Sunday, 8th September 2024

ಸ್ನಾಯು ಸಡಿಲಕವಾದ ಬಾಣ ವಿಷ!

ಮಧ್ಯಯುಗದ ಯೂರೋಪ್ ಖಂಡದಲ್ಲಿ ವೈದ್ಯಕೀಯ ವಿಜ್ಞಾನವು ಶರವೇಗದಲ್ಲಿ ಬೆಳೆಯಿತು. ಅದರ ಫಲವಾಗಿ ನೈಟ್ರಸ್ ಆಕ್ಸೈಡ್, ಈಥರ್ ಮತ್ತು ಕ್ಲೋರೋಫಾರಂ ಅರಿವಳಿಕೆಗಳು ಬಳಕೆಗೆ ಬಂದವು. ಮನುಕುಲದ ಇತಿಹಾಸದಲ್ಲಿ ಮೊದಲ ಬಾರಿಗೆ ರೋಗಿಗಳು ನಿರಾತಂಕರಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಂತಾಯಿತು. ಹಾಗಾಗಿ ಶಸ್ತ್ರವೈದ್ಯರೂ ಗಮನವಿಟ್ಟು ಶಸ್ತ್ರಚಿಕಿತ್ಸೆಯನ್ನು ನೀಡಲು ಸಾಧ್ಯವಾಯಿತು. ಅರಿವಳಿಕೆಯ ನೆರವಿನಿಂದ ಲಕ್ಷಾಂತರ ವೈವಿಧ್ಯಮಯ ಶಸ್ತ್ರಚಿಕಿತ್ಸೆೆಗಳನ್ನು ಯಶಸ್ವಿಯಾಗಿ ನಡೆದವು.

ಆದರೆ ಕಥೆಯು ಇಲ್ಲಿಗೇ ಮುಗಿದಿರಲಿಲ್ಲ!
ಶಸ್ತ್ರವೈದ್ಯರು ಒಂದು ಸಮಸ್ಯೆೆಯನ್ನು ಗಮನಿಸಿದರು. ರೋಗಿಯು ಶಸ್ತ್ರಚಿಕಿತ್ಸಾಲಯದೊಳಗೆ ಪ್ರವೇಶಿಸುವ ಮೊದಲು, ಅವನ ದೇಹ ಹಾಗೂ ಮನಸ್ಸು ಪ್ರಕ್ಷುಬ್ಧ ಸ್ಥಿತಿಯಲ್ಲಿರುತ್ತಿದ್ದವು. ತಾವು ಏನೇನನ್ನು ಎದುರಿಸಬೇಕಾಗಿದೆಯೋ ಎನ್ನುವುದನ್ನು ಕಲ್ಪಿಸಿಕೊಂಡೇ ಆತಂಕದಲ್ಲಿರುತ್ತಿದ್ದವು. ಅದರ ಫಲವಾಗಿ ಶರೀರದ ಸ್ನಾಯುಗಳೆಲ್ಲ ಬಿಗಿತುಕೊಂಡಿರುತ್ತಿದ್ದವು. ಹೀಗೆ ಕಲ್ಪಿತ ಒತ್ತಡದಲ್ಲಿರುವವರಿಗೆ ಅರಿವಳಿಕೆಯನ್ನು ನೀಡಿದಾಗ, ಅವರ ನೋವನ್ನು ಗ್ರಹಿಸುವ ಅವರ ಸಾಮರ್ಥ್ಯವು ಶಮನವಾಗುತ್ತಿತ್ತೇ ಹೊರತು, ನಿರೀಕ್ಷಿತ ಆತಂಕವನ್ನು ಎದುರಿಸಲು ಬಿಗಿದುಕೊಂಡಿರುತ್ತಿದ್ದ ಅವರ ಸ್ನಾಯುಗಳು ಸಡಿಲಗೊಳ್ಳುತ್ತಿರಲಿಲ್ಲ. ಇವನ್ನು ಪೂರ್ಣ ರೂಪದಲ್ಲಿ ಸಡಿಲಗೊಳಿಸದೇ ಶಸ್ತ್ರಚಿಕಿತ್ಸೆೆಯನ್ನು ಸಮರ್ಪಕವಾಗಿ ನಡೆಸುವುದು ಒಂದು ಸವಾಲಿನ ಕೆಲಸವಾಗಿತ್ತು.

ಇಂದಿಗೆ ಸುಮಾರು 400 ವರ್ಷಗಳ ಹಿಂದಿನ ದಕ್ಷಿಣ ಮತ್ತು ಮಧ್ಯ ಅಮೆರಿಕ. ಸ್ಥಳೀಯ ಬುಡಕಟ್ಟಿನ ಜನರು ಆಹಾರಕ್ಕಾಗಿ ಬೇಟೆಯನ್ನಾಡುತ್ತಿದ್ದರು. ಅವರು ಸಾಮಾನ್ಯವಾಗಿ ಎರಡು ವಿಧಾನಗಳನ್ನು ಬಳಸುತ್ತಿದ್ದರು. ಮೊದಲನೆಯ ವಿಧಾನದಲ್ಲಿ, ಬಿಲ್ಲನ್ನು ಬಳಸಿ ಬಾಣವನ್ನು ಬಿಟ್ಟು, ಪ್ರಾಣಿಗಳನ್ನು ಕೊಲ್ಲುತ್ತಿದ್ದರು. ಎರಡನೆಯ ವಿಧಾನದಲ್ಲಿ ಊದುಗೊಳವೆಗಳ (ಬ್ಲೋ-ಪೈಪ್/ಬ್ಲೋ-ಗನ್) ಮೂಲಕ ಬಾಣವನ್ನು ಊದಿ ತಮ್ಮ ಬೇಟೆಯನ್ನು ನಿಶ್ಚೇತಗೊಳಿಸುತ್ತಿದ್ದರು. ಸುಮಾರು 3 ಮೀಟರ್ ಉದ್ದದ ನದಿ ಬಿದಿರಿನ ಊದುಗೊಳವೆ. ಇದರೊಳಗೆ 40-50 ಸೆಂ.ಮೀ. ಉದ್ದದ ಬಿದಿರಿನ ಬಾಣ. ಅದಕ್ಕೆೆ ಲೋಹದ ಹರಿತ ತುದಿ. ಕೇವಲ ಒಂದೆರಡು ಬಾಣಗಳ ಹೊಡೆತಕ್ಕೆೆ ಜಿಂಕೆಯಾಗಲು ಅಥವ ಹಂದಿಯಾಗಲಿ ಸಾಯುತ್ತಿರಲಿಲ್ಲ. ಹಾಗಾಗಿ ಬಾಣಗಳ ಹರಿತ ತುದಿಗೆ ವಿಷವನ್ನು ಲೇಪಿಸುತ್ತಿದ್ದರು.

ನಮ್ಮ ಪೂರ್ವಜರು ಬೇಟೆಯನ್ನಾಡಲು ಸೂಕ್ತ ವಿಷವನ್ನು ತಿಳಿದುಕೊಳ್ಳಲು ಅವರು ಅದೆಷ್ಟು ಪ್ರಯತ್ನ ಪಟ್ಟರೋ ಏನೋ! ವಿಷವು ಪರಿಣಾಮಕಾರಿಯಾಗಿರಬೇಕು. ಬೇಟೆಯು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಯಬೇಕು. ವಿಷವು ಪ್ರಾಣಿಗೆ ಮಾತ್ರ ವಿಷಮಯವಾಗಬೇಕು. ವಿಷವೇರಿ ಸತ್ತ ಆ ಪ್ರಾಣಿಯನ್ನು ತಿನ್ನುವ ನಮಗೆ ವಿಷವಾಗಬಾರದು. ಆ ವಿಷವು ಕಾಡಿನಲ್ಲಿ ಎಲ್ಲೆೆಡೆ ಸಿಗುವಂತಿರಬೇಕು. ವಿಷವನ್ನು ಸುಲಭವಾಗಿ ಬಳಸಲು ಬರಬೇಕು. ಇಂತಹ ಮಾದರಿ ವಿಷವನ್ನು ಹುಡುಕುವುದು ನಿಜಕ್ಕೂ ಒಂದು ಸವಾಲಿನ ಕೆಲಸವಾಗಿತ್ತು.

ಇಂದಿನ ಕ್ಯಾರೇಬಿಯನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಲಿನಾಗೋ ಬುಡಕಟ್ಟಿನವರು ಅಂತಹ ಒಂದು ವಿಷವನ್ನು ಕಂಡುಕೊಂಡರು. ಕೊಲಂಬಿಯ ಮತ್ತು ಉತ್ತರ ಪೆರು ಪ್ರಾಂತಗಳಲ್ಲಿ ವಾಸವಾಗಿದ್ದ ಯಗುವ ಬುಡಕಟ್ಟಿನವರು ಸಹಾ ಇದೇ ರೀತಿಯ ಸುರಕ್ಷಿತ ವಿಷವನ್ನು ರೂಪಿಸಿಕೊಂಡರು. ಆ ವಿಷವನ್ನು ತಮ್ಮ ತಮ್ಮ ಬಾಣಗಳಿಗೆ ಲೇಪಿಸಿ, ಅವನ್ನು ತಮ್ಮ ಊದುಗೊಳವೆಗಳ ಮೂಲಕ ಊದಿ, ಪ್ರಾಣಿಗಳನ್ನು ಯಸ್ವಿಯಾಗಿ ಬೇಟೆಯಾಡಿದರು. ದಟ್ಟ ಕಾಡಿನ ನಡುವೆ ಪೊದೆಗಳಲ್ಲಿ ಅಡಗಿದ ಬುಡಕಟ್ಟಿನ ಜನರು, ಸುಮಾರು 30-40 ಹೆಜ್ಜೆಗಳ ದೂರದಲ್ಲಿದ್ದ ಬೇಟೆಯನ್ನು ಊದಿ ಕೊಲ್ಲುತ್ತಿದ್ದರು. ಯಾವ ಬುಡಕಟ್ಟು ಸೂಕ್ತ ವಿಷವನ್ನು ಕಂಡುಕೊಂಡು, ಅದನ್ನು ಪರಿಣಾಮಕಾರಿಯಾಗಿ ಬಳಸಲು ಕಲಿತುಕೊಂಡಿತೋ, ಆ ಬುಡಕಟ್ಟು, ಉಳಿದ ಬುಡಕಟ್ಟುಗಳಿಗಿಂತ ಶಕ್ತಿಶಾಲಿಯಾಗಿ ಬೆಳೆದು ಶ್ರೀಮಂತಿಕೆಯನ್ನು ಗಳಿಸಿಕೊಂಡವು.

ಗಯಾನ ಪ್ರಾಂತದಲ್ಲಿದ್ದ ಮಾಕೂಸಿ ಜನಾಂಗ. ಇವರು ಒಂದು ಬಳ್ಳಿಯನ್ನು ಮಾವಾಬಳ್ಳಿ ಎಂದು ಕರೆಯುತ್ತಿದ್ದರು. ಇದರ ವೈಜ್ಞಾನಿಕ ನಾಮಧೇಯ ಸ್ಟ್ರಿಕ್ನಸ್ ಟಾಕ್ಸಿರ. ಮಾಕೂಸಿ ಜನರ ಕ್ಯಾರಿಬ್ ಭಾಷೆಯಲ್ಲಿ ಈ ಬಳ್ಳಿಯಿಂದ ತೆಗೆದ ರೂಪಿಸಿದ ವಿಷವಸ್ತುವಿಗೆ ವುರಾರಿ ಎಂಬ ಹೆಸರನ್ನು ನೀಡಿದ್ದರು. ಸ್ಥಳೀಯ ಬುಡಕಟ್ಟಿನ ಅನೇಕರು ಇದೇ ವುರಾರಿಯನ್ನು ವುರಾರ, ವುರಾಲಿ, ವೌರಾಲಿ, ವೌರಾಲಿಯ, ಔರೇರ್, ಔರಾರಿ, ಯುರೇರ್, ಯುರಾರಿ ಎಂದೆಲ್ಲ ಕರೆಯುತ್ತಿದ್ದರು. ಇದು ಕಾಲಕ್ರಮೇಣ, ಯೂರೋಪಿಯನ್ನರ ಬಾಯಿಗೆ ಸಿಕ್ಕಿ ಕ್ಯುರೇರ್ ಎಂಬ ರೂಪವನ್ನು ಪಡೆಯಿತು. ಅದೇ ಹೆಸರು ಇಂದಿನವರೆಗೂ ಈ ವಿಷಕ್ಕೆೆ ಉಳಿದುಬಂದಿದೆ.

