Tuesday, 26th November 2024

ಭೌತ ವಿಜ್ಞಾನ ಕ್ಷೇತ್ರಕ್ಕೆ ನೊಬೆಲ್: ಈ ಸಾಧನೆ ಬಗ್ಗೆ ತಿಳಿಯೋಣ ಬನ್ನಿ

ಅವಲೋಕನ

ಎಲ್.ಪಿ.ಕುಲಕರ್ಣಿ

ವೈದ್ಯಕೀಯ/ಜೀವ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಅರ್ಥ ಶಾಸ್ತ್ರ, ಶಾಂತಿ, ಸಾಹಿತ್ಯ ಹೀಗೆ 6 ಕ್ಷೇತ್ರಗಳಲ್ಲಿ ಮನುಕುಲಕ್ಕೆ
ಒಳಿತನ್ನು ಮಾಡಿದ ಮಹಾನ್ ಸಾಧಕರಿಗೆ ಪ್ರತೀ ವರ್ಷ ನೊಬೆಲ್ ಬಹುಮಾನವನ್ನು ಕೊಡಲಾಗುತ್ತಿದೆ. ಹಾಗಾದರೆ ಈ ಸಾಲಿನಲ್ಲಿ ಭೌತಶಾಸ್ತ್ರ/ ಭೌತ ವಿಜ್ಞಾನ ಕ್ಷೇತ್ರದ ಯಾವ ವಿಷಯದ ಸಂಶೋಧನೆಗೆ ನೊಬೆಲ್ ಸಿಕ್ಕಿದೆ ಹಾಗೂ ಪ್ರಶಸ್ತಿಗೆ ಆಯ್ಕೆ ಯಾದ ಆ ಸಾಧಕರಾರು ಎಂಬ ಬಗ್ಗೆ ತಿಳಿಯುವ ಒಂದು ಪುಟ್ಟ ಪ್ರಯತ್ನ ಈ ಲೇಖನದ್ದು: ಕಪ್ಪುರಂಧ್ರದ (ಬ್ಲ್ಯಾಕ್ ಹೋಲ) ಕುರಿತ ಸಂಶೋಧನೆಗಾಗಿ ಬ್ರಿಟನ್‌ನ ಆಕ್ಸ್ ಫರ್ಡ್ ವಿವಿಯ ಸಾಂಖಿಕ ಭೌತಶಾಸ್ತ್ರ, ಗಣಿತ ಹಾಗೂ ತತ್ವ ವಿಜ್ಞಾನ ಪ್ರೊಫೆಸರ್ ಆದ ರೋಜರ್ ಪೆನ್ರೋಸ್(89), ಜರ್ಮನಿಯ ಗಾಚಿಂಗ್‌ನಲ್ಲಿರುವ ಮ್ಯಾಕ್ಸ್ ಪ್ಲಾಂಕ್ ಇನ್ ಸ್ಟಿಟ್ಯೂಟ್ ಫಾರ್ ಫಿಸಿಕ್ಸ್‌ನ ಪ್ರೊಫೆಸರ್  ಆಗಿರುವ ರೈನ್ಹಾರ್ಡ್ ಗೆಂಜೆಲ(68) ಹಾಗೂ ಅಮೆರಿಕದ ಲಾಸ್ ಎಂಜಲೀಸ್‌ನ ಕ್ಯಾಲಿಫೊರ್ನಿಯಾ ವಿವಿಯ ಭೌತಶಾಸ್ತ್ರ
ಹಾಗೂ ಭೌತಶಾಸ್ತ್ರ ವಿಭಾಗಗಳ ಪ್ರೊಫೆಸರ್ ಆಗಿರುವ ಆಂಡ್ರಿಯಾ ಘೇಜ್(55) ಅವರು 2020ನೇ ಸಾಲಿನ ಭೌತ ವಿಜ್ಞಾನ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬ್ರಹ್ಮಾಂಡದಲ್ಲಿನ ಆಕರ್ಷಕವಾದ ವಿದ್ಯಮಾನವಾದ ಕಪ್ಪು ರಂಧ್ರದ ಆವಿಷ್ಕಾರಕ್ಕಾಗಿ ಮೂವರು ಭೌತವಿಜ್ಞಾನಿಗಳನ್ನು
ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಸಮಿತಿಯು ತಿಳಿಸಿದೆ. ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಜೊತೆ ಕಾರ್ಯ ನಿರ್ವಹಿಸಿದ್ದ ಆಕ್ಸರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೆನ್ರೋಸ್, ಕಪ್ಪುರಂಧ್ರ ರಚನೆಯಾಗುತ್ತದೆ ಎನ್ನುವುದನ್ನು 1965ರಲ್ಲಿ ಪತ್ತೆಹಚ್ಚಿದ್ದರು. ಸಾಪೇಕ್ಷತಾ ಸಿದ್ಧಾಂತವು (ಥಿಯರಿ ಆಫ್‌ ರಿಲೇಟಿವಿಟಿ) ಕಪ್ಪುರಂಧ್ರದ ರಚನೆಗೆ ಕಾರಣವಾಗುತ್ತದೆ’  ಎನ್ನುವು ದನ್ನು ಅವರು ಆವಿಷ್ಕಾರ ಮಾಡಿದ್ದರು. ಸಾಗರ ಸಮುದ್ರ ಗಳಿಗಿರುವಂತೆ ಕಪ್ಪುಕುಳಿ (ಬ್ಲ್ಯಾಕ್ ಹೋಲ್)ಗೂ ಅಂಚು ಇರುತ್ತದೆ.
ಅದನ್ನು ಈವೆಂಟ್ ಹೊರೈಜಾನ್ ಅಂದರೆ ಘಟನಾ ಕ್ಷಿತಿಜ ಎಂದು ಕರೆಯುತ್ತಾರೆ. ಈ ಘಟನಾ ಕ್ಷಿತಿಜದ ಬಗ್ಗೆ ಗಣಿತೀಯ ಕೆಲವು ಸಾಧನೆಗಳನ್ನು ನಮ್ಮ ಭಾರತೀಯ ಭೌತ ವಿಜ್ಞಾನಿ ಹಾಗೂ ‘ಬ್ಲ್ಯಾಕ್ ಹೋಲ್ ಮ್ಯಾನ್ ಆಫ್‌ ಇಂಡಿಯಾ ’ ಎಂದು ಪ್ರಸಿದ್ಧಿ ಪಡೆದಿದ್ದ ಸಿ.ವಿ.ವಿಶ್ವೇಶ್ವರ ಅವರು 1968ರ ಸಾಧಿಸಿ ತೋರಿಸಿದ್ದರು. ಅವರು ಇತ್ತೀಚೆಗೆ 16 ಜನವರಿ 2017ರಂದು ನಮ್ಮನ್ನಗಲಿ ದರು.

ಒಂದು ವೇಳೆ ಅವರು ಈಗ ಜೀವಿಸಿದ್ದರೆ, ಈ ಸಾರಿಯ ನೊಬೆಲ್ ಪ್ರಶಸ್ತಿಗೆ ಭಾಜನರಾಗುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆಕಾಶಗಂಗೆಯ ಮಧ್ಯದಲ್ಲಿ ನಕ್ಷತ್ರಗಳ ಕಕ್ಷೆಯನ್ನು ನಿಯಂತ್ರಿಸುವ ಅಗೋಚರ ಹಾಗೂ ಭಾರಿ ಗಾತ್ರದ ವಸ್ತು ವೊಂದಿದೆ ಎನ್ನುವುದನ್ನು ಪತ್ತೆಹಚ್ಚಿರುವುದಕ್ಕಾಗಿ ರೈನ್ಹಾರ್ಡ್ ಗೆಂಜೆಲ್ ಹಾಗೂ ಆಂಡ್ರಿಯಾ ಘೇಜ್ ಅವರಿಗೆ ಜಂಟಿಯಾಗಿ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಪ್ರಸ್ತುತ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಭೌತವಿಜ್ಞಾನ ಹಾಗೂ ಖಗೋಳ ವಿಜ್ಞಾನ ವಿಭಾಗದಲ್ಲಿ  ಪ್ರಾಧ್ಯಾಪಕ ರಾಗಿರುವ ಘೇಜ್ ಅವರು, ಭೌತವಿಜ್ಞಾನ ನೊಬೆಲ್ ಪ್ರಶಸ್ತಿ ಪಡೆಯಲಿರುವ ನಾಲ್ಕನೇ ಮಹಿಳೆ. ನಮ್ಮ ಆಕಾಶಗಂಗೆ (ಮಿಲ್ಕಿವೇ) ಮಧ್ಯದಲ್ಲಿ ಇರುವ ಸಗಿಟರಿಯಸ್ ಎ’ ಎಂಬ ಪ್ರದೇಶದ ಮೇಲೆ 1990ರಲ್ಲಿ ಗೆಂಜೆಲ್ ಹಾಗೂ ಘೇಜ್ ಸಂಶೋಧನೆ ಆರಂಭಿಸಿದ್ದರು. ವಿಶ್ವದ ಬೃಹತ್ ಟೆಲಿಸ್ಕೋಪ್‌ಗಳನ್ನು ಬಳಸಿಕೊಂಡು, ಉಳಿದೆ ನಕ್ಷತ್ರಗಳನ್ನು ನಿಯಂತ್ರಿಸುವ, ಸೂರ್ಯನ ಗಾತ್ರಕ್ಕಿಂತ 400 ಲಕ್ಷ ಪಟ್ಟು ದೊಡ್ಡದಿರುವ ಅಗೋಚರ ವಸ್ತುವನ್ನು ಆವಿಷ್ಕಾರ ಮಾಡಿದ್ದರು.

