Thursday, 28th November 2024

ಮನೆಯೇ ಪರಿಸರದ ಅರಮನೆ

ಅದರಿಂದಲೇ ಕರೋನಾ ವಾರಿಯರ‍್ಸ್‌ಗೆ ಕಷಾಯ ವಿತರಣೆ

ವಿಶೇಷ ವರದಿ: ರಂಗನಾಥ ಕೆ. ಮರಡಿ ತುಮಕೂರು

ಪರಿಸರ ಉಳಿಸಿ, ಬೆಳಸಿ ಎಂಬುದು ಬರೀ ಭಾಷಣದ ಸರಕು. ಹೇಳುವವರು ಎಲ್ಲ, ಮಾಡುವವರೇ ಇಲ್ಲ ಎಂಬುದು ಸಹಜವಾದ ಅಭಿಪ್ರಾಯ.

ಆದರೆ, ಮಾತಿಗಿಂತ ಕೃತಿ ಲೇಸು ಎಂಬಂತೆ, ತುಮಕೂರು ತಾಲೂಕಿನ ಹೆಗ್ಗೆರೆಯ ಸಮೃದ್ಧಿ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಶಾಂತ ಕುಮಾರಿ ತಮ್ಮ ಮನೆಯ ತಾರಸಿಯ ಮೇಲೆ, ಸುಮಾರು ೩೫ ರೀತಿಯ ಸಾರಕ್ಕೂ ಹೆಚ್ಚು ಆಯುರ್ವೇದ ಗಿಡಗಳನ್ನು ಬೆಳೆದು ನಿಜಾರ್ಥದಲ್ಲಿ ಪರಿಸರ ದಿನವನ್ನು ದಿನನಿತ್ಯ ಆಚರಣೆ ಮಾಡುತ್ತಿದ್ದಾರೆ.

ಮನೆಯ ಹಸಿ ತ್ಯಾಜ್ಯವನ್ನು ಹಸಿ ಗೊಬ್ಬರವನ್ನು ಬಳಸಿಕೊಂಡು ಸಾವಯವ ಮಾದರಿಯಲ್ಲಿ ಔಷಧಿಯ ಸಸ್ಯಗಳಾದ ಅಮೃತ ಬಳ್ಳಿ, ನೆಲನೆಲ್ಲಿ, ಆಶ್ವಗಂಧ, ಮಧುನಾಶಿನಿ, ಬ್ರಾಹ್ಮೀ, ಒಂದೆಲಗ, ದೊಡ್ಡಪತ್ರೆ, ಇನ್ಸುಲಿನ್ ಗಿಡ, ಮಳೆಕಾಳಿನ ಗಿಡ, ತುಳಿಸಿ ಯಂಥ ಗಿಡಗಳು ಮನೆಯ ಚಾವಣಿಯ ಮೇಲೆ ರಾರಾಜಿಸುತ್ತಿವೆ. ಇವುಗಳ ಮಧ್ಯೆ ಅನೇಕ ಪಕ್ಷಿಗಳಿಗೂ ಗೂಡುಕಟ್ಟಿ ಸ್ವತಂತ್ರವಾಗಿ ಜೀವಿಸಲು ಅನುಕೂಲ ಮಾಡಿಕೊಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.

ಮನೆಯ ತಾರಸಿ, ಕಾಂಪೌಂಡ್‌ನಲ್ಲಿಯೇ ಸುಮಾರು ವರ್ಷಗಳಿಂದ ಗಿಡಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪೋಷಣೆ ಮಾಡಿರುವ ಶಾಂತಕುಮಾರಿ ದಂಪತಿ ಅನೇಕ ರೀತಿಯ ಕಷಾಯ ತಯಾರಿಸಿ ಉಚಿತವಾಗಿ ಜನರಿಗೆ ನೀಡುತ್ತಿರುವುದು ಹರ್ಷದ ಸಂಗತಿ. ಔಷಧಿಯ ಗಿಡಗಳಿಂದ ಮನೆಯಲ್ಲಿಯೇ ತಯಾರಿಸಿದ ಕಷಾಯವನ್ನು ಅನೇಕ ದಿನಗಳಿಂದ ಜಿಲ್ಲೆಯ ಆರೈಕೆ ಕೇಂದ್ರಗಳು,
ಸೋಂಕಿತರು, ಕರೋನಾ ವಾರಿಯರ‍್ಸ್ ಸೇರಿದಂತೆ ಸಾವಿರಾರು ಮಂದಿಗೆ ವಿತರಿಸಿದ್ದಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕಷಾಯಗಳ ಪಾತ್ರಕ್ಕೆ ಬಹಳಷ್ಟಿದೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುವ ಕಾಯಕಕ್ಕೆ ನಿರ್ಧರಿಸಿದ್ದು, ಅನೇಕ ಸಮಾಜ ಕಾರ್ಯಗಳೊಂದಿಗೆ ಪರಿಸರ ರಕ್ಷಿಸುವ ಪಣ ಶಾಂತಕುಮಾರಿ ಅವರದ್ದು.

***

ಕರೋನಾ ನಿರ್ಮೂಲನೆಗೆ ಪಣತೊಟ್ಟು ಹಗಲಿರುಳು ಕಾರ್ಯನಿರ್ವಸುತ್ತಿರುವ ವಾರಿಯರ‍್ಸ್, ಸೋಂಕಿತರು, ಜನರಿಗೆ ಮನೆಯ ಲ್ಲಿಯೇ ಕಷಾಯ ತಯಾರಿಸಿ ಹಲವು ದಿನಗಳಿಂದ ಪ್ರತಿದಿನ ಸುಮಾರು ೫೦೦ಕ್ಕೂ ಹೆಚ್ಚು ಮಂದಿಗೆ ತರಿಸಲಾಗುತ್ತಿದೆ. ಕಷಾಯ ತಯಾರಿಸಲು ಹೆಚ್ಚಿನ ಮಸಾಲೆ ಪದಾರ್ಥ ಬೇಕಿದ್ದು, ದಾನಿಗಳು ಸಹಾಯ ಮಾಡಿದರೆ ಇನ್ನಷ್ಟು ಜನರಿಗೆ ಉಚಿತ ಕಷಾಯ ನೀಡಬಹುದು.
– ಶಾಂತಕುಮಾರಿ ಸಮೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷೆ