ಪ್ರೊ.ಜಿ.ಎನ್.ಉಪಾಧ್ಯ. ಮುಂಬೈ
ಸಾವಿರಾರು ಹನಿಗವನಗಳನ್ನು ರಚಿಸಿರುವ ಎಚ್. ಡುಂಡಿರಾಜ್ ಅವರ ಹೊಸ ಹನಿಗವನಗಳ ಸಂಕಲನವು ಇನ್ನಷ್ಟು ಹೊಸತನದಿಂದ ಕೂಡಿರುವುದು ವಿಶೇಷ.
ಒಲವಿನ ಒಲಂಪಿಕ್ಸ್ – ಇದು ಕವಿ ಎಚ್.ಡುಂಡಿರಾಜ್ ಅವರ ಇತ್ತೀಚಿನ ಹನಿಗವನ ಸಂಕಲನ. ದಾಂಪತ್ಯದ ವಿವಿಧ ಮುಖಗಳನ್ನುಭಿನ್ನವಿಭಿನ್ನ ನೆಲೆಗಳಲ್ಲಿ ೪೯೨ ಕಿರುಗವನಗಳಲ್ಲಿ ಪರಿಣಾಮಕಾರಿಯಾಗಿ ಕಂಡರಿಸಿರುವುದು ಈ ಕೃತಿಯ ಹೆಗ್ಗಳಿಕೆ. ದಾಂಪತ್ಯದ ಕುರಿತು ಕುವೆಂಪು, ಬೇಂದ್ರೆ, ನರಸಿಂಹ ಸ್ವಾಮಿ ಮೊದಲಾದ ಕವಿಗಳು ಸಾಕಷ್ಟು ಇಡಿ ಪದ್ಯಗಳನ್ನು ಬರೆದು ಸೈ ಎನಿಸಿಕೊಂಡದ್ದು ನಿಜವಾದರೂ ಡುಂಡಿರಾಜರು ಅದೇ ವಸ್ತು, ವಿಷಯಕ್ಕೆ ಇಲ್ಲಿ ಹನಿಗವಿತೆಗಳ ಮೂಲಕ ಹೊಸ ಮೆರಗು ಕೊಡುವಲ್ಲಿ ಯಶಸ್ವಿಯಾಗಿರುವುದು ವಿಶೇಷ.
ಸಂಸಾರ ಸಖ್ಯದ ಕಟು ಮಧುರ ವ್ಯಾಖ್ಯಾನವೂ ಇಲ್ಲಿ ನವನವೀನ ರೀತಿಯಲ್ಲಿ ಅನಾವರಣಗೊಂಡಿದೆ. ಒಲವೆ ನಮ್ಮ ಬದುಕು. ಅಲ್ಲಿ ದಕ್ಕಿದ್ದು, ಅದಕ್ಕೆ ಕವಿ ಬರೆದ ಷರಾ ಹೀಗಿದೆ:
ಒಲವಿನ
ಒಲಂಪಿಕ್ಸ್ ನಲ್ಲಿ
ನಾವು ಪಡೆದ
ಮೆಡಲು
ಮಗ ಮತ್ತು
ಮಗಳು
ಡುಂಡಿರಾಜ್ ಅವರು ಸಾಕಷ್ಟು ಗಂಭೀರವಾದ ಇಡಿ ಕವಿತೆಗಳನ್ನು ಬರೆದಿದ್ದರೂ ಜನ ಅವರನ್ನು ಗುರುತಿಸುವುದು ಹನಿಗವನಗಳ ಮೂಲಕವೇ. ಅವರು ಹನಿ ಖಜಾಂಚಿ, ಸಣ್ಣ ಪದ್ಯಗಳ ದೊಡ್ಡ ಸರದಾರ. ಮಾತು ಅತ್ಯುನ್ನತ ಸ್ತರದಲ್ಲಿ ಕಾವ್ಯವಾಗುತ್ತದೆ. ಅವರು ಪದಗಳಲ್ಲಿ, ಶಬ್ದಗಳಲ್ಲಿ ಅಡಗಿರುವ ಕಾವ್ಯಾಂಶ ಮಾತಿನ ಮಣಿಮಾಲೆಯ ಮೂಲಕ ಪ್ರಕಟಪಡಿಸುವ ಪರಿ ಬಲುಚೆನ್ನ.