ಪ್ರಶಸ್ತಿ ಮೊತ್ತ 8.17 ಕೋಟಿ ರು. ಆಗಿದ್ದು, ಇದರಲ್ಲಿ ಅರ್ಧಭಾಗವನ್ನು ಪೆನ್ರೋಸ್ ಪಡೆಯಲಿದ್ದಾರೆ. ‘ವಿಜ್ಞಾನಿಗಳಾಗಬೇಕು ಎಂದು ಕನಸು ಕಾಣುತ್ತಿರುವ ಯುವತಿಯರಿಗೆ ಕಣ್ಣೆದುರಿಗೇ ಆದರ್ಶ ವ್ಯಕ್ತಿಗಳು ಇದ್ದಾಗ ಆಗುವ ಪರಿಣಾಮವೇ ಬೇರೆ ’ ಎನ್ನುತ್ತಾರೆ ಭೌತ ವಿಜ್ಞಾನಿ ಆಂಡ್ರಿಯಾ ಘೇಜ್.

ಆದಿ ಅಂತ್ಯವಿಲ್ಲದ ಈ ನಮ್ಮ ತಾರಾಗಣದ ನಡುವಿನ ನಮ್ಮ ವಿಶ್ವದ ಕೆಲವು ನಿರ್ದಿಷ್ಟ ಪ್ರದೇಶಗಳು ಸೇಮ್ ಮಳೆಗಾಲದಲ್ಲಿ ರಸ್ತೆಯ ಮೇಲೆ ಬಾಯ್ತೆರೆದ ತಗ್ಗುಗಳು, ಮ್ಯಾನ್‌ಹೋಲ್‌ಗಳಂತಿವೆ. ತೀವ್ರ ಗುರುತ್ವಾಕರ್ಷಣ ಶಕ್ತಿ ಈ ಗುಂಡಿಗಳಿಗಿರುವುದರಿಂದ ಇಲ್ಲಿ ಯಾವುದೇ ಆಕಾಶ ಕಾಯ ಬಿದ್ದರೂ ಅದು ಮರಳಿ ಬರುವುದು ಅಸಾಧ್ಯ. ಇವುಗಳ ತೀವ್ರತೆ ಹೇಗಿದೆ ಎಂದರೆ, ಒಂದು ವೇಳೆ ಬೆಳಕಿನ ಒಂದು ಕಿರಣ ಈ ಪ್ರದೇಶದಲ್ಲಿ ಹೋದರೆ ಅದು ಮರಳಿ ಬರಲಾರದು. ಸಾಮಾನ್ಯವಾಗಿ ಹೇಳುವುದಾದರೆ ಬೆಳಕನ್ನೂ
ಸಹ ನುಂಗಿ ಬಿಡುವ ಸಾಮರ್ಥ್ಯ!

