ಬೇಟೆ
ಜಯವೀರ ವಿಕ್ರಮ್ ಸಂಪತ್ ಗೌಡ
ರಾಜರಾಜೇಶ್ವರಿನಗರ ವಿಧಾನ ಸಭಾ ಮರುಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಬಂದ ಮುನಿರತ್ನಗೆ ಬಿಜೆಪಿ ಟಿಕೆಟ್ ಘೋಷಿಸಿದ ಹೈಕಮಾಂಡ್ ನಾಯಕರನ್ನು ನೋಡಿದಾಗ, ಕಣ್ಣೀರು ಮತ್ತು ಸಿಂಬಳ ಸುರಿಸುತ್ತಾ ನಿಂತ ತಬ್ಬಲಿ ಹುಡುಗನ ಚಿತ್ರ ಒಂದು ಕ್ಷಣ ಕಣ್ಮುಂದೆ ಹಾಡು ಹೋಯಿತು. ಇಷ್ಟೆ ನಾಟಕ ಮಾಡುವ ಅಗತ್ಯವಿತ್ತಾ? ಇದು ಒಂಥರಾ ಕೋಲು ಕೊಟ್ಟು ಹೊಡೆಸಿಕೊಂಡಂತಾ ಗಿದೆ.
ಬಿಜೆಪಿ ನಾಯಕರ ಸಾಚಾತನ ಬಯಲಾಗಿದೆ. ಇಂದು ಸುಪ್ರೀಂ ಕೋರ್ಟ್, ನಕಲಿ ಮತದಾರರ ಪಟ್ಟಿ ಪ್ರಕರಣವೂ ಸೇರಿದಂತೆ,
ಮರುಚುನಾವಣೆಗೆ ದಾರಿ ಸುಗಮಗೊಳಿಸದಿದ್ದರೆ, ಮುನಿರತ್ನಗೆ ಮಾವಿನ ಗೊರಟೆಯೇ ಗತಿಯಾಗಿತ್ತು. ತಾಯಿ ರಾಜರಾಜೇಶ್ವರಿ ಮುನಿರತ್ನ ಅವರನ್ನು ಕಾಪಾಡಿದ್ದಾಳೆ! ಇಲ್ಲದಿದ್ದರೆ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದೇ ಅವರ ರಾಜಕೀಯ ಜೀವನದ ಮೇಲೆ ಚಪ್ಪಡಿ ಕಲ್ಲು ಎಳೆದುಬಿಡುತ್ತಿತ್ತು!
ಯಡಿಯೂರಪ್ಪನವರ ಈಗಿನ ಸರಕಾರ ಅಸ್ತಿತ್ವಕ್ಕೆ ಬರುವಲ್ಲಿ, ಎರಡು ಬಾರಿಗೆ ಕಾಂಗ್ರೆಸ್ಸಿನಿಂದ ಶಾಸಕರಾದ ಮುನಿರತ್ನ ಅವರ ಪರಿಶ್ರಮವೂ ಇದೆ. ಅವರು ಕಾಂಗ್ರೆಸ್ಸಿಗೆ ಎರಡು ಬಗೆದಿರಬಹುದು, ಆದರೆ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದರಿಂದ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರಲು ಸಹಾಯಕವಾಯಿತು. ಬೆಂಗಳೂರಿನ ಮತ್ತಿಬ್ಬರು ಶಾಸಕರಾದ ಭೈರತಿ ಬಸವರಾಜ್, ಸೋಮಶೇಖರ್ ಜತೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಮುನಿರತ್ನ, ಕುಮಾರ ಸ್ವಾಮಿ ಸರಕಾರ ಪತನವಾಗಲು ಮುಂಚೂಣಿ ಪಾತ್ರ ವಹಿಸಿದ್ದರು. ಇವರನ್ನೆ ಪಕ್ಷಕ್ಕೆ ಕರೆ ತರುವಾಗ, ಬಿಜೆಪಿ ನಾಯಕರು ಬಣ್ಣ ಬಣ್ಣದ ಆಮಿಷವೊಡ್ಡಿದ್ದರು.
ನಿಮಗೇ ಟಿಕೆಟ್ ಕೊಟ್ಟು ಆರಿಸಿ ತಂದು, ಮಂತ್ರಿ ಮಾಡುತ್ತೇವೆ ಎಂದು ಎಲ್ಲ ಹದಿನೇಳು ಮಂದಿಗೆ ಹೇಳಿದ್ದರಿಂದ ಅವರೆಲ್ಲ ಬಿಜೆಪಿಗೆ ಬರುವ ಬಹು ದೊಡ್ಡ ರಿಸ್ಕ್ ತೆಗೆದುಕೊಂಡರು. ಅವರು ಬಂದಿದ್ದು, ಇವರು ಕರೆದಿದ್ದು ಸರಿಯಾ ಎಂಬುದು ಬೇರೆ ಪ್ರಶ್ನೆ.
ಮುನಿರತ್ನ ಬಿಜೆಪಿಗೆ ಬರಲು ಬೇರೊಂದು ಕಾರಣವಿತ್ತು. ಅವರು ನಕಲಿ ಮತದಾರರ ಗುರುತುಪತ್ರ ಮಾಡಿಸಿ ಚುನಾವಣಾ ಅಕ್ರಮವೆಸಗಿ ಆರಿಸಿ ಬಂದಿದ್ದಾರೆಂದು ಅವರ ವಿರುದ್ಧ ಸೋತ ಬಿಜೆಪಿಯ ತುಳಸಿ ಮುನಿರಾಜ ಗೌಡ ಕೋರ್ಟಿಗೆ ಹೋಗಿದ್ದರು.
ತಾವು ಬಿಜೆಪಿ ಸೇರಿದರೆ, ತುಳಸಿ ಅವರ ಮೇಲೆ ಪ್ರಭಾವ ಬೀರಿ ಕೇಸನ್ನು ವಾಪಸ್ ಪಡೆಯಬಹುದು ಎಂದು ಮುನಿರತ್ನ ಯೋಚಿಸಿ ದ್ದರು. ಆದರೆ ಅವರ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಕೇಸನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಯಡಿಯೂರಪ್ಪ
ಆದಿಯಾಗಿ ಅನೇಕರು ಹೇಳಿದರೂ ಮುನಿರಾಜು ಗೌಡ ‘ತುಳಸಿ ನೀರು’ ಬಿಟ್ಟುಬಿಟ್ಟರು ! ಆಗಲೇ ಮುನಿರತ್ನಗೆ ತಾನು ಬಿಜೆಪಿ ಸೇರಿ ಕಾಲ ಮೇಲೆ ಕಲ್ಲು ಎತ್ತಾಕಿಕೊಂಡೆ ಎಂಬುದು ಮನವರಿಕೆಯಾಗಿ ಹೋಯಿತು.
ಒಂದೊಂದೇ ಜಣುಕುಗಳನ್ನು ಯಶಸ್ವಿಯಾಗಿ ಬಿಡಿಸಿಕೊಂಡು ಬಂದ ಮುನಿರತ್ನ, ಮರುಚುನಾವಣೆ ಘೋಷಣೆಯಾಗುವ ತನಕ ಎ ಅವಮಾನಗಳನ್ನು ಸಹಿಸಿಕೊಂಡು ಬಂದರು. ಈ ಮಧ್ಯೆ ಅವರ ಜತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ಬಂದ ಸ್ನೇಹಿತರೆಲ್ಲ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸಚಿವರಾಗಿ ಮೆರೆಯುತ್ತಿದ್ದರು. ಮುನಿರತ್ನ ಮಾತ್ರ ಹದಿನೇಳು ತಿಂಗಳು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು, ‘ಅಂಬೋ’ ಎನ್ನುತ್ತಾ ಸುಮ್ಮನಿದ್ದರು. ಮರು ಚುನಾವಣಾ ಘೋಷಣೆಯಾದರೆ ಸಾಕು, ಹೇಗೋ ಗೆದ್ದು ಬಂದು ಮಂತ್ರಿಯಾಗಬಹುದು ಎಂಬ ಮಹದಾಸೆ ಇಟ್ಟುಕೊಂಡು ದಿನ ದೂಡುತ್ತಿದ್ದರು.
ಸರಿ, ಮರುಚುನಾವಣೆ ಘೋಷಣೆಯಾಯಿತು. ನಿರೀಕ್ಷೆಯಂತೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮುನಿರತ್ನ ಅವರಿಗೆ ಅಂದೇ ಘೋಷಣೆಯಾಗಬೇಕಿತ್ತು. ಯಾಕೆಂದರೆ ಅಲ್ಲಿ ಚೌಕಾಶಿಗೆ ಆಸ್ಪದ ಇರಲಿಲ್ಲ. ರಾಜ್ಯ ಬಿಜೆಪಿ, ಹೈಕಮಾಂಡಿಗೆ ಕಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ನ್ಯಾಯಯುತವಾಗಿ ಮತ್ತು ವ್ಯಾವಹಾರಿಕವಾಗಿ ಮುನಿರತ್ನ ಅವರದ್ದೊಂದೇ
ಹೆಸರಿರಬೇಕಿತ್ತು. ಆದರೆ ಮುನಿರತ್ನ ಹೆಸರಿನ ಜತೆಗೆ, ಅವರ ವಿರುದ್ಧ ಸೋತ ತುಳಸಿ ಮುನಿರಾಜ ಗೌಡ ಹೆಸರು ಸೇರಿಸಿ ಕಳಿಸಿದಾಗ, ಕತ್ತೆ ಬಾಲಕ್ಕೆ ಡಬ್ಬಾ ಕಟ್ಟಿ ಅದರೊಳಗೆ ಸರಪಟಾಕಿ ಇಟ್ಟು ಬೆಂಕಿಯಿಟ್ಟಿzರೆ ಎಂಬುದು ಗೊತ್ತಾಗಿ ಹೋಯಿತು.
ಒಂದು ಹಂತದಲ್ಲಿ ಮುನಿರತ್ನಗೆ ಟಿಕೆಟ್ ಸಿಗುವುದಿಲ್ಲ ಎಂಬ ಸಂದೇಹ ಬಲವಾಯಿತು. ಬಿಜೆಪಿಯ ಖತರನಾಕ್ ಆಟ ಏನೆಂಬು ದು ಮುನಿರತ್ನಗೆ ಗೊತ್ತಾಗಿ ಹೋಯಿತು. ಒಂದು ವೇಳೆ ತಮಗೆ ಬಿಜೆಪಿ ಟಿಕೆಟ್ ನಿರಾಕರಿಸಿದರೆ, ಮುಂದೇನು ಮಾಡಬೇಕು ಎಂದು ಮುನಿರತ್ನ ಯೋಚಿಸಲಾರಂಭಿಸಿದರು. ಅಂಥ ಪ್ರಸಂಗ ಬಂದರೆ, ಜೆಡಿಎಸ್‌ಗೆ ಹೋಗಲು ಸಿದ್ಧತೆ ಮಾಡಿ ಕೊಂಡರು. ಕಾಂಗ್ರೆಸ್ ಆಗಲೇ ತನ್ನ ಅಭ್ಯರ್ಥಿ ಹೆಸರು ಘೋಷಿಸಿದ್ದರೂ, ವಾಪಸ್ ಬರುವುದಾದರೆ ಮುನಿರತ್ನ ಅವರಿಗೆ ಯಾಕೆ ಟಿಕೆಟ್ ನೀಡಬಾರದು ಎಂದು ಯೋಚಿಸಲಾರಂಭಿಸಿತು.
