ಅಹಮದಾಬಾದ್: ಗುಜರಾತ್‌ನ ನಾಲ್ಕು ನಗರಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ವನ್ನು ಮುಂದಿನ 15 ದಿನಗಳ ಕಾಲ ವಿಸ್ತರಿಸಲಾಗಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.
ಅಹಮದಾಬಾದ್, ಸೂರತ್, ವಡೋದರ, ರಾಜ್‌ಕೋಟ್‌ನಲ್ಲಿ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ಫೆಬ್ರುವರಿ 28 ರಂದು ಕೊನೆಗೊಳ್ಳ ಬೇಕಿತ್ತು. ಇದೀಗ ಕರ್ಫ್ಯೂವನ್ನು ಮುಂದಿನ 15 ದಿನಗಳ ಕಾಲ ವಿಸ್ತರಿಸಲಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರವು ಶುಕ್ರವಾರ ರಾತ್ರಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆ ತನಕ ರಾತ್ರಿ ಕರ್ಫ್ಯೂ ಹೇರಲಾಗಿತ್ತು. ಇದೇ ಸಮಯ ಮುಂದುವರಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ಲಸಿಕೆ ಅಭಿಯಾನವನ್ನು ಇನ್ನಷ್ಟು ತ್ವರಿತಗೊಳಿಸಲು ನಿರ್ಧರಿಸ ಲಾಗಿದೆ ಎಂದು ಸರ್ಕಾರ ಹೇಳಿದೆ. ಗುಜರಾತ್‌ನಲ್ಲಿ ಈವರೆಗೆ 2,69,031 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 2,62,487 ಸೋಂಕಿತರು ಗುಣಮುಖರಾಗಿದ್ದಾರೆ.