Wednesday, 18th September 2024

ಗುಂಡಿನ ಕುರಿತು ಸ್ವಾರಸ್ಯಕರ ಹರಟೆ

ಎಂ.ಎಸ್.ಹೆಬ್ಬಾರ್

ಮನುಷ್ಯನ ನಾಗರಿಕತೆಯಲ್ಲಿ ಹಾಸುಹೊಕ್ಕಾಗಿರುವ ಇದೊಂದು ಹವ್ಯಾಸದ ಕುರಿತು, ಕನ್ನಡದಲ್ಲಿ ಹೊರಬಂದಿರುವ ಮೊದಲ ಪುಸ್ತಕವಿದು. ಆದರೆ, ಇಲ್ಲಿ ಅಂಕಿ ಅಂಶಗಳ ಗೋಜಲು ಇಲ್ಲ; ಬದಲಿಗೆ ಸಾಂಸ್ಕೃತಿಕ ಹರಟೆಯ ಸ್ವರೂಪದಲ್ಲಿ, ನವಿರಾದ ಹಾಸ್ಯ ಹೊಂದಿರುವ ೫೮ ಬರಹಗಳಿವೆ; ಎಲ್ಲವೂ ಸ್ವಾರಸ್ಯಕರವಾಗಿವೆ.

ಒಂದಂತೂ ಖಚಿತ; ಕನ್ನಡದಲ್ಲಿ ಇಂತಹದೊಂದು ಪುಸ್ತಕ ಇದುವರೆಗೆ ಪ್ರಕಟವಾಗಿಲ್ಲ. ವಿಶ್ವೇಶ್ವರ ಭಟ್ ಅವರ ಹೊಸ ಪುಸ್ತಕ ‘ಕುಡಿಯೋಣು ಬಾರಾ’, ವಿಭಿನ್ನ ಅಭಿರುಚಿಯ, ವಿಶಿಷ್ಟ ‘ರುಚಿ’ ಹೊಂದಿರುವ ಪುಸ್ತಕ. ಈ ಪುಸ್ತಕವನ್ನು ‘ಗುಂಡಿನ ಕುರಿತಾದ ಸಾಂಸ್ಕೃತಿಕ ಹರಟೆ’ ಎಂದು ಕರೆಯಲಾಗಿದೆ; ನಿಜ, ಇಲ್ಲಿರುವುದೆಲ್ಲಾ ಗುಂಡಿನ ಗುರಿತಾದ ಬರಹಗಳು; ಗುಂಡಿನ ನಾನಾ ಆಯಾಮಗಳ ಪರಿಚಯವನ್ನು ಮಾಡಿಕೊಡುವ ಬರಹಗಳು.

ಮೇಲ್ನೋಟಕ್ಕೆ ಈ ಬರಹಗಳು ಹರಟೆಯ ಸ್ವರೂಪವನ್ನು ಹೊಂದಿದ್ದರೂ, ಇವು ಹರಟೆಗಿಂತ ಭಿನ್ನವಾಗಿವೆ, ಹರಟೆಗಿಂತ ತುಸು ಗಂಭೀರವೂ ಆಗಿವೆ. ಆದರೆ, ಹರಟೆಗಿಂತಲೂ ಹೆಚ್ಚು ನಗುತರಿಸುವ ಹಾಸ್ಯದ ಗುಣವನ್ನೂ ಈ ಬರಹಗಳು ಹೊಂದಿವೆ. ಗುಂಡಿನ ಕುರಿತು, ಅದನ್ನು ಸೇವಿಸುವುದರ ಕುರಿತು, ವಿವಿಧ ಬ್ರ್ಯಾಂಡ್‌ಗಳ ಗುಂಡುಗಳ ಕುರಿತು, ವಿಭಿನ್ನ ದೇಶಗಳು ಗುಂಡಿನ ಕುರಿತು, ಅದನ್ನು ಸೇವಿಸುವ ಶಿಷ್ಟಾಚಾರದಲ್ಲಿರುವ ವೈವಿಧ್ಯದ ಕುರಿತು ಸದಭಿರುಚಿಯ ಹರಟೆಗಳು ಇಲ್ಲಿವೆ. ಜೀವನದಲ್ಲಿ ಒಮ್ಮೆಯೂ ಗುಂಡು ಹಾಕದೇ ಇರುವವರು ಇಲ್ಲಿನ ಗದ್ಯದ ಶೈಲಿಯನ್ನು ಕಂಡು ಬೆರಗಾಗಬಹುದು, ಈ ಬರಹಗಳ ಸದಭಿರುಚಿಯನ್ನು ಕಂಡು ಮನಸೋಲಬಹುದು, ಮನಸ್ಸು ಮಾಡಿದರೆ ಸಣ್ಣದಾಗಿ ನಶೆಯಲ್ಲಿ ಓದಾ(ಲಾ)ಡಬಹುದು.

