Friday, 20th September 2024

ಸಕಲ ಶಾಸ್ತ್ರ ನಿಷ್ಣಾತ ತ್ರಿಕಾಲ ಜ್ಞಾನಿ ಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿ

ಗುರುನಮನ

ನಂ.ಶ್ರೀಕಂಠ ಕುಮಾರ್

ಸ ದಾತ್ಮಧ್ಯಾನನಿರತಂ ಷಯೇಭ್ಯಃ ಪರಾಙ್ಮುಖಮ್
ನೌಮಿ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರ ಭಾರತೀಮ್ ॥

ಶೃಂಗೇರಿ ಶ್ರೀ ಶಾರದಪೀಠದ 34ನೇ ಪೀಠಾಧಿಪತಿಗಳಾಗಿ ಯಾವಾಗಲೂ ಆತ್ಮಧ್ಯಾನದಲ್ಲಿ ನಿರತರೂ, ಲೋಕಿಕ ವಿಷಯಗಳಿಗೆ ವಿಮುಖರೂ, ಸಕಲ ಶಾಸ್ತ್ರಗಳಲ್ಲೂ ನಿಷ್ಣಾತರೂ ಆಗಿದ್ದ ಜಗದ್ಗುರು ಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರು
ಸುಮಾರು 42 ವರ್ಷಗಳ ಕಾಲ ವಿರಾಜಮಾನರಾಗಿ ವೇದಾಂತದ ಗುರಿಯಾದ ಅದ್ವೆೆ ತ ಸಾಕ್ಷಾತ್ಕಾರವನ್ನು ಗಳಿಸಿ, ಪ್ರಜ್ವಲಿಸಿ ಭಕ್ತಾದಿಗಳನ್ನು ಅನುಗ್ರಹಿಸಿದರು.

ಶೃಂಗೇರಿಯ ಶ್ರೀಮಠದ ಆಶ್ರಯದಲ್ಲಿದ್ದ ಶ್ರೀಗೋಪಾಲಶಾಸ್ತ್ರಿಗಳು ಹಾಗೂ ಶ್ರೀಮತಿ ಲಕ್ಷಮ್ಮ ದಂಪತಿಗಳಿಗೆ ಹದಿಮೂರು ಜನ ಮಕ್ಕಳು ಹುಟ್ಟಿದರೂ ಆ ಮಕ್ಕಳೆಲ್ಲರೂ ಕೆಲವೇ ದಿನಗಳಲ್ಲಿ ಮೃತರಾಗುತ್ತಿದ್ದರು. ಇದರಿಂದ ಶಾಸ್ತ್ರಿಗಳಿಗೂ, ಲಕ್ಷಮ್ಮ ನವರಿಗೂ ಬಹಳ ದುಃಖವಾಗಿತ್ತು. ಅವರು ದುಃಖವನ್ನು ಮರೆಯಲು ತೀರ್ಥಯಾತ್ರೆಯನ್ನು ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಪಡೆದು ಕೊಲ್ಲೂರು ಹಾಗೂ ಗೋಕರ್ಣ ಕ್ಷೇತ್ರವನ್ನು ದರ್ಶಿಸಿ ಭಕ್ತಿಯಿಂದ ಮಹಾಬಲೇಶ್ವರ ನನ್ನು ಆರಾಧಿಸಿದರು. ಇವರ ಶ್ರದ್ಧೆ, ನಂಬಿಕೆಗಳಿಗೆ ಕರುಣಾ ಮೂರ್ತಿ ಶ್ರೀ ಮಹಾಬಲೇಶ್ವರನ ಅನುಗ್ರಹವು
ಲಭಿಸಿ, ನಂತರ ದಂಪತಿಗಳಿಗೆ ಪುತ್ರಾನುಗ್ರಹ ಉಂಟಾಗಿ, ನಂದನ ಸಂವತ್ಸರದ ಆಶ್ವಯುಜ ಬಹುಳ ಏಕಾದಶಿ,
ರವಾರ ಮಘಾ ನಕ್ಷತ್ರದಲ್ಲಿ (ದಿನಾಂಕ 16.10.1892) ಸೂರ್ಯೋದಯಾನಂತರ ಶ್ರೀಶಂಕರ ಸ್ವರೂಪಿಯಾದ ಪುತ್ರರತ್ನಕ್ಕೆ ಜನ್ಮವಿತ್ತರು. ಅಂದಿನವರೆಗೆ ಚಿಂತಾಶೋಕಗಳಿಂದ ಕೂಡಿದ್ದ ಆ ಮನೆಯು ಮಗುವಿನ ಜನನದಿಂದ ಸುಖ ಸಂತೋಷಗಳಿಂದ ತುಂಬಿತು. ಮುಂದೆ ಶ್ರೀ ಗೋಪಾಲಕೃಷ್ಣಶಾಸ್ತ್ರಿಗಳು ತಮ್ಮ ಮನೆಯ ದೇವರಾದ ಶ್ರೀನರಸಿಂಹನ ಹೆಸರನ್ನು ನಾಮಕರಣ ಮಾಡಲು ಇಚ್ಛಿಸಿ, ಬಾಲಕನಿಗೆ ನರಸಿಂಹ ಎಂದೇ ನಾಮಕರಣ ಮಾಡಿದರು. ಶ್ರೀ ಶಾಸ್ತ್ರಿಗಳು

