Saturday, 26th October 2024

Roopa Gururaj Column: ಹಸಿದು ಬಳಲಿದ ಕೃಷ್ಣನಿಗೆ ದಿನವಿಡೀ ನೈವೇದ್ಯ…

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಕೇರಳದಲ್ಲಿ ಶ್ರೀಕೃಷ್ಣನ ದೇವಸ್ಥಾನಗಳು ಸಾಕಷ್ಟು ಇವೆ. ಇಲ್ಲಿ ಸಾಮಾನ್ಯವಾಗಿ ಎಲ್ಲರೂ ಕೃಷ್ಣನನ್ನು ಹೆಚ್ಚು ಆರಾಧಿಸುತ್ತಾರೆ. ಕೇರಳದ ಕೊಟ್ಟಾಯಂನಿಂದ 7 ಕಿಲೋ ಮೀಟರ್ ದೂರ ಇರುವ ‘ತಿರುವರಪ್ಪು’ಗ್ರಾಮದಲ್ಲಿ
ಮೀನಾಕ್ಷಿ ನದಿಯ ದಂಡೆಯಲ್ಲಿ ವಿಶೇಷವಾದ ಶ್ರೀಕೃಷ್ಣನ ದೇವಸ್ಥಾನವಿದೆ. ಈ ದೇವಸ್ಥಾನವು 1500 ವರ್ಷ ಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿದೆ. ಇಲ್ಲಿನ ವಿಶೇಷ ಎಂದರೆ, ಕೃಷ್ಣನಿಗೆ ನಿತ್ಯವೂ ಹತ್ತು ಹನ್ನೆರಡು ಸಲ ನೈವೇದ್ಯ ಅರ್ಪಿಸುತ್ತಾರೆ. ಈ ದೇವಾಲಯ ವರ್ಷದ 365 ದಿನಗಳು ಹಗಲು ರಾತ್ರಿ ಕೂಡಿ ಪ್ರತಿನಿತ್ಯ ದೇವಸ್ಥಾನದ ಬಾಗಿಲು ಅಂದರೆ 23 ಗಂಟೆ 58 ನಿಮಿಷವೂ ತೆಗೆದೇ ಇರುತ್ತದೆ.

ಶ್ರೀಕೃಷ್ಣನ ರಾತ್ರಿಯ ವಿಶ್ರಾಂತಿಯ ಸಮಯ ಕೇವಲ ಎರಡು ನಿಮಿಷ ಮಾತ್ರ (ಕೃಷ್ಣನ ನಿದ್ರೆ), ರಾತ್ರಿ ೧೧:೦೦ ಗಂಟೆ ೫೮ ನಿಮಿಷಕ್ಕೆ ದೇವಸ್ಥಾನದ ಬೀಗ ಹಾಕಿದರೆ, 12 ಗಂಟೆಗೆ ಸರಿಯಾಗಿ ತೆರೆಯುತ್ತಾರೆ. ಬಾಗಿಲು ತೆಗೆಯುವುದು ಕ್ಷಣ
ತಡವಾದರೂ ಕೃಷ್ಣ ಹಸಿವಿನಿಂದ ಬಳಲಿರುತ್ತಾನೆ. ಆದ್ದರಿಂದ ಬಾಗಿಲು ತೆಗೆಯುವ ಅರ್ಚಕರ ಕೈಲಿ ಕೀಲಿ ಕೈ ಜೊತೆಗೆ ಚಿಕ್ಕ ಕೊಡಲಿ ಇರುತ್ತದೆ. ಅಕಸ್ಮಾತ್ ಬೀಗ ತೆಗೆಯಲು ವಿಳಂಬವಾದರೆ, ಕೊಡಲಿಯಿಂದ ಬೀಗವನ್ನು ಒಡೆದು ಬಾಗಿಲು ತೆಗೆಯುವ ಅಧಿಕಾರ ಅರ್ಚಕರಿಗೆ ಇರುತ್ತದೆ. ಅರೆ ಕ್ಷಣವು ತಡ ಮಾಡುವಂತಿಲ್ಲ.

ತಡವಾದರೆ ಕೃಷ್ಣನು ಹಸಿವಿನಿಂದ ಬಳಲುತ್ತಾನೆ ಎಂಬುದು ಭಕ್ತರ ಗಟ್ಟಿಯಾದ ನಂಬಿಕೆ. ಇನ್ನೂ ಒಂದು ವಿಶೇಷ, ಗ್ರಹಣ ಕಾಲದಲ್ಲೂ ಈ ದೇವಸ್ಥಾನ ಬಾಗಿಲ ತೆಗೆದಿರುತ್ತದೆ. ಒಮ್ಮೆ ಹೀಗಾಯಿತು, ಗ್ರಹಣ ಕಾಲವೆಂದು ಹಿಂದಿನ ದಿನವಿಡಿ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. ಮರುದಿನ ಬಂದು ಅರ್ಚಕರು ಬಾಗಿಲು ತೆಗೆಯುವಾಗ ಕೃಷ್ಣನ ಸೊಂಟದ ಪಟ್ಟಿ ತುಂಬಾ ಕೆಳಗೆ ಜಾರಿತ್ತು. ಹೀಗೆಕಾಯಿತು? ಎಂದು ಅಲ್ಲಿದ್ದ ಆಶ್ಚರ್ಯ ವ್ಯಕ್ತಪಡಿಸಿದಾಗ, ಶಂಕರಾ
ಚಾರ್ಯರು ಹೇಳಿದರು, ‘ಈ ಕೃಷ್ಣನಿಗೆ ಬಹಳ ಹಸಿವು ಜಾಸ್ತಿ, ಕ್ಷಣವೂ ತಡೆದು ಕೊಳ್ಳಲಾರ ನೆನ್ನೆ ಗ್ರಹಣವೆಂದು
ದಿನವೆಲ್ಲ ಉಪವಾಸವಿದ್ದ ಕಾರಣ ಅವನ ಹೊಟ್ಟೆ ಸಣ್ಣಗಾಗಿ ಸೊಂಟದ ಪಟ್ಟಿ ಜಾರಿ ಬಿದ್ದಿದೆ’ ಎಂದರು.
ಆಚಾರ್ಯರ ಮಾತಿನಂತೆ ಮುಂದಿನ ದಿನಗಳಲ್ಲಿ ಗ್ರಹಣದ ಸಮಯದಲ್ಲೂ ಬಾಗಿಲು ತೆಗೆದು ನಿತ್ಯದಂತೆ ನೈವೇದ್ಯ ಅರ್ಪಿಸುತ್ತಾರೆ.