ಈ ಪುಸ್ತಕದಲ್ಲಿ ಒಟ್ಟು ೫೮ ಬರಹಗಳಿವೆ; ಎಲ್ಲವೂ ಬಿಡಿಬರಹಗಳು; ಆದರೆ, ಒಂದಕ್ಕೊಂದು ಪೂರಕವಾಗಿಯೂ ಇವೆ. ಇಲ್ಲಿನ ಎಲ್ಲಾ ಬರಹಗಳನ್ನು ಒಂದು ತೆಳುವಾದ ಎಳೆ ಬಂಧಿಸಿದೆ – ಆ ಎಳೆಯ ಪ್ರಧಾನ ಸೆಲೆ ಇರುವುದು ‘ಗುಂಡು ಸೇವನೆ’ಯ ಸಂಸ್ಕೃತಿಯಲ್ಲಿ! ಮನುಷ್ಯನ ನಾಗರಿಕತೆಯ ಬೆಳವಣಿಗೆ ಯುದ್ದಕ್ಕೂ ಇದೊಂದು ಹವ್ಯಾಸ ಹಾಸುಹೊಕ್ಕಾಗಿ ಬಂದಿರುವುದನ್ನು ಗಮನಿಸಿದರೆ, ಅಂತಹದೊಂದು ‘ಸಂಸ್ಕೃತಿ’ಯ ವಿಶ್ಲೇಷಣೆಗೆ ಮಹತ್ವವಿದೆ.
ಈ ೫೮ ಬರಹಗಳುದ್ದಕ್ಕೂ ಸಾಗಿರುವ ಇನ್ನೊಂದು ಪ್ರಧಾನ ಎಳೆ ಎಂದರೆ ನವಿರಾದ ಹಾಸ್ಯ. ಗುಂಡು ಸೇವಿಸುವವರ ಕುರಿತಾಗಿ ಓತಪ್ರೋತವಾಗಿ ಹರಡಿರುವ ಈ ಹಾಸ್ಯವು, ಎಲ್ಲಿಯೂ ಸಭ್ಯತೆಯ ಗೆರೆಯನ್ನು ದಾಟುವುದಿಲ್ಲ.

ಬರಹದ ಓಘದಲ್ಲಿ ಹಾಸ್ಯವು ಒಮ್ಮೊಮ್ಮೆ ಹೊನಲಾಗಿ ಹರಿದರೂ, ಎಲ್ಲಿಯೂ ‘ಮಿತಿ ಮೀರುವುದಿಲ್ಲ’. ಒಮ್ಮೊಮ್ಮೆ ಹಾಸ್ಯದ ಹನಿಯು ಆಚೀಚೆ ತುಳುಕಬಹುದು, ಆದರೆ ಅದರಿಂದ ಯಾರಿಗೂ ತೊಂದರೆ ಎನಿಸುವುದಿಲ್ಲ. ಇಲ್ಲಿನ ೫೮ ಬರಹಗಳಲ್ಲಿ ಹಾಸುಹೊಕ್ಕಾಗಿರುವ ಹಾಸ್ಯದ ಕುರಿತು ಒಂದಂತೂ ಸ್ಪಷ್ಟ. ಆಸಕ್ತಿಯಿಂದ ಓದಲು ಕೈಗೆತ್ತಿಕೊಳ್ಳುವ ಓರ್ವ ಓದುಗನು, ಕನಿಷ್ಠ ೫೮ ಬಾರಿಯಾದರೂ, ನಸುನಕ್ಕು ಓದನ್ನು ಮುಂದುವರಿಸು ತ್ತಾನೆ; ಕೆಲವರು ಮತ್ತೆ ಮತ್ತೆ ಓದಲೂಬಹುದು, ನಗಲೂ ಬಹುದು! ಇನ್ನು ಕೆಲವರು ನಿರಂತರವಾಗಿ ನಸುನಗುತ್ತಲೇ ಎಲ್ಲಾ ಪುಟಗಳನ್ನು ಓದಬಲ್ಲರು.