ಪ್ರತಿನಿತ್ಯ ಶ್ರೀಶಾರದಾಂಬ ಹಾಗೂ ಗುರುಗಳವರ ದರ್ಶನಕ್ಕೆ ಹೋಗುವಾಗ ತಮ್ಮೊಡನೆ ಬಾಲಕ ನರಸಿಂಹನನ್ನು ಕರೆದುಕೊಂಡು  ಹೋಗುತ್ತಿದ್ದರು. ತಮ್ಮ ದರ್ಶನಕ್ಕಾಗಿ ಬರುವ ಬಾಲಕನ ವೈಶಿಷ್ಟ್ಯವನ್ನು ಶ್ರೀಗುರುಗಳವರು ಕಂಡಿದ್ದರು. ಒಂದು ದಿನವಾದರೂ ಬಾಲಕನನ್ನು ಕಾಣದಿದ್ದರೆ ಇಂದೇಕೆ ನರಸಿಂಹನು ಬರಲಿಲ್ಲ? ಎಂದುಕೊಳ್ಳುವಂತಾಯಿತು. ಶ್ರೀಶಾಸ್ತ್ರಿಗಳು ತಮ್ಮ ಮಗನಿಗೆ ಎಂಟನೇ ವಯಸ್ಸಿನಲ್ಲಿ ಉಪನಯನವನ್ನು ನೆರವೇರಿಸಿದರು. ನಂತರ ಪ್ರತಿನಿತ್ಯ ಶಾಸ್ತ್ರೋಕ್ತವಾದ ರೀತಿಯಲ್ಲಿ ತ್ರಿಕಾಲ ಸಂಧ್ಯಾ ವಂದನೆ, ಅಗ್ನಿಕಾರ್ಯ ಮೊದಲಾದ ನಿತ್ಯ ಕರ್ಮಗಳನ್ನು ವಿಚ್ಛಿತ್ತಿಯಿಲ್ಲದೇ ನಡೆಸುತ್ತಿದ್ದರು. ]

ಹನ್ನೆರಡನೇ ವಯಸ್ಸಿನಲ್ಲಿ ಮಾಧ್ಯಮಿಕ ಶಾಲೆಯ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಬಾಲಕ ನನ್ನು ಅನುಗ್ರಹಿಸಿದ ಶ್ರೀಗುರು ಗಳವರು ಆತನ ಪುರೋಭಿವೃದ್ಧಿ, ಯಶಸ್ವಿಗಾಗಿ ವೈಧಿಕ ವಿದ್ಯೆಯನ್ನು ಕೊಡಿಸುವಂತೆ ಸೂಚಿಸಿದರು. ಶ್ರೀಗುರು ಗಳವರ ಅಪ್ಪಣೆಯಂತೆ ಬಾಲಕನನ್ನು ಶ್ರೀಮಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲೆಗೆ ಸೇರಿಸಿದರು. ಬಾಲಕ ನರಸಿಂಹ ಶಾಸ್ತ್ರಿಗಳು ವೇದ ಮತ್ತು ಸಂಸ್ಕೃತಗಳನ್ನು ಉತ್ಸಾಹದಿಂದ ಹಾಗೂ ಶ್ರದ್ಧೆಯಿಂದ ಅಭ್ಯಸಿಸಿ ಸಂಸ್ಕೃತ ಶಾಸ್ತ್ರದಲ್ಲಿ ಉತ್ತಮ ಪ್ರಾವೀಣ್ಯತೆ ಯನ್ನು ಪಡೆದರು.

