Thursday, 28th November 2024

ಆತಂಕವಾದಿಗಳ ದಾರಿಯಲ್ಲಿ ಮುಂಬೈ ಪೊಲೀಸ್‌

ಎನ್‌ಕೌಂಟರ್ ಖ್ಯಾತಿಯ ಮುಂಬೈ ಪೊಲೀಸರಿಂದಲೇ ಮಹಾರಾಷ್ಟ್ರದ ಮಾನ ಹರಾಜು

ವಿಶೇಷ ವರದಿ: ಶ್ರೀನಿವಾಸ ಜೋಕಟ್ಟೆ

ಮುಂಬೈ: ಮಹರಾಷ್ಟ್ರ ಸರಕಾರದ ಸದ್ಯದ ಪರಿಸ್ಥಿತಿ ಗಮನಿಸಿದರೆ ಯಾವುದೇ ಕ್ಷಣದಲ್ಲೂ ಅದರ ಕಂಬ ಮುರಿಯುವ ಸಾಧ್ಯತೆ
ಇದೆ. ಅದಕ್ಕೆ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ 8 ಪುಟಗಳ ಪತ್ರ ಒಂದು ನೆಪವಷ್ಟೆ.

ಇತ್ತೀಚೆಗಷ್ಟೇ ಪರಮ್ ಬೀರ್ ಸಿಂಗ್ ಅವರನ್ನು ಮುಂಬೈ ಪೊಲೀಸ್ ಕಮಿಷನರ್ ಸ್ಥಾನದಿಂದ ತೆಗೆದು, ಯಾರೂ ಮೂಸದ ಸೈಡ್ ಪೋಸ್ಟಿಂಗ್ ಎನ್ನಲಾಗುವ ಹೋಮ್‌ಗಾರ್ಡ್‌ಗೆ ವರ್ಗಾಯಿಸಲಾಗಿದೆ. (ಶಿವಸೇನೆ ಇದನ್ನು ಒಂದು ರುಟೀನ್ ಟ್ರಾನ್ಸ್‌‌ಫರ್ ಎಂದಿತ್ತು.) ಎಲ್ಲಕ್ಕೂ ಮೂಲ ಕಾರಣ, ಫೆಬ್ರವರಿ 25ರಂದು 20 ಜಿಲೆಟಿನ್ ಕಡ್ಡಿಗಳನ್ನು ಹೊತ್ತ ಒಂದು ಸ್ಕಾರ್ಪಿಯೋ ಕಾರು ಮುಕೇಶ್ ಅಂಬಾನಿ ಮನೆಯ ಬಳಿ ನಿಂತದ್ದು. ಇದರ ಮುಂದಿನ ಉದ್ದೇಶ ಅಂಬಾನಿಯಿಂದ ಹಣ ವಸೂಲಿ ಮಾಡುವುದಾಗಿತ್ತು.
ಆದರೆ ಆದದ್ದೇ ಬೇರೆ. ಎಲ್ಲವೂ ಉಲ್ಟಾ ಹೊಡೆಯಿತು.

‘ಮುಂಬೈ ಮಹಾನಗರಕ್ಕೆ ಈ ಹಿಂದೆ ಆತಂಕವಾದಿಗಳ ಭಯ ಇತ್ತು, ಈಗಲೂ ಇದೆ ಬಿಡಿ. ಎಲ್ಲಿ, ಯಾವಾಗ ಅವರು ಬಾಂಬ್ ಇರಿಸುತ್ತಾರೋ ಎಂಬ ಭಯ. ಆದರೆ ಈಗ ಆತಂಕವಾದಿಗಳ ಬದಲು ಮಹಾನಗರದ ಪೊಲೀಸರೇ ಬಾಂಬ್ ಇಡಲು ಶುರು ಮಾಡಿದ್ದಾರೆಯೋ ಎನ್ನುವಂತಹ ಚರ್ಚೆ ಆರಂಭವಾಗಿದೆ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಇಂತಹ ಒಂದು ಮಾತನ್ನು ಹೇಳಿದ್ದಾರೆ.

ವಿಶ್ವದಲ್ಲಿ ಸ್ಕಾಟ್ಲ್ಯಾಂಡ್ ಯಾರ್ಡ್ ನಂತರ ಮುಂಬೈ ಮಹಾನಗರದ ಪೊಲೀಸರಿಗೆ ಎರಡನೆಯ ಸ್ಥಾನವನ್ನು ನೀಡುತ್ತಾರೆ. ಆದರೆ ಸಚಿನ್ ವಾಜೆ ಎಂಬ ಎನ್‌ಕೌಂಟರ್ ಸ್ಪೆಶಲಿಸ್ಟ್ ಮತ್ತು ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಸೇರಿ ಮುಂಬೈ ಪೊಲೀಸರ ಮತ್ತು ಆಡಳಿತದ ಮರ್ಯಾದೆಯನ್ನು ಬೀದಿಗೆ ಎಳೆದು ತಂದಿದ್ದಾರೆ.

ದೇಶದ ಆರ್ಥಿಕ ರಾಜಧಾನಿ (ಕಳೆದ ವರ್ಷದ ಕರೋನಾ ರಾಜಧಾನಿ) ಮುಂಬೈ ಮಹಾನಗರದ ಖಾಕಿ-ಖಾದಿಗಳ ಮುಖವಾಡಗಳು ಈಗ ಒಂದೊಂದೇ ಬೆತ್ತಲಾಗುತ್ತಿವೆ. ಉದ್ಯಮಿ ಮುಕೇಶ್ ಅಂಬಾನಿ ಅವರ ದಕ್ಷಿಣ ಮುಂಬೈನಲ್ಲಿರುವ ಬಹುಮಹಡಿಗಳ ಅಂಟಿಲಿಯಾ ನಿವಾಸ ಕಟ್ಟಡದ ಅನತಿ ದೂರದಲ್ಲಿ 20 ಜಿಲೆಟಿನ್ ಕಡ್ಡಿಗಳನ್ನು ಒಳಗಿರಿಸಿದ್ದ ಸ್ಕಾರ್ಪಿಯೋ ಕಾರನ್ನು ಯಾವ ರಾಹು ಗಳಿಗೆಯಲ್ಲಿ ಇರಿಸಿದ್ದೆನೋ ಎಂದು ಎನ್‌ಕೌಂಟರ್ ಸ್ಪೆಶಲಿಸ್ಟ್ ಸಚಿನ್ ವಾಜೆ ಈಗ ಹಪಹಪಿಸುತ್ತಿರಬಹುದೇನೋ. (ವಾಜೆಯೇ ಸ್ಕಾರ್ಪಿಯೋ ಕಾರನ್ನು ಅಲ್ಲಿ ಇರಿಸಿದ್ದು ಎಂದು ಎನ್‌ಐಎ ತರ್ಕ) ಹುದ್ದೆಯಿಂದ ಹಿಂದೆ ಅಮಾನತುಗೊಂಡಿದ್ದ ಈ
ವಿವಾದಾಸ್ಪದ ಎನ್‌ಕೌಂಟರ್ ಸ್ಪೆಶಲಿಸ್ಟ್ ಸಚಿನ್ ವಾಜೆಯನ್ನು ಶಿವಸೇನೆಯು ಕರೋನಾ ಕಾಲದಲ್ಲಿ ವಾಪಾಸು ಕರೆಸಿ, ಆತನ
ಭ್ರಷ್ಟ ಕೆಲಸಗಳನ್ನು ಮುಂದುವರಿಸುವಲ್ಲಿ ಅನುಕೂಲ ಮಾಡಿಕೊಟ್ಟಿತ್ತು.

