ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಮ್ಮೆ ದೇವಲೋಕದಲ್ಲಿ ಇಂದ್ರನ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ದೇವತೆಗಳು, ಋಷಿಮುನಿಗಳು, ವಾಮದೇವ ಎಂಬ ಮಹರ್ಷಿಗಳೂ ಉಪಸ್ಥಿತರಿದ್ದರು. ಇಂದ್ರನ ಸಭೆ ಅಂದಮೇಲೆ ನೃತ್ಯ- ಗಾಯನ ಎಲ್ಲವೂ ಮೇಳೈಸಿರುತ್ತದೆ. ಅರ್ಧ ರಾಕ್ಷಸ ಗುಣ ಅರ್ಧ ದೇವಗುಣ ಇರುವ ’ಕ್ರೌಂಚ ’ಎಂಬ ಗಂಧರ್ವನು ಆ ಸಭೆಗೆ ಆಗಮಿಸಿದ. ಇವನು ಶಿವಭಕ್ತ ನಾಗಿದ್ದು ದೇವತೆಗಳಿಂದ, ರಾಕ್ಷಸರಿಂದ, ಮನುಷ್ಯರಿಂದ ಯಾವುದೇ ರೀತಿಯಲ್ಲಿ ಸೋಲಾಗಬಾರದು ಎಂದು ಕಠಿಣ ತಪಸ್ಸು ಮಾಡಿ ಶಿವನಿಂದ ವರ ಪಡೆದಿದ್ದನು.
ಶಿವನು ‘ವರ’ ಕೊಟ್ಟು, ಒಂದು ವೇಳೆ ನೀನು ಅಹಂಕಾರಪಟ್ಟರೆ ಅದರಿಂದ ನೀನು ತೊಂದರೆ ಪಡುವೆ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದನು. ಒಳ್ಳೆಯ ಸಂಗೀತಗಾರ ಮತ್ತು ಸುರದ್ರೂಪಿಯಾಗಿದ್ದ ಅವನಿಗೆ ಶಿವನು ಕೊಟ್ಟ ವರದಿಂದ ಸಹಜವಾಗಿಯೇ ಅಹಂಕಾರ ಬಂದಿತ್ತು.
ಇಂದ್ರನ ಸಭೆಗೆ ಬಂದಾಗ ಅಮಲಿನಲ್ಲಿ ತಿಳಿಯದೇ ವಾಮನ ಮಹರ್ಷಿ ಕಾಲನ್ನು ತುಳಿದನು. ವಾಮ ಮಹರ್ಷಿಗೆ ಕೋಪ ಬಂದು, ಎಲ್ಲೋ ನೋಡುತ್ತಾ ನನ್ನ ಕಾಲು ತುಳಿದೆಯಾ? ಅಹಂಕಾರದಿಂದ ಮೆರೆಯುತ್ತಿರುವ ನೀನು ಎಲ್ಲರ ಕಾಲಕೆಳಗೂ ಸಿಗುವ ಇಲಿಯಾಗು ಎಂದು ಕ್ರೌಂಚನಿಗೆ ಶಾಪ ಕೊಟ್ಟರು. ಸ್ವಲ್ಪ ಹೊತ್ತಿಗೆ ವಾಮ ಮಹರ್ಷಿಗಳ ಸಿಟ್ಟು ಕಡಿಮೆಯಾಯಿತು. ಮುನಿಗಳ ಶಾಪಕ್ಕೆ ಹೆದರಿದ ಕ್ರೌಂಚ ವಿನಯದಿಂದ, ಸ್ವಾಮಿ ಇದರಲ್ಲಿ ನನ್ನ ತಪ್ಪೇನೂ ಕ್ಷಮಿಸಿ ಬಿಡಿ ಎಂದು ಪಶ್ಚಾತಾಪ ಪಟ್ಟನು. ಸಮಾಧಾನವಾಗಿದ್ದ ವಾಮನ ಮಹರ್ಷಿಗಳು ನೀನು ಚಿಂತೆ ಮಾಡಬೇಡ, ಎಲ್ಲಾ ಭಗವಂತನ ಇಚ್ಛೆ.