ದಕ್ಷಿಣ ಅಮೆರಿಕವನ್ನು ಆಕ್ರಮಿಸಿದ ಯೂರೋಪಿಯನ್ನರು ಮಾವಾ ಬಳ್ಳಿಯ ವಿವರಗಳನ್ನು ಪತ್ತೆೆ ಹಚ್ಚುತ್ತಿರುವಂತೆಯೇ, ಕ್ಯುರೇರ್ ವಿಷವು ಸ್ಟ್ರಿಕ್ನಸ್ ಟಾಕ್ಸಿರ ಬಳ್ಳಿಯಲ್ಲಿ ಮಾತ್ರವಲ್ಲ, ಕಾಂಡ್ರೋಡೆಂಡ್ರಾನ್ ಟೊಮೆಂಟೋಸಮ್ ಎಂಬ ಬಳ್ಳಿಯಲ್ಲೂ ಇರುವುದನ್ನು ಗಮನಿಸಿದರು. ಮುಂದಿನ ದಿನಗಳಲ್ಲಿ ಇಂತಹ ವಿಷವು ಇತರ ಕೆಲವು ಬಳ್ಳಿಗಳಲ್ಲಿಯೂ ಇರುವುದನ್ನು ಪತ್ತೆೆಹಚ್ಚಿದರು. ಆದರೂ ಸಹ, ಬುಡಕಟ್ಟುಗಳ ಜನರು ಪ್ರಧಾನವಾಗಿ ಸ್ಟ್ರಿಕ್ನಸ್ ಮತ್ತು ಕಾಂಡ್ರೋಡೆಂಡ್ರಾನ್‌ಗಳ ವಿಷವನ್ನು ಮಾತ್ರ ಬಳಸುತ್ತಿದ್ದುದರಿಂದ ಅವುಗಳಿಗೆ ವಿಶೇಷ ಗಮನವನ್ನು ನೀಡಿದರು.

ಬಾಣದ ತುದಿಗೆ ಲೇಪಿಸಿದ್ದ ಕ್ಯುರೇರ್ ವಿಷವು, ಗಾಯದ ಮೂಲಕ ಪ್ರಾಣಿಯ ಶರೀರವನ್ನು ಸೇರುತ್ತಿದ್ದ ಕೂಡಲೇ. ಆ ಪ್ರಾಣಿಯು ಸಾಯುತ್ತಿರಲಿಲ್ಲ. ಬದಲಿಗೆ ಅದರ ಶರೀರದ ಸ್ವಾಯತ್ತ ಸ್ನಾಯುಗಳು (ಚಲನವಲನಕ್ಕೆೆ ಅಗತ್ಯವಾದ ಸ್ನಾಯುಗಳು = ವಾಲ್ಯುಂಟರಿ ಮಸಲ್‌ಸ್‌) ಕ್ರಮವಾಗಿ ನಿಶ್ಚೇತವಾಗುತ್ತಿದ್ದವು. 15-20 ನಿಮಿಷಗಳಲ್ಲಿ ಆ ಪ್ರಾಣಿಯು ಕುಸಿದು ಬೀಳುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ಉಸಿರಾಡುವುದು ಕಷ್ಟವಾಗುತ್ತಿತ್ತು. ಕೊನೆಗೆ ಉಸಿರಾಟಕ್ಕೆೆ ತೀರಾ ಅಗತ್ಯವಾಗಿರುವ ವಪೆಯು (ಡಯ್ರಾಂ) ಪೂರ್ಣ ಕಾರ್ಯವಿಹೀನವಾಗುತ್ತಿತ್ತು. ಆಗ ಉಸಿರಾಟವು 100% ನಿಲ್ಲುತ್ತಿತ್ತು. ಆ ಪ್ರಾಣಿಯು ಆಕ್ಸಿಜನ್ ಕೊರತೆಯಿಂದ ಸಾಯುತ್ತಿತ್ತು. ಅಂದರೆ ಕ್ಯುರೇರ್ ಪ್ರಾಣಿಯು ನೇರವಾಗಿ ಕೊಲ್ಲುತ್ತಿರಲಿಲ್ಲ. ಅದರ ಸ್ನಾಯುಗಳನ್ನು ಮಾತ್ರ ಕಾರ್ಯವಿಹೀನಗೊಳಿಸುತ್ತಿತ್ತು. ಉಸಿರಾಟವು ನಿಲ್ಲುವ ಕಾರಣ, ಜೀವಿಯು ಸಾಯುತ್ತಿತ್ತು. ಹೀಗೆ ಸತ್ತ ಪ್ರಾಣಿಯನ್ನು ಮನುಷ್ಯರಿಗೆ ತೊಂದರೆಯಾಗುತ್ತಿರಲಿಲ್ಲ. ಏಕೆಂದರೆ ಮನುಷ್ಯರ ಹೊಟ್ಟೆೆಯಲ್ಲಿದ್ದ ಜಠರಾಮ್ಲವು ಕ್ಯುರೇರ್ ವಿಷವನ್ನು ನಾಶಪಡಿಸುತ್ತಿತ್ತು.

