖ್ಯಮಂತ್ರಿಯನ್ನು ಪಾರು ಮಾಡಿ ವಿರೋಧ ಪಕ್ಷದ ಬಾಯಿ ಮುಚ್ಚಿಸಿದ್ದಾರೆ. ಸಮಸ್ಯೆಗಳನ್ನು ಥಟ್ಟನೆ ಸೂಕ್ಷ್ಮವಾಗಿ ಗ್ರಹಿಸುವ ತೀಕ್ಷ್ಣಮತಿ ನಾಣಯ್ಯ ಕಾವೇರಿ ನದಿ
ನೀರು ಹಂಚಿಕೆ ಕುರಿತ ಜಟಿಲಗೊಂಡ ಸಮಸ್ಯೆ, ಆಲಮಟ್ಟಿ ಅಣೆಕಟ್ಟಿನ ಎತ್ತರದ ವಿವಾದ, ಕೊಡಗಿನ ಪ್ರತ್ಯೇಕತೆಯ ವಾದ, ರಾಜ್ಯದ ಅಬಕಾರಿ ನೀತಿಯ ಬಗ್ಗೆ ಸುಪ್ರೀಂಕೋರ್ಟ್ ಟೀಕೆಗೆ ಸಮರ್ಥನೆ, ಹೆಗಡೆಯವರ ಲೋಕಶಕ್ತಿಗೆ ಉದಯದ ಸಂದರ್ಭದಲ್ಲಿ ಅತೃಪ್ತ ಶಾಸಕರ ಮನವೊಲಿಕೆ, ಮುಖ್ಯಮಂತ್ರಿ ಪಟೇಲ್ ಮತ್ತು ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿನ ಭಿನ್ನಮತ, ಆ ಎಲ್ಲಾ ಸಂದರ್ಭಗಳಲ್ಲೂ ಅವರು ಸಂಧಾನಕಾರರಾಗಿ ಒಮ್ಮತ ಮೂಡಿಸಲು ಪ್ರಯತ್ನಿಸಿ ಯಶಸ್ವಿಯೂ ಆಗಿದ್ದರು.

ಬಸವಲಿಂಗಪ್ಪ ಆಸ್ತಿ ಪ್ರಕರಣ, ಕೊಡಗಿನ ಕೋಟ್ಯಾಂತರ ಅರಣ್ಯ ಭೂಮಿ ಒತ್ತುವರಿಯ ರಕ್ಷಣೆ, ರೋರಿಚ್ ಎಸ್ಟೇಟ್ ಮತ್ತು ಅರಮನೆಯ ಜಾಗವನ್ನು ಸರ್ಕಾರದ ಸುಪರ್ದಿಗೆ ತಂದದ್ದು … ಇತ್ಯಾದಿ ಒಬ್ಬ ಕಾನೂನು ಸಂಸದೀಯ ಮಂತ್ರಿ ಏನೆಲ್ಲಾ
ಮಾಡಬಹುದೆಂದು ಮುದ್ರೆ ಒತ್ತಿದ್ದಾರೆ. ಜನತಾ ಪರಿವಾರ ಒಡೆದ ಮನೆಯಾದಾಗ ತಮ್ಮ ನಾಯಕರುಗಳಾದ ಪಟೇಲ್ ಹಾಗೂ ದೇವೇಗೌಡರ ಬಣದೊಂದಿಗೆ ಗುರುತಿಸಿಕೊಳ್ಳಲಾಗದೇ ಒದ್ದಾಡಿದ ನಾಣಯ್ಯ ‘ತಟಸ್ಥ ಜನತಾದಳ’ವಾಗಿ ಸ್ನೇಹಿತರಾದ ರಮೇಶ ಕುಮಾರ್, ಬಿ ಎಲ್ ಶಂಕರ್, ಮೊಯಿದ್ದೀನ್, ಜಯಪ್ರಕಾಶ ಹೆಗಡೆಯೊಂದಿಗೆ ತಟಸ್ಥವಾಗಿಯೇ ಉಳಿದರು. ಕಾಂಗ್ರೆಸ್ ಹಾಗೂ ಬಿಜೆಪಿಯ ಒತ್ತಡಗಳಿಗೆ ಮಣಿಯದ ಏಕೈಕ ನಾಯಕ ನಾಣಯ್ಯ. ಆರಂಭದಲ್ಲಿ ಅರಸರೊಂದಿಗೆ ಹೆಜ್ಜೆ ಹಾಕಿದಾಗ ತಮ್ಮೊಂದಿಗೆ ಇರುವಂತೆ ಗುಂಡೂರಾಯರ ಒತ್ತಾಯವನ್ನು ನಿರಾಕರಿಸಿದಂತೆಯೇ, ಕಾಲನಂತರ ಜಾರ್ಜ್ ಫರ್ನಾಂಡೀಸ್ ಗೆಳೆತನದ ಪಟೇಲರ ಬಿಜೆಪಿ ಸಖ್ಯವನ್ನು ನಯವಾಗಿಯೇ ನಿರಾಕರಿಸಿದರು.

ಜನತಾದಳ( ಯು) ರಚನೆಯ ಅಫಿಡವಿಟ್‌ಗೆ ಸಹಿ ಹಾಕದಿದ್ದಾಗ ‘ನಾಣಯ್ಯ ನೀವು ಸಹಿ ಹಾಕದಿದ್ದರೆ ನನಗೆ ನೋವಾಗುತ್ತದೆ’ ಎಂಬ ಪಟೇಲರ ಮಾತಿಗೆ ಕಣ್ಣು ತುಂಬಿಕೊಂಡು ಅವರೊಂದಿಗಿನ ಮೂರು ದಶಕಗಳ ರಾಜಕೀಯ ಸಂಬಂಧ ತೊರೆದು
ಹೊರನಡೆದು ತಟಸ್ಥರಾದರು. ನಾಣಯ್ಯನವರ ರಾಜಕೀಯ ಗುರು ದೇವರಾಜ ಅರಸರು ಮುಖ್ಯಮಂತ್ರಿ ಸ್ದಾನ ಕಳೆದುಕೊಂಡು
ಹಲವರಿಂದ ವಂಚನೆಗೊಳಗಾದ ಮೇಲೆ ಏಕಾಂಗಿಯಾಗಿ ಒಂದು ಸಂಜೆ ನಾಣಯ್ಯನವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಅರಮನೆಯ ಒಂದು ಭಾಗದಲ್ಲಿ ವಿಶ್ರಾಂತಿ ಪಡೆಯಲು ಹೋಗುತ್ತಿದ್ದ ಕೊಠಡಿಗೆ ಕರೆದೊಯ್ದು ತಮ್ಮ ಅಳಲನ್ನೆಲ್ಲಾ ತೋಡಿ ಕೊಂಡ ಅವರು ‘ನಾಣಯ್ಯ ಇಲ್ಲಿ ವಿಸ್ಕಿ ಇಲ್ಲ ಬ್ರಾಂದಿ ಮಾತ್ರ ಇದೆ ’ ಎಂದರು. ಮಾರ್ಟೇಲ್ ಬ್ರಾಂಡಿನ ಬ್ರಾಂದಿ ಅದು.

ಸರಿ ರಾತ್ರಿಯ ತನಕ ಮಾತಾಡಿ ಹಗುರಾದ ಅರಸರು ‘ಇನ್ನೊಮ್ಮೆ ಸೇರೋಣ’ ಎಂದು ಊಟ ಮಾಡಿಸಿ ಬಿಳ್ಕೊಟ್ಟರು. ಇನ್ನೊಮ್ಮೆ  ಸೇರುವ ದಿನ ಬರಲೇ ಇಲ್ಲ. ಮಾರ್ಟೇಲ್ ಬ್ರಾಂದಿಯೊಂದಿಗಿನ ಚರಮ ಗೀತೆಯದು. ಅರಸರು ಅಸ್ತಂಗತರಾದರು. ಅದೇ ಕೊನೆ ಭೇಟಿಯೂ ಆಯಿತು. ಇಂತಹ ಲೆಕ್ಕ ಇಡಲಾಗದಷ್ಟು ಸಿಹಿ ಕಹಿ ನೆನಪುಗಳು ಎಂ ಸಿ ನಾಣಯ್ಯನವರ ಎದೆಯೊಳಗಿದೆ. ರಾಜ್ಯದ ಯಾವ ಪತ್ರಿಕೆಗಳು ಅವರನ್ನು ಟೀಕಿಸಿ ಬರೆದದ್ದಿಲ್ಲ. ಆದರೆ ವಾರಪತ್ರಿಕೆಯೊಂದರ ಸಂಪಾದಕರು ಸಾಲ ಪಡೆದ ಹಣವನ್ನು ಹಿಂತಿರುಗಿಸಬೇಕಾದೀತೆಂಬ ಆತಂಕದಲ್ಲಿ ನಾಲ್ಕು ಸಾಲು ಇಲ್ಲದ್ದನ್ನು ಬರೆದು ಸ್ನೇಹ ಕಡಿದುಕೊಂಡಿದ್ದನ್ನು, ಸುಮಾರು
ಇಪ್ಪತ್ತು ವರ್ಷಗಳ ಹಿಂದೆ ಅವರ ಮಡಿಕೇರಿ ಮನೆಯಲ್ಲಿ ಹೇಳಿಕೊಂಡು ಬೇಸರಿಸಿಕೊಂಡಿದ್ದರು.