ಈ ಬರಹಗಳನ್ನು ಓದಿ, ಹೊಟ್ಟೆ ಹುಣ್ಣಾಗುವಷ್ಟು ನಗುವವರೂ ಇರಬಹುದು! ಅತಿಯಾಗಿ ನಕ್ಕು ಹೊಟ್ಟೆಹುಣ್ಣಾಗುವಂತಹ ಪರಿಸ್ಥಿತಿ ಬಂದರೆ, ಆಗ
‘ಏನನ್ನು ಕುಡಿದರೆ ಸೂಕ್ತ’ ಎಂಬ ಸಲಹೆಯೂ ಇದೇ ಪುಸ್ತಕದಲ್ಲಿ ಅವರಿಗೆ ಸಿಗಬಹುದು!

ಪ್ರಚೋದನೆ ಇಲ್ಲ!
ಹಾಗೆಂದು ‘ಕುಡಿಯೋಣು ಬಾರಾ’ ಪುಸ್ತಕವು ಗುಂಡು ಹಾಕುವುದನ್ನು ಖಂಡಿತವಾಗಿಯೂ ಪ್ರಚೋದಿಸುವುದಿಲ್ಲ. ಪುಸ್ತಕದ ಆರಂಭದಲ್ಲೇ, ಒಂದು ವಾಕ್ಯದ ಸೂಚನೆ ಇದೆ – ‘ಮದ್ಯಪಾನವು ಆರೋಗ್ಯಕ್ಕೆ ಹಾನಿಕರ ಮತ್ತು ವ್ಯಕ್ತಿತ್ವಕ್ಕೆ ಮಾನಹಾನಿಕರ’. ಈ ಸಾಲನ್ನು ಓದುಗನು ತುಸು ಹಾಸ್ಯ ಪ್ರವೃತ್ತಿ ಯಿಂದಲೇ ಸ್ವೀಕರಿಸಬಹುದು. ಮುಂದುವರಿದು, ಲೇಖಕರ ಅರಿಕೆಯಲ್ಲೂ ಪುಸ್ತಕದ ಸ್ವರೂಪದ ಕುರಿತು ಕೆಲವು ಸಾಲುಗಳಿವೆ. ‘ಇವು ಕುಡಿತವನ್ನು ಉತ್ತೇಜಿಸುವ ಅಥವಾ ಪ್ರಚೋದಿಸುವ ಅಥವಾ ವಿರೋಧಿಸುವ ಬರಹಗಳಲ್ಲ. ಕಾರಣ ನಾನು ಕುಡಿತದ ಪರವೂ ಅಲ್ಲ, ವಿರೋಽಯೂ ಅಲ್ಲ.

. . . ಕುಡಿತ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ತಿಂಗಳಿಗೊಮ್ಮೆ ಪೆಗ್ ಹೀರಿದರೆ ತಪ್ಪಿಲ್ಲ; ಅದನ್ನೇ ಚಟವಾಗಿಸಿಕೊಳ್ಳುವುದು ತಪ್ಪು ಎಂದು ಭಾವಿಸಿರು ವವನು. ಗುಂಡು ಹಾಕುವುದಕ್ಕೆ ಇದಕ್ಕಿಂತ ಮಿಗಿಲಾದ ಫಿಲಾಸಫಿ ಇದೆ ಎಂದು ನನಗೆ ಅನಿಸಿಲ್ಲ. ಆದರೆ ಗುಂಡಿನ ಲೋಕದ ಸುತ್ತ ಅನೇಕ ಸ್ವಾರಸ್ಯಕರ ಕಥೆಗಳಿವೆ. ನನಗೆ ಅದು ಇಷ್ಟ ಮತ್ತು ಅದರಲ್ಲಿ ಆಸಕ್ತಿ..’ (ಪುಟ ೮, ೯)