ಪ್ರತಿಯೋರ್ವ ಬುಡಕಟ್ಟಿನ ಜನರು ತಮ್ಮದೇ ಆದ ವಿಷವನ್ನು ತಯಾರಿಸಿಕೊಳ್ಳುತ್ತಿದ್ದರು. ಎಲ್ಲರೂ ತಯಾರಿಸುತ್ತಿದ್ದ ವಿಷದಲ್ಲಿ ಸ್ಟ್ರಿಕ್ನಸ್ ಅಥವಾ ಕಾಂಡ್ರೊಡೆಂಡ್ರಾನ್ ಇರುತ್ತಿದ್ದವು. ಅವುಗಳ ಜೊತೆಯಲ್ಲಿರುವ ಇತರ ಮೂಲಿಕೆಗಳು ಭಿನ್ನವಾಗಿರುತ್ತಿದ್ದವು. ಇವನ್ನು ಸುಮಾರು ಎರಡು ದಿನಗಳವರೆಗೆ ಕುದಿಸುತ್ತಿದ್ದರು. ಅದು ಲೇಹ್ಯದ ಹದವನ್ನು ತಲುಪುತ್ತಿತ್ತು. ಅದನ್ನು ಬಿದಿರಿನ ಕೊಳವೆಯಲ್ಲಿ/ಆವೆಮಣ್ಣಿನ ಮಡಕೆಯಲ್ಲಿ ಇಲ್ಲವೇ ಸೋರೆಬುರುಡೆಯೊಳಗೆ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು.

ಸರ್ ವಾಲ್ಟರ್ ರ್ಯಾಲೆ (1552-1618) ಓರ್ವ ಇಂಗ್ಲಿಷ್ ಯೋಧ, ರಾಜಕಾರಣಿ, ಬರಹಗಾರ ಮತ್ತು ಅನ್ವೇಷಕ. ಈತನು ದಕ್ಷಿಣ ಅಮೆರಿಕಕ್ಕೆೆ ಬಂದು ಡಿಸ್ಕವರಿ ಆಫ್ ದಿ ಲಾರ್ಜ್, ರಿಚ್ ಅಂಡ್ ಬ್ಯೂಟಿುಲ್ ಎಂಪೈರ್ ಆಫ್ ಗಯಾನ ಎಂಬ ಪುಸ್ತಕವನ್ನು ಬರೆದ. ಅದರಲ್ಲಿ ಕ್ಯುರೇರ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ದಾಖಲಿಸಿದ. 1780ರಲ್ಲಿ ಅಬ್ಬೇಅಬ್ಬೇ ಫಿಲಿಕ್ಸ್ ಫಾಂಟಾನ್ (1730-1805) ಎಂಬುವವನು ಕ್ಯುರೇರ್ ಸ್ವಾಯತ್ತ ಸ್ನಾಯುಗಳ ಮೇಲೆ ಪ್ರಭಾವವವನ್ನು ಬೀರುತ್ತದೆ, ಹೃದಯದ ಮೇಲಲ್ಲ ಎನ್ನುವುದನ್ನು ಗಮನಿಸಿದ. 1832ರಲ್ಲಿ ಅಲೆಗ್ಸಾಾಂಡರ್ ಹಂಬೋಲ್‌ಡ್ಟ್‌ (1769-1859) ಮೊದಲ ಬಾರಿಗೆ ಒರಿನೋಕೊ ನದಿಯ ದಡದಲ್ಲಿ ವಾಸಿಸುವ ಬುಡಕಟ್ಟಿನವರು ಕ್ಯುರೇರನ್ನು ಕೆಲವು ಸಸ್ಯಗಳಿಂದ ತಯಾರಿಸುತ್ತಾರೆ ಎಂದ. ಸರ್ ಬೆಂಜಮಿನ್ ಕಾಲಿನ್‌ಸ್‌ ಬ್ರಾಡಿ (1783-1862) 1811-12 ಕ್ಯುರೇರ್ ಪ್ರಭಾವದಲ್ಲಿ ನಿಶ್ಚೇತವಾಗಿದ್ದ ಪ್ರಾಣಿಗಳಿಗೆ ಕೃತಕ ಉಸಿರಾಟದ ಅನುಕೂಲತೆಯನ್ನು ಒದಗಿಸಿದರೆ, ಅವು ಸಾಯುವುದಿಲ್ಲ ಎನ್ನುವುದನ್ನು ತೋರಿಸಿದ. ಚಾರ್ಲ್‌ಸ್‌ ವಾಟರ್ಟನ್ (1782-1865) ಕ್ಯುರೇರ್ ಪ್ರಭಾವವಕ್ಕೆೆ ಒಳಗಾಗಿದ್ದ ಒಂದು ಕತ್ತೆೆಯ ವಾಯುನಾಳವನ್ನು ಸೀಳಿ (ಟ್ರೇಕಿಯಾಸ್ಟಮಿ) ಅದಕ್ಕೆೆ ಒಂದು ತಿದಿಯನ್ನು (ಬೆಲ್ಲೋಸ್) ಜೋಡಿಸಿ ಆ ಕತ್ತೆೆಯನ್ನು ಜೀವಂತವಾಗಿ ಇಟ್ಟ. ಸರ್ ರಾಬರ್ಟ್ ಹೆರ್ಮನ್ ಶೋಬರ್ಕ್ (1804-1865) ಮಾವಾಬಳ್ಳಿಯನ್ನು ಗುರುತಿಸಿ ಅದಕ್ಕೆೆ ಸ್ಟ್ರಿಕ್ನಸ್ ಟಾಕ್ಸಿರ ಎಂಬ ಹೆಸರನ್ನು ನೀಡಿದ.

