Wednesday, 18th September 2024

m s hebbar: ವೈವಿಧ್ಯಮಯ ಕುತೂಹಲಕಾರಿ ಬರಹಗಳು

ಎಂ.ಎಸ್.ಹೆಬ್ಬಾರ್

ಈ ಸಂಕಲನದ ಬರಹಗಳ ಒಂದು ಮುಖ್ಯ ಗುಣ ಸುಲಭವಾಗಿ ಓದಿಸಿಕೊಳ್ಳುವುದು; ಇನ್ನೊಂದು ಮುಖ್ಯ ವಿಚಾರವೆಂದರೆ, ಇಲ್ಲಿನ ಬರಹಗಳಲ್ಲಿ ಅಡಕಗೊಂಡ ಮಾಹಿತಿ ಯ ಹಿಂದೆ ಸಂಶೋಧನಾ ಸ್ವರೂಪದ ಅಧ್ಯಯನವಿದೆ, ಇದುವರೆಗೆ ಕನ್ನಡದ ಓದುಗರಿಗೆ ತಿಳಿದಿಲ್ಲದ ಹಲವುಸ್ವಾರಸ್ಯಕರ ಮಾಹಿತಿಗಳನ್ನು ಈ ಬರಹಗಳು ಒದಗಿಸುತ್ತವೆ.

ಈ ಪುಸ್ತಕದ ಲೇಖಕರು ವಿದೇಶಕ್ಕೆ ಉದ್ಯೋಗವನ್ನರಸಿಕೊಂಡು ಹೋಗಿ ಕೆಲವು ದಶಕಗಳೇ ಆದವು. ಆದರೆ ಕನ್ನಡದ ಪ್ರೀತಿ, ಕನ್ನಡದ ಒಡನಾಟ, ಕನ್ನಡ ಸಾಹಿತ್ಯದ ಕೃಷಿ ಇವರನ್ನು ಬಿಟ್ಟಿಲ್ಲ. ಕಳೆದ ಹಲವು ವರ್ಷಗಳಿಂದ ಪ್ರತಿ ವಾರ ವಿಶ್ವವಾಣಿ ಪತ್ರಿಕೆಯಲ್ಲಿ ‘ಶಿಶಿರ ಕಾಲ’ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ; ಅದು ಜನಪ್ರಿಯವೂ ಹೌದು. ಆ ಅಂಕಣಗಳ ಸಂಕಲನವೂ ಪ್ರಕಟಗೊಂಡಿದ್ದು, ಈಗ ‘ಶಿಶಿರ ಕಾಲ ೨’
ಅಂಕಣ ಬರಹಗಳ ಸಂಕಲನ ಹೊರಬಂದಿದೆ. ಈ ಸಂಕಲನವನ್ನು ಓದುತ್ತಾ ಹೋಗುವಾಗ ಸಣ್ಣಗೆ ಅಚ್ಚರಿ ಯಾಗುತ್ತದೆ; ದೂರದೇಶದಲ್ಲಿದ್ದುಕೊಂಡು, ಕನ್ನಡದಲ್ಲೇ ಚಿಂತನೆ ನಡೆಸುತ್ತಾ, ಅದೆಷ್ಟು  ವೈವಿಧ್ಯಮಯ ವಾಗಿ ಶಿಶಿರ ಹೆಗಡೆಯವರು ತಮ್ಮ ಬರಹ ಗಳನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ ಎಂದು.

ನಾನಾ ವಿಷಯಗಳನ್ನೆತ್ತಿಕೊಂಡು ಶಿಶಿರ ಹೆಗಡೆಯವರು ಲೇಖನ ಬರೆಯುವುದರಲ್ಲಿ ಸಿದ್ಧಹಸ್ತರು; ಹಾಗಿದ್ದೂ, ಈ ಸಂಕಲನದ ಬಹುಪಾಲು ಬರಹಗಳು, ಅಮೆರಿಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸನ್ನಿವೇಶಗಳ ಸುತ್ತ ಸುತ್ತುವುದನ್ನು ಗಮನಿಸಬಹುದು. ಜತೆಗೆ, ಯುರೋಪಿ ಯನರು, ವಿಶೇಷವಾಗಿ ಬಿಳಿ ಜನರು, ನಮ್ಮ ದೇಶದ ಮೇಲೆ ನಡೆಸಿದ ಅನ್ಯಾಯಗಳನ್ನು ತೆರೆದಿಡುವ ಬರಹಗಳೂ ಇಲ್ಲಿವೆ. ಈ ಸಂಕಲನದಲ್ಲಿ ಅಡಕ ಗೊಂಡ ಗಮನ ಸೆಳೆಯುವ ಬರಹಗಳಲ್ಲಿ, ‘ಇದು ನಮ್ಮದಲ್ಲದ ನಮ್ಮವರ ಕಥೆ’ ಲೇಖನವೂ ಸೇರಿದೆ. ಈ ಅಂಕಣವು ನಾಲ್ಕು ವಾರಗಳ ಕಾಲ, ಧಾರಾವಾಹಿಯಂತೆ ಪ್ರಕಟಗೊಂಡಿತ್ತು! ಅದಕ್ಕೊಂದು ಕಾರಣವೂ
ಇದೆ – ಅದೇನೆಂದರೆ, ಬ್ರಿಟಿಷರು ನಮ್ಮ ದೇಶದವರ ಮೇಲೆ ನಡೆಸಿದ ಮೋಸ, ದೌರ್ಜನ್ಯ, ಜನಾಂಗೀಯ ಅನ್ಯಾಯವೇ ಈ ಬರಹದ ಹೂರಣ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ, ಲಕ್ಷಾಂತರ ಜನರನ್ನು ತಪ್ಪು ಮಾಹಿತಿ ನೀಡಿ, ದೂರದ ಫಿಜಿ, ಕೆರಿಬಿಯನ್ ಮೊದಲಾದ ದ್ವೀಪಗಳಿಗೆ ಹಡಗಿನಲ್ಲಿ ಕೊಂಡೊಯ್ದು, ಅಲ್ಲಿ ಕಬ್ಬಿನ ಗದ್ದೆಗಳಲ್ಲಿ ಗುಲಾಮರ ರೀತಿ ದುಡಿಸಿಕೊಂಡ ವಿವರಗಳು ಈ ನಾಲ್ಕು ಬರಹಗಳಲ್ಲಿವೆ.