‘ಕುಡಿಯೋಣು ಬಾರಾ’ ಪುಸ್ತಕವನ್ನು ಓದುವುದು ಎಂದರೆ, ಗುಂಡಿನ ಲೋಕದಲ್ಲಿ ಒಂದು ಸಂಚಾರ ಎನ್ನಬಹುದಾದರೂ, ಇಲ್ಲಿ ಇನ್ನೂ ಒಂದು ಸಂಚಾರ ಇದೆ. ಅದೇ ಲೋಕ ಸಂಚಾರ! ಜಗತ್ತಿನ ೮೦ಕ್ಕೂ ಹೆಚ್ಚು ದೇಶಗಳಲ್ಲಿ ಪ್ರವಾಸ ಮಾಡಿ ಬಂದಿರುವ ಲೇಖಕ ವಿಶ್ವೇಶ್ವರ ಭಟ್ ಅವರು, ಆ ಎಲ್ಲಾ ದೇಶಗಳ ಸಂಸ್ಕೃತಿ, ಆಚಾರ, ಪದ್ಧತಿ, ಜನಜೀವನದ ವಿವರಗಳನ್ನು ಇಲ್ಲಿನ ಹಲವು ಬರಹಗಳಲ್ಲಿ ದಾಖಲಿಸಿದ್ದಾರೆ.

ಹಾಗೆಂದು, ಅವೆಲ್ಲವೂ ಶುಷ್ಕ ಅಂಕಿಸಂಕಿಗಳ ಗೋಜಲುಗಳಲ್ಲಿ ಮುಳುಗಿ ಹೋಗಿವೆಯೆ? ಇಲ್ಲ! ಬೇರೆ ದೇಶಗಳ ಕುರಿತು ಓದುಗರ ಜ್ಞಾನವನ್ನು ಹೆಚ್ಚಿಸುವ, ತಪ್ಪು ತಿಳಿವಳಿಕೆಯನ್ನುಸರಿಪಡಿಸುವ ಹಲವು ಮಾಹಿತಿಗಳು, ಇಲ್ಲಿ ಸ್ವಾರಸ್ಯಕರವಾಗಿ ಮೂಡಿಬಂದಿವೆ. ಇದಕ್ಕೆ ಉದಾಹರಣೆಯಾಗಿ, ಬೆಲ್ಜಿಯಂನಲ್ಲಿನ ವಿಶೇಷತೆ ವಿವರಿಸುವ ಬರಹ ನೋಡಬಹುದು. ಲೇಖಕರ ಮನೆಯಲ್ಲಿದ್ದ ನೂರು ವರ್ಷಕ್ಕೂ ಹೆಚ್ಚು ಹಳೆಯದಾದ ಕನ್ನಡಿಯ ನೆನಪಿನಲ್ಲಿ, ಬೆಲ್ಜಿಯಂ ದೇಶವು ಕನ್ನಡಿಗೆ ಪ್ರಸಿದ್ಧ ಎಂಬ ಭಾವನೆಯಿಂದ, ಅಲ್ಲಿಗೆ ಪ್ರವಾಸ ಹೋಗಿದ್ದಾಗ ಹೊಸ ವಿಚಾರ ತಿಳಿಯಿತು: ಅದೇನೆಂದರೆ, ನಿಜವಾಗಿಯೂ ಬೆಲ್ಜಿಯಂ ಪ್ರಸಿದ್ಧವಾಗಿರುವುದು ನೂರಾರು ಬ್ರ್ಯಾಂಡ್‌ನ ಬಿಯರ್ ಮತ್ತು ಇತರ ಪಾನೀಯಗಳಿಗೆ!

ಇದೇ ರೀತಿ, ಬೇರೆ ಬೇರೆ ದೇಶಗಳಲ್ಲಿ ನಡೆಯುವ ಬಿಯರ್ ಹಬ್ಬಗಳ ವಿವರಗಳೂ ಇಲ್ಲಿ ಸ್ವಾರಸ್ಯಕರವಾಗಿ ದಾಖಲಾಗಿವೆ. ಪುಸ್ತಕದ ಪುಟ್ಟ ಪುಟ್ಟ ಲೇಖನ ಗಳ ತಲೆಬರಹವನ್ನು ಓದುವುದೇ ಒಂದು ವಿಶಿಷ್ಟ ಅನುಭವ. ತಲೆಬರಹಗಳನ್ನು ನೀಡುವ ಕಲೆಯನ್ನು ತಿಳಿದುಕೊಳ್ಳಬಯಸುವವವರಿಗೆ ಇದು ಪಠ್ಯವೂ ಆಗಬಲ್ಲದು!

ಕೆಲವು ಹೆಡಿಂಗ್ ಗಮನಿಸಿ : ‘ಸೋಡಾದೊಳಗಿನ ಗುಳ್ಳೆ ನಿಜವಲ್ಲ!’, ‘ವೈನ್ ಎಂಬ ಕೋಟಿತೀರ್ಥ’, ‘ಗುಂಡುಗಲಿ ಚರ್ಚಿಲ್’, ‘ಕುಡಿದೂ ಜೀವನ ಎಂಜಾಯ ಮಾಡದ ಗೂಬೆಗಳು’, ‘ಡಾಕ್ಟರ್ ಕುಡಿಸುವ ಒಂದೇ ಗುಂಡು’ . . ಇಂತಹ ಹಲವು ತಲೆಬರಹಗಳು ಲೇಖನದ ಹೂರಣವನ್ನು ಕಟ್ಟಿಕೊಡುವ ರೀತಿಯೇ ಅನನ್ಯ. ಈ ಪುಸ್ತಕವನ್ನು ಓದಿದ ಒಬ್ಬ ಟೀಟೋಟಲರ್, ‘ನೋಡೇ ಬಿಡೋಣ ಒಂದು ಪೆಗ್ ರುಚಿಯನ್ನು’ ಎಂದುಕೊಂಡರೆ, ಅದಕ್ಕೆ ಲೇಖಕರು ಜವಾಬ್ದಾರರಲ್ಲ, ಬದಲಿಗೆ ಇಲ್ಲಿನ ಬರಹಗಳ ಸ್ವಾರಸ್ಯಕರ ನಿರೂಪಣೆಯೇ ಕಾರಣ ಎನ್ನಬಹುದು!

ಈಗಾಗಲೇ ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುವ, ಹತ್ತಾರು ಮರುಮುದ್ರಣಗೊಂಡ ಪುಸ್ತಕಗಳನ್ನು ಸಹ ರಚಿಸಿರುವ ವಿಶ್ವೇಶ್ವರ ಭಟ್ ಅವರ ಹೊಸ ಪುಸ್ತಕವೊಂದನ್ನು ವಿಮರ್ಶೆಗೆ ಒಳಪಡಿಸುವುದು ಸುಲಭದ ಕೆಲಸವಲ್ಲ. ಅದ್ಭುತ, ಅತ್ಯಪರೂಪ, ವಿಶೇಷ, ವಿಶಿಷ್ಟ, ಅಭೂತಪೂರ್ವ, ಎಲ್ಲೂ
ಕಾಣದಂತಹ ಅನನ್ಯತೆ – ಇಂತಹ ವಿಶೇಷಗಳನ್ನು ಬಳಸಿಯೇ ಇವರ ಪುಸ್ತಕಗಳನ್ನು ಪರಿಶೀಲಿಸಬೇಕಗುತ್ತದೆ. ವಿಶ್ವೇಶ್ವರ ಭಟ್ ಅವರ ಇಷ್ಟೊಂದು ಪುಸ್ತಕಗಳ ನಡುವೆ, ‘ಕುಡಿಯೋಣು ಬಾರಾ’ ಪುಸ್ತಕವು, ನಿಜಕ್ಕೂ ವಿಭಿನ್ನ, ವಿಶೇಷ; ನವಿರು ಹಾಸ್ಯ ಹೊಂದಿರುವ, ಸರಾಗವಾಗಿ ಓದಿಸಿಕೊಳ್ಳುವ, ಮಾಹಿತಿಗಳ ಕಣಜವೂ ಹೌದು ಎನಿಸಿರುವ ಲೇಖನಗಳ ಸಂಗ್ರಹವು ಈ ಪುಸ್ತಕ ಎಂಬುದನ್ನು ಒತ್ತಿ ಹೇಳಬೇಕು. ವಿಶ್ವೇಶ್ವರ ಭಟ್ ಅವರ ಇತರ ಪುಸ್ತಕ ಗಳನ್ನುಓದಿದವರು, ‘ಕುಡಿಯೋಣು ಬಾರಾ’ವನ್ನು ಖಂಡಿತವಾಗಿಯೂ ಓದಲೇಬೇಕು, ಆಗಲೇ ಓದಿನ ರುಚಿ ಹೆಚ್ಚುವುದು, ಸಣ್ಣಗೆ ‘ಕಿಕ್’ ಸಹ ಸಿಗಬಹುದು!

Leave a Reply

Your email address will not be published. Required fields are marked *