ಅಶ್ವತ್ಥಕಟ್ಟೆ
ranjith.hoskere@gmail.com
ಯಾವುದೇ ಕ್ಷೇತ್ರ ತಗೆದುಕೊಂಡರೂ ‘ರಾಜಕೀಯ’ ಎನ್ನುವುದು ಸಾಮಾನ್ಯ. ಇನ್ನು ರಾಜಕೀಯ ಪಕ್ಷವೊಂದರಲ್ಲಿ ‘ರಾಜಕೀಯ’ವೇ ಇಲ್ಲದೇ ಸ್ವಚ್ಛ, ಪಾರ
ದರ್ಶಕವಾಗಿಯೇ ಪ್ರತಿಯೊಂದು ನಡೆಯುತ್ತದೆ ಎಂದು ನಿರೀಕ್ಷೆ ಮಾಡುವುದು ತಪ್ಪು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ಅಂಶ.
ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲಿಯೂ ‘ಅಲ್ಪ’ ಪ್ರಮಾಣದ ರಾಜಕೀಯವಿತ್ತು ಎನ್ನುವುದು ಹೊಸದೇನಲ್ಲ. ಅದರಲ್ಲಿಯೂ ಕರ್ನಾಟಕದ ಬಿಜೆಪಿ ಇತಿಹಾಸದಲ್ಲಿ ಈ ರೀತಿಯ ‘ಪವರ್ ಪಾಲಿಟಿಕ್ಸ್’ ಸಾಮಾನ್ಯವಾಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಈ ಪವರ್ ಹಾಗೂ ಫ್ಯಾಮಿಲಿ ಪಾಲಿಟಿಕ್ಸ್‌ಗೆ ವಿರುದ್ಧ ಅನೇಕರು ಧ್ವನಿ ಎತ್ತುತ್ತಿದ್ದಂತೆ ಸದ್ಯ ಬಿಜೆಪಿ ‘ಮನೆಯೊಂದು ಹತ್ತಾರು ಬಾಗಿಲು’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಕರ್ನಾಟಕ ಬಿಜೆಪಿಯಲ್ಲಿ ಪವರ್ ಪಾಲಿಟಿಕ್ಸ್ ಅನ್ನು ಆರಂಭಿಸಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ‘ಮಾಸ್ ಲೀಡರ್’ ಎನ್ನುವ ಇಮೇಜ್‌ನಲ್ಲಿ ಪಕ್ಷವನ್ನು ಕಟ್ಟಿದ ಯಡಿಯೂರಪ್ಪ ‘ಯಡಿಯೂರಪ್ಪ ಅವರಿಲ್ಲದ ಬಿಜೆಪಿ ಊಹಿಸಲು ಸಾಧ್ಯವಿಲ್ಲ’ ಎನ್ನುವ ರೀತಿಯಲ್ಲಿ ಕಳೆದ
ನಾಲ್ಕು ದಶಕದಲ್ಲಿ ಬಿಜೆಪಿಯನ್ನು ರೂಪಿಸಿದ್ದರು. ತಳಮಟ್ಟದಿಂದ ಬಿಜೆಪಿಯನ್ನು ಕಟ್ಟುವಲ್ಲಿ ಯಡಿಯೂರಪ್ಪ ಅವರ ಪಾತ್ರ ಮಹತ್ವದಾಗಿದ್ದು ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಆದರೆ ಯಡಿಯೂರಪ್ಪ ಅವರೊಂದಿಗೆ ಪಕ್ಷವನ್ನು ಕಟ್ಟುವಲ್ಲಿ, ಸಂಘಟಿಸುವಲ್ಲಿ ಮುಖ್ಯಪಾತ್ರವಹಿಸಿದ್ದ ಬಹುತೇಕರನ್ನು ‘ತೆರೆಮರೆಗೆ ಸರಿಸಿ’ ಇಡೀ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು ಎನ್ನುವ ಮನಸ್ಥಿತಿಯಲ್ಲಿ ಯಡಿಯೂರಪ್ಪ ನಡೆದುಕೊಂಡರು ಎನ್ನುವುದು ಬಹುತೇಕರ ಆಪಾ
ದನೆಯಾಗಿದ್ದು, ಒಂದು ಹಂತಕ್ಕೆ ಇದು ಸತ್ಯವೂ ಹೌದು. ಈ ನಡುವೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಸರಿಸಮಾನಾಗಿ ನಿಲ್ಲುವ ಅನಂತಕುಮಾರ ಅವರು ದೆಹಲಿ ರಾಜಕಾರಣಕ್ಕೆ ಹೆಚ್ಚು ಆಸಕ್ತಿವಹಿಸಿದ್ದರಿಂದ, ಇಲ್ಲಿನ ಸಣ್ಣ ಪುಟ್ಟ ರಾಜಕಾರಣದ ಬಗ್ಗೆ ಹೆಚ್ಚಾಗಿ ಯಡಿಯೂರಪ್ಪ
ಅವರ ತೀರ್ಮಾನವೇ ಅಂತಿಮ ಎನ್ನುವಂತಿತ್ತು.
ಹಲವು ಸಮಯದಲ್ಲಿ ಯಡಿಯೂರಪ್ಪ-ಅನಂತಕುಮಾರ್ ನಡುವೆ ಶೀತಲ ಸಮರಕ್ಕೆ ‘ನಾಯಕತ್ವ’ ಸ್ಥಾಪನೆಯೇ ಕಾರಣವಾಗುತ್ತಿದ್ದರೂ, ಪಕ್ಷ ಎನ್ನುವುದು ಬಂದಾಗ ಇಬ್ಬರೂ ‘ಹೊಂದಾಣಿಕೆ’ ಮಾಡಿಕೊಳ್ಳುತ್ತಿದ್ದರು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಇಂತಹ ಮನಸ್ಥಿತಿ ಈಗಿರುವ ಬಹುತೇಕ ನಾಯಕರಿಗೆ ಇಲ್ಲದಿರುವುದು ಇಂದಿನ ಈ ಪರಿಸ್ಥಿತಿಗೆ ಕಾರಣ ಎನ್ನುವಂತಾಗಿದೆ.
ಕೇಂದ್ರ ಬಿಜೆಪಿಯ ಹಿಡಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕೈಗೆ ಬರುತ್ತಿದ್ದಂತೆ ಹಾಗೂ ಕರ್ನಾಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್ ಸಂತೋಷ್ ನೇಮಕವಾಗುತ್ತಿದ್ದಂತೆ, ಯಡಿಯೂರಪ್ಪ ಅವರನ್ನು ಹಂತಹಂತವಾಗಿ ಕಟ್ಟಿಹಾಕುವ ಪ್ರಯತ್ನ
ಶುರುವಾಯಿತು. ೭೫ ವರ್ಷದ ಬಳಿಕ ಅಧಿಕಾರವಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ತೆರೆಮರೆಗೆ ಸರಿಸುವ ಪ್ರಯತ್ನ ಆರಂಭವಾಯಿತು. ಆದರೆ ಕರ್ನಾಟಕದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪ ಪಾತ್ರ
ಮಹತ್ವದಾಗಿದ್ದರಿಂದ ಅವರನ್ನೇ ಮುಖ್ಯಮಂತ್ರಿ ಮಾಡುವ ಅನಿವಾರ್ಯತೆ ಪಕ್ಷಕ್ಕೆ ಮೂಡಿತ್ತು.
ಇದಾದ ಎರಡು ವರ್ಷದ ಬಳಿಕ ಅವರನ್ನು ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದ್ದು, ಅದಾದ ಬಳಿಕ ಎದುರಾದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನವೆಲ್ಲ ಇತಿಹಾಸ. ಬಿಜೆಪಿ ಸೋಲುವುದಕ್ಕೆ ಆಡಳಿತ ವಿರೋಧಿ ಅಲೆ ಎಷ್ಟು ಕಾರಣವೋ, ಯಡಿಯೂರಪ್ಪ ಅವರ ‘ಮೌನ’ವೂ ಅಷ್ಟೇ ಕಾರಣ ಎನ್ನುವುದು ಸ್ಪಷ್ಟ. ಹಾಗೇ ನೋಡಿದರೆ, ರಾಜ್ಯ ಬಿಜೆಪಿಯ ‘ನೈಜ’ ಬಣ ಜಕೀಯದ ಚಿತ್ರಣ ಶುರುವಾಗಿದ್ದೇ ವಿಧಾನಸಭಾ ಚುನಾವಣೆ ಸಮಯದಲ್ಲಿ. ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ‘ಮೌನ’ವಾಗಿರುವಂತೆ ನೋಡಿಕೊಳ್ಳುವಲ್ಲಿ
ಒಂದು ತಂಡ ಮಗ್ನವಾಗಿದ್ದರೆ, ಸಂತೋಷ್ ಜಿ ಬಣವನ್ನು ಹದ್ದು ಬಸ್ತಿನಲ್ಲಿಡಲು, ಇನ್ನೊಂದು ತಂಡ ಹೋರಾಡುತ್ತಿತ್ತು.
ಮತ್ತೊಂದು ತಂಡ ಪಕ್ಷದ ನಿಷ್ಠೆಗೆ ಅಂಟಿಕೊಂಡರೆ, ನಾವು ಮೂಲ ನಿವಾಸಿಗಳು ನಮಗೆ ಅವಕಾಶ ಬೇಕೆಂದು ಇನ್ನೊಂದು ಗುಂಪು ಎದ್ದು ಕೂತಿತ್ತು. ಈ ಎಲ್ಲದರ ನಡುವೆ ಪಕ್ಷಕ್ಕೆ ಬಹುದೊಡ್ಡದಾಗಿ ಕಾಡಿದ್ದು ನನಗೆ ಅಥವಾ ನನ್ನ ಕುಟುಂಬಕ್ಕೆ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದ ಗುಂಪು. ಈ ರೀತಿ ಪಕ್ಷದಲ್ಲಿಯೇ ಹತ್ತಾರು ಗುಂಪುಗಳಾಗಿ, ಒಂದೊಂದು ಗುಂಪು ಬಿಜೆಪಿ ವರಿಷ್ಠರಿಗೆ ಒಂದೊಂದು ಅಭಿಪ್ರಾಯವನ್ನು ನೀಡುತ್ತಾ ಹೋದರು. ಈ ರೀತಿ
ಒಬ್ಬೊಬ್ಬರು ಒಂದೊಂದು ಮಾತುಗಳನ್ನು ಹೇಳುತ್ತಿದ್ದಂತೆ, ದೆಹಲಿಯಲ್ಲಿ ಕೂತ ಮೋದಿ, ಶಾ ಇಬ್ಬರೂ ಕರ್ನಾಟಕದ ‘ವಸ್ತುಸ್ಥಿತಿ’ಯನ್ನು ಅರಿಯುವಲ್ಲಿ ವಿಫಲರಾಗಿದ್ದರಿಂದ, ಕಳೆದ ಚುನಾವಣೆಯಲ್ಲಿ ಪಕ್ಷ ೬೬ಕ್ಕೆ ಇಳಿಯಬೇಕಾಯಿತು.
ಈ ರೀತಿ ಹೀನಾಯ ಸೋಲಿಗೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದೇ ಕಾರಣವೆಂದು ಯಡಿಯೂರಪ್ಪ ಆಪ್ತರು ಹೇಳುತ್ತಾ ಸಾಗಿತ್ತು. ಈ ಕಾರಣವನ್ನು ಅಲ್ಲಗೆಳೆಯುವಂತಿಲ್ಲ ಎನ್ನುವುದು ಎಷ್ಟು ಸತ್ಯವೋ, ‘ಸುಳ್ಳು ಸಮೀಕ್ಷೆ’ಗಳ ಮೂಲಕ ವರಿಷ್ಠರನ್ನೇ ತಪ್ಪು ದಾರಿಗೆ ಎಳೆದ ಕೆಲವರು ಸೋಲಿಗೆ ಕಾರಣ ಎನ್ನುವುದು ಅಷ್ಟೇ ಸತ್ಯ. ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೇಂದ್ರದ ವರಿಷ್ಠರು ಲೋಕಸಭಾ ಚುನಾವಣೆಗೆ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಹೋಗಲು ತೀರ್ಮಾನಿಸಿ, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.
ಈ ನಡೆಯಿಂದ ಯಡಿಯೂರಪ್ಪ ಆಪ್ತರು ಖುಷಿಯಾಗಿದ್ದಕ್ಕಿಂತ ಹೆಚ್ಚಾಗಿ ವಿರೋಧಿ ಬಣ ‘ಮೌನ’ವಾಗಿಯೇ ವಿರೋಧಿಸಲು ಶುರುಮಾಡಿತ್ತು. ಈ
ವಿರೋಧದ ಪರಿಣಾಮವೇ ಲೋಕಸಭಾ ಚುನಾವಣೆಯ ಸಮಯದಲ್ಲಿ ಅಸಹಕಾರ ನಡೆ ಎಂದರೆ ತಪ್ಪಾಗುವುದಿಲ್ಲ. ಕರ್ನಾಟಕದಲ್ಲಿ ಎರಡು ಹಂತದ ಲೋಕಸಭಾ ಮತದಾನ ಪೂರ್ಣಗೊಂಡಿದೆ. ೨೮ ಕ್ಷೇತ್ರಗಳ ಪೈಕಿ ಏಳೆಂಟು ಕ್ಷೇತ್ರದಲ್ಲಿ ಬಂಡಾಯದ ವಾಸನೆ ಬಂದರೂ, ಈಶ್ವರಪ್ಪ ಅವರನ್ನು
ಹೊರತುಪಡಿಸಿ ಇನ್ಯಾರು ಬಂಡಾಯದ ಬಾವುಟ ಹಾರಿಸಲಿಲ್ಲ. ಆದರೆ ಬಹುತೇಕರು ಚುನಾವಣಾ ಸಮಯದಲ್ಲಿ ಸೈಲೆಂಟ್ ಆಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಈಶ್ವರಪ್ಪ ಅವರು ಬಹಿರಂಗವಾಗಿಯೇ ಬಂಡಾಯವಾಗಿ ಸ್ಪರ್ಧಿಸಿದ್ದರಿಂದ ಉಚ್ಚಾಟನೆ ಮಾಡಲಾಯಿತು. ಆದರೆ ಇನ್ನುಳಿದವರು, ಬಂಡಾಯವೇಳದೆ
ಮೌನವಾಗಿದ್ದುಕೊಂಡೇ ‘ಒಳಯೇಟು’ ಕೊಟ್ಟರು. ಈ ಒಳಯೇಟಿನ ಪರಿಣಾಮದಿಂದ ಮತದಾನದ ಬಳಿಕ ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ೧೮ರಿಂದ ೨೦ ಸ್ಥಾನ ಬಂದರೆ ಹೆಚ್ಚು ಎನ್ನುವ ವರದಿಯಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯ ಪ್ರಚಾರದ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಿಜೆಪಿಯ ಬಹುತೇಕ ನಾಯಕರು ಯಾವ ಪ್ರಮಾಣದಲ್ಲಿ ಸೈಲೆಂಟ್ ಆಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಅತಿಹೆಚ್ಚು ಪ್ರಚಾರ
ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಸಹಜವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ.
ಬಿಜೆಪಿಯ ಅಧಿಕೃತ ದಾಖಲೆ ಪ್ರಕಾರ, ವಿಜಯೇಂದ್ರ ಅವರು ೨೮ ಬಹಿರಂಗ ಸಭೆ, ೨೬ ಕಾರ್ನರ್ ಸಭೆ, ೧೨ ರೋಡ್ ಶೋ ಸೇರಿದಂತೆ ಒಟ್ಟು ೬೬ ಸಭೆಗಳನ್ನು ನಡೆಸಿದ್ದಾರೆ. ಇದಾದ ಬಳಿಕ ಎರಡನೇ ಸ್ಥಾನದಲ್ಲಿರುವುದು ಮಾಜಿ ಮುಖ್ಯಮಂತ್ರಿ, ವಿಜಯೇಂದ್ರ ಅವರ ತಂದೆ ಯಡಿಯೂರಪ್ಪ ಅವರು.
