ಹೈದರಾಬಾದ್: ತೆಲಂಗಾಣದ (Telangana) ಬಿಆರ್‌ಎಸ್ (BRS Party) ಶಾಸಕ ಪಿ ಕೌಶಿಕ್ ರೆಡ್ಡಿಯನ್ನು (Kaushik Reddy) ಪೊಲೀಸರು ಬಂಧಿಸಿದ್ದಾರೆ (BRS MLA Arrested). ಬೆದರಿಕೆ, ನಿಂದನೆ ಮತ್ತು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಶಾಸಕ ಕೌಶಿಕ್ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ಎರಡು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ (Viral Video) ಆಗಿದೆ.
ಇಲ್ಲಿನ ಹುಜುರಾಬಾದ್ (Huzurabad) ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಕೌಶಿಕ್ ರೆಡ್ಡಿಯನ್ನು ಕೊಂಡಾಪುರದಲ್ಲಿರುವ ಅವರ ಮನೆಯಲ್ಲೇ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ತನ್ನ ಈ ಬಂಧನವನ್ನು ರೆಡ್ಡಿ ಕಾನೂನು ಬಾಹಿರ ಎಂದು ಕರೆದಿದ್ದಾರೆ.
ಮಾಜಿ ಸಚಿವ ಟಿ ಹರೀಶ್ ರಾವ್ ಮತ್ತು ಬಿಆರ್‌ಎಸ್ ಪಕ್ಷದ ಕೆಲ ನಾಯಕರನ್ನೂ ಸಹ ಪೊಲೀಸರು ಇದೇ ಸಂದರ್ಭದಲ್ಲಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಾಯಕರು ರೆಡ್ಡಿಯನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನೂ ಸಹ ಕೂಗಿದ್ದಾರೆ.
ಕಾನೂನು ಬಾಹಿರವಾಗಿ ಸಭೆ ನಡೆಸಿರುವುದು ಸರಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದು, ಬೆದರಿಕೆ ಒಡ್ಡಿರುವುದು, ಬಲಾತ್ಕಾರದಿಂದ ತಡೆ ಒಡ್ಡಿರುವುದು ಹಾಗೂ ಸಾರ್ವಜನಿಕವಾಗಿ ಗದ್ದಲ ಉಂಟು ಮಾಡಿರುವುದು ಸೇರಿದಂತೆ ಇನ್ನೂ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಇಲ್ಲಿನ ಬಂಜಾರ ಹಿಲ್ ಪೊಲೀಸ್ ಠಾಣೆಯ (Banjara Hills Police Station) ಇನ್ಸ್ಪೆಕ್ಟರ್ ಅವರು ರೆಡ್ಡಿ ವಿರುದ್ಧ ಡಿ.4ರಂದು ಪ್ರಕರಣ ದಾಖಲಿಸಿದ್ದರು.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಇಲ್ಲಿನ ಇನ್ಸ್ಪೆಕ್ಟರ್ ಅವರು ತುರ್ತು ಕರ್ತವ್ಯದ ನಿಮಿತ್ತ ಸ್ಟೇಷನ್ ನಿಂದ ಹೊರಗಡೆ ಹೋಗುತ್ತಿದ್ದ ಸಂದರ್ಭದಲ್ಲಿ ರೆಡ್ಡಿ ಮತ್ತು ಅವರ ಜೊತೆಗಿದ್ದವರು ಪೊಲೋಸ್ ವಾಹನಕ್ಕೆ ತಡೆಯೊಡ್ಡಿದ್ದರು. ತಮ್ಮ ಮನವಿಯನ್ನು ಠಾಣೆಯಲ್ಲಿರುವ ಇನ್ನೊಬ್ಬ ಅಧಿಕಾರಿಯವರ ಬಳಿ ಸಲ್ಲಿಸುವಂತೆ ಸೂಚಿಸಿದ ಹೊರತಾಗಿಯೂ, ಈ ಗುಂಪು ಇನ್ಸ್ಪೆಕ್ಟರ್ ಅವರ ವಾಹನವನ್ನು ತಡೆಹಿಡಿದಿದೆ, ಮಾತ್ರವಲ್ಲದೇ ಇನ್ಸ್ಪೆಕ್ಟರ್ ಅವರನ್ನು ನಿಂದಿಸಿ ಅವರ ಕರ್ತವ್ಯಕ್ಕೆ ಶಾಸಕ ರೆಡ್ಡಿ ಅವರ ನೇತೃತ್ವದ ಗುಂಪು ಅಡ್ಡಿಪಡಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನ ಫೋನ್ ಟ್ಯಾಪ್ ಆಗಿದೆ ಎಂದು ದೂರು ನೀಡಿ ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಆಗ್ರಹಿಸಲು ರೆಡ್ಡಿ ಅವರು ಡಿ.4ರ ಬುಧವಾರದಂದು ಪೊಲೀಸ್ ಠಾಣೆಗೆ ತೆರಳಿದ್ದರು ಎಂದು ಅವರು ಹೇಳಿದ್ದಾರೆ. ಶಾಸಕ ರೆಡ್ಡಿ ಅವರು ನೀಡಿರುವ ದೂರಿನಂತೆ, ತನ್ನ ಫೊನ್ ಕರೆಗಳನ್ನು ಟ್ಯಾಪ್ ಮಾಡಲಾಗುತ್ತಿದ್ದು ಇದರ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ (A Revanth Reddy) ಅವರ ಕೈವಾಡವಿದೆ ಎಂದು ಅವರು ಆರೊಪಿಸಿದ್ದರು ಹಾಗೂ ಈ ಪ್ರಕರಣದಲ್ಲಿ ಐಜಿ ಮಟ್ಟದ ಅಧಿಕಾರಿಯೊಬ್ಬರ ಭಾಗೀದಾರಿಕೆಯೂ ಇದೆ ಎಂದು ಶಾಸಕ ರೆಡ್ಡಿ ಅವರ ಆರೋಪವಾಗಿದೆ.
ಈ ಸುದ್ದಿಯನ್ನೂ ಓದಿ: Salman Khan: ಕುಂತಲ್ಲಿ ನಿಂತಲ್ಲಿ ಸಲ್ಮಾನ್‌ಗೆ ಲಾರೆನ್ಸ್ ಬಿಷ್ಣೋಯ್ ಭಯ!
ಒಟ್ಟಿನಲ್ಲಿ, ತೆಲಂಗಾಣದಲ್ಲಿ ಇದೀಗ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷವಾಗಿರುವ ಬಿಆರ್‌ಎಸ್ ನಾಯಕರ ನಡುವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದು, ಈ ಫೋನ್ ಟ್ಯಾಪಿಂಗ್ ಆರೋಪ ರಾಜ್ಯದಲ್ಲಿ ಈ ಎರಡು ಪಕ್ಷಗಳ ನಾಯಕರ ನಡುವೆ ಹೊಸ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿದೆ.