Wednesday, 18th September 2024

ಮುಗ್ಧ ಲೋಕದ ಕಥೆಗಳು

ಸಿ. ಎಂ. ಬಂಡಗರ

ಮಕ್ಕಳಿಗಾಗಿ ಮಕ್ಕಳೇ ಬರೆದ ಸಾಹಿತ್ಯ ಪ್ರಕಾರಕ್ಕೆ ಸೇರುವ ಅಪರೂಪದ ಸಂಕಲನವಿದು.

ಮಗುವೊಂದು ಸ್ವತಃ ಅನುಭವ ಪಡೆಯುವುದಕ್ಕೂ ಹಾಗೂ ಹಿರಿಯರು ಮಕ್ಕಳ ಅನುಭವವನ್ನೂ ಗ್ರಹಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಈ ಮಾತು ಇಲ್ಲಿ ಹೇಳಲು ಮುಖ್ಯ ಕಾರಣ ಶಿಶು ಸಾಹಿತ್ಯ ಪ್ರಕಾರದಲ್ಲಿ ಸಾಕಷ್ಟು ಸಾಹಿತ್ಯ ಕೃಷಿ ಆಗಿದ್ದರೂ ಸಹ ಮಕ್ಕಳೇ ರಚಿಸಿದ ಸಾಹಿತ್ಯದ ದ್ರವ ಬಹಳ ಆಕರ್ಷಣಿಯ ಹಾಗೂ ಅಪ್ಯಾಯಮಾನವೆನಿಸುತ್ತದೆ. ಅಂಥವರ ಸಾಲಿಗೆ ಸೇರುವ ಕಥೆಗಾರ್ತಿಯೇ ಕುಮಾರಿ.

ನವ್ಯಾ. ರಮೇಶ್. ಕತ್ತಿ. ಅವರು ರಚಿಸಿದ ‘ಮಾಯಾ ಗುಹೆ ಹಾಗೂ ಇತರ ಮಕ್ಕಳ ಕಥೆಗಳು’ ಎಂಬ ೮೦ ಪುಟಗಳ ಒಟ್ಟು ೨೫ ಕಥೆಗಳು ಹೊತ್ತ ಹೊತ್ತಗೆ ಯನ್ನು ಬೆಂಗಳೂರಿನ ವೀರಲೋಕ ಪ್ರಕಾಶನ ಪ್ರಕಟಿಸಿದೆ. ತನ್ನ ಹನ್ನೆರಡರ ಬಾಲ್ಯದಿಂದಲೇ ಸಾಹಿತ್ಯದ ಒಲವು ಹಾಗೂ ಆಸಕ್ತಿ ಬೆಳೆಸಿಕೊಂಡ ಈ ಬಾಲಕಿ ಇಂದು ಹದಿನೆಂಟು ತುಂಬುವ ಹೊತ್ತಿಗೆ ಗಂಭೀರ ಲೇಖಕಿಯಾಗಿ ರೂಪಗೊಳ್ಳುತ್ತಿದ್ದಾರೆ. ಉತ್ತರ ಕನ್ನಡ ಅದರಲ್ಲೂ ಮಹಾರಾಷ್ಟ್ರ ಗಡಿಯ ಭಾಗದ ನವ್ಯ ಅವರು ಕಥೆಗಾರ್ತಿ ಆಗಿ ರೂಪಗೊಳ್ಳುತ್ತಿದ್ದಾರೆ.