ಹೀಗಾಗಿ ಕಗ್ಗತ್ತಲ ಗುಂಡಿಗಳಂತೆ ಗೋಚರವಾಗುವ ಇವು ತಮ್ಮತ್ತ ಬಂದ ಬೃಹತ್ ಗಾತ್ರದ ನಕ್ಷತ್ರ, ಗ್ರಹಗಳಿರಲಿ ಇಲ್ಲವೇ ಅತೀ ಚಿಕ್ಕ ಕಣಗಳಾದ ಪ್ರೊಟಾನ್, ನ್ಯೂಟ್ರಾನ್, ಇಲೆಕ್ಟ್ರಾನ್‌ಗಳಿರಲಿ ಇವುಗಳನ್ನು ಕ್ಷಣ ಮಾತ್ರದಲ್ಲಿ ನುಂಗಿ ಅರಗಿಸಿಕೊಂಡು
ಬಿಡುತ್ತವೆ. ಮರಳಿ ಯಾವ ಕಣವೂ ಇವುಗಳಿಂದ ಹೊರಬರುವುದಿಲ್ಲ. ಇಂತಹ ಪ್ರದೇಶಗಳು ಕೋಟ್ಯಂತರ ಸಂಖ್ಯೆಯಲ್ಲಿ ಈ ನಮ್ಮ ವಿಶ್ವದಲ್ಲಿವೆ. ಇಂತವುಗಳನ್ನೇ ಬ್ಲ್ಯಾಕ್ ಹೋಲ, ಕಪ್ಪು ಕುಳಿ, ಕೃಷ್ಣ ರಂಧ್ರ ಎಂಬ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ.

ಬ್ಲ್ಯಾಕ್ ಹೋಲ್ ಎಂಬ ಪದವು ಇತ್ತೀಚಿನದಾಗಿದೆ. ಅದನ್ನು 1969ರಲ್ಲಿ ಅಮೆರಿಕದ ವಿಜ್ಞಾನಿಯಾದ ಜಾನ್ ವೀಲರ್ ಅವರು ನಕಾಶೆಗಳ ವಿವರಣೆಗೆ ಬಳಸಿದರು. ಇದಕ್ಕೆ ಕೊನೆಪಕ್ಷವೆಂದರೂ ಎರಡನೂರು ವರ್ಷಗಳ ಇತಿಹಾಸವಿದೆ. ವಿಜ್ಞಾನಿ ರೊಯಿ ಮರ್‌ನ ಸಂಶೋಧನೆಯಿಂದ ಬೆಳಕು ಪರಿಮಿತ ವೇಗದಲ್ಲಿ ಸಾಗುವುದರಿಂದ ಗುರುತ್ವಾಕರ್ಷಣೆಯು ಅದರ ಮೇಲೆ ನಿರ್ಣಾಯಕ ಪರಿಣಾಮವನ್ನುಂಟು ಮಾಡುತ್ತದೆ ಎಂದು ತಿಳಿದುಬಂತು. ಈ ತರ್ಕದ ಆಧಾರದ ಮೇಲೆ ಕೇಂಬ್ರಿಡ್ಜ್‌ನ ಜೋನ್ ಮಿಶೆಲ್ ಅವರು
‘ಫಿಲಾಸೊಫಿಕಲ್ ಟ್ರಾನ್ಸ್ಯಾಕ್ಷನ್ಸ್ ಆಫ್‌ ದಿ ರಾಯಲ್ ಸೊಸೈಟಿ ಆಫ್‌ ಲಂಡನ್ ’ ಪತ್ರಿಕೆಯಲ್ಲಿ 1783ರಲ್ಲಿ ಲೇಖನವೊಂದನ್ನು ಬರೆದರು. ಅದರಲ್ಲಿ ನಕ್ಷತ್ರವೊಂದು ಸಾಕಷ್ಟು ಭಾರವೂ, ಅಡಕವೂ ಆದುದಾಗಿದ್ದು. ಅದಕ್ಕೆ ಎಷ್ಟು ಗುರುತ್ವಾಕರ್ಷಣ ಬಲವಿರುತ್ತದೆ ಎಂದರೆ ಬೆಳಕು ಕೂಡ ಅದರಿಂದ ತಪ್ಪಿಸಿಕೊಳ್ಳಲಾರದು.

