Monday, 25th November 2024

ಚುನಾವಣಾ ದಿನಾಂಕ ಬದಲಾವಣೆಗೆ ಮುಸ್ಲಿಂ ಸಂಘಟನೆ ಮೊರೆ

ತಿರುವನಂತಪುರಂ: ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು ಇದೀಗ ಈ ದಿನಾಂಕದಲ್ಲಿ ಮತದಾನ ಮಾಡಬಾರದು ಎಂದು ಮುಸ್ಲಿಂ ಸಂಘಟನೆಯೊಂದು ಚುನಾವಣಾ ಆಯೋಗದ ಮೊರೆ ಹೋಗಿದೆ.

18ನೇ ಲೋಕಸಭೆ ಚುನಾವಣೆಗೆ ಚುನಾವಣಾ ದಿನಾಂಕಗಳನ್ನು ಘೋಷಿಸಿದ ಒಂದು ದಿನದ ನಂತರ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಮತ್ತು ತಮಿಳುನಾಡಿನಲ್ಲಿ ಶುಕ್ರವಾರ ನಿಗದಿಯಾಗಿರುವ ಮತದಾನದ ದಿನಾಂಕಗಳನ್ನು ಬದಲಾಯಿಸುವಂತೆ ಮನವಿ ಮಾಡಿದೆ.

ಈ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಅರ್ಜಿ ಸಲ್ಲಿಸುವುದಾಗಿ ಸಂಘಟನೆ ಭಾನುವಾರ ಹೇಳಿದೆ.

ತಮಿಳುನಾಡಿಗೆ ಏಪ್ರಿಲ್ 19 ರಂದು ಮತ್ತು ಕೇರಳದಲ್ಲಿ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದ್ದು, ಎರಡೂ ದಿನಾಂಕಗಳು ಶುಕ್ರವಾರ ಬರುತ್ತವೆ. ಶುಕ್ರವಾರ ಮುಸ್ಲಿಮರಿಗೆ ಪ್ರಮುಖ ದಿನವಾಗಿರುವುದರಿಂದ ಮತದಾರರು, ಅಧಿಕಾರಿಗಳು ಮತ್ತು ಅಭ್ಯರ್ಥಿಗಳಿಗೆ ಅನಾನುಕೂಲವಾಗುವುದರಿಂದ ಕೇರಳ ಮತ್ತು ತಮಿಳುನಾಡಿನ ಚುನಾವಣಾ ದಿನಾಂಕಗಳನ್ನು ಬದಲಾಯಿಸಬೇಕು ಎಂದು ಕಾಂಗ್ರೆಸ್ ಮಿತ್ರಕೂಟದ ಪ್ರಮುಖ ಪಕ್ಷ ಐಯುಎಂಎಲ್ ಹೇಳಿದೆ.

IUML ನ ರಾಜ್ಯ ಪ್ರಧಾನ ಕಾರ್ಯದರ್ಶಿ PM A ಸಲಾಂ, ಪ್ರಾರ್ಥನೆಗಾಗಿ ಮಸೀದಿಗಳಲ್ಲಿ ಸೇರುವ ಮುಸ್ಲಿಮರಿಗೆ ಶುಕ್ರವಾರ ಪ್ರಮುಖ ದಿನವಾಗಿದೆ. ಶುಕ್ರವಾರದ ಮತದಾನದ ಘೋಷಣೆಯು ಮತದಾರರಿಗೆ, ಅಭ್ಯರ್ಥಿಗಳಿಗೆ, ಪೋಲಿಂಗ್ ಏಜೆಂಟ್‌ಗಳಿಗೆ ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳಿಗೆ ಅನಾನುಕೂಲತೆ ಉಂಟುಮಾಡುತ್ತದೆ. ಈ ಕುರಿತು ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.