ಮದುವೆಯಾದ ನಂತರದ ತಿಂಗಳುಗಳು ಬಹು ಸುಂದರ. ಅಲ್ಲಿ ಇಲ್ಲಿ ಓಡಾಡಿಕೊಂಡು ಸಂತಸದಿಂದ ಕಾಲ ಕಳೆಯ ಬಹುದು. ಮಗುವಾದ ನಂತರ ನಿಭಾಯಿಸುವ ಜವಾಬ್ದಾರಿ ಇದೆಯಲ್ಲಾ, ಅದು ಗುರುತರವಾದುದು.
ಸಿಂಧು ಭಾರ್ಗವ್
ತುಂಬು ಗರ್ಭಿಣಿಯಾದ ರೇವತಿ, ಸೀಮಂತ ಮುಗಿಸಿಕೊಂಡು ಹೆರಿಗೆಗೆಂದು ತವರುಮನೆಗೆ ಹೋಗುತ್ತಾಳೆ. ನವ ಮಾಸ ಕಳೆಯು ವಷ್ಟರಲ್ಲಿ ಮುದ್ದಾದ ಗಂಡುಮಗುವು ಜನಿಸುತ್ತದೆ. ಪತಿ ರೋಶನ್ ಮಗುವನ್ನು ನೋಡಲು ಓಡೋಡಿ ಬರುತ್ತಾನೆ. ಅವನ ಖುಷಿಗೆ ಪಾರವೇ ಇರುವುದಿಲ್ಲ. ಹದಿನೈದು ದಿನಗಳ ಕಾಲ ಆಫೀಸಿಗೆ ರಜೆ ಪಡೆದು ಮಾವನ ಮನೆಯಲ್ಲಿಯೇ ಇದ್ದು ಹೆಂಡತಿ ಮಗುವಿನ ಆರೈಕೆಯಲ್ಲಿ ತೊಡಗುತ್ತಾನೆ.
ಬಳಿಕ ಭಾರವಾದ ಮನಸ್ಸಿನಿಂದ ವಾಪಸು ಬೆಂಗಳೂರಿಗೆ ಹೊರಡುತ್ತಾನೆ. ಉದ್ಯೋಗ ಮಾಡದಿದ್ದರೆ ಜೀವನ ನಡೆಯುವುದು ಹೇಗೆ? ಹಾಗೆಂದು ಎಳೆ ಬಾಣಂತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಲೂ ಸಾಧ್ಯವಿಲ್ಲ. ಮಗುವು ತಾಯಿಯ ಎದೆ ಹಾಲು ಕುಡಿದು ಗುಂಡಗಾಗಿ ಬೆಳೆಯುತ್ತಿರುತ್ತದೆ. ಅಜ್ಜಿ- ತಾತನ ಜೊತೆಗೆ ಬೆಸುಗೆ ಬೆಳೆದಿರುತ್ತದೆ. ರೇವತಿ ಕೂಡ ಮಗು ಹಾಗೆ ಮಾಡಿತು, ಹೀಗೆ ಮಾಡಿತು ಎಂದು ಫೋನಿನಲ್ಲಿ ಹೇಳುತ್ತಲೇ ಇರುತ್ತಿದ್ದಳು. ದಿನಗಳು ಉರುಳಿದವು.
ಮೂರು ತಿಂಗಳು ಕಳೆದು ರೋಶನ್ ಬಂದ. ಮಗುವನ್ನು ಎತ್ತಿ ಮುದ್ದಾಡಿದ. ಆದರೆ ಮಗುವು ಅವನ ಮುಖ ನೋಡಿ ಚೀರಲು
ಶುರುಮಾಡಿತು. ಎಷ್ಟು ಸಮಾಧಾನ ಮಾಡಿದರೂ ಕೇಳುತ್ತಿರಲಿಲ್ಲ. ಅಪ್ಪ ಬಂದಿದ್ದಾರೆ… ನೋಡು…. ಅಪ್ಪ… ಅಪ್ಪ…… ಎಂದು ಅಜ್ಜಿ, ತಾತ ಎಲ್ಲರೂ ನಗಿಸಿದರು, ಸಮಾಧಾನ ಮಾಡಿದರು, ಕೊನೆಗೆ ಹೆಂಡತಿ ಮಗುವನ್ನು ಹಿಡಿದು ಕೋಣೆಗೆ ಹೋದಳು,
ಹಾಲೂಡಿಸಿದಳು. ಅಲ್ಲಿಗೆ ಮಗು ಅಳು ನಿಲ್ಲಿಸಿತು. ರೋಶನ್ಗೆ ಕಸಿವಿಸಿ. ನನ್ನ ಮಗು, ನನ್ನನ್ನೇ ಗುರುತಿಸುತ್ತಿಲ್ಲವಲ್ಲ, ನಾನು ಅದರ ಅಪ್ಪ…. ಎಂದು ಬಹಳ ದುಃಖಪಟ್ಟ. ಕಣ್ಣಂಚಲ್ಲಿ ನೀರು ಬಂತು.
ಅಳು ಬಂತು. ಹೆಂಡತಿ ಸಮಾಧಾನ ಮಾಡಿದಳು. ನಂತರ ಅವಳ ಮಡಿಲಿನಲ್ಲಿದ್ದ ಮಗುವನ್ನು ಆಡಿಸುತ್ತ ನಗಿಸುತ್ತ ದಿನ ಕಳೆದ.
ಹೊಸದಾಗಿ ತಂದೆಯಾಗಿ ಬಡ್ತಿ ಪಡೆದ ಎಲ್ಲ ಅಪ್ಪಂದಿರಿಗೂ ಈ ತರಹದ ಅನುಭವವಾಗುತ್ತದೆ. ಸಾಮಾನ್ಯವಾಗಿ ಆಡುಮಾತಿ ನಲ್ಲಿ ಅಪ್ಪ, ಅಮ್ಮನ ತೋರುಬೆರಳ ತುದಿಯಲ್ಲಿ ಇರುತ್ತಾಳೆ.. ಎನ್ನುವರು. ಅಂದರೆ ಅಮ್ಮ ಇವನೇ ನಿನ್ನ ತಂದೆ ಎಂದು ಯಾರನ್ನು ತೋರಿಸುವಳೋ ಮಗು, ಅದನ್ನೇ ನಂಬುವುದು. ಅಪ್ಪ… ಎಂದು ಕರೆಯುವುದು.
ಅಪ್ಪನ ಸ್ಥಾನ ನೀಡಿ ಗೌರವಿಸುವುದು. ಕೆಲವರು ಬಾಣಂತನಕ್ಕಾಗಿ ಒಂದು ವರುಷ ತವರುಮನೆಯಲ್ಲಿ ಇರುತ್ತಾರೆ. ಆ ರೀತಿ ಬೆಳೆವ
ಮಗುವಿಗೆ ತಂದೆಯ ಮೇಲೆ ಪ್ರೀತಿ ಹುಟ್ಟುವುದು ತುಸು ನಿಧಾನ. ಇನ್ನ ಕೆಲವರ ಮನೆಯಲ್ಲಿ ಸಮಸ್ಯೆಗಳು. ಗಂಡನ ಮೇಲಿನ
ಅಸಮಧಾನಕ್ಕೆ ಪ್ರತಿದಿನ ಜಗಳ ನಡೆಯುತ್ತಲೇ ಇರುತ್ತದೆ. ಗಂಡನಿಗೆ ಬೈಯುವುದು, ಸಸಾರ ಮಾಡುವುದು, ತಂದೆ ಮನೆಯಿಂದ ಬೆಂಬಲ ದೊರಕಿದಾಗ, ಗಂಡನನ್ನು ಕಡೆಗಣಿಸುವುದು ನಡೆಯುತ್ತಲೇ ಇರುತ್ತದೆ. ಅಂತಹ ಮನೆಯಲ್ಲಿ ಕೂಡ ಮಕ್ಕಳ ಮನಸ್ಸು ಗೊಂದಲಮಯವಾಗಿರುತ್ತದೆ. ಕೆಲವು ಗಂಡಸರು ಆಫೀಸಿನ ಒತ್ತಡವನ್ನು ಮನೆಗೆ ತಂದು ಹೆಂಡತಿ ಮೇಲೆ ಕೂಗಾಡುವುದು, ಕುಡಿದು ಬಂದು ಹೊಡೆಯುವುದು, ಅಮ್ಮ ಅಳುವುದು, ನೋವು ತಿನ್ನುವುದನ್ನು ಗಮನಿಸುವ ಮಕ್ಕಳು ಕೂಡ ತಂದೆಯನ್ನು ವಿರೋಧಿಸಿ ದ್ವೇಷ ಬೆಳೆಸಿಕೊಳ್ಳುತ್ತಾರೆ.
ಗಂಡ ಹೆಂಡತಿ ನಡುವೆ ಏನೇ ಅಸಮಧಾನವಿದ್ದರೂ ಮಕ್ಕಳ ಎದುರು ತೋರಿಸಬಾರದು. ನವ ದಂಪತಿಗಳಾಗಿ, ಜೋಡಿಗಳಾಗಿ
ಬದುಕುವುದು ಅಷ್ಟೇನು ಕಷ್ಟವಿಲ್ಲ. ಮದುವೆಯಾದ ಕೂಡಲೇ ಅಲ್ಲಿ ಇಲ್ಲಿ ಓಡಾಡಿಕೊಂಡು, ನಗುನಗುತ್ತಾ ಕಾಲ ಕಳೆಯ ಬಹುದು. ನಿಜ ಹೇಳಬೇಕೆಂದರೆ ಆ ದಿನಗಳು ಬಹು ಸುಂದರ. ಆದರೆ ಮಕ್ಕಳಾದ ಮೇಲೆ ಹೆತ್ತವರ ಪಾತ್ರ ನಿರ್ವಹಿಸುವುದು ಬಲುಕಷ್ಟ. ದಿನಚರಿಯನ್ನು ಸೂಕ್ಷ್ಮವಾಗಿ ಸಂಬಾಳಿಸಬೇಕು. ಸಮಸ್ಯೆಗಳನ್ನು ನಿಭಾಯಿಸುವ ಕಲೆ, ಪರಸ್ಪರ ಗೌರವ ಕೊಟ್ಟು ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು.
ತಂದೆಯೂ ಸಹ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು, ವಿಶ್ವಾಸದಿಂದ ಮಾರ್ಗದರ್ಶನ ನೀಡಬೇಕು. ಇಲ್ಲವಾದರೆ, ‘ನಮ್ಮಪ್ಪ ಎಲ್ಲಿದ್ದಾನೆ?’ ಎಂದು ಮಗುವೇ ಕೇಳಬಹುದು, ಅದಕ್ಕೆ ಇಂತಹದೊಂದು ಪ್ರಶ್ನೆ ಹುಟ್ಟು ಗೊಂದಲವೂ ಆಗಬಹುದು.
ಪೋಷಕರ ಜವಾಬ್ದಾರಿಯನ್ನು ನಿಭಾಯಿಸುವುದು ಸಹ ಒಂದು ಕಲೆ. ಅದನ್ನು ಅವರವರೇ ಕಲಿತುಕೊಳ್ಳಬೇಕು. ಮಕ್ಕಳ ಕಣ್ಣಲ್ಲಿ ಹೆತ್ತವರು ವಿಶೇಷ ಸ್ಥಾನ ಪಡೆಯಬೇಕಾದರೆ, ಪೋಷಕರಿಬ್ಬರಲ್ಲೂ ತಾಳ್ಮೆ, ಪ್ರೀತಿ, ವಿಶ್ವಾಸ, ಸಹನೆ, ಸದಾ ನಗುಮುಖ, ವಿನಮ್ರ ಭಾವ ತುಂಬಿರಬೇಕು.