ಮಕ್ಕಳ ಭವಿಷ್ಯಕ್ಕಾಗಿ ಸತೀಶ್ ಜಾರಕಿಹೊಳಿ ಮುಳ್ಳಿನ ನಡಿಗೆ
ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯಿತಾ ಕಾಂಗ್ರೆಸ್?
ವಿನಾಯಕ ಮಠಪತಿ
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ತನ್ನದೇ ಇತಿಹಾಸ ಹೊಂದಿರುವ ಬೆಳಗಾವಿ ಜಿಲ್ಲಾ ರಾಜಕಾರಣದ ಸದ್ಯ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ಇದು ಅನುಕಂಪದ ಚುನಾವಣೆಯಾ, ಇಲ್ಲ ಕುಟುಂಬ ಪ್ರತಿಷ್ಠೆಯಾ ಎಂಬ ಪ್ರಶ್ನೆ ಎಲ್ಲೆಡೆ ಮೂಡಿರುವುದಂತು ಸುಳ್ಳಲ್ಲ.
2023ಕ್ಕೆ ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಸತೀಶ್ ಜಾರಕಿಹೊಳಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿರುವುದನ್ನು ನೋಡಿದರೆ, ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಮುಳ್ಳಿನ ನಡಿಗೆ ಪ್ರಾರಂಭಿಸಿದರಾ ಎಂಬ ಮಾತು ಸದ್ಯ ಕೇಳಿಬರುತ್ತಿದೆ.
ಹೊಂದಾಣಿಕೆ ರಾಜಕಾರಣಕ್ಕೆ ಬೆಳಗಾವಿ ಮೊದಲಿನಿಂದಲೂ ಹೆಸರುವಾಸಿ. ಸ್ವ ಪ್ರತಿಷ್ಠೆಯೇ ಮುಖ್ಯ ಎಂಬುದನ್ನು ಇಲ್ಲಿನ ಎಲ್ಲಾ ರಾಜಕೀಯ ಮುಖಂಡರು ಆಗಾಗ್ಗೆ ಪ್ರದರ್ಶನ ಮಾಡಿರುವುದುಂಟು.
ಸ್ಥಳೀಯ ಸಂಸ್ಥೆ ಚುನಾವಣೆ ಆಗಿರಲಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಚುನಾವಣೆಯಾಗಲಿ ಇಲ್ಲಿನ ನಾಯಕರು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿ ಮಾರ್ಪಾಡು ಮಾಡಿಕೊಳ್ಳುತ್ತಾರೆ. ಸದ್ಯ ಸತೀಶ್ ಜಾರಕಿಹೊಳಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದು, ಇನ್ನುಳಿದ ಸಹೋದರರು ಅವರ ಪರವಾಗಿ ಕೆಲಸ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು. ಈ ಹಿಂದೆಯೂ ಅನೇಕ ಚುನಾವಣೆಗಳಲ್ಲಿ ಹೊಂದಾಣಿಕೆ ರಾಜಕೀಯ ನಡೆದಿತ್ತು. ಈ ಸಂದರ್ಭದಲ್ಲಿ ಕೂಡಾ ಮುಂದುವರಿಯುವ ಲಕ್ಷಣ ಕಂಡು ಬರುತ್ತಿದೆ.
ಕಮಲಕ್ಕೆ ಅನುಕಂಪ; ಕೈಗೆ ಪ್ರತಿಷ್ಠೆ: ಉಪ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಅಳೆದು ತೂಗಿ ತಮ್ಮ ಅಭ್ಯರ್ಥಿಗಳ ಆಯ್ಕೆ ಮಾಡಿದ್ದಾರೆ. ಯಾವಾಗ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ ಎಂಬುದು ಪಕ್ಕಾ ಆಯ್ತು, ಆ ಸಂದರ್ಭದಲ್ಲಿ ಬಿಜೆಪಿ, ಅಭ್ಯರ್ಥಿ ಆಯ್ಕೆಯಲ್ಲಿ ಗಂಭೀರ ಚಿಂತನೆ ನಡೆಸಿತು. ಅನುಕಂಪದ ಆಧಾರದ ಮೇಲೆ ಮತ
ಪಡೆಯುವ ನಿಟ್ಟಿನಲ್ಲಿ ದಿ.ಸುರೇಶ್ ಅಂಗಡಿಯವರ ಪತ್ನಿ ಮಂಗಲಾ ಅಂಗಡಿಗೆ ಟಿಕೆಟ್ ಘೋಷಣೆ ಮಾಡಿದೆ.
ಆದರೆ, ಅನಿರೀಕ್ಷಿತ ತಿರುವುಗಳ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸತೀಶ್ ಜಾರಕಿಹೊಳಿ ಅವರಿಗೆ ಸದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ಹಿಡಿತ ಹೊಂದಿರುವ ಜಾರಕಿಹೊಳಿ ಸಹೋದರರು ಈಗ ಸತೀಶ್ ಜಾರಕಿಹೊಳಿ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಯಾವ ತಂತ್ರ ಹೆಣೆಯುತ್ತಾರೆ ಎಂಬುದನ್ನು ಕಾದು ನೋಡಬೇಕು.
