Tuesday, 26th November 2024

ಪಬ್‌ಜಿ ಆಟ ನಿಷೇಧದ ಮೂಲಕ ಚೀನಾಕ್ಕೆ ಸವಾಲು

ಶಶಾಂಕಣ
ಶಶಿಧರ ಹಾಲಾಡಿ

ನಮ್ಮ ದೇಶದ ಜನಪ್ರಿಯ ಮೊಬೈಲ್ ಗೇಮ್ ಎನಿಸಿರುವ ಪಬ್‌ಜಿ ಮೊಬೈಲ್ ಆಟವನ್ನು ಕಳೆದ ವಾರ ನಿಷೇಧಿಸುವ ಮೂಲಕ ಚೀನಾಕ್ಕೆ ಒಂದು ಪುಟ್ಟ ಎಚ್ಚರಿಕೆಯನ್ನು ನೀಡಿದಂತಾಗಿದೆ. ಕುತೂಹಲಕಾರಿ
ವಿಷಯವೆಂದರೆ, ಪಬ್‌ಜಿ ಗೇಮ್‌ನ ಮೊಬೈಲ್ ಅವತರಣಿಕೆಯನ್ನು ಚೀನಾದಲ್ಲಿ ಉಪಯೋಗಿಸುವಂತಿಲ್ಲ! ಏಕೆಂದರೆ, ಅದರಲ್ಲಿ ಅಡಕಗೊಂಡಿರುವ ರಕ್ತಪಾತ ಮತ್ತು ಹಿಂಸೆಯು ಅತಿರೇಕ ಎನಿಸಿದ್ದರಿಂದ, ಚೀನಾದ ಸಂಸ್ಥೆೆ ಒಡೆತನದ ಪಬ್‌ಜಿ ಮೊಬೈಲ್‌ಗೆ ಅಲ್ಲಿ ಮೊದಲಿನಿಂದಲೇ ಅವಕಾಶವಿಲ್ಲ. ಅದರ ಬದಲಿಗೆ, ಅದೇ ಆಟದ ಕಡಿಮೆ ಹಿಂಸೆ ಹೊಂದಿರುವ ಅವತರಣಿಕೆಯೊಂದನ್ನು ತಯಾರಿಸಿ, ಅದಕ್ಕೆ ‘ಗೇಮ್ ಫಾರ್ ಪೀಸ್’ ಎಂಬ ಆದರ್ಶಮಯ ಹೆಸರನಿಟ್ಟು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ!

ಹಾಗಾದರೆ, ಪಬ್‌ಜಿ ಮೊಬೈಲ್ ಆಟದ ಹಿಂಸಾಭರಿತ ಸನ್ನಿವೇಶಗಳು, ಒಬ್ಬರೊನ್ನೊಬ್ಬರು ಗುಂಡಿಟ್ಟು ಕೊಲ್ಲುವ ಆಟದ ಪಟ್ಟುಗಳು ಭಾರತದ ಆಟಗಾರರಿಗೆ ತೊಂದರೆ ಕೊಡುವುದಿಲ್ಲ ಎಂದರ್ಥವೆ? ವಿಷಯ ಅದಲ್ಲ. 2018ರಲ್ಲಿ ಪಬ್‌ಜಿ ಮೊಬೈಲ್ ಗೇಮ್‌ನ್ನು ಚೀನಾದ ಟೆನ್‌ಸೆಂಟ್ ಸಂಸ್ಥೆಯು ಭಾರತದಲ್ಲಿ ಯಾವುದೇ ಅಡ್ಡಿಿಆತಂಕ ಗಳಿಲ್ಲದೇ ಬಿಡುಗಡೆ ಮಾಡಿತು. ನಮ್ಮ ದೇಶದ ಉತ್ಸಾಹಿ ಆಟಗಾರರು ಅದನ್ನು ಎಗ್ಗಿಲ್ಲದೇ ಡೌನ್‌ಲೋಡ್ ಮಾಡಿಕೊಂಡು, ತಮ್ಮ ಮೊಬೈಲ್‌ಗಳಲ್ಲಿ ಅಳವಡಿಸಿಕೊಂಡು ಆಟವಾಡತೊಡಗಿದರು.