ನಕ್ಷತ್ರದ ಮೇಲ್ಮೈಯಿಂದ ಹೊರಬಿದ್ದ ಬೆಳಕನ್ನು ಅದು ತುಂಬಾ ದೂರಕ್ಕೆ ಹೋಗುವ ಮೊದಲೇ ನಕ್ಷತ್ರದ ಗುರುತ್ವಾಕರ್ಷಣ ಬಲವು ಹಿಂದಕ್ಕೆ ಎಳೆಯುತ್ತದೆ. ಮಿಶೆಲ್ ಅವರು ಇಂತಹ ಅನೇಕ ನಕ್ಷತ್ರಗಳು ಆಕಾಶದಲ್ಲಿವೆ ಎಂದು ಪ್ರತಿಪಾದಿಸಿದರು. ಇವೆಲ್ಲವನ್ನೂ ನಾವು ನೋಡಲಾಗುವುದಿಲ್ಲ. ಏಕೆಂದರೆ ಅವುಗಳಿಂದ ಹೊರಟಿರುವ ಬೆಳಕು ಇನ್ನೂ ನಮ್ಮನ್ನು ತಲುಪಿಯೇ ಇಲ್ಲ. ಆದರೆ ಅವುಗಳ ಗುರುತ್ವಾಕರ್ಷಣೆಯ ಬಲವು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ. ಇಂತಹ ನಕ್ಷತ್ರಗಳನ್ನೇ ಈಗ ನಾವು ಬ್ಲ್ಯಾಕ್ ಹೋಲ್ಸ ಎಂದು ಕರೆಯುವುದು.

ಹಾಗಾದರೆ ಈ ಬ್ಲ್ಯಾಕ್ ಹೋಲ್ ಹೇಗೆ ರಚನೆಯಾಗುತ್ತದೆ? ಈ ಬ್ಲ್ಯಾಕ್ ಹೋಲ್ ರಚನೆಯಾಗುವುದನ್ನು ತಿಳಿಯುವುದಕ್ಕಿಂತಲೂ ಮೊದಲು ನಾವು ನಕ್ಷತ್ರದ ಉಗಮದ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ. ಏಕೆಂದರೆ ನಕ್ಷತ್ರದ ವೃದ್ಧಾಪ್ಯದ ಸ್ಥಿತಿಯೇ ಕಪ್ಪು ಕುಳಿ. ಬೃಹತ್ ಪ್ರಮಾಣದ ಅನಿಲವು ಬಹುಶಃ ಜಲಜನಕ ತನ್ನಲ್ಲಿರುವ ಗುರುತ್ವಾಕರ್ಷಣೆಯ ಕಾರಣದಿಂದಾಗಿ ನಕ್ಷತ್ರವೊಂದು ರೂಪುಗೊಳ್ಳುತ್ತದೆ. ಅಂದರೆ ವ್ಯೂಮದಲ್ಲಿರುವ ಜಲಜನಕದ ಬೃಹತ್ ಗಾತ್ರದ ಮೋಡಗಳು ತಮ್ಮ ಸಮೀಪಕ್ಕೆ ಬಂದ ಚಿಕ್ಕ ಗಾತ್ರದ ಮೋಡಗಳನ್ನು ಆಕರ್ಷಿಸಿ ಬೃಹತ್ ರಾಶಿಯನ್ನೊಳಗೊಂಡ ಕಾಯವಾಗಿ ರೂಪುಗೊಳ್ಳುತ್ತವೆ.

