Thursday, 21st November 2024

Roopa_Gururaj_Column: ಸಂಬಂಧಗಳಲ್ಲಿ ಲಾಭ-ನಷ್ಟ ಲೆಕ್ಕ ಹಾಕಬೇಡಿ !

ಒಂದೊಳ್ಳೆ ಮಾತು

ರಸ್ತೆ ಪಕ್ಕದಲ್ಲಿ ಸಣ್ಣ ಮಗುವೊಂದು ಕಲ್ಲಂಗಡಿ ಹಣ್ಣನ್ನು ಮಾರುತ್ತಿತ್ತು. ಗಂಡ ಹೆಂಡತಿ (Husband Wife)ಮತ್ತು ಮಗು ಪ್ರಯಾ ಣಿಸುತ್ತಿದ್ದ ಕಾರೊಂದು ಬಂದು ನಿಂತಿತು. ಹೆಂಡತಿ, ಆ ಹುಡುಗಿಗೆ, ‘ಹಣ್ಣೊಟದಕ್ಕೆ ಎಷ್ಟು?’ ಎಂದಳು. ‘೪೦ ರುಪಾಯಿಯಮ್ಮ’, ‘೨೦ ಕ್ಕೆ ಕೊಡಲ್ವೇ?’ ‘ಇಲ್ಲ.’ ‘೩೦ಕ್ಕಾದರೂ ಕೊಡು.’

‘ಇಲ್ಲ,’ ‘ನಾನು ತಂದಿದ್ದೇ ೩೫ ಕ್ಕೆ’ ‘ಸರಿ, ಕೊಡು’ ಎಂದಳು. ಈ ಚೌಕಾಸಿ ನೋಡಿ ಗಂಡ ನಗುತ್ತಾ, ಕುಳಿತಿದ್ದ.
ಆ ಹುಡುಗಿ ಹಣ್ಣು ತಂದಳು. ಕಾರಲ್ಲಿಂದ ಕೈಚಾಚಿದ ಆ ಮಗುವಿನ ಕೈಗೆ ಕೊಡಲು ಹೋದಾಗ, ಕೈ ಜಾರಿ ಕೆಳಗೆ ಬಿತ್ತು. ಕಾರಲ್ಲಿದ್ದವ ಅಳಲು ಪ್ರಾರಂಭಿಸಿದ. ಮತ್ತೆ, ಓಡಿ ಹೋಗಿ, ಆ ಹುಡುಗಿ ಮತ್ತೊಂದು ತಂದು ಜಾಗರೂಕತೆ ಯಿಂದ ಕೊಟ್ಟಳು. ಹೆಂಡತಿ, ಆ ಹಣ್ಣು ಮಾರುವ ಹುಡುಗಿಗೆ ೮೦ ರುಪಾಯಿ ಕೊಟ್ಟಳು. ಎಣಿಸಿಕೊಂಡ ಆ ಹುಡುಗಿ ೪೦ ರುಪಾಯಿ ವಾಪಸ್ಸು ಕೊಟ್ಟಳು.

ಚೌಕಾಸಿ ಮಾಡಿದ್ದ ಆ ಮಹಿಳೆ ಒತ್ತಾಯ ಮಾಡಿ ಕೊಡಲು ಪ್ರಯತ್ನಿಸಿದಳು, ಆದರೆ ಆ ಹುಡುಗಿ ಸುತರಾಟ ತೆಗೆದು ಕೊಳ್ಳಲಿಲ್ಲ. ‘ನಿನ್ನ ಹಣ್ಣು ಹಾಳು ಮಾಡಿದ್ದು ನನ್ನ ಮಗ, ನಿನಗೆ ನಷ್ಟ ಆಗುತ್ತದೆ ತೆಗೆದಿಕೋ’ ಎಂದಳು. ಆಗ ಆ ಹುಡುಗಿ, ‘ಇಲ್ಲ ನಷ್ಟಮಾಡಿದ್ದು ನನ್ನ ತಮ್ಮ, ಹಾಗಾಗಿ ಅದು ನಷ್ಟವೇನಲ್ಲ ಬಿಡಿ’ ಎಂದಳು. ಎಷ್ಟೊತ್ತು ಒತ್ತಾಯಿಸಿದರೂ, ಒಪ್ಪದ ಆ ಹುಡುಗಿ, ‘ಇಲ್ಲಮ್ಮ ಸಂಬಂಧಗಳಲ್ಲಿ ಲಾಭ ನಷ್ಟಗಳನ್ನು ಲೆಕ್ಕಿಸಬೇಡ ಎಂದು ನನ್ನಮ್ಮ ಹೇಳಿದ್ದಾಳೆ. ಹಾಗಾಗಿ ಅದನ್ನು ನಾನು ಲೆಕ್ಕಿಸುವುದಿಲ್ಲ’ ಎಂದಳು.

