ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಅನಾರೋಗ್ಯದ ನಡುವೆಯೂ ತಮ್ಮ ಪತ್ನಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಜೊತೆಗೆ ಮತದಾನ ಮಾಡಿದ್ದಾರೆ.
77 ವರ್ಷ ವಯಸ್ಸಿನ ಐಟಿ ದಿಗ್ಗಜ ನಾರಾಯಣ ಮೂರ್ತಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಕರೆ ತರಲಾಗಿದ್ದು, ಮತದಾನ ಮಾಡಿದ ಬಳಿಕ ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಸುಧಾಮೂರ್ತಿ ಹೇಳಿದ್ದಾರೆ.
ಮತದಾನ ಮಾಡುವ ಹಕ್ಕನ್ನು ಪ್ರತಿ ಐದು ವರ್ಷಗಳಿಗೆ ನಾವು ಪಡೆಯುತ್ತೇವೆ. ಇದೊಂದು ಜವಾಬ್ದಾರಿಯಾಗಿದ್ದು ಸಾಕಷ್ಟು ಚಿಂತಿಸಿ ಮತ ಚಲಾವಣೆ ಮಾಡಬೇಕು. ಪ್ರತಿಯೊಬ್ಬರು ಈ ಹಕ್ಕನ್ನು ಚಲಾಯಿಸಲೇಕು, ಯಾರೊಬ್ಬರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ಐಟಿ ದಿಗ್ಗಜ ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.
ಮತದಾನ ಶ್ರೇಷ್ಠ ದಾನ, ಮತ ಚಲಾಯಿಸುವ ದಿನ ಸುಮ್ಮನೆ ಮನೆಯಲ್ಲಿ ಕೂರಬೇಡಿ ಎಂದು ಹೇಳಿದರು. ಮಾತನಾಡುವುದಕ್ಕಿಂತ ಮತ ಚಲಾಯಿಸು ವುದು ಮುಖ್ಯ. ಮನೆಯಿಂದ ಹೊರ ಬನ್ನಿ ಮತ ಚಲಾಯಿಸಿ, ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಸುಧಾಮೂರ್ತಿ ಎಂದರು.
ನಗರದ ಜಯನಗರದಲ್ಲಿ ಇರುವ ಮತಗಟ್ಟೆಯಲ್ಲಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಇಬ್ಬರೂ ಮತ ಚಲಾವಣೆ ಮಾಡಿದರು.
ಬೆಂಗಳೂರಿನಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಮತ ಚಲಾಯಸಿದ್ದಾರೆ.