ಇದುವರೆಗೆ ವಿಶ್ವದಲ್ಲಿ ಇದನ್ನು ಸುಮಾರು 500 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಅದರ ಪೈಕಿ ಸುಮಾರು 150 ಮಿಲಿಯನ್ ಡೌನ್ ಲೋಡ್ ಆಗಿದ್ದು ಭಾರತದಲ್ಲಿ! ಅಂದರೆ ಶೇ.25 ಕ್ಕಿಂತ ಹೆಚ್ಚು! ಅವರಲ್ಲಿ ಪ್ರತಿ ದಿನ ಸುಮಾರು 30 ಮಿಲಿಯನ್ ಜನರು ಪಬ್‌ಜಿ ಮೊಬೈಲ್ ಆಟ ಆಡುತ್ತಾರೆ. ಹಿಂಸೆ ಹೆಚ್ಚಾಗಿದೆ ಎಂದು ಚೀನಾದಂಥ ಚೀನಾದಲ್ಲೇ ಬಿಡುಗಡೆಯಾಗದೇ ಇರುವ, ಚೀನಾದ ಒಡೆತನ ಹೊಂದಿರುವ ಟೆನ್‌ಸೆಂಟ್ ಸಂಸ್ಥೆೆ ಹಂಚಿಕೆ ಮಾಡಿರುವ ಈ ಪಬ್‌ಜಿ ಮೊಬೈಲ್, ಭಾರತದ ಅತ್ಯಂತ ಜನಪ್ರಿಯ ಮೊಬೈಲ್ ಗೇಮ್ ಎನಿಸಿದೆ.

ಇದನ್ನೆಲ್ಲಾ ವಿಶ್ಲೇಷಿಸುತ್ತಾ ಹೋದರೆ ಇದ್ಯಾಕೋ ಒಂಚೂರು ಅತಿ ಆಯಿತೇನೋ ಅನಿಸುತ್ತದೆ ಅಲ್ಲವೆ?
ಈ ಅತಿ ಎನಿಸುವ ವಿದ್ಯಮಾನವನ್ನು ಗುರುತಿಸಿಯೇ, ಭಾರತ ಸರಕಾರ ಕಳೆದ ವಾರ ಪಬ್‌ಜಿ ಮೊಬೈಲ್ ಗೇಮನ್ನು ನಿಷೇಧ ಮಾಡಿತು. ಇದೊಂದನ್ನೇ ಅಲ್ಲ, ಇನ್ನೂ ನೂರು ಚಿಲ್ಲರೆ ಆ್ಯಪ್ ಗಳನ್ನು ನಿಷೇಧಿಸಲಾಯಿತು. ಇದಕ್ಕೆ ನೀಡಿದ ಅಧಿಕೃತ ಕಾರಣವೆಂದರೆ, ‘ಬಳಕೆದಾರರ ಮಾಹಿತಿಯನ್ನು ಅನಧಿಕೃತವಾಗಿ ಕದ್ದು, ರಹಸ್ಯವಾಗಿ ವರ್ಗಾವಣೆ ಮಾಡಿ, ಭಾರತದ ಹೊರಗಿರುವ ಸರ್ವರ್‌ಗಳಿಗೆ ಸಾಗಿಸಿದ್ದು’. ಸರಕಾರವು ನೀಡುವ ಕಾರಣಗಳು ಸರಕಾರದ ಭಾಷೆಯಲ್ಲೇ ಇರುವುದು ಬೇರೆಯ ವಿಚಾರ. ಟೆನ್‌ಸೆಂಟ್ ಎಂಬ ಚೀನಾದ ದೈತ್ಯ ತಂತ್ರಜ್ಞಾನ ಸಂಸ್ಥೆಯು ಪಬ್‌ಜಿ ಮೊಬೈಲ್ ಆಟವನ್ನು ಭಾರತದಲ್ಲಿ ಪ್ರಚುರಪಡಿಸಿ, ಬಳಕೆದಾರರ ಮಾಹಿತಿಯನ್ನು ರಹಸ್ಯವಾಗಿ ಕದ್ದು, ದೇಶದ ಹೊರಗಿರುವ ಸರ್ವರ್‌ಗಳಿಗೆ ರವಾನಿಸುತ್ತಿದ್ದುದು
ನಿಜವೆ? ವಿಷಯ ಅದಕ್ಕಿಂತ ವಿಭಿನ್ನ ಆಯಾಮ ಹೊಂದಿದೆ.