ಇಲ್ಲಿ ಯಡಿಯೂರಪ್ಪ ಅವರ ಬಗ್ಗೆ ಎರಡು ಮಾತುಗಳನ್ನು ಹೇಳಲೇಬೇಕು. ತಮ್ಮಮಾತಿಗೆ ಓಗೊಟ್ಟು ಬಂದ ವಲಸಿಗರೆಲ್ಲರನ್ನೂ ಮಂತ್ರಿ ಮಾಡಲೇಬೇಕು ಎಂಬ ಹಠ ಮತ್ತು ಅದನ್ನು ಈಡೇರಿಸಲು ಅವರು ತೋರಿದ ಬದ್ಧತೆಯನ್ನು ಮೆಚ್ಚಲೇಬೇಕು. ತಮ್ಮ ಪಕ್ಷಕ್ಕೆ ಬಂದವರು ಯಾರೇ ಇರಬಹುದು, ಎಂಥವರೇ ಇರಬಹುದು, ಕರೆದುಕೊಂಡು ಬಂದ ನಂತರ ಅವರ ಹಿನ್ನೆಲೆ, ವ್ಯಕ್ತಿತ್ವ
ನೋಡಕೂಡದು. ಮದುವೆಯಾಗುವ ಮುಂಚೆ ಹುಡುಗಿಯ ಜಾತಿ, ಸ್ವಭಾವ, ಗುಣ, ಮೈಬಣ್ಣ, ಮನೆತನ, ಸಂಸ್ಕಾರಗಳನ್ನು ನೋಡಬೇಕೆ ಹೊರತು, ಮದುವೆಯಾಗಿ ಮನೆಯೊಳಗೇ ಸೇರಿಸಿಕೊಂಡ ನಂತರ, ಅವಳ ಅಪ್ಪನ ಜಾತಿ, ತಾಯಿಯ ಮನೆತನದ ಬಗ್ಗೆ ಮಾತಾಡಬಾರದು. ಇದು ಯಡಿಯೂರಪ್ಪನವರ ನಿಲುವು. ಒಪ್ಪತಕ್ಕದ್ದೇ. ಕಾರಣ ಈ ಹದಿನೇಳು ಮಂದಿ ಪೈಕಿ ಒಬ್ಬರು ಹಿಂದೇಟು ಹಾಕಿದ್ದರೂ, ಸರಕಾರ ಬರುತ್ತಿರಲಿಲ್ಲ ಅಥವಾ ಬರುವುದು ತಡವಾಗುತಿತ್ತು.
ತಮ್ಮ ಪಕ್ಷ ತ್ಯಜಿಸಿ ಬಂದವರು ಡಕಾಯಿತನೇ ಇರಬಹುದು, ಅವರಿಗೆ ಟಿಕೆಟ್ ಕೊಟ್ಟು ಆರಿಸಿ ತಂದು ಮಂತ್ರಿ ಮಾಡಬೇಕಾದುದು ಕರ್ತವ್ಯ. ಅದು ವಚನಪಾಲನೆ. ಇಲ್ಲ, ಕರೆತರುವಾಗಲೇ ಯೋಚಿಸಬೇಕಿತ್ತು. ನಮಗೆ ಇಂಥವರು ಬೇಡ ಎಂದು ಬಿಜೆಪಿಯ
‘ನೈತಿಕಪಾಲಕ’ರು ಹೇಳಬೇಕಿತ್ತು. ಆ ಯಾದಿಯಲ್ಲಿ ಮುನಿರತ್ನ ಇದ್ದರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು. ನಮ್ಮ ಪಕ್ಷದ ಸರಕಾರ ಬರದಿದ್ದರೂ ಪರವಾಗಿಲ್ಲ, ನೀವು ಬರುವುದು ಬೇಕಿಲ್ಲ ಎಂದು ಹೇಳಬೇಕಾಗಿತ್ತು. ಆದರೆ ಅವರಿಗೆ ಎಲ್ಲ ಭರವಸೆ ಕೊಟ್ಟು, ಬಂದ ನಂತರ ಅವರು ಸರಿ ಇಲ್ಲ, ಅವರು ಹಾಗೆ, ಅವರು ಹೀಗೆ ಎಂದು ಬತ್ತಿ ಹೊಸೆಯಲಾರಂಭಿಸಿದ್ದು, ಬಿಜೆಪಿ ನಾಯಕರ ಇಬ್ಬಗೆಯ ನೀತಿ ಮತ್ತು ಕರೆದು ಕತ್ತು ಕುಯ್ಯುವ ಹಲ್ಕಾತನಕ್ಕೆ ನಿದರ್ಶನ.