ಕೇವಲ ಒಂದು ಪ್ರೋಟಾನ್ ಹಾಗೂ ಒಂದು ಎಲೆಕ್ಟ್ರಾನ್ ಒಳಗೊಂಡಿರುವ ಈ ಹೈಡ್ರೋಜನ್ ಮೋಡಗಳಲ್ಲಿ ಬೈಜಿಕ ಸಮ್ಮಿಲನ ಕ್ರಿಯೆ (ನ್ಯೂಕ್ಲಿಯರ್ ಪ್ಯೂಜನ್ – Nuclear fusion)ಯ ಪರಿಣಾಮದಿಂದ ಹೀಲಿಯಂ ಪರಮಾಣು ರೂಪುಗೊಳ್ಳುತ್ತವೆ. ಇಲ್ಲಿ ಬೃಹತ್ ಪ್ರಮಾಣದ ಅನಿಲಗಳ ಸಂಕುಚಿತದಿಂದ ಸಾಂದ್ರತೆಯೂ, ಒತ್ತಡವೂ ಹೆಚ್ಚಾಗುತ್ತಾ ಹೋಗುತ್ತದೆ. ಕ್ರಮೇಣ ಕೇಂದ್ರದಲ್ಲಿ ಗೋಲಾಕಾರದ ರಾಶಿ ರೂಪುಗೊಳ್ಳುತ್ತದೆ.

ಹೆಚ್ಚು ಕಡಿಮೆ ಮೋಡದ ರಾಶಿಯ ಶೇ.99 ಭಾಗ ಕೇಂದ್ರದಲ್ಲಿಯೇ ಇರುತ್ತದೆ. ಈ ಹಂತದಲ್ಲಿ ಹೊರಹೊಮ್ಮಿದ ಬೆಳಕು ಮತ್ತು ಶಾಖ ಶಕ್ತಿಗಳು ಆ ನಕ್ಷತ್ರವನ್ನು ಹೊಳೆಯುವಂತೆ ಮಾಡುತ್ತವೆ. ನಕ್ಷತ್ರದ ಈ ಹಂತವನ್ನು ಆದಿ ನಕ್ಷತ್ರ (ಪ್ರೊಟೊಸ್ಟಾರ್ ) ಎನ್ನಲಾಗುತ್ತದೆ. ಹೀಗೆ ಆದಿ ನಕ್ಷತ್ರ ರೂಪುಗೊಳ್ಳಲು ಮಿಲಿಯಾಂತರ ವರ್ಷ ಹಿಡಿಯುತ್ತದೆ. ನಂತರ ಹೊರಮುಖವಾಗಿ ಪ್ರಯೋಗ ವಾಗುವ ಬಲವು ನಕ್ಷತ್ರವನ್ನು ವಿಕಸನಗೊಳಿಸುತ್ತದೆ. ಆದರೆ ಗುರುತ್ವದ ಒಳಮುಖ ಸೆಳೆತ ಇದಕ್ಕೆ ಸಮನಾದ ಸಂತುಲನ ಉಂಟುಮಾಡುತ್ತದೆ. ಇದರಿಂದ ನಕ್ಷತ್ರವು ‘ಸಮಸ್ಥಿತಿ’ ತಲುಪುತ್ತದೆ. ನಕ್ಷತ್ರಗಳ ರಾಶಿಯನ್ನು ಅವಲಂಬಿಸಿ ಅವುಗಳ
ಸ್ಥಿರಸ್ಥಿತಿಯು ಹಲವು ಬಿಲಿಯನ್ ವರ್ಷಗಳವರೆಗೆ ಇರಬಹುದು. ಕಡಿಮೆ ರಾಶಿಯುಳ್ಳ ನಕ್ಷತ್ರಗಳಲ್ಲಿನ ಪ್ರೋಟಾನ್ ನಿಧಾನಗತಿಯಲ್ಲಿ ಸಮ್ಮಿಲನಗೊಳ್ಳುತ್ತದೆ.