ಚೀನಾ ಸಂಸ್ಥೆಯ ಅತಿ ಜನಪ್ರಿಯ ಮೊಬೈಲ್ ಗೇಮ್ ಒಂದನ್ನು ಭಾರತವು ನಿಷೇಧಿಸಿದ ವಿಚಾರವು ಅಂತಾ ರಾಷ್ಟ್ರೀಯ ಸುದ್ದಿಯಾಯಿತು! ಯುವಜನರ ಕಣ್ಮಣಿ ಎನಿಸಿರುವ ಪಬ್‌ಜಿ ಮೊಬೈಲ್ ಆಟವು ಭಾರತದಲ್ಲಿ ನಿಷೇಧಗೊಂಡಾಗ, ಅದೆಷ್ಟೋ ಜನರ ದೃಷ್ಟಿಯೇ ಮಸುಕಾಯಿತೇನೋ ಎಂಬಂಥ ಪ್ರಾಮುಖ್ಯತೆ ಪಡೆದು ಈ ಸುದ್ದಿಯ ವಿಶ್ಲೇಷಣೆ ನಡೆಯಿತು. ಭಾರತ ಚೀನಾ ನಡುವೆ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಗಡಿ ತಕರಾರಿನ ಸಮಯದಲ್ಲೇ, ಚೀನಾಕ್ಕೆ ಎಚ್ಚರಿಕೆ ನೀಡುವ ರೀತಿಯಲ್ಲಿ, ಆ ದೇಶದ ಹಲವು ಆ್ಯಪ್‌ಗಳನ್ನು, ಗೇಮ್‌ಗಳನ್ನು ನಿಷೇಧಿಸಿದ ಸುದ್ದಿ, ದೇಶ ವಿದೇಶಗಳಲ್ಲಿ ಸಂಚಲವನವನ್ನೇ ಸೃಷ್ಟಿಸಿತು.

ನಾನಾ ರೀತಿಯ ಸಾವಿರಾರು ಆ್ಯಪ್‌ಗಳನ್ನು ತಯಾರಿಸಿ ವಿಶ್ವದಾದ್ಯಂತ ಅಂತರ್ಜಾಲದ ಮೂಲಕ ತೇಲಿ ಬಿಟ್ಟಿರುವ ಚೀನಾದ ಆಧಿಪತ್ಯವನ್ನು ಭಾರತದಂಥ ದೇಶ ಪ್ರಶ್ನಿಸಬಲ್ಲದು ಎಂಬ ವಿಚಾರ ಸೃಷ್ಟಿಸಿದ
ಸಂಚಲನ ಅದು. ತಂತ್ರಜ್ಞಾನ ಕ್ಷೇತ್ರದಲ್ಲಿ ದೈತ್ಯ ಎನಿಸಿರುವ, ಅಗ್ಗದ ಮೊಬೈಲ್ ಮತ್ತು ಆ್ಯಪ್‌ಗಳನ್ನು
ತಯಾರಿಸಿರುವ ಚೀನಾದ ದೈತ್ಯ ಶಕ್ತಿಗೆ ಭಾರತ ಸವಾಲು ಒಡ್ಡಬಲ್ಲದು ಎಂಬ ವಿದ್ಯಮಾನ ಸೃಷ್ಟಿಸಿದ
ಸಂಚಲನ ಅದು. ಪಬ್‌ಜಿ ಮೊಬೈಲ್ ಆಟದ ಬಹುಪಾಲು ಗ್ರಾಹಕರು ಭಾರತೀಯರಾಗಿರುವುದರಿಂದ, ಆ ಗೇಮ್‌ನ್ನು ಬ್ಯಾನ್ ಮಾಡುವ ಮೂಲಕ ಚೀನಾದ ಆ ಒಂದು ತಂತ್ರಜ್ಞಾನ ಸಂಸ್ಥೆಗೆ ಬಿಸಿ ಮುಟ್ಟಿಸಿದ ರೀತಿ ಸೃಷ್ಟಿಸಿದ ಸಂಚಲನ ಅದು.

ಮುಂದೊಂದು ದಿನ ಚೀನಾದ ಅಗ್ಗದ ಮೊಬೈಲ್‌ಗಳನ್ನು ಸಹ ಭಾರತವು ನಿಷೇಧಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂಬ ಸಂದೇಶ ನೀಡಿದ ರೀತಿ ಸೃಷ್ಟಿಸಿದ ಸಂಚಲನ ಅದು. ಹಾಗೆ ನೋಡಿದರೆ, ಕಳೆದ ಒಂದೆರಡು ತಿಂಗಳುಗಳಲ್ಲಿ ಚೀನಾದ ಆ್ಯಪ್‌ಗಳನ್ನು ಭಾರತ ನಿಷೇಧಿಸಿದ್ದು ದೊಡ್ಡ ಸುದ್ದಿಯಾದರೂ, ಅದರಿಂದಾಗಿ ಚೀನಾ ದೇಶಕ್ಕೆ ಮತ್ತು ಅಲ್ಲಿನ ತಂತ್ರಜ್ಞಾನ ಸಂಸ್ಥೆಗಳಿಗೆ ಹೆಚ್ಚಿನ ಆರ್ಥಿಕ ನಷ್ಟವೇನೂ ಆಗಿಲ್ಲ. ಪಬ್‌ಜಿ ಮೊಬೈಲ್ ಗೇಮ್ ವಿಚಾರವನ್ನೇ ತೆಗೆದುಕೊಂಡರೆ, ಆ ಆಟವನ್ನು ಬಿಡುಗಡೆ ಮಾಡಿದ ಟೆನ್‌ಸೆಂಟ್ ಸಂಸ್ಥೆಗೆ, ಈ ನಿಷೇಧದಿಂದಾಗಿ ಆ ಸಂಸ್ಥೆಯ ಒಟ್ಟು ಆದಾಯದ ಶೇ. ಒಂದರಷ್ಟು ನಷ್ಟವೂ ಆಗಿಲ್ಲ. ಈ ಆಟದಿಂದ ಆ ಸಂಸ್ಥೆೆ ಮಾರ್ಚ್ 2020ರಲ್ಲಿ 232 ಮಿಲಿಯ ಡಾಲರ್ ಆದಾಯ ಗಳಿಸಿದೆ.