ಇಲ್ಲಿನ ಕೃಷ್ಣನಿಗೆ ಇಷ್ಟು ಹಸಿವಾಗಲು ಕಾರಣ ದ್ವಾಪರ ಯುಗದ ಒಂದು ಸಂದರ್ಭ ಎನ್ನುತ್ತಾರೆ. ಕೃಷ್ಣನು
ಮಥುರಾ ನಗರದ ರಾಜ, ಕೃಷ್ಣನ ಸೋದರ ಮಾವ ಕಂಸನನ್ನು ಕೊಂದ ನಂತರ ವಿಪರೀತ ಆಯಾಸ ಮತ್ತು
ಹಸಿವಿನಿಂದ ಬಳಲಿದ್ದನು. (ಆಗ ಕೃಷ್ಣನಿಗೆ ವಿಶ್ರಾಂತಿ ತೆಗೆದುಕೊಳ್ಳಲು ಕೆಲವು ದಿನಗಳೆ ಹಿಡಿದಿರಬಹುದು) ಈ
ರೀತಿ ಸಂಬಂಧ ಹೊಂದಿದ ಕಥೆಯಂತೆ ತನ್ನದೇ ಚತುರ್ಭುಜ ವಿಗ್ರಹವನ್ನು ಪಾಂಡವರಿಗೆ ಕೊಟ್ಟಿದ್ದನು.

ವಿಗ್ರಹ ಪಾಂಡವರ ಕೈ ಸೇರಿದಾಗ, ಕೃಷ್ಣನಿಗೆ ತೃಪ್ತಿಯಾಯಿತು. ಪಾಂಡವರು ಅಜ್ಞಾತವಾಸಕ್ಕೆ ಹೊರಟು
ವರ್ಷದಲ್ಲಿ ಆ ಗ್ರಾಮದ ಪರಿಸ್ಥಿತಿಯ ಕಾರಣದಿಂದ ವಿಗ್ರಹ ಸಮುದ್ರದ ಆಳದಲ್ಲಿ ಸೇರಿತು. ಮತ್ತೆ ಶಂಕರಾ
ಚಾರ್ಯರ ಮೂಲಕ ಪ್ರತಿಷ್ಠಾಪನೆಯಾಗಿ ಒಬ್ಬ ಸನ್ಯಾಸಿ ಗಳು ಶ್ರೀಕೃಷ್ಣನಿಗೆ ವಿಶೇಷ ಪೂಜೆ ನೈವೇದ್ಯಗಳನ್ನು
ವಿಽವತ್ತಾಗಿ ನಡೆಸುತ್ತಿದ್ದರು ಕ್ರಮೇಣ ಪ್ರಸಿದ್ಧಿಗೆ ಬಂದಿತು.

ಇಂಥ ಭವ್ಯ ಇತಿಹಾಸವಿರುವ ಅನೇಕ ದೇವಸ್ಥಾನಗಳು ನಮ್ಮ ಅಖಂಡ ಪ್ರವಾಸ ಎಂದು ಹೊರಡುವಾಗ
ಇಂತಹ ಅದ್ಭುತ ಸ್ಥಳಗಳಿಗೆ ಹೋಗಿ ನಮ್ಮ ಮಕ್ಕಳನ್ನೂ ಕರೆದುಕೊಂಡು ಹೋದಾಗ ನಮ್ಮ ಸಂಸ್ಕೃತಿ
ಇತಿಹಾಸವನ್ನು ಮಕ್ಕಳಿಗೆ ಪರಿಚಯಿಸಿದಂತಾಗುತ್ತದೆ. ಇಂತಹ ಅಪರೂಪದ ದೇವಸ್ಥಾನಗಳು ಮತ್ತು ಅಲ್ಲಿನ
ಪದ್ಧತಿಗಳು, ಜೊತೆಗೆ ಆ ಸ್ಥಳದ ಐತಿಹಾಸ ಎಲ್ಲವನ್ನು ತಿಳಿದುಕೊಂಡಾಗ ನಾವು ನಮ್ಮ ಸಂಸ್ಕೃತಿಯನ್ನು
ಮತ್ತಷ್ಟು ಗೌರವಿಸುತ್ತೇವೆ.

ಇದನ್ನೂ ಓದಿ: Roopa Gururaj Column: ಉಪಕಾರ ಮಾಡಿ, ಅದನ್ನು ನೆನಪಿಸುತ್ತಿರಬೇಡಿ