Sunday, 15th December 2024

Roopa Gururaj Column: ಕೂಡಿಟ್ಟ ಸಂಪತ್ತು, ಹಾಳುಬಿದ್ದ ಬಾವಿಯಂತೆ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದೂರಿನಲ್ಲಿ ಧರ್ಮದಾಸ ಎಂಬ ವ್ಯಕ್ತಿ ಇರುತ್ತಿದ್ದ. ಮಾತು ಬಹಳ ಸಿಹಿ ಮತ್ತು ಮಧುರವಾಗಿ ನುಡಿಯು ತ್ತಿದ್ದರೂ ಬಹಳ ಜಿಪುಣ. ಒಮ್ಮೆ ಅವನ ಬಾಗಿಲಿಗೆ ಒಬ್ಬ ಮಹಾತ್ಮರು ಬರುತ್ತಾರೆ. ಧರ್ಮದಾಸನಿಂದ ಊಟ ಕೇಳುತ್ತಾರೆ. ಮೊದಮೊದಲಂತೂ ಮಹಾತ್ಮರಿಗೆ ಏನನ್ನೂ ಕೊಡಲು ನಿರಾಕರಿಸಿದ ಅವನು. ಆದರೆ ಮಹಾತ್ಮರು ರಾತ್ರಿಯಾದರೂ ನಿಂತೇ ಇರುವುದು ನೋಡಿ, ‘ಬನ್ನಿ ಪೂಜ್ಯರೇ, ನೀವು ಹೊಟ್ಟೆ ತುಂಬ ಊಟ ಮಾಡಿ..!’ ಎಂದು ಹೇಳಿದ.

ಆ ಮಹಾತ್ಮರು ಕೂಡ ಅಂತಿಂಥವರಲ್ಲ. ಅವನಿಗೆ ತಿರುಗೇಟು ಕೊಡುವ ಉದ್ದೇಶದಿಂದ – ‘ಈಗ ನನಗೆ ಊಟ
ಬೇಕಾಗಿಲ್ಲ, ನಾನು ಊಟ ಮಾಡಲಾರೆ. ನನಗೊಂದು ಬಾವಿಯನ್ನು ತೋಡಿಸಿ ಕೊಡು.’ ಎಂದು ಹೇಳಿದರು.
‘ಅರೆ..!, ಊಟದ ಅವಾಂತರದ ನಡುವೆ ಈ ಬಾವಿ ತೊಡವ ಕೆಲಸ ಎಲ್ಲಿಂದ ಬಂತು..!?’ ಅಸಮಾಧಾನದಿಂದ
ಹೇಳಿದ.

ಆ ಮಹಾತ್ಮರು ಪುನಃ ರಾತ್ರಿಯಿಡಿ ಧರ್ಮದಾಸನ ಮನೆಯ ಬಾಗಿಲಲ್ಲಿ ನಿಂತಿದ್ದರು. ‘ಈಗ ಇವರಿಗೆ ಬಾವಿ‌ ತೋಡಿಸಿ ಕೊಡದಿದ್ದರೆ ಇವರಂತೂ ನಿಶ್ಚಯವಾಗಿ ಹಸಿವು ನೀರಡಿಕೆಗಳಿಂದ ಸತ್ತು ಹೋಗಬಹುದು ವಿನಾಕಾರಣ ನಾನು ಜನಗಳ ಕೆಟ್ಟ ನಿಂದನೆಗೆ ಗುರಿಯಾಗುವೆನು’ ಎಂದು ಬಹಳ ಆಳವಾಗಿ ಯೋಚನೆ ಮಾಡಿ ಅವರನ್ನು ಆಗಲಿ ಬನ್ನಿ ಎಂದು ಕರೆದನು.

ಅಷ್ಟೇ ದಿಟವಾಗಿ ಆ ಮಹಾತ್ಮರು ಹೇಳಿದರು. ‘ಒಂದಲ್ಲ…ಎರಡು ಬಾವಿಗಳನ್ನು ತೋಡಿಸಿ ಕೊಡಬೇಕಾಗುವುದು ..!’ ಈಗ ಜಿಪುಣನಿಗೆ ಆತಂಕವಾಯಿತು- ‘ನಾನು ಎರಡು ಬಾವಿಗಳನ್ನು ತೋಡಿಸಿ ಕೊಡಲು ಒಪ್ಪದಿದ್ದರೆ ಇವನು ಮುಂದೆ ನಾಲ್ಕು ಬಾವಿಗಳನ್ನು ತೋಡಿ ಕೊಡುವಂತೆ ಹೇಳುವನು..!’ ಎಂದೆನಿಸಿತು.