ಆ ಸಂಸ್ಥೆಯ ಒಟ್ಟು ಆದಾಯ ಸುಮಾರು 55 ಬಿಲಿಯ ಡಾಲರ್. ಭಾರತವು ಚೀನಾದ ಎಲ್ಲಾ ಆ್ಯಪ್‌ಗಳನ್ನು ನಿಷೇಧಿಸಿದ್ದರಿಂದ ಆ ದೇಶಕ್ಕೆ ಆಗುವ ಆರ್ಥಿಕ ನಷ್ಟಕ್ಕಿಂತಲೂ, ಭಾರತದ ಆ ಒಂದು ನಡೆ ಉಂಟುಮಾಡಿದ ಸಂಚಲನ, ಅಭಿಪ್ರಾಯ ಹೆಚ್ಚು ಮೌಲ್ಯವಿದ್ದು. ಚೀನಾದ ತಂತ್ರಜ್ಞಾನ ಶಕ್ತಿಗೆ ಭಾರತವೂ ನಿಷೇಧ ಹೇರುವ
ಮೂಲಕ, ಸವಾಲು ಒಡ್ಡಲು ಪ್ರಯತ್ನಿಸಬಲ್ಲದು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಂಡ
ಅಭಿಪ್ರಾಯದ ಶಕ್ತಿ ದೊಡ್ಡದು. ಪಬ್‌ಜಿಮೊಬೈಲ್ ಮೊದಲಾದ ಆಟಗಳನ್ನು, ವಿವಿಧ ಚೀನಾದ ಆ್ಯಪ್
ಗಳನ್ನು ನಿಷೇಧಿಸುವ ಮೂಲಕ, ನಮ್ಮ ದೇಶದಲ್ಲೇ ಅಂತಹವುಗಳನ್ನು ತಯಾರಿಸಲು ಉತ್ತೇಜನ ನೀಡುವ
ಆಶಯವೂ ಈ ನಿಷೇಧದಲ್ಲಿದೆ.

ಪಬ್‌ಜಿ ಆಟದ ವಿಚಾರಕ್ಕೆ ಬಂದರೆ, ಈಗ ಪಬ್ ಜಿಯ ಮೊಬೈಲ್ ಗೇಮ್ ಅವತರಣಿಕೆಯನ್ನು ಮಾತ್ರ
ನಮ್ಮ ದೇಶದಲ್ಲಿ ನಿಷೇಧಿಸಲಾಗಿದೆ. ಕಂಪ್ಯೂಟರ್ ಮೂಲಕ, ಲ್ಯಾಪ್‌ಟಾಪ್ ಮೂಲಕ ಆಡಬಹುದಾದ
ವಿಸ್ತೃತ ಪಬ್‌ಜಿಯನ್ನು ನಿಷೇಧಿಸಿಲ್ಲ. ಪಬ್‌ಜಿ ಮೊಬೈಲ್‌ಗಿಂತ, ಕಂಪ್ಯೂಟರ್ ಪಬ್‌ಜಿ ಆಟ ಹೆಚ್ಚು
ಪರಿಣಾಮಕಾರಿ. ಹಿಂಸೆ, ಇತರ ಆಟಗಾರರನ್ನು ಗುಂಡಿಟ್ಟು ಕೊಲ್ಲುವುದು, ವಿವಿಧ ಅಸ್ತ್ರಗಳು, ಕಿರಿದಾಗುತ್ತಾ ಸಾಗುವ ದ್ವೀಪದಲ್ಲಿ ಉದ್ಭವಿಸುವ ಬಿಕ್ಕಟ್ಟುಗಳು ಮೊದಲಾದವು ಕಂಪ್ಯೂಟರ್ ಆಟದಲ್ಲಿ ಹೆಚ್ಚು ಪ್ರಭಾವ ಶಾಲಿಯಾಗಿ, ಪರಿಣಾಮಕಾರಿಯಾಗಿ ಕಾಣಿಸುತ್ತವೆ. ಆದ್ದರಿಂದ, ಅದನ್ನು ಆಡುವವರು ಆ ಗೇಮ್‌ಗೆ ದಾಸರಾಗುವ ಸಾಧ್ಯತೆ ಹೆಚ್ಚು ಮತ್ತು ಹಿಂಸೆಯ ಆಟದ ಚಟಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು.

