Tuesday, 26th November 2024

ನಾವೆಂದೂ ಮರೆಯದ ಭಾರತ ರತ್ನ

ತನ್ನಿಮಿತ್ತ

ಎಲ್.ಪಿ.ಕುಲಕರ್ಣಿ

ಆ ಶಾಲೆಯಲ್ಲಿ ಪುಟ್ಟ ಬಾಲಕನೊಬ್ಬ ನಾಲ್ಕನೇ ತರಗತಿ ಓದುತ್ತಿದ್ದ. ರಾಮಕೃಷ್ಣ ಅಯ್ಯರ್ ಅಲ್ಲಿ ಗಣಿತದ ಮೇಷ್ಟ್ರಾಗಿದ್ದರು. ಒಮ್ಮೆ ಈ ಬಾಲಕ ಅರಿವಿಲ್ಲದೇ ಅವರ ತರಗತಿಗೆ ನುಗ್ಗಿದ. ಅಯ್ಯರ್ ಗೆ ಸಿಟ್ಟು ಬಂದಿತು. ಎಲ್ಲ ವಿದ್ಯಾರ್ಥಿಗಳ ಮುಂದೆ ಬಾಲಕ ನಿಗೆ ಬೆತ್ತದಿಂದ ನಾಲ್ಕು ಬಾರಿಸಿದರು. ಆದರೆ ಬಾಲಕ ಏನೂ ಮಾಡುವಂತಿರಲಿಲ್ಲ. ಸ್ವಾರಸ್ಯಕರ ಸಂಗತಿಯೆಂದರೆ ಮುಂದೆ ಈ ಬಾಲಕನೇ ಗಣಿತದಲ್ಲಿ ಅತ್ಯುತ್ತಮ ಅಂಕಗಳಿಸಿದ. ವಿಷಯ ತಿಳಿದ ಅಯ್ಯರ್‌ಗೆ ಖುಷಿಯೋ ಖುಷಿ!

ಆಯ್ಯರ್ ಎಲ್ಲರ ಮುಂದೆ ಹೀಗೆ ಹೇಳಿದರಂತೆ – ‘ನಾನು ಯಾರನ್ನೇ ಬೆತ್ತದಿಂದ ಹೊಡೆಯಲಿ. ಅಂಥ ವಿದ್ಯಾರ್ಥಿ ಮುಂದೆ ದೊಡ್ಡ
ಮನುಷ್ಯನಾಗುತ್ತಾನೆ’. ಅವರ ಮಾತು ಅಕ್ಷರಶಃ ನಿಜವಾಯಿತು. ಆ ಪುಟ್ಟ ಬಾಲಕ ಬೇರಾರು ಅಲ್ಲ ಭಾರತದ ಕ್ಷಿಪಣಿ ತಜ್ಞ, ವಿಜ್ಞಾನಿ, ಮಕ್ಕಳ ನೆಚ್ಚಿನ ಮೇಷ್ಟ್ರು, ಸೀದಾಸಾದಾ ಮನುಷ್ಯ, ಹೆಮ್ಮೆಯ ರಾಷ್ಟ್ರಪತಿ, ಭಾರತರತ್ನ ಡಾ.ಎಪಿಜೆ ಅಬ್ದುಲ್ ಕಲಾಂ.
ಅಕ್ಟೋಬರ್ 15 ಅವರ ಜನ್ಮ ದಿನ. ಸದ್ಯ ಈಗೇನಾದರೂ ಅವರು ಇದ್ದಿದ್ದರೆ, 89ನೇ ಹುಟ್ಟುಹಬ್ಬವನ್ನು  ಆಚರಿಸಿಕೊಳ್ಳುತ್ತ ಲಿದ್ದರು. ಅಬ್ದುಲ್ ಕಲಾಂರ ಶಿಕ್ಷಕರೊಬ್ಬರ ಹೆಸರು ಶಿವಸುಬ್ರಹ್ಮಣ್ಯ ಅಯ್ಯರ್.

ಜಾತಿಯಲ್ಲಿ ಬ್ರಾಹ್ಮಣ; ಮೂಢನಂಬಿಕೆ, ಕಂದಾಚಾರ, ಸಂಕುಚಿತ ಸ್ವಭಾವ ಅವರಲ್ಲಿರಲಿಲ್ಲ. ವಿಶಾಲ ಮನೋಧರ್ಮದವ ರಾಗಿದ್ದರು. ಒಮ್ಮೆ ಅವರು ಕಲಾಂ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಕಲಾಂ ಮನೆಗೆ ಬಂದ ಮೇಲೆ ಅವರ ಜತೆಯೇ ಊಟ ಮಾಡಿದರು. ಆದರೆ ಅಯ್ಯರ್‌ರ ಧರ್ಮಪತ್ನಿಗೆ ಇದು ಸರಿ ಬರಲಿಲ್ಲ. ಈ ಅಂಶವನ್ನು ಕಲಾಂ ಸೂಕ್ಷ್ಮವಾಗಿ ಗಮನಿಸಿದರು.
ಮುಂದಿನ ವಾರದ ಕೊನೆಯಲ್ಲಿ ಪುನಃ ಊಟಕ್ಕೆ ಬರುವಂತೆ ಅಯ್ಯರ್ ಅವರು ಕಲಾಂರನ್ನು ಆಮಂತ್ರಿಸಿದರು. ಆದರೆ ಕಲಾಂ ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಿದರು. ಆಗ ಅಯ್ಯರ್ ಹೇಳಿದರು – ‘ಯಾವುದೇ ಬದಲಾವಣೆಗಳು ಆಗಬೇಕಾದರೆ ಅದಕ್ಕೆ
ಬಹಳಷ್ಟು ವಿಘ್ನಗಳು ಬರುತ್ತವೆ. ಅವನ್ನೆ ದೃಢ ನಿರ್ಧಾರದಿಂದ ಎದುರಿಸಬೇಕು.’ ಮತ್ತೊಮ್ಮೆ ಕಲಾಂ ಅಯ್ಯರರ ಮನೆಗೆ ಹೋದಾಗ ಅವರ ಪತ್ನಿ ಬದಲಾದಂತೆ ಕಂಡುಬಂದಿತು. ಊಟದ ಸಮಯದಲ್ಲಿ ಅಯ್ಯರ್ ಪತ್ನಿ ಸಾಕಷ್ಟು ಸಹಕರಿಸಿದರು.

ಕಲಾಂರಿಗೆ ಮೇಷ್ಟ್ರ ಪತ್ನಿಯದ ಬದಲಾವಣೆ ಆಶ್ಚರ್ಯ ಮತ್ತು ಸಂತೋಷವನ್ನುಂಟು ಮಾಡಿತು. ಅಯ್ಯರರ ನಿರಂತರ
ಪ್ರಯತ್ನವು ಅವರ ಪತ್ನಿಯವರಲ್ಲಿ ವಿಶಾಲ ಮನೋಭಾವನೆ ಮೂಡಲು ಕಾರಣವಾಗಿತ್ತು. ಇಂತಹ ಡಾ. ಎಪಿಜೆ ಅಬ್ದುಲ್ ಕಲಾಂ ಜನಿಸಿದ್ದು 15ನೇ ಅಕ್ಟೋಬರ್ 1931ರಂದು. ರಾಮೇಶ್ವರಂ ಪಟ್ಟಣದಲ್ಲಿ. ಇವರ ತಂದೆ ಜೈನುಲಾಬ್ದೀನರು ಧಾರ್ಮಿಕ
ಮನೋಭಾವದವರು. ಅವರು ಸನ್ಯಾಸಿಯಂತೆ ಜೀವಿಸುತ್ತಿದ್ದರೂ ಮನೆಮಂದಿಯ ಮೂಲಭೂತ ಅವಶ್ಯಕತೆಗಳಿಗೆ ಕೊರತೆ ಉಂಟು ಮಾಡಲಿಲ್ಲ. ಅವರ ಕುಟುಂಬದ ಸದಸ್ಯರು ಬಹಳ ಅನ್ಯೋನ್ಯತೆಯಿಂದಿದ್ದರು.