ಕನ್ನಡದ ಓದುಗರಿಗೆ ಗೊತ್ತಿಲ್ಲದ, ಇದುವರೆಗೆ ಮರೆಯಾಗಿದ್ದ ಹಲವು ಸೂಕ್ಷ್ಮ ಮಾಹಿತಿಗಳೂ ಈ ಬರಹಗಳಲ್ಲಿದ್ದು, ಅಮಾಯಕ ಭಾರತೀಯರನ್ನು ಬ್ರಿಟಿಷರು ಹೇಗೆ ತಮಗೆ ಬೇಕಾದಂತೆ ದುಡಿಸಿಕೊಂಡರು ಎಂಬು ದನ್ನು ಬಿಚ್ಚಿಡುತ್ತವೆ. ಬ್ರಿಟಿಷರು ತಮ್ಮ ಸಾಮ್ರಾಜ್ಯ ಕಟ್ಟಲು ‘ಗುಲಾಮಗಿರಿ’ಯನ್ನು ಚಾಲ್ತಿಯಲ್ಲಿಟ್ಟಿದ್ದರು; ಅದೊಂದು ಅಮಾನುಷ ವಿದ್ಯಮಾನ; ಮನುಷ್ಯರನ್ನು ಸಾಕುಪ್ರಾಣಿಗಳ ರೀತಿ ಮಾರಿ, ದುಡಿತಕ್ಕೆ
ಒಳಪಡಿಸುವ ಗುಲಾಮಗಿರಿ ಎಂಬ ಪ್ರಕ್ರಿಯೆಯು, ಒಂದು ದಿನ ನಿಷೇಧಕ್ಕೆ ಒಳಗಾಯಿತು.