ಪಬ್‌ಜಿ ಮೊಬೈಲ್‌ನಲ್ಲಿ ಉಚಿತವಾಗಿ ಬಹುಕಾಲ ಆಟವಾಡುವ ಅವಕಾಶವಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲೂ ಈ ಆಟವನ್ನು ಆಡಬಹುದಾದ್ದರಿಂದ ಹೆಚ್ಚು ಜನಪ್ರಿಯ. ಆದ್ದರಿಂದಲೇ ಭಾರತದಲ್ಲಿ ಲಕ್ಷಾಂತರ ಜನರು ತಮ್ಮ ಮೊಬೈಲ್‌ಗೆ ಈ ಅಡಿಕ್ಟಿವ್ ಆಟವನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಪಬ್‌ಜಿಯ ಸ್ಟಾರ್ ಆಟಗಾರರು ಆಡುವ ಆಟವನ್ನು, ಸಾವಿರಾರು ಜನರು ವೀಕ್ಷಿಸಲು ಸಾಧ್ಯ. ಈ ರೀತಿ ಸಾವಿರಾರು ಜನರು ವೀಕ್ಷಿಸುವ ಆಟವನ್ನಾಾಡುವ ಅನುಭವಿ ಆಟಗಾರರಿಗೆ, ಸ್ಟಾರ್ ಪಟ್ಟ
ಒದಗಿದ್ದರ ಜತೆ, ಅದೊಂದು ಆದಾಯದ ಮೂಲವೂ ಆಗಿತ್ತು.

ಕ್ರಿಕೆಟ್ ಆಟಗಾರರು ಹಣಗಳಿಸುವ ರೀತಿಯಲ್ಲಿ, ಪಬ್‌ಜಿ ಆಟಗಾರರು ಸಹ ಪ್ರತಿ ತಿಂಗಳು ಸಂಬಳ, ಗೌರವಧನ, ಜಾಹೀರಾತು ಆದಾಯವನ್ನು ಗಳಿಸುತ್ತಿದ್ದರು. ಪಬ್‌ಜಿ ಮೊಬೈಲ್ ಆಟವು ಈಗ ನಿಷೇಧಕ್ಕೊಳಗಾದುದರಿಂದ,  ಈ ಎಲ್ಲಾ ಚಟುವಟಿಕೆಗಳಿಗೆ ತಾತ್ಕಾಲಿಕವಾಗಿ ಕಡಿವಾಣ ಬಿದ್ದಿದೆ. ದಕ್ಷಿಣ ಕೊರಿಯಾದ ಮೂಲ ಸಂಸ್ಥೆ ಪಬ್‌ಜಿ ಅಥವಾ ‘ಪ್ಲೇಯರ್ಸ್ ಅನ್‌ನೋನ್ ಅಂಡರ್‌ಗ್ರೌಂಡ್ ಬ್ಯಾಟಲ್ ಗ್ರೌಂಡ್ಸ್‌’ ಎಂಬ ಆಟವನ್ನು ಮೊದಲು ಅಭಿವೃದ್ಧಿಪಡಿಸಿದವನು ಐರಿಷ್ ಮೂಲದ ಬ್ರೆೆಂಡನ್ ಗ್ರೀನ್ ಎಂಬಾತ.

ದಕ್ಷಿಣ ಕೊರಿಯಾದ ಬ್ಲೂಹೋಲ್ ಗೇಮ್ ಸಂಸ್ಥೆಯ ಸಹವರ್ತಿ ಸಂಸ್ಥೆ ಪಬ್‌ಜಿ ಕಾರ್ಪೊರೇಷನ್ ಇದನ್ನು
ಪ್ರಚುರಪಡಿಸಿತು. ನೂರು ಆಟಗಾರರು ದ್ವೀಪವೊಂದರಲ್ಲಿ ಪರಸ್ಪರ ಹೊಡೆದಾಡುತ್ತಾ, ಹೊಸ ಹೊಸ ಅಸ್ತ್ರಗಳನ್ನು ಹುಡುಕುತ್ತಾ ಯುದ್ಧ ಮಾಡಿ, ಎಲ್ಲರನ್ನೂ ಸಾಯಿಸಿ, ಕೊನೆಯಲ್ಲಿ ಉಳಿದುಕೊಳ್ಳುವವನೇ ವಿಜಯಿಯಾಗುವ ವಿನ್ಯಾಸದ ಆಟ ಇದು. ಹಣ ಕೊಟ್ಟು ಖರೀದಿಸಿ, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಆಡಬಹುದಾದ ಈ ಆಟವು 2017ರಲ್ಲಿ ಬಿಡುಗಡೆಯಾಯಿತು. ಇದರ ಜನಪ್ರಿಯತೆ ಕಂಡು, ಈ ಆಟದ ಮೊಬೈಲ್ ಅವತರಣಿಕೆಯನ್ನು ಚೀನಾದ ಟೆನ್‌ಸೆಂಟ್ ಸಂಸ್ಥೆಯು ಕೊರಿಯಾದ ಪಬ್‌ಜಿ ಕಾರ್ಪೊರೇಷನ್  ನೊಂದಿಗೆ ಒಡಂಬಡಿಕೆ ಮಾಡಿಕೊಂಡು, 2018ರಲ್ಲಿ ಬಿಡುಗಡೆ ಮಾಡಿತು.

ಭಾರತದಲ್ಲಿ ಅತಿ ಹೆಚ್ಚು ಬಾರಿ ಡೌನ್ ಲೋಡ್ ಆಗಿರುವ ಮೊಬೈಲ್ ಅವತರಣಿಕೆಯ ಒಡೆತನ ಚೀನಾದ ಟೆನ್‌ಸೆಂಟ್ ವಶದಲ್ಲಿದೆ. ತೀರ ಸರಳ ಮೊಬೈಲ್‌ಗಳಲ್ಲೂ ಆಡಬಹುದಾದ, ಹೆಚ್ಚು ಮೆಮೊರಿ ಮತ್ತು ರ್ಯಾಾಮ್ ಅಗತ್ಯವಿಲ್ಲದ ಪಬ್‌ಜಿ ಮೊಬೈಲ್ ಲೈಟ್ ಅವತರಣಿಕೆಯನ್ನು 2019ರ ಜುಲೈನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ವೇದಿಕೆಯಲ್ಲಿ 60 ಜನ ಆಟಗಾರರಿರುತ್ತಾರೆ. ಪಬ್ ಜಿಯ ಮೊಬೈಲ್ ಆಟವನ್ನು ಉಚಿತವಾಗಿ ಡೌನ್ ಲೋಡ್ ಮಾಡುವ ಅವಕಾಶವಿದೆ.

ಪಬ್‌ಜಿ ಆಟವನ್ನು ಆಡುವ ಟೂರ್ನಮೆಂಟ್‌ಗಳು ನಡೆಯುತ್ತವೆ! 350000 ಲಕ್ಷ ಡಾಲರ್ ಬಹುಮಾನವಿರುವ ಪಬ್‌ಜಿ ಟೂರ್ನಮೆಂಟ್ 2017ರಲ್ಲಿ ನಡೆದಿತ್ತು. ಬೆಂಗಳೂರು ಮತ್ತು ಇತರ ನಗರಗಳಲ್ಲಿ ಪಬ್‌ಜಿ ಟೂರ್ನಮೆಂಟ್‌ಗಳು ಆಗಾಗ ನಡೆಯುತ್ತವೆ. ನಮ್ಮ ರಾಜ್ಯದ ಹಾಸನ, ಚಿಕ್ಕಮಗಳೂರು ಮೊದಲಾದ ಊರುಗಳಿಂದ ಬರುವ ಆಟಗಾರರು ಈ ಟೂರ್ನಮೆಂಟ್‌ಗಳಲ್ಲಿ ಆಡುವುದುಂಟು! ಇದಕ್ಕಿಂತಲೂ  ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪಬ್‌ಜಿ ಟೂರ್ನಮೆಂಟ್ ಗಳನ್ನು ಸಾವಿರಾರು ಜನರು ವೀಕ್ಷಿಸುವುದು, ಥೇಟ್ ಕ್ರಿಕೆಟ್ ಮ್ಯಾಚ್ ರೀತಿ, ಅದನ್ನು ಎಂಜಾಯ್ ಮಾಡುವುದು ಮೊದಲಾದ ವಿದ್ಯಮಾನಗಳಿಂದಾಗಿ, ಅಂತಹ ಆಟಗಾರರಿಗೆ ಸ್ಟಾರ್ ವ್ಯಾಲ್ಯೂ ಬೆಳೆದಿದೆ.