ಭಾವುಕಳಾದ ಆ ಮಹಿಳೆ, ‘ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದೀರಿ?’ ಎಂದು ಕೇಳಿದಳು. ‘ನಾನು ನನ್ನಮ್ಮ ಮಾತ್ರ ಇದ್ದೇವೆ, ಸ್ವಲ್ಪ ದಿನಗಳ ಕೆಳಗೆ, ನನ್ನ ತಮ್ಮ ಕಾಯಿಲೆಯಿಂದ ನರಳಿ ಸತ್ತು ಹೋದ. ನಿಮ್ಮ ಮಗನನ್ನು ನೋಡಿ, ನನ್ನ ತಮ್ಮ ನೆನಪಾದ. ಹಾಗಾಗಿ ತಮ್ಮ ತಿಂದಿದ್ದರೂ, ಒಡೆದು ಹಾಕಿದ್ದರೂ ಅದು ನನಗೆ ಪ್ರೀತಿಯೇ, ಇಲ್ಲಿ ನಷ್ಟದ ಮಾತೇ ಇಲ್ಲ’ ಎಂದು ಹೇಳಿ ತನ್ನ ಹಣ್ಣುಗಳಿದ್ದಲ್ಲಿಗೆ ಹೋದಳು.

ಒಂದು ಹಣ್ಣಿಗೆ ಚೌಕಾಸಿ ಮಾಡುತ್ತಿದ್ದ, ಆ ಮಹಿಳೆ ಕಾರಿಂದ ಇಳಿದು ಹೋಗಿ, ತನ್ನ ಪರ್ಸಿನಲ್ಲಿದ್ದ ೫,೦೦೦ ರು. ಗಳನ್ನು ಆ ಹುಡುಗಿಗೆ ಕೊಟ್ಟಳು. ಆ ಹುಡುಗಿ ಆಶ್ಚರ್ಯದಿಂದ, ‘ಇವು ನನಗೇಕೆ ಬೇಡ ಎಂದಳು!’ ಆಗ ಆ ಮಹಿಳೆ, ‘ಬೇಡ ಎನ್ನಬೇಡ ತೆಗೆದಿಕೋ, ಇವುಗಳನ್ನು ನಾನು ಬೇರಾರಿಗೋ ಕೊಡುತ್ತಿಲ್ಲ, ನನ್ನ ಮಗಳಿಗೆ ಕೊಡುತ್ತಿದ್ದೇನೆ’ ಎಂದಳು. ಒತ್ತಾಯ ಮಾಡಿದಾಗ ತೆಗೆದುಕೊಂಡ ಆ ಹುಡುಗಿ ಪ್ರೀತಿಯಿಂದ ಮತ್ತೊಂದು ಹಣ್ಣನ್ನು ತಂದು ಆ ಕಾರಲ್ಲಿದ್ದ ಮಗುವಿಗೆ ಕೊಟ್ಟಳು. ಇದನ್ನೆಲ್ಲ ಗಮನಿಸುತ್ತಿದ್ದ ಗಂಡನಿಗೆ, ಆಶ್ಚರ್ಯವೋ ಆಶ್ಚರ್ಯ…! ಕೇವಲ
ಐವತ್ತು ರುಪಾಯಿಗೆ ಚೌಕಾಸಿ ಮಾಡಿದ ಹೆಂಡತಿ, ಅದೇಕೆ ಆ ಹುಡುಗಿಗೆ ಪರ್ಸಿನಲ್ಲಿದ್ದ ಅಷ್ಟೂ ಹಣವನ್ನು ಕೊಟ್ಟುಬಿಟ್ಟಳು? ಎಂದು ಅವಳ ಮುಖ ನೋಡಿದ.

ಅವನನ್ನು ಗಮನಿಸದ ಆ ಹೆಂಡತಿ, ತನ್ನ ಅಣ್ಣನಿಗೆ ಕರೆ ಮಾಡಿ ‘ಅಣ್ಣ, ನಿನ್ನ ಪ್ರೀತಿ ಸಾಕು ನನಗೆ, ನಿನ್ನ ಮೇಲೆ ಹಾಕಿದ ಆಸ್ತಿ ಕಟ್ಲೆಗಳನ್ನು ವಾಪಾಸು ಪಡೆಯುತ್ತಿದ್ದೇನೆ. ಸಂಬಂಧಗಳಲ್ಲಿ ಲಾಭ ನಷ್ಟದ ಲೆಕ್ಕಾಚಾರ ಇರಬಾರದು
ಎಂಬುದನ್ನು, ಸದ್ಯ ಒಂದು ಸಣ್ಣ ಹುಡುಗಿ ನನಗೆ ಕಲಿಸಿಕೊಟ್ಟಳು’ ಎಂದು ಹೇಳಿದಳು. ಪ್ರಾಪಂಚಿಕ ವಸ್ತುಗಳಿಗೆ ಸುಖವಾಗಿ ಅತಿಯಾಗಿ ಬೆಲೆ ಕೊಡುವ ನಾವು ಇಂದು ಸಂಬಂಧಗಳನ್ನು ಮರೆತೇ ಬಿಟ್ಟಿದ್ದೇವೆ. ಒಮ್ಮೆ ನೆನಪು ಮಾಡಿ ಕೊಳ್ಳಿ ನಮ್ಮ ಅಣ್ಣ ತಮ್ಮ ಅಕ್ಕ ತಂಗಿಯ ಜೊತೆ ನಾವು ಕಳೆದ ಸುಖ, ಸಂತೋಷ, ದುಃಖ ಮತ್ತು ಆಪ್ತ ಸಮಯ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು. ಅದೆಷ್ಟೇ ಹಣ ಕೊಟ್ಟರೂ ಅಂತಹ ಘಳಿಗೆಗಳನ್ನು ನಾವು ಸೃಷ್ಟಿ ಮಾಡಲು ಸಾಧ್ಯವಿಲ್ಲ.