ಒಂದು ಹಂತದಲ್ಲಿ ಮುನಿರತ್ನ ಅವರಿಗೇ ಟಿಕೆಟ್ ನೀಡಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದರು. ಕೊನೆಗಾಲದಲ್ಲಿ ನನ್ನನ್ನು ವಚನಭ್ರಷ್ಟನನ್ನಾಗಿ ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು. ಆದರೆ ಹೈಕಮಾಂಡ್ ನಾಯಕರು ತಮ್ಮ ಮಾತನ್ನು ಈಡೇರಿಸಲಿಕ್ಕಿಲ್ಲ ಎಂದು ಅವರಿಗೂ ಎ ಅನಿಸಲಾರಂಭಿಸಿತು. ಅವರು ಸಹ ಅಸಹಾಯಕರಾದರು. ಮುನಿರತ್ನ ಅವರ
ಹೆಸರನ್ನೊಂದನ್ನೇ ಹೈಕಮಾಂಡಿಗೆ ಕಳಿಸಿ, ಜತೆಗೆ ಬೇರೊಬ್ಬ ಅಭ್ಯರ್ಥಿ ಹೆಸರನ್ನೂ ಕಳಿಸಿದರೆ ಬೇರೆ ಸಂದೇಶ ರವಾನೆಯಾಗುತ್ತದೆ ಎಂದು ಅವರು ಪಟ್ಟು ಹಿಡಿದರೂ, ಅವರ ಮಾತನ್ನು ಕೇಳಲಿಲ್ಲ. ತುಳಸಿ ಮುನಿರಾಜು ಗೌಡ ಹೆಸರನ್ನು ಸೇರಿಸಲಾಯಿತು. ಇದು ಅನಗತ್ಯ ಗುಮಾನಿ, ಗೊಂದಲಗಳಿಗೆ ಕಾರಣವಾಯಿತು.
ಮಧ್ಯೆ ತುಳಸಿ ಗೌಡ ದಿಲ್ಲಿಗೆ ಹೋಗಿ, ಮುನಿರತ್ನಗೆ ಟಿಕೆಟ್ ನೀಡಬಾರದು, ಕಾರಣ ಅವರು ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಕೇಡು ಬಗೆದವರಿಗೆ ಮರ್ಯಾದೆ ಮಾಡಿದಂತಾಗುತ್ತದೆ ಎಂದು ವಕಾಲತ್ತು ಮಾಡಿದರು. ಅಂದರೆ ಮದುವೆ ಮಾಡಿಕೊಂಡು ಬಂದ ನಂತರ ಅವಳ ಕುಲಗೋತ್ರ ನೋಡಿ, ಅವಳಿಗೆ ಡೈವೋರ್ಸ್ ಕೊಡಿಸಲು
ಮುಂದಾಗಿದ್ದರು. ಎ ಒಂದು ಕಡೆ ಅವರ ವಾದವನ್ನು ಪಕ್ಷ ಎತ್ತಿ ಹಿಡಿದು, ಅವರಿಗೇ ಟಿಕೆಟ್ ನೀಡಬಹುದು ಎಂಬ ವಾಸನೆ ದಿಲ್ಲಿಯ ರಾಜಕೀಯ ಪೆಡಸಾಲೆಯಿಂದ ಹೊರಸೂಸಲಾರಂಭಿಸಿತು. ಇತ್ತ ತಮಗೆ ಟಿಕೆಟ್ ಸಿಗಲಿಕ್ಕಿಲ್ಲ ಎಂದು ಮುನಿರತ್ನ ಆಸೆ ಬಿಟ್ಟಿದ್ದರು. ತಾಯಿ ರಾಜರಾಜೇಶ್ವರಿ ಪಾದಕ್ಕೆ ತಮ್ಮ ರಾಜಕೀಯ ಭವಿಷ್ಯವನ್ನು ಸಮರ್ಪಿಸಿದ್ದರು.