ಭಾರತದಲ್ಲಿ ಇ-ಸ್ಪೋರ್ಟ್ ಮಾರ್ಕೆಟ್ ರೂಪುಗೊಳ್ಳಲು ಪಬ್‌ಜಿ ಜನಪ್ರಿಯತೆ ಒಂದು ಕಾರಣ ಎನಿಸಿದೆ. ಈ ನಡುವೆ ನಮ್ಮ ದೇಶದ ಸಾವಿರಾರು ಮಕ್ಕಳು ಈ ಆಟವನ್ನು ಆಡುತ್ತಾ, ಅದರ ಚಟ, ಗೀಳನ್ನು ಬೆಳೆಸಿಕೊಂಡಿದ್ದು ದಾಖಲಾಗಿದೆ. 2019ರಲ್ಲಿ ಗುಜರಾತ್‌ನಲ್ಲಿ ಪರೀಕ್ಷೆಯ ಸಮಯದಲ್ಲಿ ಇದನ್ನು ಬ್ಯಾನ್ ಮಾಡಲಾಗಿತ್ತು, ಮಕ್ಕಳು ಅಧ್ಯಯನ ಮಾಡಲು ತೊಂದರೆಯಾಗುತ್ತದೆಂಬ ಕಾರಣದಿಂದ! ನೇಪಾಳದಲ್ಲೂ ಕೆಲವು ಕಾಲ ಇದನ್ನುನಿಷೇಧಿಸಲಾಗಿತ್ತು.

ಆದರೆ, ನಮ್ಮ ದೇಶವು ಪಬ್‌ಜಿಯನ್ನು ಬ್ಯಾನ್ ಮಾಡಿದ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಿದ ಸಂಚಲನ ಮತ್ತು ತರಾತುರಿ ಮಾತ್ರ ಅಭೂತಪೂರ್ವ. ಚೀನಾ ಒಡೆತನದ ಟೆನ್‌ಸೆಂಟ್ ವಿತರಣೆ ಮಾಡುತ್ತಿರುವ ಪಬ್‌ಜಿ ಮೊಬೈಲ್ ನಿಷೇಧಗೊಂಡ ನಂತರ, ದಕ್ಷಿಣ ಕೊರಿಯಾದ ಪಬ್‌ಜಿ ಕಾರ್ಪೊರೇಷನ್ ಒಂದು ಬಹುದೊಡ್ಡ ನಿರ್ಣಯವನ್ನು ಘೋಷಿಸಿದೆ! ಇನ್ನು ಮುಂದೆ ಪಬ್‌ಜಿ ಮೊಬೈಲ್ ಆಟದ ಭಾರತದ ವಿತರಣೆಯ ಚೀನಾದ ಟೆನ್‌ಸೆಂಟ್ ನಿಯಂತ್ರಣದಲ್ಲಿ ಇರುವುದಿಲ್ಲವಂತೆ! ಭಾರತದಲ್ಲಿ ಪಬ್‌ಜಿ ಮೊಬೈಲ್
ಆಟವನ್ನು ವಿತರಿಸುವ ವಿಷಯದಲ್ಲಿ ಟೆನ್‌ಸೆಂಟ್ ಒಂದಿಗಿನ ಎಲ್ಲಾ ಒಪ್ಪಂದಗಳಿಗೂ ತಿಲಾಂಜಲಿ
ಇಡಲಾಗಿದೆ ಎಂದು ಕೊರಿಯಾದ ಆ ಸಂಸ್ಥೆ ಮಂಗಳವಾರ ಘೋಷಿಸಿದೆ. ತಂತ್ರಜ್ಞಾನದಲ್ಲಿ ಮುಂದುವರಿದಿ ರುವ ದಕ್ಷಿಣ ಕೊರಿಯಾದ ಆ ಸಂಸ್ಥೆಯು ಭಾರತದ ಬೃಹತ್ ಮಾರುಕಟ್ಟೆಯನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಚೀನಾದ ಟೆನ್‌ಸೆಂಟ್ ಹಿಡಿತದಿಂದ ಬಿಡಿಸಿ, ಮತ್ತೊಮ್ಮೆ ಆ ಆಟವನ್ನು ನಮ್ಮ ದೇಶದಲ್ಲಿ ವಿತರಿಸಬೇಕೆಂಬ ಇರಾದೆ ದಕ್ಷಿಣ ಕೊರಿಯಾದ ಪಬ್‌ಜಿ ಕಾರ್ಪೊರೇಷನ್‌ಗೆ ಹುಟ್ಟಿದೆ.