ಯಾವುದೇ ಅಧಿಕಾರ ಅವರು ಬೇಡಿ ಪಡೆದದ್ದಲ್ಲ. ಹುಡುಕಿ ಬಂದದ್ದು. ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತೆ ಕೊಡವ ಸಂಸ್ಕೃತಿಯ ಶಿಸ್ತು, ಧೈರ್ಯವಂತಿಕೆ, ಛಲವನ್ನು ನಾಣಯ್ಯನವರಲ್ಲಿ ಕಾಣಬಹುದು.
‘ಏನಂತ ಕಂಡರೇ’ ಎಂದು ನಸುನಗುತ್ತಲೇ ಆಡುವ ಮೊನಚು ಮಾತುಗಳಿಂದ ಎದುರಾಳಿಗಳನ್ನು ಮಣಿಸಬಲ್ಲವರು. ಅದಕ್ಕೆ ಪೂರಕವಾದ ಅಧ್ಯಯನವೇ ಅವರ ವಿಷಯ ಮಂಡನೆಗೆ ಮೂಲ ಸರಕು.

ಹಾಗೆಯೇ, ಅವರೊಮ್ಮೆ ರಾಜ್ಯಸಭೆಗೆ ಹೋಗಬೇಕೆನ್ನುವ ಹಂಬಲ ಅವರ ಅಭಿಮಾನಿಗಳಲ್ಲಿ ಇದ್ದಂತೆ ನಾಣಯ್ಯನವರ ಮನದ ಮೂಲೆಯಲ್ಲೂ ಇತ್ತೆನಿ್ತುದೆ. ಕಾಂಗ್ರೆಸ್ ಅಥವಾ ಬಿಜೆಪಿಯಲ್ಲಿ ಅವರು ಗುರುತಿಸಿಕೊಂಡಿದ್ದರೆ ಅಂತಹ ಒಂದು ಸಂದರ್ಭ
ಖಂಡಿತಾ ಒದಗಿ ಬರುತ್ತಿತ್ತು. ಆದರೆ ಅವರು ಸಿದ್ದಾಂತಕ್ಕೆ ಕಟ್ಟು ಬಿದ್ದು ಉಳಿಸಿಕೊಂಡರು. ಅವರ ಗತ ಕಾಲದ ಗೆಳೆಯ ಸಿದ್ದರಾ ಮಯ್ಯ ಕೂಡಾ ಜಾಣ ಮರೆವು ತೋರಿದರೆನಿಸುತ್ತದೆ. ಅದೆಲ್ಲದರ ನಡುವೆಯೂ ಅವರೊಂದು ಪ್ರತಿಮಾ ರೂಪಕವಾಗಿ ಉಳಿದಿ ದ್ದಾರೆ.

ಎಂದಿಗೂ ಒಂದಾಗದಂತಿದ್ದ ಸುಬ್ಬಯ್ಯ ನಾಣಯ್ಯ ಜೋಡಿಯ ಕುರಿತೇ ಹಲವು ಕಥೆಗಳಿವೆ. ಸುಬ್ಬಯ್ಯನವರು ಒಂದು ಸಂಜೆ ಇದ್ದಕ್ಕಿದ್ದಂತೆ ನಾಣಯ್ಯನವರ ಮನೆಗೆ ಬಂದು ಸುಮಾರು ಮೂರು ಗಂಟೆಗಳ ಕಂಪೆನಿಯಾಗುತ್ತಾರೆ. ಅದೇ ಅವರ ಕೊನೆಯ ಗದ್ದಾಳ (ಪಾರ್ಟಿ) ಆಗುತ್ತದೆ. ಎ .ಕೆ ಸುಬ್ಬಯ್ಯ ಮತ್ತು ಎಂ ಸಿ ನಾಣಯ್ಯ ನಾವು ಕಂಡ ಕೊಡಗಿನ ಅಪ್ಪಟ ಪ್ರತಿಭಾವಂತ, ನೈಜ, ಪ್ರಾಮಾಣಿಕ ರಾಜಕಾರಣಿಗಳು…ಸುಬ್ಬಯ್ಯನವರಿಗೆ 75 ತುಂಬಿದಾಗ ಅವರ ಅಭಿನಂದನಾ ಕಾರ್ಯಕ್ರಮ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

81 ರ ಹರೆಯದ ನಾಣಯ್ಯನವರ ಅಭಿಮಾನಿ ಬಳಗ ದಿವ್ಯ ಮೌನ ತಾಳಿದಂತಿದೆ…