ಕ್ಲಾಡ್ ಬೆರ್ನಾರ್ಡ್ (1813-1878) ಫ್ರೆಂಚ್ ಅಂಗಕ್ರಿಯಾ ವಿಜ್ಞಾನಿ. ಅಂಗಕ್ರಿಯ ವಿಜ್ಞಾನದ ಪಿತಾಮಹ ಎಂಬ ಅಭಿದಾನಕ್ಕೆೆ ಪಾತ್ರನಾದವನು. ಈತನು ಕಪ್ಪೆೆಯ ಮೇಲೆ ಕ್ಯುರೇರನ್ನು ಪ್ರಯೋಗಿಸಿ, 1855ರಲ್ಲಿ ಕ್ಯುರೇರ್ ರಕ್ತಪರಿಚಲನೆಯನ್ನು ಪ್ರವೇಶಿಸಿದರೆ ಮಾತ್ರ ವಿಷಪ್ರಭಾವವನ್ನು ಬೀರಬಲ್ಲುದು. ಜಠರ ಮತ್ತು ಕರುಳು ಕ್ಯುರೇರ್ ವಿಷವನ್ನು ಬಹುಪಾಲು ಹೀರಲಾರದು. ನರಗಳು ಸ್ನಾಯುವನ್ನು ಸಂಪರ್ಕಿಸುವ ನರ-ಸ್ನಾಯು ಸಂಧಿ ಯ ಮೇಲೆ ಕ್ಯುರೇರ್ ದುಷ್ಪರಿಣಾಮವನ್ನು ಬೀರುವುದರಿಂದ ಸ್ನಾಯುವು ನಿಶ್ಚೇತವಾಗುತ್ತದೆ. ಆಗ ಉಸಿರಾಟದ ವೈಲ್ಯದಿಂದ ಸಾವು ಸಂಭವಿಸುತ್ತದೆ. ಸಾಯುವಾಗ ಸೆಳವಾಗಲಿ, ನೋವಾಗಲಿ ಇರುವುದಿಲ್ಲ ಎಂದ. ಈತನ ಈ ಪ್ರಯೋಗವು ಮಾನವ ಅಂಗಕ್ರಿಯವಿಜ್ಞಾನ ಹಾಗೂ ಔಷಧ ವಿಜ್ಞಾನಗಳ ಮೈಲಿಗಲ್ಲುಗಳಲ್ಲಿ ಮುಖ್ಯವಾದದ್ದು ಎಂದು ಪ್ರಖ್ಯಾತವಾಯಿತು. ಮುಂದೆ ನರ ಮತ್ತು ಸ್ನಾಯುಗಳು ಕೆಲಸ ಮಾಡಲು ನೆರವಾಗುವ ಅಸಿಟೈಲ್ ಕೋಲಿನ್ ಎನ್ನುವ ನರವಾಹಕವನ್ನು (ನ್ಯೂರೋಟ್ರಾನ್‌ಸ್‌‌ಮಿಟರ್) ಕ್ಯುರೇರ್ ತಡೆಗಟ್ಟುವ ಕಾರಣ ಸ್ನಾಯು ನಿಶ್ಚೇತಗೊಳ್ಳುತ್ತದೆ ಎನ್ನುವ ವಿಚಾರವು ತಿಳಿದುಬಂದಿತು. ಹೆರಾಲ್‌ಡ್‌ ಕಿಂಗ್ (1887-1956) ಕ್ಯುರೇರ್‌ನಲ್ಲಿರುವ ಪಟು-ರಾಸಾಯನಿಕವನ್ನು ಗುರುತಿಸಿ, ಪ್ರತ್ಯೇಕಿಸಿ ಹಾಗೂ ಶುದ್ಧೀಕರಿಸಿ ಅದಕ್ಕೆೆ ಡಿ-ಟ್ಯೂಬೋಕ್ಯುರಾರಿನ್ ಎಂಬ ಹೆಸರನ್ನಿಟ್ಟ.

1942ರ ದಿನಗಳಲ್ಲಿ ಅನಿಲ ರೂಪದ ಅರಿವಳಿಕೆಯನ್ನು ನೀಡಲು ಗಂಟಲ ಮೂಲಕ ವಾಯುನಾಳದ ಒಳಗೆ ಒಂದು ಕೊಳವೆಯನ್ನು ತೂರಿಸುತ್ತಿದ್ದರು. ಆ ಕೊಳವೆಯ ಮೂಲಕ ಅರಿವಳಿಕೆಯ ಅನಿಲವನ್ನು ಹಾಯಿಸುತ್ತಿದ್ದರು. ಆದರೆ ಗಂಟಲಿನ ಮೂಲಕ ಅರಿವಳಿಕೆಯ ಕೊಳವೆಯನ್ನು ಹಾಯಿಸುವುದು ಸುಲಭವಾಗುತ್ತಿರಲಿಲ್ಲ. ಗಂಟಲಸ್ನಾಯುಗಳು ಬಿಗಿತುಕೊಂಡು ವಾಕರಿಕೆಯು ಹೆಚ್ಚಾಗುತ್ತಿತ್ತು. ವೆನಿಜೂಲದ ಅರಿವಳಿಕೆಯ ತಜ್ಞ ಪ್ಯಾಸ್ಕುಲ್ ಸ್ಕ್ಯಾನೋನ್, ಟ್ಯೂಬೋಕ್ಯುರಾರಿನ್‌ನನ್ನು ನೀಡಿದ. ಗಂಟಲು ಮತ್ತು ಕುತ್ತಿಗೆಯ ಸ್ನಾಯುಗಳು ಸಡಿಲವಾದವು. ಆಗ ಸುಲಭವಾಗಿ ಕೊಳವೆಯನ್ನು ತೂರಿಸಿದ. ಅದರ ಮೂಲಕ ಅನಿಲ ಅರಿವಳಿಕೆಯನ್ನು ನೀಡಿದ. ಟ್ಯೂಬೋಕುರಾರಿನ್ ತನ್ನ ಪ್ರಭಾವವನ್ನು 30 ನಿಮಿಷಗಳಿಂದ ಹಿಡಿದು 8 ಗಂಟೆಗಳ ಒಳಗೆ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿತ್ತು. ಹಾಗಾಗಿ ವೈದ್ಯರು ಶಸ್ತ್ರಚಿಕಿತ್ಸೆೆಯನ್ನು ನಿರಾತಂಕವಾಗಿ ಮಾಡಬಹುದಾಗಿತ್ತು.