ಇನ್ನು ಮುಂದೆ ಭಾರತದಲ್ಲಿ ತಾನೇ ಅದರ ಉಸ್ತುವಾರಿಯನ್ನು ನೋಡಿಕೊಳ್ಳುವೆ ಎಂದು ಹೇಳಿದೆ. ಅಷ್ಟರ ಮಟ್ಟಿಗೆ ನಮ್ಮ ದೇಶ ಕಳೆದ ವಾರಿ ವಿಧಿಸಿದ ನಿಷೇಧ ಕೆಲಸ ಮಾಡಿದೆ! ಅಂತಾರಾಷ್ಟ್ರೀಯ ಮಟ್ಟದ ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ವ್ಯಾಪಾರಕ್ಕಾಗಿ ಎಂತಹ ತಂತ್ರಗಳನ್ನು ಬೇಕಾದರೂ ಅನುಸರಿಸಬಹುದು ಎಂಬುದಕ್ಕೆ ದಕ್ಷಿಣ ಕೊರಿಯಾದ ಈ ಸಂಸ್ಥೆೆಯ ಹೇಳಿಕೆ ಒಂದು ಉದಾಹರಣೆ.

ಪಬ್‌ಜಿಯ ಮೂಲ ಆಟವನ್ನು ಅದು ಅಭಿವೃದ್ಧಿಪಡಿಸಿದ್ದರೂ, ಅದರ ಮೊಬೈಲ್ ಅವತರಣಿಕೆಯನ್ನು ರೂಪಿಸಿದ್ದು ಚೀನಾದ ಟೆನ್ ಸೆಂಟ್. ಆ ಆಟದಲ್ಲಿ ಮುಂದಿನ ಬದಲಾವಣೆ ನಡೆಸುವುದು ಸಹ ಟೆನ್‌ಸೆಂಟ್. ಆದರೆ ಭಾರತದ ಮಾರುಕಟ್ಟೆೆಯನ್ನು ಉಳಿಸಿಕೊಳ್ಳುವುದಕ್ಕೋೋಸ್ಕರ ಇಂತಹ ಹೇಳಿಕೆಯನ್ನು ನೀಡಲಾಗಿದೆ. ಮಿಗಿಲಾಗಿ, ಪಬ್‌ಜಿಯ ಕಂಪ್ಯೂೂಟರ್ ಅವತರಣಿಕೆಯನ್ನು ದಕ್ಷಿಣ ಕೊರಿಯಾದ ಸಂಸ್ಥೆಯೇ ವಿತರಿಸುವುದರಿಂದಾಗಿ, ಅದನ್ನು ಈಗ ಬ್ಯಾನ್ ಮಾಡಿಲ್ಲ.

ಇಲ್ಲಿ ಮತ್ತೊಂದು ಪ್ರಶ್ನೆ ಎದುರಾಗುತ್ತದೆ. ವಿಶ್ವದ ಅತಿ ಜನಪ್ರಿಯ ಆಟ ಎನಿಸಿರುವ ಮತ್ತು ಹಿಂಸೆ,
ರಕ್ತಪಾತಗಳಿಗೆ ಅವಕಾಶ ನೀಡುವ ಪಬ್‌ಜಿ ಆಟವು ಮಕ್ಕಳನ್ನು, ಯುವಜನರನ್ನು ಕಂಪ್ಯೂಟರ್ ಆಟಗಳಿಗೆ
ದಾಸರಾಗಿಸುವ ಸಾಧ್ಯತೆ ಹೊಂದಿರುವ ಆಟ. ಈಗ ಪಬ್‌ಜಿ ಮೊಬೈಲ್‌ನ್ನು ಮಾತ್ರ ನಿಷೇಧಿಸಲಾಗಿದೆ,
ಅದು ಚೀನಾ ಮೂಲದ ಸಂಸ್ಥೆೆಯ ಒಡೆತನದ್ದು ಎಂಬ ಕಾರಣದಿಂದಾಗಿ. ಆದರೆ, ಪಬ್‌ಜಿ ವಿಸ್ತೃತ ಆಟ
ಇಂದಿಗೂ ಮುಕ್ತ ಮುಕ್ತ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ದೃಷ್ಟಿಯಿಂದ ಪಬ್‌ಜಿಯನ್ನು ಸಂಪೂರ್ಣ ಬ್ಯಾನ್ ಮಾಡುವ ಅಗತ್ಯ ಇದೆ ಎಂದು ಹಲವು ಮನೋವೈದ್ಯರು ಹೇಳಿದ್ದಾರೆ.

ಚೀನಾ ಮೂಲದ ಆ್ಯಪ್ ನಿಷೇಧದ ಜತೆಗೆ, ಹಿಂಸೆಯನ್ನು ಪ್ರಚೋದಿಸುವ ಇಂತಹ ಆಟಗಳ ಸಂಪೂರ್ಣ
ನಿಷೇಧವು, ಉತ್ತಮ ಸಮಾಜ ರೂಪಿಸುವ ನಿಟ್ಟಿನಲ್ಲಿ ಸೂಕ್ತ ಹೆಜ್ಜೆ ಎನಿಸಬಹುದು.