ಪರಿಚಿತ ಶಬ್ದ, ವಸ್ತುವಿನಲ್ಲೂ ನವ ನವೋನ್ಮೇಷವನ್ನು ವ್ಯಂಗ್ಯ, ವಿನೋದಗಳ ಮೂಲಕ ಕಾಣುವುದು ಕಾಣಿಸುವುದು ಡುಂಡಿರಾಜ್ ಅವರ ಬರವಣಿಗೆ ಯ ಅತಿಶಯತೆ. ಶಬ್ದ ಮುಖವಾಗಿ ಪ್ರತಿಮಾತ್ಮಕವಾಗಿ ಬರೆಯುವ ಅಪೂರ್ವ ಕಲೆ ಅವರಿಗೆ ಲಭಿಸಿದೆ. ಕನ್ನಡದಲ್ಲಿ ಸಣ್ಣ ಪದ್ಯಕ್ಕೆ ಸುದೀರ್ಘವಾದ ಹಿನ್ನೆಲೆಯಿದೆ. ಸರಳವೂ ಸುಂದರವೂ ಆದ ಶರಣರ ವಚನಗಳು ಕಿರು ಕವಿತೆಗಳೇ ಆಗಿದೆ. ಸರ್ವಜ್ಞ ತ್ರಿಪದಿಯ ಸಾರ್ವಭೌಮ. ಹೊಸಗನ್ನಡ ಸಾಹಿತ್ಯದಲ್ಲಿ ಮುಕ್ತಕ ಅಥವಾ ಚುಟುಕು ಸಾಹಿತ್ಯ ಜನಪ್ರಿಯವಾಗಿದೆ.
ಡಿವಿಜಿ, ಎಸ್‌ವಿಪಿ, ದಿನಕರ ದೇಸಾಯಿ ಮೊದಲಾದವರು ಈ ಕ್ಷೇತ್ರದಲ್ಲಿ ಚಿರಂತನವಾದ ಕೀರ್ತಿಯನ್ನು ಗಳಿಸಿದ್ದಾರೆ. ಈ ಸಾಲಿನಲ್ಲಿ ಡುಂಡಿರಾಜರದೂ ದೊಡ್ಡ ಸಾಧನೆ. ಅವರದೇ ಆದ ಶೈಲಿ, ಧಾಟಿಯಿಂದ ಹನಿಗವನಗಳು ನಿಚ್ಚಂ ಪೊಸತು. ಹೊಸಕಾಲದ ಕವಿತಾ ಸೃಷ್ಟಿಯಲ್ಲಿ ಡುಂಡಿರಾಜ್ ಅವರು ಆರು ಸಾವಿರಕ್ಕೂ ಹೆಚ್ಚು ಹನಿಗವನಗಳನ್ನು ಬರೆದು ಅಪೂರ್ವ ಕೃತಿಗಳನ್ನು ರಚಿಸಿ ಅಪಾರವಾದ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.
ಡುಂಡಿರಾಜರ ಹನಿಗವನಗಳಲ್ಲಿ ಮುಖ್ಯವಾಗಿ ಕಂಡುಬರುವುದು ಕುಟುಂಬ-ಕಲ್ಯಾಣ ಚಿಂತನ. ಸಮಾಜದ ಕಿರು ಘಟಕ ಕುಟುಂಬ. ಸತಿ- ಪತಿಗಳು ಒಂದಾದರೆ ಶಿವನೂ ಪ್ರಸನ್ನವಾಗುತ್ತಾನಂತೆ. ಗಂಡು-ಹೆಣ್ಣಿನ ಸ್ವಭಾವ ವಿಶ್ಲೇಷಣೆ, ದಾಂಪತ್ಯ, ಸಾಂಸಾರಿಕ ಬದುಕಿನ ಒಳಹೊರಗನ್ನು ಡುಂಡಿರಾಜ್ ಅವರು ಇಲ್ಲಿ ವಿಶ್ಲೇಷಿಸಿದ ಪರಿ ವಿಸ್ಮಯ ಹುಟ್ಟಿಸುತ್ತದೆ. ‘ಮದುವೆ’ ಎನ್ನುವ ಸಂಸ್ಥೆಯ ಅಂತರಂಗ ಬಹಿರಂಗವನ್ನು ಕವಿ ಕಂಡು ಕಂಡರಿಸಿದ ಬಗೆ
ಬಲು ಸೊಗಸಾಗಿದೆ. ‘ದಾಂಪತ್ಯ’ ಹೇಗಿರಬೇಕೆಂಬುದನ್ನು ಸೂಚಿಸುತ್ತಾ ಅದು ಬಂಧನವಾಗಬಾರದು ಎಂದು ಹೀಗೆ ಹೇಳಿದ್ದಾರೆ, ಹೊಂದಾಣಿಕೆ ಇದ್ದರೆ
ಘಮಘಮಿಸುವ ಚಂದನ ಇಲ್ಲವಾದರೆ ಮದುವೆ ಇಬ್ಬರಿಗೂ ಬಂಧನ!
