Saturday, 14th December 2024

ಕೃಷ್ಣನ ರಕ್ಷೆಯ ರಕ್ಷಾ ಬಂಧನ

ರಕ್ಷಾಬಂಧನದ ಹಿಂದೆ ಕೃಷ್ಣ ಹಾಗೂ ದ್ರೌಪದಿಯ ಸುಂದರ ಕಥೆ ಇದೆ. ಶಿಶುಪಾಲ ಜನಿಸಿದಾಗಲೇ ಅವನ ಹತ್ಯೆ ಕೃಷ್ಣನಿಂದ ಆಗುತ್ತದೆ ಎಂದು
ತಿಳಿದಿರುತ್ತದೆ. ಹಾಗಾಗಿ ಅವನ ತಾಯಿ ಕೃಷ್ಣನ ಬಳಿ ಹೋಗಿ ಅವನ ಪ್ರಾಣ ಭಿಕ್ಷೆಯನ್ನು ಕೇಳುತ್ತಾಳೆ. ಆಗ ಕೃಷ್ಣ ಇವನು ಮಾಡುವ ನೂರು ತಪ್ಪುಗ ಳನ್ನು ನಾನು ಕ್ಷಮಿಸುವೆ ನಂತರ ಅವನ ಸಂಹಾರ ಎನ್ನುತ್ತಾನೆ. ದುರ್ಬುದ್ಧಿಯಿಂದ ಶಿಶುಪಾಲ೧೦೧ನೇ ತಪ್ಪನ್ನು ಮಾಡಿದಾಗ ಅವನನ್ನು ಸುದರ್ಶನ ಚಕ್ರದಿಂದ ಕೃಷ್ಣ ಸಂಹಾರ ಮಾಡುತ್ತಾನೆ. ಶಿಶು ಪಾಲನ ಕತ್ತನ್ನು ಕೊಯ್ದು ಸುದರ್ಶನ ಚಕ್ರ ಮರಳಿ ಶ್ರೀಕೃಷ್ಣನ ಬೆರಳಿಗೆ ಬಂದು ಸೇರಿದಾಗ, ಒಂದು ಪುಟ್ಟ ಗಾಯವಾಗಿ ರಕ್ತ ಸುರಿಯುತ್ತಿರುತ್ತದೆ ಇದನ್ನು ನೋಡಿದ ದ್ರೌಪದಿ ಸಹೋದರಿಯ ಪ್ರೀತಿಯಿಂದ ಅವಳ ಸೀರೆಯ ಸೆರಗನ್ನ ಹರಿದು ಅವನ ಕೈಗೆ ಕಟ್ಟುತ್ತಾಳೆ.

ಆ ಒಂದೊಂದು ನೂಲಿನ ಬೆಲೆ ತುಂಬಿದ ಸಭೆಯಲ್ಲಿ ದ್ರೌಪದಿಯ ವಸಪರಣ ಆಗಬೇಕಾದರೆ ಕೃಷ್ಣ ಅವಳಿಗಾಗಿ ಕಳಿಸುತ್ತಾ ಹೋದ ಸೀರೆಯ ರಾಶಿಯಲ್ಲಿ ತಿಳಿಯುತ್ತದೆ. ಅಷ್ಟೇ ಅಲ್ಲ ದ್ರೌಪತಿಯ ಹೆಜ್ಜೆ ಹೆಜ್ಜೆಯಲ್ಲೂ ಕೃಷ್ಣ ಅವಳಿಗೆ ಸಹಾಯ ಮಾಡುತ್ತಾ ಬರುತ್ತಾನೆ. ಪಾಂಡವರು ವನವಾಸದಲ್ಲಿದ್ದಾಗ ಯಾವುದೇ ಮಾಹಿತಿ ಕೊಡದೆ ಬಂದ ದೂರ್ವಾಸಮುನಿಗಳು ಮತ್ತವರ ಶಿಷ್ಯರ ಹಸಿವನ್ನು ತಣಿಸಲು ದ್ರೌಪದಿಗೆ ಅಕ್ಷಯ ಪಾತ್ರೆಯನ್ನು ಕೊಟ್ಟು ದುರ್ವಾ
ಸಮುನಿಗಳ ಶಾಪದಿಂದ ಅವರನ್ನು ರಕ್ಷಿಸುತ್ತಾನೆ.

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ನಾಳೆ ನಡೆಯುವ ಯುದ್ಧದಲ್ಲಿ ಪಾಂಡವರನ್ನು ಕೊಲ್ಲುತ್ತೇನೆ ಎಂದು ಭೀಷ್ಮಾಚಾರ್ಯರು ಶಪಥ ಮಾಡುತ್ತಾರೆ. ಕೃಷ್ಣ ಅದೇ ದಿನ ರಾತ್ರಿ ದ್ರೌಪದಿಯನ್ನು ಭೀಷ್ಮರ ಬಳಿಗೆ ಕರೆದೊಯ್ದು ಅವರಿಗೆ ನಮಸ್ಕರಿಸುಎಂದು ಹೇಳಿ ದೂರ ಉಳಿ ದುಬಿಡುತ್ತಾನೆ. ಅವಳು ನಮಸ್ಕ ರಿಸಿದ ಕೂಡಲೇ ಭೀಷ್ಮನ ಬಾಯಲ್ಲಿ ಸೌಭಾಗ್ಯವತಿ ಭವ ಎಂಬ ಆಶೀರ್ವಾದ ಬಂದುಬಿಡುತ್ತದೆ. ಅವರು ದಿಗ್ಭ್ರಮೆಗೊಂಡು ನಾನೇನು ಹೇಳಿಬಿಟ್ಟೆ ಎಂದು ಯೋಚಿಸಿ ಈ ಸಮಯದಲ್ಲಿ ಏಕೆ ಬಂದೆ ದ್ರೌಪದಿ ಎಂದಾಗ, ಅಣ್ಣ ನನ್ನನ್ನು ಇಲ್ಲಿಗೆ ಬರಲು ಹೇಳಿದರು ಹಾಗಾಗಿ ಬಂದೆ ಎಂದು ಕೃಷ್ಣನ ಬಗ್ಗೆ ತಿಳಿಸುತ್ತಾಳೆ.

ಒಮ್ಮೆ ತನಗಾಗಿ ಮಿಡಿದ ದ್ರೌಪದಿಯನ್ನು ಆಜೀವ ಪರ್ಯಂತ ಸಹೋದರಿಯನ್ನಾಗಿಸಿಕೊಂಡು ಶ್ರೀಕೃಷ್ಣ ಕೊನೆಯವರೆಗೂ ಅವಳನ್ನು ಸಲಹುತ್ತಾನೆ. ಅಣ್ಣ ತಮ್ಮಂದಿರ ಪ್ರೀತಿ ಎಂದರೆ ಹಾಗೆ, ಎಷ್ಟೇ ಕಷ್ಟ ಬಂದರೂ ಒಡಹುಟ್ಟಿದ ಅಕ್ಕ ತಂಗಿಯರ ಬೆನ್ನಿಗೆ ನಿಲ್ಲುವುದು ಅವರನ್ನು ಜೀವನದಲ್ಲಿ ನಗು ನಗುತ್ತಾ ಇರುವಂತೆ ನೋಡಿಕೊಳ್ಳುವುದು. ಎಷ್ಟೋ ಹೆಣ್ಣು ಮಕ್ಕಳಿಗೆ ಒಡಹು ಟ್ಟಿದ ಅಣ್ಣ-ತಮ್ಮಂದಿರು ಇರುವುದಿಲ್ಲ. ಅಂತಹವರು ಈ ರಕ್ಷಾ ಬಂಧನ ಹಬ್ಬದ ಸಮಯದಲ್ಲಿ ಅಣ್ಣ ತಮ್ಮಂದಿರಂತೆ ಪ್ರೀತಿ ಕೊಡುವ ಜೀವಗಳಿಗೆ ರಕ್ಷಾ ಬಂಧನವನ್ನು ಕಟ್ಟಿ ಅವರಿಗೆ ಶುಭವನ್ನು ಹಾರೈಸಬಹುದು.

ಒಡಹುಟ್ಟದಿದ್ದರೇನಂತೆ ಒಡಲಿ ನಲ್ಲಿ ಅಕ್ಕರೆಯ ಪ್ರೀತಿ ಇರುವಾಗ ಮನುಷ್ಯರಾಗಿ ನಾವೆಲ್ಲರೂ ಕೂಡ ಭ್ರಾತೃ ಸಮಾನರೆ. ಇಂತಹ ಅನೇಕ ಸಂಬಂಧ ಗಳು ಜೀವನದುದ್ದಕ್ಕೂ ನಮಗೆ ಎದುರಾಗುತ್ತವೆ. ಎಷ್ಟೋ ಬಾರಿ ಬಡಹುಟ್ಟಿದವರಿಗಿಂತ ಹೆಚ್ಚಾಗಿ ನಮ್ಮನ್ನು ಹಚ್ಚಿಕೊಂಡಂತ ಸ್ನೇಹಿತರು, ಮೆಚ್ಚಿ ಕೊಂಡು ಜೀವನದುದ್ದಕ್ಕೂ ಸಲಹುವ ಅಣ್ಣ-ತಮ್ಮಂದಿರು ಇರುತ್ತಾರೆ. ಇವರಿಗೆ ಯಾವ ರಕ್ತ ಸಂಬಂಧವು ಇಲ್ಲದಿದ್ದರೂ ಕೂಡ ನಮ್ಮ ಕಷ್ಟಗಳಿಗೆ ನೆರವಾಗಿ, ನಮ್ಮ ಸುಖದ ಕ್ಷಣಗಳಲ್ಲಿ ಸದಾ ನಮ್ಮ ಜೊತೆಯಾಗಿ ಶುಭ ಹಾರೈಸುತ್ತಾರೆ.

ಇಂತಹ ಸಂಬಂಧಗಳನ್ನು ನಾವು ಚೇತನದಿಂದ ಕಾಯ್ದುಕೊಳ್ಳಬೇಕು. ಅವರಿಗೆ ಸದಾ ಒಳಿತಾಗಲಿ ದೇವರು ಅವರನ್ನು ತಣ್ಣಗಿಟ್ಟಿರಲಿ ಎನ್ನುವ ನಮ್ಮ ಹಾರೈಕೆ ಶ್ರೀರಕ್ಷೆಯಾಗಿ ಅವರನ್ನು ಕಾಯುತ್ತದೆ. ಒಬ್ಬರಿಗೊಬ್ಬರು ಮಾಡುವ ಪ್ರಾರ್ಥನೆ, ಶುಭ ಹಾರೈಕೆಗಳು ಒಂದು ಸಾತ್ವಿಕ ಪ್ರಭೆಯಾಗಿ ಅವರನ್ನು ಕಷ್ಟದಿಂದ ಪಾರು ಮಾಡುತ್ತದೆ. ಇಂತಹ ಅಣ್ಣ ತಮ್ಮಂದಿರ, ಅಕ್ಕ-ತಂಗಿಯರ ಸಂತತಿ ಸಾವಿರವಾಗಲಿ.