ನಾನು ಬಿಜೆಪಿಗೆ ಬರುತ್ತೇನೆ ಎಂದಾಗ, ಇವರಾರೂ ಯಾಕೆ ಆಗಲೇ ಬೇಡ ಎಂದು ಹೇಳಲಿಲ್ಲ, ನಾನು ಇಂಥವನು, ಅಂಥವನು,
ಎಂಥವನು ಎಂಬುದು ಬಿಜೆಪಿ ಹೈಕಮಾಂಡಿಗೆ ಗೊತ್ತಿರಲಿಲ್ಲವೇ, ನಮ್ಮ ಅಗತ್ಯವಿzಗ ಮನೆ ಬಾಗಿಲಿಗೆ ಬಂದು ಕರೆದು, ಈಗ ಬೆನ್ನಿಗೆ ಚೂರಿ ಹಾಕಿ, ಕತ್ತು ಕುಯ್ತೀರಲ್ಲ… ಎಂದು ಮುನಿರತ್ನಕ್ಕೆ ಒಂದು ಹಂತದಲ್ಲಿ ಅನಿಸಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ. ಸಂದರ್ಭ ಬಂದರೆ ಬಿಜೆಪಿ ನಾಯಕರು ಸಹ, ವಚನಭ್ರಷ್ಟವಾಗಲು ಸಿದ್ಧ, ನಂಬಿಕೆಗೆ ಅರ್ಹರಲ್ಲ ಎಂಬುದನ್ನು ತೋರಿಸಿಬಿಟ್ಟರು. ಹಾಗೆ
ನೋಡಿದರೆ, ಕರ್ನಾಟಕದಲ್ಲಿ ಬಿಜೆಪಿ ಅಽಕಾರಕ್ಕೆ ಬಂದಿದ್ದೇ, ಜೆಡಿಎಸ್ ನಾಯಕರ ವಚನಭ್ರಷ್ಟ ನಡೆಯನ್ನು ವಿರೋಧಿಸುವುದರ ಮೂಲಕ. ಆದರೆ ಅದೇ ಬಿಜೆಪಿ, ಮುನಿರತ್ನ ಅವರಿಗೆ ಗಳಪಾಶಿ ನೀಡಲು ಮುಂದಾಗಿತ್ತು.
ಇಂದು ರಾಜಕೀಯದಲ್ಲಿ ಸಿದ್ಧಾಂತವಿರುವ ಏಕೈಕ ಪಕ್ಷ ಎಂದು ಕೊಚ್ಚಿಕೊಳ್ಳುವ ಬಿಜೆಪಿ ನಾಯಕರು, ಮುನಿರತ್ನ ಅವರನ್ನು ಕರೆದು ಕತ್ತು ಕತ್ತರಿಸಲು ಮುಹೂರ್ತ ಫಿಕ್ಸ್ ಮಾಡಿದ್ದರು! ಅಷ್ಟಕ್ಕೂ ತುಳಸಿ ಮುನಿರಾಜು ಗೌಡ, ಶಾಮಪ್ರಸಾದ ಮುಖರ್ಜಿ ವಂಶಸ್ಥನಾ ಅಥವಾ ಡಿ.ಡಿ.ಉಪಾಧ್ಯಾಯರ ಮನೆತನದವನಾ? ಅವರು ಹೇಳಿ ಕೇಳಿ ಜಲ್ಲಿಕಲ್ಲು ಕ್ರಷರ್, ರಿಯಲ್ ಎಸ್ಟೇಟ್ ದಂಧೆ ಮಾಡುವವರು. ಇಂಥವರನ್ನು ಆಗ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ನಂತರ ಅಧ್ಯಕ್ಷನನ್ನಾಗಿ ಮಾಡಿದಾಗಲೇ ಅನೇಕರಿಗೆ ಸಂದೇಹ ಬಂದಿತ್ತು. ಯಾಕೆ ಇವರ ಮೇಲೆ ವಿಶೇಷ ಮಮತೆ ಎಂದು ಅನೇಕರು ಹುಬ್ಬು ಹಾರಿಸಿದ್ದರು. ನಂತರ ತುಳಸಿ ಗೌಡರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ನೀಡಲಾಯಿತು. ಆಸಾಮಿ ಸೋತು ಹೋದರು. 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಇವರಿಗೆ ಬಿಜೆಪಿ ಟಿಕೆಟ್ ನೀಡಿತು. ಆಸಾಮಿ ಸೋತು ಹೋದರು.