ಬಾಲಕ ನರಸಿಂಹಶಾಸ್ತ್ರಿಗಳು ಬಾಲ್ಯದಿಂದಲೂ ಶ್ರೀಗುರುಕೃಪೆಗೆ ಪಾತ್ರರಾದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಶ್ರೀಗುರುಗಳವರು ನರಸಿಂಹಶಾಸ್ತ್ರಿಗಳನ್ನು 1911ರಲ್ಲಿ ಬೆಂಗಳೂರಿನಲ್ಲಿ ಗುರುಗಳೇ ಸ್ಥಾಪಿಸಿದ್ದ ‘ಭಾರತೀಯ ಗೀರ್ವಾಣ ಪ್ರೌಢ ವಿದ್ಯಾಭಿವರ್ಧಿನೀ’
ಪಾಠಶಾಲೆಯಲ್ಲಿ ಅಧ್ಯಯನಕ್ಕೆ ವ್ಯವಸ್ಥೆ ಮಾಡಿದರು. ಪಾಠಶಾಲೆಯಲ್ಲಿ ಮಹಾ ಮಹೋಪಾಧ್ಯಾಯ ವೈದ್ಯನಾಥ ಶಾಸ್ತ್ರಿಗಳವರು ಪೂರ್ವ ಮೀಮಾಂಸೆ ಶಾಸ್ತ್ರಕ್ಕೂ, ಮಹಾ ಮಹೋಪಾಧ್ಯಾಯ ವೆಳ್ಳೂರು ಸುಬ್ರಮಣ್ಯಶಾಸ್ತ್ರಿಗಳು ಉತ್ತರ ಮೀಮಾಂಸೆ ಶಾಸ್ತ್ರಕ್ಕೂ ಪ್ರಾಧ್ಯಾಪಕರಾಗಿ ಬೋಧನೆ ಮಾಡಿದರು.

ಹೆಚ್ಚಿನ ಸಂಚಾರದಿಂದಾಗಿ ಜಗದ್ಗುರುಗಳಾದ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರ ದೇಹಾರೋಗ್ಯವು ತೃಪ್ತಿಕರವಾಗಿರಲಿಲ್ಲ, ಆದಾಗ್ಯೂ ಬಾಲಕ ನರಸಿಂಹಶಾಸ್ತ್ರಿಗಳವರನ್ನು ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲು
ನಿಶ್ಚಯಿಸಿರುವ ವಿಷಯವನ್ನು ಗುರುಭಕ್ತರೂ, ಆಪ್ತತಮರೂ ಅಗಿದ್ದ ಮೈಸೂರು ಮಹಾರಾಜ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್‌ರವರಿಗೆ ಶೃತಪಡಿಸಿ, ಬೆಂಗಳೂರಿನಿಂದ ಶೃಂಗೇರಿಗೆ ಬಾಲಕನನ್ನು ಕರೆದುಕೊಂಡು ಬರಲು ಅಪೇಕ್ಷಿಸಿದರು. ಮಗನ ಸನ್ಯಾಸ ಸ್ವೀಕಾರಕ್ಕೆ ತಾಯಿಯನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ.

ಆಗ ನರಸಿಂಹಶಾಸ್ತ್ರಿಗಳೇ ಮುಂದೆ ಬಂದು ಹಿಂದೆ ಶ್ರೀ ಶಂಕರಭಗವತ್ಪಾದರೂ ಸಹ ತಾವಾಗಿಯೇ ತಮ್ಮ ಮಾತೆಯಲ್ಲಿ ಸನ್ಯಾಸಾಶ್ರಮಕ್ಕೆ ಅಪ್ಪಣೆ ಬೇಡಿರಲಿಲ್ಲವೆ? ಇಂದೂ ಸಹ ತಮ್ಮ ಸನ್ಯಾಸಾಶ್ರಮ ಸ್ವೀಕಾರಕ್ಕೆ ಅಪ್ಪಣೆ ಕೊಡಿರೆಂದು ತಮ್ಮ ತಾಯಿಯವರಲ್ಲಿ ಅತ್ಯಂತ ದೈನ್ಯದಿಂದ ಭಿನ್ನಸಿದರು. ತಾಯಿ ಲಕ್ಷಮ್ಮನವರು ಪುತ್ರನನ್ನು ತ್ಯಾಗ ಮಾಡಿ ಅಪ್ಪಣೆ ಕೊಟ್ಟರು. ನಂತರ ಮಾತಾ ಪಿತೃಗಳಿಗೆ ನಮಸ್ಕರಿಸಿ ಶೃಂಗೇರಿಗೆ ಪ್ರಯಾಣ ಮಾಡಿದರು.