ಇದರಿಂಗಾಗಿ, ಬ್ರಿಟಿಷರು ವಿವಿಧ ದ್ವೀಪಗಳಲ್ಲಿ ನಡೆಸುತ್ತಿದ್ದ ಪ್ಲಾಂಟೇಷನ್, ಕಬ್ಬಿನ ಕೃಷಿ ಮೊದಲಾದವುಕ್ಕೆ ಕೆಲಸಗಾರರ ಕೊರತೆ ಉಂಟಾಯಿತು. ಆಗ ಅವರು ರೂಪಿಸಿದ್ದೇ, ‘ಒಪ್ಪಂದದ ವ್ಯವಸ್ಥೆ’. ಬ್ರಿಟಿಷರೇ ರೂಪಿಸಿದ ಕಾನೂನು, ಅವರೇ ಸಿದ್ಧಪಡಿಸಿದ ಒಪ್ಪಂದ, ಅವರೇ ಜಾರಿಗೆ ತರುವ ಪ್ರಾಧಿಕಾರ – ಐದು ವರ್ಷಗಳ ಕಾಲ ದುಡಿದು, ಹಣ ಗಳಿಸಿ ವಾಪಸಾಗುವ ಅವಕಾಶ ಕೊಡುತ್ತೇವೆ ಎಂದು ನಂಬಿಕೆ ಹುಟ್ಟಿಸಿ, ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡು (ಆಗ ನಮ್ಮ ದೇಶದವರಲ್ಲಿ ಹೆಚ್ಚಿನವರ ಸಹಿ ಎಂದರೆ ಹೆಬ್ಬೆಟ್ಟು!), ಫಿಜಿ, ಮಲಯಾ, ಟ್ರಿನಿಡಾಡ್, ಬ್ರಿಟಿಷ್ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಮಾರಿಷಸ್ ಮೊದಲಾದ ಬಹುದೂರದ ಪ್ರದೇಶಗಳಿಗೆ ಹಡಗಿನಲ್ಲಿ ಸಾಗಹಾಕಿದರು. ಹಾಗೆ ಕಳಿಸುವಾಗ, ತಿಂಗಳುಗಟ್ಟಲೆ ಪಯಣ ದಲ್ಲಿ ದಾರಿಯಲ್ಲೇ ಅದೆಷ್ಟೋ ಜನರು ಸತ್ತು ಹೋದರು; ಹೊಸ ದ್ವೀಪಕ್ಕೆ ಹೋದ ನಂತರವೂ ಹಲವು ಕೆಲಸಗಾರರು ಸತ್ತರು. ಐದು ವರ್ಷದ ನಂತರ, ಭಾರತಕ್ಕೆ ವಾಪಸಾಗಲು ಹೆಚ್ಚಿನವರಿಗೆ ಸಾಧ್ಯವಾಗಲೇ ಇಲ್ಲ. ಅವರೆಲ್ಲರೂ ಕೂಲಿಗಳ ರೀತಿ, ಜೀತದಾಳುಗಳ ರೀತಿ ದುಡಿದರು, ಸಕ್ಕರೆ ತಯಾರಿಸಿದರು, ಪ್ಲಾಂಟೇಷನ್ ಬೆಳೆ ಉತ್ಪಾದಿಸಿದರು, ಬ್ರಿಟಿಷರ
ಸಾಮ್ರಾಜ್ಯಕ್ಕೆ ಹಣವನ್ನು ಗಳಿಸಿಕೊಟ್ಟರು. ಆ ವಿವರಗಳನ್ನು ಜತನದಿಂದ ಕಲೆಹಾಕಿ ಇಲ್ಲಿನ ನಾಲ್ಕು ಬರಹಗಳಲ್ಲಿ ಅಡಕವಾಗಿಸಿದ್ದು, ಈ ಸಂಕಲನದ ಮೌಲ್ಯವನ್ನು ಹೆಚ್ಚಿಸಿವೆ.

ಶಿಕಾಗೋದಲ್ಲಿನ ಚಳಿಪ್ರದೇಶದ ಜೀವನ, ನ್ಯೂಯಾರ್ಕ್‌ನ ಇಲಿಗಳ ಕಾಟ, ಅಮೆರಿಕದ ಬಡವರು, ಬ್ರೆಜಿಲ್ ಕಾಡುಜನರ ಐದು ಶತಮಾನದ ಯುದ್ಧ, ಅಮೆರಿಕದ ಸೀಕ್ರೆಟ್ ಸರ್ವಿಸ್, ಶೆಲ್ ಕಂಪೆನಿಗಳು – ಹೀಗೆ ಹಲವು ಕ್ಷೇತ್ರಗಳಲ್ಲಿ ಇವರ ಅಂಕಣ ಬರಹಗಳು ಓಡಾಡುತ್ತವೆ. ಇಲ್ಲಿನ ಬರಹಗಳು ಅಪರೂಪದ ಮಾಹಿತಿ ಹೊಂದಿವೆ ಮತ್ತು ವಿಶೇಷವೆಂದರೆ, ಆ ಮಾಹಿತಿಯನ್ನು ಬರಹದ ಮೂಲಕ ಪ್ರಸ್ತುತ ಪಡಿಸಿದ ವಿಧಾನ ಆಕರ್ಷಕ ವಾಗಿದೆ. ಅಂಕಣಗಳ ಮೂಲ ಅವಶ್ಯಕತೆಗಳಲ್ಲಿ ಒಂದು ಎಂದರೆ, ಅವು ಓದಿಸಿಕೊಂಡು ಹೋಗಬೇಕು – ಆ ಗುಣ ಇಲ್ಲಿನ ಬರಹಗಳಲ್ಲಿವೆ. ಆದ್ದರಿಂದ, ಶಿಶಿರ ಹೆಗಡೆಯವರ ಈ ಅಂಕಣ ಬರಹಗಳ ಸಂಕಲನವು, ಯಾವ ಕಾಲದಲ್ಲಾದರೂ ಓದಿಸಿಕೊಳ್ಳುತ್ತವೆ ಮತ್ತು ಅವು ಸ್ಟೇಲ್ ಅನಿಸುವುದಿಲ್ಲ. ಹೊರದೇಶದಲ್ಲಿದ್ದುಕೊಂಡು, ಕನ್ನಡತನ ವನ್ನು ತಮ್ಮ ಬರಹಗಳಲ್ಲಿ ದಟ್ಟವಾಗಿ ಉಳಿಸಿಕೊಂಡಿರುವ ಶಿಶಿರ ಹೆಗಡೆಯವರ ‘ಶಿಶಿರಕಾಲ’ ಸಂಕಲನವು ಈ ದೃಷ್ಟಿಯಲ್ಲಿ ಮುಖ್ಯ ಎನಿಸುತ್ತದೆ.

Leave a Reply

Your email address will not be published. Required fields are marked *