ಇಂದು ನಾವು ಡಿ-ಟ್ಯೂಬೋಕ್ಯುರಾರಿನ್‌ನನ್ನು ಸ್ನಾಯು ಸಡಿಲಕವಾಗಿ (ಮಸಲ್ ರಿಲಾಕ್ಸ್ಯಂಟ್‌ಸ್‌) ಬಳಸುತ್ತಿಲ್ಲ. ಅದಕ್ಕಿಂತಲೂ ಸುಧಾರಿತ ಔಷಧಿ. ಹಾಗೆಯೇ ಸ್ನಾಯು ಸಡಿಲಕಗಳ ಪ್ರಭಾವವನ್ನು ನಿಗ್ರಹಿಸಲು ಪ್ರತಿ ಔಷಧಿಗಳೂ ಸಿದ್ಧವಾಗಿವೆ. ಇವುಗಳನ್ನು ಅಸಿಟೈಲ್‌ಕೋಲಿನೆಸ್ಟೇರೇಸ್ ಇನ್‌ಹಿಬಿಟಾರ್ಸ್ ಎನ್ನುತ್ತಾರೆ. ಪಿರಿಡೋಸ್ಟಿಗ್ಮೈನ್, ನಿಯೋಸ್ಟಿಗ್ಮೈನ್, ಫೈಸೋಸ್ಟಿಗ್ಮೈನ್, ಎಡ್ರೋಫೋನಿಯಮ್ ಮುಂತಾದ ಔಷಧಿಗಳು ದೊರೆಯುತ್ತಿವೆ.

ಇಂದು ಬದಲಿ ಹೃದಯವನ್ನು ಯಶಸ್ವಿಯಾಗಿ ಜೋಡಿಸುತ್ತಿದ್ದೇವೆ. ಇದಕ್ಕೆೆ ಪ್ರಮುಖ ಕಾರಣ ಸಮರ್ಥ ಅರಿವಳಿಕೆ ಎಂಬುದರಲ್ಲಿ ಎರಡನೆಯ ಮಾತಿಲ್ಲ. ಹಾಗೆಯೇ ಸಮರ್ಥ ಸ್ನಾಯು ಸಡಿಲಕವೂ ಕಾರಣವಾಗಿದೆ ಎಂಬ ಮಾತನ್ನು ಒಪ್ಪಲೇಬೇಕಾಗುತ್ತದೆ. ಸ್ನಾಯು ಸಡಿಲಕವನ್ನು ಎಷ್ಟು ಬೇಕೋ ಅಷ್ಟು ಮಾತ್ರ ಶರೀರದಲ್ಲಿ ಪ್ರವಹಿಸಬಲ್ಲಂತೆ ಮಾಡಬಲ್ಲ ಅಸ್ತ್ರ-ಪ್ರತ್ಯಸ್ತ್ರಗಳು ಅರಿವಳಿಕೆಯ ತಜ್ಞರ ಬತ್ತಳಿಕೆಯಲ್ಲಿವೆ. ನಮ್ಮ ಬದುಕನ್ನು ಸಹನೀಯವಾಗಿಸಿದ ಎಲ್ಲ ಪೂರ್ವ ಸೂರಿಗಳಿಗೆ ನಮೋನ್ನಮಃ.

 

Leave a Reply

Your email address will not be published. Required fields are marked *

error: Content is protected !!