2018ರಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಮತ್ತೆ ತುಳಸಿಗೆ ಟಿಕೆಟ್ ನೀಡಿತು. ಆಸಾಮಿ ಸೋತು ಹೋದರು. ಸೋಲಿನಲ್ಲಿ ಹ್ಯಾಟ್ರಿಕ್ ಸಾಧನೆಗೈದರು ! ಅಲ್ಲಿಗೆ ತುಳಸಿ ಕೆಲಕಾಲವಾದರೂ ಸುಮ್ಮನಿರಬೇಕಿತ್ತು ಅಥವಾ ಪಕ್ಷದ ಹೈಕಮಾಂಡ್, ‘ಬಹಳ ದಣಿದಿದ್ದೀಯ, ನಿನಗೆ ವಿಶ್ರಾಂತಿ ಅಗತ್ಯವಿದೆ, ಥಾಮ್ಬಾ!’ ಎಂದು ಹೇಳಬೇಕಿತ್ತು. ಆದರೆ ಮತ್ತೆ ಹೋಗಿ ಹೋಗಿ, ‘ತುಳಸಿ ಮದುವೆ’ಗೆ ಚಪ್ಪರ ಸಿಂಗರಿಸಬಾರದಿತ್ತು !
ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಯಿತು. ಪಕ್ಷದ ಹೈಕಮಾಂಡ್ ಅಪಾತ್ರರಿಗೆ ಅನಗತ್ಯವಾಗಿ ಮಹತ್ವ ನೀಡುತ್ತದೆ ಎಂಬ ಸಂದೇಶ ರವಾನೆಯಾಗುವಂತೆ ಮಾಡಿತು. ಒಂದು ಕಾರ್ಪೊರೇಷನ್ ಚುನಾವಣೆ ಗೆಲ್ಲುವ ಯೋಗ್ಯತೆ ಇಲ್ಲದವರಿಗೆ ಇಷ್ಟೆ ಪ್ರಾಮುಖ್ಯ ನೀಡಬೇಕಾದ ಅಗತ್ಯವಿರಲಿಲ್ಲ. ತುಳಸಿ ಗೌಡ ಅವರನ್ನು ಕಟ್ಟಿಕೊಂಡು ಪಕ್ಷವನ್ನು ಕಟ್ಟಬಹುದು ಎಂದು ಭಾವಿಸು ವುದೇ ಮಬ್ಬುತನ. ಮುನಿರತ್ನಗೆ ಟಿಕೆಟ್ ಎಗರಿಸಿ, ತುಳಸಿಗೆ ಮದುವೆ ಮಾಡಲು ಹೋಗಿದ್ದರೆ, ಫಲಿತಾಂಶ ಏನಾಗುತ್ತಿತ್ತು
ಎನ್ನುವುದನ್ನು ಚುನಾವಣೆ ತನಕ ಕಾಯಬೇಕಿರಲಿಲ್ಲ.
