ಶಿರಸಿ: ಎಲ್ಲ ರೋಗಕ್ಕೂ ಮದ್ದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಮನುಷ್ಯನನ್ನು ಹಿಂಡೆ ಹಿಪ್ಪೆ ಮಾಡುವ, ಇನ್ನೂ ಔಷಧವನ್ನೇ ಕಂಡು ಹಿಡಿಯಲಾರದ ಅನೇಕ ರೋಗಗಳು ಮನುಷ್ಯನಿಗೆ ಮಾರಕವಾಗಿವೆ.
ಇದೀಗ ಈವರೆಗೂ ರೋಗಕ್ಕೆ ಸೂಕ್ತ ಔಷಧವೇ ಇಲ್ಲದೇ ಸಂಶೋಧನೆಯ ಹಂತದಲ್ಲಿ ಇರುವ ಹಾಗೂ ಬುಡಕಟ್ಟು ಜನಾಂಗಗಳಲ್ಲೇ ಅನುವಂಶಿಕವಾಗಿ ಹೆಚ್ಚಾಗಿ ಕಂಡುಬರುತ್ತಿರುವ ಸಿಕಲ್ ಸೆಲ್ ಅನಿಮಿಯಾ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜಮಾಂಗದಲ್ಲಿ ಪತ್ತೆಯಾಗಿದೆ.
ಕರೋನಾ ನಂತರ ಮನುಷ್ಯನ ದೇಹವನ್ನು ಹಂತ ಹಂತವಾಗಿ ಹಿಂಡಿ ಹಿಂಸಿಸುವ ಹಾಗೂ ನಿಧಾನಗತಿಯಲ್ಲಿ ಪ್ರಾಣಕ್ಕೇ ಕುತ್ತು ತರುವ ಸಿಕಲ್ ಸೆಲ್ ಅನಿಮಿಯಾ (Sickle Cell Anemia Disease) ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನರಲ್ಲಿ ಪತ್ತೆಯಾಗಿದೆ. ಕೇಂದ್ರ ಆರೋಗ್ಯ ಇಲಾಖೆ ದೇಶದಲ್ಲಿ ಸುಮಾರು 7 ಕೋಟಿ ಜನರಲ್ಲಿ ಈ ರೋಗ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಅದರಂತೆ ಉತ್ತರಕನ್ನಡ ಜಿಲ್ಲೆಯ ಸಿದ್ದಿ ಹಾಗೂ ಇತರೆ ಕೆಲ ಬುಡಕಟ್ಟು ಸಮುದಾಯಗಳ ಸುಮಾರು 17 ಸಾವಿರ ಜನರಲ್ಲಿ ಈ ಕಾಯಿಲೆ ಇರುವ ಅನುಮಾನ ವ್ಯಕ್ತಪಡಿಸಿ ಪರಿಶೀಲನೆ ನಡೆಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿತ್ತು. ಅದರಂತೆ ಆರೋಗ್ಯ ಇಲಾಖೆ ಜಿಲ್ಲೆಯ ಅಂಕೋಲಾ, ಮುಂಡಗೋಡ, ಹಳಿಯಾಳ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿನ 3846 ಜನರ ರಕ್ತದವ ಮಾದರಿಗಳನ್ನು ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯಲ್ಲಿ 186 ಜನರಲ್ಲಿ ರೋಗ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸದ್ಯ ಉತ್ತರಕನ್ನಡ ಮಾತ್ರವಲ್ಲದೆ ರಾಜ್ಯದ ಚಾಮರಾಜ ನಗರ, ದಕ್ಷಿಣ ಕನ್ನಡ ಸೇರಿದಂತೆ ಇತರೆ 7 ಜಿಲ್ಲೆಗಳಲ್ಲಿ ಆಯ್ದ ಜನಾಂಗಗಳಲ್ಲಿ ಈ ಕಾಯಿಲೆ ರೋಗ ಲಕ್ಷಣಗಳು ಇರಬಹುದು ಎಂದು ಊಹಿಸಲಾಗಿದೆ. ಇನ್ನು ಕೂಡ ಹೆಚ್ಚಿನ ಜನರಲ್ಲಿ ರಕ್ತ ಪರೀಕ್ಷೆ ಮಾಡಿಬೇಕಿದ್ದು ರೋಗ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಪ್ರಭಾರಿ ಆರೋಗ್ಯಾಧಿಕಾರಿ ಡಾ.ಅನ್ನಪೂರ್ಣ ರವರು ಮಾಹಿತಿ ನೀಡಿದ್ದಾರೆ.
ಇನ್ನು ಉತ್ತರಕನ್ನಡದಲ್ಲಿ ಡಿಸೇಂಬರ್ ಅಂತ್ಯದವರೆಗೆ ನಡೆಯುವ ಆಯುಷ್ಮಾನ್ ಭವ (Ayushman bava) ಕಾರ್ಯಕ್ರಮದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಸಿಕಲ್ ರೋಗ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಅನುವಂಶಿಕವಾಗಿ ಬರುವ ರೋಗ ಇದಾಗಿದ್ದು ಈ ರೋಗವನ್ನು ರಕ್ತದ ಮಾದರಿ ಪಡೆದು ಅದನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಅವುಗಳು ಕುಡಗೋಲಿನ ಆಕಾರದಲ್ಲಿ ಕಾಣುತ್ತವೆ. ಇದರಿಂದ ಇದನ್ನು ಕುಡಗೋಲು ಕಾಯಿಲೆ ಎಂದು ಕೂಡ ಕರೆಯಲಾಗುತ್ತದೆ. ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಆಮ್ಲಜನಕ ಸಾಗಿಸುವ ಪ್ರೋಟಿನ್, ಹೊಮೋಗ್ಲೊಬಿನ್ ನಲ್ಲಿ ಅಸಹಜತೆ ಇರುತ್ತದೆ.
ಮಗು ಹುಟ್ಟಿದ 5-6 ತಿಂಗಳಿನಲ್ಲಿಯೇ ಕಾಣಿಸಿಕೊಳ್ಳುವ ಈ ಕಾಯಿಲೆ ಬಳಿಕ ರಕ್ತ ಹೀನತೆ, ಕೈ ಕಾಲು ಊತ, ಅನಿಯಮಿತ ರಕ್ತಸ್ರಾವ, ಬ್ಯಾಕ್ಟಿರಿಯಾ ಸೋಂಕು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನು ಕಾಯಿಲೇಗೆ ಎರಡು ಹಂತದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತದೆ. ಪ್ರಾಥಮಿಕ ಹಂತವಾದಲ್ಲಿ ಸಿಕಲ್ ಸೆಲ್ ಟ್ರಿಪ್ ಹಾಗೂ ಗಂಭೀರ ಸ್ವರೂಪದಲ್ಲಿದ್ದರೇ ಸಿಕಲ್ ಸೆಲ್ ಡಿಸೀಸ್ ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.
ಗಂಭೀರವಾಗಿದ್ದಲ್ಲಿ ರಕ್ತವನ್ನು ಕೂಡ ಬದಲಾಯಿಸುವ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದವರಲ್ಲಿ ಯಾರಿಗೂ ಗಂಭೀರ ಸ್ವರೂಪದಲ್ಲಿ ಇಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸದ್ಯ ಈ ರೋಗಕ್ಕೆ ಪರಿಣಾಮಕಾರಿ ಔಷಧಗಳಿಲ್ಲ.ಇನ್ನೂ ಕೂಡ ಇವುಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಹೀಗಾಗಿ ಜನರಲ್ಲೂ ಸಹ ಇವುಗಳ ಬಗ್ಗೆ ಮಾಹಿತಿ ಕೊರತೆ ಸಹ ಇದ್ದು ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಕಲ್ ಸೆಲ್ ರೋಗ ಪತ್ತೆಯಾಗಿದ್ದು ಬುಡಕಟ್ಟು ಜನಾಂಗದವರು ಆತಂಕ ಪಡುವಂತಾಗಿದೆ.ಆದಷ್ಟು ಶೀಘ್ರದಲ್ಲಿ ಜಿಲ್ಲೆಯ ಎಲ್ಲ ಸಿದ್ಧಿ ಜನಾಂಗದವರ ರಕ್ತ ಮಾದರಿ ಪರೀಕ್ಷೆ ಮಾಡಿ ರೋಗ ಪತ್ತೆ ಆದವರಿಗೆ ಚಿಕಿತ್ಸೆ ನೀಡಬೇಕಿದೆ.
*
ನಾವು ಯಾವ ರೋಗ ಬಂದರೂ ಹೆದರೋದಿಲ್ಲ. ಆದರೆ ಇದೆಂತೊ ಹೊಸ ರೋಗ ಅಂತಿರೋದು ಇವಾಗ ಕೇಳ್ತಿದ್ದೇವೆ. ನಮ್ಮಲ್ಲಿಯ ಜನ ಮಾರಣಾಂತಿಕ ರೋಗದಿಂದ ಪ್ರಾಣ ಬಿಟ್ಟ ಉದಾಹರಣೆಗಳು ತೀರಾ ಕಡಿಮೆಯೇ. ಏಕೆಂದರೆ ನಾವು ತಿನ್ನುವ ಆಹಾರ, ನಮ್ಮ ದೇಹ ಪ್ರಕೃತಿಯೇ ಬೇರೆ.
-ಸುಬ್ರಾಯ ಸಿದ್ದಿ.