ಇಲ್ಲಿರುವ ಚಿಕ್ಕ ಚಿಕ್ಕ ಇಪ್ಪತ್ತೈದು ಕಥೆಗಳಲಿ, ಪ್ರತಿಯೊಂದು ಕಥೆಯೂ ಓದನ್ನು ವೃದ್ಧಿಗೊಳಿಸುವ ಶಕ್ತಿ ಹೊಂದಿವೆ. ಲೇಖಕರ ಬದುಕಿನ ಪಥ ಹಾಗೂ ಅವರ ಅನುಭವಗಳ ರಾಶಿ ಒಟ್ಟುಗೂಡಿ ಕಥೆಗಳು ಓಡುತ್ತವೆ. ತನ್ನ ಸುತ್ತ ಮುತ್ತಲಿನ ಪರಿಸರ ಅದೆಷ್ಟು ಪ್ರಭಾವ ಬೀರುತ್ತವೆ ಎಂದರೆ ಕತೆಗಳಲಿ ಪಾತ್ರಧಾರಿಗಳು ಹಾಗೂ ಸ್ಥಳಗಳು ಮಗು ನಿಲುಕುವ ನಿಲ್ದಾಣಗಳೇ ಆಗಿವೆ. ಆಲಮೇಲ ಸುತ್ತಮುತ್ತಲಿನ ಪರಿಸರ ಹಾಗೂ ತಮ್ಮ ಗೆಳೆತನ, ಗೆಳತಿಯರ ಹೆಸರುಗಳು ಪಾತ್ರಧಾರಿಗಳಾಗುವುದು ಸಹಜವಾಗಿದೆ. ಹಾಗೆಯೇ ಹಳೆಯ ಕಥೆಗಳು ಅಂದರೆ ರಾಜರ ಮಹಾರಾಜರ ಕಥೆಗಳು ಅಥವಾ ಪೌರಾಣಿಕ ಕಥೆಗಳಲ್ಲಿ ಇರುವ ಪಾತ್ರಧಾರಿಗಳು ತೀರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುವ ನವ್ಯಳ ಸ್ನೇಹಿತರಂತೆ ಕಾಣುತ್ತಾರೆ.

ಕೆಲವು ಕಥೆಗಳು ಎಲ್ಲೋ ಕೇಳಿದಂತೆ ಅಥವಾ ಟಿ ವಿ ಗಳಲ್ಲಿ ಬರುವ ಕಾರ್ಟೂನ್ ಚಿತ್ರಗಳಿಂದ ಪ್ರೇರಿತವಾದಂತೆ ಕಂಡು ಬರುತ್ತವೆ. ತನ್ನ ವೀಕ್ಷಣೆಗೆ ನಿಲುಕಿದ್ದು ಕಥೆಯಾಗಿ ರೂಪಗೊಳ್ಳುವಲ್ಲಿ ಇವೆಲ್ಲ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ. ಮಗು ತನ್ನ ಮನೆಯಲ್ಲಿ ಹಾಗೂ ಸುತ್ತಮುತ್ತಲಿನ ವಾತಾವರಣ ಹಾಗೂ ಶಾಲೆಯಲ್ಲಿ ಕಂಡು ತಿಳಿದ ಕೆಲ ಜೀವನ ಮೌಲ್ಯಗಳನ್ನು ಕಥೆಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದು ಶ್ಲಾಘನೀಯ. ತಾಯಿ ತಂದೆಗೆ ಗೌರವಿಸುವ,ಪ್ರೀತಿಸುವ ಹಾಗೂ ತಾಯಿ ತಂದೆಯರ ಮಕ್ಕಳ ಮೇಲಿನ ಪ್ರೀತಿ ಹಾಗೂ ಸ್ನೇಹ, ನಿಯತ್ತು, ಸಹೋದರತ್ವ ಇವೆಲ್ಲಾ ದೊಡ್ಡವರ ಕಥೆಯಲ್ಲಿ ಹಳಸಿದ ಅಥವಾ ಬೆನ್ನಿಗೆ ಚೂರಿ ಹಾಕುವ ಕಥೆಗಳಾಗಿ ಮಾರ್ಪಡುತ್ತವೆ.

ಕಥೆ ಎನ್ನುವುದು ಮಗುವಿಗೆ ತನ್ನ ಭಾವ ಜಗತ್ತನ್ನು ಜಾಗೃತಿಗೊಳಿಸಿಕೊಳ್ಳುವ ಹಾಗೂ ವಿಸ್ತರಿಸಿಕೊಳ್ಳುವ ಒಂದು ಮಾಧ್ಯಮ. ಕಥೆ ಇಷ್ಟ ಪಡದ ಮಗು ಇರಲು ಸಾಧ್ಯವಿಲ್ಲ. ಮಗುವಿನಿಂದ ವೃದ್ಧರವರೆಗೆ ಸೆಳೆತಹೊಂದಿದ ಈ ಕಥಾ ಮಾಧ್ಯಮಕ್ಕೆ ನವ್ಯ ಅವರು ಕಾಲಿಟ್ಟಿದ್ದು ಸಂತೋಷದ ವಿಚಾರ.

*

Leave a Reply

Your email address will not be published. Required fields are marked *