ಹೀಗಾಗಿ ಅವನಿಗಾಗಿ ಎರಡು ಬಾವಿಗಳನ್ನು ತೋಡುವ ತನ್ನ ಒಳ್ಳೆಯತನ ಇದೆ ಎಂದುಕೊಂಡ. ಬಾವಿ ತೋಡುವ ಕೆಲಸ ಮುಗಿಯಿತು. ಆ ಬಾವಿಗಳಲ್ಲಿ ನೀರು ತುಂಬ ತೊಡಗಿತು. ಯಾವಾಗ ನೀರಿನಿಂದ ಬಾವಿಗಳು ತುಂಬಿದವೋ ಆಗ ಮಹಾತ್ಮರು ಧರ್ಮದಾಸನಿಗೆ ಹೇಳಿದರು -‘ಎರಡು ಬಾವಿಗಳಲ್ಲಿ ಒಂದನ್ನು ನಿನಗೆ ಕೊಟ್ಟು, ಮತ್ತೊಂದನ್ನು ನಾನು ಇಟ್ಟುಕೊಳ್ಳುತ್ತೇನೆ. ಕೆಲವು ದಿನಗಳ ವರೆಗೆ ನಾನು ಎ ಹೊರಟಿದ್ದೇನೆ. ಆದರೆ, ಗಮನ ವಿರಲಿ..! ನನ್ನ ಬಾವಿ ಯಲ್ಲಿನ ಒಂದು ಹನಿ ನೀರನ್ನೂ ನೀ ಮುಟ್ಟಕೂಡದು. ಜೊತೆಗೆ ಊರಿನ ಜನರಿಗೆಲ್ಲ ನಿನ್ನ ಬಾವಿಯಲ್ಲಿರೋ ನೀರೇ ಕೊಡತಕ್ಕದ್ದು. ನಾನು ಹಿಂತಿರುಗಿ ಬಂದು ನನ್ನ ಬಾವಿಯೊಳಗಿನ ನೀರು ಕುಡಿದು ನನ್ನ ದಾಹವನ್ನು ಹಿಂಗಿಸಿ ಕೊಳ್ಳುವೆ’ ಎಂದರು.

ಈ ಮಾತಿಗೆ ಧರ್ಮದಾಸನು ಮಹಾತ್ಮರ ಬಾವಿಯ ಬಾಯಿಗೆ ದೊಡ್ಡ ಮುಚ್ಚಳವನ್ನು ಮಾಡಿ ಮುಚ್ಚಿಸಿ ಬಿಟ್ಟ. ಆ ನಂತರ ಊರಿನ ಎಲ್ಲ ಜನರು ಧರ್ಮದಾಸನ ಬಾವಿಯಲ್ಲಿಯೇ ನೀರು ಬಳಸಿ ತೊಡಗಿದರು. ಊರಿನ ಜನರೆಲ್ಲ ನೀರು ಒಯ್ದರೂ ಬಾವಿಯ ನೀರು ಸ್ವಲ್ಪವೂ ಕಡಿಮೆ ಆಗುತ್ತಿರಲಿಲ್ಲ. ಶುದ್ಧ ಮತ್ತು ಸ್ವಚ್ಛ ಸಿಹಿ ನೀರನ್ನು ನೋಡಿ ಊರಿನ ಜನರೆಲ್ಲ ಸಂಭ್ರಮ ಪಟ್ಟರು. ಯಾವ ದಣಿವನ್ನು ಅರಿಯದೆ ಮಹಾತ್ಮರ ಗುಣಗಾನವನ್ನು ಮಾಡುತ್ತಿದ್ದರು. ಒಂದು ವರ್ಷದ ಬಳಿಕ ಮಹಾತ್ಮರು ಆ ಊರಿಗೆ ಬಂದರು ಮತ್ತು ತನ್ನ ಬಾವಿಯ ಬಾಯಿಯನ್ನು ತೆಗೆಯಲು ಹೇಳಿದರು. ಧರ್ಮದಾಸನು ಆ ಬಾವಿಯ ಮುಚ್ಚಳವನ್ನು ತೆಗೆಸಿದನು.

ಜನರು ಕುತೂಹಲದಿಂದ ನೋಡಿದರು. ಆದರೆ ಆಶ್ಚರ್ಯ..! ಮಹಾತ್ಮರ ಬಾವಿಯಲ್ಲಿ ಒಂದು ಹನಿ ನೀರೂ ಇರಲಿಲ್ಲ. ಆಗ ಮಹಾತ್ಮರು ಹೇಳುತ್ತಾರೆ; ‘ಬಾವಿಯಿಂದ ಎಷ್ಟು ನೀರು ತೆಗೆದರೂ ಅದು ಯಾವತ್ತೂ ಮುಗಿಯು ವುದೇ ಇಲ್ಲ. ಬದಲಾಗಿ ವೃದ್ಧಿಯಾಗುತ್ತ ಹೋಗುತ್ತದೆ. ಬಾವಿಯಲ್ಲಿನ ನೀರು ತೆಗೆಯದೇ ಹೋದರೆ ಆ ಬಾವಿ ಹಾಳುಬಿದ್ದು ಒಣಗಿ ಹೋಗುತ್ತದೆ’ ಎಂದು.

ಬಾವಿಯ ನೀರಿನ ಹಾಗೆಯೇ ಧನಸಂಪತ್ತು ಕೂಡ. ಅದರ ಸದುಪಯೋಗ ಮಾಡದೇ ಇದ್ದಲ್ಲಿ ಅದು ಕೂಡ ಬಾವಿಯ ನೀರಿನ ಹಾಗೆ ವ್ಯರ್ಥವಾಗಿ ಹೋಗುತ್ತದೆ ಅಥವಾ ಅದು ಸಂಭವವಾಗದಿದ್ದಲ್ಲಿ ಬೇರೆ ಯಾರೋ ದುರುಳರು ಅದರ ಉಪಯೋಗವನ್ನು ಪಡೆಯುತ್ತಾರೆ. ನಿಜವಲ್ಲವೇ? ಇದು ನಾವೂ ತಿಳಿಯಬೇಕಾದ ವಿಷಯ.

ಇದನ್ನೂ ಓದಿ: Roopa Gururaj Column: ತಲ್ಲಣಿಸದಿರು ಕಂಡ್ಯಾ, ತಾಳು ಮನವೇ…