Monday, 25th November 2024

‘ಈ ಸಲ ಕಪ್ ನಮ್ದೆ’: ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿ ವನಿತೆಯರು

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರು ಚೊಚ್ಚಲ ಟ್ರೋಫಿ ಗೆಲ್ಲುವ ಮೂಲಕ ೧೬ ವರ್ಷಗಳ ಕೊರತೆಯನ್ನು ನೀಗಿಸಿದರು.

‘ಈ ಸಲ ಕಪ್ ನಮ್ದೆ’ ಎಂಬ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ಘೋಷವಾಕ್ಯ ಇದೀಗ ನಿಜವಾಗಿದೆ.

ಭಾನುವಾರ ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಮಹಿಳಾ ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿದು ಇತಿಹಾಸ ನಿರ್ಮಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸುವ ಮೂಲಕ ಆರ್‌ಸಿಬಿ ಮಹಿಳಾ ತಂಡ ತನ್ನ ಎರಡನೇ ಆವೃತ್ತಿಯಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ 16 ವರ್ಷಗಳ ಟ್ರೋಫಿ ಬರವನ್ನು ನೀಗಿಸಿದೆ. ಆರ್‌ಸಿಬಿ ಪುರುಷರ ತಂಡಕ್ಕಿಂತ ಮುನ್ನ ಮಹಿಳಾ ತಂಡ ಟ್ರೋಫಿ ಗೆದ್ದಿರುವುದು ವಿಶೇಷವಾಗಿದೆ.

ಮಾರ್ಚ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ‘ಆರ್‌ಸಿಬಿ ಅನ್‌ಬಾಕ್ಸ್’ ಈವೆಂಟ್‌ಗೆ ಚೊಚ್ಚಲ ಟ್ರೋಫಿಯೊಂದಿಗೆ ಆರ್‌ಸಿಬಿ ಮಹಿಳಾ ತಂಡ ತವರಿಗೆ ಮರಳಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಉತ್ತಮ ಆರಂಭದ ಹೊರತಾಗಿಯೂ ಆರ್‌ಸಿಬಿಯ ಕನ್ನಡತಿ ಶ್ರೇಯಾಂಕಾ ಪಾಟೀಲ್ ಹಾಗೂ ಆಶಾ ಶೋಭನಾ ಅವರ ಅಮೋಘ ದಾಳಿಗೆ ಸಿಲುಕಿ 18.3 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಪತನ ಕಂಡಿತು.

ಗೆಲುವಿಗೆ 114 ರನ್‌ಗಳ ಗುರಿ ಪಡೆದ ಆರ್‌ಸಿಬಿ ತಂಡ ಸೋಫಿ ಡಿವೈನ್ ಮತ್ತು ಸ್ಮೃತಿ ಮಂಧಾನ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 19.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.

ಗೆಲುವಿಗೆ ಕೊನೆಯ ಓವರ್‌ನಲ್ಲಿ ಆರ್‌ಸಿಬಿ ತಂಡಕ್ಕೆ 5 ರನ್ ಬೇಕಾಗಿದ್ದಾಗ ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಸುಲಭವಾಗಿ ಸಿಂಗಲ್ ರನ್ ಕದಿಯುವ ಮೂಲಕ ರೋಚಕ ಗೆಲುವು ಸಾಧಿಸಲು ನೆರವಾದರು.

ಆರ್‌ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 49 ರನ್‌ಗಳ ಜೊತೆಯಾಟ ನಿರ್ಮಿಸಿತು. 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 32 ರನ್ ಗಳಿಸಿದ ಸೋಫಿ ಡಿವೈನ್ ಎಲ್‌ಬಿಡಬ್ಲ್ಯು ಆದರು.

ಈ ವೇಳೆ ಸ್ಮೃತಿ ಮಂಧಾನ ಮತ್ತು ಎಲ್ಲಿಸ್ ಪೆರ್ರಿ ಇನ್ನಿಂಗ್ಸ್ ಕಟ್ಟಲು ನಿಧಾನಗತಿ ಆಟಕ್ಕೆ ಮೊರೆ ಹೋದರು. 15 ಓವರ್‌ಗಳಲ್ಲಿ 82 ರನ್ ಗಳಿಸಿದ್ದಾಗ ಸ್ಮೃತಿ ಮಂಧಾನ ಔಟಾದರು. ಅವರು 39 ಎಸೆತಗಳಲ್ಲಿ 3 ಬೌಂಡರಿ ಸಮೇತ 31 ರನ್ ಗಳಿಸಿದರು.

ಕೊನೆಯಲ್ಲಿ ಎಲ್ಲಿಸ್ ಪೆರ್ರಿ 37 ಎಸೆತಗಳಲ್ಲಿ 4 ಬೌಂಡರಿ ಮೂಲಕ ಅಜೇಯ 35 ರನ್ ಗಳಿಸಿದರೆ, ರಿಚಾ ಘೋಷ್ 14 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ ಅಜೇಯ 17 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖಾ ಪಾಂಡೆ ಮತ್ತು ಮಿನ್ನು ಮಣಿ ತಲಾ ಒಂದೊಂದು ವಿಕೆಟ್ ಪಡೆದರು.