ಯಡಿಯೂರಪ್ಪ ಅವರು ಒಟ್ಟಾರೆ ೪೦ ಸಭೆಗಳಲ್ಲಿ ಕಾಣಿಸಿಕೊಂಡರೆ, ಪ್ರತಿಪಕ್ಷ ನಾಯಕ ಅಶೋಕ್ ೨೮ ಸಭೆ, ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ೧೭ ಹಾಗೂ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ೦೭ ಸಭೆಗಳಲ್ಲಿ ಕಾಣಿಸಿಕೊಂಡರು. ಇನ್ನುಳಿದಂತೆ ಸಿ.ಟಿ. ರವಿ ಅವರು ಅಲ್ಲಲ್ಲಿ
ಪ್ರಚಾರ ನಡೆಸಿದ್ದಾರೆ. ಈ ಆರೇಳು ಮಂದಿಯನ್ನು ಹೊರತುಪಡಿಸಿದರೆ, ಬಹುತೇಕರು ತಮ್ಮ ಕ್ಷೇತ್ರ ಅಥವಾ ತಮ್ಮ ಜಿಲ್ಲೆಗಳಿಗೆ ಸೀಮಿತವಾಗಿ ಪ್ರಚಾರ ನಡೆಸಿದರು.
ಈ ಬಾರಿ ಬಿಜೆಪಿ ೪೧ ಸ್ಟಾರ್ ಪ್ರಚಾರಕರನ್ನು ನೇಮಿಸಿದ್ದರೂ, ಬೆರಳೆಣಿಕೆಯಷ್ಟು ಮಂದಿ ಮಾತ್ರ ರಾಜ್ಯಾದ್ಯಂತ ಪ್ರವಾಸ ಮಾಡಿದರು. ಇನ್ನುಳಿದಂತೆ ಯತ್ನಾಳ್ ಅವರು ವಿಜಯಪುರ ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳಿಗೆ ಸೀಮಿತವಾದರು. ಕೇಂದ್ರ ಸಚಿವರಾಗಿದ್ದ ಶೋಭಾ, ಪ್ರಲ್ಹಾದ್ ಜೋಶಿ ತಮ್ಮ ಕ್ಷೇತ್ರಗಳನ್ನು ಗೆದ್ದರೆ ಸಾಕು ಎನ್ನುವ ಮನಸ್ಥಿತಿಗೆ ಬಂದರು. ಇನ್ನು ನಿಕಟಪೂರ್ವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನನಗೂ ಚುನಾ ವಣೆಗೂ ಸಂಬಂಧವಿಲ್ಲ ಎನ್ನುವಂತಿದ್ದರೆ, ಅರವಿಂದ ಲಿಂಬಾವಳಿಯಂತಹ ಪ್ರಮುಖ ನಾಯಕರು ಪಕ್ಷದ ಸೂಚನೆಗೆ ಕಟ್ಟು ಬಿದ್ದು ಕೆಲವೊಂದಷ್ಟು ಕ್ಷೇತ್ರಗಳಿಗೆ ಹೋಗಿ ಬಂದರು.
ಸಂಘಟನೆಯ ಮೂಲಕವೇ ದೇಶದ ರಾಜಕಾರಣದಲ್ಲಿ ಭಾಷ್ಯ ಬರೆಯಲು ಮುಂದಾಗಿದ್ದ ಬಿಜೆಪಿಯಲ್ಲಿ ಈ ರೀತಿಯ ಭಿನ್ನಮತ ಬಹುತೇಕರು ನಿರೀಕ್ಷಿಸಿರ ಲಿಲ್ಲ. ಇನ್ನು ಇತ್ತೀಚಿಗೆ ಪಕ್ಷದ ವಿರುದ್ಧ ನಿಂತಿರುವ ಬಹುತೇಕರು ಬೊಟ್ಟು ಮಾಡುತ್ತಿರುವುದು ಯಡಿಯೂರಪ್ಪ ಅವರ ಕುಟುಂಬದ ವಿರುದ್ಧವೇ. ಲೋಕಸಭಾ ಚುನಾವಣೆಯ ಟಿಕೆಟ್ ಘೋಷಣೆಯ ಸಮಯದಲ್ಲಿ ಯಡಿಯೂರಪ್ಪ ಅವರ ಆತ್ಯಾಪ್ತ ವಲಯದಲ್ಲಿದ್ದರೂ ವಿರೋಧ ವ್ಯಕ್ತಪಡಿಸಲು ಆರಂಭಿಸಿದರು. ಈ ರೀತಿ ಬಹಿರಂಗವಾಗಿಯೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡಿಸದರೂ, ಪಕ್ಷದ ಹೈಕಮಾಂಡ್ ಚಕಾರವೆತ್ತದೇ ಸುಮ್ಮನೇ ಇದಿದ್ದು, ಪಕ್ಷದಲ್ಲಿ ಒಳಜಗಳ ತಾರಕ್ಕೇರಲು ಕಾರಣವೆಂದರೆ ತಪ್ಪಾಗುವುದಿಲ್ಲ.
