Friday, 13th December 2024

Roopa Gururaj Column: ‘ಕಾವೇರಿʼ ಉಗಮದ ಕಥೆ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಹಿಂದೆ ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ರಾಜರ್ಷಿ ‘ಕವೇರ’ ಎಂಬ ರಾಜನಿದ್ದನು. ಮಕ್ಕಳಿಲ್ಲದ ಈತ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದನು. ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಸಾಕು ಮಗಳಾದ ಲೋಪಾಮುದ್ರೆಯನ್ನೇ ಮಗಳಾಗಿ
ಕೊಟ್ಟನು . ‘ಕವೇರ’ ರಾಜನ ಮಗಳಾಗಿ ‘ಕಾವೇರಿ’ ಎಂಬ ಹೆಸರಿನಿಂದ ಬೆಳೆದಳು. ಅದೇ ಸಮಯದಲ್ಲಿ ಅಗಸ್ತ್ಯ ಮುನಿಗಳು ಉತ್ತರ ಭಾಗದಿಂದ ಸಂಚರಿಸುತ್ತಾ, ದಕ್ಷಿಣ ರಾಜ್ಯಕ್ಕೆ ಬಂದರು.

ತಪಸ್ಸಿನಿಂದ ಮುನಿಯಾಗಿದ್ದ ‘ಕವೇರ’ರಾಜನ ಆಶ್ರಮಕ್ಕೆ ಆಗಮಿಸಿದರು. ಅಲ್ಲಿ ಕಾವೇರನ ಮಗಳು ಕಾವೇರಿಯನ್ನು ನೋಡಿ ವಿವಾಹವಾಗಲು ಬಯಸಿದರು. ಆಗ ಕಾವೇರಿ ಹೇಳಿದಳು. ‘ನಿಮ್ಮನ್ನು ವಿವಾಹ ಆಗುತ್ತೇನೆ ಆದರೆ ನೀವು ನನ್ನನ್ನು ಒಂದು ಕ್ಷಣವೂ ಬಿಟ್ಟಿರಬಾರದು ಹಾಗೆ ಬಿಟ್ಟ ಕ್ಷಣವೇ ನಾನು ನದಿಯಾಗಿ ಹರಿದು ಹೋಗುವೆ’ ಎಂಬ ಷರತ್ತನ್ನು ಹಾಕಿ ಅಗಸ್ತ್ಯರನ್ನು ವಿವಾಹವಾದಳು.

ಕವೇರ ರಾಜ ತನ್ನ ಮಗಳನ್ನು ಅಗಸ್ತ್ಯ ಕೊಟ್ಟು ವಿವಾಹ ಮಾಡಿದ ನಂತರ ತಪಸ್ಸಿನಲ್ಲಿ ನಿರತನಾಗಿ ಮುಕ್ತಿಯನ್ನು ಪಡೆದನು. ಅಗಸ್ತ್ಯ ಪತ್ನಿಯಾದ ಕಾವೇರಿ ಪತಿಯೊಂದಿಗೆ ಆಶ್ರಮದಲ್ಲಿದ್ದಳು. ಒಂದು ಬೆಳಗಿನ ಜಾವವೇ ಎದ್ದ ಅಗಸ್ತ್ಯ ತಮ್ಮ ಪತ್ನಿ ಕಾವೇರಿ ಏಳುವುದರೊಳಗೆ, ಭೃಗಂಡ ಮಹರ್ಷಿಗಳ ಆಶ್ರಮದಲ್ಲಿರುವ ತೀರ್ಥದಲ್ಲಿ ಸ್ನಾನ ಮಾಡಿ ಬರಲು ಅವರ ಆಶ್ರಮದತ್ತ ಹೋದರು. ಅಗಸ್ತ್ಯ ಹೋದ ಸ್ವಲ್ಪ ಹೊತ್ತಿಗೆ, ಕಾವೇರಿಗೆ ಎಚ್ಚರವಾಯಿತು.
ಹತ್ತಿರದಲ್ಲಿ ಪತಿ ಅಗಸ್ತ್ಯ ಇಲ್ಲದಿರುವುದನ್ನು ಕಂಡು ತಾನು ತಿಳಿಸಿದ ಷರತ್ತಿನಂತೆ ಆಶ್ರಮದಿಂದ ಹೊರಗೆ ಬಂದು ಒಂದು ಹೊಂಡಕ್ಕೆ ಜಿಗಿದು ನೀರಿನ ಸೆಲೆಯಾಗಿ ಹರಿಯುತ್ತಾ ಮುಂದೆ ರಭಸದಿಂದ ನದಿಯಾಗಿ ಹರಿದಳು. ಆ ಹೊಂಡವನ್ನು ‘ತೀರ್ಥ ಕುಂಡಿಕೆ’ ಎಂದು ಕರೆಯುತ್ತಾರೆ.