ಷ್ಟರಮಟ್ಟಿಗೆ, ಬಿಜೆಪಿ ಹೈಕಮಾಂಡ್ ಮುಖಭಂಗಕ್ಕೊಳಗಾಗುವುದನ್ನು ತಪ್ಪಿಸಿಕೊಂಡಿದೆ. ಮುನಿರತ್ನ ಎಂಥವರೇ ಇರಬಹುದು, ಅವರನ್ನು ಪಕ್ಷದೊಳಗೆ ಸೇರಿಸಿಕೊಂಡ ನಂತರ ಅಲ್ಲಿಗೆ ಮುಗಿಯಿತು. ಅವರ ಬಗ್ಗೆ ಮತ್ತೆ ಚರ್ಚೆ ಮಾಡಬಾರ ದಾಗಿತ್ತು. ತುಳಸಿ ಬಗ್ಗೆ ಪ್ರೀತಿಯಿದ್ದರೆ, ಅದನ್ನು ಪ್ರದರ್ಶಿಸಲು ಇದು ಸಂದರ್ಭವಾಗಿರಲಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ನೀಡುವುದು ಮುಂದಕ್ಕೆ ಹೋಗಿದ್ದರೆ, ಮುನಿರತ್ನಗೆ ಖಂಡಿತವಾಗಿಯೂ ಟಿಕೆಟ್ ಸಿಗುತ್ತಿರಲಿಲ್ಲ. ಹಾಗೆಂದು ನಂಬಲು ಅನೇಕ ವಿದ್ಯಮಾನಗಳೇ ಸಾಕ್ಷಿ ಯಾಗಿವೆ. ಆದರೆ ತೀರ್ಪು ಅವರ ಪರವಾಗಿ ಬಂದ ನಂತರ, ಅವರಿಗೆ ಟಿಕೆಟ್ ನೀಡುವುದು ಅನಿವಾರ್ಯವಾಯಿತು. ಹಾಗೆಂದು ಇದು ಮುನಿರತ್ನಗೆ ನೀಡಿದ ಭರವಸೆಯನ್ನು ಈಡೇರಿಸಿದ್ದಲ್ಲ ಅಥವಾ ವಚನಪಾಲನೆಯಲ್ಲ. ಬಿಜೆಪಿ ಮುಖಕ್ಕೆ ಸೆರಗು ಮುಚ್ಚಿ ತನ್ನ ಮರ್ಯಾದೆ ಉಳಿಸಿಕೊಂಡಿದೆ.
ಇದರಿಂದ ಬಿಜೆಪಿ ಒಂದು ಸಂದೇಶವನ್ನು ಸ್ಪಷ್ಟವಾಗಿ ನೀಡಿದೆ. ಇನ್ನು ಮುಂದೆ ಬಿಜೆಪಿ ಸೇರುವವರು ಯೋಚನೆ ಮಾಡಬೇಕು. ಒಂದು ವೇಳೆ ಸೇರಲೇಬೇಕು ಎಂದು ತೀರ್ಮಾನಿಸಿದರೆ, ಪಕ್ಷಕ್ಕೆ ಸೇರುವಾಗ ಭರವಸೆಯನ್ನು ನೀಡುವವರು ಮತ್ತು ನಂತರ ಈಡೇ ರಿಸುವವರು ಒಬ್ಬರೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಭರವಸೆ ನೀಡುವವರೇ ಒಬ್ಬರು, ಈಡೇರಿಸುವವರು ಇನ್ನೊಬ್ಬರು ಎಂದಾಗ, ಇಷ್ಟೆ ಸಮಸ್ಯೆಯಾಗುತ್ತದೆ. ರಾಜಕೀಯ ಮದುವೆಯಲ್ಲಿ ಮದುಮಗನೊಬ್ಬನ ಮಾತೊಂದೇ ಮುಖ್ಯ ವಲ್ಲ, ಅವನ ತಂದೆ-ತಾಯಿ, ದೊಡ್ಡಪ್ಪನದೂ ಮುಖ್ಯ. ಇದು ಪಕ್ಷಾಂತರಿಗಳಿಗೆ ಒಳ್ಳೆಯ ಪಾಠ.
ಒಟ್ಟಾರೆ ಈ ಪ್ರಹಸನದಲ್ಲಿ ಯಾರು ‘ಮುನಿ’ದರು, ಯಾರಿಗೆ ‘ರತ್ನ’ ಪ್ರಾಪ್ತಿಯಾಯಿತು ಎಂಬುದು ಅರ್ಥವಾಗಿರಬಹುದು !