ಮೊನ್ನೆ ಮೊನ್ನೆಯವರೆಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆಯ ಕಿತಾಪತಿಗಳ ಮಾಸ್ಟರ್ ಮೈಂಡ್ ಸಂಜಯ ರಾವುತ್ ಬೆಳಗಾವಿಯ ಬಗ್ಗೆ ’ಮಹಾಸಂಗ್ರಾಮ’ದ ಕಿರುಚಾಟ ಮಾಡಿ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಬೇಕು ಎಂದು ಕೇಂದ್ರಕ್ಕೆ ಒತ್ತಡ ಹಾಕಿ ಸಂಪಾದಕೀಯ ಬರೆದಿದ್ದರು. ಅದೇ ಸಂಜಯ ರಾವುತ್ ಈಗ ಬಾಲ ಮಡಚಿ ಸರಕಾರ ಉಳಿಸುವ ಪ್ರಯತ್ನದಲ್ಲಿ ಶರದ್ ಪವಾರ್ ಜತೆ ಮಾತುಕತೆಯಲ್ಲಿ ನಿರತರಾಗಿದ್ದಾರೆ.

ಪೊಲೀಸ್ ಅಧಿಕಾರಿ ಸಚಿನ್ ವಾಜೆಯ ಪರಿಚಯಸ್ಥ ವ್ಯಾಪಾರಿ ಮನ್ಸುಖ್ ಹಿರೇನ್ ಅವರ ಹತ್ಯೆೆ (ಈಜಲು ಗೊತ್ತಿದ್ದರೂ ನೀರಲ್ಲಿ ಮುಳುಗಿ ಸತ್ತ) ಮತ್ತು ಅಂಬಾನಿ ಮನೆಯ ಸಮೀಪ ಜಿಲೆಟಿನ್ ಕಡ್ಡಿಗಳ ಸ್ಕಾರ್ಪಿಯೋ ಕಾರು ನಿಲ್ಲಿಸಿದ ಘಟನೆಗಳನ್ನು ಈಗ ಎನ್‌ಐಎ ಮತ್ತು ಮಹಾರಾಷ್ಟ್ರ ಎಟಿಎಸ್ ತನಿಖೆ ನಡೆಸುತ್ತಿದೆ. ಶುಕ್ರವಾರದಿಂದ ಮನ್ಸುಖ್ ಹಿರೇನ್ ಕೊಲೆ ಕೇಸಿನ ತನಿಖೆ ಕೂಡ ಎನ್‌ಐಎ ಆರಂಭಿಸಿದೆ.

ಈ ಘಟನೆಯ ಹಿಂದಕ್ಕೆ ಹೋದರೆ ರೋಚಕ ಕತೆಗಳು ಸಿಗುತ್ತವೆ. ಸ್ಕಾರ್ಪಿಯೋ ಕಾರು ಇರಿಸಿದ್ದ ಘಟನೆಯ ತನಿಖೆ ನಡೆಯುತ್ತಿದ್ದಂತೆ ಆಶ್ಚರ್ಯಕರ ಸಂಗತಿಗಳು ಹೊರಬರುತ್ತಿವೆ. ಅಮಾನತುಗೊಂಡ ಪೋಲೀಸ್ ಅಧಿಕಾರಿ ಸಚಿನ್ ವಾಜೆ ಮತ್ತು ಕಾರಿನ ಮಾಲೀಕ ವ್ಯಾಪಾರಿ ಹಿರೇನ್ ಪರಸ್ಪರ ಪರಿಚಯವಿದ್ದೂ, ಈ ಹಿಂದೆ ಸ್ಕಾರ್ಪಿಯೋ ಕಾರು ಕಳ್ಳತನವಾಗಿದೆ ಎಂದು ಹಿರೇನ್ ದೂರು ನೀಡಿದ್ದರು.