ಅಗಸ್ತ್ಯನಿಂದ ಸ್ವತಂತ್ರಳಾದ ಕಾವೇರಿ ನದಿಯಾಗಿ ರಭಸದಿಂದ ಹರಿಯುವಾಗ ಆಕೆಯ ಸೀರೆಯ ನೆರಿಗೆ ಹಿಂದೆ
ಮುಂದೆ ಆಗುತ್ತದೆ. ಕಾವೇರಿ ಉಟ್ಟಿದ್ದ ಸೀರೆಯ ನೆರಿಗೆ ಹಿಂದೆ ಹೋಗಿ ಮುಂದೆ ಪಂಚೆ ಸುತ್ತಿದಂತೆ ನದಿಯಾಗಿ ಹರಿದ ನೆನಪಿನ ಸಂಭ್ರಮಕ್ಕೆ, ಕೊಡಗಿನ ಮಹಿಳೆಯರು ಸೀರೆಯ ನೆರಿಗೆಯನ್ನು ಹಿಂದೆ ಸಿಗಿಸಿ, ಸೆರಗು ಮುಂದೆ ಬರುವಂತೆ ಉಡುವ ಸಂಪ್ರದಾಯ ಬೆಳೆದು ಬಂದಿತು. ಅಂದಿನಿಂದ ‘ಕೊಡವರ ಸೀರೆ ಉಡುವ ಶೈಲಿ’ ಎಂಬ ಹೆಸರು ಖ್ಯಾತಿ ಪಡೆಯಿತು.

ಕೊಡವರ ವಿವಾಹ ಸಮಯದಲ್ಲಿ ಮದುಮಗಳಿಗೆ ಕೊಡಗಿನ ಶೈಲಿಯಲ್ಲಿ ಸೀರೆ ಉಡಿಸುತ್ತಾರೆ. ಹೀಗೆ ಕವೇರ ರಾಜನ ಮಗಳು ಕಾವೇರಿ, ಅಗಸ್ತ್ಯನ ಪತ್ನಿಯಾಗಿ, ನದಿಯಾಗಿ ಹರಿದ ಸ್ಥಳವೇ ‘ತಲಕಾವೇರಿ’ ಎಂದು ಪ್ರಸಿದ್ಧಿ ಪಡೆದಿದೆ.
ಪ್ರತಿ ವರ್ಷ ತುಲಾಮಾಸದ ಸಂಕ್ರಮಣದಿಂದ ವೃಶ್ಚಿಕ ಮಾಸದ ಸಂಕ್ರಮಣದವರೆಗೆ ಇಲ್ಲಿ ‘ಕಾವೇರಿ ಜಾತ್ರೆ’ ನಡೆಯುತ್ತದೆ.

ರಾಜ್ಯ ಹಾಗೂ ಹೊರ ರಾಜ್ಯದ ದಿಂದ ಜನರು ಬರುತ್ತಾರೆ. ನಿಗದಿತ ಸಮಯದಲ್ಲಿ ‘ಕಾವೇರಿ ಕುಂಡಿಕೆಯಲ್ಲಿ’ ‘ತೀರ್ಥ
ಉದ್ಭವವಾಗಿ’ ಕಾವೇರಿ ತಾಯಿ ದರ್ಶನ ಕೊಡುತ್ತಾಳೆ. ಕೊಡಗಿನ ತಲಕಾವೇರಿ ಪೌರಾಣಿಕ ಪ್ರಸಿದ್ಧ ಸ್ಥಳವಾಗಿದ್ದು ಜೀವನದಿ ಹುಟ್ಟುವ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಅಗಸ್ತ್ಯ ಪ್ರತಿಷ್ಠಾಪಿಸಿದ ಅಗಸ್ತ್ಯ ಮತ್ತು ಗಣಪತಿ ದೇವಸ್ಥಾನವಿದೆ. ದಕ್ಷಿಣ ಗಂಗೆ ಎಂದೇ ಪ್ರಸಿದ್ಧವಾದ ಕರ್ನಾಟಕದವರ ಜೀವನದಿ.

ನಮ್ಮ ಭಾರತ ಭೂಮಿಯ ಮಣ್ಣು, ನದಿ, ಬೆಟ್ಟ ಗುಡ್ಡ ಪ್ರತಿ ಕಲ್ಲಿಗೂ ಒಂದು ಇಲ್ಲಿನ ಪಾರಂಪರಿಕ ಇತಿಹಾಸ ನಮಗೆ ನಮ್ಮ ಸನಾತನ ಬೇರುಗಳನ್ನ ಗಟ್ಟಿಯಾಗಿ ಕಟ್ಟಿಕೊಟ್ಟಿದೆ. ಪ್ರಕೃತಿಯನ್ನು ದೇವರಿಗೆ ಹೋಲಿಸಿ, ಮಣ್ಣು , ನೀರು, ಆಕಾಶ ಭೂಮಿ, ಗಾಳಿ ಎಲ್ಲವನ್ನು ನಾವಿಲ್ಲಿ ಪೂಜ್ಯ ಭಾವದಿಂದ ನೋಡುತ್ತೇವೆ. ಸಾವಿರಾರು ವರ್ಷಗಳ ಇತಿಹಾಸ
ನಮ್ಮದು. ಇಂದಿಗೂ ನಮ್ಮ ಸನಾತನ ಧರ್ಮ ನಾವು ಒಳ್ಳೆಯ ಮೌಲ್ಯಗಳಿಂದ ಜೀವನವನ್ನು ನಡೆಸುವಂತೆ ನಮ್ಮನ್ನು ಪ್ರೇರೇಪಿಸುತ್ತಿದೆ. ಇಂತಹ ಒಂದು ಸಂಸ್ಕೃತಿಯನ್ನ ಹಾಕಿಕೊಟ್ಟ ನಮ್ಮ ಧರ್ಮ ಮತ್ತು ಭೂಮಿಗೆ ನಾವು ಸದಾ ಕೃತಜ್ಞರಾಗಿರಬೇಕು.

ಇದನ್ನೂ ಓದಿ: Roopa Gururaj Column: ನಿಜವಾದ ಆತ್ಮಜ್ಞಾನ