ಇಲ್ಲಿನ ಚಂದನ-ಬಂಧನ ಪದಲಾಲಿತ್ಯಕ್ಕೆ ವಿವರಣೆ ಅನಗತ್ಯ. ಗಂಡಿಗೂ ಅವನದೇ ಆದ ಜವಾಬ್ದಾರಿಗಳಿವೆ. ಇದನ್ನು ‘ಮಡದಿಯ ದೂರು’ಕಿರು ಕವಿತೆ ಯಲ್ಲಿ ಸೂಕ್ಷ್ಮವಾಗಿ ಹೀಗೆ ಅರುಹಿದ್ದಾರೆ,
ಮನೆಯ ಜವಾಬ್ದಾರಿ ಬೇಡವೆ ಗಂಡನಿಗೆ ತಂದುಕೊಟ್ಟರೆ ಸಾಕೆ ಸಂಬಳ? ಊಟ ತಿಂಡಿಗೆ ಮಾತ್ರ ಮನೆಯೊಳಗೆ ಬರುವರು ಉಳಿದಂತೆ ಹೊರಗಿಂದ ಬೆಂಬಲ ಗಂಡನ ಪೂರ್ಣ ಸಹಕಾರ ಅಗತ್ಯ ಎಂಬ ಮಾತು ನಿಜವೇ ಆಗಿದೆ. ಅತ್ತೆ ಸೊಸೆ ಕಲಹ, ವಿವಾಹ ಪೂರ್ವ ಸಂಬಂಧ, ಪ್ರೀತಿ, ಪ್ರೇಮ, ಒಲವು, ಮದುವೆ, ವರದಕ್ಷಿಣೆ, ಸ್ತ್ರೀ ಶೋಷಣೆ, ಊಟ, ಉಪಚಾರ, ನಡೆ, ನುಡಿ, ನಂಬಿಕೆ, ಉಡುಗೆ ತೊಡಿಗೆ ಹೀಗೆ ಎಲ್ಲ ಬಗೆಯ ದಾಂಪತ್ಯ ಕೇಂದ್ರಿತ ಸಾಂಸಾರಿಕ ವಿದ್ಯಮಾನಗಳು ಹನಿಗಳಾಗಿ ಕನ್ನಡದ ಬಣ್ಣ ಬನಿಯನ್ನು ಕವಿ ಹೆಚ್ಚಿಸಿದ್ದಾರೆ.
ವರದಕ್ಷಿಣೆಯಂಥ ಸಮಸ್ಯೆಗಳನ್ನು ಕವಿತೆಯಾಗಿಸಿ ನಮ್ಮ ಕಣ್ಣು ತೆರೆಯಿಸುವ ಕೆಲಸವನ್ನು ಕವಿ ಇಲ್ಲಿ ಮಾಡಿದ್ದಾರೆ. ಸಮಾಜದ ಸರಿತಪ್ಪುಗಳನ್ನು ಎತ್ತಿಹಿಡಿಯುವ ಪ್ರಯತ್ನವನ್ನು ಇಲ್ಲಿನ ಕವಿತೆಗಳಲ್ಲಿ ಮುಲಾಜಿಲ್ಲದೆ ಮಾಡಿದ್ದಾರೆ. ವರದಕ್ಷಿಣೆಯ ನೆಪದಲ್ಲಿ ಸ್ತ್ರೀ ಶೋಷಣೆಗೈಯುವವರನ್ನು ಕವಿ ‘ಕ್ರಿಮಿನಲ್’ ಎಂದು ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ವರದಕ್ಷಿಣೆಗಾಗಿ
ಮಡದಿಯ ಪೀಡಿಸಿ
ಕೊಲ್ಲುವವನಿಗೆ
ಮನುಷ್ಯತ್ವ ಇಲ್ಲ
ಏಕೆಂದರೆ ಅವ
ಕ್ರಿಮಿ ನಲ್ಲ!
ಹೀಗೆ ಇಲ್ಲಿನ ಹನಿಗವಿತೆಗಳು ಸರಳವಾಗಿವೆ,ಸುಂದರವಾಗಿವೆ,ಅರ್ಥಪೂರ್ಣವಾಗಿವೆ. ಡುಂಡಿರಾಜರ ಕಿರು ಕವಿತೆಗಳು ಚೇತೋಹಾರಿಯಾಗಿದ್ದು ನಮ್ಮನ್ನು ಚಿಂತನೆಗೆ ಹಚ್ಚಬಲ್ಲ ತಾಕತ್ತನ್ನು ಹೊಂದಿವೆ. ಇತ್ತೀಚಿಗೆ ಬಂದ ಅವರ ಹನಿಗವಿತೆಗಳ ಸಂಕಲನಗಳಲ್ಲಿ ಪ್ರಸ್ತುತ ಕೃತಿಗೆ ಮೇಲಾದ ಸ್ಥಾನವಿದೆ.