ಕಾರು ಕಳ್ಳತನ ಆಗಿದೆ ಎನ್ನುವ ಆ ದಿನ ಫೆಬ್ರವರಿ 17. ಸಿಸಿಟಿವಿ ದೃಶ್ಯದಲ್ಲಿ ವಾಜೆ ಮತ್ತು ಹಿರೇನ್ ಆ ದಿನ ಭೇಟಿ ಆಗಿರುವ ಬಗ್ಗೆ ದಾಖಲೆಗಳಿವೆ ಎಂದು ಎಟಿಎಸ್ ಹೇಳಿದೆ. ವ್ಯಾಪಾರಿ ಹಿರೇನ್ ನಾಪತ್ತೆ ಆಗಿದೆ ಎಂದು ದೂರು ನೀಡಿದ್ದ ಆ ಸ್ಕಾರ್ಪಿಯೋ ಕಾರಲ್ಲೇ ಫೆಬ್ರವರಿ 25 ರಂದು ಅಂಬಾನಿ ನಿವಾಸದ ಬಳಿ 20 ಜಿಲೆಟಿನ್ ಕಡ್ಡಿಗಳು, ಕೆಲವು ವಾಹನದ ನಂಬರ್ ಪ್ಲೇಟ್‌ಗಳು ಪತ್ತೆಯಾಗಿದ್ದವು. ಇದನ್ನು ಗಮನಿಸಿದರೆ ಈ ಎನ್ ಕೌಂಟರ್ ಸ್ಪೆಶಲಿಸ್ಟ್ ಸಚಿನ್ ವಾಜೆಯ ಕೆಲವು ಕತೆಗಳು ವ್ಯಾಪಾರಿ ಹಿರೇನ್‌ಗೆ ತಿಳಿದಿರುವ ಸಾಧ್ಯತೆಗಳಿವೆ.

ಆದರೆ ಮನ್ಸುಖ್ ಹಿರೇನ್ ಕೊಲೆಯಾದರು. ಅಂಬಾನಿ ನಿವಾಸದ ಸಮೀಪ ನಿಂತಿದ್ದ ಸ್ಕಾರ್ಪಿಯೋದಲ್ಲಿ ಜಿಲೆಟಿನ್ ಕಡ್ಡಿಗಳು ಇವೆ ಎಂದಾಗ ಅಲ್ಲಿಗೆ ಮೊದಲು ಹೋದದ್ದು ಕೂಡ ಸಚಿನ್ ವಾಜೆ. ಆ ಬಗ್ಗೆ ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದ್ದರು.

‘ಸ್ಕಾರ್ಪಿಯೋ ಮಾಲೀಕ ವ್ಯಾಪಾರಿ ಹಿರೇನ್ ಪೊಲೀಸ್ ಅಧಿಕಾರಿ ವಾಜೆಗೆ ಚೆನ್ನಾಗಿ ಗೊತ್ತು. ಲೋಕಲ್ ಪೊಲೀಸರ ಬದಲು ವಾಜೆಯೇ ಅಂಬಾನಿ ವಸತಿ ಬಳಿ ಘಟನೆಯ ದಿನ ತಾವೇ ಮೊದಲಿಗೆ ಹಾಜರಾದದ್ದರ ಹಿಂದಿನ ರಹಸ್ಯವೇನು?’ ಎಂದು ಫಡ್ನವೀಸ್ ಪ್ರಶ್ನಿಸಿದ್ದಾರೆ. ಆಡಳಿತದ ಒಂದು ಪಕ್ಷ ಶಿವಸೇನೆಯು ಈ ತನಿಖೆಯನ್ನು ಎಟಿಎಸ್‌ಗೆ ಕೊಟ್ಟು ಕೇಂದ್ರ ಸರಕಾರದ ಹಸ್ತಕ್ಷೇಪವಾಗದಂತೆ ಪ್ರಯತ್ನಿಸಿತ್ತು. ಏಕೆಂದರೆ ಸಚಿನ್ ವಾಜೆ ಶಿವಸೇನೆಯವ ತಾನೆ. ಆದರೆ ಕೇಂದ್ರವು ಸ್ಥಿತಿಯ ಗಂಭೀರತೆ ಕಂಡು ರಾಷ್ಟ್ರೀಯ ತನಿಖಾ ಏಜನ್ಸಿಗೆ (ಎನ್ ಐಎ) ತನಿಖೆಯನ್ನು ಒಪ್ಪಿಸಿದ್ದರಿಂದ ಮುಂಬೈ ಪೊಲೀಸ್ ಇಲಾಖೆಯಲ್ಲಿ ಏನಾಗುತ್ತಿದೆ ಎನ್ನುವ ಒಳಗುಟ್ಟುಗಳು ಬಹಿರಂಗವಾಗುತ್ತಿವೆ.