‘ದೇಶ ಮೊದಲು; ಪಕ್ಷ ಬಳಿಕ; ವ್ಯಕ್ತಿ ಕೊನೆಗೆ’ ಎನ್ನುವ ಮಂತ್ರದೊಂದಿಗೆ ಹಂತಹಂತವಾಗಿ ಬೆಳದ ಬಿಜೆಪಿಯಲ್ಲಿ ಈ ರೀತಿಯ ಪರಿಸ್ಥಿತಿಯನ್ನು ಬಹು ತೇಕರು ನಿರೀಕ್ಷೆ ಮಾಡಿರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟುವುದರಲ್ಲಿ ಯಡಿಯೂರಪ್ಪ ಅವರ ಪಾತ್ರವೆಷ್ಟಿದೆಯೋ, ಅದಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವಿರುವುದರಲ್ಲಿ ಎರಡನೇ ಮಾತಿಲ್ಲ. ಹೀಗಿರುವಾಗ ಯಡಿಯೂರಪ್ಪ ಕುಟುಂಬ ಅಥವಾ ಕೆಲವೊಂದಿಷ್ಟು ಜನರ ಒಲೈಕೆಗಾಗಿ ‘ಶಿಸ್ತಿ’ನ ಪಕ್ಷವಾಗಿ ತೀರ್ಮಾನ ಕೈಗೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿ. ಕುಟುಂಬದ ರಾಜಕೀಯದ ವಿರುದ್ಧ ಹೋರಾಡಿಕೊಂಡೇ ಅಧಿಕಾರದ ಗದ್ದುಗೆ ಏರಿದ ಬಿಜೆಪಿಯಲ್ಲಿನ ‘ಫ್ಯಾಮಿಲಿ ಪಾಲಿಟಿಕ್ಸ್’ ಅದರಲ್ಲಿಯೂ ಕರ್ನಾಟಕದಲ್ಲಿನ ಕುಟುಂಬ ರಾಜಕಾರಣದ ಅಂತ್ಯವೆನ್ನುವುದು ಪಕ್ಷದ ಬಹುತೇಕ ಕಾರ್ಯಕರ್ತರ ಪ್ರಶ್ನೆಯಾಗಿದೆ.
ಈ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ನೀಡುವ ಮನಸ್ಥಿತಿಯಲ್ಲಿ ಪಕ್ಷದ ನಾಯಕರಾಗಲಿ, ವರಿಷ್ಠರಾಗಲಿ ಇಲ್ಲವೇ ಇಲ್ಲ. ಶಿಸ್ತಿ ಪಕ್ಷವಾಗಿರುವ ಬಿಜೆಪಿ ನಾಯಕರು, ಕರ್ನಾಟಕದ ಮಟ್ಟಿಗಿನ ಈ ‘ಅಶಿಸ್ತನ್ನು’ ಸರಿಪಡಿಸುವರೋ ಅಥವಾ ಆಗಿದ್ದಾಗಲಿ ಎನ್ನುವ ಮನಸ್ಥಿತಿಯಲ್ಲಿ ಇದೇ ರೀತಿ ಮುಂದುವರೆಸುವರೋ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.