ಇಲಿಯ ರೂಪದಲ್ಲಿದ್ದರೂ ನಿನ್ನನ್ನು ಮುಂದೆ ದೇವತೆಗಳು, ಮಾನವರು, ದಾನವರು, ಎಲ್ಲರೂ ಪೂಜಿಸಿ ನಿನಗೆ
ತಲೆಬಾಗುತ್ತಾರೆ ಎಂದು ಹರಸಿದರು. ಇಲಿಯಾದ ಕ್ರೌಂಚನು ತನ್ನ ಎಂದಿನ ಸ್ವಭಾವದಂತೆ ಅಹಂಕಾರದಿಂದ ದೇಹವನ್ನು ಹಿಗ್ಗಿಸಿಕೊಂಡು ಪರ್ವತದಂತೆ ಬೆಳೆದು ಸಿಕ್ಕಸಿಕ್ಕ ಕಡೆಗೆಲ್ಲ ನುಗ್ಗಿ ಹಾಳು ಮಾಡಿ ಎಲ್ಲರಿಗೂ ತೊಂದರೆ
ಕೊಡ ಹತ್ತಿದನು. ಪರ್ವತಗಳನ್ನೇ ಕಡಿದು ಕಡಿದು ಪುಡಿ ಮಾಡಿದ ಹೀಗೆ ಪರ್ವತ ಗಿರಿ ಶಿಖರಗಳನ್ನು ಧ್ವಂಸ ಮಾಡುತ್ತಾ ಋಷಿಮುನಿಗಳು ನೆಲೆಸಿದ್ದ ಕಾಡಿನ ಹಲವು ಆಶ್ರಮಗಳನ್ನು ಹಾಳುಮಾಡಿದ. ಹಾಗೆ ಪರಾಶರ ಮಹರ್ಷಿ ಗಳ ಕುಟೀರಕ್ಕೂ ನುಗ್ಗಿ ಹಾಳು ಮಾಡಿದ. ಇದನ್ನು ನೋಡಿದ ಪರಾಶರ ಮಹರ್ಷಿಗಳು ದುಷ್ಟ ಮೂಷಿಕ ನಿಗೆ ಬುದ್ಧಿ ಕಲಿಸ ಬೇಕೆಂದು ಪರಮೇಶ್ವರನ ಬಳಿ ಬಂದು ಕೇಳಿಕೊಂಡರು. ಎಲ್ಲವನ್ನೂ ಅರಿತ ಪರಮೇಶ್ವರನು ಮೂಷಿಕನ ಅಹಂಕಾರ ಮುರಿಯುವಂತೆ ಗಣೇಶನಿಗೆ ಹೇಳಿದನು.
ಆಗ ಕೈಯಲ್ಲಿ ಒಂದು ಹಗ್ಗ ಹಿಡಿದು ಬಂದ ಗಣೇಶ ಇಲಿಯ ಮೇಲೆ ಬೀಸಿದನು. ಆ ಹಗ್ಗ ಬಹಳ ಉದ್ದವಿದ್ದುದರಿಂದ ಇಲಿ ಪಾತಾಳಕ್ಕೆ ನೆಗೆಯಿತು. ಆದರೆ ಗಣೇಶ ಹಗ್ಗವನ್ನು ರಭಸದಿಂದ ಒಂದೇ ಸಲಕ್ಕೆ ಎಳೆದಾಗ ಮೂಷಿಕ ಜೊತೆಯ
ಬಂದು ಗಣೇಶನ ಪಾದದ ಬುಡದಲ್ಲಿ ಬಿದ್ದಿತು. ಗಣೇಶ ಮೂಷಕ ನೀನೇಕೆ ಜನಗಳಿಗೆ, ಋಷಿಮುನಿಗಳಿಗೆ ಕಾಟ ಕೊಡುತ್ತಿರುವೆ ಎಂದು ಕೇಳಿದಾಗ, ಮೂಷಿಕ ಅದಕ್ಕೆ ಉತ್ತರ ಕೊಡದೆ ಗಣೇಶನ ಪಾದಕ್ಕೆ ತಲೆಬಾಗಿತು. ಶರಣು ಬಂದ
ನಿನಗೆ ನಾನು ರಕ್ಷಣೆ ಕೊಡುವೆ ಎಂದ ಗಣೇಶ ಇಲಿಯ ಮೇಲೆ ಹತ್ತಿ ಕುಳಿತ. ಗಣೇಶ ಕುಳಿತ ಭಾರಕ್ಕೆ ಕ್ರೌಂಚನಿಗೆ ಉಸಿರು ಕಟ್ಟಿದಂತಾಗಿ ಇನ್ನೇನು ಸತ್ತೇ ಹೋಗುವೆ ಎಂಬಂತೆ ಒದ್ದಾಡಿತು.
ಹಿಂಸೆ ತಾಳಲಾರದೆ ಗಣೇಶ ನಿನ್ನ ಭಾರ ಹೆಚ್ಚಾಗಿದೆ ಕಾಪಾಡು ಎಂದಿತು. ಈಗ ಅದರ ಅಹಂಕಾರ ಅಳಿದುವುದನ್ನು ತಿಳಿದ ಗಣೇಶ ತನ್ನ ದೇಹವನ್ನು ಹಗುರ ಮಾಡಿಕೊಂಡನು. ಮೂಷಕ ಸದ್ಯ ಬದುಕಿದೆನಲ್ಲ ಎಂದು ಗಣೇಶನಿಗೆ ತಲೆಬಾಗಿತು ಅಂದಿನಿಂದ ’ಮೂಷಕ’ ಗಣೇಶನ ವಾಹನವಾಯಿತು.
ಬದುಕಿನಲ್ಲಿ ನಮಗಿರುವ ಸಾಮರ್ಥ್ಯಗಳ ಬಗ್ಗೆ ಅಹಂಕಾರ ಪಡೆದೆ, ವಿನಯದಿಂದ ಎಲ್ಲರನ್ನೂ ದೇವರು ನಮಗೆ ಮತ್ತಷ್ಟು ದೇವರು ಒಳಿತು ಮಾಡಿ ಆಶೀರ್ವದಿಸುತ್ತಾನೆ ಎನ್ನುವುದಕ್ಕೆ ಮೇಲಿನ ಕಥೆ ಒಳ್ಳೆಯ ಉದಾಹರಣೆ.