ಎನ್‌ಕೌಂಟರ್ ಸ್ಪೆಶಲಿಸ್ಟ್ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಈಗ ಎನ್‌ಐಎ ಬಂಧನದಲ್ಲಿದ್ದು, ಅವರನ್ನು ಫಟನಾ ಸ್ಥಳಕ್ಕೆ ಕರೆದೊಯ್ದು ದೃಶ್ಯಗಳ ನಾಟಕೀಯ ರೂಪಾಂತರವನ್ನು ಎನ್‌ಐಎ ಮಾಡಿಸಿದೆ. ಅಂಬಾನಿ ಮನೆ ಎದುರು ವಾಜೆಗೆ ಓವರ್ ಸೈಜ್
ಕುರ್ತಾ ಧರಿಸಲು ಹೇಳಿ ತಲೆಗೆ ರುಮಾಲು ಕಟ್ಟಿ ನಡೆಯಲು ಹೇಳಿ ಸಿಸಿಟಿವಿ ದೃಶ್ಯದ ನಾಟಕೀಯ ರೂಪಾಂತರ ಮಾಡಿಸಲಾಗಿದೆ. ಒಂದೂವರೆ ಗಂಟೆ ಕಾಲ ಎನ್‌ಐಎ ಇದನ್ನು ಮಾಡಿಸಿದೆ. ಏಕೆಂದರೆ ಸಿಸಿಟಿವಿ ಫುಟೇಜ್‌ನಲ್ಲಿ ಕಾಣಿಸಿದ ಶಂಕಿತ ವ್ಯಕ್ತಿ
ವಾಜೆಯೇ ಆಗಿದ್ದಾರಂತೆ. ಆದರೂ ಎನ್‌ಐಎ ಇದನ್ನು ಇನ್ನೂ ದೃಢಪಡಿಸಿಲ್ಲ.

ಸಿಎಫ್‌ಎಸ್‌ಎಲ್ ಟೀಮ್ ಫಾರೆನ್ಸಿಕ್ ಹ್ಯೂಮನ್ ಎನಾಲಿಸಿಸ್ ಟೆಸ್ಟ್‌ನ ಸಹಾಯದಿಂದ ವಾಜೆಯ ನಾಟಕೀಯ ರೂಪಾಂತರದ
ರೆಕಾರ್ಡಿಂಗ್ ಫುಟೇಜ್‌ನ ಒರಿಜಿನಲ್ ಸಿಸಿಟಿವಿ ಫುಟೇಜ್ ಜತೆ ಪರಿಶೀಲಿಸಿದ ನಂತರ ತನ್ನ ವರದಿ ನೀಡಲಿದೆ. ಇದೀಗ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಗೃಹಮಂತ್ರಿ ಅನಿಲ್ ದೇಶ್ ಮುಖ್ ಮೇಲೆ 100 ಕೋಟಿ ರುಪಾಯಿ ವಸೂಲಿಯ ಆರೋಪ ಮಾಡಿದ್ದಾರೆ. ಪರಮ್ ಬೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ 8 ಪುಟಗಳ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಗೃಹಮಂತ್ರಿ ದೇಶ್ ಮುಖ್ ಮತ್ತು ಎಪಿಐ ಸಚಿನ್ ವಾಜೆಯ ಸಂಬಂಧ ಮತ್ತು ‘ವಸೂಲಿ’ಯ ಉಲ್ಲೇಖವಿದೆ. ‘ಗೃಹಮಂತ್ರಿ ದೇಶ್‌ಮುಖ್ 100 ಕೋಟಿ ರು. ವಸೂಲಿ ಮಾಡಿಕೊಡುವಂತೆ ವಾಜೆಗೆ ಒತ್ತಡ ಹಾಕಿದ್ದನ್ನು ಸ್ವತಃ ವಾಜೆಯೇ ನನಗೆ ಹೇಳಿದ್ದರು’ ಎಂದು ಪರಮ್ ಬೀರ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅತ್ತ ಗೃಹಮಂತ್ರಿ ದೇಶ್‌ಮುಖ್ ಈ ಬಗ್ಗೆ ಪ್ರತಿಕ್ರಿಯಿಸಿ, ‘ತನ್ನನ್ನು ಕಾನೂನು ಕಾರ್ಯಾಚರಣೆಯಿಂದ ಪಾರಾಗಿಸಲು ಪರಮ್
ಬೀರ್ ಸಿಂಗ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಮುಕೇಶ್ ಅಂಬಾನಿ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳಿದ್ದ ಸ್ಕಾರ್ಪಿಯೋ ಕಾರು ಪ್ರಕರಣ ಮತ್ತು ಹಿರೇನ್ ಹತ್ಯಾ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮತ್ತು ಅವರ ಸೂತ್ರಧಾರ ಆಗಿನ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ತನಕ ತನಿಖಾ ಏಜೆನ್ಸಿಗಳು ಬಂದಿವೆ. ಅದರಿಂದ ಪಾರಾಗಲು ಹೀಗೆ ಹೇಳುತ್ತಿದ್ದಾರೆ’ ಎಂದರಲ್ಲದೆ ಅವರ ವಿರುದ್ಧ ಮಾನಹಾನಿ ಕೇಸ್ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.

ಶಿವಸೇನೆಯು ಪೊಲೀಸ್ ಕಮಿಷನರ್ ವರ್ಗಾವಣೆಯನ್ನು ರುಟೀನ್ ಟ್ರಾನ್ಸ್‌‌ಫರ್ ಎಂದರೂ, ಎರಡು ದಿನಗಳ ನಂತರ ಒಂದು
ಕಾರ್ಯಕ್ರಮದಲ್ಲಿ ಗೃಹಮಂತ್ರಿ ಅನಿಲ್ ದೇಶಮುಖ್ ಅವರು ಕಮಿಷನರ್ ಟ್ರಾನ್ಸ್‌‌ಫರ್ ರುಟೀನ್ ಅಲ್ಲ, ಅವರು ಕೆಲವು ತಪ್ಪುಗಳನ್ನು ಮಾಡಿದ್ದರು. ಹೀಗಾಗಿ ವರ್ಗಾವಣೆ ಮಾಡಲಾಯಿತು ಎಂದದ್ದು ಶಿವಸೇನೆಯನ್ನು ಮುಜುಗರಕ್ಕೀಡು ಮಾಡಿತು.
ಈ ಘಟನೆ ವಿಪಕ್ಷ ಬಿಜೆಪಿಗೆ ಸರಕಾರದ ವಿರುದ್ಧ ಜನಜಾಗೃತಿಗೆ ಮತ್ತೊಂದು ಅಸ್ತ್ರ ಸಿಕ್ಕಿದಂತಾಯ್ತು.

ಮುಂಬೈ ಪೊಲೀಸ್ ಎನ್‌ಕೌಂಟರ್ ಅಧಿಕಾರಿಗಳಲ್ಲಿ ಪ್ರಮುಖರೆಲ್ಲ ಒಂದಲ್ಲ ಒಂದು ವಿವಾದದಲ್ಲಿ ಈ ಹಿಂದೆ ಸಿಕ್ಕಿ ಬಿದ್ದವರೇ ಆಗಿದ್ದಾರೆ. ಅನೇಕ ನಕಲಿ ಎನ್ ಕೌಂಟರ್ ಕೋರ್ಟಿನ ಮೆಟ್ಟಲು ಹತ್ತಿವೆ. ಈಗ ತಾವು ತಪ್ಪು ಮಾಡಿಲ್ಲ ಎಂದು ಪರಮ್ ಬೀರ್
ಸಿಂಗ್ ಸಾಧಿಸಬೇಕಾಗಿರುವುದಿಂದ ‘ಗೃಹಮಂತ್ರಿ ದೇಶಮುಖ್ ಅವರು ಎನ್‌ಕೌಂಟರ್ ಸ್ಪೆಶಲಿಸ್ಟ್ ಸಚಿನ್ ವಾಜೆಯನ್ನು ಕರೆದು ಪ್ರತಿ ತಿಂಗಳು ಹೋಟೆಲ್, ಬಾರ್, ರೆಸ್ಟೋರೆಂಟ್ ಮತ್ತು ಅನ್ಯ ಸ್ಥಳಗಳಿಂದ 100 ಕೋಟಿ ರು. ವಸೂಲಿ ಮಾಡಲು ಸೂಚಿಸಿದ್ದರು.
ಮುಂಬೈನಲ್ಲಿ 1,750 ಬಾರ್ ಆ್ಯಂಡ್ ರೆಸ್ಟಾರೆಂಟ್ ಗಳಿವೆ.

ಗೃಹಮಂತ್ರಿ ಅನಿಲ್ ದೇಶಮುಖ್ ಅನುಸಾರ ಸುಲಭವಾಗಿ ಇಷ್ಟು ಹಣ ತಿಂಗಳಿಗೆ ಸಂಗ್ರಹಿಸಬಹುದಂತೆ. ಅಷ್ಟೇ ಅಲ್ಲ, ಮುಂಬೈ ಪೊಲೀಸ್ ನಮಾಜ ಸೇವಾ ಶಾಖೆಯ ಎಸಿಪಿ ಸಂಜಯ ಪಾಟೀಲ್ ಮತ್ತು ಡಿಸಿಪಿ ಭುಜಬಲ್ ಅವರನ್ನೂ ಇದೇ ರೀತಿ ಕರೆದು, ಪ್ರತಿ ತಿಂಗಳು 40 ರಿಂದ 50 ಕೋಟಿ ರು. ಕಲೆಕ್ಷನ್ ಮಾಡಲು ಹೇಳಿದ್ದರು’ ಎಂದು ಎಸ್‌ಎಮ್ ಎಸ್ ಸಾಕ್ಷಿ ಸಮೇತ ಪತ್ರ ಬರೆದಿದ್ದಾರೆ. ಅಲ್ಲದೆ, ಪತ್ರವನ್ನು ಮಾಧ್ಯಮಗಳಿಗೂ ಲೀಕ್ ಮಾಡಿದ್ದಾರೆ.

ಸಾಮಾನ್ಯವಾಗಿ ಸೇವೆಯಲ್ಲಿರುವ ಅಧಿಕಾರಿ ಮುಖ್ಯಮಂತ್ರಿಗೆ ಹೀಗೆ ಪತ್ರ ಬರೆಯುವ ಧೈರ್ಯ ಮಾಡುವುದಿಲ್ಲ. ಅವರು ಬರೆದಿದ್ದಾರೆಂದರೆ ಈ ಲೆಟರ್ ಬಾಂಬ್‌ನ ಹಿಂದೆ ಅನೇಕರ ಸಂಗತಿಗಳನ್ನು ಹೊರತೆಗೆಯುವ ಉದ್ದೇಶವೂ ಇರಬಹುದೇನೋ.
ಮುಕೇಶ್ ಅಂಬಾನಿಯ ಕೇಸ್‌ನ ಸಮಗ್ರ ತನಿಖೆಯನ್ನು ಈಗ ಎನ್‌ಐಎ ಮಾಡುತ್ತಿದೆ. ಈ ಬಗ್ಗೆ ಹೇಳಿಕೆ ಪಡೆಯಲು ಪರಮ್ ಬೀರ್ ಸಿಂಗ್ ಅವರನ್ನೂ ಕರೆಯಬಹುದು. ಏಕೆಂದರೆ ಇವರು ಸಚಿನ್ ವಾಜೆಯ ಬಾಸ್.

ಗೃಹಮಂತ್ರಿ ಅನಿಲ್ ದೇಶಮುಖ್ ಅವರು ಸಚಿನ್ ವಾಜೆಗೆ ಕಲೆಕ್ಷನ್‌ಗಾಗಿ ಒತ್ತಡ ಹಾಕಿದ್ದಿರಬಹುದು. ಹಾಗೂ ಮುಕೇಶ್ ಅಂಬಾನಿಯ ಈ ಪ್ರಕರಣದ ಕೇಸ್ ತನಿಖೆಗಾಗಿ ವಾಜೆಯನ್ನು ಕಳಿಸಿರಬಹುದು ಎನ್ನುವ ಚರ್ಚೆ ನಡೆದಿದೆ. ಆದರೂ ಒಂದು ಸಂಗತಿ ಮರೆಯುವಂತಿಲ್ಲ. ಏನೆಂದರೆ ಪರಮ್ ಬೀರ್ ಸಿಂಗ್ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರಿಗೂ ದೂರದಿಂದ ಬೇಕಾದವರೇ. ಫಡ್ನವೀಸ್ ಆಡಳಿತಾವಧಿಯಲ್ಲಿ ಪರಮ್ ಬೀರ್ ಸಿಂಗ್ ನಾಲ್ಕು ವರ್ಷ ಥಾಣೆಯ ಪೊಲೀಸ್ ಕಮಿಷನರ್
ಆಗಿದ್ದವರು. ಮಾರ್ಚ್ ಮೊದಲ ವಾರದಲ್ಲಿ ವಿಧಾನಸಭೆಯಲ್ಲೂ ಫಡ್ನವೀಸ್ ಅವರು ಮುಕೇಶ್ ಅಂಬಾನಿ ಪ್ರಕರಣದಲ್ಲಿ ಸಚಿನ್ ವಾಜೆಯನ್ನೇ ಟಾರ್ಗೆಟ್ ಮಾಡಿದ್ದರು.

ವಾಜೆಯ ಬಾಸ್ ಪರಮ್ ಬೀರ್ ಸಿಂಗ್ ಬಗ್ಗೆ ಮೃದು ಧೋರಣೆ ತಳೆದಿದ್ದರು. ಈಗ ಶಿವಸೇನೆ ಈ ಲೆಟರ್ ಬಾಂಬ್ ನಂತರ ಎನ್
ಸಿಪಿ ಜತೆಗಿನ ಸಂಬಂಧ ಕುರಿತು ಮರು ಯೋಚಿಸಲೂಬಹುದು. ಆದರೆ ಸರಕಾರದ ಮೂರು ಪಕ್ಷಗಳ ಮುಖ್ಯ ಸೂತ್ರಧಾರ ಎನ್‌ಸಿಪಿಯ ಶರದ್ ಪವಾರ್ ಅವರೇ ತಾನೆ. ಪವಾರ್ ಹೇಳುತ್ತಿದ್ದಾರೆ- ‘ಸರಕಾರಕ್ಕೆ ಯಾವುದೇ ಭಯ ಇಲ್ಲ. ಗೃಹಮಂತ್ರಿಯ
ರಾಜೀನಾಮೆ ಸಿಎಂಗೆ ಬಿಟ್ಟ ಸಂಗತಿ’ ಎಂದು. ಅಥವಾ ಬಿಹಾರದ ರೀತಿಯಲ್ಲಿ ಬಿಜೆಪಿ ಆಡಳಿತಕ್ಕೆ ಬರುವ ಪ್ರಯತ್ನಗಳನ್ನೇ ನಾದರೂ ಮಾಡಬಹುದೇ? ಕಾದು ನೋಡಬೇಕಾಗಿದೆ.

ಮತ್ತೆ ಕರೋನಾದ ಎರಡನೇ ಅಲೆ ಕಾಣಿಸುತ್ತಿರುವ ಮಂಬೈಯಲ್ಲಿ ಈಗ ಆಡಳಿತಕ್ಕೆ ಇದು ಇನ್ನೊಂದು ಕಿರಿಕಿರಿ.