ಅತ್ತ ತ್ವರಿತಗತಿಯಲ್ಲಿ ಪ್ರಯಾಣ ನಡೆಸಿ ಶೃಂಗೇರಿಗೆ ಆಗಮಿಸಿದ ಶ್ರೀನರಸಿಂಹಶಾಸ್ತ್ರಿಗಳವರಿಗೆ ಜಗದ್ಗುರುಗಳು  ಬ್ರಹ್ಮೀಭೂತ ರಾದುದನ್ನು ಕೇಳಿ ಸಿಡಿಲು ಬಡಿದಂತಾಯಿತು. ತಮ್ಮ ಬಾಲ್ಯದಿಂದಲೂ ಅನುಗ್ರಹಿಸಿದವರು ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ
ನೃಸಿಂಹಭಾರತೀ ಮಹಾಸ್ವಾಮಿಗಳವರ ಸ್ಮರಣೆಯಲ್ಲಿಯೇ ಮುಳುಗಿದ್ದರು. ಅವರ ಮನಸ್ಸು ಸಮಾಧಾನ ಸ್ಥಿತಿಗೆ ಬರಲು ಸ್ವಲ್ಪ ಕಾಲ ಬೇಕಾಯಿತು. ಶ್ರೀಗುರುಗಳವರು ಈ ದೇಹ ಮುಕ್ತರಾಗಿದ್ದರಿಂದ ಆರಾಧನಾ ಮೊದಲಾದ ಕಾರ್ಯಕ್ರಮಗಳು ಮುಗಿಯುವವರೆಗೆ ಕಾಯುವುದು ಅನಿವಾರ್ಯವಾಗಿತ್ತು. ಆ ಸಮಯದಲ್ಲಿ ಮೈಸೂರು ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಸ್ವತಃ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿ ಪಟ್ಟಾಭಿಷೇಕದ ಎಲ್ಲಾ ವ್ಯವಸ್ಥೆಗಳನ್ನು ಪೂರೈಸಿದರು.

ಸನ್ಯಾಸಾಂಗವಾದ ಅಷ್ಟಶ್ರಾ ದ್ಧ, ಪುರುಷಸೂಕ್ತ ಹೋಮ, ರಜಾ ಹೋಮ, ಮೊದಲಾದ ಕರ್ಮಕಲಾಪಗಳೆಲ್ಲವೂ ಶಾಸ್ತ್ರೋಕ್ತವಾಗಿ ನೆರವೇರಿಸಿ ಪರೀಧಾ ಸಂವತ್ಸರದ ಚೈತ್ರ ಬಹುಳ ಷಷ್ಠಿ ಗುರುವಾರದಂದು (ದಿನಾಂಕ 07.04.1912)
ಸನ್ಯಾಸಾಶ್ರಮ ಸ್ವೀಕರಿಸಿದ ನಂತರ ಗುರುಗಳ ಅಪ್ಪಣೆಯಂತೆ ಶ್ರೀಚಂದ್ರಶೇಖರ ಭಾರತೀ ಎಂಬ ಯೋಗ ಪಟ್ಟವನ್ನು ನೀಡಲಾಯಿತು. ನಂತರ ದಕ್ಷಿಣಾಮ್ನಾಯ ಶ್ರೀಶಾರದಾಪೀಠದ 34ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷೇಕವು ಜರುಗಿತು.

ಹಿಂದಿನ ಗುರುವರ್ಯರ ಸಂಕಲ್ಪದಂತೆ ಆರಂಭಿಸಲ್ಪಟ್ಟು ಅವರ ಜೀವಿತ ಕಾಲದಲ್ಲಿಯೇ ಬಹುಮಟ್ಟಿಗೆ ನಡೆದಿದ್ದ ಶೃಂಗೇರಿಯ ಶ್ರೀ ಶಾರದಾಂಬ ದೇವಾಲಯದ ಪುನರ್‌ನಿರ್ಮಾಣ ಕಾರ್ಯ ಮುಕ್ತಾಯಗೊಂಡು ಹಾಗೂ ನರಸಿಂಹ ವನದಲ್ಲಿ ಶ್ರೀಸಚ್ಚಿದಾ ನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳವರ ಅಧಿಷ್ಠಾನ ಮಂದಿರವೂ ಸಹ ಪೂರ್ಣಗೊಂಡು ಪ್ರತಿಷ್ಠಾ
ಕಂಭಾಭಿಷೇಕಾದಿಗಳು ದಿನಾಂಕ 01-06-1916ರ ಪ್ರಾತಃಕಾಲದಲ್ಲಿ ನೆರವೇರಿಸ ಲ್ಪಟ್ಟವು. ಆ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ಶ್ರೀಮನ್ಮಹಾರಾಜರಾಗಿದ್ದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್‌ರವರು, ಬರೋಡಾ ಮಹಾರಾಜರೂ, ಕುಟುಂಬ ಪರಿವಾರ ಸಮೇತರಾಗಿ ಉಪಸ್ಥಿತರಿದ್ದರು.