ಅವು ಪೇಲವಾಗಿರುತ್ತವೆ ಮತ್ತು ಹೆಚ್ಚು ಕಾಲ ಜೀವಂತವಾಗಿರುತ್ತವೆ. ಸದ್ಯ ನಮ್ಮ ಸೂರ್ಯ ಸರಿಸುಮಾರು ಐದು ಬಿಲಿಯನ್ ವರ್ಷಗಳಿಂದ ಇದೇ ಹಂತದಲ್ಲಿ ಮುಂದುವರಿಯುತ್ತಿದ್ದೇನೆ. ಹೀಗೆ ಸಮಸ್ಥಿತಿ ತಲುಪಿದ ನಕ್ಷತ್ರದಿಂದ ಶಕ್ತಿಯು ನಿಯಮಿತವಾಗಿ ಹೊರಹೊಮ್ಮುತ್ತಿರುತ್ತದೆ. ವಿಕಿರಣ ಗಳಿಂದಾದ ಹೊರಮುಖ ಒತ್ತಡವು, ಅದರ ವಿರುದ್ಧ ದಿಕ್ಕಿನ ಗುರುತ್ವ ಒಳಮುಖ ಒತ್ತಡ ಕ್ಕಿಂತ ಬಹಳಷ್ಟು ಹೆಚ್ಚಾದಾಗ ನಕ್ಷತ್ರದ ಹೊರಪದರಗಳು ಹೆಚ್ಚುತ್ತವೆ. ಅದರ ಮೇಲ್ಮೆ ವಿಸ್ತೀರ್ಣ ಹೆಚ್ಚಾಗುವುದರಿಂದ ನಕ್ಷತ್ರದ ತಾಪ ಕಡಿಮೆಯಾಗುತ್ತದೆ. ಆದ್ದರಿಂದ ಅದು ಕಡಿಮೆ ಆವರ್ತದ ವಿಕಿರಣಗಳನ್ನು ಸೂಸುತ್ತದೆ. ಈ ಹಂತದಲ್ಲಿ ನಕ್ಷತ್ರವು ಕೆಂಪನೆಯ ಬಣ್ಣದಿಂದ ಕೂಡಿರುತ್ತದೆ. ಆದ್ದರಿಂದ ನಕ್ಷತ್ರದ ಈ ಸ್ಥಿತಿಯನ್ನು ‘ಕೆಂಪು ದೈತ್ಯ’ಎಂದು ಕರೆಯಲಾಗುತ್ತದೆ. ಇಲ್ಲಿಯ
ವರೆಗೆ ಎ ನಕ್ಷತ್ರಗಳ ವಿಕಸನದ ಹಂತಗಳು ಒಂದೇ ಆಗಿರುತ್ತವೆ.

ನಕ್ಷತ್ರದ ಹೊರಪದರಗಳು ವ್ಯಾಕೋಚನೆಗೊಳ್ಳುತ್ತಾ ಹೋದಂತೆ ಗರ್ಭ ಸಂಕುಚಿಸಿ ಇನ್ನೂ ಬಿಸಿಯಾಗುತ್ತದೆ. ತಾಪ ಹತ್ತರ ಘಾತ ಎಂಟು ಕೆಲ್ವಿನ್ ತಲುಪಿದಾಗ ಗರ್ಭದಲ್ಲಿರುವ ಹೀಲಿಯಂ ಪರಮಾಣುವಿನ ನ್ಯೂಕ್ಲಿಯಸ್ ಗಳು ಪರಿವರ್ತನೆಗೊಂಡು ಕಾರ್ಬನ್ ಬೀಜಗಳಾಗುತ್ತವೆ. ಗರ್ಭದಲ್ಲಿ ಹೀಲಿಯಂ ಸಮ್ಮಿಲನ ಪೂರ್ಣಗೊಂಡನಂತರ ಗರ್ಭವು ಇನ್ನಷ್ಟು ಕುಸಿಯ ಲಾರದು, ಕೆಂಪು ದೈತ್ಯದ ಉಬ್ಬಿದ ಹೊರಪದರ ಕಳಚಿಕೊಂಡು ದೂರಕ್ಕೆ ಸಾಗುತ್ತದೆ. ಇದರಿಂದ ಹೈಡ್ರೋಜನ್ನಿನ ಮೋಡವಾಗುತ್ತದೆ. ಈ
ಮೋಡವನ್ನು ‘ಗ್ರಹೀಯ ನಿಹಾರಿಕೆ ’ ಎನ್ನಲಾಗುತ್ತದೆ. ಈ ಕೆಂಪುದೈತ್ಯ ಅವಸ್ಥೆಯನ್ನು ತಲುಪಿದ ನಕ್ಷತ್ರಗಳು ಮುಂದೇನಾಗುತ್ತವೆ ಎಂಬುದು ನಕ್ಷತ್ರದ ರಾಶಿಯನ್ನಅವಲಂಬಿಸುತ್ತದೆ. ನಕ್ಷತ್ರವು ತನ್ನ ಹೊರ ಕವಚವನ್ನು ಕಳಚಿಕೊಂಡ ನಂತರ ಅದರ ರಾಶಿಯು 1.4 ಸೌರರಾಶಿಗಿಂತ ಕಡಿಮೆ ಇದ್ದಲ್ಲಿ, ತನ್ನದೇ ಗುರುತ್ವದಿಂದಾಗಿ ನಕ್ಷತ್ರ ಕುಸಿಯ ತೊಡಗುತ್ತದೆ.