ಸತೀಶ್ ದೆಹಲಿಗೆ, ಮಗಳು ಯಮಕನಮರಡಿ ಕ್ಷೇತ್ರಕ್ಕೆೆ: ಈಗಾಗಲೇ ತಮ್ಮ ಮಗಳಾದ ಪ್ರಿಯಂಕಾ ಹಾಗೂ ರಾಹುಲ್ ಅವರನ್ನು ರಾಜಕೀಯಕ್ಕೆೆ ತರುವ ನಿಟ್ಟಿನಲ್ಲಿ ತರಬೇತಿ ನೀಡುತ್ತಿರುವ ಸತೀಶ್ ಜಾರಕಿಹೊಳಿ, ಒಂದು ವೇಳೆ ತಾವು ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದು ದೆಹಲಿಗೆ ಹೋದರೆ, ತಾವು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರಕ್ಕೆ ಮಗಳು ಪ್ರಿಯಂಕಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಚಿಂತನೆ ನಡೆಸಿದ್ದಾರೆ. ಇದೆ ಕಾರಣಕ್ಕಾಗಿ ಸತೀಶ್ ಜಾರಕಿಹೊಳಿ ಲೋಕಸಭೆ ಸ್ಪರ್ಧೆಗೆ
ನಿರ್ಧಾರ ಮಾಡಿದ್ದಾರೆ. ಹಾಗೆಯೇ ಮಕ್ಕಳ ಭವಿಷ್ಯಕ್ಕಾಗಿ ಮುಳ್ಳಿನ ನಡಿಗೆ ಪ್ರಾರಂಭಿಸಿದರಾ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು.
ಕರಿ ದಿನವೆ ನಾಮಪತ್ರ ಸಲ್ಲಿಕೆ, ಮೂಢನಂಬಿಕೆಗೆ ಮತ್ತೆ ಸೆಡ್ಡು: ಮೊದಲಿನಿಂದಲೂ ಮೂಢನಂಬಿಕೆಗಳಿಗೆ ಸೆಡ್ಡು
ಹೊಡೆಯುತ್ತಿರುವ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ಕರಿ ದಿನದಂದು ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸು ತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹೋಳಿ ಹುಣ್ಣಿಮೆ ನಂತರದ ದಿನವನ್ನು ಕರಿ ಎಂದು ಕರೆಯುತ್ತಾರೆ. ಆ ದಿನ ಜನರು ಯಾವುದೇ ಹೊಸ ಕೆಲಸ ಮಾಡುವುದಿಲ್ಲ. ಆದರೆ, ಸತೀಶ್ ಜಾರಕಿಹೊಳಿ ಅದೇ ದಿನ ನಾಮಪತ್ರ ಸಲ್ಲಿಸುತ್ತಿದ್ದಾರೆ.
ದೆಹಲಿಗೆ ಕಳುಹಿಸುವ ಲೆಕ್ಕಾಚಾರ
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬರುತ್ತಿತ್ತು. ಅದೇ ದೃಷ್ಟಿಯಿಂದ ಸತೀಶ್ ಜಾರಕಿಹೊಳಿ ಮಾನವ ಬಂಧುತ್ವ ವೇದಿಕೆ ಕಟ್ಟಿಕೊಂಡು ತಮ್ಮದೇ ಒಂದು ವರ್ಗವನ್ನು ಸೃಷ್ಟಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಅವರನ್ನು ದೆಹಲಿಗೆ ಕಳುಹಿಸುವ ಲೆಕ್ಕಾಚಾರ ಮಾಡಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಒಂದು ಕಡೆ ಸತೀಶ್ ಜಾರಕಿಹೊಳಿ ಗೆದ್ದರೆ, ಕಾಂಗ್ರೆಸ್ ನಿಂದ ಒಬ್ಬ ಅಭ್ಯರ್ಥಿಯನ್ನು ದೆಹಲಿಗೆ ಕಳುಹಿಸಿದಂತಾಗುತ್ತಾದೆ. ಜತೆಗೆ ಮುಖ್ಯಮಂತ್ರಿ ರೇಸ್‌ನಿಂದ ದೂರ ತಳ್ಳಿದಂತಾಗುತ್ತದೆ ಎಂದು ಕಾಂಗ್ರೆಸ್ ಲೆಕ್ಕಾಚಾರ ಮಾಡಿದೆ. ಆದರೆ, ಈ ಕುರಿತು ಸತೀಶ್
ಪ್ರತ್ಯುತ್ತರ ನೀಡಿದ್ದು, ಒಂದು ವೇಳೆ ನಮ್ಮನ್ನು ತುಳಿಯುವ ಪ್ರಯತ್ನ ಮಾಡಿದರೆ ನಾನು ಸುಮ್ಮನಿರಲ್ಲ, ನೆಗೆಯುವ ಪ್ರಯತ್ನ ಮಾಡುತ್ತೇನೆ ಎಂದು ತಮ್ಮ ಕಾರ್ಯಕರ್ತರಿಗೆ ಆಶ್ವಾಸನೆ ನೀಡಿದ್ದಾರೆ.
***
ಲೋಕಸಭೆ ಚುನಾವಣೆ ಗೆಲ್ಲುವುದೇ ನಮ್ಮ ಮುಂದಿರುವ ಗುರಿ. ನಂತರ ಯಮಕನಮರಡಿ ಕ್ಷೇತ್ರದಿಂದ ಮಕ್ಕಳು ಚುನಾವಣೆಗೆ
ನಿಲ್ಲುತ್ತಾರೆ ಎಂಬುದರ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಲೋಕಸಭೆಗೆ ಸ್ಪರ್ಧೆ ಮಾಡಲು ಹೈಕಮಾಂಡ್ ಒಂದು ಅವಕಾಶ ಕಲ್ಪಿಸಿದ್ದು, ಇದನ್ನು ಉಪಯುಕ್ತವಾಗಿ ಬಳಸಿಕೊಳ್ಳುವೆ.
– ಸತೀಶ್ ಜಾರಕಿಹೊಳಿ ಲೋಕಸಭೆ ಅಭ್ಯರ್ಥಿ