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರು ಪೀಠಾಧಿಪತ್ಯವನ್ನು ವಹಿಸಿಕೊಂಡ ಮೇಲೆ ಸುಮಾರು ಹತ್ತು ವರ್ಷಗಳಷ್ಟು ದೀರ್ಘಕಾಲ ಶೃಂಗೇರಿಯಿಂದ ಹೊರಗೆ ಎಲ್ಲೂ ವಿಜಯ ಯಾತ್ರೆಯನ್ನು ಕೈಗೊಂಡಿರಲಿಲ್ಲ. ಮೈಸೂರಿನ
ಮಹಾರಾಜರಾಗಿದ್ದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಪ್ರಾರ್ಥನಾ ಪತ್ರವನ್ನು ಕಳುಹಿಸಿ ಶ್ರೀಗುರುವರ್ಯರು ಮೈಸೂರಿಗೆ ದಯಮಾಡಿಸಿ ತಮ್ಮನ್ನೂ, ತಮ್ಮ ಪ್ರಜೆಗಳನ್ನೂ ಅನುಗ್ರಹಿಸಬೇಕೆಂದು ಕೇಳಿಕೊಂಡಿದ್ದರು.

ಜಗನ್ಮಾತೆಯಿಂದ ಅನುಜ್ಞೆ ಪಡೆದು ಭಕ್ತಾನುಗ್ರಹಕ್ಕೋಸ್ಕರವಾಗಿಯೂ, ಶಿಷ್ಯರನ್ನು ಸನ್ಮಾರ್ಗ ಪ್ರವರ್ತಕರನ್ನಾಗಿ ಮಾಡುವುದಕ್ಕಾಗಿಯೂ ಶ್ರೀ ಶ್ರೀಗಳವರು ರುಧಿರೋದ್ಗಾಾರ ಸಂವತ್ಸರದ ಪುಷ್ಯ ಶುದ್ಧ ದ್ವಾದಶಿಯಂದು ವಿಜಯ ಯಾತ್ರೆಯನ್ನು ದಿನಾಂಕ 18.01.1924) ಪ್ರಾರಂಭಿಸಿದರು. ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಂತೂ ಜನಸಮೂಹವೇ ನೆರೆದಿತ್ತು. ಶ್ರೀಮನ್ಮಹಾರಾಜ ರವರಿಂದ ಸ್ವತಃ ಸ್ವಾಗತಿಸಲ್ಪಟ್ಟ ಗುರುವರ್ಯರು ರಾಜರ ಭಕ್ತಿಗೂ, ಶ್ರದ್ಧೆಗೂ ಮೆಚ್ಚುಗೆಯನ್ನು ತೋರಿದರು ಹಾಗೂ ಎಲ್ಲರೂ ಗುರುವರ್ಯರವರಿಂದ ಉಪದೇಶವನ್ನು ಪಡೆದರು.

ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರು ಜನ್ಮತಾಳಿ, ತಮ್ಮ ಬಾಲ್ಯವನ್ನು ಕಳೆದಿದ್ದ ಗೃಹವನ್ನು ಶ್ರೀಮಠದವರು ಪಡೆದುಕೊಂಡಿದ್ದ ಆ ಜಾಗದಲ್ಲಿ ಭವ್ಯ ಮಂದಿರವನ್ನು ನಿರ್ಮಿಸಿ ಅಲ್ಲಿ ಜಗದ್ಗುರು ಶ್ರೀಸಚ್ಚಿದಾ ನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರ ಅಮೃತ ಶೀಲಾಮೂರ್ತಿಯನ್ನು ಸ್ಥಾಪಿಸಬೇಕೆಂದು ಗುರುಗಳವರು ಸಂಕಲ್ಪಿಸಿದ್ದರು. ನಂತರ ಶ್ರೀಗುರುಗಳವರ ಅಮೃತ ಹಸ್ತದಿಂದಲೇ ಮಹಾಮಹಿಮರೂ, ಮಹಾಜ್ಞಾನಿಗಳಾಗಿದ್ದ ಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳವರ ದಿವ್ಯ ಸ್ಮತಿ ಮಂದಿರದ ಆರಂಭೋತ್ಸವವು, ಅದರಲ್ಲಿ
ಶ್ರೀಗುರುಗಳವರ ಮೂರ್ತಿ ಸ್ಥಾಪನೆಯೂ ನೆರವೇರಿಸಲ್ಪಟ್ಟಿತು. ಆ ಮಂದಿರಕ್ಕೆ ಶ್ರೀಶ್ರೀ ಗಳವರು ಅಭಿನವ ಶಂಕರಾಲಯವೆಂದು ನಾಮಕರಣ ಮಾಡಿದರು. ಅಲ್ಲಿ ವೇದ – ವೇದಾಂತಗಳ ಪಾಠ ಪ್ರವಚನಗಳಿಗೂ ಸಹ ಏರ್ಪಾಟಾಯಿತು. ಈ ಮಂದಿರದ ಆರಂಭೋತ್ಸವಕ್ಕೆ ಶ್ರೀಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರೂ, ಕುಟುಂಬದವರೂ, ಅಧಿಕಾರಿ
ಗಳೂ, ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರೂ ಆಗಮಿಸಿದ್ದರು. ತಪಶ್ಚಕ್ರವರ್ತಿಗಳನ್ನೂ, ರಾಜರ್ಷಿಗಳನ್ನೂ ಒಟ್ಟಿಗೇ ದರ್ಶನ ಮಾಡಿ ಜನರು ಸಂತೋಷದಿಂದಲೂ, ಭಕ್ತಿಯಿಂದಲೂ ಪುಲಕಿತರಾದರು. ನಂತರ ಶ್ರೀಗಳವರು ವಿಜಯ ಯಾತ್ರೆಯನ್ನು ತಮಿಳುನಾಡಿಗೆ
ಮುಂದುವರಿಸಿದರು.

ವಿಜಯಯಾತ್ರೆಯ ಕಾಲದಲ್ಲಿ ಶ್ರೀಗುರು ವರ್ಯರು ಅನೇಕ ಮಹಿಮೆಗಳನ್ನು ತೋರಿದ್ದರು. ಶ್ರೀಗುರುಗಳು ತಮಿಳುನಾಡಿನ ದೇವಕೋಟೈಗೆ ದಯಮಾಡಿಸಿದಾಗ ಅಲ್ಲಿ ಬಹಳ ಕಾಲ ಮಳೆಯಾಗದೆ ಬೇಸಿಗೆಯ ಬರದಿಂದ ಜನ ತೀವ್ರವಾಗಿ ತುಂಬಾ ಕಷ್ಟಪಡುತ್ತಿದ್ದರು. ಗುರುಗಳಿಗೆ ಜನರ ಕಷ್ಟದ ಅರಿವಾಯಿತು. ಕೂಡಲೇ ಶ್ರೀ ಮಠದ ಪಂಡಿತರಿಂದ ಶ್ರೀಮನ್ಮಮಹಾಭಾರತ ವಿರಾಠಪರ್ವದ ಪಾರಾಯಣಕ್ಕೆ ಏರ್ಪಾಡು ಮಾಡಿದರು. ತಾವೇ ಸ್ವತಃ ಭಗವಾನ್ ವೇದವ್ಯಾಸರು ರಚಿಸಿದ ವಿರಾಠ
ಪರ್ವದ ವರುಣ ಮಂತ್ರದ ಬೀಜಾಕ್ಷರಗಳನ್ನು ಜಪಿಸಲಾರಂಭಿಸಿದರು. ಅದೇ ದಿನ ಮಧ್ಯಾಹ್ನ ಆಕಾಶದಲ್ಲಿ ಕಾರ್ಮೋಡಗಳು ಕಾಣಿಸಿಕೊಂಡು ಸ್ವಲ್ಪ ಸಮಯದಲ್ಲೇ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಹೀಗೆ ಕುಂಭದ್ರೋಣ ಮಳೆ ಸುರಿದು
ಕೆರೆಗಳೆಲ್ಲಾ ತುಂಬಿದವು. ಆಗ ಜನರು ಮಳೆ ಸಾಕು, ಸಾಕು ಎನ್ನುತ್ತಾ ಗುರುಗಳ ಬಳಿಗೆ ಓಡಿ ಬಂದರು. ಆಗ ಶ್ರೀಗಳವರು ವಿರಾಟಪರ್ವದ ಪಾರಾಯಣವನ್ನು ನಿಲ್ಲಿಸಿ, ಕರ್ಪೂರದ ಆರತಿ ಮಾಡಿ ಮಳೆಯನ್ನು ನಿಲ್ಲಿಸಿದರು. ಜನರು ಸಂತೋಷ ಹಾಗೂ ಭಕ್ತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಿದರು.

ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ಸಂಚರಿಸಿ ಭಕ್ತರನ್ನು ಅನುಗ್ರಹಿಸಿ ವಾಪಸ್ ನಂಜನ ಗೂಡಿಗೆ ಆಗಮಿಸಿದರು. ಅಲ್ಲಿ ಶ್ರೀ ಶ್ರೀ ಕಂಠೇಶ್ವರ ಸ್ವಾಮಿ ದೇವರನ್ನು ವಿಶೇಷವಾಗಿ ಪೂಜಿಸಿದರು (1927). ಆ ವರ್ಷದ ಚಾರ್ತುರ್ಮಾಸ್ಯವನ್ನು ಪುಣ್ಯ ಕ್ಷೇತ್ರವಾದ ನಂಜನಗೂಡಿನಲ್ಲೇ ನೆರವೇರಿಸಿ ದರು. ನಂಜನಗೂಡಿನಲ್ಲಿ ಶ್ರೀಶಂಕರಭಗವತ್ಪಾದರ ಶ್ರೀಮಠವನ್ನು ಸ್ಥಾಪಿಸಿ,
ಶ್ರೀಆದಿಶಂಕರಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವೇದಪಾಠಶಾಲೆಯನ್ನು ಪ್ರಾರಂಭಿಸಿದರು. ನಂತರ ಶೃಂಗೇರಿಗೆ ಪ್ರವಾಸ ಗೈದರು. ವಿಜಯ ಯಾತ್ರೆ ಅವಧಿಯಲ್ಲಿ ಶ್ರೀಗುರುಗಳ ವರು ಅನೇಕ ಭಕ್ತ ಜನರನ್ನು ಅನುಗ್ರಹಿಸಿ ಧರ್ಮ ಶ್ರದ್ಧೆಯನ್ನು ಮಾಡಿಸಿ, ಧಾರ್ಮಿಕರನ್ನಾಗಿಸಿದರು. ಶ್ರೀಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರು ಭೂತ – ಭವಿಷ್ಯತ್ – ವರ್ತಮಾನಗಳೆಲ್ಲವನ್ನೂ ಬಲ್ಲಂಥ ಮಹಾಜ್ಞಾನಿಗಳಾಗಿದ್ದರು.

ಗುರುಗಳ ಎದುರಿಗೆ ಯಾರೇ ಬಂದು ನಿಂತರೂ ಕೂಡಲೇ ಆತನ ವ್ಯಕ್ತಿತ್ವ ಗುರುಗಳವರಿಗೆ ಸಂಪೂರ್ಣವಾಗಿ ತಿಳಿಯುತ್ತಿತ್ತು. 1951ರಲ್ಲಿ ನೇಪಾಳದ ತ್ರಿಭುವನ ಮಹಾರಾಜರಿಗೆ ಬಹಳ ದೊಡ್ಡ ವಿಪತ್ತೇ ಸಂಭವಿಸಿತ್ತು.

ಅವರು ನೇಪಾಳದಿಂದ ತಲೆಮರೆಸಿಕೊಂಡು ಮೂರು ವಾರಗಳ ಕಾಲ ಭಾರತದಲ್ಲಿ ಇರಬೇಕಾಯಿತು. ಈ ವಿಷಯವನ್ನು ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಶ್ರೀಗಳವರು ಅವರಿಗೆ ಪರಮಾನುಗ್ರಹ ನೀಡಿ ಅತೀ ಕ್ಷಿಪ್ರದಲ್ಲೇ ರಾಜ್ಯವು ನಿಮ್ಮ ಕೈಗೆ ಸಿಗುವುದು. ಆ
ರೀತಿಯಾದ ಅನುಗ್ರಹವನ್ನು ಶ್ರೀಶಾರದಾ ಚಂದ್ರಮೌಳೇಶ್ವರರು ಮತ್ತು ಶ್ರೀಪಶುಪತಿನಾಥನು ನೀಡುತ್ತಾರೆ ಎಂದು ಶೃಂಗೇರಿಯಿಂದ ಶ್ರೀಮುಖವನ್ನು ಕಳುಹಿಸಿ ಕೊಟ್ಟಿದ್ದರು. ಅದರಂತೆಯೇ ಕೆಲವೇ ದಿನಗಳಲ್ಲಿ ತ್ರಿಭುವನ ಮಹಾರಾಜರಿಗೆ ಮತ್ತೆ ನೇಪಾಳ ರಾಜ್ಯವು ಸಿಕ್ಕಿತು. ಸ್ವತಂತ್ರ್ಯ ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್‌ರವರು ಜಗದ್ಗುರುಗಳವರ
ಮಹಿಮೆಯನ್ನು ಕೇಳಿ ಶ್ರೀಗಳವರ ದರ್ಶನ ಮಾಡುವ ಸಲುವಾಗಿ ದಿನಾಂಕ 24.08. 1954ರಂದು ಶೃಂಗೇರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಜಗದ್ಗುರು ಶ್ರೀಚಂದ್ರಶೇಖರಭಾರತೀ ಮಹಾಸ್ವಾಮಿಗಳವರು ಮತ್ತು ಅವರ ಉತ್ತರಾಧಿಕಾರಿಗಳಾದ ಜಗದ್ಗುರು
ಶ್ರೀಅಭಿನವ ವಿದ್ಯಾತೀರ್ಥ ಸ್ವಾಮಿಗಳವರ ದರ್ಶನವನ್ನು ಮಾಡಿ ಉಭಯ ಶ್ರೀಗಳವರಿಂದ ಆಶೀರ್ವಾದ ಪಡೆದರು.

