Friday, 22nd November 2024

ಉ.ಪ್ರದೇಶ ವಿಧಾನಸಭಾ ಚುನಾವಣೆ: ’ಕೈ’ಗೆ ಪ್ರಿಯಾಂಕಾ ನೇತೃತ್ವ

ಲಕ್ನೋ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೇ ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು ದೃಢ ನಂಬಿಕೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಹೇಳಿದರು.

ಮುಂಬರುವ ಚುನಾವಣೆಗಳ ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಮಾತನಾಡಿ, ನಾವು ಸಾಮಾನ್ಯ ಜನ ರೊಂದಿಗೆ ಸಂವಹನ ನಡೆಸುತ್ತಿದ್ದೇವೆ. ಇದಕ್ಕಾಗಿ ಉತ್ತಮ ಕಾರ್ಯತಂತ್ರವನ್ನು ರೂಪಿಸಿದ್ದೇವೆ. ಪ್ರಣಾಳಿಕೆ ಯಲ್ಲಿ ಸಾಮಾನ್ಯ ಜನರ ಧ್ವನಿ ಇರುತ್ತದೆ. ರೈತರು ಮತ್ತು ಮಹಿಳೆಯರ ಭದ್ರತೆ ನಮ್ಮ ಪ್ರಥಮ ಆದ್ಯತೆ. ನಾವು ಆಗ್ರಾ ಜನರನ್ನು ಭೇಟಿ ಮಾಡಿದ್ದೇವೆ ಮತ್ತು ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ.

ಅಯೋಧ್ಯೆ, ಜಾನ್ಸಿ, ಗೋರಖ್‍ಪುರ, ಆಗ್ರಾದ ತೋರಾ ಹಳ್ಳಿಯ ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದೇವೆ. ಅಲ್ಲಿನ ಜನರು, ವಿಧವೆಯರು ಮತ್ತು ವೃದ್ಧರು ಪಿಂಚಣಿ ಹಣ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತಂತೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.