ತಾಪ ಮತ್ತು ಒತ್ತಡ ಹೆಚ್ಚಾದ ಕಾರಣ, ನಕ್ಷತ್ರ ಇನ್ನಷ್ಟು ಕುಸಿಯಲಾರದು. ತಾಪ ಬಹಳ ಹೆಚ್ಚಾದಾಗ ನಕ್ಷತ್ರ ಅಧಿಕ ಆವರ್ತವುಳ್ಳ ಕಿರಣಗಳನ್ನು ಹೊರ ಸೂಸಿ ‘ಶ್ವೇತ ಕುಬ್ಜ’ ವಾಗಿ ರೂಪುಗೊಳ್ಳುತ್ತದೆ. 1930ರಲ್ಲಿ ಭಾರತದ ಭೌತವಿಜ್ಞಾನಿ ಸುಬ್ರಮಣ್ಯನ್
ಚಂದ್ರಶೇಖರ್ ಅವರು ಆರ್.ಎಚ್. ಪೌಲರ್ ಅವರ ಜೊತೆಗೂಡಿ ಶ್ವೇತ ಕುಬ್ಜಗಳ ಸಿದ್ಧಾಂತವನ್ನು ನಿರೂಪಿಸಿದರು.  ನಕ್ಷತ್ರದ ರಾಶಿಯು 1.4 ಸೌರ ರಾಶಿಗಿಂತ ಹೆಚ್ಚಾಗಿದ್ದಲ್ಲಿ, ಅದು ಹೆಚ್ಚು ಸಾಂದ್ರತೆ ಇರುವ ಕಪ್ಪು ಕುಳಿಯಾಗಿ ಕೊನೆಗೊಳ್ಳುತ್ತದೆ ಎಂಬುದೇ ಅವರ ಪ್ರತಿಪಾದನೆ. ಹೀಗಾಗಿ ಇದನ್ನು ಭೌತಶಾಸದಲ್ಲಿ ಚಂದ್ರಶೇಖರ ಮಿತಿ ಎನ್ನಲಾಗುತ್ತದೆ.

ಇದುವರೆಗೂ ಕಪ್ಪುಕುಳಿಯ ಚಿತ್ರವನ್ನು ಯಾರಿದಂಲೂ ಸೆರೆಹಿಡಿಯಲು ಸಾಧ್ಯವಾಗಿದ್ದಿಲ್ಲ. ಆದರೆ ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಕಪ್ಪುಕುಳಿಯ ಚಿತ್ರವನ್ನು ವಿಜ್ಞಾನಿಗಳು ಸೆರೆಹಿಡಿದು ಮಹಾನ್ ಸಾಧನೆಯನ್ನು ಮಾಡಿಬಿಟ್ಟರು. ಇಷ್ಟಕ್ಕೆ ಸುಮ್ಮ ನಿರದ ಅವರು, ಆ ಕಪ್ಪು ಕುಳಿಯಲ್ಲಿ ಏನೇನಿದೆ? ಅದು ನುಂಗಿದ ಕಾಯಗಳು ಎಲ್ಲಿ ಹೋಗುತ್ತವೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಂದಿನ ದಿನಮಾನಗಳಲ್ಲಿ ಸಂಶೋಧನೆಯ ಮೂಲಕ ಉತ್ತರಿಸಲು ಸನ್ನದ್ಧರಾದಂತೆ ತೋರುತ್ತದೆ.