ಪ್ರತಿ ದಿನ ರಾತ್ರಿ ವೇಳೆ ಊಟಮಾಡುವಾಗ ಅವರು ಕೌಟುಂಬಿಕ ವಿಷಯ ಗಳಿಂದ ಹಿಡಿದು ಅಧ್ಯಾತ್ಮಿಕ ವಿಷಯಗಳವರೆಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಕಲಾಂರ ತಾಯಿ ಆಶಿಯಮ್ಮ ಸಾಕ್ಷಾತ್ ಅನ್ನಪೂರ್ಣೇಶ್ವರಿ. ಆಕೆಯ ವಂಶಜರು ಒಳ್ಳೆಯ
ಸಂಪ್ರದಾಯ ಹಾಗೂ ಸುಸಂಸ್ಕೃತ ಪರಂಪರೆಯಿಂದ ಬಂದವರು. ಇವರ ಪೂರ್ವಜರೊಬ್ಬರಿಗೆ ಅಂದಿನ ಬ್ರಿಟಿಷ್ ದೊರೆಗಳು ಬಹದ್ದೂರ್ ಎಂಬ ಬಿರುದು ನೀಡಿದ್ದರು.

ಕಲಾಂರ ತಂದೆ ಸಾತ್ವಿಕ ವ್ಯಕ್ತಿಯಾಗಿದ್ದರಿಂದ ಇವರಿಗೆ ಎಲ್ಲ ಧರ್ಮದ ವ್ಯಕ್ತಿಗಳೂ ಪರಿಚಯ ವಿದ್ದರು. ಅಲ್ಲದೆ ಹಲವು ಹಿಂದೂ ವಿದ್ವಾಂಸರ ಪರಿಚಯವೂ ಇದ್ದಿತು. ರಾಮೇಶ್ವರಂ ದೇವಸ್ಥಾನದ ಪ್ರಧಾನ ಅರ್ಚಕ ಪಕ್ಷಿ ಲಕ್ಷಣಶಾಸಿಗಳು ಜೈನಾಲುಬ್ದೀನರ ಆತ್ಮೀಯ ಮಿತ್ರರಾಗಿದ್ದರು. ಈ ಇಬ್ಬರೂ ಧಾರ್ಮಿಕ ಮುತ್ಸದ್ದಿಗಳು ತಮ್ಮ ಸಂಪ್ರದಾಯದ ಚೌಕಟ್ಟನ್ನು ಮೀರಿ ಧರ್ಮದ ಬಗ್ಗೆ
ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಪ್ರಾರ್ಥನೆ ವ್ಯಕ್ತಿಗಳ ಅಂತರಾಳದ ಭಾವನೆಗಳನ್ನು ವ್ಯಕ್ತಗೊಳಿಸುವ ಮಹಾಶಕ್ತಿ. ಮನಸ್ಸಿಟ್ಟು ಪ್ರಾರ್ಥಿಸಿದರೆ ಒಳಗಿನ ಆತ್ಮಶಕ್ತಿ ವಿಶ್ವಶಕ್ತಿಯೊಂದಿಗೆ ಲೀನವಾಗಿ ಅನಂತತೆಯ ಭಾವವನ್ನು ತರುತ್ತದೆ. ಇಲ್ಲಿ ಯಾವುದೇ ಜಾತಿ, ಪಂಥ, ಧರ್ಮ, ಸಿರಿ – ಸಂಪತ್ತು, ವಯಸ್ಸು ಮುಂತಾದ ಅಡ್ಡಗೋಡೆ ಗಳಿರುವುದಿಲ್ಲ ಎಂದು ಜೈನಾಲುಬ್ದೀನರು ಕಲಾಂ ಅವರಿಗೆ ತಿಳಿಹೇಳುತ್ತಿದ್ದರು.

ಇಂತಹ ಆರೋಗ್ಯಪೂರ್ಣ ವಾತಾವರಣದಲ್ಲಿ ಬೆಳೆದ ಕಲಾಂರ ಪ್ರಾಥಮಿಕ ಶಿಕ್ಷಣ ರಾಮೇಶ್ವರಂ ಪಂಚಾಯತ್ ಎಲಿಮೆಂಟರಿ ಶಾಲೆಯಲ್ಲಿ ನಡೆಯಿತು. ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಅವರು ರಾಮನಾಥ ಪುರಂನ ‘ಶಾಟ್ ಹೈಸ್ಕೂಲ್’ಗೆ ಸೇರಿದರು. ಮೊದಲೇ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಕಲಾಂ ಚುರುಕಾಗಿದ್ದರು. ಕಾರಣ ಅವರು ಈ ಹೈಸ್ಕೂಲ್‌ನಲ್ಲಿಯೂ ಸಹ ಅಧ್ಯಯನ ದಲ್ಲಿ ಮುಂದಿದ್ದರು. ಶಾರ್ಟ್ಜ್ ಹೈಸ್ಕೂಲ್‌ನಲ್ಲಿ ಕಲಾಂರ ಮುಂದಿನ ಗುರಿ ನಿರ್ಧರಿಸಲು ನೆರವಾದ ಒಬ್ಬ ಆದರ್ಶ ಶಿಕ್ಷಕರು ಸಿಕ್ಕರು. ಅವರೇ ಅಯ್ಯ ದೊರೈ ಸೊಲೊಮನ್.

ತಮ್ಮ ಈ ಗುರುಗಳ ವ್ಯಕ್ತಿತ್ವ ಹಾಗೂ ಅದರಿಂದ ತಮ್ಮ ಮೇಲಾದ ಗಾಢಪರಿಣಾಮ ಗಳ ಕುರಿತು ಕಲಾಂ ಅವರು ತಮ್ಮ ಕೃತಿ ಯಾದ ‘ವಿಂಗ್ಸ್ ಆಫ್‌ ಫೈರ್’ನಲ್ಲಿ ವಿವರಿಸಿದ್ದಾರೆ. ಮುಂದಿನ ಅಧ್ಯಯನಕ್ಕಾಗಿ ತಿರುಚಿನಾಪಳ್ಳಿಗೆ ತೆರಳಿದರು. ಅಲ್ಲಿನ ಸೇಂಟ್ ಜೋಸೆಫ್‌ ಕಾಲೇಜಿನಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಕಲಿಯತೊಡಗಿದರು. ಕಲಾಂ ಅವರಿಗೆ ತತ್ವಶಾಸ್ತ್ರದ ಬಗ್ಗೆ ಯೂ ಆಸಕ್ತಿ ಇತ್ತು. ಭೌತಶಾಸಕ್ಕೆ ಸಂಬಂಧಿಸಿದ ಪ್ರವಚನಗಳನ್ನು ಕೇಳುವುದರಲ್ಲಿ ಅವರಿಗೆ ವಿಶೇಷ ಆಸಕ್ತಿಯಿತ್ತು. ಒಂದು ವಸ್ತು ಬೇರೊಂದು ವಸ್ತುವಾಗಿ ರೂಪಾಂತರಗೊಳ್ಳುವ ಬಗೆ ಹೇಗೆ? ಎಂಬ ಪರಮಾಣು ಭೌತವಿಜ್ಞಾನದ ವಿದ್ಯಮಾನಗಳ ಬಗ್ಗೆ ಮೊದಲ ಬಾರಿಗೆ ಇಲ್ಲಿ ಅವರಿಗೆ ಒಳನೋಟ ಸಿಕ್ಕಿತು. ಸೇಂಟ್ ಜೋಸೆಫ್‌ ಕಾಲೇಜಿನಲ್ಲಿ 4 ವರ್ಷ ಅಧ್ಯಯನ ಮಾಡಿ ಬಿ.ಎಸ್ಸಿ ಪದವಿ ಪಡೆ ದರು. ಆಗ ಅವರಿಗೆ ವೈಮಾನಿಕ ತಂತ್ರಜ್ಞಾನದ ಬಗ್ಗೆ ಕಲಿಯುವ ಆಸಕ್ತಿ ಹೆಚ್ಚಿತು.

ಆದ ಕಾರಣ ಅವರು ‘ಮದ್ರಾಸ್ ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿ’ಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಪ್ರವೇಶ ಪಡೆ ದರು. ಏರೋನಾಟಿಕಲ್ ಎಂಜಿನಿಯರಿಂಗ್ ಕಲಿತ ನಂತರ ಪೈಲಟ್ ಆಗುವ ಕನಸನ್ನು ಕಂಡರು. ಅದಕ್ಕಾಗಿ ಎಲ್ಲ ಪರೀಕ್ಷೆಗಳ ತಯಾರಿಯನ್ನೂ ನಡೆಸಿದರು. ಆದರೆ ಕೊನೆಯಲ್ಲಿ ಪೈಲಟ್ ಆಗುವ ಅವರ ಕನಸು ನುಚ್ಚುನೂರಾಯಿತು. ಇದರಿಂದ ಬೇಸರ ಗೊಂಡ ಕಲಾಂ ಹೃಷಿಕೇಶಕ್ಕೆ ಹೊರಟುನಿಂತರು. ಹೃಷಿಕೇಶದಲ್ಲಿ ಸ್ವಾಮಿ ಶಿವಾನಂದರನ್ನು ಭೇಟಿಯಾದರು. ಅವರ ಪ್ರಭಾವಕ್ಕೆ ತಮ್ಮ ಮನಸ್ಸನ್ನು ಪರಿವರ್ತಿಸಿಕೊಂಡು ಮತ್ತೆ ಸಾಧನೆಯ ಪಥಕ್ಕೆ ಹಿಂದಿರುಗಿದರು. ನಂತರ ಅವರು 1958ರಲ್ಲಿ ದೆಹಲಿಯ ರಕ್ಷಣಾ ಇಲಾಖೆಯಲ್ಲಿ ಕೇವಲ 250ರು. ಸಂಬಳದಲ್ಲಿ ಹಿರಿಯ ವೈಜ್ಞಾನಿಕ ಸಹಾಯಕ ಹುದ್ದೆಯನ್ನು ಅಲಂಕರಿಸಿದರು. ತದ ನಂತರ ಬೆಂಗಳೂರಿನ ಏರೋನಾಟಿಕಲ್ ಡೆವಲಪ್ ಮೆಂಟ್ ಎಸ್ಟ್ಯಾಬ್ಲಿಷ್ಮೆಂಟ್‌ಗೆ ವರ್ಗಾವಣೆ ಗೊಂಡು ಎಡಿಇಗೆ ಸೇರಿದರು. 1962ರಲ್ಲಿ ಇಂಡಿಯನ್ ಕಮಿಟಿ ಫಾರ್ ಸೈನ್ಸ್ ರೀಸರ್ಚ್ ಸಂಸ್ಥೆಯಲ್ಲಿ ರಾಕೆಟ್ ಎಂಜಿನಿಯರ್ ಆದರು.

1963ರಲ್ಲಿ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡರು, ಅಮೆರಿಕದ ನಾಸಾ ಸಂಸ್ಥೆಯಲ್ಲಿ ಕೆಲವು ಕಾಲ ತರಬೇತಿ ಪಡೆದರು. ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ರಾಕೆಟ್ ಪ್ರಯೋಗ ಮಾಡಿದ ಚಿತ್ರದಿಂದ ಪ್ರಭಾವಿತರಾಗಿ, ಭಾರತಕ್ಕೆ ಮರಳಿ ಬಂದರು.
ಉಪಗ್ರಹ ಉಡಾವಣಾ ವಾಹನ ನಿರ್ಮಾಣದಲ್ಲಿ ಮಗ್ನರಾದರು. ಇದೇ ಸಮಯದಲ್ಲಿ ಅಮೆರಿಕದ ನೈಕ್ ಅವಾಚೆ ಸೌಂಡಿಂಗ್ ರಾಕೆಟ್ ‘ತುಂಬಾ’ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಅದರ ಜೋಡಣೆ ಮತ್ತು ರಕ್ಷಣೆಯ ಹೊಣೆ ಹೊತ್ತವರು ಕಲಾಂ ಆಗಿದ್ದರು.

1967ರಲ್ಲಿ ರಾಕೆಟ್ ಯೋಜನೆಯಲ್ಲಿ ಭಾರಿ ಯಶಸ್ಸು, ಮೊದಲ ಸ್ವದೇಶಿ ನಿರ್ಮಿತ ರಾಕೆಟ್ ರೋಹಿಣಿ-75 ಯಶಸ್ವಿ ಹಾರಾಟದ ರೂವಾರಿ ಎನಿಸಿದರು. 1971ರಲ್ಲಿ ಎಸ್‌ಎಲ್‌ವಿ – 3 ಯೋಜನೆಯ ಮುಖ್ಯಸ್ಥ. 1976ರಲ್ಲಿ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡರು. 1980ರಲ್ಲಿ ಎಸ್‌ಎಲ್‌ವಿ – 3 ಯಶಸ್ವಿ ಉಡಾವಣೆ. 1981ರಲ್ಲಿ ಭಾರತ ಸರಕಾರದಿಂದ ಪದ್ಮಭೂಷಣ ಪ್ರಶಸ್ತಿ
ಪಡೆದರು. 1982ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದಲ್ಲಿ ನಿರ್ದೇಶಕರಾಗಿ ನೇಮಕಗೊಂಡರು.

1983ರಲ್ಲಿ ಕ್ಷಿಪಣಿ ನಿರ್ಮಾಣಕ್ಕೆ ಚಾಲನೆ ಕೊಟ್ಟ ಕಲಾಂ ಅದನ್ನು 1985ರಲ್ಲಿ ತ್ರಿಶೂಲ್ ಹೆಸರಿನ ಕ್ಷಿಪಣಿಯನ್ನು ಯಶಸ್ವಿಯಾಗಿ
ಉಡಾಯಿಸಿದರು. ನಂತರ 1988ರಲ್ಲಿ ಪೃಥ್ವಿ, 1989ರಲ್ಲಿ ಅಗ್ನಿ ಕ್ಷಿಪಣಿಗಳ ಯಶಸ್ಸಿಗೆ ಕಾರಣ ಕಲಾಂ ಆದರು. 1990ರಲ್ಲಿ ಭಾರತ ಸರಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿತು. 1991ರಲ್ಲಿ ಮುಂಬೈ ಐಐಟಿಯಿಂದ ಗೌರವ ಡಾಕ್ಟರೇಟ್, ನಂತರದಲ್ಲಿ 1997ರಲ್ಲಿ ದೇಶದ ಅತ್ಯುನ್ನತ ಗೌರವ ಭಾರತ ರತ್ನ ಪಡೆದರು. 1998ರಲ್ಲಿ ಭಾರತ ಸರಕಾರಕ್ಕೆ ವೈಜ್ಞಾನಿಕ ಸಲಹೆಗಾರರಾಗಿ ನೇಮಕಗೊಂಡ
ಕಲಾಂ ಅದೇ ವರ್ಷ ಅಣು ಬಾಂಬ್ ಸ್ಫೋಟ ಪ್ರಯೋಗದಲ್ಲಿ ಯಶಸ್ಸನ್ನು ಕಂಡರು.

೨೦೦೧ರಲ್ಲಿ ಚೆನ್ನೆ ನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ ಮತ್ತು ಸಾಮಾಜಿಕ ಪರಿವರ್ತನೆಯ ವಿಭಾಗದಲ್ಲಿ ಪೊಫೆಸರ್ ಆಗಿ ನೇಮಕ. 2002ರಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ 2007ರ ವರೆಗೆ ಕಾರ್ಯನಿರ್ವಹಿಸಿದರು. ‘ದಿ ವಿಂಗ್ಸ್ ಆಫ್‌ ಫಾರ್’
ಕಲಾಂರ ಆತ್ಮಕಥೆಯಾಗಿದೆ. ಅಲ್ಲದೇ ‘ಇಂಡಿಯಾ ಮೈ ಡ್ರೀಮ’, ‘ಇಂಡಿಯಾ 2020’ ‘ಮೈ ಜರ್ನಿ’, ಟಾರ್ಗೆಟ್ ತ್ರಿ ಬಿಲಿಯನ್’ ಎಂಬ ಬಹುಚರ್ಚಿತ ವಿಷಯಗಳ ಕುರಿತು ಕೃತಿಗಳನ್ನು ಹೊರತಂದಿದ್ದಾರೆ. ಕಲಾಂರವರ ‘ಇಗ್ನೆಟೆಡ್ ಮೈಂಡ್ಸ್’ ಮತ್ತು ‘ದಿ ವಿಂಗ್ಸ್ ಆಫ್‌ ಫೈರ್’ ಕೃತಿಗಳು ಅಪಾರ ಜನಮನ್ನಣೆಯನ್ನು ಪಡೆದರೆ, 1998ರಲ್ಲಿ ಡಾ.ಕಲಾಂ ಅವರು ವೈ.ಎಸ್.ರಾಜನ್ ಅವರ ಜತೆ ಗೂಡಿ ‘ಇಂಡಿಯಾ 2020 ಎ ವಿಶನ್ ಫಾರ್ ದಿ ನ್ಯೂ ಮಿಲೇನಿಯಂ’ ಕೃತಿಯನ್ನು ಹೊರತಂದರು. ಇದರಲ್ಲಿ ಕಲಾಂ ಅವರು
ದೇಶದ ಕೃಷಿ, ಆಹಾರ, ಸಂಸ್ಕರಣೆ, ವಸ್ತುಗಳು, ರಾಸಾಯನಿಕ ಕೈಗಾರಿಕೆಗಳು ಮತ್ತು ನಮ್ಮ ಜೈವಿಕ ಸಂಪತ್ತು, ಭವಿಷ್ಯದಲ್ಲಿ ಉತ್ಪಾದನೆ, ಎಲ್ಲರಿಗೂ ಆರೋಗ್ಯ ಹೀಗೆ ಹತ್ತು ಹಲವು ವಿಷಯಗಳನ್ನು ಚರ್ಚಿಸಿದ್ದಾರೆ.

ಮುಂದೆ 2004ರಲ್ಲಿ ಕಲಾಂರು ತಂತ್ರಜ್ಞಾನದ ಬಗ್ಗೆ ಆಳವಾದ ಚಿಂತನೆಗಳನ್ನೊಳಗೊಂಡ ‘ಎನ್ ವಿಶನಿಂಗ್ ಆನ್ ಎಂಪವರ್ಡ್ ನೇಷನ್ ’ ಎಂಬ ಕೃತಿಯನ್ನು ಬರೆದರು. ಡಾ.ಅಬ್ದುಲ್ ಕಲಾಂ ಅವರು ಉತ್ತಮ ವಾಗ್ಮಿಗಳು. ವಿಶೇಷವಾಗಿ ಭಾರತದ ಅಭಿವೃದ್ಧಿ, ವಿಜ್ಞಾನ – ತಂತ್ರಜ್ಞಾನ, ಕೃಷಿ, ಶಿಕ್ಷಣ ಮುಂತಾದವುಗಳ ಬಗ್ಗೆ ಭಾಷಣ ಮಾಡತೊಡಗಿದರೆ ಕೇಳುಗರಲ್ಲಿ ಮತ್ತೆ ಮತ್ತೆ ಕೇಳಬೇಕೆ ನ್ನುವ ಹುರುಪು ಹುಮ್ಮಸ್ಸು ಹುಟ್ಟುತ್ತದೆ. ಅವರ ಭಾಷಣಗಳನ್ನು ಆಲಿಸುವುದೆಂದರೆ ಉತ್ತಮ ಪುಸ್ತಕಗಳನ್ನು ಓದಿದಂತೆ!

ಭಾರತದ ಸಂದರ್ಭದಲ್ಲಿ ಅಭಿವೃದ್ಧಿಗೆ ಅವಶ್ಯಕವೆನಿಸಬಹುದಾದ ವಿಚಾರ ವೆಂದರೆ, ಆರ್ಥಿಕ ಮತ್ತು ಸಾಮಾಜಿಕ ಮುನ್ನಡೆಯ ಫಲವು ಅದರಿಂದ ವಂಚಿತರಾಗಿರುವವರಿಗೆ ಲಭ್ಯ ವಾಗುವಂತೆ ನೋಡಿಕೊಳ್ಳುವುದು. ಹಿಂದುಳಿದವರು, ಅಲ್ಪ ಸಂಖ್ಯಾತರು ಅಭಿವೃದ್ಧಿ ಸಾಧಿಸದೇ ಹಿಂದುಳಿದು ಬಿಟ್ಟರೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುವುದೇ? ಈ ಕಾರಣಕ್ಕಾಗಿ, ಬಡತನ ನಿರ್ಮೂಲನ ಮಾಡಬೇಕೆನ್ನುವ ಯೋಜನೆಯನ್ನು ನಾವು ಕಾರ್ಯಗತಗೊಳಿಸಬೇಕು. ಮುಖ್ಯವಾಗಿ ಸಾಮಾಜಿಕ
ನ್ಯಾಯಕ್ಕೆ ಒತ್ತು ಕೊಡಬೇಕಾಗುತ್ತದೆ. ಸಾಮಾಜಿಕ ಅಸಮತೋಲನವನ್ನು ನಿರ್ಮೂಲನೆ ಮಾಡುವ ಯೋಜನೆಗಳು ಬೇಕು.  ಭಾರತದಲ್ಲಿ ವಿಜ್ಞಾನದ ಹಿನ್ನೆಲೆಯುಳ್ಳ ಬಹುದೊಡ್ಡ ಮಾನವ ಶಕ್ತಿಯ ಸಂಚಯವೇ ಇದೆ. ಪರಮಾಣು ವಿಜ್ಞಾನ, ಅಂತರಿಕ್ಷ
ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರವಷ್ಟೇ ಅಲ್ಲದೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ನಮ್ಮ ಸಾಧನೆ ಅತ್ಯುತ್ತಮವಾಗಿದೆ.

ನಾವಿನ್ನೂ ಸಾಧಿಸಬೇಕಾದ್ದು ಬಹಳಷ್ಟಿದೆ. ಎಂದು ಕಲಾಂ ತಮ್ಮ ಅನೇಕ ಭಾಷಣ ಗಳಲ್ಲಿ ಹೇಳುತ್ತಿದ್ದರು. ಇಂತಹ ಮಹಾನ್ ಚೇತನ ಜುಲೈ 27, 2015ರಂದು ಶಿಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತದಿಂದ ಅಸ್ತಂಗತವಾಯಿತು. ಅವರ ಬದುಕು,ಆದರ್ಶಗಳೇ ನಮಗೆ ದಾರಿ ದೀಪ.