ಶ್ರೀಜಯಸಂವತ್ಸರದ ಭಾದ್ರಪದ ಬಹುಳ ಮಹಾಲಯ ಅಮವಾಸ್ಯೆಯಂದು (1954) ಬ್ರಾಹ್ಮೀ ಮುಹೂರ್ತದ ಮುನ್ನವೇ ಶ್ರೀಗುರುವರ್ಯರು ಸ್ನಾನಕ್ಕಾಗಿ ತುಂಗಾ ನದಿಯತ್ತ ಹೊರಟರು. ಆಗ ಮಳೆಗಾಲವಾಗಿದ್ದು ತುಂಗೆಯು ತುಂಬಿ ಹರಿಯುತ್ತಿತ್ತು.
ಶ್ರೀ ಗುರುಗಳವರು ಸಂಧ್ಯಾಮಂಟಪದಲ್ಲಿ ಬಂದು ನಿಂತರು. ಹಿಂದೆಯೇ ಪರಿಚಾರಕರು ಓಡಿಬಂದರು. ತುಂಬಿ ಹರಿಯುತ್ತಿದ್ದ ಪ್ರವಾಹ ವನ್ನೊಮ್ಮೆ ತುಂಬಿದ ಭಾವನೆಗಳಿಂದ ನೋಡಿದ ಶ್ರೀಗಳ ವರು ನೀರಿನಲ್ಲಿಳಿದು ಸ್ನಾನಕ್ಕಾಗಿ ಸಂಕಲ್ಪ ಮಾಡಿ ಪೂರ್ವಾಭಿಮುಖರಾಗಿ ನಿಂತು ಪ್ರಾಣಯಾಮ ಮಾಡಿ, ಬ್ರಹ್ಮರಂಧ್ರದ ಮೂಲಕ ತಮ್ಮ ಪ್ರಾಣವನ್ನು ಹೊರ ಹೊರಡಿಸಿದರು. ಆ ಚೇತನವು ವಿಶ್ವವ್ಯಾಪಕವಾದ ಮಹಾಚೇತನದಲ್ಲಿ ಸೇರಿ ಪಂಚಭೂತಾತ್ಮಕವಾದ ದೇಹವು ತುಂಗೆಯಲ್ಲುರುಳಿತು.

ಪ್ರವಾಹದಲ್ಲಿ ತೇಲಿ ಹೋಗುತ್ತಿದ್ದ ಗುರುಗಳವರ ಶರೀರವನ್ನು ಶಿಷ್ಯರು ದಡಕ್ಕೆ ತಂದರು. ನಂತರ ಶ್ರೀಮಠದ ಸಂಪ್ರದಾ ಯಾನುಸಾರ ಶ್ರೀಗಳವರ ದೇಹಕ್ಕೆ ವಿಧಿವತ್ತಾಗಿ ಸಂಸ್ಕಾರಗಳನ್ನು ನಡೆಸಲಾಯಿತು. ಶ್ರೀಗಳವರು ಆದಿಗುರು ಪೂಜ್ಯ ಶ್ರೀಶಂಕರ ಭಗವತ್ಪಾದರು ಸ್ಥಾಪಿಸಿದ್ದ ಆಧ್ಯಾತ್ಮ ಪೀಠವನ್ನಲಂಕರಿಸಿದ ಜೀವನ್ಮುಕ್ತರು.